ಫಾರ್ಮಾಲಿನ್ ಕುರಿತು ಕೆಲವು ಮಾಹಿತಿಗಳು
ಮೀನುಗಳು ಕೆಡದಂತೆ ಫಾರ್ಮಾಲಿನ್ ಬಳಸಲಾಗುತ್ತದೆ ಎಂಬ ಆಘಾತಕಾರಿ ಸತ್ಯ ಬಯಲಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ಮಾಲಿನ್ ಕುರಿತ ಚರ್ಚೆ ಬಿರುಸಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಾಲಿನ್ ಬಳಕೆಯ ಮೂಲ ಉದ್ದೇಶವೇನು?
ಫಾರ್ಮಾಲಿನನ್ನು ಬಹಳ ಮುಖ್ಯವಾಗಿ ಯಾವುದೇ ಜೀವಿ ಸತ್ತ ಬಳಿಕ ಅದರ ಭೌತಿಕ ರೂಪ ಕೆಡದಂತೆ ಯಥಾಸ್ಥಿತಿ ಕಾಪಾಡಲು ಬಳಸಲಾಗುತ್ತದೆ.
ವೈದ್ಯಕೀಯ ಕಾಲೇಜುಗಳಲ್ಲಿ ‘ಅನಾಟಮಿ’ ಅರ್ಥಾತ್ ಅಂಗವಿಚ್ಛೇದನ ಶಾಸ್ತ್ರ ಎಂಬೊಂದು ಕಲಿಕಾ ವಿಷಯವಿದೆ. ಅದರ ಪ್ರಾಯೋಗಿಕ ಕಲಿಕೆಗಾಗಿ ವಾರೀಸುದಾರರಿಲ್ಲದ ಅಥವಾ ದಾನ ನೀಡಲ್ಪಟ್ಟ ಮೃತ ಮಾನವ ದೇಹಗಳನ್ನು ಬಳಸಲಾಗುತ್ತದೆ. ಹಾಗೆ ಬಳಸಲಾಗುವ ಮಾನವ ದೇಹಗಳು ಕೆಡದಂತೆ ಯಥಾಸ್ಥಿತಿ ಕಾಪಾಡಲು ಫಾರ್ಮಾಲಿನ್‌ನಲ್ಲಿ ಹಾಕಿ ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗುತ್ತದೆ.
ವೈದ್ಯಕೀಯ ವಿಜ್ಞಾನದ ಕಲಿಕೆಯಲ್ಲಿ ‘ಫಾರೆನ್ಸಿಕ್ ಮೆಡಿಸಿನ್’ ಎಂಬ ಇನ್ನೊಂದು ಕಲಿಕಾ ವಿಚಾರವಿದೆ. ಫಾರೆನ್ಸಿಕ್ ಮೆಡಿಸಿನ್ ಎಂದರೆ ಸರಳ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕೆಂದರೆ ಸಾವಿನ ಕಾರಣಗಳನ್ನು ಕಂಡುಹುಡುಕುವ ಅರ್ಥಾತ್ ಮರಣೋತ್ತರ ಪರೀಕ್ಷೆ ಗಳನ್ನು ಮಾಡಲು ಕಲಿಸಲಾಗುವ ವಿಭಾಗ. ವೈದ್ಯಕೀಯ ಕಾಲೇಜುಗಳಲ್ಲಿ ಇವುಗಳ ಅಧ್ಯಯನ ಮಾಡುವಾಗ ಹಾವು ಕಡಿತದಿಂದಾಗುವ ಸಾವುಗಳೂ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಅಧ್ಯಯನ ವ್ಯಾಪ್ತಿಗೊಳಪಡುತ್ತವೆ. ಹಾವು ಕಡಿತಗಳ ಕುರಿತ ಅಧ್ಯಯನಕ್ಕಾಗಿ ಮೃತ ವಿಷಕಾರಿ ಹಾವುಗಳನ್ನು ಮೆಡಿಕಲ್ ಕಾಲೇಜುಗಳ ಫಾರೆನ್ಸಿಕ್ ಲ್ಯಾಬೋರೇಟರಿಗಳಲ್ಲಿ ಅದರ ದೇಹವು ಕೆಡದಂತೆ ಸಂರಕ್ಷಿಸಿಡಲು ಫಾರ್ಮಾಲಿನ್ ತುಂಬಿಸಿದ ಗಾಜಿನ ಪೆಟ್ಟಿಗೆಯಲ್ಲಿಡಲಾಗುತ್ತದೆ.
ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಯಾವುದೇ ವಿಧದ ಗೆಡ್ಡೆಯನ್ನು ಕತ್ತರಿಸಿ ತೆಗೆದಾಗ ಮುಖ್ಯವಾಗಿ ಅವು ಕ್ಯಾನ್ಸರ್ ಖಾಯಿಲೆ ಹೌದೇ ಅಥವಾ ಅಲ್ಲವೇ ಎಂದು ಪರೀಕ್ಷಿಸಲು ಅವುಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಅವಕ್ಕೆ ಬಯೋಪ್ಸಿ ಪರೀಕ್ಷೆ ಎನ್ನಲಾಗುತ್ತದೆ. ಹಾಗೆ ಬಯೋಪ್ಸಿ ಪರೀಕ್ಷೆಗೆಂದು ವಿಚ್ಛೇದಿಸಿ ತೆಗೆಯಲಾಗುವ ಗೆಡ್ಡೆಯ ನಮೂನೆಯನ್ನು ಕೆಡದಂತೆ ಸಂರಕ್ಷಿಸಲು ಫಾರ್ಮಾಲಿನ್‌ನಲ್ಲಿ ಹಾಕಿಡಲಾಗುತ್ತದೆ.
Fumigation ಹಿಂದೆಲ್ಲಾ ಶಸ್ತ್ರ ಚಿಕಿತ್ಸಾ ಕೊಠಡಿಗಳಲ್ಲಿ ಬ್ಯಾಕ್ಟೀರಿಯಾಗಳನ್ನು (ಸೂಕ್ಷ್ಮಾಣು ಜೀವಿಗಳನ್ನು) ಕೊಲ್ಲಲು (ಧೂಮೀಕರಣ) ಮಾಡಲಾಗುತ್ತಿತ್ತು. ಹೀಗೆ ಧೂಮೀಕರಣ ಪ್ರಕ್ರಿಯೆಗೆ ಫಾರ್ಮಾಲಿನ್ ದ್ರಾವಣ ಮತ್ತು ಪೊಟ್ಯಾಸಿಯಮ್ ಪರ್ಮಾಂಗನೇಟ್ ಎಂಬ ರಾಸಾಯನಿಕ ಪದಾರ್ಥವನ್ನು ಮಿಶ್ರ ಮಾಡಿ ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಇಡಲಾಗುತ್ತಿತ್ತು. ಇದರಿಂದ ಉಂಟಾಗುವ ಹೊಗೆಯ ಘಾಟಿಗೆ ಬ್ಯಾಕ್ಟೀರಿಯಾ ಅಥವಾ ಯಾವುದೇ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ.
ಫಾರ್ಮಾಲಿನ್ ಚೇಂಬರ್ ಗಳಿರುವ ಕೊಠಡಿಯೊಳಗೆ ಕಾಲಿಟ್ಟರೆ ಮೊದಲ ಮೂರು ನಿಮಿಷಗಳ ಕಾಲ ಕಣ್ಣುಗಳು ವಿಚಿತ್ರ ರೀತಿಯ ಉರಿಗೊಳಗಾಗುತ್ತವೆ. ನಮ್ಮ ಕಣ್ಣುಗಳು ಅದರ ವಾತಾವರಣಕ್ಕೆ ಒಗ್ಗಿಕೊಂಡ ಬಳಿಕ ಉರಿಕಡಿಮೆಯಾಗುತ್ತದೆ. ಅದು ಹೇಗೆಂದರೆ ಸಂಪೂರ್ಣವಾಗಿ ಕತ್ತಲಾವರಿಸಿದ ಕೊಠಡಿಯೊಳಗೆ ಕಾಲಿಟ್ಟ ಮೂರು ನಿಮಿಷಗಳ ಕಾಲ ನಮ್ಮ ಕಣ್ಣಿಗೆ ಕತ್ತಲು ಕವಿಯುವುದು, ಸ್ವಲ್ಪಹೊತ್ತಿನ ಬಳಿಕ ಹೇಗೆ ನಮ್ಮ ಕಣ್ಣುಗಳು ಕತ್ತಲಿಗೆ ಹೊಂದಿಕೊಳ್ಳುತ್ತವೆಯೋ ಹಾಗೆಯೇ ಫಾರ್ಮಾಲಿನ್ ಚೇಂಬರಿನ ಉರಿಗೆ ಕಣ್ಣುಗಳು ಹೊಂದಿಕೊಳ್ಳಲು ತುಸು ಸಮಯ ಬೇಕಾಗುತ್ತದೆ.
ಫಾರ್ಮಾಲಿನ್ ಅದೆಷ್ಟು ಜೀವಘಾತುಕವೆಂದರೆ ಯಾವುದೇ ಪ್ರಾಣಿಯ ಕಣ್ಣೊಳಗೆ ಕಾನ್ಸಟ್ರೇಟಡ್ ಫಾರ್ಮಾಲಿನ್ ಸುರಿದರೆ ಉರಿ ತಾಳಲಾರದೇ ಆ ಪ್ರಾಣಿ ಸಾಯಬಹುದು.
