ಪಟ್ಟಾಭಿಷೇಕಕ್ಕೂ ಮುನ್ನ ಶಿವಾಜಿ ಬರೆದ ಪತ್ರ ಪತ್ತೆ!
ಸದ್ಯ ಸಿಕ್ಕಿರುವ ಪತ್ರವನ್ನು ಶಿವಾಜಿ ಸತಾರದ ಪಾಲಿ ಗ್ರಾಮದ ಮುಖ್ಯಸ್ಥ ನಗೊಗಿ ಪಾಟೀಲ್ ಕಲ್ಬೊರ್ಗೆ ಬರೆದಿದ್ದಾರೆ. 1674ರ ಜೂನ್ 6ರಂದು ರಾಯ್ಗಡದಲ್ಲಿ ನಡೆದ ತಮ್ಮ ಪಟ್ಟಾಭಿಷೇಕಕ್ಕೂ ಐದು ತಿಂಗಳ ಮೊದಲು ಈ ಪತ್ರವನ್ನು ಶಿವಾಜಿ ಬರೆದಿದ್ದಾರೆ.
ಇತಿಹಾಸತಜ್ಞ ಘನಶ್ಯಾಮ ದಹನೆ ಸದ್ಯ ಸತಾರದ ಇತಿಹಾಸದ ಬಗೆಗಿನ ವಿಷಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಸಂಶೋಧನೆಯ ಅಂಗವಾಗಿ ಅವರು ಸತಾರದ ಧುಲೆಯಲ್ಲಿರುವ ಸ್ವಾಮಿ ಸಮರ್ಥ ವಾಗ್ದೇವತ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ಸಂರಕ್ಷಿಸಿಡಲಾಗಿದ್ದ ದಾಖಲೆಗಳನ್ನು ಪರಿಶೀಲಿಸಲು ದಹನೆ ಬಯಸಿದ್ದರು. ಆದರೆ, ಈ ಭೇಟಿಯ ವೇಳೆ ಮರಾಠ ಸಾಮ್ರ್ಯಾಜ್ಯದ ಅಗ್ರಮಾನ್ಯ ರಾಜ ಶಿವಾಜಿ ಭೋಸ್ಲೆ ಬರೆದಿರುವ ಪತ್ರ ತನ್ನ ಕೈಸೇರಬಹುದು ಎಂದು ಅವರು ಯೋಚಿಸಿಯೂ ಇರಲಿಲ್ಲ. ಈ ಕುರಿತು ‘ಮಿರರ್’ ಜೊತೆ ಮಾತನಾಡಿದ ದಹನೆ, ಎಲ್ಲ ದಾಖಲೆಗಳನ್ನು ಸಂರಕ್ಷಿಸಿಡಲಾಗಿದ್ದ ಕೋಣೆಯ ಒಳಗೆ ನನ್ನನ್ನು ಕಳುಹಿಸಲಾಯಿತು. ಆ ಕೋಣೆಯ ತಾಪಮಾನ ಬಹಳ ಹೆಚ್ಚಾಗಿತ್ತು. ಧೂಳಿನಿಂದ ಆ ಕೋಣೆ ತುಂಬಿ ಹೋಗಿತ್ತು. ಸ್ವಲ್ಪ ಸಮಯದವರೆಗೆ ಹಲವು ದಾಖಲೆಗಳನ್ನು ಪರಿಶೀಲಿಸಿದ ನಂತರ ನನಗೆ ಆ ಪತ್ರ ಕಣ್ಣಿಗೆ ಬಿತ್ತು. ಆಗಲೇ ನನಗೆ ಅದು ಸಾಮಾನ್ಯ ಪತ್ರವಲ್ಲ ಎಂಬುದರ ಅರಿವಾಗಿತ್ತು ಎಂದು ತಿಳಿಸುತ್ತಾರೆ.
