ದಾಸರ ಪದಗಳ ಖ್ಯಾತಿಯ ಎಂ.ಎಲ್.ವಿ.
ಪದ್ಮಭೂಷಣ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಎಂ.ಎಲ್. ವಸಂತಕುಮಾರಿಯವರು ಸಮೃದ್ಧ ಸಂಗೀತದ ಅರವತ್ತೆರಡು ವಸಂತಗಳ ಸಾರ್ಥಕ ಬದುಕನ್ನು ಬಾಳಿ 1990ರ ಅಕ್ಟೋಬರ್ 31ರಂದು ನಿಧನರಾದರು. ಇದ್ದಿದ್ದರೆ ಅವರಿಗೀಗ ತೊಂಬತ್ತರ ಉದಯರಾಗದ ಪ್ರಾಯ. ಇದೀಗ ಎಂ.ಎಲ್.ವಿ. ಯವರ ತೊಂಬತ್ತನೇ ಜನ್ನದಿನೋತ್ಸವವನ್ನು ಆಚರಿಸಲು ಅವರ ಅಭಿಮಾನಿಗಳು ಭರದಿಂದ ಸಿದ್ಧತೆ ನಡೆಸಿದ್ದಾರೆ. ನಾಳಿದ್ದು (ಜು.3)ಅವರ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಲಿದೆ.
ಇಪ್ಪತ್ತೊಂದನೆಯ ಶತಮಾನದ ಹೊಸ ಪೀಳಿಗೆಯ ಕನ್ನಡಿಗರಿಗೆ ಕಾವೇರಿ ಅಂದರೆ ಒಂದು‘ಕರೆಂಟು’, ಸದಾ ಶಾಕ್ ಕೊಡುವ ಕರೆಂಟು. ಕರ್ನಾಟಕ ತಮಿಳುನಾಡು ನಡುವಣ ಜಲ ವಿವಾದ ರಾಜಕೀಯ ಬಣ್ಣ ಪಡೆದುಕೊಂಡಿರುವುದರ ಫಲ ಇದು. ಜೊತೆಗೆ ಇತ್ತೀಚಿನ ನ್ಯಾಯಾಲಯದ ತೀರ್ಪುಗಳೂ ನೆಮ್ಮದಿ ಭಂಗ ಮಾಡುತ್ತಿರುವುದರಿಂದ ಕನ್ನಡಿಗರಿಗೆ ಕಾವೇರಿ ಎಂದರೆ ಪದೇ ಪದೇ ಮುಟ್ಟಿನೋಡಿಕೊಳ್ಳುವಂಥ ವಿದ್ಯುದಾಘಾತ. ಇಂಗ್ಲಿಷ್‌ನಲ್ಲಿ ನದಿಯ ಪ್ರವಾಹವೂ ಕರೆಂಟು ವಿದ್ಯುತ್ ಪ್ರವಾಹವೂ ಕರೆಂಟು. ಕನ್ನಡಿಗರಿಗೆ ಕಾವೇರಿ ಈ ಎರಡು ಅರ್ಥದಲ್ಲೂ ನಿಜವಾಗಿದೆ.ಇದೊಂದು ಕ್ರೂರವಾದ ಶ್ಲೇಷೆ. ಹೀಗಾಗಿ ಪ್ರಸಕ್ತ ಕಾವೇರಿ ಎಂದರೆ ನಮಗೆ ದುಃಸ್ವಪ್ನದಂತೆ ತೋರಿದರೂ ಇತಿಹಾಸವನ್ನು ಗಮನಿಸಿದಾಗ, ಕಾವೇರಿ ಕನಡ್ನಿಗರು ಮತ್ತು ತಮಿಳರ ನಡುವೆ ಮಧುರ ಬಾಂಧವ್ಯದ ಜೀವನದಿಯಾಗಿರುವುದು ನಮ್ಮ ಅರಿವಿಗೆ ತಾಕುತ್ತದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಮಾತು, ವಿಶೇಷವಾಗಿ ಸಂಗೀತ ಮತ್ತು ಚಲಚ್ಚಿತ್ರ ಕ್ಷೇತ್ರಗಳಲ್ಲಿ ದಿಟವಾದುದು.
