ಶಿವಮೊಗ್ಗ ಎಪಿಎಂಸಿ ಆಡಳಿತ - ದಿನಸಿ ಚಿಲ್ಲರೆ ವರ್ತಕರ ನಡುವೆ ಜಂಗೀಕುಸ್ತಿ: ನೋಟೀಸ್ ಜಾರಿ
ಪ್ರತಿಭಟನೆಯ ಮೂಲಕ ಆಕ್ರೋಶ
ಶಿವಮೊಗ್ಗ, ಜು. 4: ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಾಗೂ ಇದರ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ದಿನಸಿ ಚಿಲ್ಲರೆ ವರ್ತಕರ ನಡುವೆ, ಕಳೆದ ಕೆಲ ದಿನಗಳಿಂದ ನಡೆದುಕೊಂಡು ಬರುತ್ತಿದ್ದ 'ಮುಸುಕಿನ ಗುದ್ದಾಟ' ಇದೀಗ ತಾರಕಕ್ಕೇರಿದೆ. ಎರಡೂ ಕಡೆಯವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಭಾರೀ ಹೈಡ್ರಾಮಕ್ಕೆ ವೇದಿಕೆಯಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಕೆಲ ದಿನಬಳಕೆ ವಸ್ತುಗಳ ಚಿಲ್ಲರೆ ವ್ಯಾಪಾರ ಸ್ಥಗಿತಗೊಳಿಸುವಂತೆ ನೀಡಿದ್ದ ಸೂಚನೆ ಪಾಲಿಸದ ರಿಟೇಲ್ ದಿನಸಿ ವರ್ತಕರಿಗೆ, ಎಪಿಎಂಸಿ ಕಾರ್ಯದರ್ಶಿ ನೋಟೀಸ್ ಜಾರಿಗೊಳಿಸಿದ್ದಾರೆ. ಶಿಸ್ತುಕ್ರಮದ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ನೋಟೀಸ್‍ಗೆ ರೀಟೇಲ್ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಎಪಿಎಂಸಿ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಹಿಂದಿನಂತೆ ವಹಿವಾಟು ನಡೆಸಿಕೊಂಡು ಹೋಗಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್‍ರವರು ಗುರುವಾರ ಎಪಿಎಂಸಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ವರ್ತಕ ಪ್ರತಿನಿಧಿಗಳ ಸಭೆ ನಡೆಸಲು ನಿರ್ಧರಿಸಿದ್ದಾರೆ. ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಮತ್ತೊಂದೆಡೆ ವರ್ತಕರು ಎಪಿಎಂಸಿಯ ಮುಂದಿನ ನಡೆಯ ನಂತರ ಹೋರಾಟದ ರೂಪುರೇಷೆ ಸಿದ್ದಪಡಿಸಲು ನಿರ್ಧರಿಸಿದ್ದಾರೆ.
ಏನಿದು ಗೊಂದಲ?: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರೈತರ ಕೃಷಿ ಉತ್ಪನ್ನಗಳ ಮಾರಾಟದ ಜೊತೆಜೊತೆಗೆ ದಿನಸಿ ವಸ್ತುಗಳ ಮಾರಾಟ ಅಂಗಡಿಗಳ ಕಾರ್ಯನಿರ್ವಹಣೆಗೂ ಅವಕಾಶ ಕಲ್ಪಿಸಲಾಗಿದೆ. ಕಳೆದ ಸುಮಾರು 40-45 ವರ್ಷಗಳ ಹಿಂದೆ ಪ್ರಾಂಗಣದಲ್ಲಿ ದಿನಸಿ ವಸ್ತು ಮಾರಾಟಕ್ಕೆ ಯಾರೊಬ್ಬರು ಮುಂದಾಗದಂತಹ ಸ್ಥಿತಿಯಿತ್ತು. ಯಾವುದೇ ಪೈಪೋಟಿಯಿರಲಿಲ್ಲ. ಪ್ರಾಂಗಣದಲ್ಲಿ ವ್ಯವಹಾರ ನಡೆಸುವಂತೆ ಕೆಲ ದಿನಸಿ ವರ್ತಕರನ್ನು ಮನವೊಲಿಸಿ, ಹಿಂದಿನ ಎಪಿಎಂಸಿ ಆಡಳಿತ ಕರೆತಂದಿದ್ದ ಊದಾಹರಣೆಗಳೂ ಇವೆ.
ಕಾಲ ಬದಲಾದಂತೆ ಪ್ರಾಂಗಣದಲ್ಲಿ ದಿನಸಿ ವ್ಯಾಪಾರ ಮಳಿಗೆಗಳು ಹೆಚ್ಚಾದವು. ಪ್ರಸ್ತುತ ಪೈಪೋಟಿಯ ಹಂತಕ್ಕೆ ಉದ್ಯಮ ಬೆಳೆದಿದೆ. ಎಪಿಎಂಸಿ ಮೂಲಗಳು ಹೇಳುವ ಪ್ರಕಾರ, ಸುಮಾರು 250 ದಿನಸಿ ವಸ್ತು ಮಾರಾಟ ಸಂಬಂಧಿತ ಅಂಗಡಿಗಳು ಪ್ರಾಂಗಣದಲ್ಲಿ ವ್ಯವಹಾರ ನಡೆಸಿಕೊಂಡು ಬರುತ್ತಿವೆ.
