ಭಾರತೀಯ ಉನ್ನತ ಶಿಕ್ಷಣ ಆಯೋಗ: ಖಾಸಗೀಕರಣ ಮತ್ತು ಶ್ರೇಣೀಕೃತ ಶಿಕ್ಷಣ ವ್ಯವಸ್ಥೆ ಕಡೆಗೆ

ಭಾಗ-1
ಕೇಂದ್ರದ ಬಿಜೆಪಿ ಸರಕಾರ 27, ಜೂನ್ 2018ರಂದು ಯುಜಿಸಿ (ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗ) ಯನ್ನು ವಿಸರ್ಜಿಸಿ ಅದರ ಜಾಗದಲ್ಲಿ ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು (ಎಚ್‌ಇಸಿಐ) ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದೆ. ಇದನ್ನು ಶಿಕ್ಷಣ ಕ್ಷೇತ್ರದಲ್ಲಿನ ಬಲು ದೊಡ್ಡ ಸುಧಾರಣೆ ಎಂದು ಮೋದಿ ಸರಕಾರ ಬಣ್ಣಿಸಿದೆ. ಬದಲಾವಣೆಗೊಂಡ ಈ ಕರಡಿನಲ್ಲಿ ಉನ್ನತ ಶಿಕ್ಷಣ ಆಯೋಗದ ಸ್ವರೂಪದೊಳಗೆ ಘಟಕವಾಗಿ ಮತ್ತೊಂದು ಆಯೋಗವಿರುತ್ತದೆ. ಇದಕ್ಕೆ ಆಡಳಿತಾತ್ಮಕ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುತ್ತದೆ. ಇದರಲ್ಲಿ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷ ಮತ್ತು 12 ಸದಸ್ಯರಿರುತ್ತಾರೆ. ಮಾನವ ಸಂಪನ್ಮೂಲ ಇಲಾಖೆಯಿಂದ ಒಬ್ಬ ನಿಯೋಜಿತ ಅಧಿಕಾರಿ ಅಧಿಕೃತ ಸದಸ್ಯರಾಗಿರುತ್ತಾರೆ. ಇದರ ಅಧ್ಯಕ್ಷ ಭಾರತ ಸರಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿರುತ್ತಾರೆ. ಈ ಸದಸ್ಯರ ಪೈಕಿ 3 ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿರುತ್ತಾರೆ, AICTE and NCTEಗಳಿಂದ 2 ಸದಸ್ಯರಿರುತ್ತಾರೆ. ನ್ಯಾಕ್‌ನಿಂದ 2 ಸದಸ್ಯರಿರುತ್ತಾರೆ.
ಉದ್ಯಮ ವಲಯದ ಹಿರಿಯ ಬಂಡವಾಳಶಾಹಿ ಒಬ್ಬರು ಸದಸ್ಯರಿರುತ್ತಾರೆ. ಉಳಿದಂತೆ ಕೇವಲ 2 ಅಧ್ಯಾಪಕರು ಸದಸ್ಯರಾಗಿರುತ್ತಾರೆ. ಹಿಂದಿನ ಯುಜಿಸಿ ಆ್ಯಕ್ಟ್‌ನ ಪ್ರಕಾರ 10 ಅಧ್ಯಾಪಕರು ಸದಸ್ಯರಾಗಬೇಕಿತ್ತು. ಆದರೆ ಈ ಹೊಸ ಶಿಕ್ಷಣ ಆಯೋಗದಲ್ಲಿ ಕೇವಲ 2 ಅಧ್ಯಾಪಕರು ಸದಸ್ಯರಾಗಿರುತ್ತಾರೆ. ಈ ಆಯೋಗದ ಅಧ್ಯಕ್ಷರು ಭಾರತೀಯ ಅಥವಾ ಅನಿವಾಸಿ ಭಾರತೀಯನಾಗಿರಬಹುದು. ಅಂದರೆ ಮೋದಿ ಸರಕಾರವು ಎಚ್‌ಸಿಐ ಮೂಲಕ ಶೈಕ್ಷಣಿಕ ಸುಧಾರಣೆಯ ಬದಲಾಗಿ ಆಡಳಿತ ಸುಧಾರಣೆಯನ್ನು ಆದ್ಯತೆಯಾಗಿ ಪರಿಗಣಿಸಿದಂತಿದೆ. ಇಲ್ಲಿ ಮಾನವ ಸಂಪನ್ಮೂಲ ಇಲಾಖೆಯು ಸಹ ಈ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಾಗಿರುತ್ತದೆ. ಈ ಕಾರಣಕ್ಕಾಗಿ ಇಲ್ಲಿ ಆರೆಸ್ಸ್ಸೆಸ್ ಹಿನ್ನೆಲೆಯವರು ಅಧ್ಯಕ್ಷರಾಗುವ, ಸದಸ್ಯರಾಗುವ ಎಲ್ಲಾ ಸಾಧ್ಯತೆಗಳಿವೆ. ಅಲ್ಲದೆ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಸ್ವರೂಪವನ್ನು, ನೀತಿ ನಿಯಮಾವಳಿಗಳನ್ನು ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅಧ್ಯಕ್ಷರ, ಸದಸ್ಯರ ಆಯ್ಕೆ ನೇಮಕಾತಿ ದಲಿತ, ತಳ ಸಮುದಾಯ, ಅಲ್ಪ ಸಂಖ್ಯಾತರನ್ನು ಒಳಗೊಂಡಂತೆ ನೇಮಕವಾಗುತ್ತದೆಯೇ ಎನ್ನುವುದರ ಕುರಿತು ಈ ಕರಡು ಮಸೂದೆ ಮೌನವಾಗಿದೆ.