344 ವರ್ಷಗಳ ಹಿಂದೆ 1674ರ ಫೆಬ್ರವರಿ 2ರಂದು ಶಿವಾಜಿ ಬರೆದ ಪತ್ರವು ಈಗಲೂ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಅದರ ಮೂಲದ ಬಗ್ಗೆ ಯಾರಿಗೂ ಸರಿಯಾಗಿ ತಿಳಿದಿಲ್ಲ. ಮೋಡಿ ಲಿಪಿ (ಮರಾಠಿ ಭಾಷೆಯಲ್ಲಿ ಬರೆಯಲು ಬಳಸುವ ಲಿಪಿ)ಯಲ್ಲಿ ಬರೆದಿರುವ ಪತ್ರಕ್ಕೆ ರಾಜಮುದ್ರೆಯನ್ನು ಒತ್ತಲಾಗಿರುವುದು ಈ ಪತ್ರವನ್ನು ಅಧಿಕೃತಗೊಳಿಸುತ್ತದೆ ಎಂದು ದಹನೆ ತಿಳಿಸುತ್ತಾರೆ. ಇಲ್ಲಿಯ ತನಕ ಶಿವಾಜಿ ಮಹಾರಾಜ್ ಬರೆದಿರುವ ಕೇವಲ 273 ಪತ್ರಗಳು ಮಾತ್ರ ಇತಿಹಾಸತಜ್ಞರ ಕೈಸೇರಿದೆ. ಇವುಗಳ ಪೈಕಿ ಕೇವಲ 103 ಮಾತ್ರ ಉತ್ತಮ ಸ್ಥಿತಿಯಲ್ಲಿವೆ ಎಂದು ಅವರು ಸೇರಿಸುತ್ತಾರೆ. ಸದ್ಯ ಸಿಕ್ಕಿರುವ ಪತ್ರವನ್ನು ಶಿವಾಜಿ ಸತಾರದ ಪಾಲಿ ಗ್ರಾಮದ ಮುಖ್ಯಸ್ಥ ನಗೊಗಿ ಪಾಟೀಲ್ ಕಲ್ಬೊರ್ಗೆ ಬರೆದಿದ್ದಾರೆ. 1674ರ ಜೂನ್ 6ರಂದು ರಾಯ್ಗಡದಲ್ಲಿ ನಡೆದ ತಮ್ಮ ಪಟ್ಟಾಭಿಷೇಕಕ್ಕೂ ಐದು ತಿಂಗಳ ಮೊದಲು ಈ ಪತ್ರವನ್ನು ಶಿವಾಜಿ ಬರೆದಿದ್ದಾರೆ. ಪಾಲಿ ಗ್ರಾಮದ ಇನ್ನೋರ್ವ ಮಂತ್ರಿ ಕರಡೆ ಪಾಟೀಲ್ ವಿರುದ್ಧ ಕಲ್ಬೊರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಶಿವಾಜಿ ಈ ಪತ್ರವನ್ನು ಬರೆದಿದ್ದಾರೆ.
ಸತಾರದಲ್ಲಿ ತನ್ನ ಸ್ಥಾನಮಾನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಲ್ಬೊರ್ ಕರಡೆ ಪಾಟೀಲ್ ವಿರುದ್ಧ ಆರೋಪಿಸಿದ್ದರು. ತನ್ನ ಪತ್ರದಲ್ಲಿ ಶಿವಾಜಿ ಮಹಾರಾಜ್ ಹೀಗೆಂದು ಬರೆಯುತ್ತಾರೆ, ‘‘ನಿಮ್ಮ ಆರೋಪದ ಬಗ್ಗೆ ನಾನು ಪರಿಶೀಲನೆ ನಡೆಸಿದ್ದೇನೆ ಮತ್ತು ನಿಮ್ಮ ಆರೋಪ ನಿಜ ಎಂದು ಸಾಬೀತಾಗಿದೆ. ಕರಡೆ ಪಾಟೀಲ್ಗೆ ಎಚ್ಚರಿಕೆ ನೀಡುತ್ತೇನೆ. ಕಲ್ಬೊರ್ ಈ ವಿಷಯದಲ್ಲಿ ಚಿಂತೆ ಮಾಡಬಾರದು. ಕರಡೆ ಪಾಟೀಲ್ ನಿಮ್ಮ ದಾರಿಯಲ್ಲಿ ಬರದಂತೆ ಸುಬೇದಾರ್ ಅಬ್ಬಾಜಿ ರಾವ್ ನೋಡಿಕೊಳ್ಳುತ್ತಾರೆ’’ ಎಂದು ಶಿವಾಜಿ ಕಲ್ಬೊರೆಗೆ ಭರವಸೆ ನೀಡುತ್ತಾರೆ. ಇಡೀ ಪತ್ರವನ್ನು ನಾನು ನಿಮಿಷದಲ್ಲಿ ಅನುವಾದ ಮಾಡಿದ್ದೇನೆ ಎಂದು ಹೇಳುತ್ತಾರೆ ದಹನೆ.
ಈ ಸಂಶೋಧನೆಯನ್ನು ಇತರ ಇತಿಹಾಸತಜ್ಞರು ಪರಿಶೀಲಿಸಲಿದ್ದು ಶಿವಾಜಿಯ ಇತರ ಪತ್ರಗಳುಳ್ಳ ದಾಖಲೆ ಜೊತೆ ಇಡಲಾಗುವುದು. ಈ ಕುರಿತು ಮಾತನಾಡಿರುವ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಶಿಕ್ಷಕ ಮಂಡಳಿಯ ಸದಸ್ಯರಾಗಿರುವ ಇತಿಹಾಸತಜ್ಞ ಪದ್ಮಾಕರ ಪ್ರಭುನೆ, ಈ ಪತ್ರದಲ್ಲಿ ಬರೆಯಲಾಗಿರುವ ಭಾಷೆ ಖಂಡಿತವಾಗಿಯೂ ಆ ಕಾಲದ್ದಾಗಿದೆ. ಕಾಗದ, ಶಾಯಿ, ವಿಷಯ ಹಾಗೂ ರಾಜಮುದ್ರೆ ಈ ಹಿಂದೆ ಸಿಕ್ಕ ಪತ್ರಗಳ ಜೊತೆ ಹೋಲಿಕೆಯಾದರೆ ಈ ಪತ್ರವೂ ಶಿವಾಜಿ ಮಹಾರಾಜರು ಬರೆದಿರುವುದೇ ಆಗಿದೆ ಎಂಬುದು ಖಚಿತಗೊಳ್ಳುತ್ತದೆ.
ಕೃಪೆ: ಮಿರರ್