ಕಾವೇರಿ ನದಿಯ ನೀರಿಗೆ ಅದ್ಭುತ ಹಾಗೂ ಅಗೋಚರವಾದ ಶಕ್ತಿಯಿದೆ.ಅದು ಕರ್ನಾಟಕ ಸಂಗೀತವನ್ನು ತಂಜಾವೂರು ನಾಡಿನಲ್ಲಿ ಜನಿಸಿದ ಎಲ್ಲರ ಆತ್ಮಕ್ಕೆ ಮುಟ್ಟಿಸಿದೆ. ಕರ್ನಾಟಕ ಸಂಗೀತದ ತ್ರಿಮೂರ್ತಿ ವಾಗ್ಗೇಯಕಾರರೆಂದು ಪ್ರಸಿದ್ಧರಾದ ಮುತ್ತುಸ್ವಾಮಿ ದೀಕ್ಷಿತರು,ತ್ಯಾಗರಾಜರು ಮತ್ತು ಶ್ಯಾಮಾಶಾಸ್ತ್ರಿಗಳು ಕಾವೇರಿ ನದಿತೀರದ ತಿರುವಯ್ಯಿರನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡು ಕರ್ನಾಟಕ ಸಂಗೀತವನ್ನು ಬೆಳೆಸಿದರು. ಹೀಗೆ ಕಾವೇರಿ ಕೇವಲ ‘ಕರೆಂಟ್’ ಆಗದೆ ಹೊನಲಾಗಿಯೂ ಹರಿದು ಸಾಂಸ್ಕೃತಿಕ ಸೇತುವಾಗಿ ಕರ್ನಾಟಕ ಸಂಗೀತ ಕಲೆಯನ್ನು ಸಮೃದ್ಧಗೊಳಿಸಿದ್ದಾಳೆ. ಕಾವೇರಿಯ ತೀರ್ಥಕ್ಕೆ ಸಂಗೀತವನ್ನು ಉದ್ದೀಪಿಸುವ ಗುಣವಿದೆಯೆಂದು ಕಲಾವಿದರು ನಂಬುತ್ತಾರಂತೆ!
ಮೊನ್ನೆ ಬೆಳಗ್ಗೆ ಪತ್ರಿಕೆಯಲ್ಲಿ ಕರ್ನಾಟಕ ಸಂಗೀತದ ಸುಪ್ರಸಿದ್ಧ ಗಾಯಕಿ ಎಂ.ಎಲ್.ವಸಂತ ಕುಮಾರಿಯವರ ತೊಂಬತ್ತನೇ ಜನ್ಮದಿನೋತ್ಸವ ಆಚರಣೆಗೆ ಸಿದ್ಧತೆಗಳಾಗುತ್ತಿವೆ ಎಂಬ ಸುದ್ದಿಯನ್ನೂ ಕಾವೇರಿ ನಿರ್ವಹಣಾ ಪ್ರಾಧಿಕಾರ ಸುದ್ದಿಯನ್ನೂ ಒಟ್ಟೊಟ್ಟಿಗೆ ಓದಿದಾಗ ಭಾವನೆಗಳ ಸಂಕರವಾಗಿ ಹಿಂದಿರುಗಿ ನೋಡುವಂತಾಯಿತು. ಕಾವೇರಿಯ ‘ಕರೆಂಟು ಮತ್ತು ಹೊನಲಿನ’ ಯುಗಳ ಚಿತ್ರಗಳು ನೆನಪಿನಂಗಳದಲ್ಲಿ ಮೂಡಿದವು. ಕಾವೇರಿ ಕರ್ನಾಟಕ ಸಂಗೀತ ಹೊನಲಾಗಿ ಹರಿದು ತಮಿಳು ಮತ್ತು ಕನ್ನಡ ಭಾಷೆಯ ನಡುವೆ ‘ಮಧುರ’ ಬಾಂಧವ್ಯವನ್ನೂ ಬೆಸೆದಿದೆ. ಈ ಬಾಂಧವ್ಯವನ್ನು ಬೆಸೆದವರಲ್ಲಿ ಪಟ್ಟಣಂ ಸುಬ್ರಹ್ಮಣ್ಯಂ ಅಯ್ಯರ್, ವೀಣೆ ಶೇಷಣ್ಣ, ಭೈರವಿ ಕೆಂಪೇಗೌಡ, ಮೈಸೂರು ವಾಸುದೇವಾ ಚಾರ್ಯರು ಪ್ರಮುಖರು ಎಂದು ಇತಿಹಾಸ ಹೇಳುತ್ತದೆ. ಅಂತೆಯೇ ಕಳೆದ ಶತಮಾನದ ಉತ್ತರಾರ್ಧದಲ್ಲಿ ತಮ್ಮ ಸಿರಿ ಕಂಠದಿಂದ ಕರ್ನಾಟಕ ಸಂಗೀತದಲ್ಲಿ ದಾಸರ ಪದಗಳು ಮತ್ತು ಶಿವಶರಣರ ವಚನಗಳಿಗೆ ಒಂದು ಗೌರವಸ್ಥಾನ ಕಲ್ಪಿಸಿದವರಲ್ಲಿ ಎಂ.