ಮತ್ತು ತಂದೀತು ಜೀವಕ್ಕೇ ಕುತ್ತು!
ಇಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನ
ಅತೀ ಒತ್ತಡದ ಬದುಕನ್ನು ನಡೆಸುವವರು ತಮ್ಮ ಮನಸ್ಸಿನ ವೇಗವನ್ನು ಕಡಿಮೆ ಮಾಡಿಕೊಂಡು ಪರ್ಯಾಯ ಬದುಕನ್ನು ಕಲ್ಪಿಸಿಕೊಳ್ಳಲು ಮಾದಕ ದ್ರವ್ಯಕ್ಕೆ ದಾಸರಾಗುತ್ತಾರೆ. ಆದರೆ ಅದು ನಶ್ವರವೆಂದು ಗೊತ್ತಾದಾಗ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಮತ್ತಷ್ಟು ಒತ್ತಡಕ್ಕೆ ಒಳಗಾಗಿ ಸಂಪೂರ್ಣವಾಗಿ ವ್ಯಸನಿಗಳಾಗಿ ಬಿಡುತ್ತಾರೆ. ಬದುಕಿನ ವಾಸ್ತವವನ್ನು ಎದುರಿಸಲಾಗದೆ ಮಾದಕದ್ರವ್ಯದ ಸಹಾಯದಿಂದ ಕಲ್ಪನಾ ಲೋಕದಲ್ಲೇ ಮುಳುಗಿದ್ದು ತಮ್ಮ ಸಮಸ್ಯೆಗಳಿಗೆ ಕ್ಷಣಕವಾದ ಪರಿಹಾರ ಪಡೆಯಲು ಹೋಗಿ ಅಮೂಲ್ಯವಾದ ಬದುಕನ್ನು ಬರಡಾಗಿಸುವುದು ಮಾಯಾ ಲೋಕದ ದುರಂತವೇ ಸರಿ.
ವಿಶ್ವದಾದ್ಯಂತ ಜೂನ್ 26ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. 1987ರಲ್ಲಿ ಆರಂಭವಾದ ಈ ಆಚರಣೆ, ಜಗತ್ತಿನಾದ್ಯಂತ ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮಾದಕ ವ್ಯಸನಿಗಳನ್ನು ವ್ಯಸನಮುಕ್ತಗೊಳಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಗುರುತರವಾದ ಉದ್ದೇಶವನ್ನು ಹೊಂದಿದೆ. ಒಂದು ಅಂದಾಜು ಮೂಲದ ಪ್ರಕಾರ ಸುಮಾರು 200 ಮಿಲಿಯನ್ ಮಂದಿ ಜಗತ್ತಿನೆಲ್ಲೆಡೆ ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿದ್ದಾರೆ ಮತ್ತು ಜಾಗತಿಕವಾಗಿ ಮಾದಕ ದ್ರವ್ಯಗಳಿಗಾಗಿ ಬಳಸುವ ವೆಚ್ಚ ವರ್ಷವೊಂದರಲ್ಲಿ 1,36,500 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ. ಅಫೀಮು, ಕೊಕೇನ್, ಹೆರಾಯಿನ್, ಮಾರಿಜುವಾನಾ ಮುಂತಾದ ಮಾದಕ ದ್ರವ್ಯಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದು, ಇದರ ದುಷ್ಪರಿಣಾಮಗಳ ಅರಿವಿದ್ದೂ, ಯುವಜನತೆ ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗಿ ಸರ್ವಸ್ವವನ್ನೂ ಕಳೆದುಕೊಂಡು ಅನಾರೋಗ್ಯದ ಹಂದರವಾಗಿ ಸಮಾಜಕ್ಕೆ, ಕುಟುಂಬಕ್ಕೆ ಹೊರೆಯಾಗುತ್ತಿರುವುದು ಆಧುನಿಕ ಜಗತ್ತಿನ ಕುಚೋದ್ಯವೇ ಸರಿ.
ಗಾಂಜಾ, ಅಫೀಮು ಯಾಕೆ?
ಇಂದು ನಾವು ಜೀವಿಸುತ್ತಿರುವ ಈ ಜಗತ್ತು, ಸ್ಪರ್ಧಾತ್ಮಕ ಕಾಲಘಟ್ಟದಲ್ಲಿದೆ. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೇನೋ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ ಬಹಳ ಇರುತ್ತದೆ. ಈಗಿನ ಒತ್ತಡದ, ಧಾವಂತದ ಜಗತ್ತಿನಲ್ಲಿ, ಯುವ ಜನತೆ ವೇಗಕ್ಕೆ ತಾಳ ಹಾಕಲು ಕಷ್ಟವಾಗಿ ತಪ್ಪುದಾರಿ ಹಿಡಿಯುತ್ತಾರೆ ಎಂದರೂ ತಪ್ಪಲ್ಲ. ನಮ್ಮ ಇಂದಿನ ನಾಗರಿಕ ಜೀವನ ಶೈಲಿಯಲ್ಲಿ ಮೋಜು-ಮಸ್ತಿ, ತಡ ರಾತ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿ ಯಾಗಿವೆ. ಈ ಹಂತದಲ್ಲಿ ಹದಿ ಹರೆಯದ ಯುವ ಜನತೆ ದಾರಿ ತಪ್ಪುವುದು ಸಾಮಾನ್ಯ. ಈ ದಿಸೆಯಲ್ಲಿ ತಂದೆ ತಾಯಂದಿರ ಆಸರೆ, ಮಾರ್ಗದರ್ಶನ ಅತೀ ಅಗತ್ಯ. ಹದಿ ಹರೆಯದಲ್ಲಿ ಮಕ್ಕ ಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯದಿದ್ದಲ್ಲಿ ಅನಾಹುತವಾಗುವ ಸಾಧ್ಯತೆಯಿದೆ.
ಅಫೀಮು, ಗಾಂಜಾ, ಕೋಕೇನ್, ಮಾರಿಜುವಾನಾ ಇವೆಲ್ಲಾ ಮಾದಕ ವಸ್ತುಗಳ ಸೇವನೆ ನಮ್ಮ ದೇಶಗಳಲ್ಲಿ ಶತಶತಮಾನಗಳಿಂದ ಇದೆ. ಒಮ್ಮೆ ಇದರ ಚಟಕ್ಕೆ ಬಿದ್ದಲ್ಲಿ ಮತ್ತೆ ಹೊರಬರುವುದು ಬಹಳ ಕಷ್ಟ. ಅಭ್ಯಾಸ ಬಲದಿಂದ ಮತ್ತೆ ಮತ್ತೆ ಮಾಡುವ ಕೆಲಸವನ್ನು ಚಟ ಎನ್ನುತ್ತೇವೆ. ಸಾಮಾನ್ಯವಾಗಿ ಚಟಗಳೆಲ್ಲಾ ದುಶ್ಚಟಗಳೇ. ಆ ವ್ಯಕ್ತಿಗೆ ಹಾಗೆಂದು ಗೊತ್ತಿದ್ದರೂ ಅದನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಇದಕ್ಕೆ ಮುಖ್ಯ ಕಾರಣ, ಅದನ್ನು ನಿಲ್ಲಿಸಿದರೆ ಆತನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಹಿಂಸೆಯಾಗುತ್ತದೆ. ಹೀಗಾಗಿ ಹೇಗೊ ಆತನಿಗೆ ಅಂಟಿಕೊಂಡ ಚಟಗಳು ಅವನನ್ನು ಬಿಡದೆ ಆವರಿಸಿಕೊಂಡಿರುತ್ತವೆ.
