ಆಧುನಿಕ ಸಂಶೋಧನೆ: ಕೆಲವು ತಾತ್ವಿಕ ಸಂದಿಗ್ಧಗಳು
ಇತ್ತೀಚೆಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನೆ ಕೇಂದ್ರದಲ್ಲಿ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್ ಹೆಗ್ಡೆ ಪ್ರಶಸ್ತಿಯನ್ನು ಇತಿಹಾಸ ಸಂಶೋಧಕ ಡಾ. ಬಿ. ಜಗದೀಶ್ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಆ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರು, ಇತಿಹಾಸ ಸಂಶೋಧಕರಾದ ಡಾ. ಸುರೇಶ್ ರೈ, ಡಾ. ಪುಂಡಿಕಾ ಗಣಪಯ್ಯ ಭಟ್ ಮತ್ತು ಪ್ರಶಸ್ತಿ ಸಮಿತಿಯ ಡಾ. ಇಂದಿರಾ ಹೆಗ್ಡೆಯವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಇಂದಿನ ಸಂಶೋಧನಾ ಸ್ಥಿತಿಯ ಕುರಿತಾದ ಒಂದು ಧ್ಯಾನ ಈ ಬರಹ.
‘‘ಮೂರು ವಿಷಯಗಳನ್ನು ಬಹಳ ದೀರ್ಘಕಾಲದವರೆಗೆ ಅಡಗಿಸಿಡಲು ಸಾಧ್ಯವಿಲ್ಲ. ಸೂರ್ಯ, ಚಂದ್ರ ಮತ್ತು ಸತ್ಯ’’
-ಗೌತಮ ಬುದ್ಧ
ಯಾವುದು ವಾಸ್ತವಕ್ಕೆ ಅನುಗುಣವಾಗಿದೆಯೋ ಅದು ಸತ್ಯ ಎಂದಾದಲ್ಲಿ ಅಥವಾ ಸತ್ಯವೆಂದು ಯಾವುದನ್ನು ಅಥವಾ ಯಾವ ನಂಬಿಕೆಯನ್ನು ಒಪ್ಪಿಕೊಳ್ಳಲಾಗಿದೆಯೋ ಅದು ಸತ್ಯ ಎಂದಾದಲ್ಲಿ ಸತ್ಯದ ಸಂಶೋಧನೆಯಾಗಿರುವ ಸಂಶೋಧನೆ ಬಹಳ ಸಂದರ್ಭಗಳಲ್ಲಿ ‘ಸತ್ಯವನ್ನು ಬುಡಮೇಲುಗೊಳಿಸುವ’ ಪ್ರಯತ್ನವಾಗದೆ ಇದ್ದಲ್ಲಿ ಅದು ನಿಜವಾದ ಸಂಶೋಧನೆಯಾಗಲಾರದು. ಈ ಮಾತು ಶುದ್ಧ ವಿಜ್ಞಾನಕ್ಕಿಂತ ಮಿಗಿಲಾಗಿ ಇತಿಹಾಸ, ಸಮಾಜಶಾಸ್ತ್ರದಂತಹ ಮಾನವಿಕ ವಿಷಯಗಳ ಮಟ್ಟಿಗೆ ಹೆಚ್ಚು ಸತ್ಯ ಎಂದು ತಿಳಿದವ ನಾನು. ಯಾಕೆಂದರೆ ಒಂದು ಸಮಾಜ, ಒಂದು ಸಮುದಾಯ ಅಥವಾ ಒಂದು ವ್ಯವಸ್ಥೆ ಯಾವುದನ್ನು ಸತ್ಯ ಎಂದು ಒಪ್ಪಿ, ನಂಬಿ ಬದುಕುತ್ತ ಬಂದಿರುತ್ತದೋ, ಆ ಸತ್ಯವು ಸತ್ಯವಲ್ಲದೆ ಇರಬಹುದು ಎಂಬುವುದನ್ನು ಒಬ್ಬ ಸಂಶೋಧಕ ತನ್ನ ಸಂಶೋಧನೆಯಿಂದ ಸಾಬೀತುಪಡಿಸಬೇಕಾಗುತ್ತದೆ. ಈ ಅರ್ಥದಲ್ಲಿ ಸಾಕ್ರಟಿಸ್, ಯೇಸುಕ್ರಿಸ್ತ, ಬುದ್ಧ, ಬಸವ, ಗೆಲಿಲಿಯೊ, ಗಾಂಧಿ, ಅಂಬೇಡ್ಕರ್ ಎಲ್ಲರೂ ಸಂಶೋಧಕರೇ. ಅವರವರ ಕಾಲದವರೆಗೆ ಆಯಾ ಕಾಲದ ಜನ ಯಾವುದನ್ನು ಸತ್ಯ ಎಂದು ತಿಳಿದು, ನಂಬಿ ಬದುಕುತ್ತ ಬಂದಿದ್ದರೋ, ಯಾವ ವಿಧಿವಿಧಾನಗಳನ್ನು, ಸಾಮಾಜಿಕ-ಧಾರ್ಮಿಕ ಆಚರಣೆಗಳನ್ನು ಆಚರಿಸುತ್ತಾ, ತಮ್ಮ ಸುತ್ತಣ ಪ್ರಪಂಚವನ್ನು ಕೇವಲ ವ್ಯಾಖ್ಯಾನಿಸುತ್ತಾ, ಬದಲಾಯಿಸದೇ ಇದ್ದರೋ ಅಂತಹ ಆಚರಣೆಗಳನ್ನು, ನಂಬಿಕೆಗಳನ್ನು ಪ್ರಶ್ನಿಸಿ ಸಮಾಜವನ್ನು ವ್ಯವಸ್ಥೆಯನ್ನು ಬದಲಿಸಲು ಶ್ರಮಿಸಿದ ಮಹಾತ್ಮರು ಇವರು. ಗಾಂಧಿಯ ಹಾಗೆಯೇ ಸತ್ಯದೊಂದಿಗೆ ಪ್ರಯೋಗಗಳನ್ನು ನಡೆಸುತ್ತಾ ಸತ್ಯದ ಹುಡುಕಾಟದಲ್ಲಿ ಸತ್ಯದ ಅನುಸಂಧಾನದಲ್ಲಿ ತೊಡಗಿದವರು.