ಎಲ್. ವಸಂತ ಕುಮಾರಿಯವರು ಮೊದಲಿಗರು. ಎಂ.ಎಸ್.ಸುಬ್ಬುಲಕ್ಷ್ಮೀ, ಡಿ.ಕೆ.ಪಟ್ಟಮ್ಮಾಳ್ ಮತ್ತು ಎಂ.ಎಲ್.ವಸಂತ ಕುಮಾರಿ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಕರ್ನಾಟಕ ಸಂಗೀತದ ಮೂವರು ಸಾಮ್ರಾಜ್ಞಿಯರೆಂದೇ ಪ್ರಸಿದ್ಧರಾದವರು.
ಎಂ.ಎಲ್.ವಿ. ಎಂದೇ ಜನಪ್ರಿಯರಾಗಿದ್ದ ಎಂ.ಎಲ್.ವಸಂತ ಕುಮಾರಿಯವರದು ಸಂಗೀತದಲ್ಲಿ ಜನ್ಮಜಾತ ಪ್ರತಿಭೆ. ಹನ್ನೆರಡನೆಯ ವರ್ಷಕ್ಕೆ ಸಂಗೀತ ಕಛೇರಿ ನೀಡಲಾರಂಭಿಸಿದ ಎಂ.ಎಲ್.ವಿ. ಅವರಿಗೆ ಸಂಗೀತ ವಂಶಪಾರಂಪರ್ಯವಾಗಿ ಬಂದ ಬಳುವಳಿ. ತಾಯಿ ಲಲಿತಾಂಗಿ ಇಪ್ಪತ್ತನೆಯ ಶತಮಾನದ ಪೂವಾರ್ಧದಲ್ಲಿ ಸಂಗೀತ ಕಛೇರಿಗಳ ಪ್ರಖ್ಯಾತ ವಿದುಷಿ ಎಂದೇ ಹೆಸರುಗಳಿಸಿದ್ದರು. ಲಲಿತಾಂಗಿ ‘ಮಧುರ ಸಂಗೀತದ ಮೂರ್ತಸ್ವರೂಪ’ ಎಂದೇ ಖ್ಯಾತರಾಗಿದ್ದ ಕೊಯಮತ್ತೂರಿನ ತಾಯೀ ಅವರ ಶಿಷ್ಯೆ. ತಂದೆ ಕುಥನೂರು ಅಯ್ಯಸ್ವಾಮಿ ಅಯ್ಯರ್ ವರ್ಣಗಳ ಸಂಯೋಜಕರೆಂದೇ ಸುಪ್ರಸಿದ್ಧರಾಗಿದ್ದ ಕೊಟ್ಟವಾಸಲ ವೆಂಕಟರಮಣ ಅಯ್ಯರ್ ಅವರ ಸಂಗೀತ ಗುರುಕುಲದಲ್ಲಿ ಬೆಳೆದವರು. ಈ ದಂಪತಿ ಕೈಕೂಸು ಎಂ.ಎಲ್.ವಿ.ಯನ್ನು ಕಂಕುಳಲ್ಲಿ ಎತ್ತಿಕೊಂಡೇ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದರಂತೆ.ಕಛೇರಿ ನಡೆಯುತ್ತಿದ್ದಾಗ ಎಳೆಗೂಸು ಎಂ.ಎಲ್.ವಿ. ಎಲ್ಲ ಮಕ್ಕಳಂತೆ ಅತ್ತು ಕರೆದು ಮಾಡದೆ ಮಗ್ನವಾಗಿ ಸಂಗೀತ ಕೇಳುತ್ತಿತ್ತಂತೆ! ಮಗಳ ಈ ವಿಶೇಷ ಆಸಕ್ತಿಯನ್ನು ಗಮನಿಸಿದ ತಂದೆ ಮಗಳೊಂದಿಗೆ ಸಂಗೀತದಲ್ಲಿ ಆಟ ಆಡಲಾರಂಭಿಸಿದರಂತೆ. ಮಗಳೆದುರು ಸ್ವರಗಳನ್ನು ಹಾಡಿ ಅವುಗಳನ್ನು ಗುರುತಿಸುವಂತೆ ಬಾಲಭಾಷೆಯಲ್ಲೇ ಕೇಳುತ್ತಿದ್ದರಂತೆ. ಕೈಗೂಸು ಕೂಡಲೇ ತಂದೆ ಹಾಡಿದ ಸ್ವರವನ್ನು ಹಾಡುತ್ತಿತ್ತಂತೆ.
