ತುರ್ತು ಪರಿಸ್ಥಿತಿ ಮತ್ತು ಆರೆಸ್ಸೆಸ್‌ನ ಮೋಸದಾಟ
ಭಾಗ-1
1975ರ ಜೂನ್ 25-26ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ಒಂದು ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿದರು. ಅದು 19 ತಿಂಗಳ ಕಾಲ ಇತ್ತು. ಭಾರತದ ಪ್ರಜಾಪ್ರಭುತ್ವ ದಲ್ಲಿ ಆ ಅವಧಿಯನ್ನು ಕರಾಳ ಅವಧಿ ಎಂದು ಪರಿಗಣಿಸಲಾಗಿದೆ. ಕಾಂಗ್ರೆಸ್ ಸರಕಾರದ ಕಾನೂನು ವಿರೋಧಿ ಅಕ್ರಮ ಆಜ್ಞೆಗಳನ್ನು ಪಾಲಿಸಕೂಡದೆಂದು ಜಯಪ್ರಕಾಶ್ ನಾರಾಯಣ್ ದೇಶದ ಸಶಕ್ತ ಪಡೆಗಳಿಗೆ ಕರೆ ನೀಡಿದ್ದರು; ಇದರಿಂದಾಗಿ ದೇಶದಲ್ಲಿ ಅರಾಜಕತೆಯ ಒಂದು ಸ್ಥಿತಿ ಏರ್ಪಟ್ಟಿತ್ತು ಮತ್ತು ಭಾರತದ ಗಣರಾಜ್ಯಕ್ಕೆ ಅಪಾಯ ಉಂಟಾಗಿತ್ತು; ಆದ್ದರಿಂದ ಸಂವಿಧಾನದ 352ನೇ ಅಧಿನಿಯಮದ ಪ್ರಕಾರ ತುರ್ತುಪರಿಸ್ಥಿತಿಯನ್ನು ಘೋಷಿಸುವುದರ ಹೊರತಾಗಿ ಬೇರೇನೂ ಮಾಡಲು ಸಾಧ್ಯವಿರಲಿಲ್ಲ ಎಂದು ಇಂದಿರಾಗಾಂಧಿ ವಾದಿಸಿದ್ದರು.
ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ತಾನು ವೀರಾವೇಶದಿಂದ ವಿರೋಧಿಸಿದೆ ಮತ್ತು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರಿಂದಾಗಿ ತಾನು ಅಪಾರವಾದ ಸಂಕಷ್ಟಕ್ಕೊಳಗಾಗಬೇಕಾಯಿತು ಎಂದು ಆರೆಸ್ಸೆಸ್ ವಾದಿಸುತ್ತದೆ. ಆದರೆ ಆರೆಸ್ಸೆಸ್‌ನ ಈ ವಾದವನ್ನು ಅಂದಿನ ಹಲವಾರು ದಾಖಲೆಗಳು, ಕಥಾನಕಗಳು ಅಲ್ಲಗಳೆಯುತ್ತವೆ. ಇಲ್ಲಿ ಅಂತಹ ಎರಡು ಕಥಾನಕಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಭಾರತದ ಖ್ಯಾತ ಚಿಂತಕ ಮತ್ತು ಪತ್ರಕರ್ತ ಪ್ರಭಾಷ್ ಜೋಶಿ ಮತ್ತು ತುರ್ತು ಪರಿಸ್ಥಿತಿ ಹೇರಿದಾಗ ಕೇಂದ್ರ ಗುಪ್ತಚರ ತನಿಖಾದಳದ (ಇಂಟಲಿಜೆನ್ಸ್ ಬ್ಯೂರೋ) ಉಪನಿರ್ದೇಶಕರಾಗಿದ್ದ ಮಾಜಿ ಸಿಬಿಐ ಮುಖ್ಯಸ್ಥ ಟಿ.ವಿ. ರಾಜೇಶ್ವರ್‌ರವರ ಕಥಾನಕಗಳು. ಇಂದಿರಾ ಗಾಂಧಿಯವರ ದಮನಕಾರಿ ಕ್ರಮಗಳಿಗೆ ಆರೆಸ್ಸೆಸ್ ಶರಣಾಗಿ, ತುರ್ತು ಪರಿಸ್ಥಿತಿ ಹೇರಿದ್ದ ಸರಕಾರ ಪ್ರಕಟಿಸಿದ್ದ 20 ಅಂಶಗಳ ಕರಾಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಇಂದಿರಾ ಗಾಂಧಿ ಹಾಗೂ ಅವರ ಪುತ್ರ ಸಂಜಯ ಗಾಂಧಿಗೆ ಹೇಳಿದ್ದ, ಈ ಕಾರ್ಯಕ್ರಮಕ್ಕೆ ತನ್ನ ಸಂಪೂರ್ಣ ಸಹಕಾರವಿದೆ ಎಂದು ಆಶ್ವಾಸನೆ ನೀಡಿದ್ದ ಆ ದಿನಗಳನ್ನು ಈ ಇಬ್ಬರು ಮಹನೀಯರು ತಮ್ಮ ನೆನಪುಗಳಲ್ಲಿ ದಾಖಲಿಸಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರಲ್ಲಿ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಮಾಫಿನಾಮ(ದಯಾ ಅರ್ಜಿ)ಗಳನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಜೈಲುಗಳಿಂದ ಹೊರಬಂದಿದ್ದರು.