‘‘ಸತ್ಯವು ಶೂಗಳನ್ನು ಹಾಕಿಕೊಳ್ಳುವಷ್ಟರಲ್ಲಿ ಒಂದು ಸುಳ್ಳು ವಿಶ್ವದ ಅರ್ಧ ಭಾಗದಷ್ಟು ದೂರ ಪ್ರಯಾಣಿಸಬಲ್ಲದು.’’ ಎಂದು ಇಂಗ್ಲಿಷ್ ಬ್ಯಾಪ್ಟಿಸ್ಟ್ ಪ್ರವಚನಕಾರ ಚಾರ್ಲ್ಸ್ ಸ್ಪರ್ಜನ್‌ನ ಮಾತನ್ನು ಜ್ಞಾಪಿಸಿಕೊಳ್ಳುವುದಾದರೆ, ಸುಳ್ಳು ಅಷ್ಟೊಂದು ವೇಗವಾಗಿ ಪ್ರಯಾಣಿಸದಂತೆ ತಡೆದವರು ಇವರು. ಸಂಶೋಧನಾ ವಿದ್ಯಾರ್ಥಿಯೊಬ್ಬ ಚಲನಶೀಲ ಕಾಲದ ಯಾವುದೋ ಒಂದು ಕಾಲಘಟ್ಟದಲ್ಲಿ ಬದುಕಿ ಬಾಳಿದ ಒಂದು ಸಮುದಾಯದ ಸಾಮಾಜಿಕ ಸಾಂಸ್ಕೃತಿಕ-ಧಾರ್ಮಿಕ ಬದುಕಿಗೆ ಸಂಬಂಧಿಸಿದ ಶಿಲಾಶಾಸನಗಳನ್ನೋ, ತಾಳೆಗರಿಗಳನ್ನೋ ಪ್ರಾಚೀನ ಪತ್ರಗಳನ್ನೋ ಅಥವಾ ಕಡತಗಳನ್ನೋ ಅಧ್ಯಯನ ಮಾಡಿ ಸತ್ಯ ಸಂಗತಿಗಳನ್ನು ಸಂಶೋಧಿಸುತ್ತಾನೆ. ಆದರೆ ಆತ ಅಥವಾ ಓರ್ವ ವಿದ್ವಾಂಸ ಹೊರಗೆಡಹುವ ಸತ್ಯ ಯಾರ ವ್ಯಾಖ್ಯಾನದ ಸತ್ಯ? ಯಾರು ಯಾವ ನೆಲೆಯಲ್ಲಿ ನಿಂತು ಕಂಡುಕೊಂಡ ಸತ್ಯ? ಅದು ಪ್ರಭುತ್ವದ, ಪಾಳೆಗಾರಿಕೆಯ ಆಳುವವರ ಮರ್ಜಿಗೆ ಅನುಗುಣವಾದ ಸತ್ಯವೋ? ಅಥವಾ ಆಳಿಸಿಕೊಳ್ಳುವವರ ಸತ್ಯವೋ? ಹಿಟ್ಲರ್‌ನ ವ್ಯಾಖ್ಯಾನದ ಪ್ರಕಾರದ ಸತ್ಯವೋ? ಗಾಂಧಿಯ ಸತ್ಯವೋ? ಅಥವಾ ಗೋಡ್ಸೆಯ ಸತ್ಯವೋ? ವ್ಯಾಸರು ಮಹಾಭಾರತದ ಅಂತ್ಯದಲ್ಲಿ ಕಾಣಿಸುವ ಸತ್ಯವೋ? ಅಥವಾ ‘‘ನಾವು ಪಾಂಡವರು ನೀವು/ ಇತರರು ಕೌರವರು’’ ಎನ್ನುವವರ ಸತ್ಯವೋ? ಈ ದೇಶವನ್ನು ಸುಮಾರು ಇನ್ನೂರು ವರ್ಷಗಳ ಕಾಲ ಆಳಿದ ಬ್ರಿಟಿಷರು ಅವರ ವಿರುದ್ಧ ಹೋರಾಡಿದ ಟಿಪ್ಪುವಿನ ಬಗ್ಗೆ ಸಂಶೋಧಿಸಿದ ಸತ್ಯವೋ? ಅಥವಾ ಸ್ವಾತಂತ್ರಾನಂತರದ ಇತಿಹಾಸ ಪಠ್ಯಪುಸ್ತಕಗಳು ಒಬ್ಬನೇ ದೊರೆಯ ಬಗ್ಗೆ ಎರಡು ಸತ್ಯಗಳನ್ನು ಸ್ಥಾಪಿಸುತ್ತವೆ.