ವಾಸಂತಿಗೆ ಮಾತು ಬರುವುದಕ್ಕೂ ಮೊದಲು ನಡೆದ ಪವಾಡವಿದೆಂದು ತಂದೆ ಹೇಳಿಕೊಂಡಿದ್ದಾರೆ. ಎಳವೆಯಲ್ಲೇ ಸಂಗೀತ ಕಲಿಯಲಾರಂಭಿಸಿದ ಎಂ.ಎಲ್.ವಿ. ಯವರಿಗೆ ಸ್ವರ ಅಥವಾ ಸ್ವರಪ್ರಸ್ತಾರ ಹಾಡುವುದರಲ್ಲಿ ಮೊದಲಿನಿಂದಲೂ ವಿಶೇಷ ಆಸಕ್ತಿ. ವಸಂತ ಕುಮಾರಿಯವರ ಕಛೇರಿಗಳು ಸ್ವರಮಯವಾದ ಕಛೇರಿಗಳಾಗಿರುತ್ತಿದ್ದವು ಎಂದು ಖ್ಯಾತ ಸಂಗೀತಜ್ಞರಾದ ಬಿ.ವಿ.ಕೆ. ಶಾಸ್ತ್ರಿಯವರು ಬರೆಯತ್ತಾರೆ. ಹಾಗೆಂದು ಅವರು ರಾಗಗಳನ್ನು ಉಪೇಕ್ಷಿಸುತ್ತಿದ್ದರು ಎಂದಲ್ಲ.ಅವರು ರಾಗ ಮತ್ತು ಸ್ವರಗಳನ್ನು ಸಮತೆಯಿಂದ ಸರಿದೂಗಿಸಿಕೊಂಡು ಹೋಗುತ್ತಿದ್ದರು ಎಂಬುದೂ ಬಿ.ವಿ.ಕೆ.ಯವರ ಮಾತೇ.
ವಸಂತ ಕುಮಾರಿಯವರದು ಕರ್ನಾಟಕ ಸಂಗೀತದ ಕುಟುಂಬವಾದರೂ ತಂದೆ ತಾಯಗಳು ಹೃದಯವಂತರಾಗಿದ್ದರು. ಅವರ ಸಂಗೀತದ ವಿವಿಧ ಪ್ರಕಾರಗಳಲ್ಲಿ ಆಸಕ್ತರಾಗಿದ್ದರು. ಹಿಂದೂಸ್ಥಾನಿ ಸಂಗೀತದಲ್ಲಿ ವಿಶೇಷ ಆಸ್ಥೆ ಹೊಂದಿದ್ದ ತಂದೆಗೆ ಅಬ್ದುಲ್ ಕರೀಂ ಖಾನ್, ಮೈಸೂರು ದರ್ಬಾರಿನ ಹಫೀಝ್ ಖಾನ್, ಬಶೀರ್ ಖಾನ್, ರೋಷನಾ ಬೇಗಂ ಮೊದಲಾದವರ ಜೊತೆ ಒಡನಾಟವಿತ್ತು. ಇದರ ಪರಿಣಾಮವಾಗಿ ಎಂ.ಎಲ್.ವಿ. ಬಾಲ್ಯದಲ್ಲೇ ಕರ್ನಾಟಕ ಹಾಗೂ ಹಿಂದೂಸ್ಥಾನಿ ಎರಡೂ ಸಂಗೀತಗಳ ವೈವಿಧ್ಯಮಯ ಆಕರ್ಷಣೆಗಳಿಂದ ಪ್ರಭಾವಿತರಾದರು. ಇದರಿಂದಾಗಿ ಶುರುವಿನಲ್ಲೇ ಬಾಲಕಿ ಎಂ.ಎಲ್.