ಅಫೀಮು ಎನ್ನುವುದು ಗಸಗಸೆಯಿಂದ ತಯಾರು ಮಾಡಲಾದ, ಔಷಧಿಯ ಗುಣವುಳ್ಳ ವಸ್ತು. ಅಫೀಮಿನಿಂದ ತಯಾರಾದ ಮಾರ್ಪಿನ್ ಎನ್ನುವ ಶುದ್ಧ ರಾಸಾಯನಿಕ ವಸ್ತುವನ್ನು, ಇಂದಿಗೂ ವೈದಕೀಯ ಶಾಸ್ತ್ರದಲ್ಲಿ ನೋವುನಿವಾರಕ ಚುಚ್ಚುಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ಅಪಘಾತದಲ್ಲಿ ಪೆಟ್ಟುಬಿದ್ದು ತೀವ್ರ ಸ್ಪರೂಪದ ನೋವಿರುವಾಗ, ಹೃದಯಾಘಾತವಾಗಿ ಅತಿಯಾದ ಎದೆನೋವು ಇದ್ದಲ್ಲಿ ನೋವುನಿವಾರಕವಾಗಿ ಇಂದಿಗೂ ಬಳಸಲಾಗುತ್ತದೆ. ಇದರಿಂದ ಸಣ್ಣ ಪ್ರಮಾಣದಲ್ಲಿ ನಿದ್ದೆಬರಬಹುದು. ಅಫೀಮಿನಿಂದ ತಯಾರಿಸಲಾದ ಹೆರಾಯಿನ್ ಎಂಬ ಮಾದಕವಸ್ತು ಕೂಡಾ ಪಾಶ್ಚಾತ್ಯ ದೇಶಗಳಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಿಂದ ಶರೀರದ ನೋವು, ಬಳಲಿಕೆ, ಮಾನಸಿಕ ದುಗುಡ ಕಡಿಮೆಯಾಗಿ ಕ್ಷಣಿಕವಾಗಿ ಖುಷಿ ಸಿಗುತ್ತದೆ. ಮನಸ್ಸಿನ ಬೇಸರ, ನಿರಾಸೆ ಎಲ್ಲವೂ ತಗ್ಗಿ ನಿರಾಳವಾದಂತೆನಿಸುತ್ತದೆ. ಈ ಕಾರಣದಿಂದಲೇ ಜನ ಹೆರಾಯಿನ್ ಚುಚ್ಚುಮದ್ದನ್ನು ಮತ್ತೆ ಮತ್ತೆ ಬಳಸುತ್ತಾರೆ. ಇದು ಕ್ರಮೇಣ ಚಟವಾಗಿ ಮಾರ್ಪಾಡಾಗುತ್ತದೆ. ಮತ್ತೆ ಮತ್ತೆ ತೆಗೆದುಕೊಳ್ಳಬೇಕೆಂಬ ತುಡಿತ ಉಂಟಾಗುತ್ತದೆ. ತೆಗೆದುಕೊಳ್ಳದಿದ್ದಲ್ಲಿ ಮನುಷ್ಯ ಆ ಮಾನಸಿಕ ಸ್ತಿಮಿತ ಕಳೆದುಕೊಂಡು ಹುಚ್ಚನಂತಾಗುತ್ತಾನೆ. ಹೆರಾಯಿನ್ ಬಳಕೆಯಿಂದ ಲೈಂಗಿಕ ಆಸೆ ಹೆಚ್ಚಾಗುತ್ತದೆ. ಆದರೆ ಲೈಂಗಿಕ ಸಾಮರ್ಥ್ಯ ಕುಗ್ಗುತ್ತದೆ. ಈಗಿನ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಮಾದಕ ವಸ್ತುಗಳ ಬಳಕೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ಅಫೀಮು ಎನ್ನುವುದು ಔಷಧೀಯ ಗುಣವುಳ್ಳ ಮಾದಕವಸ್ತು. ಇದರ ಚಟಕ್ಕೆ ಹದಿಹರೆಯದ ಯುವಕರು ಬಿದ್ದಲ್ಲಿ ಮತ್ತೆ ಹೊರ ಬರುವುದು ಬಹಳ ಕಷ್ಟ.
Polydrug abuse ಇನ್ನು ಗಾಂಜಾದ ವಿಷಯಕ್ಕೆ ಬರುವುದಾದರೆ, ಇದು ಕೂಡಾ ಸಸ್ಯ ಮೂಲದಿಂದಲೇ ಬಂದಂತಹ ಇನ್ನೊಂದು ಮಾದಕವಸ್ತು. ಈಗೀಗ ಹಳ್ಳಿ ಹಳ್ಳಿಗಳಲ್ಲೂ ಇದನ್ನು ಅಕ್ರಮವಾಗಿ ಬೆಳೆಸುತ್ತಿದ್ದಾರೆ. ಸರಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೂ, ಜನರು ಅಕ್ರಮವಾಗಿ ಬೆಳೆದು, ಹಣಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಅದೇ ರೀತಿ ಸಸ್ಯಮೂಲದಿಂದ ಬಂದಿರುವ ಕೋಕೇನ್, ಮಾರಿಜುವಾನಾ ಮತ್ತು ಹಷೀಷ್ ಕೂಡಾ ಮಾದಕ ದ್ರವ್ಯಗಳೇ. ಈ ಮೇಲೆ ತಿಳಿಸಿದ ಎಲ್ಲಾ ವಸ್ತುಗಳ ಬಳಕೆಯಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ, ಜೊತೆಗೆ ಒತ್ತಡದಿಂದ ಬಳಲಿದ ದೇಹ ಮತ್ತು ಮನಸ್ಸಿಗೆ ಭ್ರಮೆ ಮತ್ತು ಭ್ರಾಂತಿಗಳನ್ನು ಮಾಡಿಸುತ್ತದೆ. ಈ ಕಾರಣದಿಂದಲೇ ಅತೀವ ಒತ್ತಡ, ಹತಾಶೆ ಮತ್ತು ನಿರಾಶೆಯಿಂದ ಕೂಡಿದ ಯುವ ಜನತೆ ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಾರೆ. ಮೊದಮೊದಲು ಒಂದು ಮಾದಕ ದ್ರವ್ಯದ ಬಳಕೆ, ಬಳಿಕ ಎರಡು ಮೂರು ವಸ್ತುಗಳನ್ನು ಬಳಸತೊಡಗುತ್ತಾರೆ. ಇದನ್ನು ಎಂದು ಹೇಳುತ್ತಾರೆ.
ಕಾಲಕ್ರಮೇಣ ಮಾದಕ ವಸ್ತುಗಳ ಬಳಕೆ ಜಾಸ್ತಿಯಾದಂತೆ, ಶರೀರದ ಒಂದೊಂದು ಅಂಗಗಳನ್ನು ಆಪೋಶನ ತೆಗೆದುಕೊಳ್ಳುತ್ತದೆ. ಕೆಲಸ ಮಾಡಲು ಅಶಕ್ತರಾಗಿ, ಗಳಿಕೆ ಇಲ್ಲದಂತಾಗಿ, ಮನೆಮಠ ಕಳೆದುಕೊಂಡು, ಹೆಂಡತಿ ಮಕ್ಕಳನ್ನು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಚಟಕ್ಕೆ ದಾಸರಾಗಿ, ಮಾದಕ ದ್ರವ್ಯ ಸಿಗದಾದಾಗ ಹಣದ ಅವಶ್ಯಕತೆಗಾಗಿ ಕೊಲೆ, ಸುಳಿಗೆ, ಕಳ್ಳತನ ಮಾಡಲೂ ಹೇಸದ ಮನೋಸ್ಥಿತಿಗೆ ಬಂದು ತಲುಪುತ್ತಾರೆ. ಒಟ್ಟಿನಲ್ಲಿ ಮಾದಕ ದ್ರವ್ಯಗಳಿಗೆ ದಾಸನಾದವನನ್ನು ಚಟ ಬಿಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಭಗೀರಥ ಪ್ರಯತ್ನವೆಂದರೂ ಸುಳ್ಳಲ್ಲ. ಅತೀ ಒತ್ತಡದ ಬದುಕನ್ನು ನಡೆಸುವವರು ತಮ್ಮ ಮನಸ್ಸಿನ ವೇಗವನ್ನು ಕಡಿಮೆ ಮಾಡಿಕೊಂಡು ಪರ್ಯಾಯ ಬದುಕನ್ನು ಕಲ್ಪಿಸಿಕೊಳ್ಳಲು ಮಾದಕ ದ್ರವ್ಯಕ್ಕೆ ದಾಸರಾಗುತ್ತಾರೆ. ಆದರೆ ಅದು ನಶ್ವರವೆಂದು ಗೊತ್ತಾದಾಗ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಮತ್ತಷ್ಟು ಒತ್ತಡಕ್ಕೆ ಒಳಗಾಗಿ ಸಂಪೂರ್ಣವಾಗಿ ವ್ಯಸನಿಗಳಾಗಿ ಬಿಡುತ್ತಾರೆ. ಬದುಕಿನ ವಾಸ್ತವವನ್ನು ಎದುರಿಸಲಾಗದೆ ಮಾದಕದ್ರವ್ಯದ ಸಹಾಯದಿಂದ ಕಲ್ಪನಾ ಲೋಕದಲ್ಲೇ ಮುಳುಗಿದ್ದು ತಮ್ಮ ಸಮಸ್ಯೆಗಳಿಗೆ ಕ್ಷಣಕವಾದ ಪರಿಹಾರ ಪಡೆಯಲು ಹೋಗಿ ಅಮೂಲ್ಯವಾದ ಬದುಕನ್ನು ಬರಡಾಗಿಸುವುದು ಮಾಯಾ ಲೋಕದ ದುರಂತವೇ ಸರಿ.
