ಡೈನೋಸಾರ್ಸ್ ಕಾಲದ ಕಪ್ಪೆಯ ಅವಶೇಷ ಪತ್ತೆ
ಉತ್ತರ ಮ್ಯಾನ್ಮಾರ್‌ನಲ್ಲಿ 99 ದಶಲಕ್ಷ ವರ್ಷ ಹಳೆಯ ಕಪ್ಪೆಯ ಅವಶೇಷ ಶಿಲಾರಾಳದಲ್ಲಿ ಪತ್ತೆಯಾಗಿದೆ ಎಂದು ಫ್ಲೋರಿಡಾ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ಹೇಳಿಕೆ ತಿಳಿಸಿದೆ. ಈ ಕಪ್ಪೆಗೆ ಎರಡು ಮುಂಗಾಲು ಇದೆ. ಈ ಕಾಲಿನ ಅಂತ್ಯದಲ್ಲಿ ನಾಲ್ಕು ಸಣ್ಣ ಎಲುಬುಗಳಿವೆ. ಇದಕ್ಕೆ ಸ್ಪಷ್ಟವಾಗಿ ಕೈಯಂತಹ ರೂಪವಿದೆ. ದೊಡ್ಡ ಕಪ್ಪು ಕಲೆಯ ನಡುವೆ ದುಂಡಾದ ಮೇಲ್ಭಾಗ ಹೊಂದಿದೆ. ಇದರಿಂದ ಕಣ್ಣು ಗುಡ್ಡೆಗಳನ್ನು ಪ್ರತ್ಯೇಕಿಸಲು ಸಾಧ್ಯ. ಇದು ತಲೆ ಬುರುಡೆ. ಉಷ್ಣ ವಲಯದ ಈ ಪುಟ್ಟ ಕಪ್ಪೆ ಶಿಲಾರಾಳದಲ್ಲಿ ಹುದುಗಿಕೊಂಡಿತ್ತು. ಈ ಕಪ್ಪೆಯ ಪಳೆಯುಳಿಕೆ 1 ಇಂಚಿಗಿಂತ ಕಡಿಮೆ ಇದ್ದು, 99 ದಶಲಕ್ಷ ವರ್ಷಗಳ ಹಿಂದೆ ಜೀವಿಸಿತ್ತು. ಅನಂತರ ಇದು ಶಿಲಾರಾಳದಲ್ಲಿ ಅಂಟಿಕೊಂಡಿತ್ತು. ಈ ಸಂದರ್ಭ ಡೈನೋಸಾರ್‌ಗಳು ಭೂಮಿಯಲ್ಲಿ ತಿರುಗಾಡುತ್ತಿದ್ದವು.
ಕ್ರಿಟೇಶಿಯಸ್ ಯುಗದ ನಾಲ್ಕು ಪಳೆಯುಳಿಕೆಗಳಲ್ಲಿ ಇದು ಕೂಡ ಒಂದು. ಇದು ಕಪ್ಪೆಗಳು ಉಷ್ಣವಲಯ ಹಾಗೂ ಅರಣ್ಯವಾಸಿಗಳು ಎಂಬುದಕ್ಕೆ ಆರಂಭದ ನೇರ ಪುರಾವೆಗಳನ್ನು ಒದಗಿಸಿದೆ ಎಂದು ಫ್ಲೋರಿಡಾ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ಸರೀಸೃಪ ಶಾಸ್ತ್ರದ ಕ್ಯೂರೇಟರ್ ಹಾಗೂ ಸಂಶೋಧನಾ ಲೇಖನದ ಸಹ ಲೇಖಕ ಡೇವಿಡ್ ಬ್ಲಾಕ್‌ಬರ್ನ್ ತಿಳಿಸಿದ್ದಾರೆ.