ವಿ. ಮನದಲ್ಲಿ ಸಂಗೀತ ಕುರಿತು ಒಂದು ಸ್ಪಷ್ಟ ಕಲ್ಪನೆ ಮೂಡಿತ್ತು. ಮುಂದೆ ಗುರು ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರ ಬೋಧನೆಯಲ್ಲಿ ಈ ಕಲ್ಪನೆ ಪ್ರಬುದ್ಧಗೊಂಡು ಸ್ಪಷ್ಟ ಗೊತ್ತುಗುರಿ ಲಭಿಸಿತು. ಅವರ ಗಾಯನ ಪ್ರತಿಭೆ ಕಲಾತ್ಮಕ ಪರಿಪೂರ್ಣತೆಯನ್ನು ಪಡೆಯಿತು. ಜಿ.ಎನ್.ಬಿ. ಎಂದೇ ಸುವಿಖ್ಯಾತರಾದ ಬಾಲಸುಬ್ರಹ್ಮಣ್ಯಂ ಶಾಸ್ತ್ರೀಯ ಸಂಗಿತದ ವಿದ್ವಾಂಸರಾಗಿದ್ದರೂ ಅವರ ಮನೋಭಾವ ಆಧುನಿಕವಾಗಿದ್ದು ಶಿಷ್ಯರ ಪ್ರಯೋಗಶೀಲತೆಯನ್ನು ಪ್ರೋತ್ಸಾಹಿಸುತ್ತದಂತೆ. ಗುರುಗಳ ಈ ಪರಿಯ ಪ್ರೋತ್ಸಾಹದಿಂದ ಎಂ.ಎಲ್.ವಿ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಭುತ್ವ ಸಾಧಿಸುವುದರ ಜೊತೆಗೆ ಸುಗಮ ಸಂಗೀತ, ಸಿನೆಮಾ ಸಮಗೀತೆಗಳ ಪ್ರಯೋಗಗಳಲ್ಲೂ ಸೃಜನಶೀಲರಾದರು.
ವಸಂತ ಕುಮಾರಿಯವರು ತಮ್ಮ ಗಾಯನದ ಧ್ವನಿಮುದ್ರಿಕೆಗಳು ಜನಪ್ರಿಯತೆಯ ಶಿಖರ ಮುಟ್ಟಿದ ದಿನಗಳಲ್ಲೇ ಜನಪ್ರಿಯತೆಯ ಇನ್ನೊಂದು ಮಜಲನ್ನು ಮುಟ್ಟಲೋ ಎಂಬಂತೆ ಚಲನಚಿತ್ರ ಸಂಗೀತ ಕ್ಷೇತ್ರವನ್ನೂ ಪ್ರವೇಶಿಸಿದರು. ಚಿತ್ರೋದ್ಯಮವು ಶಾಸ್ತ್ರೀಯ ಸಂಗೀತಕ್ಕೆ ಮಣೆಹಾಕುತ್ತಿದ್ದ ದಿನಗಳವು. ತಮಿಳು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರುಗಳಾದ ಎಂ.ಕೆ.ತ್ಯಾಗರಾಜ ಭಾಗವತರ್ ಮತ್ತು ಎನ್.ಎಸ್.ಕೃಷ್ಣನ್ ಅವರ ಆಗ್ರಹದ ಮೇಲೆ ಎಂ.ಎಲ್.