ಯುವ ಜನತೆ ಮಾದಕ ದ್ರವ್ಯಗಳ ವ್ಯಸನಕ್ಕೆ ಯಾಕಾಗಿ ಬಲಿಯಾಗುತ್ತಾರೆ?
♦ ತಮಗೆ ಆತ್ಮೀಯರಾದ ಸ್ನೇಹಿತರು, ಕುಟುಂಬದ ಹಿರಿಯರು, ಅನುಕರಣೀಯರಾದ ರೋಲ್ ಮಾಡೆಲ್‌ಗಳು ಮಾದಕದ್ರವ್ಯ ಸೇವಿಸಿದಾಗ ಅವರನ್ನು ಅನುಕರಿಸುತ್ತಾರೆ. ಕ್ರಮೇಣ ಅದಕ್ಕೆ ದಾಸರಾಗುತ್ತಾರೆ.
♦ ಮಾದಕ ದ್ರವ್ಯಗಳನ್ನು ಸೇವಿಸಿದಾಗ ಜೀವನದ ಒತ್ತಡ ಕಡಿಮೆಯಾಗುತ್ತದೆ ಎಂಬ ಕುರುಡು ನಂಬಿಕೆಯಿಂದ ಬಳಸುತ್ತಾರೆ. ಅದೇ ಮುಂದೆ ಅಭ್ಯಾಸವಾಗಿ ಸಣ್ಣ ಪುಟ್ಟ ಒತ್ತಡಗಳಿಗೂ ಬಳಸಿ ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಾರೆ.
♦ ಜೀವನದಲ್ಲಿ ಬೇಜಾರು ಕಳೆಯಲು ಮತ್ತು ಜೀವನಕ್ಕೆ ಕಿಕ್ ಸಿಗಬೇಕೆಂದು ಯುವಜನತೆ ಮಾದಕದ್ರವ್ಯಕ್ಕೆ ಜೋತು ಬೀಳುತ್ತಾರೆ. ಕೈಯಲ್ಲಿ ಕಾಸಿದ್ದು, ಮಾಡಲು ಕೆಲಸವಿಲ್ಲದಿದ್ದಾಗ ಜೀವನದ ಏಕತಾನತೆ ಕಳೆಯಲು ತಮ್ಮದೇ ಆದ ಕಲ್ಪನಾ ಪ್ರಪಂಚವೊಂದನ್ನು ಸೃಷ್ಟಿಸಿಕೊಳ್ಳಲು ಮಾದಕ ದ್ರವ್ಯಗಳನ್ನು ಬಳಸಲು ಆರಂಭಿಸುತ್ತಾರೆ. ಕ್ರಮೇಣ ಅದುವೇ ಚಟವಾಗಿ ಮಾರ್ಪಡಾಗುತ್ತದೆ.
♦ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವರು ತಾವು ಇತರರಂತೆ ಅಲ್ಲ, ತಾವು ಇತರರಿಗಿಂತ ಕೀಳು ಎಂಬ ಕೀಳರಿಮೆ ತೊಡೆಯಲು ಮಾದಕ ದ್ರವ್ಯವನ್ನು ಬಳಸುತ್ತಾರೆ. ಆ ಮೂಲಕ ತಾವು ಇತರರಿಗಿಂತ ಮೇಲು ಎಂಬ ಕಲ್ಪನಾ ಲೋಕದಲ್ಲಿ ಮಿಂದೇಳುತ್ತಾರೆ.