ಈ ವಿಶ್ವಾಸಘಾತುಕತನದ ಹೊರತಾಗಿಯೂ ಸಾವಿರಾರು ಮಂದಿ ಆರೆಸ್ಸೆಸ್ ಕಾರ್ಯಕರ್ತರು ತುರ್ತು ಪರಿಸ್ಥಿತಿಯ ವೇಳೆ ಒಳಗಾದ ಕಿರುಕುಳಕ್ಕಾಗಿ, ತೊಂದರೆಗಾಗಿ ಇಂದಿಗೂ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ತುರ್ತು ಪರಿಸ್ಥಿತಿಯ ವೇಳೆ ಒಂದು ತಿಂಗಳಿಗಿಂತ ಹೆಚ್ಚುಕಾಲ ಜೈಲುಶಿಕ್ಷೆಗೊಳಗಾಗಿದ್ದವರಿಗೆ ಮಾಸಿಕ ರೂ. 10,000 ಮತ್ತು ಒಂದು ತಿಂಗಳಿಗಿಂತ ಕಡಿಮೆ ಸಮಯ ಜೈಲು ಶಿಕ್ಷೆ ಅನುಭವಿಸಿದವರಿಗೆ ರೂ. 5,000 ಮಾಸಿಕ ಪಿಂಚಣಿ ನೀಡಲು ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಂತಹ ಬಿಜೆಪಿ ಆಡಳಿತದ ರಾಜ್ಯಗಳು ನಿರ್ಧರಿಸಿದವು. ಕೇವಲ ಒಂದು ಅಥವಾ ಎರಡು ತಿಂಗಳ ಅವಧಿಯನ್ನು ಜೈಲಿನಲ್ಲಿ ಕಳೆದು ಕ್ಷಮಾ ಅರ್ಜಿ ಸಲ್ಲಿಸಿ ಹೊರಬಂದಿರಬಹುದಾದ ಆರೆಸ್ಸೆಸ್ ಕಾರ್ಯಕರ್ತರ ಹಣಕಾಸು ಹಿತಾಸಕ್ತಿಗಳನ್ನು ಆ ರಾಜ್ಯಗಳ ನಿರ್ಧಾರ ಕಾಪಾಡಿತು. ಇಷ್ಟೊಂದು ಮೊತ್ತದ ಪಿಂಚಣಿ ಪಡೆಯಲು ಫಲಾನುಭವಿಯು ತುರ್ತು ಪರಿಸ್ಥಿತಿಯ ಸಂಫೂರ್ಣ ಅವಧಿಯಲ್ಲಿ ಜೈಲಿನಲ್ಲಿದ್ದಿರಬೇಕು ಎಂಬ ಶರತ್ತು ಇರಲಿಲ್ಲ. ಕುತೂಹಲದ ವಿಷಯವೇನೆಂದರೆ ಬ್ರಿಟಿಷ್-ವಿರೋಧಿ ಸ್ವಾತಂತ್ರ ಹೋರಾಟದ ಅವಧಿಯಲ್ಲಿ ಜೈಲಿನಲ್ಲಿದ್ದ ಸ್ವಾತಂತ್ರ ಹೋರಾಟಗಾರರಿಗೆ ನೀಡುವ ಪಿಂಚಣಿಯನ್ನು ಪಡೆದ ಒಬ್ಬನೇ ಒಬ್ಬ ಆರೆಸ್ಸೆಸ್ ಕಾರ್ಯಕರ್ತನಿಲ್ಲ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಕ್ಸಲರು ಎಂದು ಹಣೆಪಟ್ಟಿ ಅಂಟಿಸಿ ಸುಳ್ಳು ಎನ್‌ಕೌಂಟರ್‌ಗಳಲ್ಲಿ ಹತ್ಯೆಗೈಯಲ್ಪಟ್ಟ ನೂರಾರು ಕಮ್ಯುನಿಸ್ಟ್ ಯುವಕರನ್ನು ಇಂದು ಯಾರೂ ಜ್ಞಾಪಿಸಿಕೊಳ್ಳುತ್ತಿಲ್ಲ ಎಂಬುದನ್ನು ಗಮನಿಸಬಹುದಾಗಿದೆ. ಇನ್ನೊಂದು ಕುತೂಹಲದ ಸಂಗತಿಯೆಂದರೆ, ಆರೆಸ್ಸೆಸ್‌ನ ಹಿಂದುತ್ವ ಸಿದ್ಧಾಂತದ ಸಹ ಪ್ರಯಾಣಿಕನಾದ ಶಿವಸೇನೆ ರಾಜಾರೋಷವಾಗಿಯೇ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು.
