ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ: ಮುಂದುವರಿದ ಕೇಂದ್ರ-ರಾಜ್ಯ ಸರ್ಕಾರಗಳ ಹಗ್ಗಜಗ್ಗಾಟ
ಶಿವಮೊಗ್ಗ, ಜೂ. 25: ಬಹು ಚರ್ಚಿತ-ನಿರೀಕ್ಷಿತ, ಮಲೆನಾಡು-ಬಯಲುಸೀಮೆ ನಡುವೆ ಸಂಪರ್ಕ ಕಲ್ಪಿಸುವ, ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಶಿವಮೊಗ್ಗ-ಹರಿಹರ ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ಸದ್ಯಕ್ಕೆ ಕಾರ್ಯಗತಗೊಳ್ಳುವ ಯಾವುದೇ ಲಕ್ಷಣಗಳಿಲ್ಲವಾಗಿದೆ. ನೆನೆಗುದಿಗೆ ಬೀಳುವುದು ಖಚಿತವಾಗಿದೆ.
ಪೂರ್ವ ನಿಗದಿತ ಒಪ್ಪಂದದಂತೆ, ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು, ಉಚಿತವಾಗಿ ತನಗೆ ಸ್ವಾದೀನ ಪಡಿಸಿಕೊಡುವಂತೆ ಕೇಂದ್ರ ರೈಲ್ವೆ ಇಲಾಖೆಯು ಬಿಗಿಪಟ್ಟು ಹಿಡಿದಿದೆ. ಮತ್ತೊಂದೆಡೆ ಸಹಭಾಗಿತ್ವದ ರೈಲ್ವೆ ಯೋಜನೆಗಳ ಬಗ್ಗೆ ನಿರಾಸಕ್ತಿ ತಳೆದಿರುವ ರಾಜ್ಯ ಸರ್ಕಾರವು, ಕೇಂದ್ರವೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಹೇಳುತ್ತಿದೆ.
ಇದರಿಂದ ಶಿವಮೊಗ್ಗ-ಹರಿಹರ ಸೇರಿದಂತೆ ರಾಜ್ಯದಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ರೈಲ್ವೆ ಯೋಜನೆಗಳ ಅನುಷ್ಠಾನದ ಮೇಲೆ ಪರಿಣಾಮ ಬೀರುವಂತಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬೀಳುವಂತಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಬಿಗಿಪಟ್ಟು ಸಡಿಲಗೊಳ್ಳದಿರುವುದು, 'ಸಹಭಾಗಿತ್ವ'ದ ಯೋಜನೆಗಳು ಮತ್ತಷ್ಟು ಕಗ್ಗಂಟಾಗುವಂತಾಗಿಸಿದೆ.
ನೆನೆಗುದಿಗೆ: ಶಿವಮೊಗ್ಗ-ಹರಿಹರ ನಡುವೆ ರೈಲ್ವೆ ಮಾರ್ಗ ನಿರ್ಮಾಣ ಮಾಡಬೇಕೆಂಬುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. 2011-12 ನೇ ಸಾಲಿನಲ್ಲಿ ರೈಲ್ವೆ ಇಲಾಖೆಯು, ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪರವರು, ಯೋಜನಾ ವೆಚ್ಚದ ಶೇ. 50 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸುವುದಾಗಿ ಹೇಳಿದ್ದರು. ಅಂದಿನ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿಯವರು ಇದಕ್ಕೆ ಸಹಮತಿ ವ್ಯಕ್ತಪಡಿಸಿದ್ದರು.
ಒಪ್ಪಂದದಂತೆ ಕೇಂದ್ರ ರೈಲ್ವೆ ಇಲಾಖೆಯು ಮಾರ್ಗ ಹಾದು ಹೋಗಲಿರುವ ಪ್ರದೇಶಗಳ ಸರ್ವೇ ನಡೆಸಿತ್ತು. ಈ ಮೊದಲು ಶಿವಮೊಗ್ಗ-ಹರಿಹರ ರಸ್ತೆಗೆ ಹೊಂದಿಕೊಂಡಂತೆ ನಡೆಸಲಾಗಿದ್ದ ಸರ್ವೇ ರದ್ದುಗೊಳಿಸಿ, ಶಿವಮೊಗ್ಗ ನಗರದ ಹೊರವಲಯ ಕೋಟೆಗಂಗೂರು ಬಳಿಯಿಂದ ಅಬ್ಬಲಗೆರೆ ಮಾರ್ಗವಾಗಿ ಮಾರ್ಗ ನಿರ್ಮಾಣದ ಸರ್ವೇ ನಡೆಸಲಾಗಿತ್ತು. ಅದರಂತೆ ಶಿವಮೊಗ್ಗದ ಅಬ್ಬಲಗೆರೆ, ಸುತ್ತುಕೋಟೆ, ದಾವಣಗೆರೆ ಜಿಲ್ಲೆಯ ಕುಂಕುವ, ಬಸವನಹಳ್ಳಿ, ಹೊನ್ನಾಳ್ಳಿ, ಮಲೆಬೆನ್ನೂರು, ನಂದಿತಾವರೆ, ಬನ್ನಿಕೋಡು ಮೂಲಕ ಹರಿಹರ ತಲುಪುವ 79 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ನಿರ್ಧರಿಸಿತ್ತು. 2013 ರಲ್ಲಿ ಮಾಡಿದ್ದ ಅಂದಾಜಿನಂತೆ 832 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿತ್ತು.
