ಜಾತಿಗಳ ಸ್ಪರ್ಧೆಯ ಯುಗವೂ... ಶೋಷಿತರ ಕೀಳು ಉದ್ಯೋಗಗಳೂ...
ಭಡ್ತಿ ಮೀಸಲಾತಿ ಪ್ರಕರಣದಲ್ಲಾಗಿರುವಂತೆ ಇತರರಿಗೆ ಅವಕಾಶ ಇಲ್ಲ ಎಂದು ನ್ಯಾಯಾಲಯಗಳಲ್ಲೂ ವಾದಿಸುವ ಜನ ಪೌರಕಾರ್ಮಿಕ ಕೆಲಸದಲ್ಲಿ ಮೀಸಲಾತಿ ಭಾರೀ ಮೀರಿದೆ ಎಂದು ಏಕೆ ವಾದಿಸುವುದಿಲ್ಲ? ಸರಕಾರವೂ ಅಷ್ಟೇ, ಶೇ. 18 ನಿಮ್ಮ ಸಮುದಾಯದ ಪ್ರಾತಿನಿಧ್ಯ ಮೀರಿದೆ, ಪೌರಕಾರ್ಮಿಕ ವೃತ್ತಿಗೆ ನಿಮ್ಮನ್ನು ತೆಗೆದುಕೊಳ್ಳಲು ಬರುವುದಿಲ್ಲ ಎಂದು ಏಕೆ ಹೇಳುವುದಿಲ್ಲ?.
ಜಾತಿಗಳ ಪರಸ್ಪರ ಸ್ಪರ್ಧೆ-ವ್ಯವಸ್ಥೆಯ ಸದ್ಯದ ವಾಸ್ತವವಿದು. ಈ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭಾ ಫಲಿತಾಂಶ ಮತ್ತು ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಸಂದರ್ಭ ತೆಗೆದುಕೊಂಡರೆ ಸಾಕು ಇದು ಅರಿವಿಗೆ ಬರುತ್ತದೆ. ಉದಾ: ಒಕ್ಕಲಿಗರು 38 ಜನ ಆಯ್ಕೆಯಾದರೆ, ಲಿಂಗಾಯತರು ತಾವು ಅವರಿಗಿಂತ ಕಮ್ಮಿ ಏನು ಎಂಬಂತೆ 52 ಜನ ಆಯ್ಕೆಯಾದರು. ಇನ್ನೂ ಕುರುಬರು 10, ಎಸ್ಸಿಗಳು 17 ಹೀಗೆ ಆಯ್ಕೆಯಾದರು. ಅಂದಹಾಗೆ ಇದು ಪಕ್ಷಗಳ ಆಯ್ಕೆ ಎಂದು ಕೆಲವರು ಹೇಳಬಹುದು. ಆದರೆ ಪಕ್ಷ ಯಾವುದೇ ಇರಲಿ ತಮ್ಮ ಜಾತಿ ಮುಖ್ಯ ಎಂಬುದೇ ಇಲ್ಲಿ ಮುಖ್ಯ ಆಗುತ್ತದೆ. ಬ್ರಾಹ್ಮಣ ಸಮುದಾಯಕ್ಕೂ ಕೂಡ ಇದು ಅನ್ವಯ ಆಗುತ್ತದೆ. ಇಂತಹ ಸ್ಪರ್ಧೆ ಬರೀ ಚುನಾವಣೆಗೆ ಅಷ್ಟೇ ಅಲ್ಲ, ಆರ್ಥಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೂ ಇದೆ. ಉದಾಹರಣೆಗೆ ಒಂದು ಜಾತಿ ಒಂದು ಮಠ ಕಟ್ಟಿಕೊಂಡು ಮುಂದೆ ಬಂದರೆ ಇನ್ನೊಂದು ಜಾತಿ ತಾನೇನು ಕಡಿಮೆ ಎಂಬಂತೆ ಮಠ ಕಟ್ಟುತ್ತದೆ! ಈ ಚಾಳಿ ಎಲ್ಲಾ ಜಾತಿಗಳಿಗೂ ಆವರಿಸುತ್ತದೆ, ಆವರಿಸಿದೆ. ಹಾಗೆಯೇ ಸಮುದಾಯ ಭವನ ಕಟ್ಟುವ ಕ್ರಿಯೆ.
