ಸಣ್ತಿಮ್ಮಿ ರಾಮಾಯ್ಣ......
ಈ ಹೊತ್ತಿನ ಹೊತ್ತಿಗೆ
ದು. ಸರಸ್ವತಿ ಅವರ ಕಾರ್ಯಕ್ಷೇತ್ರ ವಿಶಾಲವಾದುದು. ಪೌರ ಮಹಿಳಾ ಕಾರ್ಮಿಕರನ್ನು ಸಂಘಟಿಸುವುದರಲ್ಲಿ ಪಾತ್ರವಹಿಸಿರುವ ಇವರು, ವಿವಿಧ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಇದೇ ಸಂದರ್ಭದಲ್ಲಿ ಕಲಾವಿದೆಯಾಗಿ ಹಲವು ನಾಟಕಗಳು, ಏಕಾಂಕಗಳ ಮೂಲಕ ಪರಿಚಿತರಾಗಿದ್ದಾರೆ. ಕವಯಿತ್ರಿ, ಲೇಖಕಿ ಹೀಗೆ ಬೇರೆ ಬೇರೆ ನೆಲೆ ಮಾರ್ಗಗಳ ಮೂಲಕ ತನ್ನ ಹೋರಾಟಗಳನ್ನು ಸಕ್ರಿಯವಾಗಿ ಇರಿಸಿಕೊಂಡವರು. ಅವರ ಕಾವ್ಯ, ನಾಟಕ, ಹೋರಾಟ ಇವೆಲ್ಲವೂ ಒಂದೇ ದೇಹದ ವಿವಿಧ ಭಾಗಗಳಂತೆ ಅನ್ಯೋನ್ಯವಾಗಿವೆ. ಸದ್ಯದ ಸಾಂಸ್ಕೃತಿಕ ರಾಜಕಾರಣಗಳನ್ನು ಜನರ ಭಾಷೆಯಲ್ಲೇ ಜನರಿಗೆ ತಲುಪಿಸುತ್ತಿರುವ ಹೆಗ್ಗಳಿಕೆ ಅವರದು. ‘ಸಣ್ತಿಮ್ಮಿ ಪುರಾಣ’ ಆರು ಏಕಾಂಕಗಳ ಸಂಗ್ರಹವಾಗಿದೆ. ಇಲ್ಲಿ ಸಣ್ತಿಮ್ಮಿಯ ಕಣ್ಣಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಂಗತಿಗಳನ್ನು ಸರಸ್ವತಿ ಅವರು ನೋಡಿದ್ದಾರೆ.
ಇಂದು ರಾಜಕಾರಣಿಗಳು, ಸ್ವಾಮೀಜಿಗಳು, ಸಾಹಿತಿಗಳು, ಚಿಂತಕರು ಪುರಾಣಗಳ ಕುರಿತಂತೆ ಮಾತನಾಡುತ್ತಾರೆ. ಅವರ ಕಣ್ಣಲ್ಲಿ ಪುರಾಣಗಳನ್ನು ನೋಡುವಂತೆ ಜನರನ್ನು ಒತ್ತಾಯಿಸುತ್ತಾರೆ. ಜನರೂ ಅದಕ್ಕೆ ಮರುಳಾಗುತ್ತಾರೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಸಣ್ತಿಮ್ಮಿಯಂತಹ ಗ್ರಾಮೀಣ ಹೆಣ್ಣು ಮಕ್ಕಳು ನೋಡುವ ಪುರಾಣಗಳಿವೆ. ರಾಮಾಯಣಗಳಿವೆ. ಅದರಲ್ಲಿ ಅವರ ಬದುಕು, ನೋವು, ಜಂಜಡಗಳಿವೆ. ಸಣ್ತಿಮ್ಮಿ ಪುರಾಣ ಆ ಸಂಗತಿಗಳನ್ನು ಅದೇ ಗ್ರಾಮೀಣ ಭಾಷೆಯಲ್ಲಿ ತೆರೆದಿಡುತ್ತದೆ. ಒಂದು ರೀತಿಯಲ್ಲಿ ನಗರದ ಜನರ ಭಾಷೆಯನ್ನು, ಪುರಾಣಗಳನ್ನು ವ್ಯಂಗ್ಯ ಮಾಡುತ್ತದೆ. ಶಿಷ್ಟ ಪುರಾಣಗಳಿಗೆ ಪ್ರತಿಯಾಗಿ ಜಾನಪದ ಪುರಾಣಗಳನ್ನು ಸೆಲೆಯಾಗಿ ಇಟ್ಟುಕೊಂಡು ಸಣ್ತಿಮ್ಮಿ ಮಾತನಾಡುತ್ತಾಳೆ. ಪಾತ್ರಗಳನ್ನು ವಿಶ್ಲೇಷಿಸುತ್ತಾಳೆ.