ಉದಾಹರಣೆಗೆ ಈ ಕೆಳಗಿನ ಎರಡು ಭಾಗಗಳನ್ನು ಓದಿ:
‘‘ಈ ವೇಳೆಗೆ 8 ವರ್ಷಗಳ ಕಾಲ ರಾಜ್ಯವಾಳಿದ ಟಿಪ್ಪುವು, ಮಲೆಯಾಳವನ್ನೂ, ಕೊಡಗನ್ನೂ ಮೈಸೂರಿನ ಸುತ್ತಮುತ್ತಲೂ ಇದ್ದ ಇತರ ದೇಶಗಳನ್ನು ಜಯಿಸಿ ಸ್ವಾಧೀನ ಮಾಡಿಕೊಂಡಿದ್ದನು. ಅದರಿಂದ ಗರ್ವೋದೃತನಾಗಿ ಹಿಂದೂ ದೇಶದಲ್ಲಿ ತಾನೇ ಅದ್ವಿತೀಯ ಪರಾಕ್ರಮಿ ಎಂದು ಭಾವಿಸಿಕೊಂಡಿದ್ದನು. ಇವನೂ ಔರಂಗಜೇಬನಂತೆಯೇ ತನ್ನಿಂದ ಪರಾಜಿತರಾದವರನ್ನೆಲ್ಲ ಬಲಾತ್ಕಾರದಿಂದ ಮಹಮ್ಮದೀಯ ಮತಕ್ಕೆ ಸೇರಿಸುತ್ತಲೂ ಅದಕ್ಕೆ ಇಷ್ಟಪಡದವರನ್ನು ಸಾವಿರ ಸಾವಿರವಾಗಿ ಕೊಲ್ಲುತ್ತಲೂ ಇದ್ದನು. ಇವನಿಗೆ ಇಂಗ್ಲಿಷರ ನೆರಳನ್ನು ಕಂಡರಾಗದು. ಎಂದಾದರೂ ಅವರನ್ನೆಲ್ಲ ಈ ದೇಶದಿಂದ ಅಟ್ಟಿ ಬಿಡುವುದಾಗಿ ಬಹಿರಂಗವಾಗಿ ಪ್ರತಿಜ್ಞೆ ಮಾಡಿದ್ದನು’’.
(ಹಿಂದೂ ದೇಶದ ಚರಿತ್ರೆ- ಲೋವರ್ ಸೆಕೆಂಡರಿ ತರಗತಿಗಳಿಗೆ-ಮ್ಯಾಕ್ ಮಿಲನ್ ಮತ್ತು ಕಂಪೆನಿ ಲಿಮಿಟೆಡ್-1927)
ಅದೇ ಟಿಪ್ಪು ಸುಲ್ತಾನನ ಬಗ್ಗೆ 50 ವರ್ಷಗಳ ಬಳಿಕ ಕರ್ನಾಟಕದಲ್ಲಿ ಪಠ್ಯಪುಸ್ತಕ ಹೇಳುವ ಸತ್ಯ ಇದು.
‘‘ಟಿಪ್ಪು ಸುಲ್ತಾನ್ ಮೈಸೂರಿನ ಪ್ರಬಲ ಆಡಳಿತಗಾರ, ಅವನು ನೀತಿವಂತನೂ, ದೇವರಲ್ಲಿ ಅಪಾರವಾದ ಭಕ್ತಿವುಳ್ಳವನೂ ಆಗಿದ್ದನು. ಒಳ್ಳೆಯ ವಿದ್ಯಾವಂತ. ಕನ್ನಡ, ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಸರಾಗವಾಗಿ ಮಾತನಾಡಬಲ್ಲವನಾಗಿದ್ದನು. ಒಂದು ದೊಡ್ಡ ಗ್ರಂಥ ಭಂಡಾರವನ್ನು ಹೊಂದಿದ್ದನು. ಧೀರಯೋಧನಾದ ಟಿಪ್ಪುಸುಲ್ತಾನ್ ಚಂಚಲ ಸ್ವಭಾವದವನಾಗಿದ್ದನು. ಅವನು ಇಂಗ್ಲಿಷರ ಪ್ರಬಲ ಶತ್ರುವಾಗಿದ್ದನು. ಸ್ವಾತಂತ್ರ ಪ್ರಿಯನಾಗಿದ್ದ ಅವನಿಗೆ ‘ಮೈಸೂರು ಹುಲಿ’ ಎಂಬ ಹೆಸರು ಸಾರ್ಥಕವಾಯಿತು. ಇಂಗ್ಲಿಷರ ವಿರುದ್ಧ ಸಹಾಯ ಪಡೆಯಲು ಕಾಬೂಲ್, ಪರ್ಷಿಯಾ, ಫ್ರಾನ್ಸ್ ಮತ್ತು ಕಾನ್‌ಸ್ಟಾಂಟಿ ನೋಪಲ್‌ಗಳೊಡನೆ ಸಂಪರ್ಕ ಹೊಂದಿದ್ದನು. (ಸಮಾಜ ಪಾಠಗಳು-10ನೇ ತರಗತಿ)
