ಸಜ್ಜನ ನ್ಯಾಯಮೂರ್ತಿಯ ಮಾತಿಗೆ ಉಪೇಕ್ಷೆಯ ಮಜ್ಜನ
ಕೆಲವು ದಿನಗಳ ಹಿಂದೆ ಆಂಗ್ಲ ಪತ್ರಿಕೆಯೊಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಯೊಬ್ಬರು ಸಾಮಾನ್ಯವಾಗಿ ಯಾರೂ ಸ್ಪರ್ಶಿಸದೆ, ಅಥವಾ ಸ್ಪರ್ಶಿಸಲು ಮುಜುಗರಪಡುವ, ನಮ್ಮ ದೇಶದಂತಹ ದೇಶದಲ್ಲಿ ಯಾವಾಗಲೂ ವಿವಾದಾಸ್ಪದವೇ ಆದಂತಹ ಒಂದು ವಿಷಯದ ಬಗ್ಗೆ ನೇರವಾಗಿ, ಪ್ರಾಮಾಣಿಕವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಮ್ಮ ‘ಮಡಿವಂತ’ ಮೈನ್‌ಸ್ಟ್ರೀಮ್ ಪತ್ರಿಕೆಗಳು ಆ ಸುದ್ದಿಯನ್ನೇ ಪ್ರಕಟಿಸದೆ ತಾವು ಮೈಲಿಗೆಯಾಗದಂತೆ ನೋಡಿಕೊಂಡವು.
ಪ್ರಭುತ್ವದ ಕಪಿಮುಷ್ಟಿಯಲ್ಲಿರುವ ನಮ್ಮ ಬಹುಪಾಲು ಪ್ರಿಂಟ್ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಯಾವ ವಿಷಯಗಳಿಗೆ ಯಾಕೆ ಮಹತ್ವ ನೀಡುತ್ತವೆ ಮತ್ತು ಯಾಕೆ ಕೆಲವು ವಿಷಯಗಳು, ಸಾಮಾಜಿಕ ಸ್ವಾಸ್ಥದ ದೃಷ್ಟಿಯಿಂದ ಮಹತ್ವಪೂರ್ಣವಾದ ಅಭಿಪ್ರಾಯಗಳು ಅವುಗಳಿಗೆ ಮುಖ್ಯ ಅನ್ನಿಸುವುದಿಲ್ಲ?
ಪ್ರಭುತ್ವಕ್ಕೆ ಇಷ್ಟವಾಗದ ರಾಜಕೀಯ ನಿಲುವುಗಳನ್ನು, ವಿಷಯಗಳನ್ನು ತಾವು ಕೈಗೆತ್ತಿಕೊಂಡರೆ ತಾವು ಎಲ್ಲಿ, ಯಾವಾಗ, ಯಾವ್ಯಾವ ನಮೂನೆಯ ದಾಳಿಗೊಳಗಾಗುತ್ತೇವೋ? ಎಂಬ ಅವುಗಳ ಭಯ ಸಹಜ. ಆದರೆ, ರಾಜಕೀಯವಾಗಿ ಮುಜುಗರ ಅಥವಾ ಉಪಟಳ ಉಂಟುಮಾಡದಂತಹ ವಿಷಯಗಳನ್ನೂ ಅವುಗಳು ‘ಅಸ್ಪಶ್ಯ’ವೆಂದು ಪರಿಗಣಿಸುವುದು ಅರ್ಥಮಾಡಿಕೊಳ್ಳಲು ಕಷ್ಟವಾಗುವ ಸಂಗತಿ.
