ಚಿಕ್ಕಮಗಳೂರು: ಮೂಲಭೂತ ಸೌಕರ್ಯ ವಂಚಿತ ಎತ್ತಿನಟ್ಟಿ ದಲಿತ ಕಾಲನಿ
ಚಿಕ್ಕಮಗಳೂರು, ಜೂ.17: ಜಿಲ್ಲೆಯ ಹರಿಹರಪುರ ಹೋಬಳಿ ವ್ಯಾಪ್ತಿಯಲ್ಲಿರುವ ಎತ್ತಿನಹಟ್ಟಿ ಗ್ರಾಮದಲ್ಲಿನ ದಲಿತ ಕಾಲನಿಯಲ್ಲಿ ಕುಡಿಯುವ ನೀರು, ಕಾಂಕ್ರೀಟ್ ರಸ್ತೆ, ಸೇತುವೆ, ಶೌಚಾಲಯ, ಆಶ್ರಯ ಮನೆಯಂತಹ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ್ದು, ಸಂಬಂಧಿಸಿದ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಗಳಿಗೆ ಈ ಕಾಲನಿಯ ಸಮಸ್ಯೆಗಳ ಅರಿವಿದ್ದರೂ ತಮಗೂ ಕಾಲನಿಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಿರ್ಲಕ್ಷ್ಯ ವಹಿಸಿದ್ದಾರೆಂದು ನಿವಾಸಿಗಳು ಆರೋಪಿಸಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿ ವ್ಯಾಪ್ತಿಯಲ್ಲಿನ ಉತ್ತಮಮೇಶ್ವರ ಗ್ರಾಮ ಪಂಚಾಯತ್‍ಗೆ ಒಳಪಟ್ಟಿರುವ ಎತ್ತಿನಹಟ್ಟಿ ಗ್ರಾಮದಲ್ಲಿ ಈ ದಲಿತ ಕಾಲನಿ ಇದ್ದು, ಕಾಲನಿಯಲ್ಲಿರುವ ಸುಮಾರು 11 ಮನೆಗಳ ನಿವಾಸಿಗಳು ಕೂಲಿಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಜನಾಂಗದವರಾಗಿರುವ ಇಲ್ಲಿನ ನಿವಾಸಿಗಳು ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದಿದ್ದರೂ ಆವಶ್ಯಕ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಕಾಲನಿ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದ್ದು, ಪಂಚಾಯತ್ ವತಿಯಿಂದ ನಿರ್ಮಿಸಿರುವ ಏಕೈಕ ವಿದ್ಯುತ್ ಚಾಲಿತ ನೀರಿನ ಪಂಪ್‍ನಿಂದ ಪೂರೈಕೆಯಾಗುತ್ತಿರುವ ನೀರನ್ನು ಇಲ್ಲಿನ 11 ಮನೆಗಳ 40ಕ್ಕೂ ಹೆಚ್ಚು ಸದಸ್ಯರು ಅವಲಂಬಿಸಿದ್ದಾರೆ. ಈ ಸಂಪ್‍ನ ಹೊರತಾಗಿ ನಿವಾಸಿಗಳಿಗೆ ಪರ್ಯಾಯ ನೀರಿನ ಮೂಲಗಳಿಲ್ಲವಾಗಿದ್ದು, ವಿದ್ಯುತ್ ಸಮಸ್ಯೆ ಇದ್ದಾಗ ಸಮೀಪದಲ್ಲಿ ಹರಿಯುವ ಹಳ್ಳವೊಂದರ ಕಲುಷಿತ ನೀರು ಹೊತ್ತು ತಂದು ಕುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ವಾರಗಟ್ಟಲೆ ವಿದ್ಯುತ್ ಕೈ ಕೊಡುವುದರಿಂದ ಹಳ್ಳದ ಕಲುಷತ ನೀರೇ ಈ ಕಾಲನಿ ನಿವಾಸಿಗಳಿಗೆ ಗತಿಯಾಗಿದೆ.
