ಬರಲು ಹೇಳಿ ಭೇಟಿಯಾಗದೆ ಹೋದರು!
‘‘ಕಡಲತೀರದ ನಿಷ್ಠಾವಂತ ತತ್ತ್ವಬದ್ಧ ರಾಜಕಾರಣಿ ಮಾಜಿ ಸಚಿವ ಬಿ.ಎ. ಮೊಹಿದೀನ್ ಅವರು ಸಂಜಯನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಇಂದು ಮುಂಜಾನೆ ವಿಧಿವಶರಾದರೆಂದು ತಿಳಿಸಲು ವಿಷಾದಿಸು ತ್ತೇನೆ.’’ ಎಂದು ಇಂದು ಬೆಳಗ್ಗೆ 9:16ಕ್ಕೆ ನನ್ನ ಸಮಾಜವಾದಿ ಮಿತ್ರ ಅಲಿಬಾಬಾ ವಾ್ಸ್ ಆ್ಯಪ್ ಮೂಲಕ ಸುದ್ದಿ ತಿಳಿಸಿದರು.
ನನಗೆ ದಿಗಿಲಾಯಿತು. ಅವರು ಮೊನ್ನೆ ತಾನೆ ದೂರವಾಣಿ ಮೂಲಕ ಮಾತನಾಡಿದ್ದರು. ‘‘ವಾರ್ತಾಭಾರತಿಯಲ್ಲಿ ನಿನ್ನ ಲೇಖನ ಓದ್ತಾ ಇರ್ತಿನಿ’’ ಎಂದರು. ‘‘ಈಗ ಒಂದು ಲೇಖನ ಓದಿ ಫೋನ್ ಮಾಡ್ತಿದೀನಿ’’ ಎಂದರು. ನನಗೆ ಬಹಳ ಖುಷಿಯಾಯಿತು. ‘ವಾರ್ತಾಭಾರತಿ’ ಕನ್ನಡದ ಪರಿಪೂರ್ಣ ಜಾತ್ಯತೀತ ಪತ್ರಿಕೆ. ಅದು ರಾಜ್ಯದ ಎಲ್ಲೆಡೆ ಸಿಗುವಂತಾಗಬೇಕು; ನಂಬರ್ 1 ಪತ್ರಿಕೆ ಆಗಬೇಕು ಎಂಬುದು ನನ್ನ ಆಶಯ ಎಂದು ತಿಳಿಸಿದೆ. ‘‘ಹೌದು ಯಾವ ಕಾಲಕ್ಕೂ ಪತ್ರಿಕೆಗಳು ಮತ್ತು ರಾಜಕಾರಣಿಗಳು ಸೆಕ್ಯೂಲರ್ ಆಗಿ ಇದ್ದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವದ ವಾತಾವರಣ ನಿರ್ಮಾಣವಾಗಲು ಸಾಧ್ಯ. ‘ವಾರ್ತಾಭಾರತಿ’ಯನ್ನು ಆ ನಿಟ್ಟಿನಲ್ಲಿ ಬೆಳೆಸುವುದು ಅವಶ್ಯವಾಗಿದೆ’’ ಎಂದು ಹೇಳುತ್ತ ದಿನೇಶ್ ಅಮೀನ್ ಮಟ್ಟು ಅವರನ್ನು ಜ್ಞಾಪಿಸಿಕೊಂಡರು. ಈಗೀಗ ಗಾಳಿಸುದ್ದಿಗಳೇ ಮಾಧ್ಯಮದ ಜೀವಾಳವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದೆ. ‘‘ಬೆಂಗಳೂರಿಗೆ ಬಾ ಮಾತನಾಡೋಣ’’ ಎಂದರು. ಜುಲೈ 14ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ. ಬಂದಾಗ ಭೇಟಿಯಾಗುವೆ ಎಂದು ತಿಳಿಸಿದೆ. ಜುಲೈ 10ರಂದು ಅವರ ನಿಧನದ ವಾರ್ತೆ ಕೇಳಿದೆ!
ಅವರ ನನ್ನ ಸ್ನೇಹ 42 ವರ್ಷಗಳಷ್ಟು ಹಳೆಯದು. ಆಗ ಅವರಿನ್ನೂ ಶಾಸಕ ಕೂಡ ಆಗಿದ್ದಿಲ್ಲ. ಅವರನ್ನು ಮೊದಲಿಗೆ ನೋಡಿದ್ದು 43 ವರ್ಷಗಳ ಹಿಂದೆ ತುಂಗಭದ್ರಾ ಅಣೆಕಟ್ಟಿನ ವಸತಿಗೃಹದಲ್ಲಿ. ಅಲ್ಲಿ ಕೆ.ಪಿ.ಸಿ.ಸಿ.ಯ ಸಭೆ ನಡೆದಿತ್ತು. ಆಗ ನಾನು ಕರ್ನಾಟಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು ಎಡಪಂಥೀಯ ಗೆಳೆಯರ ಜೊತೆಗೂಡಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎ.ಐ.ಎಸ್.ಎಫ್. ವಿದ್ಯಾರ್ಥಿ ಸಂಘಟನೆ ಪ್ರಾರಂಭಿಸಿದ್ದೆ. ಮಹಾದೇವ ಹೊರಟ್ಟಿ ಅವರು ಧಾರವಾಡದಲ್ಲಿ ಉತ್ತರ ಕರ್ನಾಟಕದ ಯುವಕರ ಯಶಸ್ವಿ ಸಮ್ಮೇಳನ ಮಾಡಿದ್ದರು. ಅವರ ಜೊತೆಗಿನ ಗೆಳೆತನದಿಂದಾಗಿ ಹೊಸಪೇಟೆ ಬಳಿಯ ತುಂಗಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ನಡೆದ ಕೆ.ಪಿ.ಸಿ.ಸಿ. ಸಭೆಯ ಸ್ಥಳಕ್ಕೆ ಹೋಗಲು ಸಾಧ್ಯವಾಯಿತು. ಆಗ ಅಲ್ಲಿ ಮೊಹಿದೀನ್ ಅವರನ್ನು ಮೊದಲ ಬಾರಿಗೆ ನೋಡಿದೆ. ಗೆಳೆಯರು ಅವರನ್ನು ‘ಪ್ರೊಫೆಸರ್’ ಎಂದು ಕರೆಯುತ್ತಿದ್ದರು. ಅವರು ಮರೆಗುಳಿ ಸ್ವಭಾವದವರಿರಬೇಕು; ಆದ್ದರಿಂದ ಗೆಳೆಯರು ಹೀಗೆ ಕರೆಯುತ್ತಿರಬೇಕು ಎಂದು ಭಾವಿಸಿದೆ. ಅವರು ನನಗೆ ಝುಲ್ಪೀಕರ್ ಅಲಿ ಭುಟ್ಟೊ ಹಾಗೆ ಕಾಣಿಸಿದರು. ಎತ್ತರದ ವ್ಯಕ್ತಿತ್ವ ಉಳ್ಳ ಅವರು ಬೆಳ್ಳಗಿನ ಸುಂದರ ಪುರುಷರಾಗಿದ್ದರು. ಆಗ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್, ಎಫ್.ಎಂ. ಖಾನ್, ಮುಂತಾದವರನ್ನು ನಾನು ಅಲ್ಲಿಯೇ ಮೊದಲ ಬಾರಿಗೆ ನೋಡಿದೆ. ಆಗ ಕೆ.ಎಚ್. ಪಾಟೀಲರು ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿದ್ದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಕೆ.ಎಚ್. ರಂಗನಾಥ ಅವರು ಸಹಕಾರ ಸಚಿವರಾಗಿದ್ದರು.
ಆಗ ಜೆ.ಪಿ. ಚಳವಳಿ ಜೋರಾಗಿತ್ತು. ಸಿ.ಪಿ.ಎಂ. ಕಾಂಗ್ರೆಸ್ಗೆ ವಿರೋಧ ವ್ಯಕ್ತಪಡಿಸಿ ಜೆ.ಪಿ. ಚಳವಳಿಗೆ ಬೆಂಬಲ ನೀಡಿತ್ತು. ಆದರೆ ಸಿ.ಪಿ.ಐ. ನಿಲುವು ಕಾಂಗ್ರೆಸ್ ಪರ ಇತ್ತು. ಕೋಮುವಾದಿ ಪಕ್ಷವನ್ನು ಕೂಡ ತಮ್ಮ ಚಳವಳಿಯಲ್ಲಿ ಜೆ.ಪಿ. ಅವರು ಸೇರಿಸಿಕೊಂಡಿ ದ್ದರಿಂದ ಮತ್ತು ನನ್ನ ನೆಚ್ಚಿನ ಸಿ.ಪಿ.ಐ. ಪಕ್ಷ ಇಂದಿರಾ ಕಾಂಗ್ರೆಸ್ ಪರ ಇದ್ದುದರಿಂದ ನಾನು ಸಹಜವಾಗಿಯೆ ಕಾಂಗ್ರೆಸ್ ಗೆಳೆಯರ ಜೊತೆ ಇದ್ದೆ. ಸಿ.ಪಿ.ಐ. ಪಾರ್ಲಿಮೆಂಟ್ ಒಳಗೆ ಜನಪರ ಬೇಡಿಕೆಗಳ ಈಡೇರಿಕೆಗಾಗಿ ಕಾಂಗ್ರೆಸ್ಗೆ ವಿರುದ್ಧವಾಗಿ ಹೋರಾಟ ಮಾಡುತ್ತಿತ್ತು. ಆದರೆ ಹೊರಗಡೆ ಜೆ.ಪಿ. ಚಳವಳಿಯ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಿತ್ತು. ಅಂತಿಮ ಘಟ್ಟದಲ್ಲಿ ಕೋಮುವಾದಿಗಳು ಮೇಲುಗೈ ಸಾಧಿಸುವರು ಎಂಬ ಕಾರಣಕ್ಕೆ ಸಂಪೂರ್ಣ ಕ್ರಾಂತಿಯ ಹೆಸರಿನಲ್ಲಿ ನಡೆಯುತ್ತಿದ್ದ ಆ ಚಳವಳಿಯ ವಿರುದ್ಧ ಪ್ರಬಲ ವೈಚಾರಿಕ ಹೋರಾಟ ನಡೆಸಿತ್ತು.
ಅದೇ ಸಂದರ್ಭದಲ್ಲಿ ಕೆ.ಎಚ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಫ್ಯಾಶಿಸ್ಟ್ ವಿರೋಧಿ ಸಮ್ಮೇಳನವನ್ನು ಹುಬ್ಬಳ್ಳಿಯ ಎ.ಕೆ. ಇಂಡಸ್ಟ್ರೀಸ್ ಆವರಣದಲ್ಲಿ ನಡೆಸಲಾಯಿತು. ಕೆ.ಎಚ್. ರಂಗನಾಥ ಮತ್ತು ಅವರ ಆಪ್ತಮಿತ್ರ ಹಾಗೂ ಸಚಿವ ಸುಬ್ಬಯ್ಯಶೆಟ್ಟಿ ಅವರು ಈ ಸಮ್ಮೇಳನದ ಬಗ್ಗೆ ಹೆಚ್ಚು ಕ್ರಿಯಾಶೀಲರಾಗಿದ್ದರು. ಸಿ.ಪಿ.ಐ. ನಾಯಕ ಕಾಮ್ರೇಡ್ ಎ.ಜೆ.ಮುಧೋಳ ಮುಂತಾದವರು ಹಗಲು ರಾತ್ರಿ ಕಾರ್ಯೋನ್ಮುಖರಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನನಗೆ ಕಾಂಗ್ರೆಸ್ ಗಣ್ಯರ ಸಂಪರ್ಕ ಬಂದಿತು. ಅಷ್ಟೊತ್ತಿಗಾಗಲೇ ಚಿಲಿಯ ಅಧ್ಯಕ್ಷ ಅಲೆನ್ ಡೆ ಮತ್ತು ಮುಜಿಬುರ್ ರಹಮಾನ್ ಅವರ ಕೊಲೆಗಳಾಗಿದ್ದವು. ನೊಬೆಲ್ ಪ್ರಶಸ್ತಿ ವಿಜೇತ ಎಡಪಂಥೀಯ ಕವಿ ಮತ್ತು ರಾಜತಾಂತ್ರಿಕ ಪಾಬ್ಲೊ ನೆರೂದಾ ಅವರು ಸಂಶಯಾಸ್ಪದವಾಗಿ ನಿಧನರಾಗಿದ್ದರು. ಸಂಪೂರ್ಣ ಕ್ರಾಂತಿಯ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸಂಭವಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದರು. ಹೀಗೆ ಭಾವಿಸಿದ ಯುವ ನಾಯಕರಲ್ಲಿ ಬಿ.ಎ. ಮೊಹಿದೀನ್ ಮತ್ತು ರಮೇಶ್ಕುಮಾರ್ ಅವರೂ ಸೇರಿದ್ದರು.
ಸಂಪೂರ್ಣ ಕ್ರಾಂತಿಯ ಹೆಸರಿನಲ್ಲಿ ಸೈನ್ಯಕ್ಕೆ ದಂಗೆ ಏಳಲು ಕರೆಕೊಡುವಂಥ ಘಟನೆಗಳು ಕೂಡ ಸಂಭವಿಸಿದಾಗ ಸಿದ್ಧಾರ್ಥ ಶಂಕರ ರಾಯ್ ಅವರು ಸಂವಿಧಾನಾತ್ಮಕವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಸಲಹೆ ನೀಡಿದರು ಎಂಬ ಮಾತು ಆಗ ಪ್ರಚಾರದಲ್ಲಿತ್ತು. ಕೊನೆಗೆ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿದರು.
ಎಂ.ಎ. ಮುಗಿದ ನಂತರ 1976ರಲ್ಲಿ ನಾನು ಮಹಾದೇವ ಹೊರಟ್ಟಿಯವರ ಪ್ರಯತ್ನದಿಂದ ಬೆಂಗಳೂರು ಸೇರಿ ರಂಗನಾಥ ಅವರ ಇಲಾಖೆಗೆ ಸಂಬಂಧಿಸಿದ ಮಾಸಪತ್ರಿಕೆ ‘ಕೃಷಿಪೇಟೆ’ಯ ಉಪಸಂಪಾದಕನಾದೆ. ರಂಗನಾಥ ಸಾಹೇಬರ ಮನೆಯಲ್ಲೇ ಉಳಿದುಕೊಳ್ಳುವ ಅವಕಾಶ ಲಭಿಸಿತು. ಆಗ ಕಾಂಗ್ರೆಸ್ನಲ್ಲಿ ಎಡಪಂಥೀಯ ವಿಚಾರಧಾರೆಯುಳ್ಳ ಯುವಕರ ಬಗ್ಗೆ ಹೆಚ್ಚಿನ ಗೌರವವಿತ್ತು. ರಂಗನಾಥ ಸಾಹೇಬರಿಗೆ ನನ್ನ ಬಗ್ಗೆ ಪ್ರೀತಿಯಿತ್ತು. ಹೀಗಾಗಿ ಅವರ ಶಿಷ್ಯರಾದ ಮೊಹಿದೀನ್, ರಮೇಶ್ ಕುಮಾರ್, ವೀರಣ್ಣ ಮತ್ತಿಕಟ್ಟಿ, ಮಹಾದೇವ ಹೊರಟ್ಟಿ, ಅಶೋಕ ಪಟ್ಟಣ ಮುಂತಾದವರ ಕೂಡ ಹೆಚ್ಚಿನ ಆತ್ಮೀಯತೆ ಬೆಳೆಯಿತು. ರಂಗನಾಥ ಸಾಹೇಬರಿದ್ದ ಭವ್ಯ ಸರಕಾರಿ ಮನೆಯ ಹೆಸರು ‘ಕ್ರೆಸೆಂಟ್ ಹೌಸ್’ ಎಂದು ಇತ್ತು. ನಾವೆಲ್ಲ ‘ಫ್ರೆಂಡ್ಸ್ ಆಫ್ ಕ್ರೆಸೆಂಟ್ ಹೌಸ್’ ಆದೆವು.