‘ರಾಮಾಯ್ಣ’ದಲ್ಲಿ ರಾಮ ಮತ್ತೆ ತನ್ನ್ನನ್ನು ಅಯೋಧ್ಯೆಗೆ ಕರೆದಾಗ ಸೀತೆ ಹೀಗೆ ಪ್ರತ್ಯುತ್ತರ ಕೊಡುತ್ತಾಳೆ ‘‘ಯಾವ್ದಪ್ಪ ನನ್ ತಾವು? ಈಗ ಈ ಬೂಮ್ತಾಯಿನೇ ನನ್ ತಾವು. ಮಕ್ಳು ದೊಡ್ಡವಾದ್‌ವು ಅವ್ಕೆನೂ ನನ್ ಅಗತ್ಯ ಇಲ್ಲ. ನಿಂಗಂತೂ ಕುದ್ಯೋ ವಯಸ್ನಾಗೆ ನನ್ನ ಅಗತ್ಯ ಇದ್ದಿಲ್ಲ. ಸಿಟ್ಟೇನೂ ಇಲ್ಲ ನಿನ್ ಮ್ಯಾಗೆ. ನಾನಿಲ್ದಿದ್ದಾಗ ನನ್ ಜಾಗ್ದಾಗೆ ಇನ್ಯಾರೂ ಇರ್ಬಾರ್ದು ಅಂತ ನನ್ನ ಇಗ್ರಹ ಇಟ್ಕಂಡೆ. ಇಗ್ರಹವೇ ಸಾಕು ಬಿಡು ನಿನ್ಗೆ....’’ ಬಹುಶಃ ಸೀತೆ ಹಳ್ಳಿಗಮಾರಳ ಭಾಷೆಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲಿರಬೇಕು. ದೇವನೂರ ಮಹಾದೇವ ತಮ್ಮ ಕತೆಗಳಿಗೆ ದಲಿತ ಭಾಷೆಯನ್ನು ಬಳಸಿದ ಬಳಿಕ ಅದನ್ನು ನಾಟಕಗಳೂ ಸೇರಿದಂತೆ ವಿವಿಧ ಪ್ರಕಾರಗಳಿಗೆ ದುಡಿಸಿಕೊಂಡವರಲ್ಲಿ ಸರಸ್ವತಿಯೂ ಒಬ್ಬರು. ಇಲ್ಲಿರುವ ಏಕಾಂಕಗಳಲ್ಲಿ ಸಣ್ತಿಮ್ಮಿ ರಾಜಕೀಯದ ಬಗ್ಗೆ ಮಾತನಾಡುತ್ತಾಳೆ. ಸಮಾಜವನ್ನು ತನ್ನ ಬುಕಿನ ನೋಟದಲ್ಲಿ ವಿಶ್ಲೇಷಿಸುತ್ತಾಳೆ.
ಬರೀ ಭಾಷೆಯ ಮೂಲಕ ಮಾತ್ರವಲ್ಲ, ತನ್ನೊಳಗೆ ಬಚ್ಚಿಟ್ಟುಕೊಂಡ ಬೆಂಕಿಯ ಮೂಲಕ ಸಣ್ತಿಮ್ಮಿಯ ಮಾತುಗಳು ನಮ್ಮನ್ನು ತೀವ್ರವಾಗಿ ಕಾಡುತ್ತದೆ. ಆಲೋಚನೆಗೆ ಹಚ್ಚುತ್ತದೆ. ಕವಿ ಪ್ರಕಾಶನ ಹೊನ್ನಾವರ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 104. ಮುಖಬೆಲೆ 80 ರೂ. ಆಸಕ್ತರು 94826 42147 ದೂರವಾಣಿಯನ್ನು ಸಂಪರ್ಕಿಸಬಹುದು.