ಆಯೋಗದಲ್ಲಿ ಮತ್ತೊಂದು ಘಟಕವಾಗಿ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಲಹಾ ಸಮಿತಿಗೆ ಶಿಕ್ಷಣ ಇಲಾಖೆಯ ಮಂತ್ರಿ ಅಧ್ಯಕ್ಷರಾಗಿರುತ್ತಾರೆ. ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳ ಸಮಿತಿಗಳ ಅಧ್ಯಕ್ಷರು ಈ ಸಲಹಾ ಸಮಿತಿಯಲ್ಲಿ ಅಧಿಕಾರ ನಿಮಿತ್ತ ಸದಸ್ಯರಾಗಿರುತ್ತಾರೆ. ಈ ಸಮಿತಿಗೆ ತನ್ನ ಅಭಿಪ್ರಾಯಗಳನ್ನು, ಸಲಹೆಗಳನ್ನು ಕೇವಲ ಶಿಫಾರಸು ಮಾಡುವ ಅಧಿಕಾರವಿರುತ್ತದೆ. ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಆದರೆ ಸಲಹಾ ಸಮಿತಿಯ ಈ ಶಿಫಾರಸುಗಳನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಮೇಲಿನ ಆಯೋಗ ಮತ್ತು ಇಲಾಖೆಗೆ ನೀಡಲಾಗಿದೆ. ಈ ಆ್ಯಕ್ಟ್ ಗಳು ಶೈಕ್ಷಣಿಕ, ಆಡಳಿತಾತ್ಮಕ ಚರ್ಚೆ ಮತ್ತು ನಿರ್ಣಯಗಳ ಸಂದರ್ಭದಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆಯನ್ನೇ ನಿರ್ಬಂಧಿಸುತ್ತದೆ. ರಾಜ್ಯಗಳು ತಮ್ಮ ಸಲಹೆಗಳನ್ನು ಮಂಡಿಸಬಹುದೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಆ ಮೂಲಕ ಪ್ರಜಾಪ್ರಭುತ್ವದ ಒಕ್ಕೂಟದ ಆಶಯಗಳನ್ನೇ ದುರ್ಬಲಗೊಳಿಸುತ್ತದೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಕೇಂದ್ರೀಕರಣಗೊಳಿಸುತ್ತದೆ. ಉನ್ನತ ಶಿಕ್ಷಣ ಆಯೋಗದ ಕರಡಿನಲ್ಲಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ನಿಯಂತ್ರಣ ಪ್ರಾಧಿಕಾರವನ್ನು ಮತ್ತಷ್ಟು ಬಲಗೊಳಿಸಲು ಆಮೂಲಗ್ರವಾದ ಸುಧಾರಣೆಗಳನ್ನು ತರಲು ಉದ್ದೇಶಿಸಿದೆ ಎಂದು ಹೇಳಲಾಗಿದೆ.