ವಿ. ಹಿನ್ನೆಲೆ ಗಾಯಕಿಯಾದರು. ‘ಕೃಷ್ಣ ಭಕ್ತಿ’ ಚಿತ್ರದಲ್ಲಿ ‘ರಾಧಾ ಸಮೇತ...’, ‘ಕಾಂಚನಮ್’ನ ‘ಮಾಯೆ ತ್ವಂ’,‘ನಾ ಇಲ್ಲು’ ಚಿತ್ರದ ‘ಎನ ವೀಡು’,‘ಸೌಭಾಗ್ಯವತಿ’ ಚಿತ್ರಕ್ಕಾಗಿ ಹಾಡಿದ ಕಾಳಿದಾಸನ ಶ್ಯಾಮಲದಂಡಕಂನ ‘ಮಾತಾ ಮರಗತ ಶ್ಯಾಮ’ ಹಾಡುಗಳು ಇಂದಿಗೂ ರಸಿಕರ ನೆನಪಿನಲ್ಲಿ ಹಸಿರಾಗಿರುವ ಚಿತ್ರ ಗೀತೆಗಳು. ಎಂ.ಎಲ್.ವಿ. ಕನ್ನಡ ಚಿತ್ರಗಳಿಗೂ ಹಾಡಿದ್ದಾರೆ. ಅವುಗಳ ಪೈಕಿ ‘ಶ್ರೀ ಪುರಂದರದಾಸರು’ಚಿತ್ರದ ‘ಆಡಿದನೊ ರಂಗ’, ಜಿ.ವಿ.ಅಯ್ಯರ್ ಅವರ ರಾಷ್ಟ್ರ ಪ್ರಶಸ್ತಿ ವಿಜೇತ ‘ಹಂಸಗೀತೆ’ ಚಿತ್ರಕ್ಕೆ, ಬಾಲಮುರಳಿಯವರ ನಿರ್ದೇಶನ ಮತ್ತು ಟಿ.ಜಿ.ಲಿಂಗಪ್ಪನವರ ರಾಗಸಂಯೋಜನೆಯಲ್ಲಿ ಹಾಡಿರುವ ಜಯದೇವ ಕವಿಯ ಅಷ್ಟಪದಿ ಸ್ಮರಣೀಯವಾದುವು. ‘ಹಂಸಗೀತೆ’ಯೊಂದಿಗೆ ಎಂ.ಎಲ್.ವಿ. ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದರು. ಶಾಸ್ತ್ರೀಯ ಸಂಗೀತದಲ್ಲಿ ಅವರು ಕರ್ನಾಟಕ ಸಂಗೀತದ ತ್ರಿಮೂರ್ತಿಗಳ ಕೃತಿಗಳನ್ನು ಹಾಡುವುದರಲ್ಲಿ ಪರಿಣತಿಗಳಿಸಿದ್ದರಲ್ಲದೆ ಅವುಗಳ ಜೊತೆಗೆ ಅನ್ಯ ಭಾಷೆಗಳ ವಾಗ್ಗೇಯಕಾರರ ರಚನೆಗಳತ್ತಲೂ ಗಮನಹರಿಸಿದ್ದರು. ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ ರಚನೆಗಳನ್ನು ಹಾಡಲಾರಂಭಿಸಿದರು. ತಮಿಳಿನ ತಿರುಪ್ಪಾವೈನಂತೆಯೇ ಅವರು ಮರಾಠಿಯ ಅಭಂಗ್, ಕನ್ನಡದ ದಾಸರ ಪದಗಳನ್ನು ಶರಣರ ವಚನಗಳನ್ನೂ ಹಾಡುವುದರಲ್ಲಿ ಆಸಕ್ತಿ ತೋರಿದರು.
