ಭಾರತೀಯ ಉನ್ನತ ಶಿಕ್ಷಣ ಆಯೋಗ: ಖಾಸಗೀಕರಣ ಮತ್ತು ಶ್ರೇಣೀಕೃತ ಶಿಕ್ಷಣ ವ್ಯವಸ್ಥೆ ಕಡೆಗೆ

ಯುಜಿಸಿಯ ಮಾಜಿ ಅಧ್ಯಕ್ಷ ಶಿಕ್ಷಣ ತಜ್ಞ ಸುಖದೇವ ಥೋರಟ್ ಅವರು ‘‘ಯಶಪಾಲ್ ಮತ್ತು ಜ್ಞಾನ ಆಯೋಗವು ಮೇಲಿನ ಮಾದರಿಯ ಬಿಡಿ ಬಿಡಿಯಾದ ಆಡಳಿತ ವ್ಯವಸ್ಥೆಯು ಎಂದಿಗೂ ಅನುಕೂಲಕರವಲ್ಲ, ಉನ್ನತ ಶಿಕ್ಷಣದಲ್ಲಿ ಏಕ ಗವಾಕ್ಷಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇರಬೇಕಾಗುತ್ತದೆ, ಆಗಲೇ ನಿಯಂತ್ರಣ ಸುಲಭವಾಗುತ್ತದೆ ಎಂದು ವರದಿ ನೀಡಿದೆ. ಆ ವರದಿಯೇ ಇಂದಿನ ಈ ಹೊಸ ಉನ್ನತ ಶಿಕ್ಷಣ ಆಯೋಗದ ಪ್ರಸ್ತಾವನೆಗೆ ಬುನಾದಿಯಾಗಿದೆ. ಈ ಹೊಸದಾದ ಉನ್ನತ ಶಿಕ್ಷಣ ಆಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಆಡಳಿತ ಮತ್ತು ಶೈಕ್ಷಣಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಯಾವುದೇ ಜವಾಬ್ದಾರಿಯಿರುವುದಿಲ್ಲ. ಇಲ್ಲಿ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಸಮಿತಿ ಇರುತ್ತದೆ. ಈ ಸಮಿತಿಯು ತನ್ನ ಅಧ್ಯಕ್ಷ ಮತ್ತು ಸದಸ್ಯರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತದೆ. ಆದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ, ಕಡೆಗೂ ಮಾನವ ಸಂಪನ್ಮೂಲ ಇಲಾಖೆಗೆ ಅಂತಿಮವಾದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರವಿರುತ್ತದೆ. ಉನ್ನತ ಶಿಕ್ಷಣದಲ್ಲಿ ರಾಜ್ಯಗಳನ್ನು ಒಳಗೊಳ್ಳಬೇಕಾಗುತ್ತದೆ, ಅವರಿಗೂ ನೀತಿ ನಿರೂಪಣೆಯಲ್ಲಿ ಉತ್ತರದಾಯಿತ್ವವಿರುತ್ತದೆ ಮತ್ತು ಬಾಧ್ಯತೆಯಿರುತ್ತದೆ. ಆದರೆ ಈ ಹೊಸ ಕರಡಿನಲ್ಲಿ ರಾಜ್ಯಗಳಿಗೆ ಬಾಧ್ಯತೆಯ, ಉತ್ತರದಾಯಿತ್ವದ ಅವಕಾಶವನ್ನು ನೀಡಿಲ್ಲ. ಈ ಹಿಂದೆ ಯುಜಿಸಿಯು ಎರಡು ಶ್ರೇಣಿಯ ವ್ಯವಸ್ಥೆಯನ್ನು ಶಿಫಾರಸು ಮಾಡಿತ್ತು. ಅದರಲ್ಲಿ ಆಯೋಗ ಮತ್ತು ಆಡಳಿತ ಮಂಡಳಿ ಇರುತ್ತದೆ. ಈ ಆಡಳಿತ ಮಂಡಳಿಯು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ ಮತ್ತು ವೈದ್ಯಕೀಯ, ತಂತ್ರಜ್ಞಾನ, ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ನರ್ಸಿಂಗ್ ವಲಯಗಳಿಂದಲೂ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಈ ಪ್ರತಿನಿಧಿಗಳಿಗೆ ನೀತಿ-ನಿರೂಪಣೆಯಲ್ಲಿ, ನಿರ್ಣಯ ರೂಪಿಸುವಲ್ಲಿ ಗುರುತರವಾದ ಜವಾಬ್ದಾರಿಯಿರುತ್ತದೆ ಮತ್ತು ಉತ್ತರದಾಯಿತ್ವವಿರುತ್ತದೆ. ಪ್ರತಿ ಹಂತದಲ್ಲಿಯೂ ಅವರ ಸಲಹೆ ಪಡೆದುಕೊಂಡು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇದು ಅತ್ಯಂತ ಸೌಹಾರ್ದವಾದ ವ್ಯವಸ್ಥೆಯಾಗುತ್ತದೆ. ಆದರೆ ಈ ಹೊಸದಾದ ಉನ್ನತ ಶಿಕ್ಷಣ ಆಯೋಗವು ಈ ಎಲ್ಲಾ ಆಶಯಗಳನ್ನು ಕೈಬಿಟ್ಟಿದೆ’’ ಎಂದು ಹೇಳುತ್ತಾರೆ. ಮತ್ತೊಂದು ಗಮನಾರ್ಹ ಶಿಫಾರಸೆಂದರೆ ಈ ಹೊಸದಾದ ಉನ್ನತ ಶಿಕ್ಷಣ ಆಯೋಗಕ್ಕೆ ಹಣಕಾಸಿನ ಜವಾಬ್ದಾರಿ ನೀಡಿಲ್ಲ. ಎಚ್‌ಇಸಿಐ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟದ ಮೇಲೆ ಮಾತ್ರ ಹೆಚ್ಚಿನ ಸುಧಾರಣೆಗಳನ್ನು ತರಬೇಕು, ಅದಕ್ಕೆ ಹಣಕಾಸಿನ ನಿರ್ವಹಣೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಪ್ರತಿಪಾದಿಸಿರುವ ಮಾನವ ಸಂಪನ್ಮೂಲ ಇಲಾಖೆ ಆಡಳಿತ/ಶೈಕ್ಷಣಿಕ ಹಾಗೂ ಹಣಕಾಸಿನ ನಿರ್ವಹಣೆ ಎರಡನ್ನು ಪ್ರತ್ಯೇಕಿಸಿದೆ. ಎಚ್‌ಇಸಿಐ ಕೇವಲ ಶೈಕ್ಷಣಿಕ ಮತ್ತು ಆಡಳಿತದ ಜವಾಬ್ದಾರಿ ಹೊಂದಿರುತ್ತದೆ. ಹಣಕಾಸಿನ ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಮಾನವ ಸಂಪನ್ಮೂಲ ಇಲಾಖೆಗೆ ವಹಿಸಲಾಗಿದೆ. ಇದರಿಂದಾಗಿ ಈ ಹೊಸ ಆಯೋಗವು ತನ್ನ ಆಡಳಿತಾತ್ಮಕ ನಿರ್ಣಯಗಳಿಗೆ ಅವಶ್ಯಕವಾದ ಹಣಕಾಸಿನ ನೆರವನ್ನು ಶಿಕ್ಷಣ ಇಲಾಖೆಯ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಉನ್ನತ ಶಿಕ್ಷಣದ ಹಣಕಾಸಿನ ಜವಾಬ್ದಾರಿಯು ನೇರವಾಗಿ ಒಂದು ರಾಜಕೀಯ ಪಕ್ಷ ಆಡಳಿತವಿರುವ ಇಲಾಖೆಯ ಸುಪರ್ದಿಗೆ ಸೇರಿದಾಗ ಇಡೀ ಧನ ಸಹಾಯದ, ವಿನಿಯೋಗದ ಪ್ರಕ್ರಿಯೆಯು ರಾಜಕೀಯಗೊಳ್ಳುತ್ತದೆ. ಆಗ ಎಲ್ಲಾ ಕೇಂದ್ರ, ರಾಜ್ಯ ವಿವಿಗಳು ಈ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ರಾಜ್ಯಗಳು ತನ್ನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಇಲಾಖೆಯಿಂದ ಸೂಕ್ತ ಹಣಕಾಸಿನ ನೆರವು ಕಡಿತಗೊಳ್ಳುವ ಭಯದ ಕತ್ತಿ ಸದಾ ತೂಗಾಡುತ್ತಿರುತ್ತದೆ. ಈ ಪರಾವಲಂಭಿತನವು ಶಿಕ್ಷಣದ ಆಯೋಗದ ಹಲ್ಲು, ಉಗುರುಗಳನ್ನು ಕಿತ್ತಂತಾಗುತ್ತದೆ. ಜೊತೆಗೆ ಮಾನವ ಸಂಪನ್ಮೂಲ ಇಲಾಖೆಯು ವಿಶ್ವ ವಿದ್ಯಾನಿಲಯಗಳ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅವಕಾಶ ಕಲ್ಪಿಸಿಕೊಡುತ್ತದೆ. ಅಲ್ಲಿಗೆ ಅದರ ಸ್ವಾಯತ್ತತೆಗೆ ಧಕ್ಕೆ ಉಂಟಾಗುತ್ತದೆ. ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸಬೇಕಾದ ಸಂದರ್ಭದಲ್ಲಿ ಈ ಉನ್ನತ ಶಿಕ್ಷಣ ಆಯೋಗದ ಸ್ವರೂಪವು ಸರಕಾರವೇ ಆರ್ಥಿಕ ಅನುದಾನವನ್ನು ಕಡಿತಗೊಳಿಸಲು ಸಹಕಾರಿಯಾಗುವಂತೆ ರಚನೆಯಾಗಲಿದೆ. (2017ರಲ್ಲಿ ಸಿಎಜಿ ತನ್ನ ವರದಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ( 2006-2017) ಶಿಕ್ಷಣ ಸೆಸ್ ಮೂಲಕ 83,497 ಕೋಟಿ ಮೊತ್ತವನ್ನು ಸಂಗ್ರಹಿಸಲಾಗಿದೆ. ಆದರೆ ಇದುವರೆಗೂ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ ಎಂದು ಹೇಳಿದೆ)
ಥೋರಟ್ ಅವರು ‘‘ಇಂಗ್ಲೆಂಡ್ ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣದಲ್ಲಿನ ಹಣಕಾಸಿನ ಹಂಚಿಕೆ ಮತ್ತು ಅನುದಾನದ ಜವಾಬ್ದಾರಿಯು ಆಯೋಗಕ್ಕೆ ವಹಿಸಲಾಗುತ್ತದೆ, ಇಲಾಖೆಗಳ ವ್ಯಾಪ್ತಿಗೆ ಬರುವುದಿಲ್ಲ. ಧನ ಸಹಾಯದ ಎಲ್ಲಾ ಚಟುವಟಿಕೆಗಳು ರಾಜಕಾರಣದಿಂದ ಮುಕ್ತವಾಗಿರಬೇಕು ಎಂದು ಹೇಳುತ್ತಾರೆ. ಯೋಜನಾ ಆಯೋಗದಲ್ಲಿ ಶಿಕ್ಷಣಕ್ಕೆ ಕುರಿತಂತೆ ಪ್ರಧಾನ ಸಲಹೆಗಾರರಾಗಿದ್ದ ಅಮಿತಾಭ್ ಭಟ್ಟಾಚಾರ್ಯ ಅವರು ಶೇ. 