ಉದಾಹರಣೆಗೆ, ನಮ್ಮ ಕನ್ನಡ ಟಿವಿ ಚ್ಯಾನೆಲ್‌ಗಳನ್ನೇ ತೆಗೆದುಕೊಳ್ಳೋಣ. ಯಾವನೇ ಒಬ್ಬ ರಾಜಕಾರಣಿ ಒಂದು ಕ್ಷುಲ್ಲಕ ಹೇಳಿಕೆ ನೀಡಿದರೂ ಸಾಕು; ಅಥವಾ ಭವಿಷ್ಯವಾದಿ ಅನ್ನಿಸಿಕೊಂಡವನೊಬ್ಬ ಒಂದು ಸರಕಾರವೋ ಒಂದು ಕ್ಷುದ್ರ ಗ್ರಹವೋ, ಇನ್ನು ಮೂರು ತಿಂಗಳಲ್ಲಿ ಬಿದ್ದೇ ಹೋಗುತ್ತದೆಂದು ಹೇಳಿದರೂ ಸಾಕು; ತಕ್ಷಣ ಇದ್ದಬಿದ್ದವರನ್ನೆಲ್ಲ ಕರೆದು ‘ಪ್ಯಾನಲ್ ಡಿಸ್ಕಶನ್’ ಶುರು ಮಾಡಿಬಿಡುತ್ತವೆ.
ಟಿವಿ ಚ್ಯಾನೆಲ್‌ನಲ್ಲಿ ತನ್ನ ಭವಿಷ್ಯದ ಬಗ್ಗೆಯೇ ಖಾತರಿ ಇಲ್ಲದ ಆತ ಹೇಳಿದ ಭವಿಷ್ಯ ಸುಳ್ಳಾಗುತ್ತಲೇ ಇರುತ್ತದೆ. ಸುಳ್ಳಾದಾಗ ಯಾವ ಒಂದು ಚ್ಯಾನೆಲ್‌ನ ಅಧಿಪತಿಯೂ ‘‘ಅದ್ಯಾಕೆ ಸುಳ್ಳಾಯ್ತು? ಇಂಥವರ ಭವಿಷ್ಯವಾಣಿಯನ್ನು ನಂಬಬೇಕೇ?’’ ಎಂದು ಪ್ಯಾನೆಲ್ ಡಿಸ್ಕಶನ್ ನಡೆಸುವುದಿಲ್ಲ. ಬೆಂಗಳೂರಿನಲ್ಲಿ ಹೀಗೆ ಟಿವಿ ಪರದೆಯ ಮೇಲೆ ಮುಂಜಾನೆ ಕಾಣಿಸಿಕೊಳ್ಳುವ ಭವಿಷ್ಯಭೂಪರು ಸಂಜೆಯಾದೊಡನೆ ಯಾವ ಯಾವ ಬಾರ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ ನೋಡಬೇಕಾದರೆ ನೀವು ಒಮ್ಮೆ ಬೆಂಗಳೂರಿಗೆ ಬನ್ನಿ, ನಾನು ತೋರಿಸುತ್ತೇನೆ ಎಂದು ನನ್ನೊಡನೆ ಹೇಳಿದ ನನ್ನ ಪರ್ತಕರ್ತ ಮಿತ್ರರೊಬ್ಬರ ಮಾತು ನೆನಪಾಗುತ್ತದೆ. ಅವರಿಗೆ ತಾನು ಕಾಣಬಾರದ ಜಾಗದಲ್ಲಿ ಜಾಣ ಭವಿಷ್ಯವಾದಿಯನ್ನು ಕಂಡಾಗ ಆದ ಆಶ್ಚರ್ಯ ಅವರ ಮಾತುಗಳಲ್ಲೇ ಸ್ಪಷ್ಟವಾಗುತ್ತಿತ್ತು.