ಇದರಲ್ಲಿ ಬಹುತೇಕ ಹೋಲ್‍ಸೇಲ್ ಅಂಗಡಿಗಳಾಗಿವೆ. ಉಳಿದಂತೆ ಕೆಲವರು ರೀಟೇಲ್ ವ್ಯವಹಾರ ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಶ್ಯಾಂಪು, ಸೋಪು, ಗುಟ್ಕಾ ಸೇರಿದಂತೆ ಮತ್ತಿತರ ದಿನಬಳಕೆ ವಸ್ತುಗಳ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡದಂತೆ ಕೆಲ ದಿನಸಿ ವರ್ತಕರು ಈ ಹಿಂದಿನಿಂದಲೂ ಎಪಿಎಂಸಿ ಆಡಳಿತಕ್ಕೆ ಒತ್ತಾಯಿಸಿಕೊಂಡು ಬರುತ್ತಿದ್ದರು.
ಸೂಚನೆ ನೀಡಿತ್ತು: ಈ ಹಿನ್ನೆಲೆಯಲ್ಲಿ ಕೆಲ ದಿನ ಬಳಕೆ ವಸ್ತುಗಳ ಚಿಲ್ಲರೆ ವ್ಯಾಪಾರ ನಡೆಸದಂತೆ, ಎಪಿಎಂಸಿ ಆಡಳಿತ ಕೂಡ ಸಂಬಂಧಿಸಿದ ವರ್ತಕರಿಗೆ ಸೂಚನೆ ನೀಡಿತ್ತು. ಮೌಖಿಕವಾಗಿ ತಿಳಿಸುವ ಕೆಲಸ ಕೂಡ ಮಾಡಿಕೊಂಡು ಬಂದಿತ್ತು. ಮತ್ತೊಂದೆಡೆ ವರ್ತಕರು ಇದ್ಯಾವುದಕ್ಕೂ ಸೊಪ್ಪು ಹಾಕಿರಲಿಲ್ಲ. ಈ ನಡುವೆ ಎಪಿಎಂಸಿ ಆಡಳಿತವು ಕೆಲ ರಿಟೇಲ್ ವರ್ತಕರಿಗೆ ನೋಟೀಸ್ ಜಾರಿಗೊಳಿಸಿತ್ತು. ದಿನ ಬಳಕೆಯ ಕೆಲ ವಸ್ತುಗಳನ್ನು ಚಿಲ್ಲರೆ ರೂಪದಲ್ಲಿ ಮಾರಾಟ ನಡೆಸದಂತೆ ಸೂಚನೆ ನೀಡಿತ್ತು.
ಭಿನ್ನಾಭಿಪ್ರಾಯ: ಇದು ಭಿನ್ನಾಭಿಪ್ರಾಯಕ್ಕೆ ಎಡೆ ಮಾಟಿಕೊಟ್ಟಿದೆ. ರಿಟೇಲ್ ವರ್ತಕರು ಈ ಹಿಂದಿನಂತೆ ವ್ಯಾಪಾರ-ವಹಿವಾಟು ನಡೆಸಿಕೊಂಡು ಹೋಗಲು ಅನುವು ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಎಪಿಎಂಸಿ ಆಡಳಿತವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಎರಡೂ ಕಡೆಯವರು ತಮ್ಮ ನಿಲುವುಗಳಿಗೆ ಬಿಗಿಯಾಗಿ ಅಂಟಿಕೊಂಡಿದ್ದಾರೆ.