ಪ್ರಭಾಷ್ ಜೋಶಿಯವರು ತುರ್ತು ಪರಿಸ್ಥಿತಿಯ ಬಗ್ಗೆ ಬರೆದ ಲೇಖನವು ತುರ್ತು ಪರಿಸ್ಥಿತಿಯ 25ನೆಯ ವರ್ಷಾಚರಣೆಯ ಸಂದರ್ಭದಲ್ಲಿ ಇಂಗ್ಲಿಷ್ ವಾರಪತ್ರಿಕೆ ‘ತೆಹಲ್ಕಾ’ದಲ್ಲಿ ಪ್ರಕಟವಾಗಿತ್ತು. ಅವರ ಪ್ರಕಾರ ತುರ್ತು ಪರಿಸ್ಥಿತಿಯ ಅವಧಿಯಲ್ಲಿಯೇ ಆರೆಸ್ಸೆಸ್ ಬಗ್ಗೆ ‘‘ಯಾವಾಗಲೂ ಒಂದು ರೀತಿಯ ಅನುಮಾನ, ವಿಶ್ವಾಸದ ಬಗ್ಗೆ ಯಾರ ಗಮನಕ್ಕೂ ಬರದ ಒಂದು ಕೊರತೆ’’ ಇದ್ದೇ ಇತ್ತು. ಆರೆಸ್ಸೆಸ್ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ವನ್ನು ಸೇರಿಕೊಂಡ ಬಗ್ಗೆ ಜೋಶಿಯವರು ಮುಂದುವರಿಸಿ ಹೇಳುತ್ತಾರೆ. ‘‘ಸಂಜಯ್ ಗಾಂಧಿಯವರ ಕುಖ್ಯಾತ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ತಾನು ಸಂಪೂರ್ಣ ನೆರವು ನೀಡುವುದಾಗಿ ಅಂದಿನ ಆರೆಸ್ಸೆಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಇಂದಿರಾಗಾಂಧಿಯವರಿಗೆ ಒಂದು ಪತ್ರ ಬರೆದರು. ಇದು ಆರೆಸ್ಸೆಸ್‌ನ ನಿಜವಾದ ಬಣ್ಣ. ನಿಜವಾದ ನಡವಳಿಕೆ. ಅದರ ಕಾರ್ಯ ವಿಧಾನದಲ್ಲಿ ಒಂದು ಕ್ರಮ, ಒಂದು ಮಾದರಿ ಇರುವುದನ್ನು ನೀವು ಕಾಣಬಹುದು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕೂಡ, ಜೈಲುಗಳಿಂದ ಹೊರ ಬಂದ ಆರೆಸ್ಸೆಸ್ ಮತ್ತು ಜನ ಸಂಘದ ಕಾರ್ಯಕರ್ತರಲ್ಲಿ ಹಲವರು ಕ್ಷಮಾಪಣಾ ಪತ್ರಗಳನ್ನು ಕೊಟ್ಟು ಹೊರ ಬಂದಿದ್ದರು. ಕ್ಷಮೆಯಾಚಿಸಿದವರಲ್ಲಿ ಅವರು ಮೊದಲಿಗರು. ಅವರ ನಾಯಕರು ಮಾತ್ರ ಜೈಲಿನಲ್ಲಿ ಉಳಿದರು. ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ ಅಷ್ಟೇ ಅಲ್ಲ ಅರುಣ್ ಜೇಟ್ಲಿ ಕೂಡ. ಆರೆಸ್ಸೆಸ್ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಲಿಲ್ಲ. ಆದ್ದರಿಂದ ಬಿಜೆಪಿ ಯಾಕಾಗಿ ಆ ನೆನಪನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ?