ಈ ಮಾತುಗಳನ್ನು ಬರೆಯಲು ಕಾರಣವಿದೆ. ಕೆಲವು ದಿನಗಳ ಹಿಂದೆ ಆಂಗ್ಲ ಪತ್ರಿಕೆಯೊಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಯೊಬ್ಬರು ಸಾಮಾನ್ಯವಾಗಿ ಯಾರೂ ಸ್ಪರ್ಶಿಸದೆ, ಅಥವಾ ಸ್ಪರ್ಶಿಸಲು ಮುಜುಗರಪಡುವ, ನಮ್ಮ ದೇಶದಂತಹ ದೇಶದಲ್ಲಿ ಯಾವಾಗಲೂ ವಿವಾದಾಸ್ಪದವೇ ಆದಂತಹ ಒಂದು ವಿಷಯದ ಬಗ್ಗೆ ನೇರವಾಗಿ, ಪ್ರಾಮಾಣಿಕವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಮ್ಮ ‘ಮಡಿವಂತ’ ಮೈನ್‌ಸ್ಟ್ರೀಮ್ ಪತ್ರಿಕೆಗಳು ಆ ಸುದ್ದಿಯನ್ನೇ ಪ್ರಕಟಿಸದೆ ತಾವು ಮೈಲಿಗೆಯಾಗದಂತೆ ನೋಡಿಕೊಂಡವು.
ಆ ಸುದ್ದಿ ನಮ್ಮ ಮಾಧ್ಯಮಗಳಲ್ಲಿ ಯಾಕೆ ಚರ್ಚೆಯಾಗಬೇಕಿತ್ತು ಎಂದು ಆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರು ಸಾಮಾನ್ಯ ನ್ಯಾಯಮೂರ್ತಿಯಲ್ಲ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಹಾಗೂ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ ಸಜ್ಜನ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ.
ಕ್ರೀಡೆಗಳಲ್ಲಿ ಜೂಜಾಟಕ್ಕೆ ಹಾಗೂ ಬೆಟ್ಟಿಂಗ್‌ಗೆ ಅವಕಾಶ ನೀಡಬೇಕೆಂದು ಕಾನೂನು ಆಯೋಗ ಇತ್ತೀಚೆಗೆ ಶಿಫಾರಸು ಮಾಡಿತು. ಆ ಶಿಫಾರಸನ್ನು ಬೆಂಬಲಿಸುತ್ತ ಎನ್. ಸಂತೋಷ್ ಹೆಗ್ಡೆಯವರು ‘‘ವೇಶ್ಯಾವೃತ್ತಿಯನ್ನು ಕೂಡ ಕಾನೂನುಬದ್ಧಗೊಳಿಸಬಹುದಾಗಿದೆ’’ ಎಂದರು. ಕೆಟ್ಟ ಅಭ್ಯಾಸಗಳನ್ನು, ಕೆಡುಕುಗಳನ್ನು ರದ್ದುಮಾಡಲು, ನಿರ್ಮೂಲನ ಮಾಡಲು ಸರಕಾರದಿಂದ ಸಾಧ್ಯವಿಲ್ಲ ಎಂದಿರುವ ಹೆಗ್ಡೆಯವರು ಮುಂದುವರಿಸಿ ಹೇಳಿದ ಮಾತುಗಳು ಮನನೀಯ:
‘‘ಕೆಡುಕುಗಳನ್ನು ಕಾನೂನಿನ ಮೂಲಕ ನಿರ್ಮೂಲನ ಮಾಡಬಹುದೆಂದು ತಿಳಿಯುವ ಒಬ್ಬ ವ್ಯಕ್ತಿ ಮೂರ್ಖನ ಸ್ವರ್ಗದಲ್ಲಿ ವಾಸಿಸುತ್ತಿದ್ದಾನೆ’’.
ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಅಡಿಯಲ್ಲಿ ನಿಯಂತ್ರಿತ ಚಟುವಟಿಕೆಗಳಾಗಿ ಮತ್ತು ವಿದೇಶೀ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದಕ್ಕೆ ಒಂದು ಸಂಪನ್ಮೂಲವಾಗಿ ಜೂಜು ಮತ್ತು ಬೆಟ್ಟಿಂಗ್‌ಗೆ ಅನುಮತಿ ನೀಡಬಹುದೆಂದು ಕಾನೂನು ಆಯೋಗ ಮಾಡಿದ ಶಿಫಾರಸಿನ ಹಿನ್ನೆಲೆಯಲ್ಲಿ ಮಾಜಿ ಲೋಕಾಯುಕ್ತರು ವೇಶ್ಯಾವೃತ್ತಿಯನ್ನು ಕೂಡ ಕಾನೂನುಬದ್ಧಗೊಳಿಸುವ ತನ್ನ ಚಿಂತನೆಯನ್ನು ವ್ಯಕ್ತಪಡಿಸಿದ್ದರು.
‘‘ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲದ ಕೆಲವು ಕೆಡುಕುಗಳು, ದುಶ್ಚಟಗಳು ಇವೆ ಮತ್ತು ಅಂತಹ ಅನಿಷ್ಟಗಳನ್ನು ನಿಯಂತ್ರಿಸಲು ನಡೆಸುವ ಯಾವುದೇ ಪ್ರಯತ್ನವು ಕಾನೂನು ವಿರೋಧಿಯಾದ/ಅಕ್ರಮ ವ್ಯವಸ್ಥೆಗಳು ಬೆಳೆಯುವುದಕ್ಕೆ ಕಾರಣವಾಗುತ್ತದೆ. ಇದನ್ನು ನಾವು ಮದ್ಯಪಾನ ನಿಷೇಧವಿದ್ದಾಗ ಅನುಭವಿಸಿದ್ದೇವೆ. ಮದ್ಯಪಾನ ನಿಷೇಧವಿದ್ದಲ್ಲಿ ಅಕ್ರಮ ಮದ್ಯ ಉತ್ಪಾದನೆ ನಡೆಯುತ್ತದೆ. ಸರಕಾರ ಅಬಕಾರಿ ತೆರಿಗೆಯನ್ನು ಕಳೆದುಕೊಳ್ಳುತ್ತದೆ. ಅನಿಷ್ಟಗಳು ಮುಂದುವರಿಯುತ್ತವೆ. ನೀವು ಅದನ್ನು ನಿಯಂತ್ರಿಸಲಾರಿರಿ. ಇವುಗಳು ಕಾನೂನಿನಿಂದ ನಿಯಂತ್ರಿಸಲಾಗದ ಕೆಲವು ವಿಷಯಗಳು.
ಅದೇ ರೀತಿಯಾಗಿ ಜೂಜು ದೇಶದಲ್ಲಿ ನಡೆಯುತ್ತಲೇ ಇದೆ. ಅದನ್ನು ಕಾನೂನುಬದ್ಧಗೊಳಿಸಿ ಅದರ ಮೇಲೆ ನಿಗಾ ಇಟ್ಟರೆ ಶೇ. 70-75 ಅಕ್ರಮ ಚಟುವಟಿಕೆಗಳು ನಿಂತು ಹೋಗುತ್ತವೆ. ಆದರೆ, ಸ್ವಲ್ಪಮಟ್ಟಿನ ನಿಯಂತ್ರಣ ಬೇಕೇ ಬೇಕು’’.
ಪತ್ರಕರ್ತರು ಹಾಗಾದರೆ ವೇಶ್ಯಾವೃತ್ತಿಯನ್ನು ಕೂಡ ಕಾನೂನು ಬದ್ಧಗೊಳಿಸಬೇಕೇ? ಎಂದು ಪ್ರಶ್ನಿಸಿದಾಗ ಹೆಗ್ಡೆಯವರು ಹೇಳಿದ ಮಾತನ್ನು ನಮ್ಮ ಸರಕಾರಗಳು ಕೇಳಿಸಿಕೊಳ್ಳಬೇಕು: ‘‘ಅದನ್ನು (ವೇಶ್ಯಾ ವೃತ್ತಿಯನ್ನು) ಕಾನೂನುಬದ್ಧಗೊಳಿಸಲೇ ಬೇಕು. ಅದು ಎಲ್ಲ ಕಡೆ ನಡೆಯುತ್ತಲೇ ಇದೆ. ಅದರಲ್ಲಿ (ಅಕ್ರಮವಾಗಿ ಇಟ್ಟುಕೊಳ್ಳುವುದರ ಹಿಂದೆ ಇರುವ) ದೊಡ್ಡ ವಿಚಾರವಾದರೂ ಏನು? ಅದನ್ನು ಕಾನೂನುಬದ್ಧಗೊಳಿಸಲೇಬೇಕು. (ಇಟ್ ಶುಡ್ ಬಿ ಲೀಗಲೈಸ್ಡ್).’’
