varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 17 Jun, 2018

ಕೇಜ್ರಿ ವಿಚಾರದಲ್ಲಿ ರಾಹುಲ್ ಏಕಾಂಗಿ

ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸಿ ಮೂರೇ ವಾರಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಹಲವು ಮಂದಿ ಬಿಜೆಪಿಯೇತರ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಕೇಜ್ರಿ ಆಗ್ರಹಕ್ಕೆ ದನಿಗೂಡಿಸಿದ್ದು, ಚುನಾಯಿತ ಸರಕಾರವನ್ನು ಆ ಮೂಲಕ ಜನಮತವನ್ನು ಕಡೆಗಣಿಸುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮತ್ತು ಬಿಜೆಪಿಯ ಮಾಜಿ ಮುಖಂಡ ಯಶವಂತ್ ಸಿನ್ಹಾ ಕೇಜ್ರಿ ಬೆಂಬಲಕ್ಕೆ ನಿಂತಿದ್ದರು. ಆದರೆ ರಾಹುಲ್‌ಗಾಂಧಿ ಇದು ಸ್ಥಳೀಯ ವಿಚಾರ ಎಂದು ನಿರ್ಧರಿಸಿ, ಸ್ಥಳೀಯ ಮುಖಂಡ ಅಜಯ್ ಮಾಕೆನ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ವಿರೋಧಿ ಒಗ್ಗಟ್ಟಿನ ಬದಲಾಗಿ ಕೇಜ್ರಿವಾಲ್ ಅವರ ವಿರುದ್ಧ ಕತ್ತಿ ಮಸೆಯುವ ನಿರ್ಧಾರ ಕೈಗೊಂಡರು. ಕೇಜ್ರಿವಾಲ್ ಅವರು 2011 ಹಾಗೂ ಬಳಿಕ ನಡೆಸಿದ ಭ್ರಷ್ಟಾಚಾರ ವಿರೋಧಿ ಹೋರಾಟವೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂಬ ಆಕ್ರೋಶ ಸ್ಥಳೀಯ ಕಾಂಗ್ರೆಸ್ಸಿಗರಲ್ಲಿದೆ.


ಸುದ್ದಿಯಲ್ಲಿ ಪ್ರಣವ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸುದ್ದಿಯಿಂದ ಹೊರಗಿರಲು ಇಚ್ಛಿಸುವುದಿಲ್ಲ. ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡುವ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ. ಈ ನಿರ್ಧಾರ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಇದೀಗ ಅವರು ರಾಷ್ಟ್ರಪತಿ ಭವನದಲ್ಲಿದ್ದ ವರ್ಷಗಳ ನೆನಪನ್ನು ಆತ್ಮಚರಿತ್ರೆ ಹೊರತರುವ ನಿರ್ಧಾರ ಪ್ರಕಟಿಸಿದ್ದಾರೆ. ‘ದ ಪ್ರೆಸಿಡೆನ್ಷಿಯಲ್ ಇಯರ್ಸ್‌’ ಎಂಬ ಕೃತಿಯ ಹಕ್ಕನ್ನು ರೂಪಾ ಪ್ರಕಾಶನ ಪಡೆದಿದೆ. ಇದು ದೇಶದ ಮುಖ್ಯಸ್ಥರಾಗಿದ್ದ ವ್ಯಕ್ತಿಯೊಬ್ಬರ ಪ್ರಥಮ ಆತ್ಮಚರಿತ್ರೆ ಎಂದು ಪ್ರಕಾಶಕರು ಹೇಳಿಕೊಂಡಿದ್ದಾರೆ. ರಾಷ್ಟ್ರಪತಿ ಭವನ ಪ್ರವೇಶಿಸುವ ಮೊದಲಿನ ರಾಜಕೀಯ ಪಯಣವನ್ನು ಅವರು ಈಗಾಗಲೇ ಬರೆದಿದ್ದಾರೆ. ಆದರೆ ಅವರ ದಿನಚರಿಯ ರಹಸ್ಯದ ಬಗೆಗಿನ ಕುತೂಹಲ ಹಾಗೆಯೇ ಉಳಿದಿಕೊಂಡಿದೆ. ನೆನಪಿನ ಬುತ್ತಿಯ ಏಕತಾನತೆಯನ್ನು ಮುರಿದು ಆಸಕ್ತಿ ಹುಟ್ಟಿಸಲು ಮುಖರ್ಜಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಹೆಚ್ಚಿನ ಮಂದಿ ಇದನ್ನು ಓದುವಂತೆ ಮಾಡುವುದು ಅವರ ಉದ್ದೇಶ. ಬಹುಶಃ ಆರೆಸ್ಸೆಸ್ ಇದನ್ನು ಓದುವ ಆಸಕ್ತಿ ಹೊಂದಿರಬಹುದು!