ಅದೇ ಸಂದರ್ಭದಲ್ಲಿ 20 ಅಂಶದ ಕಾರ್ಯಕ್ರಮಗಳನ್ನು ದೇವರಾಜ ಅರಸು ಗಂಭೀರವಾಗಿ ಕಾರ್ಯಗತಗೊಳಿಸ ತೊಡಗಿದರು. ದೇಶದಲ್ಲೇ ಪ್ರಥಮ ಬಾರಿಗೆ ಭೂಸುಧಾರಣಾ ಸಚಿವ ಹುದ್ದೆಯನ್ನು ಸೃಷ್ಟಿಸಿ ಸುಬ್ಬಯ್ಯಶೆಟ್ಟಿ ಅವರನ್ನು ಆ ಸ್ಥಾನಕ್ಕೆ ಸಚಿವರನ್ನಾಗಿಸಿದರು. ಜಾತ್ಯತೀತತೆಯಲ್ಲಿ ಅದಮ್ಯ ನಂಬಿಕೆಯಿಟ್ಟಿದ್ದ ಸುಬ್ಬಯ್ಯಶೆಟ್ಟರು ಜಮೀನುದಾರಿ ಮನೆತನಕ್ಕೆ ಸೇರಿದ್ದರೂ ಭೂಸುಧಾರಣೆಯ ಕಾರ್ಯವನ್ನು ಬಹಳ ಚಾಕಚಕ್ಯತೆಯಿಂದ ನಿಭಾಯಿಸಿದರು. ಆ ಕಾರ್ಯದಲ್ಲಿ ತಮ್ಮ ಹಾಗೂ ತಮ್ಮ ಸಂಬಂಧಿಕರ ಜಮೀನನ್ನೂ ಕಳೆದುಕೊಂಡರು. ಇಂಥ ಒಂದು ಸಾಮಾಜಿಕ ಪ್ರಜ್ಞೆಯ ಗುಂಪಿನಲ್ಲಿ ಮೊಹಿದೀನ್ ಅವರು ಎದ್ದು ಕಾಣುತ್ತಿದ್ದರು. ಅವರ ಚಿಂತನೆಗಳು ಸಮಾಜವಾದಿ ನೆಲೆಯ ಮೇಲೆ ನಿಂತಿದ್ದು ಸಂಪೂರ್ಣ ಜಾತ್ಯತೀತವಾಗಿದ್ದವು.
ನಂತರ ಮೊಹಿದೀನ್ ಅವರು ಶಾಸಕರೂ ಆದರು. ಶಿಕ್ಷಣ ಮಂತ್ರಿಯೂ ಆಗಿ ತೃಪ್ತಿದಾಯಕ ಸುಧಾರಣೆ ತಂದರು. ಅವರು ಏನೇ ಆದರೂ ನನ್ನ ಜೊತೆಗಿನ ಸಂಪರ್ಕವನ್ನು ಎಂದೂ ಕಳೆದುಕೊಳ್ಳಲಿಲ್ಲ. ಸುಬ್ಬಯ್ಯಶೆಟ್ಟಿ ಅವರು ಮೊದಲು ಮಾಡಿ ಆ ಕಾಲದ ಎಲ್ಲ ಹಿರಿಯ ಕಿರಿಯ ಗೆಳೆಯರೂ ಇಂದಿಗೂ ಸಂಬಂಧ ಇಟ್ಟುಕೊಂಡಿದ್ದೇವೆ. ಈ ಕಾರಣದಿಂದಲೇ ಮೊಹಿದೀನ್ ಅವರು ಮೊನ್ನೆ ತಾನೆ ಫೋನ್ ಮಾಡಿದ್ದು. ನಾವು ಸಮಯ ಸಿಕ್ಕಾಗಲೆಲ್ಲ ಭೇಟಿಯಾಗುತ್ತಲೇ ಇದ್ದೆವು. ಅವರಿಗೆ ತಮ್ಮ ಅನಾರೋಗ್ಯದ ಬಗ್ಗೆ ಬಹಳ ಬೇಸರವಾಗಿತ್ತು. ಏಕೆಂದರೆ ಸದಾ ಚಟುವಟಿಕೆಯಿಂದ ಇರಬೇಕೆನ್ನುವ ಸೇವಾ ಮನೋಭಾವದ ಗಂಭೀರ ವ್ಯಕ್ತಿ ಅವರಾಗಿದ್ದರು.