ಪ್ರತಿಭಟನೆ: ನೋಟೀಸ್ ನೀಡಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬುಧವಾರ ದಿನಸಿ ವರ್ತಕರು ಎಪಿಎಂಸಿ ಪ್ರಾಂಗಣದ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಈ ಹಿಂದಿನಂತೆ ವ್ಯಾಪಾರ-ವಹಿವಾಟು ನಡೆಸಿಕೊಂಡು ಹೋಗಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ನೀಡಲಾಗಿರುವ ನೋಟೀಸ್ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಚರ್ಚಿಸಿ ನಿಯಮಾನುಸಾರ ಕ್ರಮ: ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್
'ಚಿಲ್ಲರೆ ದಿನಸಿ ವರ್ತಕರಿಗೆ ನೋಟೀಸ್ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ, ತಾನು ಎಪಿಎಂಸಿ ಕಾರ್ಯದರ್ಶಿಗಳು ಹಾಗೂ ಸಂಬಂಧಿಸಿದ ವರ್ತಕರ ಜೊತೆ ಚರ್ಚೆ ನಡೆಸುತ್ತೆನೆ. ಎಪಿಎಂಸಿ ಬೈಲಾದ ನಿಯಮದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಕೆಲ ದಿನಸಿ ವರ್ತಕರು ಎಪಿಎಂಸಿ ಆವರಣದಲ್ಲಿ ಚಿಲ್ಲರೆ ವ್ಯಾಪಾರ ನಡೆಸುತ್ತಿರುವ ರಿಟೇಲ್ ವರ್ತಕರ ವಿರುದ್ದ ಅಹವಾಲು ಸಲ್ಲಿಸಿದ್ದರು. ಸೋಪು ಮತ್ತಿತರ ದಿನ ಬಳಕೆಯ ಕೆಲ ವಸ್ತುಗಳ ರಿಟೇಲ್ ಮಾರಾಟಕ್ಕೆ ಅವಕಾಶ ನೀಡದಂತೆ ಆಗ್ರಹಿಸಿದ್ದರು. ಇದು ಎಪಿಎಂಸಿ ನಿಯಮಾವಳಿಗೆ ವಿರುದ್ದವಾಗಿದೆ ಎಂದಿದ್ದರು. ಇದರ ಆಧಾರದ ಮೇಲೆ ಚಿಲ್ಲರೆ ವರ್ತಕರಿಗೆ ಎಪಿಎಂಸಿ ಅಧಿಕಾರಿಗಳು ತಿಳಿವಳಿಕೆ ನೀಡಿದ್ದರು. ಕೆಲ ವಸ್ತುಗಳ ರಿಟೇಲ್ ವ್ಯಾಪಾರ ನಡೆಸದಂತೆ ಸೂಚಿಸಿದ್ದರು' ಎಂದು ತಿಳಿಸಿದ್ದಾರೆ. ಇದರ ಹೊರತಾಗಿಯೂ ಕೆಲ ರಿಟೇಲ್ ವರ್ತಕರು, ದಿನಬಳಕೆ ವಸ್ತುಗಳ ಚಿಲ್ಲರೆ ವ್ಯಾಪಾರ ಮುಂದುವರಿಸಿದ ಕಾರಣದಿಂದ ನೋಟೀಸ್ ಜಾರಿಗೊಳಿಸಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ತಾವು ಗುರುವಾರ ಅಧಿಕಾರಿಗಳು ಹಾಗೂ ವರ್ತಕ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸುತ್ತೆನೆ. ತದನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ' ಎಸ್.ಎಸ್.ಜ್ಯೋತಿಪ್ರಕಾಶ್‍ರವರು ಮಾಹಿತಿ ನೀಡಿದ್ದಾರೆ.
ಸ್ಪಷ್ಟ ನೀತಿ-ನಿಯಮಗಳೇ ಇಲ್ಲ
ಎಪಿಎಂಸಿ ಪ್ರಾಂಗಣದಲ್ಲಿ ದಿನಸಿ ಉದ್ಯಮಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಬೈಲಾದಲ್ಲಿ ಸ್ಪಷ್ಟ ನೀತಿ-ನಿಯಮಗಳೇ ಇಲ್ಲವಾಗಿದೆ. ಇದನ್ನು ಸ್ವತಃ ಎಪಿಎಂಸಿ ಅಧಿಕಾರಿಗಳೇ ಹೇಳುತ್ತಾರೆ. ಕಳೆದ ಸುಮಾರು 50 ವರ್ಷಗಳ ಹಿಂದೆ ಮಾಡಿಕೊಂಡಿದ್ದ ನಿಯಮಗಳೇ ಈಗಲೂ ಚಾಲ್ತಿಯಲ್ಲಿದೆ. ಇದರ ಆಧಾರದ ಮೇಲೆ ದಿನಸಿ ವ್ಯವಹಾರ ನಡೆದುಕೊಂಡು ಬರುತ್ತಿದೆ. ಕಾಲಕ್ಕೆ ಅನುಗುಣವಾಗಿ ಬೈಲಾದ ನಿಯಮಗಳ ಪರಿಷ್ಕರಣೆಯಾಗದಿರುವುದೇ ಪ್ರಸ್ತುತ ಉದ್ಭವವಾಗಿರುವ ಗೊಂದಲಗಳಿಗೆ ಮೂಲ ಕಾರಣವಾಗಿದೆ ಎಂದು ಹೇಳುತ್ತಾರೆ. ಇದೀಗ ಎಪಿಎಂಸಿ ಆಡಳಿತ ಮಂಡಳಿ ಕೂಡ ದಿನಸಿ ಉದ್ಯಮಕ್ಕೆ ಸಂಬಂಧಿಸಿದಂತೆ ತನ್ನ ಬೈಲಾದಲ್ಲಿ ಕೆಲ ನಿಯಮಾವಳಿಗಳ ಪರಿಷ್ಕರಣೆಗೆ ನಿರ್ಧರಿಸಿದ್ದು, ಈ ಸಂಬಂಧ ಮುಂದಿನ ಎಪಿಎಂಸಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.