ಮಾರ್ಗ ಹಾದು ಹೋಗಲಿರುವ ಪ್ರದೇಶಗಳನ್ನು ಗುರುತಿಸಿ ಭೂ ಸ್ವಾದೀನ ಪಡಿಸಿಕೊಡುವಂತೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ರಾಜ್ಯ ಸರ್ಕಾರವು, ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಸುಮಾರು 1000 ಎಕರೆ ಭೂಮಿಯನ್ನು ಭೂ ಸ್ವಾದೀನಪಡಿಸಿಕೊಂಡು ಉಚಿತವಾಗಿ ರೈಲ್ವೆ ಇಲಾಖೆಗೆ ನೀಡಬೇಕಾಗಿತ್ತು.
ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಭೂ ಸ್ವಾದೀನ ಪ್ರಕ್ರಿಯೆಯನ್ನು ಶಿವಮೊಗ್ಗ-ದಾವಣಗೆರೆ ಜಿಲ್ಲಾಡಳಿತಗಳು ಆರಂಭಿಸಿದ್ದವು. ಭೂ ಮಾಲೀಕರಿಗೆ ನೋಟೀಸ್ ಕೂಡ ನೀಡಲಾಗಿತ್ತು. ಆದರೆ ಅವರು ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಈ ಯೋಜನೆಯು ಕೂಡ ಹಳ್ಳ ಹಿಡಿಯಲಾರಂಭಿಸಿತು.
ಅವರ ನಂತರ ಬಂದ ಮುಖ್ಯಮಂತ್ರಿಗಳು ಈ ಯೋಜನೆಯ ಬಗ್ಗೆ ನಿರ್ಲಕ್ಷ್ಯವಹಿಸಿದರು. ಬಿಜೆಪಿ ಸರ್ಕಾರದ ನಂತರ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಹಭಾಗಿತ್ವದ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲು ನೀಡುವುದಿಲ್ಲ. ರೈಲ್ವೆ ಯೋಜನೆಗಳಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿ ಎಂದು ಸ್ಪಷ್ಟಪಡಿಸಿತ್ತು.
ಮತ್ತೊಂದೆಡೆ ಕೇಂದ್ರ ರೈಲ್ವೆ ಇಲಾಖೆಯು, ಮೂಲ ಒಪ್ಪಂದದಂತೆ ರಾಜ್ಯ ಸರ್ಕಾರವು ತನ್ನ ಪಾಲು ಭರಿಸಬೇಕು ಎಂದು ಪಟ್ಟು ಹಿಡಿದಿತ್ತು. ಕೇಂದ್ರ-ರಾಜ್ಯ ಸರ್ಕಾರಗಳ ಹಗ್ಗಜಗ್ಗಾಟದಿಂದ ಶಿವಮೊಗ್ಗ-ಹರಿಹರ ರೈಲ್ವೆ ಸೇರಿದಂತೆ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸಹಭಾಗಿತ್ವದ ರೈಲ್ವೆ ಯೋಜನೆಗಳ ಮೇಲೆ ಪರಿಣಾಮ ಬೀರುವಂತಾಗಿತ್ತು. ಈ ಯೋಜನೆಗಳಿಗೆ ಸಂಬಂಧಿಸಿದ ಕಡತಗಳು ಕೇಂದ್ರ-ರಾಜ್ಯ ಸರ್ಕಾರಗಳ ಹಂತದಲ್ಲಿಯೇ ಧೂಳು ಹಿಡಿಯುವಂತಾಗಿದೆ.
ನಿರಾಕರಿಸಿದ್ದ ಸಿದ್ದರಾಮಯ್ಯ!
ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ರೈಲ್ವೆ ಯೋಜನೆಗಳಿಗೆ ಶೇ. 50 ರಷ್ಟು ಅನುದಾನ ಭರಿಸಲು ಸಾಧ್ಯವಿಲ್ಲ ಎಂದು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಸ್ಪಷ್ಟವಾಗಿ ಕೇಂದ್ರಕ್ಕೆ ತಿಳಿಸಿತ್ತು. 'ರೈಲ್ವೆ ಯೋಜನೆಗಳಿಗೆ ಶೇ. 50 ರಷ್ಟು ವೆಚ್ಚ ಭರಿಸುವುದರಿಂದ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ಹಿಂದಿನ ವ್ಯವಸ್ಥೆಯಂತೆ ಕೇಂದ್ರವೇ ಸಂಪೂರ್ಣ ವೆಚ್ಚ ಭರಿಸಲಿ' ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸ್ಪಷ್ಟವಾಗಿ ತಿಳಿಸಿದ್ದರು. ಮತ್ತೊಂದೆಡೆ ರಾಜ್ಯದ ಈ ನಿಲುವಿನ ಬಗ್ಗೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ಒಪ್ಪಂದದಂತೆ ವೆಚ್ಚ ಭರಿಸಬೇಕು ಎಂದಿತ್ತು.
ಗಮನಹರಿಸುವರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ?
ರಾಜ್ಯದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದಡಿ ಹಲವು ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಸದ್ಯ ರಾಜ್ಯವು ತನ್ನ ಪಾಲು ನೀಡಲು ನಿರಾಕರಿಸುತ್ತಿರುವುದು ಹಾಗೂ ಕೇಂದ್ರ ಸರ್ಕಾರವು ರಾಜ್ಯದ ಪಾಲು ನೀಡದ ಹೊರತಾಗಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗದಿರುವುದರಿಂದ, ಸಹಭಾಗಿತ್ವದಡಿ ಅನುಷ್ಠಾನಗೊಳ್ಳುತ್ತಿರುವ ಹಲವು ರೈಲ್ವೆ ಯೋಜನೆಗಳು ಪ್ರಸ್ತುತ ನೆನೆಗುದಿಗೆ ಬೀಳುವಂತಾಗಿದೆ. ಇದರಿಂದ ರಾಜ್ಯದಲ್ಲಿ ರೈಲ್ವೆ ಮಾರ್ಗದ ಬೆಳವಣಿಗೆ ಮೇಲೆ ಪರಿಣಾಮ ಬೀರುವಂತಾಗಿದೆ. ಈ ಕುರಿತಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ರೈಲ್ವೆ ಇಲಾಖೆಯ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.
ಭರವಸೆ ಮರೆತ ಕೇಂದ್ರ ಸರ್ಕಾರ!
ಶಿವಮೊಗ್ಗ-ಹರಿಹರ ಸೇರಿದಂತೆ ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲು ನೀಡಲು ನಿರಾಕರಿಸಿದಾಗ, ಅಂದಿನ ರೈಲ್ವೆ ಸಚಿವರು ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗದ ಸಂಪೂರ್ಣ ವೆಚ್ಚವನ್ನು ಕೇಂದ್ರದ ಮೂಲಕವೇ ಭರಿಸಲಾಗುವುದು. ಕಾಲಮಿತಿಯಲ್ಲಿ ಯೋಜನೆ ಅನುಷ್ಠಾಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ಭೂ ಸ್ವಾದೀನ ಪಡಿಸಿಕೊಡದ ಹೊರತಾಗಿ, ಯೋಜನೆ ಅನುಷ್ಠಾನಗೊಳಿಸುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳುತ್ತಿರುವುದರಿಂದ ಸದ್ಯಕ್ಕೆ ಯೋಜನೆ ಟೇಕಾಫ್ ಆಗುವ ಯಾವುದೇ ಲಕ್ಷಣಗಳಿಲ್ಲವಾಗಿದೆ.
ಶಿವಮೊಗ್ಗ-ಹರಿಹರ ಯೋಜನೆಯ ಹೈಲೈಟ್ಸ್
ಕೇಂದ್ರ-ರಾಜ್ಯ ಸರ್ಕಾರದಿಂದ ತಲಾ ಶೇ.50 ರಷ್ಟು ವೆಚ್ಚ ಭರಿಸುವ ಒಪ್ಪಂದ.
79 ಕಿ.ಮೀ. ಉದ್ದ, 832 ಕಿ.ಮೀ. ಅಂದಾಜು ವೆಚ್ಚ.
ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಹಾದು ಹೋಗಲಿರುವ ಮಾರ್ಗ.
ಮಾರ್ಗ ಹಾದು ಹೋಗಲಿರುವ ಪ್ರದೇಶದ ಸರ್ವೇ ಪೂರ್ಣ.
ಮಾರ್ಗ ನಿರ್ಮಾಣಕ್ಕೆ 1000 ಎಕರೆ ಭೂಮಿ ಅಗತ್ಯ.