50 ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ರಾಜ್ಯ ವಿಶ್ವ ವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಈ ರಾಜ್ಯ ವಿವಿಗಳಿಗೆ ಧನ ಸಹಾಯ ಮಾಡುವಾಗ ಎಲ್ಲಿಯೂ ಆರ್ಥಿಕ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಪಾರದರ್ಶಕ ವ್ಯವಸ್ಥೆಯಿರಬೇಕಾಗುತ್ತದೆ. ಆದರೆ ಉನ್ನತ ಶಿಕ್ಷಣ ಆಯೋಗವು ಹಣಕಾಸಿನ ನಿರ್ವಹಣೆ ಮೇಲೆ ಅಧಿಕಾರವಿಲ್ಲದೆ ಎಷ್ಟರ ಮಟ್ಟಿಗೆ ಆಡಳಿತದಲ್ಲಿ ಸುಧಾರಣೆ ತರಬಲ್ಲದು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.’’ ಎಂದು ಹೇಳುತ್ತಾರೆ ನವ ಉದಾರೀಕರಣದ ಡಬ್ಲ್ಲೂಟಿಒ-ಗ್ಯಾಟ್ ಆದೇಶದಲ್ಲಿ ಬಂಡವಾಳಶಾಹಿ ಹಣಕಾಸಿನ ಕುರಿತು ಹೇಳುವಾಗ, ‘‘ಶಿಕ್ಷಣವು ಒಂದು ಹಕ್ಕಲ್ಲ ಬದಲಾಗಿ ಲಾಭದಾಯಕವಾದ ಉದ್ಯಮ ಎಂದು ಪರಿಗಣಿಸಬೇಕು ಹೀಗಾಗಿ ಅದನ್ನು ವ್ಯಾಪಾರೀಕರಣಗೊಳಿಸಬೇಕು’’ ಎಂದು ಉಲ್ಲೇಖಿಸಿದೆ. ಪಿ.ವಿ.ನರಸಿಂಹರಾವ್‌ರಿಂದ ಮೊದಲುಗೊಂಡು ವಾಜಪೇಯಿ, ಮನಮೋಹನ್ ಸಿಂಗ್ ಸರಕಾರಗಳೂ ಸಹ ಡಬ್ಲ್ಲೂಟಿಒ-ಗ್ಯಾಟ್‌ನ ಈ ಆದೇಶವನ್ನು ಚಾಚೂ ತಪ್ಪದೆ ಬದ್ಧತೆಯಿಂದ ಪಾಲಿಸುತ್ತಲೇ ಬಂದಿವೆ. ಮೋದಿ ಸರಕಾರ ಇದನ್ನು ಮತ್ತಷ್ಟು ತೀವ್ರವಾಗಿ ಮುಂದುವರಿಸುತ್ತಿದೆ. ಯುಜಿಸಿಯ ಕಾರ್ಯವೈಖರಿಯಲ್ಲಿನ ತಪ್ಪುಗಳನ್ನು, ಅದರ ರಚನೆಯಲ್ಲಿನ ದೋಷಗಳನ್ನು ಸರಿಪಡಿಸಲು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದ್ದ ಕೇಂದ್ರ ಶಿಕ್ಷಣ ಇಲಾಖೆ ಯುಜಿಸಿಯನ್ನೇ ವಿಸರ್ಜಿಸಿ ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸಿರುವುದು ಯಾವ ಉದ್ದೇಶಕ್ಕೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮೋದಿ ಸರಕಾರ ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಅವಶ್ಯಕವಾದ ನೀತಿನಿಯಮಗಳನ್ನು ರೂಪಿಸಲು ಎಚ್‌ಇಸಿಐಯನ್ನು ಸ್ಥಾಪಿಸಿದೆ. ಇಂದು ಉನ್ನತ ಶಿಕ್ಷಣ ತನ್ನ ಈಗಿನ ಸ್ವರೂಪದಲ್ಲಿ ಅನುತ್ಪಾದಕವಾದ ಉದ್ಯಮ ಎಂದೇ ಮೋದಿ ಸರಕಾರ ಬಲವಾಗಿ ನಂಬಿದೆ. ಇದನ್ನು ಲಾಭದಾಯಕ ಉದ್ಯಮವನ್ನಾಗಿಸಲು ಈ ಮಾದರಿಯ ವ್ಯಾಪಾರೀಕರಣದ ಅವಶ್ಯಕತೆ ಇದೆ ಎಂದು ಜನರನ್ನು ನಂಬಿಸುತ್ತಿದೆ. ಉನ್ನತ ಶಿಕ್ಷಣ ಕೈಗಾರಿಕೀಕರಣವಾಗದೆ ಉಳಿಗಾವಿಲ್ಲ ಎಂದು ಪ್ರತಿಪಾದಿಸುತ್ತದೆ. ಮುಂದಿನ ದಿನಗಳಲ್ಲಿ ಈ ಶಿಕ್ಷಣ ಆಯೋಗಕ್ಕೆ ಮಾನ್ಯತೆ ದೊರೆತು ತನ್ನ ಕಾರ್ಯನೀತಿಗಳನ್ನು ಜಾರಿಗೊಳಿಸಲು ಮುಂದಾದರೆ ಅಗ ಅವಶ್ಯಕವಾದ ಶೈಕ್ಷಣಿಕ ಸುಧಾರಣೆಗಳು ಹಿನ್ನೆಲೆಗೆ ಸರಿಯಲಿವೆ. ಮಾನವಿಕ ವಿಷಯಗಳ (ಭಾಷೆ, ಸಮಾಜ ವಿಜ್ಞಾನ, ಇತಿಹಾಸ, ಮಾನವಶಾಸ್ತ್ರ, ರಾಜಕೀಯ ವಿಜ್ಞಾನ, ಮಾಧ್ಯಮ, ಇತ್ಯಾದಿ) ಅಧ್ಯಯನಕ್ಕೆ ಬೆಂಬಲ ದೊರಕುವುದಿಲ್ಲ ಮತ್ತು ಉದ್ಯೋಗ ಆಧರಿತ ಶಿಕ್ಷಣಕ್ಕೆ, ಮಾರುಕಟ್ಟೆ ಸ್ನೇಹಿ ವಿಷಯಗಳಿಗೆ ವ್ಯಾಪಕ ಪ್ರಚಾರ ಕೊಡಲಾಗುತ್ತದೆ. ವಿಶ್ವವಿದ್ಯಾನಿಲಯಗಳು ವೈಜ್ಞಾನಿಕ ಅನ್ವೇಷಣೆಗೆ, ಸಂಶೋಧನೆಗಳಿಗೆ ತಾಣವಾಗಬೇಕು ಎನ್ನುವ ಆಶಯವೇ ಮೂಲೆಗುಂಪಾಗಲಿದೆ
ಈಗಾಗಲೇ ಮೋದಿ ಸರಕಾರ ಶಿಕ್ಷಣದಲ್ಲಿ ಆರ್ಥಿಕ ಅನುದಾನವನ್ನು ಕಡಿತಗೊಳಿಸುತ್ತ ಬಂದಿರುವುದರಿಂದ ಆ ಜಾಗದಲ್ಲಿ ಬಂಡವಾಳ ಆಧರಿಸಿದ ಹಣಕಾಸು ವ್ಯವಸ್ಥೆ ಪ್ರವೇಶ ಪಡೆಯಲಿದೆ. ಸಾರ್ವಜನಿಕ-ಖಾಸಗಿ-ಸಹಭಾಗಿತ್ವ (ಪಿಪಿಪಿ) ವಿಶ್ವ ವಿದ್ಯಾನಿಲಯಗಳ ನೀತಿನಿಯಮಾವಳಿಯಾಗಲಿದೆ. ಮತ್ತೊಂದೆಡೆ ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯಗಳು ಆರ್ಥಿಕ ಅನುದಾನಕ್ಕಾಗಿ ಸದಾ ಸರಕಾರವನ್ನು ಸಂಪ್ರೀತಿಗೊಳಿಸುತ್ತಲೇ ಇರಬೇಕಾಗುತ್ತದೆ, ಗುಣಮಟ್ಟದ ಹೆಸರಿನಲ್ಲಿ, ಕಲಿಕೆಯ ಹೆಸರಿನಲ್ಲಿ, ಮೂಲಭೂತ ಸೌಕರ್ಯದ ನೆಪದಲ್ಲಿ ಉನ್ನತ ಶಿಕ್ಷಣವು ಅತ್ಯಂತ ದುಬಾರಿಯಾದ ಶಿಕ್ಷಣವಾಗಲಿದೆ. ದುಬಾರಿಯಾದ ಶುಲ್ಕವನ್ನು ಭರಿಸಲು ಈ ಬಂಡವಾಳ ಹಣಕಾಸು ವ್ಯವಸ್ಥೆಯು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ಒದಗಿಸುತ್ತದೆ. ಅಮಿತಾಭ್ ಭಟ್ಟಾಚಾರ್ಯ ಅವರು ‘‘ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಬ್ಸಿಡಿ ರೂಪದಲ್ಲಿ ವಿದ್ಯಾರ್ಥಿ ಸಾಲವನ್ನು ಪಡೆಯಲೇ ಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ ಮತ್ತು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಲ ಮರುಪಾವತಿಸಲಾಗದೆ, ತಲೆಗಂದಾಯದ ಚಕ್ರವ್ಯೆಹಕ್ಕೆ ಸಿಲುಕಿ ತಮ್ಮ ಕಲಿಕೆಯನ್ನೇ ಮೊಟಕುಗೊಳಿಸುವ ಅಪಾಯಕ್ಕೆ ಗುರಿಯಾಗಲಿದ್ದಾರೆ’’ ಎಂದು ವಿಮರ್ಶಿಸುತ್ತಾರೆ. ಎಚ್‌ಇಸಿಐ ಸ್ಥಾಪನೆಯ ಮೂಲಕ ಸಾಲದ ಬಂಡವಾಳ ವ್ಯವಸ್ಥೆ ಕ್ರಮಬದ್ಧ್ದಗೊಳ್ಳುತ್ತದೆ ಮತ್ತು ಕಾನೂನು ಚೌಕಟ್ಟಿನ ಅಡಿಯಲ್ಲಿ ತರಲಾಗುತ್ತದೆ
ಎಚ್‌ಇಸಿಐ ಕರಡಿನಲ್ಲಿ ಯುಜಿಸಿಯು ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯ ಗಳಿಗೆ ನಿರ್ದಿಷ್ಟ ಶ್ರೇಣಿಯೊಳಗೆ ಅವುಗಳ ಸ್ಥಾನಮಾನವೇನು ಎಂದು ಎಲ್ಲಿಯೂ ಸ್ಪಷ್ಟಗೊಳಿಸಿಲ್ಲ, ಇದು ಅದರ ಒಂದು ನಕರಾತ್ಮಕ ಅಂಶವಾಗಿದೆ ಎಂದು ವಿವರಿಸಲಾಗಿದೆ. ಅಂದರೆ ಇನ್ನು ಮುಂದೆ ಈ ಉನ್ನತ ಶಿಕ್ಷಣ ಆಯೋಗದ ರಚನೆಯ ಮೂಲಕ ವಿಶ್ವವಿದ್ಯಾನಿಲಯಗಳಿಗೆ ದರ್ಜೆಗಳನ್ನು ನಿಗದಿಪಡಿಸಲು ಶಿಕ್ಷಣದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಸಂಶೋಧನಾ ವಿದ್ಯಾರ್ಥಿ ಸಾಕಿಬ್ ಖಾನ್ ‘‘ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಸಂಪೂರ್ಣ ಸ್ವಾಯತ್ತೆ, ದುಬಾರಿ ಶುಲ್ಕವನ್ನು ವಿಧಿಸುವ ವಿವಿಗಳನ್ನು ವಿಶ್ವ ದರ್ಜೆಯ ಸಂಸ್ಥೆಗಳೆಂದು ಕರೆಯಲಾಗುತ್ತದೆ ಸಾಮಾನ್ಯ ವಿದ್ಯಾರ್ಥಿಗಳಿರುವ ವಿವಿಗಳನ್ನು ಕೆಳದರ್ಜೆ ಎಂದು ಕಪ್ಪುಪಟ್ಟಿಗೆ ಸೇರಿಸುತ್ತಾರೆ’’ ಎಂದು ಬರೆಯುತ್ತಾರೆ.
ಮೋದಿ ಸರಕಾರವು ಈ ಮೇಲಿನಂತೆ ತೀವ್ರವಾದ ಬದಲಾವಣೆಗಳ ಮೂಲಕ ಅಂತಿಮವಾಗಿ ಉನ್ನತ ಶಿಕ್ಷಣವನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವ ತಮ್ಮ ಅಜೆಂಡಾಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಉಪಕಾರಕ್ಕೆ ಎಂಬಂತೆ ಶಿಕ್ಷಣ ತಜ್ಞರಿಗೆ, ಸಾರ್ವಜನಿಕರಿಗೆ ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡಲು ಜುಲೈ 7ರ ಸಂಜೆಯವರೆಗೆ ಗಡುವು ನೀಡಿದೆ. ಮುಂದೇನು ????