ದಾಖಲಾತಿಯಲ್ಲಿ ದಾಖಲೆ ಬರೆದ ವಿಟ್ಲ ಸರಕಾರಿ ಶಾಲೆ
►1ನೇ ತರಗತಿಗೆ 124 ಮಕ್ಕಳ ಸೇರ್ಪಡೆ! ►1ರಿಂದ 8ನೇ ತರಗತಿವರೆಗೆ 246 ಹೊಸ ವಿದ್ಯಾರ್ಥಿಗಳು► 139 ವರ್ಷ ಹಳೆಯ ಶಾಲೆ
► ಪೂರ್ವ ಪ್ರಾಥಮಿಕ ತರಗತಿಯಲ್ಲಿ 205 ಪುಟಾಣಿಗಳು
► ಒಟ್ಟು 953 ವಿದ್ಯಾರ್ಥಿಗಳು ವಿದ್ಯಾರ್ಜನೆ
ಬಂಟ್ವಾಳ, ಜೂ. 27: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಗೆ 124 ಮಕ್ಕಳು, 2ರಿಂದ 8ನೇ ತರಗತಿವರೆಗೆ 122 ಮಕ್ಕಳು ದಾಖಲಾತಿ ಪಡೆಯುವ ಮೂಲಕ ವಿಟ್ಲ ಸರಕಾರಿ ಶಾಲೆ ವಿಶೇಷ ದಾಖಲೆ ಮಾಡಿದೆ. 139 ವರ್ಷ ಹಳೆಯದಾದ ವಿಟ್ಲ ಸರಕಾರಿ ಶಾಲೆಯ 1ನೇ ತರಗತಿಗೆ ಪ್ರಸಕ್ತ ವರ್ಷ 124 ಮಕ್ಕಳು ಸೇರ್ಪಡೆಗೊಂಡರೆ 2ನೇ ತರಗತಿಗೆ 10, 3ನೇ ತರಗತಿಗೆ 12, 4ನೇ ತರಗತಿಗೆ 5, 5ನೇ ತರಗತಿಗೆ 17, 6ನೇ ತರಗತಿಗೆ 49, 7ನೇ ತರಗತಿಗೆ 13, 8ನೇ ತರಗತಿಗೆ 16 ಮಕ್ಕಳ ದಾಖಲಾತಿ ಪಡೆದಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 246 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಲಾಗಿದ್ದು ಸ್ಪೋಕನ್ ಇಂಗ್ಲಿಷ್ ತರಗತಿಗಳೂ ಇವೆ. ಎಲ್ಕೆಜಿ, ಯುಕೆಜಿ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪೂರ್ವ ಪ್ರಾಥಮಿಕ ತರಗತಿಗೆ 205 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಎಲ್ಕೆಜಿಗೆ 101, ಯುಕೆಜಿಗೆ 104 ಮಕ್ಕಳು ಸೇರ್ಪಡೆಯಾಗಿದ್ದಾರೆ. 2017-18ನೇ ಸಾಲಿನಲ್ಲಿ ಶಾಲೆಯಲ್ಲಿ ಒಟ್ಟು 555 ವಿದ್ಯಾರ್ಥಿಗಳಿದ್ದರು. 2018-19ನೇ ಸಾಲಿನಲ್ಲಿ ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕ, 1ರಿಂದ 8 ಹಾಗೂ 9ನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುತ್ತಿರುವ 21 ವಿದ್ಯಾರ್ಥಿಗಳು ಸೇರಿ ಒಟ್ಟು 953 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
ರೈ, ಪೈ ಸ್ಫೂರ್ತಿ
ವಿಟ್ಲ ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸುಬ್ರಾಯ ಪೈ ಭಾರತಿ ಜನಾರ್ದನ ಸೇವಾ ಟ್ರಸ್ಟ್ ಮೂಲಕ ಶಾಲೆಯನ್ನು ದತ್ತು ಸ್ವೀಕರಿಸಿದ್ದರು. ಗೌರವ ಶಿಕ್ಷಕರನ್ನು ನೇಮಿಸುವ ಮೂಲಕ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲಾರಂಂಭಿಸಿ ರಿಯಾಯಿತಿ ದರದಲ್ಲಿ ಬಸ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ.
