ತುರ್ತು ಪರಿಸ್ಥಿತಿ ಮತ್ತು ಆರೆಸ್ಸೆಸ್ನ ಮೋಸದಾಟ
ಭಾಗ-2
ಆರೆಸ್ಸೆಸ್‌ನ ದುರಂತವೆಂದರೆ, ಭಾರತ ಇನ್ನೂ ಕೂಡ ಪ್ರಜಾಸತ್ತಾತ್ಮಕವಾದ ಒಂದು ಆಡಳಿತ ವ್ಯವಸ್ಥೆಯಲ್ಲಿ ಮುಂದುವರಿಯುತ್ತಿದೆ; ಆದ್ದರಿಂದ ಕ್ರೂರ ಅಧಿಕಾರದ ಬಗ್ಗೆ ಅದು ತೋರುವ ಪ್ರೀತಿಯನ್ನು ಅದು ಒಂದು ಮೋಸದಾಟದೊಂದಿಗೆ ಸರಿದೂಗಿಸಬೇಕಾಗಿದೆ.
ಟಿ.ವಿ. ರಾಜೇಶ್ವರ್‌ರವರ ಪುಸ್ತಕದ ಪ್ರಕಾರ ‘‘ತುರ್ತು ಪರಿಸ್ಥಿತಿಯ ವೇಳೆ, ಒಂದು ಬಲ ಪಂಥೀಯ ಹಿಂದೂರಾಷ್ಟ್ರೀಯವಾದಿ ಸಂಘಟನೆಯಾಗಿರುವ ಆರೆಸ್ಸೆಸ್‌ನ್ನು ನಿಷೇಧಿ ಸಲಾಯಿತು. ಆದರೆ ಅದರ ಮುಖ್ಯಸ್ಥ, ಬಾಳಾ ಸಾಹೇಬ್ ದೇವರಸ್, ಪ್ರಧಾನಿ (ಇಂದಿರಾಗಾಂಧಿ) ಯವರ ನಿವಾಸದೊಂದಿಗೆ ತೆಪ್ಪಗೆ ಒಂದು ಸಂಬಂಧ ಸ್ಥಾಪಿಸಿ, ದೇಶದಲ್ಲಿ ವ್ಯವಸ್ಥೆ ಮತ್ತು ಶಿಸ್ತನ್ನು ಅನುಷ್ಠಾನಗೊಳಿಸಲು ಸರಕಾರ ತೆಗೆದು ಕೊಂಡ ಅನೇಕ ಕ್ರಮಗಳಿಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ದೇಶದಲ್ಲಿ ಕುಟುಂಬ ಯೋಜನೆಯನ್ನು ಬಲವಂತವಾಗಿ ಜಾರಿಗೊಳಿಸಲು, ನಿರ್ದಿಷ್ಟವಾಗಿ ಮುಸ್ಲಿಮರಲ್ಲಿ ಜಾರಿಗೊಳಿಸಲು, ಸಂಜಯ್ ಗಾಂಧಿಯವರು ತೆಗೆದುಕೊಂಡ ವ್ಯವಸ್ಥಿತವಾದ, ಪೂರ್ವ ಯೋಜಿತವಾದ ಕ್ರಮಗಳನ್ನು ದೇವರಸ್ ಮೆಚ್ಚಿ ಶ್ಲಾಘಿಸಿದರು.’’
ತುರ್ತು ಪರಿಸ್ಥಿತಿ ಅಂತ್ಯಗೊಂಡ ಬಳಿಕ ಕೂಡ ‘‘ಆರೆಸ್ಸೆಸ್, ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿತ್ತು’’ ಸುಬ್ರಮಣಿಯನ್ ಸ್ವಾಮಿಯವರ ಪ್ರಕಾರ ಕೂಡ, ಆರೆಸ್ಸೆಸ್‌ನ ಹಿರಿಯ ನಾಯಕರಲ್ಲಿ ಬಹುಪಾಲು ನಾಯಕರು ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟಕ್ಕೆ ದ್ರೋಹ ಬಗೆದಿದ್ದರು.