ನಾಯ್ಡು ಅಜಾಗರೂಕತೆ
ಇತ್ತೀಚೆಗೆ ಈಶಾನ್ಯ ರಾಜ್ಯಗಳಲ್ಲಿ ತಗ್ಗುದಿನ್ನೆಗಳ ರಸ್ತೆಯಲ್ಲಿ ಪ್ರಯಾಣಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈದ್ಯರಿಗೇ ಆತಂಕ ಮೂಡಿಸಿದರು. ಕಣ್ಣು ಪೊರೆ ಶಸ್ತ್ರಚಿಕಿತ್ಸೆ ಮತ್ತು ಲೆನ್ಸ್ ಅಳವಡಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಇಟಾನಗರಕ್ಕೆ ಪ್ರಯಾಣಿಸುವುದು ಹೆಚ್ಚು ಸುರಕ್ಷಿತ. ಆದರೆ ತೀವ್ರ ಮಳೆಯಿಂದಾಗಿ ನೇರ ಹೆಲಿಕಾಪ್ಟರ್ ಟ್ರಿಪ್ ರದ್ದಾಯಿತು. ಇಟಾನಗರ ಪ್ರಯಾಣವನ್ನು ಕೈಬಿಡುವಂತೆ ಅರುಣಾಚಲ ಪ್ರದೇಶ ರಾಜ್ಯಪಾಲರು ಮತ್ತು ಅಧಿಕಾರಿಗಳು ಸಲಹೆ ಮಾಡಿದರು. ನಾಯ್ಡು ಬಗ್‌ದೋಗ್ರಾದಿಂದ ಅಸ್ಸಾಂನ ಲೀಲಾಬರಿ ನಗರಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ನಿರ್ಧರಿಸಿದರು. ಬಳಿಕ ಇಟಾನಗರಕ್ಕೆ ರಸ್ತೆಯಲ್ಲಿ ಪ್ರಯಾಣಿಸಿದರು. ಆದರೆ ಇಂಥ ರಸ್ತೆಯಲ್ಲಿ ಪ್ರಯಾಣಿಸುವ ಬಗ್ಗೆ ವೈದ್ಯರು ಅತಂಕ ವ್ಯಕ್ತಪಡಿಸಿದರು. ಎರಡು ಗಂಟೆಗೂ ಅಧಿಕ ಪ್ರಯಾಣ ಶಸ್ತ್ರಚಿಕಿತ್ಸೆ ನಡೆಸಿದ ಕಣ್ಣಿಗೆ ದಣಿವು ತರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಆದರೆ ನಾಯ್ಡು ಅವರಿಗೆ ಯಾವ ಅನನುಕೂಲವೂ ಆಗಲಿಲ್ಲ. ಆದರೆ ಯಾವುದೇ ಅಹಿತಕರ ಘಟನೆಗಳಾಗದಂತೆ ಎಚ್ಚರ ವಹಿಸುವ ಸಲುವಾಗಿ ವೈದ್ಯರು ಮಾತ್ರ ನಾಯ್ಡು ಅವರ ಕಣ್ಣಲ್ಲಿ ಕಣ್ಣಿಟ್ಟು ನಿಗಾ ವಹಿಸಿದರು. ಇಲ್ಲೂ ನಾಯ್ಡು ತಮ್ಮ ಹಾಸ್ಯವನ್ನೇ ಪ್ರದರ್ಶಿಸಿದರು. ನಾಯ್ಡು ಸಾಹಸದ ಹೊರತಾಗಿಯೂ ಎಲ್ಲವೂ ಸುಸೂತ್ರವಾಗಿಯೇ ಸಾಗಿತು.