ಇನ್ನೋರ್ವ ಈ ಶಾಲೆಯ ಹಳೆ ವಿದ್ಯಾರ್ಥಿ, ಸುಪ್ರಜಿತ್ ಇಂಡಸ್ಟ್ರೀಸ್ ಮಾಲಕ ಅಜಿತ್ ಕುಮಾರ್ ರೈ ಸುಪ್ರಜಿತ್ ಫೌಂಡೇಶನ್ ಮೂಲಕ ಈ ಶಾಲೆಗೆ ಅವರ ತಂದೆ ಡಾ. ಮಂಜುನಾಥ ರೈ ಮತ್ತು ತಾಯಿ ಹೇಮಾವತಿ ರೈ ಅವರ ನೆನಪಿಗಾಗಿ 1.25 ಕೋಟಿ ರೂ. ವೆಚ್ಚದಲ್ಲಿ ಮೂರು ಮಹಡಿಯ ಡಾ. ಮಂಜುನಾಥ ರೈ ವಿದ್ಯಾ ಸೌಧವನ್ನು ನಿರ್ಮಿಸಿಕೊಟ್ಟಿದ್ದಾರೆ.
ಅಲ್ಲದೆ ಅಜಿತ್ ಕುಮಾರ್ ರೈ ಅವರ ಇಂಗ್ಲೆಂಡ್ನ ಗೆಳೆಯರೊಬ್ಬರು ಬೆಂಚ್ ಡೆಸ್ಕ್ ಕೊಡುಗೆ ನೀಡಿದ್ದಾರೆ. ನಿವೃತ್ತ ಪ್ರಾಂಶುಪಾಲ ಎಂ.ಅನಂತಕೃಷ್ಣ ಹೆಬ್ಬಾರ್, ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಉಪಾಹಾರ, ಆರ್ಕೆ ಆರ್ಟ್ಸ್ ನಿರ್ದೇಶಕ ರಾಜೇಶ್ ವಿಟ್ಲ ಅವರಿಂದ ನಾಟ್ಯ ತರಬೇತಿ, ರಂಗ ತರಬೇತಿ ಮತ್ತು ಎಸ್ಡಿಎಂಸಿ ಸಮಿತಿ ಸಹಕಾರವೂ ಇದೆ.
ಮುಖ್ಯಶಿಕ್ಷಕರೇ ಇಲ್ಲ!
ಖಾಸಗಿ ಶಾಲೆಗಳಲ್ಲಿ ವಿಶೇಷ ಸವಲತ್ತುಗಳಿದ್ದರೂ, ವಿಟ್ಲ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರೇ ಇಲ್ಲ. ಪ್ರಭಾರ ಮುಖ್ಯೋಪಾಧ್ಯಾಯರಾಗಿ ಬಿ.ವಿಶ್ವನಾಥ ಗೌಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಕಾರವು 15 ಶಿಕ್ಷಕರನ್ನು ನಿಯೋಜನೆ ಮಾಡಿದೆ. ಪ್ರಸಕ್ತ ವರ್ಷ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಇನ್ನೂ 5 ಶಿಕ್ಷಕರ ಆವಶ್ಯಕತೆಯಿದೆ. 11 ಗೌರವ ಶಿಕ್ಷಕರೂ ಇದ್ದಾರೆ. ಅಲ್ಲದೆ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ನಾಲ್ವರು ಹೆಚ್ಚುವರಿ ಶಿಕ್ಷಕರು ಹಾಗೂ ಐವರು ಸಹಾಯಕರನ್ನು ನೇಮಿಸಲಾಗಿದೆ. ಎರಡು ಹೊಸ ಕೊಠಡಿಗಳ ನಿರ್ಮಾಣ
ಸರಕಾರದ 18 ಲಕ್ಷ ರೂ. ಅನುದಾನದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಳೆಯ ಕಟ್ಟಡದ ದುರಸ್ತಿ, ಟೈಲ್ಸ್ ಅಳವಡಿಕೆ ಹಾಗೂ ಸುಣ್ಣ ಬಣ್ಣಕ್ಕಾಗಿ 8 ಲಕ್ಷ ರೂ. ಅನುದಾನ ಒದಗಿಸಿದೆ. ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡ, ಹಳೆಯ ಕಟ್ಟಡವನ್ನು ನವೀಕರಿಸಲಾಗಿದೆ. ನೆಲಕ್ಕೆ ಟೈಲ್ಸ್ ಹಾಸಿ ಅಂದಗೊಳಿಸಲಾಗಿದೆ.
ಶಾಲೆಯ ವಿಶೇಷ ಸಾಧನೆಯ ಗುಟ್ಟೇನು?
1ರಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮ, 6ರಿಂದ 8ನೇ ತರಗತಿವರೆಗೆ ಆಂಗ್ಲ ಮಾಧ್ಯಮ, ಪ್ರಸಕ್ತ ಸಾಲಿನಲ್ಲಿ 9ನೇ ತರಗತಿಯೂ ಆಂಗ್ಲ ಮಾಧ್ಯಮದಲ್ಲಿ ಆರಂಭಗೊಂಡಿದೆ. ಎಲ್ಕೆಜಿ, ಯುಕೆಜಿ ಮಾದರಿಯಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ, ಬೆಳಗ್ಗಿನ ಉಪಾಹಾರ, ಉಚಿತ ಪಠ್ಯ ಪುಸ್ತಕ, 2 ಜೊತೆ ಸಮವಸ್ತ್ರ, ಶೂ- ಸಾಕ್ಸ್, ಕಂಪ್ಯೂಟರ್ ಲ್ಯಾಬ್ ಶಿಕ್ಷಣ, ಪ್ರತೀ ತರಗತಿಯಲ್ಲಿ ಸೌಂಡ್ ಸಿಸ್ಟಮ್, ಸುಸಜ್ಜಿತ ಬ್ಯಾಂಡ್ಸೆಟ್, ವಿಶೇಷ ಕ್ರೀಡಾ ತರಬೇತಿ, ಸ್ಪೋಕನ್ ಇಂಗ್ಲಿಷ್, ಚಿತ್ರಕಲೆ, ಕ್ರಾಫ್ಟ್, ನೃತ್ಯ ತರಬೇತಿ, ಕರಾಟೆ, ವೌಲ್ಯ ಶಿಕ್ಷಣ, ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್, ಸುಸಜ್ಜಿತ ಪ್ರಯೋಗಾಲಯ, ವಾಚನಾಲಯ, ಸುಸಜ್ಜಿತ ರಂಗ ಮಂದಿರ, ಸುಂದರ ಸಭಾಂಗಣ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸ್ಕೌಟ್ಸ್- ಗೈಡ್ಸ್, ಸೇವಾದಳ, ನಾಟಕ ತರಬೇತಿ, ಜೀವದರ್ಶನ ಕಾರ್ಯಕ್ರಮದಡಿಯಲ್ಲಿ ಕೆಸರ್ಡೊಂಜಿ ದಿನ, ಆಶ್ರಮ ಭೇಟಿ, ಆಟಿಡೊಂಜಿ ಕೂಟ, ಔಷಧ ಗಿಡಗಳ ಪರಿಚಯ, ಬೇಸಿಗೆ ಶಿಬಿರ ಮೊದಲಾದ ಸೌಲಭ್ಯಗಳು ಈ ಶಾಲೆಯಲ್ಲಿವೆ.
ಈ ಶಾಲೆ 1879ರಲ್ಲಿ ಆರಂಭವಾಗಿದೆ. ಶತಮಾನ ಮತ್ತು ಶತಮಾನೋತ್ತರ ಬೆಳ್ಳಿಹಬ್ಬ ಆಚರಿಸಿದೆ. ಈ ಶಾಲೆಯ ಮಕ್ಕಳಿಗಾಗಿ ಪ್ರತಿ ವರ್ಷ ಬಾಲ ಬಂಧು ಎಂಬ ಹಸ್ತಪತ್ರಿಕೆ ಹೊರತರಲಾಗುತ್ತಿದೆ. ಕಳೆದ ಸಾಲಿನಲ್ಲಿ ಮಕ್ಕಳ ಕವನ ಸಂಕಲನ 'ಬೆಳದಿಂಗಳು' ಬಿಡುಗಡೆಗೊಂಡಿದೆ. ಶಾಲೆಯ ಈ ಸಾಧನೆಗೆ ಭಾರತಿ ಜನಾರ್ದನ ಸೇವಾ ಟ್ರಸ್ಟಿನ ಸುಬ್ರಾಯ ಪೈ, ಸುಪ್ರಜಿತ್ ಇಂಡಸ್ಟ್ರೀಸ್ನ ಅಜಿತ್ ಕುಮಾರ್ ರೈ ಮತ್ತು ಶಿಕ್ಷಣ ಇಲಾಖೆ ಈ ಶಾಲೆಗೆ ಸ್ಫೂರ್ತಿ ನೀಡಿದೆ. ಜತೆಗೆ ಇಲ್ಲಿನ ಶಿಕ್ಷಕರು ಒಗ್ಗಟ್ಟಿನಿಂದ ಒಂದೇ ತಂಡವಾಗಿ ಶ್ರಮಿಸುತ್ತಿದ್ದು, ಸ್ಥಳೀಯರ ಸಹಕಾರವೂ ಇದೆ.
ಬಿ.ವಿಶ್ವನಾಥ ಗೌಡ, ಪ್ರಭಾರ ಮುಖ್ಯೋಪಾಧ್ಯಾಯ