ಸಂಗೀತ ಕೃತಿಗಳ ಸಂಚಯ ಅವರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿತ್ತು ಎನ್ನುತ್ತಾರೆ ಸಂಗೀತ ವಿಮರ್ಶಕರು. ಅವರು ಪರಸ್ಥಳಗಳಿಗೆ ಹೋದಾಗ ಅಲ್ಲಿನ ಸಂಗೀತ ಮತ್ತು ಸಂಗೀತ ಕೃತಿಗಳ ಬಗ್ಗೆ ವಿಶೇಷ ಆಸ್ಥೆ ವಹಿಸುತ್ತಿದ್ದರಂತೆ. ಒಮ್ಮೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಾಗ, ಶರಣರ ವಚನಗಳ ಗಾಯನಕ್ಕೆ ಮಾರುಹೋದರಂತೆ. ಆಗಿನಿಂದಲೇ ವಚನಗಳನ್ನು ಅಧ್ಯಯನ ಮಾಡಿ ಅವುಗಳಿಗೆ ರಾಗಸಂಯೋಜಿಸಿ ಹಾಡಲಾರಂಭಿಸಿದರಂತೆ. ತ್ರಿಮೂರ್ತಿಗಳ ರಚನೆಗಳಂತೆ ಕನ್ನಡದ ದಾಸರ ಪದಗಳನ್ನು ಹಾಡುವುದರಲ್ಲಿ ಎಂ.ಎಲ್.ವಿ. ವಿಶೇಷ ಒಲವು ಹೊಂದಿದ್ದರು. ಪುರಂದರ ದಾಸರ ಕೀರ್ತನೆಗಳನ್ನು ಕರ್ನಾಟಕ ಸಂಗೀತ ಕಛೇರಿಯ ಒಂದು ಕಾಯಂ ಅಂಗವಾಗಿಸಿ, ಅದನ್ನು ತಮಿಳುನಾಡು ಮತ್ತಿತರಡೆಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿಯಲ್ಲಿ ಎಂ.ಎಲ್.ವಿ. ಯವರ ಪಾಲು ದೊಡ್ಡದು. ಕರ್ನಾಟಕ ಸಂಗೀತದಲ್ಲಿ ಪುರಂದರ ದಾಸರ ಪದಗಳನ್ನು ಚಾಲ್ತಿಗೆ ತರುವುದರಲ್ಲಿ ನಾಂದಿ ಹಾಡಿದವರು ಬೆಂಗಳೂರು ನಾಗರತ್ನಮ್ಮನವರು(ಇವರ ಬಗ್ಗೆ ಈ ಅಂಕಣದಲ್ಲಿ ಬರೆಯಲಾಗಿದೆ). ಇದನ್ನು ಮುಂದುವರಿಸಿಕೊಂಡು ಅದಕ್ಕೊಂದು ಸ್ಥಾನ ಕಲ್ಪಿಸಿಕೊಟ್ಟವರು ಎಂ.ಎಲ್.ವಿ. ಕಛೇರಿಗಳಲ್ಲಿ ಪುರಂದರ ದಾಸರ ಪದಗಳನ್ನು ಹಾಡಿದ್ದಲ್ಲದೆ ‘ಪುರಂದರ ಮಣಿಮಾಲೈ’ ಎಂಬ ಪುಸ್ತಕವನ್ನೂ ಎಂ.ಎಲ್.ವಿ. ಪ್ರಕಟಿಸಿದ್ದಾರೆ. ಪುರಂದರ ದಾಸರ ಐವತ್ತೊಂದು ಪದಗಳ ಸ್ವರಸಂಕೇತಗಳನ್ನು ಸೂಚಿಸುವ ಕೃತಿ ಇದು.
ಈ ಕೃತಿಯ ಪ್ರಕಟನೆಗೆ ಹಣ ಸಾಲದೆ ಬಂದಾಗ ಅವರು ಅದಕ್ಕಾಗಿ ತಮ್ಮ ಮನೆಯನ್ನು ಅಡ ಇಟ್ಟು ಪುಸ್ತಕ ಹೊರತಂದರಂತೆ.ಅದರೆ ಅವರ ಈ ಕೆಲಸಕ್ಕೆ ತಮಿಳುನಾಡಿನ ವಿದ್ವತ್ವಲಯದಿಂದ ಬಂದ ಪ್ರತಿಕ್ರಿಯೆ ಪ್ರೋತ್ಸಾಹದಾಯಕವಾಗಿರಲಿಲ್ಲ. ನಿಷ್ಪ್ರಯೋಜಕ ಹಾಡುಗಳನ್ನು ಜನಪ್ರಿಯಗೊಳಿಸುವ ತಂತ್ರ ಎಂದು ವಿದ್ವಾಂಸರುಗಳು ಟೀಕಿಸಿದರಂತೆ.