ಅಂದರೆ ನಿರಂಕುಶ ಪ್ರಭುತ್ವವನ್ನು ಸಾಧಿಸಲು ಶಿಕ್ಷಣ ಸುಧಾರಣೆಯ ಹೆಸರಿನಲ್ಲಿ ಈ ಮಾದರಿಯ ಬದಲಾವಣೆಗಳನ್ನು ತರಲಾಗುತ್ತಿದೆ. ಇದು ಉತ್ಪ್ರೇಕ್ಷೆ ಎನ್ನುವಂತಿಲ್ಲ. ಇತ್ತೀಚಿನ ಹೈದರಾಬಾದ್, ಜೆಎನ್‌ಯು, ಜಾದವಪುರ, ಅಲಿಗಡ, ಬನಾರಸ್, ದಿಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಶೈಕ್ಷಣಿಕ ಅಧ್ಯಯನಗಳ ಮತೀಯವಾದೀಕರಣದಂತಹ ವಿದ್ಯಮಾನಗಳನ್ನು ಅವಲೋಕಿಸಿದಾಗ, ಈ ಹೊಸದಾದ ಎಚ್‌ಇಸಿಐ ಮೂಲಕ ಶಿಕ್ಷಣದ, ಕಲಿಕೆಯ ಸ್ವಾತಂತ್ರಕ್ಕೆ ಧಕ್ಕೆ ಉಂಟು ಮಾಡುವ, ಆಡಳಿತಾತ್ಮಕ ನಿಯಂತ್ರಣದ ಹೆಸರಿನಲ್ಲಿ ಶಿಕ್ಷಾರ್ಹ ಕಾನೂನುಗಳನ್ನು ರೂಪಿಸುವ ಸಾಧ್ಯತೆಗಳಿವೆ. ಪ್ರೊ. ಸಚಿನ್ ನಿರ್ಮಲ ನಾರಾಯಣ್ ಅವರು ಈ ಹೊಸ ಆಯೋಗದ ಮೂಲಕ ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕವಾಗಿ ತಪಾಸಣೆ ರಾಜ್ ಅನ್ನು ಕೊನೆಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಅಂಗೀಕೃತ (Accreditation) ರಾಜ್ ಉದ್ಘಾಟನೆಯಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಎಲ್ಲಾ ಗೊಂದಲ ಮತ್ತು ಮೋದಿ ಸರಕಾರದ ಏಕಪಕ್ಷೀಯ ನಿರ್ಧಾರಗಳಿಗೆ ಮೂಲವು 2005ರಲ್ಲಿ ಆಗಿನ ಯುಪಿಎ ಸರಕಾರ ರಚಿಸಿದ ರಾಷ್ಟ್ರೀಯ ಜ್ಞಾನ ಆಯೋಗದ ಶಿಫಾರಸುಗಳಲ್ಲಿದೆ. ಈ ಜ್ಞಾನ ಆಯೋಗವು ಉನ್ನತ ಶಿಕ್ಷಣದಲ್ಲಿ ಸ್ವತಂತ್ರವಾದ ನಿಯಂತ್ರಣ ಪ್ರಾಧಿಕಾರದ ರಚನೆಗೆ ಒಲವು ವ್ಯಕ್ತಪಡಿಸುತ್ತದೆ. ನಂತರ ಬಂದ ಯಶಪಾಲ್ ಸಮಿತಿಯು ಏಕ ಗವಾಕ್ಷಿ ನಿಯಂತ್ರಣ ಪ್ರಾಧಿಕಾರದ ಪರವಾಗಿ ಮಾತನಾಡುತ್ತದೆ. ಅಂದರೆ ಈಗಿರುವ ಸ್ವರೂಪದಲ್ಲಿ ಕೇಂದ್ರದಲ್ಲಿ ಯುಜಿಸಿ ಮತ್ತು ಅದರ ಅಡಿಯಲ್ಲಿ ಬರುವ ಕೇಂದ್ರ, ರಾಜ್ಯ ವಿಶ್ವ ವಿದ್ಯಾನಿಲಯಗಳು, ವೈದ್ಯಕೀಯ, ನರ್ಸಿಂಗ್, ತಂತ್ರಜ್ಞಾನ, ಕೃಷಿ, ಲೆಕ್ಕ ಪರಿಶೋಧಕ, ವಾಸ್ತುಶಿಲ್ಪ ಇತರೆ ವಲಯಗಳಿಗೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಘಟಕಗಳಿರುತ್ತವೆ. ಇವೆಲ್ಲವನ್ನೂ ವಿಸರ್ಜಿಸಿ ಎಲ್ಲವನ್ನು ಒಂದೇ ಆಯೋಗದಡಿ ತರಬೇಕೆಂದು ಯಶಪಾಲ್ ಸಮಿತಿ ಶಿಫಾರಸು ಮಾಡಿತ್ತು. ಆಗಿನ ಯುಪಿಎ ಸರಕಾರದ ಶಿಕ್ಷಣ ಸಚಿವರಾಗಿದ್ದ ಕಪಿಲ್ ಸಿಬಲ್ ಅವರು ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸಿ ಏಕಗವಾಕ್ಷಿ ಅಡಿಯಲ್ಲಿ ನಿಯಂತ್ರಣ ಸಾಧಿಸಲು ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ರಾಷ್ಟ್ರೀಯ ಮಂಡಳಿ ತರಲು ಉದ್ದೇಶಿಸಿದ್ದರು.