ಒಂದು ಜಾತಿ ಸರಕಾರದಿಂದ ಒಂದು ಭವನ ಕಟ್ಟಿಸಿಕೊಂಡರೆ ಇತರ ಜಾತಿಗಳೂ ಆ ಸ್ಪರ್ಧೆಯಲ್ಲಿ ಹಿಂದೆ ಬೀರುವುದಿಲ್ಲ ಬಿದ್ದಿಲ್ಲ. ಮುಂದುವರಿದು ಮಹಾಪುರುಷರ ಜಯಂತಿಗಳಿಗೆ ರಜೆ ಕೊಡಿಸುವ, ವಿವಿಧ ನಿಗಮ ಮಂಡಳಿ ಸ್ಥಾಪಿಸುವ, ವಿವಿಧ ಸಂಸ್ಥೆ-ರಸ್ತೆಗಳಿಗೆ ತಮ್ಮವರ ಹೆಸರಿಡುವ ದೊಡ್ಡ ಸ್ಪರ್ಧೆ ಈ ಜಾತಿ ಸ್ಪರ್ಧೆಯ ಭಾಗವಾಗಿ ಜಾರಿಯಲ್ಲಿರುವುದು ಸುಳ್ಳಲ್ಲ. ಬ್ರಾಹ್ಮಣರ ಶಂಕರಾಚಾರ್ಯರ ಜಯಂತಿ ಆಚರಿಸುವ ಪ್ರಕ್ರಿಯೆ, ಬ್ರಾಹ್ಮಣರ ನಿಗಮ ಸ್ಥಾಪನೆಗೆ ಸರಕಾರಗಳು ಮುಂದಾಗಿರುವುದು ಕೂಡ ಇಂತಹ ಸ್ಪರ್ಧೆಗೆ ಇತ್ತೀಚಿನ ಉದಾಹರಣೆಗಳಾಗಿವೆ. ಹೀಗಿರುವಾಗ ಇಂತಹ ಜಾತಿ ಸ್ಪರ್ಧಾತ್ಮಕ ವಾತಾವರಣದಲ್ಲಿ ಶೋಷಿತ ಸಮುದಾಯಗಳು? ಅದರಲ್ಲೂ ಅಸ್ಪೃಶ್ಯ ಸಮುದಾಯಗಳು? ಖಂಡಿತ ಅವುಗಳ ಸ್ಪರ್ಧೆ ಶೋಚನೀಯ ಸ್ಥಿತಿಯಲ್ಲಿದೆ. ಜಾತಿ ತಾರತಮ್ಯ, ಅದಕ್ಕೆ ಶಾಸ್ತ್ರಗಳ ಮಾನ್ಯತೆ, ಅದಕ್ಕೆ ಪೂರಕವಾಗಿ ಬರುವ ಹಬ್ಬ ಹರಿದಿನಗಳು, ಜಾತ್ರೆಗಳು... ಅಬ್ಬಬ್ಬಾ... ಶೋಷಣೆ ಹಾಗೇ ಮುಂದುವರಿಸಲು ವ್ಯವಸ್ಥೆ ಸೃಷ್ಟಿಸಿರುವ ಚಕ್ರವ್ಯೆಹ ನಿಜಕ್ಕೂ ಅಚ್ಚರಿ ತರಿಸುತ್ತದೆ. ಅಂತಹ ಚಕ್ರವ್ಯೆಹದ ಪ್ರಮುಖ ಲಕ್ಷಣ ಶೋಷಿತ ಸಮುದಾಯಗಳಿಗೆ ಅಂಟಿಸಿರೋ ಕೀಳು ಉದ್ಯೋಗಗಳು. ಚಪ್ಪಲಿ ಹೊಲಿಯುವುದು, ಬೀದಿಗಳ ಕಸಗುಡಿಸುವ ಪೌರಕಾರ್ಮಿಕ ವೃತ್ತಿ, ಸಾರ್ವಜನಿಕ ಶೌಚಾಲಯ ನೋಡಿಕೊಳ್ಳುವುದು-ಶುಚಿಗೊಳಿಸುವುದು, ಮನೆಗಳ ಶೌಚಾಲಯ ಶುಚಿಗೊಳಿಸುವುದು, ಚರಂಡಿ ಶುಚಿಗೊಳಿಸುವುದು... ಹೀಗೆ. ಪ್ರಶ್ನೆ ಏನೆಂದರೆ ಇಂತಹ ಅನಾರೋಗ್ಯಕರ, ಕಡಿಮೆ ಆದಾಯದ, ಸಾಮಾಜಿಕ ಅಗೌರವ ತರುವ ಹೊಲಸು ಕೆಲಸಗಳನ್ನು ಮಾಡುವ, ಮಾಡುತ್ತ ಬದುಕುವ ಶೋಷಿತ ಸಮುದಾಯಗಳು ಇತರರಿಗೆ ಸ್ಪರ್ಧೆ ಒಡ್ಡುವುದಾದರೂ ಹೇಗೆ? ಜಾತಿ ಸ್ಪರ್ಧೆಯಲ್ಲಿ ಭಾಗವಹಿಸುವುದಾದರೂ ಹೇಗೆ?
ಉದಾಹರಣೆಗೆ, ಶೋಷಿತ ಸಮುದಾಯದ ವ್ಯಕ್ತಿಯೊಬ್ಬ ಬೆಳಗ್ಗೆಯಿಂದ ಸಂಜೆ ತನಕ ಚಪ್ಪಲಿ ಹೊಲಿದರೆ ನೂರು ಇನ್ನೂರು ಗಳಿಸಬಹುದು. ಆದರೆ ಹೊಟೇಲ್, ಫಾಸ್ಟ್‌ಫುಡ್ ಅಂಗಡಿ ಇಟ್ಟುಕೊಂಡ ಮತ್ತೊಂದು ಜಾತಿಯವ ಅರ್ಧ ಗಂಟೆಯಲ್ಲಿ ಆ ದುಡ್ಡು ಸಂಪಾದನೆ ಮಾಡುತ್ತಾನೆ. ಹಾಗೆಯೇ ಶೌಚಾಲಯ ಶುಚಿಗೊಳಿಸುವ ಶೋಷಿತ ಸಮುದಾಯದ ವ್ಯಕ್ತಿಯೊಬ್ಬ ಯಾರೂ ಮುಟ್ಟಲು, ಇಳಿಯಲು ಇಚ್ಛೆ ಪಡದ ಹೇಸಿಗೆ ಪಡುವ ಮಲದ ಗುಂಡಿಗೆ ಇಳಿದರೆ, ಕೈನಿಂದ ಶೌಚಾಲಯ ಶುಚಿಗೊಳಿಸಿದರೆ ಆತ ಗಳಿಸುವುದಾದರೂ ಏನು? ಮತ್ತು ಈ ಕೆಲಸ ಆತ 2018ರ ಈ ಯುಗದಲ್ಲೂ ಮಾಡುತ್ತ ಕುಳಿತರೆ ಆತನಿಗೆ ಇತರರು ಗೌರವ ಕೊಡುವುದಾದರೂ ಹೇಗೆ? ಜಾತಿ ಸ್ಪರ್ಧೆಯಲ್ಲಿ ಆತ ನಿಲ್ಲುವುದಾದರೂ ಹೇಗೆ? ನಿಜ, ಸದರಿ ಸಮುದಾಯಗಳಲ್ಲಿ ಎಲ್ಲರೂ ಈ ಕೆಲಸ ಮಾಡುತ್ತಿಲ್ಲದಿರಬಹುದು. ಕೆಲವು ಶೋಷಿತ ಜಾತಿಗಳು ಶಿಕ್ಷಣ ಪಡೆದು ಮುಂದೆ ಬಂದಿರಬಹುದು. ಆದರೆ ಸಮುದಾಯದ ಜವಾಬ್ದಾರಿ ಅವರನ್ನು ಬಿಡದಿರುವುದಿಲ್ಲ. ಚಪ್ಪಲಿ ಹೊಲಿಯುವ, ಶೌಚಾಲಯ ಶುಚಿಗೊಳಿಸುವ ತನ್ನ ಇತರ ಸಹೋದರರೊಡನೆ ಸಮಾಜ ಆತನನ್ನು ಹೋಲಿಸುವುದನ್ನು ಬಿಡುವುದಿಲ್ಲ.