ಆರೆಸ್ಸೆಸ್‌ನ ‘ಪತ್ರಾಗಾರದಲ್ಲಿರುವ ಸಮಕಾಲೀನ (ಅಂದಿನ) ದಾಖಲೆಗಳು ಪ್ರಭಾಶ್ ಜೋಷಿ ಮತ್ತು ರಾಜೇಶ್ವರ್‌ರವರು ಬರೆದಿರುವ ಕಥಾನಕಗಳನ್ನು ಸತ್ಯವೆಂದು ಸಾಬೀತು ಪಡಿಸುತ್ತದೆ. ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಎರಡು ತಿಂಗಳುಗಳೊಳಗಾಗಿ, ಆರೆಸ್ಸೆಸ್‌ನ ತೃತೀಯ ಮುಖ್ಯಸ್ಥ ಮಧುಕರ್ ದತ್ತಾತ್ರೇಯ ದೇವರಸ್ ಇಂದಿರಾ ಗಾಂಧಿಯವರಿಗೆ ಮೊದಲ ಪತ್ರ ಬರೆದಿದ್ದರು. ಅದು ಸರಕಾರಿ ಪ್ರಾಯೋಜಿತ ಭಯ ಉತ್ತುಂಗದಲ್ಲಿದ್ದ ಸಮಯ. 1975ರ ಆಗಸ್ಟ್ 22ರಂದು ಬರೆದ ಪತ್ರದಲ್ಲಿ ಅವರು ಇಂದಿರಾ ಗಾಂಧಿಯವರ ಈ ಹೊಗಳಿಕೆಯಿಂದ ತನ್ನ ಪತ್ರವನ್ನು ಆರಂಭಿಸಿದ್ದರು.
‘‘ನೀವು 1975 ಆಗಸ್ಟ್ 15ರಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ನಾನು ಜೈಲಿ ನಲ್ಲಿ ಕುಳಿತು ರೇಡಿಯೊದಲ್ಲಿ ಗಮನವಿಟ್ಟು ಆಲಿಸಿದೆ. ನಿಮ್ಮ ಭಾಷಣ ಸಕಾಲಿಕವಾಗಿತ್ತು ಮತ್ತು ಸಮತೋಲನದಿಂದ ಕೂಡಿತ್ತು, ಆದ್ದರಿಂದ ನಾನು ನಿಮಗೆ ಪತ್ರ ಬರೆಯಲು ನಿರ್ಧರಿಸಿದೆ.’’
ಇಂದಿರಾಗಾಂಧಿಯವರು ಆ ಪತ್ರಕ್ಕೆ ಪ್ರತಿಕ್ರಿಯಿಸಲಿಲ್ಲ ಆದ್ದರಿಂದ 1975ರ ನವೆಂಬರ್ 10ರಂದು ದೇವರಸ್ ಇಂದಿರಾಗಾಂಧಿಗೆ ಇನ್ನೊಂದು ಪತ್ರ ಬರೆದರು. ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿ ಇಂದಿರಾಗಾಂಧಿ ಯವರು ಚುನಾವಣೆಯಲ್ಲಿ ಗೆದ್ದಿದ್ದನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪಿನ ಕುರಿತಾಗಿ ಇಂದಿರಾಗಾಂಧಿ ಯರನ್ನು ಅಭಿನಂದಿಸುತ್ತ ಅವರು ತನ್ನ ಈ ಎರಡನೇ ಪತ್ರವನ್ನು ಆರಂಭಿಸಿದರು: ‘‘ಸುಪ್ರೀಂಕೋರ್ಟ್ ನ ಎಲ್ಲ ಐವರು ನ್ಯಾಯ ಮೂರ್ತಿಗಳು ನೀವು ಗೆದ್ದಿರುವ ಚುನಾವಣೆ ಸಾಂವಿಧಾನಿಕವೆಂದು ಘೋಷಿಸಿದ್ದಾರೆ, ಇದಕ್ಕಾಗಿ ತಮಗೆ ಹೃತ್ಪೂರ್ವಕ ಶುಭಾಶ ಯಗಳು.’’ ಆದರೆ ಸುಪ್ರಿಂ ಕೋರ್ಟ್‌ನ ಈ ತೀರ್ಪು ಕಾಂಗ್ರೆಸ್‌ನ ಕೈವಾಡ ದಿಂದಾಗಿ ‘ಮ್ಯಾನೇಜ್ ಮಾಡಲಾದ ತೀರ್ಪು ಎಂಬುದು ವಿಪಕ್ಷಗಳ ದೃಢವಾದ ಅಭಿಪ್ರಾಯವಾಗಿತ್ತು ಎಂಬುದನ್ನು ನಾವು ಗಮನಿಸಬೇಕು. ಮುಂದಕ್ಕೆ ಪತ್ರದಲ್ಲಿ ದೇವರಸ್ ಹೀಗೆ ಬರೆದಿದ್ದಾರೆ; ‘‘ಜಯ ಪ್ರಕಾಶ್‌ನಾರಾಯಣ್‌ರವರ ಚಳವಳಿ ಯಲ್ಲಿ ಆರೆಸ್ಸೆಸ್‌ನ ಹೆಸರನ್ನು ಉಲ್ಲೇಖಿಸ ಲಾಗಿದೆ. ಅಲ್ಲದೇ ಯಾವುದೇ ಕಾರಣವಿರದೆ ಸರಕಾರವು ಗುಜರಾತ್ ಚಳವಳಿ ಮತ್ತು ಬಿಹಾರ್ ಚಳುವಳಿಯೊಂದಿಗೆ ಆರೆಸ್ಸೆಸ್‌ನ್ನು ಜೋಡಿಸಿದೆ... ಸಂಘಕ್ಕೂ ಈ ಚಳವಳಿಗಳಿಗೂ ಯಾವುದೇ ಸಂಬಂಧವಿಲ್ಲ..