‘‘ಅದು(ವೇಶ್ಯಾವೃತ್ತಿ) ಈಗ ಒಂದು ರೆಗ್ಯುಲರ್ ವೃತ್ತಿಯಾಗಿದೆ. ಅದನ್ನು ಕಾನೂನುಬದ್ಧಗೊಳಿಸಬೇಕು ಮತ್ತು (ವೇಶ್ಯಾವೃತ್ತಿಯಲ್ಲಿ ನಿರತರಾಗಿರುವ) ಜನರಿಗೆ ಪರವಾನಿಗೆ ನೀಡಬೇಕು. ಆಗ ಮಾತ್ರ ಆ ವ್ಯವಸ್ಥೆಯ ಮೇಲೆ(ಸರಕಾರಕ್ಕೆ) ನಿಯಂತ್ರಣವಿರುತ್ತದೆ. ಯಾವ ನಗರದಲ್ಲಿ ಅಥವಾ ಯಾವ ರಾಜ್ಯದಲ್ಲಿ ವೇಶ್ಯಾವೃತ್ತಿ ಇಲ್ಲ? ಹೇಳಿ. ನಾವು ಸುಮ್ಮನೆ ನಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಅದು ಅಲ್ಲಿ ಇಲ್ಲ ಎಂದು ಹೇಳುತ್ತಿದ್ದೇವೆ ಮತ್ತು ಮುಂಬೈಯಂತಹ ಸ್ಥಳಗಳಲ್ಲಿ ವೇಶ್ಯಾವೃತ್ತಿ ಮುಂದುವರಿಯುತ್ತಿರುವ, ಸರಕಾರವೇ ಗುರುತಿಸಿರುವಂತಹ ಪ್ರದೇಶಗಳಿವೆ. ಆದ್ದರಿಂದ ಕಾನೂನಿನ ಮೂಲಕ ನೈತಿಕತೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದನ್ನು ಧರ್ಮ ಮತ್ತು ಧಾರ್ಮಿಕ ನಾಯಕರಿಂದ ಮಾತ್ರ ನಿಯಂತ್ರಿಸಲು ಸಾಧ್ಯ’’.
ಓರ್ವ ಕಾನೂನು ಮತ್ತು ನ್ಯಾಯಾಂಗತಜ್ಞನಾಗಿ, ಭಾರತೀಯ ಸಂಸ್ಕೃತಿಯಲ್ಲಿ ಬಲವಾದ ಬೇರುಗಳನ್ನು ಹೊಂದಿರುವ ಓರ್ವ ಸಮಾಜ ಸುಧಾರಕನಾಗಿ ಮಾನ್ಯ ಸಂತೋಷ್ ಹೆಗ್ಡೆಯವರು ವ್ಯಕ್ತಪಡಿಸಿರುವ ನೇರವಾದ ಅಭಿಪ್ರಾಯಗಳು ಎಂದಿಗಿಂತ ‘ಇಂದು’ ಅತ್ಯಂತ ಹೆಚ್ಚು ಪ್ರಸ್ತುತವಾಗಿವೆ.