ಉದಾಹರಣೆಗೆ ಎಷ್ಟೋ ಸಂದರ್ಭದಲ್ಲಿ ಶೋಷಿತ ಸಮುದಾಯಗಳ ಕಲಿತವರು ಬೇರೆ ಜಾತಿಗಳ ಮುಂದೆ ಮೀಸಲಾತಿ ಮತ್ತು ಬಾಬಾಸಾಹೇಬ್ ಅಂಬೇಡ್ಕರರ ವಿಚಾರಗಳ ಕಾರಣದಿಂದ ನಾವು ನಿಮಗಿಂತ ಯಾವುದರಲ್ಲಿ ಕಡಿಮೆ ಎಂದು ಸ್ಪರ್ಧೆಗೆ ನಿಲ್ಲುತ್ತಾರೆ. ಆದರೆ ಅವರು ಯಾರ ಜೊತೆ ಸ್ಪರ್ಧೆಗೆ ಇಳಿದಿರುತ್ತಾರೋ ಅವರ ಮುಂದೆ ಅವರದೇ ಸಮುದಾಯದ ಇತರ ಉಪಜಾತಿಗಳು ಕೀಳು ಕೆಲಸಗಳಲ್ಲಿ ತೊಡಗಿದಾಗ ಇವರ ಸ್ಪರ್ಧೆ ಮತ್ತು ಹೋರಾಟಗಳಿಗೆ ಹಿನ್ನಡೆ ಕಾಣುತ್ತದೆ. ಈ ಕಾರಣಕ್ಕಾಗಿ 2018ರ ಈ ಯುಗದಲ್ಲಿ ಕೀಳು ಉದ್ಯೋಗಗಳು ಶೋಷಿತ ಸಮುದಾಯಗಳಿಗೆ ಅವರು ಇತರರೊಡನೆ ಸ್ಪರ್ಧೆ ಮಾಡುವ ಶಕ್ತಿ-ಸಾಮರ್ಥ್ಯ ಖಂಡಿತ ತಂದುಕೊಡುವುದಿಲ್ಲ. ಉದಾಹರಣೆಗೆ ಪೌರಕಾರ್ಮಿಕ ಸಮುದಾಯಗಳಿಗೆ ಕಾರ್ಪೊರೇಷನ್‌ಮುನಿಸಿಪಾಲಿಟಿಗಳು ಮೂರು ತಿಂಗಳು, ನಾಲ್ಕು ತಿಂಗಳಾದರೂ ಸಂಬಳ ಕೊಡೊಲ್ಲ. ಆದರೆ ಒಬ್ಬ ಚಿನ್ನದ ಅಂಗಡಿ ಇಟ್ಟುಕೊಂಡಿರುವ ಜಾತಿ ಯವದಿನವೊಂದಕ್ಕೆ ಕೋಟಿ ರೂ. ಸಂಪಾದನೆ ಮಾಡುತ್ತಾನೆ. ಸ್ಪರ್ಧೆಯಲ್ಲಿ ನಾಗಾಲೋಟದಿಂದ ಮುಂದೆ ಸಾಗುತ್ತಾನೆೆ. ಈ ದಿಸೆಯಲ್ಲಿ ಕೆಲವರು ‘‘ನಾವು ಇಂತಹ ಸ್ಪರ್ಧೆಯಲ್ಲಿ ಇಲ್ಲ’’, ಎಂದು ವಾದಿಸಬಹುದು. ಆದರೆ ಅಂತಹವರು ಎಚ್ಚತ್ತುಕೊಳ್ಳುವಷ್ಟರಲ್ಲಿ ಸಮಯ ಬಹಳ ಮೀರಿರುತ್ತದೆ. ಹಾಗೆಯೇ ಕೆಲವರು ಇದಕ್ಕೆ ಹಿಂದೂ ಸಾಮಾಜಿಕ ಕಟ್ಟುಪಾಡುಗಳನ್ನು ದೂರಬಹುದು. ಆದರೆ ಇದನ್ನು ಒಪ್ಪಿಕೊಂಡು ಅಲ್ಲೇ ಒದ್ದಾಡು ಎಂದು ಯಾರು ತಾನೇ ಕಟ್ಟುಪಾಡು ಹೇರುತ್ತಾರೆ? ಬ್ರಾಹ್ಮಣ ಸಮುದಾಯವೇ ಪೂಜೆ ಮಾಡುವ ತನ್ನ ವಂಶಪಾರಂಪರ್ಯ ಕಟ್ಟುಪಾಡು ಮೀರಿ ದಿನಸಿ ಅಂಗಡಿ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಬ್ಯೂಟಿ ಪಾರ್ಲರ್.... ಹೀಗೆ ನಾನಾ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸ್ಪರ್ಧೆಯಲ್ಲಿ ಉಳಿದಿದೆ. ಹೀಗಿರುವಾಗ ಕೀಳು ಉದ್ಯೋಗಗಳಿಗೆ ಶೋಷಿತ ಸಮುದಾಯಗಳವರು ಗಂಟು ಬೀಳುವುದಾದರೂ ಏಕೆ?
ಈ ನಿಟ್ಟಿನಲ್ಲಿ ಅಕ್ಷರಶಃ ಜಾಗೃತಿ ಕೊರತೆ ಇದೆ. ದುರಂತ ಎಂದರೆ ಸರಕಾರಗಳು ಇದನ್ನು ಕೊನೆಗಾಣಿಸುವ ಬದಲು ಉಳಿಸಲು ಪೂರಕ ಯೋಜನೆ ಹಾಕಿಕೊಡುತ್ತದೆ! ಉದಾಹರಣೆಗೆ ಶೋಷಿತರಿಗೆ ಚಪ್ಪಲಿ, ಗೂಡಂಗಡಿ ಇಟ್ಟು ಕೊಳ್ಳಲು ಸರಕಾರ ನೆರವು ನೀಡುತ್ತದೆ. ಪ್ರಶ್ನೆ ಏನೆಂದರೆ ಅದೇ ಸರಕಾರ ದಿನಸಿ ಅಂಗಡಿ, ಬಟ್ಟೆ ಅಂಗಡಿ, ಮೊಬೈಲ್ ಅಂಗಡಿ ಇಟ್ಟುಕೊಳ್ಳಲು ಶೋಷಿತರಿಗೆ ಯೋಜನೆ ರೂಪಿಸಬಹುದಿತ್ತಲ್ಲ? ಹಾಗೆಯೇ ಎಲ್ಲದರಲ್ಲೂ ಮೀಸಲಾತಿ ಮೀರಿದೆ ಎನ್ನುವ, ಭಡ್ತಿ ಮೀಸಲಾತಿ ಪ್ರಕರಣದಲ್ಲಾಗಿರುವಂತೆ ಇತರರಿಗೆ ಅವಕಾಶ ಇಲ್ಲ ಎಂದು ನ್ಯಾಯಾಲಯಗಳಲ್ಲೂ ವಾದಿಸುವ ಜನ ಪೌರಕಾರ್ಮಿಕ ಕೆಲಸದಲ್ಲಿ ಮೀಸಲಾತಿ ಭಾರೀ ಮೀರಿದೆ ಎಂದು ಏಕೆ ವಾದಿಸುವುದಿಲ್ಲ? ಸರಕಾರವೂ ಅಷ್ಟೇ, ಶೇ. 18 ನಿಮ್ಮ ಸಮುದಾಯದ ಪ್ರಾತಿನಿಧ್ಯ ಮೀರಿದೆ, ಪೌರಕಾರ್ಮಿಕ ವೃತ್ತಿಗೆ ನಿಮ್ಮನ್ನು ತೆಗೆದುಕೊಳ್ಳಲು ಬರುವುದಿಲ್ಲ ಎಂದು ಏಕೆ ಹೇಳುವುದಿಲ್ಲ?. ಈ ನಡುವೆ ಸ್ವಚ್ಛ ಭಾರತ ಪ್ರಹಸನ! ಆ ನಗರ ಇಷ್ಟನೇ ಈ ನಗರ ಅಷ್ಟನೇ ಸ್ಥಾನ ಎಂದು ಗ್ರೇಡ್ ಕೊಡಲಾಗುತ್ತದೆ. ಆದರೆ ಅದನ್ನು ಸಾಧಿಸಿದ ಪೌರಕಾರ್ಮಿಕರ ಸಮಾಜದಲ್ಲಿನ ದರ್ಜೆ? ಕಡೆಪಕ್ಷ ನಿಯಮಿತ ಸಂಬಳ, ಆರೋಗ್ಯ ರಕ್ಷಣಾ ಸಾಧನಗಳು, ಆರೋಗ್ಯ ತಪಾಸಣೆ, ಹೈಟೆಕ್ ಮನೆ.. ಇತ್ಯಾದಿ ಎಲ್ಲಿದೆ?. ಇಲ್ಲದಿರುವಾಗ ಜಾತಿ ಸ್ಪರ್ಧೆಯಲ್ಲಿ ಶೋಷಿತ ಸಮುದಾಯಗಳು ಭಾಗವಹಿಸುವುದಾದರೂ ಹೇಗೆ?
ಈ ನಿಟ್ಟಿನಲ್ಲಿ ಜಾತಿ ಸ್ಪರ್ಧಾತ್ಮಕ ಈ ಯುಗದಲ್ಲಿ ಶೋಷಿತ ಸಮುದಾಯಗಳು ಚರಂಡಿ ಶುಚಿಗೊಳಿಸುವ, ಶೌಚಾಲಯ ಶುಚಿಗೊಳಿಸುವ ವೃತ್ತಿಗಳನ್ನು ಬಿಡುವ ಅಗತ್ಯವಿದೆ. ಸರಕಾರಗಳೂ ಅಷ್ಟೇ ಅವರನ್ನು ಆ ವೃತ್ತಿಗಳಿಂದ ಮುಕ್ತಿಗೊಳಿಸಿ ಪರ್ಯಾಯ ಉದ್ಯೋಗಗಳಿಗೆ ಅವರನ್ನು ತೊಡಗಿಸಿ ನಿಜವಾದ ಸಮಾಜ ಕಲ್ಯಾಣ ಯೋಜನೆ ಜಾರಿಗೊಳಿಬೇಕು. ಆಗಷ್ಟೇ ಜಾತಿ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಜಾತಿಯೂ ನ್ಯಾಯಬದ್ಧವಾಗಿ ಸ್ಪರ್ಧಿಸಲು ಸಾಧ್ಯ. ಇಲ್ಲದಿದ್ದರೆ ಅಸಮಾನ ವಾತಾವರಣದ ಈ ಪರಿಯ ವೇಗದ ಸ್ಪರ್ಧೆಯಲ್ಲಿ ಶೋಷಿತ ಸಮುದಾಯಗಳು ಹಿಂದೆಂದೂ ತಲುಪದ ಭೀಕರತೆಯ ತಳಮಟ್ಟಕ್ಕೆ ಕುಸಿಯಲಿವೆ. ಸಮಾನತೆ ಗಗನಕುಸುಮವಾಗಲಿದೆ.