ಇಂದಿರಾ ಗಾಂಧಿಯವರು ಈ ಪತ್ರಕ್ಕೂ ಪ್ರತಿಕ್ರಿ ಯಿಸದೇ ಇದ್ದುದರಿಂದ, ಆರೆಸ್ಸೆಸ್ ಮುಖ್ಯಸ್ಥರು (ದೇವರಸ್) ತುರ್ತು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ ಮತ್ತು ಇಂದಿರಾಗಾಂಧಿಯವರ ಪ್ರೀತಿಪಾತ್ರರಾಗಿದ್ದ ವಿನೋಬಾ ಭಾವೆಯವರನ್ನು ಸಂಪರ್ಕಿಸಿದರು. 1976ರ ಜನವರಿ 12ರ ದಿನಾಂಕವಿರುವ ಒಂದು ಪತ್ರದಲ್ಲಿ ಅವರು ಆರೆಸ್ಸೆಸ್ ಮೇಲೆ ಹೇರಿದ್ದ ನಿಷೇಧವನ್ನು ರದ್ದು ಪಡಿಸುವಂತೆ ಏನಾದರೂ ದಾರಿ ತೋರಬೇಕೆಂದು ಅವರು ವಿನೋಬಾ ಭಾವೆಯವರಲ್ಲಿ ಯಾಚಿಸಿದರು. ವಿನೋಬಾ ಭಾವೆಯವರು ಕೂಡ ದೇವರಸ್‌ರವರ ಪತ್ರಕ್ಕೆ ಪ್ರತಿಕ್ರಿಯಿಸಲಿಲ್ಲವಾದ್ದರಿಂದ ಹತಾಶರಾದ ಅವರು ದಿನಾಂಕ ನಮೂದಿಸದೇ ಇರುವ ಇನ್ನೊಂದು ಪತ್ರದಲ್ಲಿ ಹೀಗೆ ಬರೆದರು: ‘‘ಪತ್ರಿಕಾ ವರದಿಗಳ ಪ್ರಕಾರ, ಗೌರವಾನ್ವಿತ ಪಿಎಂ (ಇಂದಿರಾಗಾಂಧಿ)ಯವರು ಜನವರಿ 24ರಂದು ಪವನಾರ್ ಆಶ್ರಮದಲ್ಲಿ ತಮ್ಮನ್ನು ಭೇಟಿಯಾಗಲಿದ್ದಾರೆ. ಆಗ ದೇಶದ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯಲಿದೆ. ಆಗ ಆರೆಸ್ಸೆಸ್ ಬಗ್ಗೆ ಪಿಎಂ ಅವರಿಗಿರುವ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ, ಆ ಮೂಲಕ ಆರೆಸ್ಸೆಸ್ ಮೇಲಿರುವ ನಿಷೇಧವನ್ನು ರದ್ದು ಪಡಿಸಿ, ಆರೆಸ್ಸೆಸ್ ಸದಸ್ಯರು ಜೈಲುಗ ಳಿಂದ ಬಿಡುಗಡೆಯಾಗುವ ಹಾಗೆ ಮಾಡಲು ಪ್ರಯತ್ನಿಸ ಬೇಕೆಂದು ನಾನು ತಮ್ಮಲ್ಲಿ ಬೇಡಿಕೊ ಳ್ಳುತ್ತೇನೆ. ಪ್ರಧಾನಿಯವರ ನಾಯಕತ್ವದಲ್ಲಿ ಎಲ್ಲರಂಗಗಳಲ್ಲಿ ಅಭಿವೃದ್ಧಿಗಾಗಿ ನಡೆಯುತ್ತಿರುವ ಯೋಜನೆಗಳಿಗೆ ಆರೆಸ್ಸೆಸ್ ಮತ್ತು ಅದರ ಸದಸ್ಯರು ತಮ್ಮ ಕಾಣಿಕೆ ನೀಡ ಲು ಸಾಧ್ಯವಾಗುವ ಕಾಲಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ.’’