ಈ ನೇತ್ಯಾತ್ಮಕ ಪ್ರತಿಕ್ರಿಯೆಗೆ ಅಂಜದ ಎಂ.ಎಲ್.ವಿ ಜೀವಿತದ ಕೊನೆಯವರೆಗೂ ತಮ್ಮ ಕಛೇರಿಗಳಲ್ಲಿ ಪುರಂದರ ದಾಸರ ಪದಗಳನ್ನು ತಪ್ಪದೆ ಹಾಡುತ್ತಿದ್ದರು. ಪುರಂದರ ದಾಸರ ಪದಗಳು ಪರಮಾಯಿಷಿಯಾಗಿದ್ದರೂ ಅವರು ಉಳಿದ ಹರಿದಾಸರನ್ನು ಕಡಗಣಿಸಿರಲಿಲ್ಲ. ಕನಕದಾಸರ ‘ಬಾರೋ ಕೃಷ್ಣಯ್ಯ’ ಇಂದಿಗೂ ಭಕ್ತಿಭಾವದಿಂದ ರಸಿಕರು ತಲೆದೂಗುವಂಥ ಮಧುರ ಮಂಜುಳ ಗಾನ. ದಾಸ ಸಾಹಿತ್ಯದ ಬಗ್ಗೆ ಎಂ.ಲ್.ವಿ. ಅವರಲ್ಲಿ ಒಲವು ಮೂಡಿದ್ದು ತಾಯಿಯ ಪ್ರೇರಣೆಯಿಂದ. ತಾಯಿ ಲಲಿತಾಂಗಿ ತಮ್ಮ ಸಂಗೀತ ಪ್ರಾಯದ ದಿನಗಳಲ್ಲಿ ಹರಿದಾಸ ಪಂಥಕ್ಕೆ ಸೇರಿದ ನರಸಿಂಹದಾಸ ಎಂಬವರ ಭಕ್ತಿ ಸಂಗೀತದಿಂದ ಪ್ರಭಾವಿತರಾಗಿ ಅವರಿಂದ ದಾಸರ ಪಾದಗಳ ಗಾಯನವನ್ನು ಕಲಿತರಂತೆ. ಕಲಿತದ್ದಲ್ಲದೆ ದಾಸರ ಪದಗಳನ್ನು ಜನಪ್ರಿಯಗೊಳಿಸುವ ಕಾರ್ಯ ತಮ್ಮ ಜೀವನದ ಧ್ಯೇಯ ಎಂಬಂತೆ ನಡೆದುಕೊಂಡರಂತೆ. ತಮಿಳು ಬಾಂಧವರ ಪ್ರತಿಕ್ರಿಯೆ ಎನೇ ಇರಲಿ ಕನ್ನಡವಂತೂ ಕರ್ನಾಟಕ ಸಂಗಿತದಲ್ಲಿ ದಾಸರ ಪದಗಳಿಗೆ ಒಂದು ಭಕ್ತಿಗೌರವಗಳ ಸ್ಥಾನ ಕಲ್ಪಿಸಿಕೊಟ್ಟ ವಸಂತ ಕುಮಾರಿಯವರಿಗೆ ಕೃತಜ್ಞವಾಗಿದೆ. ಇಂಥ ಕೃತಜ್ಞತೆಯ ದ್ಯೋತಕವಾಗಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟೆರೆಟ್ ನೀಡಿ ಅವರನ್ನು ಸನ್ಮಾನಿಸಿದೆ.
ಪದ್ಮಭೂಷಣ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಎಂ.ಎಲ್. ವಸಂತಕುಮಾರಿಯವರು ಸಮೃದ್ಧ ಸಂಗೀತದ ಅರವತ್ತೆರಡು ವಸಂತಗಳ ಸಾರ್ಥಕ ಬದುಕನ್ನು ಬಾಳಿ 1990ರ ಅಕ್ಟೋಬರ್ 31ರಂದು ನಿಧನರಾದರು. ಇದ್ದಿದ್ದರೆ ಅವರಿಗೀಗ ತೊಂಬತ್ತರ ಉದಯರಾಗದ ಪ್ರಾಯ. ಇದೀಗ ಎಂ.ಎಲ್.ವಿ. ಯವರ ತೊಂಬತ್ತನೇ ಜನ್ನದಿನೋತ್ಸವವನ್ನು ಆಚರಿಸಲು ಅವರ ಅಭಿಮಾನಿಗಳು ಭರದಿಂದ ಸಿದ್ಧತೆ ನಡೆಸಿದ್ದಾರೆ. ನಾಳಿದ್ದು (ಜು.3)ಅವರ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಲಿದೆ.