ಜನರ ಪ್ರಯಾಣಕ್ಕೆ ಸುಲಭ, ಸರಳ ಆಯ್ಕೆಯಾದ ''ಟ್ರಿಣ್ ಟ್ರಿಣ್'' ಅಭಿಯಾನಕ್ಕೆ ಒಂದು ವರ್ಷ!
ಉದ್ಯೋಗ ನಿಮಿತ್ತ ದಿನಾ ನಗರಕ್ಕೆ ಆಗಮಿಸುವವರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಥವಾ ಪ್ರವಾಸಿಗರಿಗೆ ಸರಳ ಸುಲಭ ಪ್ರಯಾಣದ ಮಾಧ್ಯಮವಾಗಿ ಸೈಕಲ್ಗಳನ್ನು ಲಭ್ಯವಾಗಿಸುವ ವಿನೂತನ ಪರಿಕಲ್ಪನೆಯಾದ 'ಟ್ರಿಣ್ ಟ್ರಿಣ್' ಯೋಜನೆಗೆ 2017ರ ಜೂನ್ 4ರಂದು ಮೈಸೂರಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ನಿಗದಿತ ದರ ಪಾವತಿಸಿ ಸೈಕಲ್ಗಳನ್ನು ಬಾಡಿಗೆಗೆ ಪಡೆಯುವ ಯೋಜನೆಯಿದು. ಕಳೆದ ಒಂದು ವರ್ಷದಿಂದ ನಗರದ ಅತ್ಯಂತ ಜನಪ್ರಿಯ ಸಂಚಾರ ಮಾಧ್ಯಮವಾಗಿ ಗುರುತಿಸಿಕೊಂಡಿರುವ ಹೆಗ್ಗಳಿಕೆಗೆ 'ಟ್ರಿಣ್ ಟ್ರಿಣ್' ಪಾತ್ರವಾಗಿದೆ.
ಸೈಕಲ್ಗಳನ್ನು ಬಾಡಿಗೆಗೆ ಪಡೆಯಲು ನಗರದಾದ್ಯಂತ ಅಲ್ಲಲ್ಲಿ 'ಸೈಕಲ್ ಸ್ಟಾಂಡ್'ಗಳನ್ನು ಸ್ಥಾಪಿಸಲಾಗಿದೆ. ಈಗ ನಗರದಲ್ಲಿ ಟ್ರಿಣ್ ಟ್ರಿಣ್ ಸೈಕಲ್ಗಳು ಮನೆ ಮಾತಾಗಿವೆ. ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ 48 ಕಡೆ 52 ಸೈಕಲ್ ಸ್ಟಾಂಡ್ಗಳಿದ್ದು 450 ಸೈಕಲ್ಗಳು ಬಾಡಿಗೆಗೆ ಲಭ್ಯವಿದೆ. ಮೈಸೂರು ನಗರಪಾಲಿಕೆ ಈ ಸ್ಟಾಂಡ್ಗಳನ್ನು ನಿರ್ಮಿಸಿದ್ದು 'ಗ್ರೀನ್ ವೀಲ್ ರೈಡ್' ಸಂಸ್ಥೆ ಇದರ ವ್ಯವಹಾರ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಇಲ್ಲಿರುವ ಗಟ್ಟಿಮುಟ್ಟಾದ ವಾಹನಗಳು ಇದೇ ಸಂಸ್ಥೆಯ ಉತ್ಪನ್ನವಾಗಿವೆ.
ಇದೊಂದು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು ಮೈಸೂರ್ ವನ್ ಕೇಂದ್ರಗಳಲ್ಲಿ ಅಥವಾ ಸಾರ್ವಜನಿಕ ಬೈಸಿಕಲ್ ಹಂಚಿಕೆಯ ಕೇಂದ್ರಗಳಲ್ಲಿ ಬಳಕೆದಾರರು ತಮ್ಮ ಗುರುತು ಚೀಟಿ ತೋರಿಸಿ ನೋಂದಣಿ ಮಾಡಿಕೊಳ್ಳಬೇಕು. ಆರಂಭಿಕ ನೋಂದಣಿ ಶುಲ್ಕ 360 ರೂ. ಇದರಲ್ಲಿ 250 ರೂ. ಮರುಪಾವತಿಯಾಗುವ ಠೇವಣಿಯಾಗಿದೆ (ಸೈಕಲ್ ಹಿಂದಿರುಗಿಸಿದ ಬಳಿಕ ದೊರೆಯುತ್ತದೆ). 50 ರೂ. ಪರಿಷ್ಕರಣಾ ಶುಲ್ಕವಾದರೆ, 60 ರೂ. ಒಂದು ತಿಂಗಳ ಬಾಡಿಗೆ ದರವಾಗಿದೆ. ಸ್ಮಾರ್ಟ್ ಕಾರ್ಡ್ ಬಳಸಿಯೂ ಸೈಕಲ್ಗಳನ್ನು ಬಾಡಿಗೆ ಕೇಂದ್ರದಿಂದ ಪಡೆದುಕೊಳ್ಳುವ ವ್ಯವಸ್ಥೆಯಿದೆ.