ಆಳುವವರ ರಥದೊಂದಿಗೆ ಸಾಗುವುದು, ವಿಶೇಷವಾಗಿ ಅಧಿಕಾರಶಾಹಿಗಳ ಜತೆ ಕೈಜೋಡಿಸುವುದು ಆರೆಸ್ಸೆಸ್‌ನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯ. ಈ ಕಾರಣದಿಂದಾಗಿಯೇ ಆರೆಸ್ಸೆಸ್‌ನ ಯಾವುದೇ ನಾಯಕನಾಗಲಿ ಮತ್ತು ಸದಸ್ಯರಾಗಲಿ ವಸಾಹತುಶಾಹಿ ವಿರುದ್ಧವಾದ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ನಿಜ ಹೇಳಬೇಕೆಂದರೆ, ಆರೆಸ್ಸೆಸ್ ಪಾಶವೀ ಅಧಿಕಾರ ಮತ್ತು ಸರ್ವಾಧಿಕಾರವನ್ನು ಪೂಜಿಸುತ್ತದೆ. ಆರೆಸ್ಸೆಸ್‌ನ ಅತ್ಯಂತ ಪ್ರಮುಖ ಸಿದ್ಧಾಂತಿ, ಆರೆಸ್ಸೆಸ್ ಸಂಘಟನೆಯ ಎರಡನೆಯ ಬಾಸ್ ಗೊಳ್ವಾಲ್ಕರ್ 1940ರಷ್ಟು ಹಿಂದೆಯೇ ಹೀಗೆ ಘೋಷಿಸಿದ್ದರು: ‘‘ಹಿಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಫೂರ್ತಿ ಪಡೆದ ಆರೆಸ್ಸೆಸ್ ಈ ಶ್ರೇಷ್ಠದೇಶದ ಮೂಲೆ ಮೂಲೆಯಲ್ಲಿ ಹಿಂದುತ್ವದ ಜ್ಯೋತಿಯನ್ನು ಬೆಳಗುತ್ತಿದೆ.
ಇತ್ತೀಚೆಗೆ, ಮಾಜಿ ರಾಷ್ಟ್ರಪತಿ ಪ್ರಣವ್- ಮುಖರ್ಜಿ ಯವರನ್ನು ಆರೆಸ್ಸೆಸ್‌ನ ಹೊಸ ಕಾರ್ಯಕರ್ತರ ದೀಕ್ಷಾ ಸಮಾರಂಭ ದಂದು ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆಹ್ವಾನಿಸಿದರು. ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಕಾರಣರಾದ ಕಾಂಗ್ರೆಸ್‌ನ ಉನ್ನತ ನಾಯಕ ರಲ್ಲಿ ಪ್ರಣವ್ ಮುಖರ್ಜಿಯವರು ಕೂಡ ಒಬ್ಬ ಆಪಾದಿತರೆಂದು ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆರೆಸ್ಸೆಸ್‌ನ ದುರಂತವೆಂದರೆ, ಭಾರತ ಇನ್ನೂ ಕೂಡ ಪ್ರಜಾಸತ್ತಾತ್ಮಕವಾದ ಒಂದು ಆಡಳಿತ ವ್ಯವಸ್ಥೆಯಲ್ಲಿ ಮುಂದುವರಿಯುತ್ತಿದೆ; ಆದ್ದರಿಂದ ಕ್ರೂರ ಅಧಿಕಾರದ ಬಗ್ಗೆ ಅದು ತೋರುವ ಪ್ರೀತಿಯನ್ನು ಅದು ಒಂದು ಮೋಸದಾಟದೊಂದಿಗೆ ಸರಿದೂಗಿಸಬೇಕಾಗಿದೆ.
ಕೃಪೆ:countercurrents.org