ಪ್ರಭಾಷ್ ಜೋಶಿಯವರ ಉಪಸಂಹಾರ ಹೀಗಿದೆ:
‘‘ಅವರು (ಆರೆಸ್ಸೆಸ್) ಹೋರಾಟ ನಡೆಸುವ ಒಂದು ಪಡೆಯಲ್ಲ ಮತ್ತು ಎಂದೂ ಹೋರಾಡಬೇಕೆಂದು ತುಂಬಾ ಬಯಸುವವರೂ ಅಲ್ಲ. ಮೂಲತಃ ಅವರು ರಾಜಿ ಮಾಡಿಕೊಳ್ಳುವ ಜನ. ಅವರು ಎಂದೂ ಕೂಡ ನಿಜವಾಗಿಯೂ ಸರಕಾರದ ವಿರುದ್ಧ ನಿಲ್ಲುವ ಜನರಲ್ಲ.’’
ತನ್ನ ಸೇವಾ ನಿವೃತ್ತಿಯ ಬಳಿಕ ಉತ್ತರಪ್ರದೇಶ ಮತ್ತು ಸಿಕ್ಕಿಂನ ರಾಜ್ಯಪಾಲರಾಗಿದ್ದ ಟಿ.ವಿ.ರಾಜೇಶ್ವರ್ ಬರೆದಿರುವ ‘ಇಂಡಿಯಾ ದಿ ಕ್ರೊಶಿಯಲ್ ಇಯರ್ಸ್’ ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ. ‘‘ಅವರು (ಆರೆಸ್ಸೆಸ್) ಇದನ್ನು (ತುರ್ತು ಪರಿಸ್ಥಿತಿಯನ್ನು) ಬೆಂಬಲಿಸಿದ್ದಷ್ಟೇ ಅಲ್ಲ. ಶ್ರೀಮತಿ ಗಾಂಧಿಯವರೊಂದಿಗಲ್ಲದೆ, ಸಂಜಯ್ ಗಾಂಧಿಯವರ ಜತೆ ಕೂಡ, ಅವರು ಸಂಪರ್ಕ ಸ್ಥಾಪಿಸಲು ಬಯಸಿದ್ದರು.’’
ಅಲ್ಲದೆ ದೇವರಸ್‌ರವರು ‘‘ತನ್ನ ಪಾಡಿಗೆ ಯಾರಿಗೂ ತಿಳಿಯದಂತೆ ಪ್ರಧಾನಿಯವರ ನಿವಾಸದೊಂದಿಗೆ ಒಂದು ಸಂಪರ್ಕ ಸ್ಥಾಪಿಸಿಕೊಂಡು ದೇಶದಲ್ಲಿ ವ್ಯವಸ್ಥೆ ಮತ್ತು ಶಿಸ್ತನ್ನು ಬಲವಂತವಾಗಿ ರೂಢಿಸಲು (ಇಂದಿರಾ ಗಾಂಧಿ) ತೆಗೆದುಕೊಂಡ ಹಲವು ಕ್ರಮಗಳಿಗೆ ತನ್ನ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದರು. ದೇವರಸ್ ಇಂದಿರಾಗಾಂಧಿ ಮತ್ತು ಸಂಜಯ್‌ರನ್ನು ಭೆೇಟಿಯಾಗಲು ತುಂಬ ಉತ್ಸುಹಕರಾಗಿದ್ದರು. ಆದರೆ ಶ್ರೀಮತಿ ಗಾಂಧಿ (ಭೇಟಿ ನೀಡಲು) ನಿರಾಕರಿಸಿದರು.’’ ಎಂದು ರಾಜೇಶ್ವರ್‌ರವರು ಕರಣ್ ರವರಿಗೆ ನೀಡಿದ ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
ಕೃಪೆ: countercurrents
ತುರ್ತು ಪರಿಸ್ಥಿತಿಯನ್ನು ತಾನು ವೀರಾವೇಶದಿಂದ ವಿರೋಧಿಸಿದೆ ಮತ್ತು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರಿಂದಾಗಿ ತಾನು ಅಪಾರವಾದ ಸಂಕಷ್ಟಕ್ಕೊಳಗಾಗಬೇಕಾಯಿತು ಎಂದು ಆರೆಸ್ಸೆಸ್ ವಾದಿಸುತ್ತದೆ. ಆದರೆ ಆರೆಸ್ಸೆಸ್‌ನ ಈ ವಾದವನ್ನು ಅಂದಿನ ಹಲವಾರು ದಾಖಲೆಗಳು, ಕಥಾನಕಗಳು ಅಲ್ಲಗಳೆಯುತ್ತವೆ. ಇಲ್ಲಿ ಅಂತಹ ಎರಡು ಕಥಾನಕಗಳನ್ನು ಮಾತ್ರ ಉಲ್ಲೇಖಿಸಲಾಗಿದೆ.