ಬೌದ್ಧಿಕ ಲೋಕದಲ್ಲಿ ಕವಿದ ಗಾಢ ಮೌನ
ಇಲ್ಲಿ ಕೋಮುವಾದ ಎರಡು ವಿಧಗಳಲ್ಲಿ ಆಕ್ರಮಣಕ್ಕೆ ಸಜ್ಜಾಗಿದೆ. ಒಂದೆಡೆ ಚಿಂತಕರನ್ನು ಕೊಂದು ಭೀತಿಯ ವಾತಾವರಣವನ್ನು ನಿರ್ಮಿಸುತ್ತಿದೆ. ಇನ್ನೊಂದೆಡೆ ಪ್ರಭುತ್ವದ ಅಧಿಕಾರ ಸೂತ್ರವನ್ನು ಚುನಾವಣೆಯ ಮೂಲಕ ಹಿಡಿದು ಜನಪರ ಹೋರಾಟಗಾರರನ್ನು, ಮಾನವಹಕ್ಕುಪರ ಕಾರ್ಯಕರ್ತರನ್ನು ನಕ್ಸಲರೆಂದು ಕರೆದು ಜೈಲಿಗೆ ತಳ್ಳುತ್ತಿದೆ. ಹಾಗಾಗಿ ಭಿನ್ನ ದನಿಗಳು ಮೌನವಾಗುತ್ತಿವೆ.
ಗೌರಿ ಲಂಕೇಶ್ ಹತ್ಯೆಯ ನಂತರ ಕರ್ನಾಟಕದ ಬೌದ್ಧಿಕ ವಲಯದಲ್ಲಿ ಒಂದು ವಿಧದ ಅಸಹಾಯಕ ವೌನ ಆವರಿಸಿದೆ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆ ನಡೆದ ನಂತರ ಭೀತಿಯ ವಾತಾವರಣ ಉಂಟಾಗಿದ್ದರೂ ಈ ಪರಿ ವೌನ ಕವಿದಿರಲಿಲ್ಲ. ಕೋಮುವಾದದ ವಿರುದ್ಧ ಮಾತಾಡುವುದು, ಬರೆಯುವುದು ಈಗ ದುಬಾರಿಯಾಗಿ ಪರಿಣಮಿಸಿದೆ. ಅನಿಸಿದ್ದನ್ನು ಬರೆಯಬೇಕೆಂದರೆ, ಮಾತಾಡಬೇಕೆಂದರೆ ಜೀವದ ಮೇಲಿನ ಆಸೆ ಬಿಟ್ಟು, ಬಂದದ್ದೆಲ್ಲ ಬರಲಿ ಎಂದು ಬರೆಯಬೇಕಾಗುತ್ತದೆ. ನಾಳೆ ಬರುವುದು ಇಂದೇ ಬರಲಿ ಎಂದು ಬಸವಣ್ಣನವರಂತೆ ಜೀವದ ಹಂಗು ತೊರೆದು ನಿಲ್ಲಬೇಕಾಗುತ್ತದೆ. ಹನ್ನೆರಡನೇ ಶತಮಾನದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬುಡಕ್ಕೆ ಬಿಸಿನೀರು ಬಿಡಲು ಮುಂದಾದ ಬಸವಣ್ಣ ಎದುರಿಸಿದ್ದ ಇಂಥ ಜೀವ ಭಯವನ್ನೇ , ನಂಬಿದ್ದ ಸಿದ್ಧಾಂತದ ಪ್ರಶ್ನೆಯಲ್ಲಿ ಅವರು ರಾಜಿಗೆ ಸಿದ್ಧವಿರಲಿಲ್ಲ. ಅಂತಲೇ ‘‘ಮರಣವೇ ಮಹಾನವಮಿ’’’ ಎಂದು ವ್ಯವಸ್ಥೆಯನ್ನು ಧಿಕ್ಕರಿಸಿ ನಿಂತರು. ಕಲ್ಯಾಣದಲ್ಲಿ ರಕ್ತಪಾತ ನಡೆಯಿತು. ಹರಳಯ್ಯ ಮಧುವರಸರನ್ನು ಆನೆಯ ಕಾಲಿಗೆ ಕಟ್ಟಿ ಊರ ತುಂಬೆಲ್ಲ ಎಳೆದಾಡಿ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು. ಸಾವಿಗೆ ಶರಣರು ಹೆದರಲಿಲ್ಲ. ಸವಾಲು ಸ್ವೀಕರಿಸಿದರು. ಈಗ ಮತ್ತೆ ಕರ್ನಾಟಕ ಮಾತ್ರವಲ್ಲ ಭಾರತದ ಚಿಂತಕಲೋಕಕ್ಕೆ ಪ್ರಾಣಭೀತಿ ಎದುರಾಗಿದೆ.