ಗ್ರಾಪಂ ವತಿಯಿಂದ ಕಾಲನಿಯಲ್ಲಿ ಕಳೆದ 15 ವರ್ಷಗಳ ಹಿಂದೆ ಬೋರ್‍ವೆಲ್ ಒಂದನ್ನು ಕೊರೆಯಲಾಗಿದೆ. ಆದರೆ ಈ ಬೋರ್‍ವೆಲ್ ಕೆಟ್ಟುನಿಂತು 10 ವರ್ಷ ಕಳೆದಿದ್ದರೂ ದುರಸ್ತಿಮಾಡಲು ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬೋರ್‍ವೆಲ್ ದುರಸ್ತಿ ಮಾಡಿಸಿದಲ್ಲಿ ವಿದ್ಯುತ್ ಸಮಸ್ಯೆ ಇದ್ದಾಗ ಬೋರ್‍ವೆಲ್ ನೀರನ್ನಾದರೂ ಬಳಸ ಬಹುದು. ದುರಸ್ತಿಗೆ ಮನವಿ ಮಾಡಿದ್ದರೂ ಪ್ರಯೋಜವಾಗಿಲ್ಲ. ಆದ್ದರಿಂದ ಮಳೆಗಾಲದಲ್ಲಿ ವಾರವಿಡೀ ವಿದ್ಯುತ್ ಇರುವುದಿಲ್ಲ. ಆಗ ಹಳ್ಳದ ಕಲುಷಿತ ನೀರನ್ನೇ ಕುಡಿಯುವುದು ಅನಿವಾರ್ಯ ಎಂದು ದಲಿತ ಕಾಲನಿ ನಿವಾಸಿಗಳು ವಾರ್ತಾಭಾರತಿ ಬಳಿ ಅಳಲು ತೋಡಿಕೊಂಡಿದ್ದಾರೆ.
ಹರಿಹರಪುರ ಹೋಬಳಿ ಉತ್ತಮೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿರುವ ಎತ್ತಿನಹಟ್ಟಿ ಗ್ರಾಮದ ಉತ್ತಮೇಶ್ವರ ಅಗಳಗಂಡಿ ಸಂಪರ್ಕ ರಸ್ತೆಯಿಂದ ಕೆಲವೇ ಫರ್ಲಾಂಗು ದೂರದಲ್ಲಿರುವ ಈ ದಲಿತ ಕಾಲನಿ ಸಂಪರ್ಕಕ್ಕೆ ಮುಖ್ಯ ರಸ್ತೆಯಿಂದ ಮಣ್ಣಿನ ರಸ್ತೆ ಇದೆ. ಈ ರಸ್ತೆ ಮಳೆಗಾಲದಲ್ಲಿ ಕೆಸರಿನಿಂದ ಆವೃತವಾಗಿ, ಟ್ರ್ಯಾಕ್ಟರ್ ಗಳು ಪ್ರತಿದಿನ ಸಂಚರಿಸುವುದರಿಂದ ಕೆಸರು ಗದ್ದೆಯಂತಾಗುತ್ತಿದ್ದು, ಮಳೆಗಾಲದಲ್ಲಿ ನಿವಾಸಿಗಳಿಗೆ ಈ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿಯಲ್ಲಿ ಚರಂಡಿಯೂ ಇಲ್ಲದ ಪರಿಣಾಮ ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆ ಪ್ರತೀ ವರ್ಷ ಹಾಳಾಗುತ್ತಿದೆ. ಮಣ್ಣಿನ ರಸ್ತೆಗೆ ಬದಲಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಿ ಕೊಡಬೇಕೆಂಬ ನಿವಾಸಿಗಳು ಹಿಂದಿನ ಶಾಸಕ ಜೀವರಾಜ್ ಅವರಿಗೆ ಮಾಡಿದ ಮನವಿಗೆ ಇದುವರೆಗೂ ಸ್ಪಂದಿಸಿಲ್ಲ. ಗ್ರಾಪಂ ವ್ಯಾಪ್ತಿಯ ಎಲ್ಲ ದಲಿತ ಕಾಲನಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ ಎತ್ತಿನಹಟ್ಟಿ ದಲಿತ ಕಾಲನಿಗೆ ಸೌಲಭ್ಯ ನೀಡಲು ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ಬಾರಿ ರಸ್ತೆ ನಿರ್ಮಾಣ ಆಗುತ್ತದೆ ಎಂದು ಗ್ರಾಪಂ ಸದಸ್ಯರೊಬ್ಬರು ತಿಳಿಸಿದ್ದರು. ಆದರೆ ನಂತರ ಇಲ್ಲಿಗೆ ಬಂದ ರಸ್ತೆಯನ್ನು ಬೇರಡೆಗೆ ಒದಗಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಈ ಬಾರಿಯಾದರೂ ಇಲ್ಲಿನ ಕಾಲನಿ ಸಂಪರ್ಕ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಲು ನೂತನ ಶಾಸಕ ಟಿ.ಡಿ.ರಾಜೇಗೌಡ ಅವರು ಅನುದಾನ ಕಲ್ಪಿಸಿಕೊಡಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಇನ್ನು ಈ ದಲಿತ ಕಾಲನಿಯಲ್ಲಿರುವ 11 ಮನೆಗಳ ಪೈಕಿ ಒಂದೆರೆಡು ಮನೆಗಳು ಮಾತ್ರ ವಾಸಯೋಗ್ಯವಾಗಿದೆ. ಉಳಿದ ಮನೆಗಳು ಪಾಳು ಬಿದ್ದ ಮನೆಗಳಂತಿದ್ದು, ಆಶ್ರಯ ಮನೆಗಳಂತಹ ಸೌಲಭ್ಯ ಇಲ್ಲಿನ ದಲಿತರನ್ನು ಇನ್ನೂ ತಲುಪಿಲ್ಲ. ಕೆಲ ಮನೆಗಳು ಜೋಪಡಿಗಳಂತಿದ್ದು, ವಿದ್ಯುತ್ ಸೌಕರ್ಯವೂ ಇಲ್ಲವಾಗಿದೆ. ಇಲ್ಲಿನ ಬಹುತೇಕ ಮನೆಗಳಲ್ಲಿ ಶೌಚಾಲಯವಿದೆಯಾದರೂ ಅವೈಜ್ಞಾನಿಕವಾಗಿ ಶೌಚಾಲಯ ನಿರ್ಮಿಸಿಕೊಂಡಿರುವುದರಿಂದ ಅದರ ಸಮರ್ಪಕ ಬಳಕೆಯಾಗುತ್ತಿಲ್ಲ. ಕೆಲ ಮನೆಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲವಾಗಿದ್ದು, ಹೆಂಗಸರು, ಮಕ್ಕಳು ಸಮೀಪದ ಹೊಲಗದ್ದೆಗಳನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ. ಶೌಚಾಲಯ ನಿರ್ಮಾಣಕ್ಕೆ ಗ್ರಾಪಂಗೆ ಬರುವ ಅನುದಾನ ಎಲ್ಲಿ ಹೋಗುತ್ತದೋ ಗೊತ್ತಿಲ್ಲ, ಶೌಚಾಲಯ ಮುಕ್ತ ತಾಲೂಕು ಮಾಡುವ ಬಗ್ಗೆ ಟಿವಿ, ರೇಡಿಯೋಗಳಲ್ಲಿ ಪ್ರತಿದಿನ ಜಾಹೀರಾತು ಬರುತ್ತದೆ. ಆದರೆ ಇಲ್ಲಿನ ಗ್ರಾಪಂ ಸದಸ್ಯರು ಈ ಬಗ್ಗೆ ಇದುವರೆಗೂ ಕಾಲನಿಯಲ್ಲಿ ಪರಿಶೀಲನೆ, ಜನ ಜಾಗೃತಿ ನಡೆಸಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.
ಈ ದಲಿತ ಕಾಲನಿ ಪಕ್ಕದಲ್ಲಿ ಸಣ್ಣ ಹಳ್ಳವೊಂದು ಹರಿಯುತ್ತಿದ್ದು, ಹಳ್ಳದ ಆಚೆ ಕಾಲನಿಯ ಕೆಲ ನಿವಾಸಿಗಳು ಹೊಲ ಗದ್ದೆಗಳನ್ನು ಹೊಂದಿದ್ದಾರೆ. ಮಳೆಗಾಲದಲ್ಲಿ ಈ ಹಳ್ಳ ತುಂಬಿಹರಿಯುವುದರಿಂದ ಹಳ್ಳ ದಾಟಲು ಸೇತುವೆಯಂತಹ ಸೌಲಭ್ಯವಿಲ್ಲವಾಗಿದ್ದು, ತುಂಬಿ ಹರಿಯುವ ನದಿಯಲ್ಲೇ ನಡೆದುಕೊಂಡು ಜಮೀನುಗಳಿಗೆ ಹೋಗಬೇಕಿದೆ. ಇಲ್ಲವೇ ದೂರದ ಸೇತುವೆ ಮೂಲಕ ಹೋಗಬೇಕಿದ್ದು, ಕಾಲನಿ ಪಕ್ಕದಲ್ಲೇ ಸಣ್ಣ ಸೇತುವೆ ನಿರ್ಮಿಸಿದರೆ ಜಮೀನುಗಳಿಗೆ ಹೋಗಿ ಬರಲು ಸಹಾಯವಾಗುತ್ತದೆ ಎಂದು ನಿವಾಸಿಗಳು ತಿಳಿಸುತ್ತಾರೆ.
ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರುವ ಎತ್ತಿನಹಟ್ಟಿ ದಲಿತ ಕಾಲನಿ ನಕ್ಸಲ್ ಪೀಡಿತ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದು, ನಕ್ಸಲ್ ಪ್ಯಾಕೇಜ್‍ನಂತಹ ಯಾವುದೇ ಸೌಲಭ್ಯ ಈ ಗ್ರಾಮ ಅಥವಾ ಕಾಲನಿಗೆ ತಲುಪಿಲ್ಲ. ಆದ್ದರಿಂದ ಮೂಲಸೌಕರ್ಯಗಳನ್ನು ಒದಗಿಸಲು ಇನ್ನಾದರೂ ಇಲ್ಲಿನ ಗ್ರಾಪಂ, ತಾಪಂ, ಜಿಪಂ ಜನಪ್ರತಿನಿಧಿಗಳು ಹಾಗೂ ನೂತನ ಶಾಸಕರು ಅಗತ್ಯ ಕ್ರಮವಹಿಸಬೇಕಾಗಿದೆ.
ಅಕ್ರಮ ಮದ್ಯ ಮಾರಾಟ: ಕಾಲನಿ ಸುತ್ತಮುತ್ತ ಕೆಲ ಮನೆಗಳಲ್ಲಿ ಹಾಗೂ ಎತ್ತಿನಹಟ್ಟಿ ಗ್ರಾಮದ ಕೆಲ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರಿಂದಾಗಿ ಕಾಲನಿಯ ಬಹುತೇಕ ನಿವಾಸಿಗಳು ಕುಡಿತದ ದಾಸರಾಗಿದ್ದಾರೆ. ದುಡಿದು ಗಳಿಸಿದ ಆದಾಯವನ್ನು ನಿವಾಸಿಗಳು ಕುಡಿತಕ್ಕೆ ಕಳೆಯುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಮದ್ಯ ಮಾರಾಟ ದಂಧೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಕಡಿಮೆ ಕೂಲಿ: ಎತ್ತಿಹಟ್ಟಿ ಗ್ರಾಮ ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಗೊಳಪಟ್ಟಿದೆ. ಇಲ್ಲಿನ ದಲಿತ ಕಾಲನಿ ಸೇರಿದಂತೆ ಇತರ ವರ್ಗಗಳ ಜನತೆ ಕೂಲಿಯನ್ನೇ ಆಶ್ರಯಿಸಿ ಬದುಕುತ್ತಿದ್ದು, ಕೂಲಿಗಾಗಿ ಅಕ್ಕಪಕ್ಕದ ಕಾಫಿ, ಅಡಿಕೆ ತೋಟಗಳನ್ನು ಆಶ್ರಯಿಸಿದ್ದಾರೆ. ಆದರೆ ಇಲ್ಲಿನ ಕೂಲಿ ಕಾರ್ಮಿಕರಿಗೆ ಸಿಗುವ ಕೂಲಿ ದಿನಕ್ಕೆ ಮಹಿಳೆಯರಿಗೆ 150-200 ಆಗಿದ್ದು, ಪುರುಷರಿಗೆ 200ರಿಂದ 250 ಮಾತ್ರವಾಗಿದೆ. ಕಾಫಿ, ಅಡಿಕೆಗೆ ಎಷ್ಟೇ ಬೆಲೆ ಬಂದರೂ ಈ ಕೂಲಿ ದರ ಮಾತ್ರ ಎರಿಕೆಯಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ವಾರ್ತಾಭಾರತಿ ಬಳಿ ಅಳಲು ತೋಡಿಕೊಂಡಿದ್ದು, ಇಷ್ಟು ಕಡಿಮೆ ಕೂಲಿಯಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸ, ಸಂಘದ ಸಾಲ ತೀರಸಲು ಸಾಧ್ಯವಾಗುತ್ತಿಲ್ಲ. ಬೇರೆಡೆ 350ರಿಂದ 400 ರೂ. ವೇತನ ಇದ್ದರೆ ಈ ಭಾಗದಲ್ಲಿ ಕೂಲಿ ಅತ್ಯಂತ ಕಡಿಮೆ ನೀಡುತ್ತಿದ್ದಾರೆಂದು ನಿವಾಸಿಗಳು ದೂರಿದ್ದಾರೆ.
ಎತ್ತಿನಹಟ್ಟಿ ದಲಿತ ಕಾಲನಿ ನಿವಾಸಿಗಳ ಪಾಲಿಗೆ ಇಲ್ಲಿನ ಗ್ರಾಪಂ ಇದ್ದೂ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಪ್ರತೀ 5 ವರ್ಷಕ್ಕೊಮ್ಮೆ ಓಟು ಕೇಳಲು ಬರುತ್ತಿದ್ದಾರೆ. ಆದರೆ ಗೆದ್ದ ಬಳಿಕ ಕಾಲನಿ ನಿವಾಸಿಗಳಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದುವರೆಗೂ ಕಾಲನಿಗೆ ಯಾವುದೇ ಸರಕಾರಿ ಸೌಲಭ್ಯ ಸಿಕ್ಕಿಲ್ಲ. ಕಾಂಕ್ರೀಟ್ ರಸ್ತೆ ನಿರ್ಮಿಸಿ ಕೊಡುವುದಾಗಿ ಕಳೆದ ಬಾರಿ ಬಿಜೆಪಿ ಮುಖಂಡರು ಭರವಸೆ ನೀಡಿದ್ದರು. ಇಲ್ಲಿಗೆ ಬಂದಿದ್ದ ಕಾಂಕ್ರೀಟ್ ರಸ್ತೆಯನ್ನು ಬೇರೆಡೆಗೆ ನೀಡಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದ ಕಾಲನಿಯ ಗಂಡಸರು, ಯುವಕರು ಕುಡಿತದ ದಾಸರಾಗಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಅಕ್ರಮ ಮದ್ಯ ಮಾರಾಟ ಅವ್ಯಾಹತ ದಂದೆಯಾಗಿ ಮಾರ್ಪಟ್ಟಿದೆ. ಕಾಲಮಿ ಸುತ್ತಮುತ್ತ ಇಸ್ಪೀಟ್ ದಂಧೆ, ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರಿಂದಾಗಿ ಇಲ್ಲಿನ ಕಚ್ಚಾ ರಸ್ತೆಗಳು ಹಾಳಾಗಿವೆ.
- ರೇಣುಕಾ ಎಚ್.ಆರ್. ಎಂಎಸ್‍ಡಬ್ಲ್ಯೂ ಪದವೀಧರೆ