ಮಾನವ ಕಣ್ಣಿನೊಳಗೆ ಕಾನ್ಸಂಟ್ರೇಟೆಡ್ ಫಾರ್ಮಾಲಿನ್ ಸುರಿದರೆ ದೃಷ್ಟಿ ಕಳೆದುಕೊಳ್ಳಬಹುದು.
ಜೀವಂತ ಮಾನವನ ಚರ್ಮದ ಹೊರಮೈಗೆ ಫಾರ್ಮಾಲಿನ್ ತಾಗಿದರೆ ಏನೂ ಆಗುವುದಿಲ್ಲ. ಆದರೆ ಮಾನವನ ಚರ್ಮದೊಳಕ್ಕೆ ಫಾರ್ಮಾಲಿನ್ ಇಂಜೆಕ್ಟ್ ಮಾಡಿದರೆ ಇಂಕ್ಟ್ ಮಾಡಲಾದ ಭಾಗದ ಮಾಂಸವು ಗಡುಸಾಗುತ್ತದೆ. ಅಲ್ಲಿನ ಬ್ಲಡ್ ವೆಸಲ್ಸ್ ಪೆಡಸಾಗಬಹುದು.
ಇಲ್ಲಿ ಈಗಾಗಲೇ ಬರೆದಂತೆ ಬಯೋಪ್ಸಿ ಪರೀಕ್ಷೆ ಗೆ ಬಳಸುವ ಛೇದಿಸಲ್ಪಟ್ಟ ಗೆಡ್ಡೆಯನ್ನು ಸಂರಕ್ಷಿಸಿಡಲು ಫಾರ್ಮಾಲಿನ್ ಬಳಸಲಾಗುತ್ತದೆ. ಆದರೆ ಅದೇ ಗೆಡ್ಡೆಯೊಳಗೆ ಫಾರ್ಮಾಲಿನ್ ಇಂಜೆಕ್ಟ್ ಮಾಡಿದರೆ ಆ ಗೆಡ್ಡೆ ಗಡುಸಾಗುತ್ತದೆ.
ಇಂತಹ ಫಾರ್ಮಾಲಿನನ್ನು ಮನುಷ್ಯನ ಆಹಾರವಾದ ಮೀನನ್ನು ಕೆಡದಂತೆ ಸಂರಕ್ಷಿಸಲು ಬಳಸಿದರೆ ಅದು ಹೇಗೆ ಜೀವಘಾತುಕವಾಗಬಹುದು ಎಂದು ಊಹಿಸಿ.ಮುಖ್ಯವಾಗಿ ನಮ್ಮ ಶರೀರದೊಳಗಿನ ಕರುಳುಗಳು ಮತ್ತು ಜೀರ್ಣಾಂಗಕ್ಕೆ ಅದು ಮಾರಣಾಂತಿಕ ಹಾನಿ ಮಾಡುವುದರಲ್ಲಿ ಸಂಶಯವಿಲ್ಲ. ಆದುದರಿಂದ ಸಂಪತ್ತು ಕ್ರೋಡೀಕರಿಸಲು ಮಾನವ ಶರೀರ ಸಂಪತ್ತನ್ನೇ ಇಲ್ಲವಾಗಿಸ ಹೊರಟವರ ಹುನ್ನಾರವನ್ನು ಸಂಪೂರ್ಣವಾಗಿ ಬಯಲಿಗೆಳೆದು ಅವರಿಗೆ ಕಠಿಣ ಶಿಕ್ಷೆ ವಿಧಿಸಲೇಬೇಕು ಮತ್ತು ಇನ್ನೆಂದೂ ಇಂತಹ ಸಮೂಹ ಕೊಲೆಗಡುಕ ಪ್ರಯತ್ನಕ್ಕೆ ಯಾರೂ ಕೈಹಾಕದಂತೆ ನೋಡಿಕೊಳ್ಳುವುದು ಪ್ರಭುತ್ವದ ಜವಾಬ್ದಾರಿಯಾಗಿದೆ. ಫಾರ್ಮಾಲಿನ್ ಇರಲಿ ಮತ್ತಿತರ ಯಾವುದೇ ರಸಾಯನಿಕ ವಸ್ತುಗಳು, ದ್ರಾವಣಗಳು ಹೀಗೆ ಎಲ್ಲೆಂದರಲ್ಲಿ ಬೇಕು ಬೇಕೆಂದಾಗೆಲ್ಲಾ ಬೇಕು ಬೇಕೆಂದವರ ಕೈಗೆ ಸಿಗದಂತೆ ಮಾಡಲು ಕ್ರಮ ಜರುಗಿಸಬೇಕು.