ಮುಖತಃ ಅವರ ನನ್ನ ಕೊನೆಯ ಭೇಟಿ 2017ನೇ ಮೇ 14ರಂದು ಆಯಿತು. ಕಾಮ್ರೇಡ್ ಮುನೀರ್ ಕಾಟಿಪಳ್ಳ ಮುಂತಾದ ಗೆಳೆಯರು ಸೇರಿ ಮಂಗಳೂರಿನಲ್ಲಿ ಎರಡು ದಿನಗಳ ಮುಸ್ಲಿಂ ಯುವ ಸಮಾವೇಶ ಏರ್ಪಡಿಸಿದ್ದರು. ಮೊಹಿದೀನ್ ಮತ್ತು ನಾನು ಕೂಡ ಈ ಸಮಾವೇಶದ ಉದ್ಘಾಟನಾ ಸಮಾರಂಭದ ಅತಿಥಿಗಳಾಗಿದ್ದೆವು. ಅಂದು ಅವರು 4 ದಶಕಗಳ ಹಿಂದಿನ ಉತ್ಸಾಹ ಮತ್ತು ಜಾತ್ಯತೀತ ನಿಲುವಿನಲ್ಲೇ ಮಾತನಾಡಿದ್ದನ್ನು ಕೇಳಿ ಅವರ ಮೇಲಿನ ನನ್ನ ಅಭಿಮಾನ ಇಮ್ಮಡಿಗೊಂಡಿತು. ಅವರು ಅನಾರೋಗ್ಯದಲ್ಲೂ ಅದೇ ಮಾನವೀಯ ಸ್ಪಂದನವನ್ನು ಉಳಿಸಿಕೊಂಡಿದ್ದರು. ಮನುಷ್ಯ ರನ್ನು ಮನುಷ್ಯರನ್ನಾಗಿ ಮಾತ್ರ ಕಾಣುವ ಅವರ ವ್ಯಕ್ತಿತ್ವ ಯಾವ ಉದಾತ್ತ ಮಾನವನಿಗಿಂತಲೂ ಕಡಿಮೆಯಾಗಿರಲಿಲ್ಲ. ಹೀಗಾಗಿ ಅವರು ಎಲ್ಲರೊಳಗೆ ಅಪರೂಪದ ವ್ಯಕ್ತಿಯಾಗಿದ್ದರು. ಅವರು ಒಬ್ಬ ವ್ಯಕ್ತಿಗತವಾದಿ ಆಗಿರದೆ ಒಂದು ಸಮೂಹವೇ ಆಗಿದ್ದರು. ಅಂತೆಯೆ ಈಗ ಒಂದು ಕಾಲದ ಇತಿಹಾಸವಾಗಿ ಉಳಿದರು.
ಜುಲೈ 14ರಂದು ನನಗೆ ಬರಲಿಕ್ಕೆ ಹೇಳಿ ಅವರು ಭೇಟಿಯಾಗದೆ ಹೋದರು. ಆದರೆ ನಿರಂತರ ನೆನಪಾಗಿ ಉಳಿದರು.