ದೇಶದ ಐವತ್ತಕ್ಕೂ ಹೆಚ್ಚು ಮಂದಿ ಪ್ರಗತಿಪರ, ಎಡಪಂಥೀಯ ಚಿಂತಕರ ಪಟ್ಟಿ ಮಾಡಿರುವ ಉಗ್ರ ಹಿಂದುತ್ವವಾದಿ ಸಂಘಟನೆಗಳು ಇವರನ್ನು ಕೊಲ್ಲಲು ಅರವತ್ತು ಜನರ ತರಬೇತಿ ಪಡೆದ ಹಂತಕ ಪಡೆಯನ್ನು ಸಿದ್ಧಪಡಿಸಿದೆ. ಈ ಹಂತಕರು ದೇಶದ ವಿವಿಧ ರಾಜ್ಯಗಳಿಗೆ ಹೋಗಿ ತಮ್ಮ ನಾಯಕರ ಮುಂದಿನ ಆದೇಶಕ್ಕಾಗಿ ಕಾಯುತ್ತಿದ್ದಾರೆಂದು ಗೌರಿ ಲಂಕೇಶ್ ಹತ್ಯೆಯ ತನಿಖೆ ವೇಳೆ ಬಯಲಿಗೆ ಬಂದ ಸಂಗತಿಯಿಂದ ಗೊತ್ತಾಗಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸುತ್ತಿವೆ. ನ್ಯಾಯಕ್ಕಾಗಿ ಹಿಂದುತ್ವವಾದಿ ಸಂಘಟನೆಗಳ ಗುರಿ ಅವರೇ ಹೇಳಿಕೊಳ್ಳುವಂತೆ ಜಿಹಾದಿಗಳಿರಬೇಕಾಗಿತ್ತು. ಕಾಶ್ಮೀರ ಉಗ್ರಗಾಮಿಗಳನ್ನು ಸದೆ ಬಡಿಯಲು ಪರಶುರಾಮನಂತಹ ತರುಣರು ಸಜ್ಜಾಗಬೇಕಾಗಿತ್ತು. ಆದರೆ, ಈಗ ಅವರ ಗುರಿ ಪಾಕ್ ಭಯೋತ್ಪಾದಕರೂ ಅಲ್ಲ. ಬದಲಾಗಿ ನಮ್ಮ ನಡುವೆ ಶಾಂತವಾಗಿದ್ದು ಮೂಢನಂಬಿಕೆ, ಕಂದಾಚಾರ, ಜಾತೀಯತೆ, ಶೋಷಣೆಯ ವಿರುದ್ಧ ಬರೆಯುತ್ತಿರುವ ಕವಿಗಳು, ಸಾಹಿತಿಗಳು, ಹಾಡುಗಾರರು, ಚಿಂತಕರು, ಪತ್ರಕರ್ತರು ಆಗಿದ್ದಾರೆ. ದೇಶಕ್ಕೆ ಎದುರಾಗಿರುವ ಗಂಡಾಂತರದ ಬಗ್ಗೆ, ಗಡಿಯಲ್ಲಿರುವ ಶತ್ರು ಸೈನಿಕರ ಬಗ್ಗೆ ಹಿಂದುತ್ವವಾದಿ ಎಂದು ಕರೆದುಕೊಳ್ಳುವ ಗುಂಪುಗಳಿಗೆ ಕೋಪವಿಲ್ಲ. ಬದಲಾಗಿ ದೇಶದೊಳಗೆ ತಮ್ಮ ಪಾಡಿಗೆ ತಾವು ಬರೆಯುತ್ತ ವೈಚಾರಿಕ ಜಾಗೃತಿ ಮೂಡಿಸುತ್ತಿರುವ ಚಿಂತಕರು ಇವರ ಶತ್ರುಗಳಾಗಿದ್ದಾರೆ. ಇಲ್ಲವಾದರೆ ಎಪ್ಪತ್ತಾರು ವಯಸ್ಸಿನ ನರೇಂದ್ರ ದಾಭೋಲ್ಕರ್, 87 ವಯಸ್ಸಿನ ಗೋವಿಂದ ಪನ್ಸಾರೆ, ಎಂಬತ್ತು ವಯಸ್ಸಿನ ಡಾ.