ಒಂದು ಬಾಡಿಗೆ ಕೇಂದ್ರದಿಂದ ಬಾಡಿಗೆಗೆ ಪಡೆಯುವ ಸೈಕಲ್ಗಳನ್ನು ತನ್ನ ಕಾರ್ಯ ಮುಗಿದ ಬಳಿಕ ಸಮೀಪದ ಬಾಡಿಗೆ ಕೇಂದ್ರಕ್ಕೆ ಮರಳಿಸುವ ವ್ಯವಸ್ಥೆಯಿದೆ. ಒಂದು ದಿನ ಅಥವಾ ಕೆಲವೇ ಗಂಟೆಗಳಿಗೆ ಮಾತ್ರ ಸೈಕಲ್ಗಳನ್ನು ಬಾಡಿಗೆಗೆ ಪಡೆಯುವ ಪ್ರವಾಸಿಗರು ಅಥವಾ ಸಂದರ್ಶಕರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್ಗಳಿವೆ. ಪ್ರವಾಸಿಗರು ಮೊದಲ ಅರ್ಧಗಂಟೆ ಸೈಕಲ್ ಬಳಕೆಗೆ ಶುಲ್ಕ ಪಾವತಿಸಬೇಕಿಲ್ಲ, ಉಚಿತವಾಗಿರುತ್ತದೆ. ಆ ಬಳಿಕದ ಅರ್ಧಗಂಟೆಗೆ 5 ರೂ. ಬಾಡಿಗೆ ವಿಧಿಸಲಾಗುತ್ತದೆ. ಬಳಿಕದ ಪ್ರತೀ ಗಂಟೆಗೆ ದರ ನಿಗದಿಯಾಗುತ್ತದೆ.
ಸೈಕಲ್ಗಳನ್ನು ಅಂಗಡಿ ಅಥವಾ ಮನೆಯಲ್ಲಿ ಸುಮ್ಮನೆ ಇರಿಸುವ ಬದಲು ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಬಾಡಿಗೆ ದರವನ್ನು ನಿಗದಿಗೊಳಿಸಲಾಗಿದೆ. ದಿನಾ ಬಳಸುವವರಿಗೆ 10 ದಿನ ಅಥವಾ 30 ದಿನಗಳಾವಧಿಯ ಕಾರ್ಡ್ಗಳಿವೆ. ಈ ಯೋಜನೆಯ ಒಟ್ಟು ವೆಚ್ಚ 20.5 ಕೋಟಿ ರೂ. ಎಂದು ಮೈಸೂರು ನಗರಪಾಲಿಕೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಸುರೇಶ್ಬಾಬು (ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸುಪರಿಂಟೆಂಡೆಂಟ್ ಇಂಜಿನಿಯರ್) ತಿಳಿಸಿದ್ದಾರೆ. ಇದರಲ್ಲಿ 7.73 ಕೋಟಿ ರೂ. ಬಂಡವಾಳ ವೆಚ್ಚವಾಗಿದ್ದರೆ 12.7 ಕೋಟಿ ರೂ. ಮೊತ್ತವನ್ನು ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಎಂದು ತೆಗೆದಿರಿಸಲಾಗಿದೆ. ಈ ಯೋಜನೆಯ ಭಾಗಶಃ ಮೊತ್ತವನ್ನು ವಿಶ್ವಬ್ಯಾಂಕ್ನ 'ಗ್ಲೋಬಲ್ ಎನ್ವಯರ್ನ್ಮೆಂಟ್ ಫಂಡ್' ಭರಿಸಿದೆ. ಈ ವ್ಯವಸ್ಥೆಯಿಂದ ಉತ್ಪಾದನೆಯಾಗುವ ಆದಾಯದಿಂದ ಉಳಿದ ಮೊತ್ತವನ್ನು ಭರಿಸಲಾಗುವುದು ಎಂದವರು ತಿಳಿಸಿದ್ದಾರೆ.