ಟಿಪ್ಪುವಿನ ನಿಧನದ (1799) ನಂತರ ಸುಮಾರು ಒಂದು ಶತಮಾನದ ಕಾಲ ಆತನ ಬದುಕು ಮತ್ತು ಆಳ್ವಿಕೆಯ ಬಗ್ಗೆ ಸಂಶೋಧನೆ ನಡೆಸಿದ ವಿದ್ವಾಂಸರ, ಇತಿಹಾಸಕಾರರ ತೀರ್ಮಾನಗಳು, ಒಳನೋಟಗಳು, ‘ಮ್ಯಾಕ್‌ಮಿಲನ್ ಮತ್ತು ಕಂಪೆನಿ’ಯ ಇತಿಹಾಸ ಪಠ್ಯದಲ್ಲಿ ದಾಖಲಾಗಿರುವುದಾದಲ್ಲಿ, ಸ್ವಾತಂತ್ರಾ ನಂತರದ ಇತಿಹಾಸಕಾರರ ಸಂಶೋಧನೆಗಳ ಫಲಿತಾಂಶಗಳು 1970ರ ದಶಕದ ಇತಿಹಾಸ ಪಠ್ಯದಲ್ಲಿ ದಾಖಲಾಗಿವೆ ಎಂದಂತಾಯಿತು. ಹಾಗಾದರೆ ಈ ಎರಡು ರೀತಿಯ ದಾಖಲೆಗಳಲ್ಲಿರುವ ಎರಡು ರೀತಿಯ ಸತ್ಯಗಳಲ್ಲಿ ಇಂದಿನ, ಆಧುನಿಕ ಸಂಶೋಧಕ ಯಾವ ‘ಸತ್ಯ’ದ ಜಾಡಿನಲ್ಲಿ ಸಾಗಬೇಕು? ಆಳುವ ವರ್ಗ ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ ಸಂಶೋಧಿಸುವ, ಬರೆಸುವ ಇತಿಹಾಸದ ಜಾಡಿನಲ್ಲೋ? ಅಥವಾ ಜನಸಮುದಾಯದ ಹಿತಾಸಕ್ತಿಗಳ ರಕ್ಷಣೆಗಾಗಿ ಇತಿಹಾಸಕಾರನೊಬ್ಬ ನಡೆಸುವ ವಸ್ತುನಿಷ್ಠ ಸಂಶೋಧನೆಯ ಸತ್ಯದ ಹಾದಿಯಲ್ಲೋ?
19ನೇ ಮತ್ತು 20ನೇ ಶತಮಾನದ ಆದಿಭಾಗದಲ್ಲಿ ನಡೆಯುತ್ತಿದ್ದ ಸಂಶೋಧನೆಗಳು ವಸ್ತುನಿಷ್ಠವಾಗಿರದೆ, ವ್ಯಕ್ತಿನಿಷ್ಠವಾಗಿದ್ದವು; ಈಗ ಪುನಃ ವ್ಯಕ್ತಿನಿಷ್ಠವಾದ, ಸ್ಥಳೀಯವಾದ ಇತಿಹಾಸವನ್ನು ಜನರಿಗೆ ಪರಿಚಯಿಸುವ ಒಲವು ಕಾಣಿಸುತ್ತಿದೆ ಎಂಬ ಅಭಿಪ್ರಾಯ ಇ್ತತೀಚೆಗೆ ವ್ಯಾಪಕವಾಗುತ್ತಿದೆ. ಆದರೆ ಸ್ಥಳೀಯ ಇತಿಹಾಸವನ್ನು ಈಗ ಸಂಶೋಧನೆಗೆ ಆಯ್ದುಕೊಳ್ಳುವುದು ಪೊಳಲಿ ಶೀನಪ್ಪ ಹೆಗ್ಡೆ, ಡಾ. ಪಿ. ಗುರುರಾಜ ಭಟ್‌ರಂತಹ ವಿದ್ವಾಂಸರ ಕಾಲದಲ್ಲಿದ್ದಂತೆ ಸುಲಭದ ಆಯ್ಕೆಯಾಗಿ ಉಳಿದಿಲ್ಲ. ಸ್ಥಳೀಯ ಇತಿಹಾಸವು