ಎಂ.ಎಂ. ಕಲಬುರ್ಗಿ ಹಾಗೂ ಐವತ್ನಾಲ್ಕು ವಯಸ್ಸಿನ ಹೆಣ್ಣುಮಗಳು ಗೌರಿ ಲಂಕೇಶ್ ಅವರನ್ನು ಇವರು ಕೊಲ್ಲುತ್ತಿರಲಿಲ್ಲ.
ಡಾ.ಲೋಹಿಯಾ ಹೇಳಿದಂತೆ ‘‘ಭಾರತದ ಇತಿಹಾಸದಲ್ಲಿ ಅತ್ಯಂತ ಘೋರವಾದ ಸಮರ ನಡೆದಿರುವುದು ಧರ್ಮದಲ್ಲಿನ ಉದಾರವಾದಿಗಳು ಹಾಗೂ ಮತಾಂಧರ ನಡುವೆ. ಐದು ಸಾವಿರ ವರ್ಷಕ್ಕೂ ಹೆಚ್ಚು ಕಾಲಾವಧಿಯಲ್ಲಿ ಇದು ತೀವ್ರವಾಗುತ್ತಲೇ ಬಂದಿದೆ. ಸಮೀಪದಲ್ಲಿ ಅದರ ಕೊನೆ ಕಾಣುತ್ತಿಲ್ಲ... ವಾಸ್ತವವಾಗಿ ಎಲ್ಲ ಧರ್ಮಗಳಲ್ಲೂ ಇಂಥ ಸಂಘರ್ಷ ನಡೆದೇ ಇರುತ್ತದೆ ಅನೇಕ ಬಾರಿ ಈ ಧರ್ಮಗಳು ಒಡೆದು ಹೋಳಾಗಿವೆ. ಆದರೆ, ಹಿಂದೂ ಎಂಬ ಧರ್ಮದಲ್ಲಿ ಇಂಥ ಸಂಘರ್ಷನೆಯಾಗಿಲ್ಲ. ನಾಲ್ಕು ಸಾವಿರ ವರ್ಷಗಳ ಹಿಂದೆ ಶೂದ್ರರ ಕಿವಿಯಲ್ಲಿ ಸೀಸವನ್ನು ಸುರಿದವರು, ನಾಲಗೆ ಕತ್ತರಿಸಿದವರು, ವೇದಗಳನ್ನು ಅಸ್ಪಶ್ಯರು ಕೇಳಬಾರದು, ಓದಬಾರದೆಂದು ಕಟ್ಟುಪಾಡು ವಿಧಿಸಿದವರು, ಶಿವಾಜಿಯ ಪಟ್ಟಾಭಿಷೇಕ ಸಂದರ್ಭದಲ್ಲಿ ಕಿರಿಕಿರಿ ಮಾಡಿದವರು, ತನ್ನ ಅರಸೊತ್ತಿಗೆಯಲ್ಲಿ ಬ್ರಾಹ್ಮಣನನ್ನೇ ವಂಶಪಾರಂಪರ್ಯವಾಗಿ ಮಂತ್ರಿಯನ್ನಾಗಿ ಮಾಡಬೇಕೆಂದು ಶರತ್ತು ಹಾಕಿದವರು. ಈಗ ಮತ್ತೆ ಹಿಂದುತ್ವದ ಹೆಸರಿನಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ರಕ್ಷಣೆಗೆ ಹಂತಕ ಪಡೆಗಳನ್ನು ಕಟ್ಟಿದ್ದಾರೆ. ನವ ಉದಾರೀಕರಣದ ಆರ್ಥಿಕ ನೀತಿಗಳ ಪರಿಣಾಮವಾಗಿ ಜನ ಸಾಮಾನ್ಯರು ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದ್ದಾರೆ. ಈ ಬಿಕ್ಕಟ್ಟಿನಿಂದ ಪಾರಾಗಲು ಯತ್ನಿಸುತ್ತಿರುವ ಬಂಡವಾಳಶಾಹಿಗೆ ಜನರನ್ನು ಕೋಮು ಆಧಾರದಲ್ಲಿ ವಿಭಜಿಸುವ ಇಂಥ ಛಿದ್ರಕಾರಿ ಹಂತಕ ಪಡೆಗಳು ಬೇಕಾಗಿವೆ. ಇದನ್ನೇ ಫ್ಯಾಶಿಸಂ ಎಂದು ಕರೆಯಲಾಗುತ್ತದೆ. ಈ ಫ್ಯಾಶಿಸಂಗೆ ಭಾರತದಲ್ಲಿ ಮನುವಾದದ ಸಾಂಗತ್ಯ ದೊರಕಿದೆ.
ಕಾರ್ಪೊರೇಟ್ ಬಂಡವಾಳಶಾಹಿಯ ಕೃಪಾಪೋಷಣೆಯಲ್ಲಿ ಬೆಳೆಯುತ್ತಿರುವ ಹಿಂದುತ್ವ ಫ್ಯಾಶಿಸಂ ಈಗ ಬುದ್ಧಿಜೀವಿಗಳ ಮಾರಣಹೋಮಕ್ಕೆ ಸಜ್ಜಾಗಿ ನಿಂತಿದೆ. ಈಗಾಗಲೇ ನಾಲ್ವರನ್ನು ಬಲಿ ತೆಗೆದುಕೊಂಡಿದೆ. ನಿಡುಮಾಮಿಡಿ ಸ್ವಾಮೀಜಿ, ದ್ವಾರಕಾನಾಥ್, ಚಂಪಾ, ಮಹಾರಾಷ್ಟ್ರದ ನಿಖಿಲ್ ವಾಗ್ಲೆ ಅಂಥವರು ಪ್ರಾಣಭೀತಿ ಎದುರಿಸುತ್ತಿದ್ದಾರೆ. ಈ ಭೀತಿ ಅನೇಕರ ವೌನಕ್ಕೆ ಕಾರಣವಾಗಿದೆ. ಇಲ್ಲಿ ಕೋಮುವಾದ ಎರಡು ವಿಧಗಳಲ್ಲಿ ಆಕ್ರಮಣಕ್ಕೆ ಸಜ್ಜಾಗಿದೆ. ಒಂದೆಡೆ ಚಿಂತಕರನ್ನು ಕೊಂದು ಭೀತಿಯ ವಾತಾವರಣವನ್ನು ನಿರ್ಮಿಸುತ್ತಿದೆ. ಇನ್ನೊಂದೆಡೆ ಪ್ರಭುತ್ವದ ಅಧಿಕಾರ ಸೂತ್ರವನ್ನು ಚುನಾವಣೆಯ ಮೂಲಕ ಹಿಡಿದು ಜನಪರ ಹೋರಾಟಗಾರರನ್ನು, ಮಾನವಹಕ್ಕುಪರ ಕಾರ್ಯಕರ್ತರನ್ನು ನಕ್ಸಲರೆಂದು ಕರೆದು ಜೈಲಿಗೆ ತಳ್ಳುತ್ತಿದೆ. ಹಾಗಾಗಿ ಭಿನ್ನ ದನಿಗಳು ಮೌನವಾಗುತ್ತಿವೆ.
ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್, ಬರ್ಖಾದತ್, ಸಾಗರಿಕಾ ಘೋಷ್, ಐಂಚಲವಾಗ್ಲೆ ಅಂಥವರು ಈಗ ಬೆದರಿಕೆ ಎದುರಿಸುತ್ತಿದ್ದಾರೆ. ಒಂದೆಡೆ ಹೊರಗಿನ ಸಂಸ್ಕೃತ ರಕ್ಷಕರಿಂದ ಪ್ರಾಣ ಭೀತಿಯನ್ನು ಎದುರಿಸಿದರೆ ಇನ್ನೊಂದೆಡೆ ಅವರು ಕೆಲಸ ಮಾಡುವ ಸಂಸ್ಥೆಗಳಿಂದ ಕೆಲಸದಿಂದ ತೆಗೆಸುವ ಭೀತಿಯನ್ನು ಎದುರಿಸುತ್ತಿದ್ದಾರೆ. ಮರಾಠಿಯ ಸುನಿಲ್‌ವಾಗ್ಲೆೆ ಅವರಂಥ ಹಿರಿಯ ಪರ್ತಕರ್ತರನ್ನು ಕೆಲಸವಿಲ್ಲದಂತೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ವಿಮರ್ಶಕರು ಟೀಕಾಕಾರರು ಬೇಡವಾಗಿದ್ದಾರೆ. ದೇಶದ ತುಂಬ ಇರುವ ಸಾಮಾಜಿಕ ಜಾಲತಾಣದ ಅವರ ಶಿಷ್ಯಕೋಟಿಯಿಂದ ಭಿನ್ನಾಭಿಪ್ರಾಯ ಹೊಂದಿದವರನ್ನು ಹರಿದು ಮುಕ್ಕಲು ಬಾಯಿ ತೆರೆದು ನಿಂತಿದೆ. ಈ ದೇಶ ಇಂಥ ಸ್ಥಿತಿಯನ್ನು ಇತ್ತೀಚಿನ ವರ್ಷಗಳಲ್ಲಿ ಎಂದೂ ಎದುರಿಸಿರಲಿಲ್ಲ.
ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು ಸಿಕ್ಕಿ ಬೀಳುತ್ತಿದ್ದಂತೆ, ಅವರ ಜಾಲ ಬಯಲಾಗುತ್ತಿದ್ದಂತೆ ಜನರ ಗಮನವನ್ನು ಬೇರೆಡೆ ಸೆಳೆಯಲು ಪುಣೆಯಲ್ಲಿ ದಲಿತ ಹೋರಾಟಗಾರರನ್ನು ನಕ್ಸಲರೆಂದು ಬಂಧಿಸಲಾಗಿದೆ. ಪ್ರಧಾನಿ ಹತ್ಯೆಗೆ ಮಾವೋವಾದಿಗಳು ಸಂಚು ನಡೆಸಿದ್ದಾರೆಂದು ಇನ್ನೊಂದು ಕಥೆ ಕಟ್ಟಲಾಗಿದೆ. ಹೀಗೆ ಅಧಿಕಾರದಲ್ಲಿನ ಹಿಂದುತ್ವವಾದಿಗಳು ಮತ್ತು ಹೊರಗಿರುವ ಹಿಂದುತ್ವವಾದಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಕೋಮುವಾದಿ ಸಂಘಟನೆಗಳು ಬೇರೆ ಬೇರೆ ಹೆಸರಿಟ್ಟುಕೊಂಡು ಕೆಲಸ ಮಾಡುತ್ತಿವೆ. ಆರೆಸ್ಸೆಸ್, ಶ್ರೀರಾಮಸೇನೆ, ಸನಾತನ ಸಂಸ್ಥೆ, ಹಿಂದೂ ಏಕತಾ ಮಂಚ್, ಹಿಂದೂ ಜಾಗರಣಾ ಸಂಘಟನೆ... ಹೀಗೆ ಬೇರೆ ಹೆಸರಿನಿಂದ ಕೆಲಸ ಮಾಡಿದರೂ ಪರಸ್ಪರ ಹೊಂದಾಣಿಕೆಯಿದೆ. ಪರಶುರಾಮ ಆರೆಸ್ಸೆಸ್ ಕಾರ್ಯಕರ್ತನಾಗಿದ್ದನೆಂದು ಮುತಾಲಿಕರೇ ಹೇಳಿದ್ದಾರೆ. ಆರೆಸ್ಸೆಸ್‌ನಿಂದ ಆಯ್ದ ಕೆಲ ಯುವಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಕರ್ನಾಟಕ ಎಸ್‌ಐಟಿ ಬಂಧಿಸಿರುವ ಅಮೋಲ್ ಕಾಳೆ ಡೈರಿಯಲ್ಲಿ ಹತ್ಯೆ ಮಾಡಬೇಕಾದ ಅನೇಕ ಬುದ್ಧಿಜೀವಿಗಳ ಹೆಸರುಗಳು ಇವೆ ಎಂದು ಹೇಳಲಾಗುತ್ತಿದೆ. ಗೌರಿ ಹತ್ಯೆಯಾಗುವವರೆಗೆ ಕಾಳೆಗೆ ಹಣಕಾಸಿನ ನೆರವು ನೀಡಲಾಗುತ್ತಿತ್ತು. ಇದಕ್ಕಾಗಿ ಕೋಟ್ಯಂತರ ರೂ.ಅನ್ನು ಸಂಘಟನೆಯೊಂದು ತೆಗೆದಿರಿಸಿದೆ ಎಂದು ಹೇಳಲಾಗುತ್ತಿದೆ. ಕೆಲ ನಿವೃತ್ತ ಸೇನಾಧಿಕಾರಿಗಳು ಈ ಕೋಮುವಾದಿ ಸಂಘಟನೆಗಳ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಮೂವತ್ತರೊಳಗಿನ ಯುವಕರನ್ನು ಈ ಸಂಘಟನೆಗಳು ಆಕರ್ಷಿಸಿ ಬಲೆಗೆ ಬೀಳಿಸಿಕೊಂಡು ಈ ಕೃತ್ಯ ಎಸಗುತ್ತಿವೆ ಎನ್ನಲಾಗುತ್ತಿದೆ. ಹಿಂದುತ್ವವಾದಿ ಸಂಘಟನೆಗಳ ಗುರಿ ಸಾವರ್ಕರ್, ಗೋಳ್ವಾಲ್ಕರ್ ಕಲ್ಪನೆಯ ಹಿಂದೂ ರಾಷ್ಟ್ರ ನಿರ್ಮಾಣವಾಗಿದೆ. ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ, ಸಂವಿಧಾನವನ್ನು ಕಿತ್ತೆಸೆದು ಮನುವಾದಿ ಸನಾತನ ಹಿಂದೂ ರಾಷ್ಟ್ರವನ್ನು ನಿರ್ಮಿಸುವುದು ಅವುಗಳ ಉದ್ದೇಶವಾಗಿದೆ. ಅದಕ್ಕಾಗಿ ನೂರಾರು ಯುವಕರನ್ನು ಸಜ್ಜುಗೊಳಿಸಲಾಗಿದೆ. ಆದರೆ ಡಾ. ಅಂಬೇಡ್ಕರ್ ಹೇಳಿದಂತೆ ‘‘ಭಾರತ ಹಿಂದೂ ರಾಷ್ಟ್ರವಾದರೆ ನಾಶವಾಗಿ ಹೋಗುತ್ತದೆ’’. ‘‘ಮತಾಂಧ ಹಿಂದೂಗಳ ಕೈ ಮೇಲಾದರೆ ಜಾತಿ, ಪ್ರಾಂತಗಳ ಹೆಸರಿನಲ್ಲಿ ದೇಶ ಛಿದ್ರವಾಗಿ ಹೋಗುತ್ತದೆ ಎಂದು ಡಾ. ಲೋಹಿಯಾ ಹೇಳಿದ್ದರು. ದೇಶ ಇಂದು ಅಂಥ ಅಪಾಯದ ಅಂಚಿನಲ್ಲಿದೆ.