ನೋಂದಣಿಯಾಗಿರುವ ಬಳಕೆದಾರರ ಸಂಖ್ಯೆ 9,800
ಸ್ಮಾರ್ಟ್ ಕಾರ್ಡ್ ಮೂಲಕ 9,800 ಬಳಕೆದಾರರು ನೋಂದಣಿಯಾಗಿದ್ದಾರೆ ಎಂದು ಗ್ರೀನ್ ವೀಲ್ ರೈಡ್ ಸಂಸ್ಥೆಯ ಮ್ಯಾನೇಜರ್ ಆಶಾ ಕೀರಕಟ್ಟಿ ತಿಳಿಸಿದ್ದಾರೆ.ಇವರಲ್ಲಿ 1,000ಕ್ಕೂ ಹೆಚ್ಚು ಮಂದಿ ಸೈಕಲ್ಗಳನ್ನು ದಿನಾ ಬಳಸುತ್ತಿದ್ದಾರೆ. ಹಲವು ಮಂದಿ ವಿದ್ಯಾರ್ಥಿಗಳಿಗೆ ಇದು ಸುಲಭ ಲಭ್ಯ, ಕಡಿಮೆ ವೆಚ್ಚದ ವಾಹನವಾಗಿದ್ದು ಶಾಲೆ, ಕಾಲೇಜುಗಳಿಗೆ ಹೋಗಲು ದಿನಾ ಬಳಸುತ್ತಿದ್ದಾರೆ. ಆದರೆ ಬಹುತೇಕ ಬಾಡಿಗೆ ಕೇಂದ್ರಗಳು ನಗರದಲ್ಲೇ ಕೇಂದ್ರೀಕೃತವಾಗಿವೆ ಎಂಬ ದೂರು ಸಾಮಾನ್ಯವಾಗಿದೆ. ಆದರೆ 'ಟ್ರಿಣ್ ಟ್ರಿಣ್' ಯೋಜನೆಯನ್ನು ಈಗ ಕೇಂದ್ರ ವ್ಯಾಪಾರ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಪ್ರಾಯೋಗಿಕ ಯೋಜನೆಯಾಗಿ ಜಾರಿಗೊಳಿಸಲಾಗಿದೆೆ. ಮುಂದಿನ ಹಂತದಲ್ಲಿ ಜನವಸತಿ ಪ್ರದೇಶಗಳಲ್ಲಿ ಇನ್ನಷ್ಟು ಬಾಡಿಗೆ ಕೇಂದ್ರಗಳು ಸ್ಥಾಪನೆಗೊಳ್ಳಲಿವೆ ಎಂದವರು ತಿಳಿಸಿದ್ದಾರೆ.
ಗೇರ್ ಹೊಂದಿರುವ ಸೈಕಲ್ಗಳು
450 ಸೈಕಲ್ಗಳಲ್ಲಿ 430 ಸಿಂಗಲ್ ಸೀಟ್ ಹೊಂದಿರುವ ಸಾಮಾನ್ಯ ಸೈಕಲ್ಗಳಾಗಿದ್ದರೆ ಉಳಿದ 20 ಸೈಕಲ್ಗಳು ಬೆಟ್ಟ ಏರಲು ಅನುಕೂಲವಾಗುವ ಗೇರ್ ಹೊಂದಿರುವ ಸೈಕಲ್ಗಳು. ಚಾಮುಂಡಿ ಬೆಟ್ಟ ಏರುವ ಸಂದರ್ಭ ಇವು ಸಹಾಯವಾಗುತ್ತದೆ. ಸೈಕಲ್ಗಳು ಒಂದು ಬಾಡಿಗೆ ಕೇಂದ್ರದಲ್ಲಿ ವಿಪರೀತ ಪ್ರಮಾಣದಲ್ಲಿ ಶೇಖರಣೆಯಾದರೆ ಆಗ ಅವನ್ನು ಉಳಿದ ಕೇಂದ್ರಗಳಿಗೆ ಹಂಚಿಕೆ ಾಡಲು ವಾಹನಗಳ ವ್ಯವಸ್ಥೆಯಿದೆ.
ಇದುವರೆಗೆ ಸೈಕಲ್ಗಳನ್ನು ಕದ್ದುಕೊಂಡು ಹೋದ ಬಗ್ಗೆ ದೂರು ದಾಖಲಾಗಿಲ್ಲ. ಎಲ್ಲಾ ಬಾಡಿಗೆ ಕೇಂದ್ರಗಳಲ್ಲೂ ಸಿಸಿಟಿವಿ ವ್ಯವಸ್ಥೆಯಿದೆ. ಕೆಲವೊಮ್ಮೆ ಸೈಕಲ್ ಪಲ್ಟಿಯಾಗಿ ಸ್ವಲ್ಪ ಮಟ್ಟಿನ ಹಾನಿಯಾಗಿದ್ದರೂ ಗಂಭೀರವಾದ ಅಪಘಾತ ಸಂಭವಿಸಿಲ್ಲ. ಇದು ಅತ್ಯಂತ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ವ್ಯವಸ್ಥೆಯಾಗಿದೆ ಎಂದು ಈ ಸೈಕಲ್ಗಳನ್ನು ದಿನಾ ಬಾಡಿಗೆಗೆ ಪಡೆಯುತ್ತಿರುವ ವ್ಯಾಪಾರಿ ಅತೀಖ್ ಹೇಳುತ್ತಾರೆ.
ದಿನಾ ಮಂಡ್ಯದಿಂದ ಮೈಸೂರಿಗೆ ಬಂದು ಅಲ್ಲಿಂದ ಮೈಸೂರು ಮೃಗಾಲಯದ ಬಳಿ ಇರುವ ಕಾರ್ಖಾನೆಗೆ ತೆರಳಲು ಸೈಕಲ್ಗಳನ್ನು ಬಳಸುತ್ತಿರುವ ಮಂಜುನಾಥ್ ಈ ನೂತನ ಯೋಜನೆ ುಂಬಾ ಅನುಕೂಲಕರ ಎನ್ನುತ್ತಾರೆ.