♦ ಸಾಮಾನ್ಯವಾಗಿ ಹದಿಹರೆಯದ ಯುವಕ ಯುವತಿಯರು ಮೋಜಿಗಾಗಿ ಮಾದಕ ದ್ರವ್ಯವನ್ನು ಆರಂಭದಲ್ಲಿ ಸೇವಿಸುತ್ತಾರೆ. ಕ್ರಮೇಣ ಮೋಜು ಮಸ್ತಿಯನ್ನು ಮಾದಕ ದ್ರವ್ಯ ಅಪೋಶನ ತೆಗೆದುಕೊಳ್ಳುತ್ತದೆ ಎಂಬುದೇ ಸೋಜಿಗದ ಸಂಗತಿ. ಮಾದಕ ದ್ರವ್ಯಗಳಿಂದ ದೊರಕುವ ಉನ್ಮಾದ ನಿಜ ಜೀವನದಲ್ಲಿ ಸಿಗದಾಗ ಈ ಮತ್ತಿನ ಪರಾಕಾಷ್ಠೆಯ ಹುಡುಕಾಟ ನಿರಂತರವಾಗುತ್ತದೆ. ಈ ಹುಡುಕಾಟದ ಧಾವಂತದಲ್ಲಿ ಮಾದಕ ದ್ರವ್ಯದ ಪ್ರಮಾಣ ಮತ್ತು ಉಪಯೋಗ ಜಾಸ್ತಿಯಾಗಿ ವ್ಯಸನವಾಗಿ ಪರ್ಯಾಯವಾಗುತ್ತದೆ.
♦ ಬಾಲ್ಯ ಜೀವನದಲ್ಲಿ ಅಥವಾ ಹರಿಹರೆಯದಲ್ಲಿ ಉಂಟಾದ ದುರ್ಘಟನೆಯನ್ನು ಮರೆಯಲು ಮಾದಕದ್ರವ್ಯವನ್ನು ಬಳಸುತ್ತಾರೆ. ಬಾಲ್ಯದ ಮತ್ತು ಹದಿಹರೆಯದ ಕಹಿ ಘಟನೆಗಳು ಯೌವನಾವಸ್ಥೆಯಲ್ಲಿ ಬಹಳ ಕಾಡುತ್ತದೆ. ಅಂತಹ ನೆನಪುಗಳನ್ನು ಮರೆಯಲು ಸಾಧ್ಯವಾಗದೆ ಅದನ್ನು ತಪ್ಪಿಸಿಕೊಳ್ಳುವ ಮಾರ್ಗವಾಗಿ ಮಾದಕ ದ್ರವ್ಯಕ್ಕೆ ಶರಣಾಗುತ್ತಾರೆ.
♦ ವೈದ್ಯರು ಕೊಟ್ಟ ಔಷಧಿಯನ್ನು ಕಾಯಿಲೆ ಗುಣವಾದ ಬಳಿಕವೂ ಬಳಸುವ ಖಯಾಲಿ ಹೆಚ್ಚಿನ ರೋಗಿಗಳಿಗೆ ಇದೆ. ಒಂದೆಡೆ ಔಷಧಿ ನಿಲ್ಲಿಸಿದರೆ ಕಾಯಿಲೆ ಮರುಕಳಿಸಿದರೆ ಎಂಬ ಭಯ, ಮತ್ತೊಂದೆಡೆ ಔಷಧಿ ಜಾಸ್ತಿ ಸೇವಿಸಿದಲ್ಲಿ ರೋಗ ಬರುವ ಪ್ರಮೇಯ ಇಲ್ಲ ಎಂಬ ಹುಚ್ಚು ಭ್ರಾಂತಿ. ಈ ಕಾರಣಗಳಿಂದಾಗಿ ಹೆಚ್ಚಿನ ರೋಗಿಗಳು ವೈದ್ಯರು ಕೆಲವು ವಾರಗಳ ಅಥವಾ ತಿಂಗಳುಗಳಿಗೆ ನೀಡಿದ ಔಷಧಿಯನ್ನು ಜೀವನ ಪರ್ಯಂತ ವೈದ್ಯರ ಅನುಮತಿ ಇಲ್ಲದೆ ಸೇವಿಸುವುದು ದುರಂತವೇ ಸರಿ. ನಮ್ಮ ಭಾರತದಂತಹ ರಾಷ್ಟ್ರದಲ್ಲಿ ಎಲ್ಲ ಔಷಧಿಗಳೂ ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಭೆೇಟಿ ಮತ್ತು ಚೀಟಿ ಇಲ್ಲದೆ ಸಿಗುವ ಕಾರಣದಿಂದಾಗಿ ಹೆಚ್ಚಿನ ರೋಗಿಗಳು ಔಷಧಿಗಳ ದಾಸರಾಗಿದ್ದಾರೆ ಎಂದರೂ ತಪ್ಪಲ್ಲ. ಈ ರೀತಿಯ ಮಾತ್ರೆ ತಿನ್ನುವ ಖಯಾಲಿ ಮಾದಕ ದ್ರವ್ಯಗಳ ವ್ಯಸನದಷ್ಟೇ ಅಪಾಯಕಾರಿ ಮತ್ತು ಅನಾರೋಗ್ಯಕರ.
ಮಾದಕ ವಸ್ತು ಚಟಕ್ಕೆ ಬೀಳದಂತೆ ತಡೆಗಟ್ಟುವುದು ಹೇಗೆ?
♦ ಹದಿಹರೆಯದಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.
♦ ಅತಿಯಾದ ಒತ್ತಡ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸಬಾರದು. ನಮ್ಮ ನಿರೀಕ್ಷೆಗಳಿಗೆ ಕಡಿವಾಣ ಹಾಕಿ ಮಕ್ಕಳ ಮೇಲೆ ವಿಪರೀತ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು.
♦ ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅನಗತ್ಯವಾಗಿ ಅವರಿಗೆ ಬೈದು, ಹೊಡೆದು, ಬುದ್ಧಿ ಹೇಳುವುದನ್ನು ಬಿಟ್ಟು, ಆಪ್ತಮಿತ್ರರಂತೆ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಅವರಿಗೆ ಸೂಕ್ತ ಸಾಂತ್ವನ ಕೊಡಬೇಕು. ಇದು ತಂದೆ ತಾಯಿಂದಿರ ಆದ್ಯ ಧರ್ಮ.
♦ ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಗಳನ್ನು ಹೇರಿ, ಒತ್ತಡದ ಸನ್ನಿವೇಶಗಳನ್ನು ಮಾಡಿಕೊಡಬಾರದು. ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗಳ ಅರಿವು ಹೆತ್ತವರಿಗೆ ಇರಬೇಕು. ಅವರ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಗೆ ಮೀರಿದ ಗುರಿಗಳನ್ನು ಸಾಧಿಸುವಂತೆ ಇವರಿಗೆ ಒತ್ತಡ ತಂದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ತಾವು ಸಾಧಿಸಲಾಗದ ಗುರಿಗಳನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂಬ ಹುಂಬತನಕ್ಕೆ ಪ್ರಯತ್ನಿಸಲೇ ಬಾರದು.
♦ ಮಕ್ಕಳನ್ನು ಅತಿಯಾಗಿ ಮುದ್ದುಮಾಡಿ, ಕೈತುಂಬಾ ಹಣ ನೀಡಿ, ಕೇಳಿದ್ದೆಲ್ಲಾ ನೀಡಿದ್ದಲ್ಲಿ ದಾರಿ ತಪ್ಪುವ ಎಲ್ಲಾ ಸಾಧ್ಯತೆ ಇರುತ್ತದೆ. ಮಾಹಿತಿ ತಂತ್ರಜ್ಞಾನ, ಅಂತರ್ಜಾಲದ ದುರ್ಬಳಕೆಯಿಂದ, ಹದಿಹರೆಯದ ಮಕ್ಕಳು ಬಹುಬೇಗ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಈ ದಿಸೆಯಲ್ಲಿ ಹೆತ್ತವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನಮ್ಮ ಮಕ್ಕಳ ಸಾಮರ್ಥ್ಯದ ಅರಿವಿನ ಜೊತೆಗೆ, ಹೆತ್ತವರು ತಮ್ಮ ಸ್ಥಾನಮಾನದ ಬಗ್ಗೆ ಹೆಚ್ಚು ಪ್ರಾಶಸ್ತ್ಯ ಕೊಡದೆ ಮಕ್ಕಳನ್ನು ಮಕ್ಕಳ ರೀತಿಯಲ್ಲಿ ಬೆಳೆಸಿದಲ್ಲಿ ಅವರು ಮುಂದೆ ಸಮಾಜದ ಸತ್ಪ್ರಜೆ ಆಗಬಹುದು.