‘ಸಿಕಲ್ ಸೆಲ್’: ಕಾರಣಗಳು ಮತ್ತು ನಿಯಂತ್ರಣ
ಇಂದು ವಿಶ್ವ ‘ಸಿಕಲ್ ಸೆಲ್’ ದಿನ
ಆಫ್ರಿಕಾ ದೇಶವೊಂದರಲ್ಲಿಯೇ ದಿನವೊಂದರಲ್ಲಿ 1000 ಮಕ್ಕಳು ಈ ರೋಗದೊಂದಿಗೆ ಹುಟ್ಟುತ್ತಾರೆ ಮತ್ತು 5 ವರ್ಷದೊಳಗೆ ಸಾವನ್ನಪ್ಪುತ್ತಾರೆ. ಅಮೆರಿಕ ದೇಶವೊಂದರಲ್ಲಿ ವರ್ಷಕ್ಕೆ 1 ಲಕ್ಷ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಭಾರತ, ಬ್ರೆಝಿಲ್, ಟರ್ಕಿ, ಸೌದಿ ಅರೇಬಿಯ, ಗಯಾನ, ಗ್ರೀಕ್ ಮುಂತಾದ ದೇಶಗಳಲ್ಲಿಯೂ ಈ ರೋಗ ಕಂಡು ಬರುತ್ತದೆ.
ಪ್ರತಿ ವರ್ಷ ಜೂನ್ 19ರಂದು ವಿಶ್ವ ಸಿಕಲ್ ಸೆಲ್ ದಿನ ಎಂದು ಆಚರಿಸಲಾಗುತ್ತಿದ್ದು, 2009ರಿಂದ ವಿಶ್ವ ಸಂಸ್ಥೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ಜಾರಿಗೆ ತಂದಿತು. ಇದೊಂದು ರಕ್ತಸಂಬಂಧಿ ಅನುವಂಶೀಯ ಕಾಯಿಲೆ ಆಗಿದ್ದು, ಕೆಂಪು ರಕ್ತಕಣಗಳು ಈ ರೋಗದಿಂದ ಬಳಲುತ್ತವೆ. ಈ ರೋಗಿಗಳಲ್ಲಿ ಕೆಂಪು ರಕ್ತಕಣಗಳ ರಚನೆಯಲ್ಲಿ ವ್ಯತ್ಯಯ ಉಂಟಾಗಿ, ಕುಡುಗೋಲು ಅಥವಾ ಆಂಗ್ಲಭಾಷೆಯಲ್ಲಿ ಸಿಕಲ್ ಎಂಬ ರಚನೆ ಹೊಂದಿರುವುದರಿಂದ ಈ ರೋಗಕ್ಕೆ ಕುಡುಗೋಲು ಕಣ ಕಾಯಿಲೆ ಅಥವಾ ಸಿಕಲ್ ಸೆಲ್ ಕಾಯಿಲೆ ಎಂದು ಕರೆಯಲಾಗುತ್ತದೆ. ಇದೊಂದು ವಂಶವಾಹಕ ರೋಗವಾಗಿದ್ದು, ತಂದೆ ತಾಯಂದಿರಿಂದ ಈ ರೋಗ ಮಕ್ಕಳಿಗೆ ಜನ್ಮಜಾತವಾಗಿ ಬಳುವಳಿಯಾಗಿ ಬಂದಿರುತ್ತದೆ. ಆಫ್ರಿಕಾ ದೇಶವೊಂದರಲ್ಲಿಯೇ ದಿನವೊಂದರಲ್ಲಿ 1000 ಮಕ್ಕಳು ಈ ರೋಗದೊಂದಿಗೆ ಹುಟ್ಟುತ್ತಾರೆ ಮತ್ತು 5 ವರ್ಷದೊಳಗೆ ಸಾವನ್ನಪ್ಪುತ್ತಾರೆ. ಅಮೆರಿಕ ದೇಶವೊಂದರಲ್ಲಿ ವರ್ಷಕ್ಕೆ 1 ಲಕ್ಷ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಭಾರತ, ಬ್ರೆಝಿಲ್, ಟರ್ಕಿ, ಸೌದಿ ಅರೇಬಿಯಾ ಗಯಾನ, ಗ್ರೀಕ್ ಮುಂತಾದ ದೇಶಗಳಲ್ಲಿಯೂ ಈ ರೋಗ ಕಂಡು ಬರುತ್ತದೆ.
ಏನಿದು ಕುಡುಗೋಲು ಕಣ ಕಾಯಿಲೆ?
ಸಾಮಾನ್ಯವಾಗಿ ರಕ್ತದಲ್ಲಿನ ಕೆಂಪು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್ ಎಂಬ ಪ್ರೊಟೀನ್ ರಕ್ತದಲ್ಲಿ ಆಮ್ಲಜನಕ ಸರಬರಾಜು ಮಾಡುವ ಕೆಲಸವನ್ನು ಮಾಡಿ ಜೀವಕೋಶಗಳನ್ನು ಜೀವಂತವಾಗಿಡುತ್ತದೆ. ಈ ಕಾಯಿಲೆ ಇರುವವರಲ್ಲಿ ಅಸಹಜವಾದ ಕೆಂಪುರಕ್ತಕಣಗಳ ರಚನೆಯಿಂದಾಗಿ, ಸಣ್ಣ ಸಣ್ಣ ರಕ್ತನಾಳಗಳಲ್ಲಿ ಕೆಂಪು ರಕ್ತಕಣಗಳು ಸೇರಿಕೊಂಡು, ರಕ್ತನಾಳಗಳು ಮುಚ್ಚಿಕೊಂಡು ಜೀವಕೋಶಗಳಿಗೆ ಆಮ್ಲಜನಕ ಸರಬರಾಜು ಮಾಡುವ ಪ್ರಕ್ರಿಯೆಗೆ ತಡೆಯೊಡ್ಡುತ್ತದೆ. ಜೀವಕೋಶಗಳಿಗೆ ಆಮ್ಲಜನಕ ಸಿಗದೆ, ಹಲವಾರು ರೋಗ ಲಕ್ಷಣಗಳಿಗೆ ಮುನ್ನುಡಿ ಬರೆಯುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಿ ಅನಿಮೀಯಾ ಅಥವಾ ರಕ್ತಹೀನತೆಗೆ ದಾರಿ ಮಾಡಿಕೊಡುತ್ತದೆ.
ರೋಗದ ಲಕ್ಷಣಗಳು ಏನು?
ರಕ್ತಹೀನತೆ ಅಥವಾ ಅನೀಮಿಯಾದಿಂದಾಗಿ ರೋಗಿಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ. ಈ ರೋಗಿಗಳು ಯಾವುದೇ ಕೆಲಸ ಮಾಡುವಾಗ ಬೇಗನೆ ಬಳಲುತ್ತಾರೆ ಮತ್ತು ಸುಸ್ತಾಗಿ ಬಿಡುತ್ತಾರೆ. ಅದರ ಜೊತೆಗೆ ನೋವು, ಪದೇ ಪದೇ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ತಲೆನೋವು, ಹೃದಯದ ಸಮಸ್ಯೆಗಳು, ಯಕೃತ್ತಿನ ತೊಂದರೆಗಳು, ಮೂಳೆಯಲ್ಲಿ ಹಠಾತ್ ನೋವು ಕಾಣಿಸಿಕೊಳ್ಳುತ್ತದೆ. ರಕ್ತ ಹೀನತೆಯಿಂದಾಗಿ ಕಿಡ್ನಿ, ಗುಲ್ಮಗ್ರಂಥಿ, ಮೆದುಳು ಮತ್ತು ಶ್ವಾಸಕೋಶದ ತೊಂದರೆಗಳು ಪದೇ ಪದೇ ಬರುತ್ತದೆ. ಅಂಗೈ ಮತ್ತು ಅಂಗಾಲುಗಳು ತಣ್ಣಗಾಗುವುದು, ರಕ್ತಹೀನತೆಯಿಂದಾಗಿ ಚರ್ಮ ಬಿಳಿಚಿಕೊಳ್ಳುವುದು, ಪದೇ ಪದೇ ಜಾಂಡಿಸ್ಗೆ ತುತ್ತಾಗುವುದು, ಕಾಲುಗಳಲ್ಲಿ ಪದೇ ಪದೇ ವಾಸಿಯಾಗದ ಹುಣ್ಣುಗಳು ಕಾಣಿಸಿಕೊಳ್ಳುತ್ತದೆ. ಸಿಕಲ್ ಸೆಲ್ ಕ್ರೈಸಿಸ್ ಎಂಬುದು ಒಂದು ತುರ್ತು ಚಿಕಿತ್ಸೆಯ ಅಗತ್ಯವಿರುವ ಲಕ್ಷಣವಾಗಿದ್ದು, ಉಸಿರಾಟದ ತೊಂದರೆ, ವಿಪರೀತ ನೋವು, ಮೂಳೆಗಳು ಹಿಂಡಿ ಹಿಪ್ಪೆಮಾಡುವ ಅಸಾಧ್ಯ ನೋವು ಕಂಡು ಬರುತ್ತದೆ. ತಕ್ಷಣವೇ ಆಸ್ಪತ್ರೆಗಳಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ.
ಚಿಕಿತ್ಸೆ ಹೇಗೆ?
ಕುಡುಗೋಲು ಕಣ ಕಾಯಿಲೆ ಮಾರಣಾತಿಂಕ ರೋಗವಾಗಿದ್ದು. ಸಂಪೂರ್ಣವಾಗಿ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ರೋಗಿಗೆ ಗುಣಮಟ್ಟದ ಜೀವನ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಣ್ಣ ಪುಟ್ಟ ನೋವಾದಲ್ಲಿ ನೋವು ನಿವಾರಕ ಔಷಧಿ ಮತ್ತು ಹೀಲಿಂಗ್ ಪ್ಯಾಡ್ಗಳ ಮೂಲಕ ನೋವು ನಿವಾರಣೆ ಮಾಡಲಾಗುತ್ತದೆ. ವಿಪರೀತ ನೋವಿದ್ದಲ್ಲಿ ಒಳರೋಗಿಯಾಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ. ಅದೇ ರೀತಿ ದೇಹಕ್ಕೆ ಅಗತ್ಯವಿರುವ ದ್ರವಗಳನ್ನು ರಕ್ತನಾಳಗಳ ಮೂಲಕ ನೀಡಲಾಗುತ್ತದೆ. ನಾರ್ಕೋಟಿಕ್ ನೋವು ನಿವಾರಕ ಔಷಧಿಯ ಅಗತ್ಯವಿರುತ್ತದೆ. ಹಾಗೆಯೇ ಈ ರೋಗಿಗಳು ಪದೇ ಪದೇ ಸೋಂಕಿಗೆ ತುತ್ತಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಪದೇ ಪದೇ ಕಾಡುವ ಜ್ವರ, ಮೂಳೆ ನೋವು ಮತ್ತು ಸೋಂಕು ಈ ರೋಗದ ಮುಖ್ಯ ಲಕ್ಷಣವಾಗಿದ್ದು ನಿರಂತರವಾದ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅಗತ್ಯ.
ಕೊನೆಮಾತು
ಕುಡುಗೋಲು ಕಣ ಕಾಯಿಲೆ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು ನಿರಂತರ ಚಿಕಿತ್ಸೆ ಮತ್ತು ವೈದ್ಯರ ಸಲಹೆ ಅತೀ ಅಗತ್ಯ. ಸಂರ್ಪೂಣವಾಗಿ ಗುಣಪಡಿಸಲಾಗದಿದ್ದರೂ ರೋಗವನ್ನು ನಿಯಂತ್ರಣದಲ್ಲಿ ಇರಿಸಬಹುದಾಗಿದೆ. ನಿರಂತರವಾದ ರಕ್ತಪೂರಣದಿಂದಾಗಿ ಹೃದಯ, ಯಕೃತ್ಗಳಲ್ಲಿ ಕಬ್ಬಿಣದ ಅಂಶ ಜಾಸ್ತಿಯಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಅಸ್ಥಿಮಜ್ಜೆ ಬದಲಾಯಿಸಿ ರೋಗವನ್ನು ಗುಣಪಡಿಸಬಹುದಾಗಿದೆ. ಆದರೆ ಖರ್ಚು ಮತ್ತು ಮೂಲ ಸೌಲಭ್ಯದ ಕೊರತೆಯಿಂದಾಗಿ ಎಲ್ಲರಿಗೂ ಈ ಚಿಕಿತ್ಸೆ ಅಲಭ್ಯವಾಗಿದೆ. ಪ್ರತಿ 500ರಲ್ಲಿ ಒಂದು ಮಗು ಈ ರೋಗಕ್ಕೆ ತುತ್ತಾಗಿರುವುದು ಆಫ್ರಿಕಾ ದೇಶದ ದುರ್ವಿಧಿಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ದೊರಕದಿರುವುದು ದೌರ್ಭಾಗ್ಯದ ವಿಚಾರ. ಅನಕ್ಷರತೆ, ಬಡತನ ಮತ್ತು ಅಜ್ಞಾನದಿಂದಾಗಿ ಇದೊಂದು ಅಂಟು ರೋಗ ಮತ್ತು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಮೂಢನಂಬಿಕೆ ಇನ್ನೂ ಚಾಲ್ತಿಯಲ್ಲಿರುವುದು ನೋವಿನ ವಿಚಾರವಾಗಿದೆ. ನೋವು, ವಾತ ಮತ್ತು ಮೈ ಜುಮ್ಮ ಹಿಡಿಯುವುದು ಮತ್ತು ಚರ್ಮ ಬಿಳುಪಾಗುವುದು ಈ ರೋಗದ ಅತೀ ಸಾಮಾನ್ಯ ಲಕ್ಷಣವಾಗಿದೆ. ಬಹಳ ಸುಲಭವಾಗಿ ಈ ರೋಗವನ್ನು ಪತ್ತೆ ಹಚ್ಚಬಹುದಾಗಿದೆ. ಈ ಕುಡುಗೋಲು ಕಣ ಕಾಯಿಲೆ ಇರುವವರಲ್ಲಿ ಹಿಮೋಗ್ಲೋಬಿನ್ ಎಸ್ ಎಂಬ ಅಸಹಜ ಪ್ರೊಟೀನ್ ಇರುವುದರಿಂದಾಗಿ, ಕೆಂಪು ರಕ್ತಕಣಗಳು ಕುಡುಗೋಲು ಆಕಾರದಲ್ಲಿ ಇರುತ್ತದೆ. ಸಾಮಾನ್ಯವಾಗಿ ಕೆಂಪು ರಕ್ತ ಕಣಗಳು ಓವಲ್ ಅಥವಾ ಚಕ್ರದ ಆಕೃತಿಯಲ್ಲಿ ಇರುತ್ತದೆ. ತನ್ನ ಕುಡುಗೋಲಿನ ಆಕಾರದಿಂದಾಗಿ ತನ್ನ ಚಲನೆ ಮತ್ತು ಕಾರ್ಯಶೀಲತೆಯನ್ನು ಕಳಕೊಂಡ ಕೆಂಪು ರಕ್ತಕಣಗಳಿಂದಾಗಿ ಹಲವಾರು ರೋಗ ಲಕ್ಷಣಗಳಿಗೆ ನಾಂದಿ ಹಾಡುತ್ತದೆ. ನಿರಂತರವಾದ ವೈದ್ಯರ ಸಲಹೆ, ಮಾರ್ಗದರ್ಶನ ಮತ್ತು ಚಿಕಿತ್ಸೆಗಳ ಮುಖಾಂತರ ರೋಗವನ್ನು ಹತೋಟಿಯಲ್ಲಿ ಇಡುವುದರಲ್ಲಿಯೇ ಜಾಣತನ ಅಡಗಿದೆ.