ರಾಷ್ಟ್ರೀಯ ಇತಿಹಾಸದ ಸರಪಳಿಯಲ್ಲೊಂದು ಮಹತ್ವದ ಕೊಂಡಿಯಾಗಿದೆ ಎಂಬುದನ್ನು ಹಲವಾರು ವರ್ಷಗಳ ಹಿಂದೆಯೇ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ ಎಂಬುದು ನಿಜವಾದರೂ ಈಗ ಸ್ಥಳೀಯ ಇತಿಹಾಸವನ್ನು ಸಂಶೋಧಿಸುವ ಸಂಶೋಧಕ ಸ್ಥಳೀಯ ಪ್ರಭುತ್ವದ, ಸ್ಥಳೀಯ ಧಾರ್ಮಿಕ-ರಾಜಕೀಯ-ಸಾಂಸ್ಕೃತಿಕ ಮಾಫಿಯಾದ ಹಿತಾಸಕ್ತಿಗಳಿಗೆ ಪೂರಕವಾಗುವಂತೆ ಸಂಶೋಧನೆಯ ಫಲಿತಾಂಶಗಳು ಬರುವ ಹಾಗೆ ನೋಡಿಕೊಳ್ಳಬೇಕಾದ ಒತ್ತಡದಲ್ಲಿರುತ್ತಾನೆ. ತುಳುನಾಡಿನ, ಕರಾವಳಿ ಕರ್ನಾಟಕದ ಧಾರ್ಮಿಕ ಸಾಮಾಜಿಕ ಆಚರಣೆಗಳ ಬಗ್ಗೆ ‘‘ಒಂದು ಅಧ್ಯಯನ’’ ಎಂಬ ಹಣೆಪಟ್ಟಿಯ ಅಡಿಯಲ್ಲಿ ನಡೆಸುವ ಸಂಶೋಧನೆಗಳಂತೂ ಸ್ಥಳೀಯ ‘ಟೈರಂಟ್’ಗಳ ಹಿತಾಸಕ್ತಿಗಳಿಗೆ ಪೂರಕವಾಗುವಂತೆಯೇ ಇರಬೇಕಾಗುತ್ತದೆ.
ಇದಕ್ಕೆ ಬದಲಾಗಿ ‘ವಸ್ತುನಿಷ್ಠ’ ಸಂಶೋಧನೆ ಎಂದು ಸತ್ಯವನ್ನೇ ಹೇಳುತ್ತೇನೆಂದು ಹೊರಟಲ್ಲಿ ಆತ ಡಾ. ಎಂ. ಎಂ. ಕಲಬುರ್ಗಿಯವರನ್ನು ಸದಾ ಜ್ಞಾಪಿಸಿಕೊಳ್ಳುತ್ತಾ ಇರಬೇಕಾಗುತ್ತದೆ. ಯಾಕೆಂದರೆ ಸಂಶೋಧನೆಯ ರಂಗದಲ್ಲಿ ಪಾಶ್ಚಾತ್ಯ ಜಗತ್ತಿನಲ್ಲಿ ಸಂಶೋಧಕರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ, ರಕ್ಷಣೆ, ಭದ್ರತೆ ಮಹಾನ್ ಭಾರತದಲ್ಲಿ ಇಲ್ಲ. ಪ್ರಭುತ್ವದ, ಯಥಾಸ್ಥಿತಿವಾದಿಗಳ ಹಿತಾಸಕ್ತಿಗಳಿಗೆ, ಲಾಗಾಯಿತಿನ ನಂಬಿಕೆಗಳಿಗೆ ಪೂರಕವಲ್ಲದ ಅಥವಾ ಮಾರಕವೆನಿಸುವ ಒಳನೋಟಗಳನ್ನು, ತೀರ್ಮಾನಗಳನ್ನು ನೀಡುವ ಇತಿಹಾಸತಜ್ಞನನ್ನು, ವಿದ್ವಾಂಸನನ್ನು ಗೌರವಿಸುವ ಮಾತು ಹಾಗಿರಲಿ; ಸಹಿಸುವ ವ್ಯವಧಾನ ಕೂಡ ನಮ್ಮ ವ್ಯವಸ್ಥೆಗೆ ಇಲ್ಲ. ಇರುತ್ತಿದ್ದಲ್ಲಿ ಕರ್ನಾಟಕದ ಮಹಾ ಸಂಶೋಧಕ ಡಾ.ಕಲಬುರ್ಗಿಯವರ ಹಣೆಯನ್ನು ಗುಂಡು ಹೊಕ್ಕುತ್ತಿರಲಿಲ್ಲ.