ಮೋದಿಗೆ ಚುನಾವಣೆ ಮೂಡ್
ದಿಲ್ಲಿಯ ಕೆಲವೇ ಕಿಲೋಮೀಟರ್‌ಗಳ ಅಂತರದಲ್ಲಿ ಹರ್ಯಾಣದ ಸೂರಜ್‌ಕುಂಡ ಇದೆ. ಭವಿಷ್ಯದ ಬಗ್ಗೆ ಮತ್ತು ಚುನಾವಣೆ ಎದುರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಜೆಪಿ ಹಾಗೂ ಆರೆಸ್ಸೆಸ್ ಇಲ್ಲಿ ಸಭೆ ನಡೆಸಲಿವೆ. ಇದು ರಹಸ್ಯ ಸಭೆಯಾಗಿದ್ದು, ಪಾಲ್ಗೊಳ್ಳುವ ಎಲ್ಲರೂ ಸಭೆಯ ಬಗ್ಗೆ ಯಾವ ವಿವರಗಳನ್ನೂ ಬಹಿರಂಗಪಡಿಸಬಾರದು ಎಂದು ತಾಕೀತು ಮಾಡಲಾಗಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿಗಳ ಈ ಮೂರು ದಿನದ ಸಭೆಯಲ್ಲಿ, ಮುಂದಿನ ಸುತ್ತಿನ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚಿಂತನ- ಮಂಥನ ನಡೆಯಲಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಮುಖ್ಯ ಕಾರ್ಯಸೂಚಿ, ಬೆಳೆಯುತ್ತಿರುವ ವಿರೋಧ ಪಕ್ಷಗಳ ಒಗ್ಗಟ್ಟಿನ ಸವಾಲನ್ನು ಎದುರಿಸುವುದು ಹೇಗೆ ಎನ್ನುವ ಚರ್ಚೆ. ಸೂರಜ್‌ಕುಂಡ ಸಭೆಯ ಬಗೆಗಿನ ಪ್ರತಿಕ್ರಿಯೆ ಪಡೆಯುವ ಸಲುವಾಗಿ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರಿಗಾಗಿ ಭೋಜನಕೂಟವನ್ನು ಪ್ರಧಾನಿ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ಆಯೋಜಿಸಿದ್ದರು. ಅವರ ಸಂದೇಶ ಸ್ಪಷ್ಟವಾಗಿತ್ತು. ವಿರೋಧ ಪಕ್ಷಗಳನ್ನು ಸೋಲಿಸುವ ಒಂದೇ ಉದ್ದೇಶದಿಂದ ಸಜ್ಜಾಗೋಣ ಎನ್ನುವುದು. ಆದರೆ ಈ ಬಗ್ಗೆ ಎಲ್ಲರೂ ಒಂದೇ ನಿರ್ಧಾರ ಹೊಂದಿದ್ದಾರೆಯೇ ಎನ್ನುವುದು ಪ್ರಶ್ನಾರ್ಹ. ಆರೆಸ್ಸೆಸ್ ಮುಖಂಡರು ಮೋದಿ ಸರಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಈ ಪ್ರಶ್ನೆ ಉದ್ಭವಿಸಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಅವರು ಒಗ್ಗಟ್ಟಿನಿಂದ ಹೋರಾಡಬಹುದು.


ಮುಖರ್ಜಿಗೆ ಇಫ್ತಾರ್
ಇಡೀ ದೇಶವನ್ನು ಆರೆಸ್ಸೆಸ್ ಹಾಗೂ ಬಿಜೆಪಿಯ ಎರಡು ಮೂರು ಮಂದಿ ನಾಯಕರು ಗುಲಾಮರಾಗಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ಹಾಗೂ ವಿರೋಧ ಪಕ್ಷಗಳ ಮುಖಂಡರಿಗಾಗಿ ಕಾಂಗ್ರೆಸ್ ಅಧ್ಯಕ್ಷರು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಪ್ರಣವ್ ಮುಖರ್ಜಿಯವರನ್ನು ಆಹ್ವಾನಿಸಲಾರರು ಎಂದೇ ಮಾಧ್ಯಮಗಳು ವರದಿ ಮಾಡಿದ್ದವು. ಕೆಲ ಟಿವಿ ಚಾನಲ್‌ಗಳಂತೂ ಮುಖರ್ಜಿಗೆ ಆಹ್ವಾನ ಇಲ್ಲ ಎಂದೇ ಸುದ್ದಿ ಪ್ರಸಾರ ಮಾಡಿದವು. ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಕ್ಕಾಗಿ ಪ್ರಣವ್ ಮುಖರ್ಜಿಯವರಿಗೆ ಕಾಂಗ್ರೆಸ್ ಪಕ್ಷ ಈ ಶಿಕ್ಷೆ ನೀಡಿದೆ ಎಂದು ಕೆಲ ಚಾನಲ್‌ಗಳು ವಿಶ್ಲೇಷಿಸಿದ್ದವು. ಆದರೆ ಈ ಒಂದು ದಿನದ ಊಹಾಪೋಹಕ್ಕೆ ಕಾಂಗ್ರೆಸ್ ತೆರೆ ಎಳೆಯಿತು. ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮೂಲಕ ಹೇಳಿಕೆ ನೀಡಿ, ಇಫ್ತಾರ್ ಕೂಟಕ್ಕೆ ಮುಖರ್ಜಿಯವರನ್ನು ಆಹ್ವಾನಿಸುವ ಬಗ್ಗೆ ಹಲವು ಮಾಧ್ಯಮಗಳು ಪ್ರಶ್ನೆಗಳನ್ನು ಎತ್ತಿವೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಮುಖರ್ಜಿಯವರಿಗೆ ಆಹ್ವಾನ ನೀಡಿದ್ದು, ಅದನ್ನು ಮುಖರ್ಜಿ ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಎಲ್ಲ ಊಹೆಗಳಿಗೆ ತೆರೆ ಬೀಳುತ್ತದೆ ಎಂಬ ವಿಶ್ವಾಸ ನಮ್ಮದು. ಇದು ಮುಗಿದ ಚರ್ಚೆ. ಆದರೆ ಈ ಸ್ಪಷ್ಟನೆಯನ್ನು ನೀಡಲು ಪಕ್ಷ ತಡ ಮಾಡಿದ್ದು ಏಕೆ ಎನ್ನುವುದು ಇನ್ನೂ ನಿಗೂಢ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)