ಯಾಕೆಂದರೆ ‘ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ‘ಇಂದು’, ಎರಡು ದಶಕಗಳ ಹಿಂದಿನ ಹದಿಹರೆಯದವರಿಗೆ ಹಾಗೂ ಯುವ ಜನತೆಗೆ ಲಭ್ಯವಿಲ್ಲದಂತಹ ‘ಲೈಂಗಿಕ ಸಾಮಗ್ರಿ’ಗಳನ್ನು ಹಾಗೂ ಕಾಮದ ಎಲ್ಲ ಸಾಧ್ಯತೆಗಳ ದೃಶ್ಯರೂಪಗಳನ್ನು ‘ಸಾಫ್ಟ್’ ಮತ್ತು ‘ಹಾರ್ಡ್’’ - ಎರಡೂ ರೀತಿಯ ಪೋರ್ನ್‌ಗಳನ್ನು ಪೂರೈಸುತ್ತಿರುವ ‘ಇಂದು’ ಆಗಿದೆ. ತಮ್ಮ ಸ್ಮಾರ್ಟ್ ಫೋನ್‌ನಲ್ಲಿಯೇ ವಿಶ್ವದ ಸಕಲ ನಗ್ನ ನೃತ್ಯಾವಳಿಗಳನ್ನು, (ನಮಗೆ ಗೊತ್ತೇ ಆಗದಂತೆ) ವೀಕ್ಷಿಸುವ ನಮ್ಮ ’ಇಂದಿನ’ ಮಕ್ಕಳು ಲೈಂಗಿಕವಾಗಿ ಫ್ರಸ್ಟ್ರೇಟ್ ಆದ ಒಂದು ಜನಾಂಗವಾಗುತ್ತಿದ್ದಾರೆ. ಇದರ ಪರಿಣಾಮ ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮಾನಭಂಗ, ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ಪುಟ್ಟ ಪುಟ್ಟ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ರೂಪದಲ್ಲಿ ಕಾಣಿಸುತ್ತಿವೆ. ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದ ನಿರ್ಭಯಾ ಪ್ರಕರಣಗಳು ಭಯವಿಲ್ಲದೆ ನಡೆಯುತ್ತಲೇ ಇವೆ. ನಮ್ಮ ಸರಕಾರಗಳು ಸಮಸ್ಯೆಯ ಮೂಲಕ್ಕೆ ಹೋಗಿ ಅದರ ಪರಿಹಾರಕ್ಕೆ ದಾರಿ ಹುಡುಕುವ ಬದಲು ದೇಶಕ್ಕೆ ನೇಣಿನ ಕುಣಿಕೆಯನ್ನು ತೋರಿಸಿ ‘‘ಇನ್ನು ನಿಮಗೆ ಅತ್ಯಾಚಾರಿಗಳ ಭಯ ಬೇಡ’’ ಎಂದು ಹೇಳಿ ಸುಮ್ಮನಾಗುತ್ತಿವೆ.
ವಿಶ್ವದಾದ್ಯಂತ ವಾರ್ಷಿಕ ಒಂದು ನೂರು ಬಿಲಿಯ (10,000 ಕೋಟಿ) ಡಾಲರ್ ಆದಾಯದ ಒಂದು ಉದ್ಯಮವಾಗಿರುವ ‘ವಿಶ್ವದ ಅತ್ಯಂತ ಹಳೆಯ ವೃತ್ತಿ’ಯಲ್ಲಿ 40-42 ಮಿಲಿಯ ವೇಶ್ಯೆಯರು ತಮ್ಮ ಮೈಮಾರಿ ಬದುಕುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಮುಂಬೈ ನಗರವೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ‘ಸೆಕ್ಸ್ ವರ್ಕರ್ಸ್’ ‘ಸೆಕ್ಸ್ ಇಂಡಸ್ಟ್ರಿಯಲ್ಲಿ’ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವಿವಿಧ ಸಮಾಜಸೇವಾ ಹಾಗೂ ಸರಕಾರಿ ಸಂಸ್ಥೆಗಳು ವೇಶ್ಯೆಯರ ಸಮಸ್ಯೆಗಳ ಪರಿಹಾರಕ್ಕಾಗಿ ದುಡಿದ ಪರಿಣಾಮವಾಗಿ, 1992ರಲ್ಲಿ ಶೇ. 27ರಷ್ಟು ವೇಶ್ಯೆಯರು ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದರೆ, 2001ರಲ್ಲಿ ಈ ಸಂಖ್ಯೆ ಶೇ. 86ಕ್ಕೆ ಏರಿದೆ. ಇದರಿಂದಾಗಿ ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಏಡ್ಸ್ ಹಾಗೂ ಸಿಫಿಲಿಸ್‌ನಂತಹ ಮಾರಕರೋಗಗಳ ಹರಡುವಿಕೆ ಕಡಿಮೆಯಾಗಿದೆಯಾದರೂ, ಒಂದು ವರದಿಯ ಪ್ರಕಾರ ಭಾರತ ಇನ್ನೂ ಏಡ್ಸ್ ಜ್ವಾಲಾಮುಖಿಯ ಮೇಲೆಯೇ ಕೂತಿದೆ. ವೇಶ್ಯಾವೃತ್ತಿ ಎನ್ನುವ ಬದಲು ‘ಸೆಕ್ಸ್ ಟ್ರೇಡ್,’ ಸೆಕ್ಸ್ ಟೂರಿಸಂ’ ‘ಸೆಕ್ಸ್ ಇಂಡಸ್ಟ್ರಿ’ ಎಂಬ ‘ರಾಜಕೀಯವಾಗಿ ಸರಿ’ಯಾದ ಪದಗಳನ್ನು ಬಳಸಿದರೂ ‘ವೇಶ್ಯೆ’ಯ ಬದಲು ‘ಸೆಕ್ಸ್ ವರ್ಕರ್’, ‘ಕಮರ್ಶಿಯಲ್ ಸೆಕ್ಸ್ ವರ್ಕರ್’ ಅಥವಾ ‘ಸೆಕ್ಸ್ ಟ್ರೇಡ್ ವರ್ಕರ್’ ಎಂದು ಹೇಳಿದರೂ ಮೂಲ ಸಮಸ್ಯೆ ಬಗೆಹರಿಯುವುದಿಲ್ಲ.
ಇಂಟರ್‌ನೆಟ್ ಮೂಲಕ ಎಗ್ಗಿಲ್ಲದೆ ನುಗ್ಗಿ ಬರುತ್ತಿರುವ ಪೋರ್ನ್ ಪ್ರವಾಹದ ಪರಿಣಾಮವಾಗಿ ಈ ದೇಶದ ಸ್ತ್ರೀಯರ ಮೇಲೆ ದಾಳಿ ನಡೆಸುತ್ತಿರುವ ಎಲ್ಲ ರೀತಿಯ ದಾಳಿಕೋರರನ್ನು ತಡೆಯಲು ಪರವಾನಿಗೆ ಪಡೆದು ಕಾರ್ಯಾಚರಿಸುವ ‘ಸಾರ್ವಜನಿಕ ಗೃಹ’ಗಳು ಸಮಾಜದ ಗುರಾಣಿಗಳಾಗಲಾರವೇ? ಇಂತಹ ಸಾಧ್ಯತೆಗಳನ್ನು ಶೋಧಿಸುವುದಕ್ಕಾಗಿಯಾದರೂ ನಮ್ಮ ಸಮಾಜ ಶಾಸ್ತ್ರಜ್ಞರು, ಸರಕಾರಗಳು ಹಾಗೂ ಮಾಧ್ಯಮಗಳು ಮಾನ್ಯ ಹೆಗ್ಡೆಯವರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
(bhaskarrao599@gmail.com)