ಹಲವು ಸಂದರ್ಭಗಳಲ್ಲಿ ಸಂಶೋಧಕನೊಬ್ಬ, ಡಾ.ಕಲಬುರ್ಗಿಯವರ ಹಾಗೆ, ಅಂಗೀಕೃತ ಐತಿಹಾಸಿಕ ಸಿದ್ಧಾಂತಗಳನ್ನು ಸ್ವೀಕೃತ ನಿಲುವುಗಳನ್ನು ಅನುಮಾನಿಸಬೇಕಾಗಬಹುದು; ಪ್ರಶ್ನಿಸಬೇಕಾಗಬಹುದು. ಆದರೆ, ಹೀಗೆ ಅನುಮಾನಿಸದಂತೆ, ಪ್ರಶ್ನಿಸದಂತೆ ತಡೆಯುವ ವ್ಯವಸ್ಥೆಯ ಕಬಂಧಬಾಹುಗಳನ್ನು ಗುರುತಿಸಿ, ಅವುಗಳನ್ನು ಮೀರಿ ಸಂಶೋಧನೆ ನಡೆಸುವುದು, ಪ್ರಶ್ನಿಸುವುದನ್ನೇ ಒಂದು ಅಪರಾಧವೆಂದು ಪರಿಗಣಿಸುವ ಇಂದಿನ ಪ್ರಭುತ್ವದಲ್ಲಿ ಸಾಧ್ಯವೇ? ಎಷ್ಟರ ಮಟ್ಟಿಗೆ ಸಾಧ್ಯ? ‘‘ನೀವು ಏನುಬೇಕಾದರೂ ಸಂಶೋಧನೆ ಮಾಡಿ. ನಿಮಗೆ ಎಷ್ಟು ಸಂಶೋಧನಾ ಅನುದಾನ ಬೇಕು? ಹೇಳಿ. ಅದನ್ನೂ ನಾವು ಮಂಜೂರು ಮಾಡುತ್ತೇವೆ. (ಮಾಜಿ ಮುಖ್ಯಂತ್ರಿಯೊಬ್ಬರು ಸಾರ್ವಜನಿಕ ಭಾಷಣವೊಂದರಲ್ಲಿ ಹೇಳಿದ ಹಾಗೆ; ‘‘ನನ್ನ ಹತ್ರ ದುಡ್ಡಿದೆ. ನಿಮ್ಗೆ ಎಷ್ಟು ಬೇಕು, ಹೇಳಿ. ಯಾವ ಯೋಜನೆಗೆ ಬೇಕು, ಹೇಳಿ. ನಾನು ಕೊಡುತ್ತೇನೆ.’’) ಆದರೆ...ಆದರೆ ನಮ್ಮನ್ನು ಪ್ರಶ್ನಿಸಬೇಡಿ. ನಾವು ಮಾಡುವುದನ್ನು ನಮ್ಮ ಧೋರಣೆಗಳನ್ನು ಪ್ರಶ್ನೆ ಮಾಡಬೇಡಿ’’ ಎಂದು ಹೇಳುವ ಒಂದು ಪ್ರಭುತ್ವ, ಒಂದು ವ್ಯವಸ್ಥೆ ಸಮಕಾಲೀನ ಭಾರತದಲ್ಲಿ ಆಧುನಿಕ ಸಂಶೋಧನೆಗೆ ಇರುವ ಒಂದು ದೊಡ್ಡ ಸವಾಲು. ಮುಖ್ಯವಾಗಿ ಆಫ್ರಿಕಾದಲ್ಲಿ, ವೈದ್ಯಕೀಯ ಸೇವಾ ರಂಗದಲ್ಲಿ ಬಳಕೆಯಾಗುತ್ತಿರುವ ‘ಮೈಕ್ರೊ ರಿಸರ್ಚ್’ ಅಥವಾ ‘ಇಂಕ್ವಾಯರಿ ಬೇಸ್ಡ್ ಲರ್ನಿಂಗ್’ ಅಂತರ್-ಶಿಸ್ತು ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತದೆ.
ಹೊಸ ಹಾಗೂ ಸ್ಥಾಪಿತ ರಂಗಗಳಲ್ಲಿ, ಅಕಡಮಿಕ್ಸ್‌ಗಳಲ್ಲಿ ವಿಮರ್ಶಾತ್ಮವಾದ ಹಾಗೂ ಹೊಸ ಹೊಸ ಅಭಿಪ್ರಾಯಗಳನ್ನು ಗೌರವಿಸಿ ಗತಿಶೀಲವಾದ(ಡೈನಾಮಿಕ್) ಒಂದು ಚರ್ಚೆಗೆ ಅವಕಾಶ ಮಾಡಿಕೊಡುವುದು ಮೈಕ್ರೊರಿಸರ್ಚ್‌ನ ಉದ್ದೇಶ ಮತ್ತು ಗುರಿ. ಆದರೆ ಭಿನ್ನಾಭಿಪ್ರಾಯಗಳನ್ನು, ಪ್ರಶ್ನೆಗಳನ್ನು ಸಹಿಸದ ಒಂದು ವ್ಯವಸ್ಥೆಯಲ್ಲಿ, ಸಂಶೋಧಕನೊಬ್ಬ ವಸ್ತುನಿಷ್ಠವಾದ ಅಧ್ಯಯನ ನಡೆಸಿ ಹೊರಗೆಡಹುವ ಸತ್ಯಾಕ್ಕಾಗಿ ಮಿದುಳು ತೊಳೆತಕ್ಕೊಳಗಾದ ಹಂತಕನ ಗುಂಡಿಗೆ ಬಲಿಯಾಗಬೇಕಾಗಬಹುದಾದ ಒಂದು ಸಮಾಜದಲ್ಲಿ, ನಿಜವಾದ ಅರ್ಥದಲ್ಲಿ ಸಂಶೋಧನೆ ಸಾಧ್ಯವೇ? ಅಥವಾ ‘ವ್ಯಕ್ತಿನಿಷ್ಠ ಸಂಶೋಧನೆ’ಯ ಹೆಸರಿನಲ್ಲಿ ಒಂದು ಜನಾಂಗದ, ಜನಸಮುದಾಯದ ಕುರಿತು ಸಿಗುವ ಎಲ್ಲ ಮಾಹಿತಿಗಳನ್ನು, ದಾಖಲೆಗಳನ್ನು ‘ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ 250 -300 ಪುಟಗಳ ಒಂದು ‘ಮಹಾಪ್ರಬಂಧ’ವಾಗಿ ಸಲ್ಲಿಸಿ ನೌಕರಿಯಲ್ಲಿ ವಿಶೇಷ ಭತ್ತೆ, ಪದೋನ್ನತಿ ಪಡೆಯುವುದಷ್ಟೆ ಸಾಧ್ಯವೇ?