ಫೇಸ್ಬುಕ್ ಎಂಬ ವ್ಯಾಧಿ
ಫೇಸ್ಬುಕ್ನ್ನು ಹಿತಮಿತವಾಗಿ ಬಳಸಿ ತಮ್ಮ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿಕೊಂಡು, ಹೊಸ ಹೊಸ ಸ್ನೇಹಿತರನ್ನು ಪಡೆದು ಧನಾತ್ಮಕ ಮತ್ತು ಕ್ರಿಯಾತ್ಮಕವಾಗಿ ಬಳಸಿಕೊಂಡಲ್ಲಿ ಫೇಸ್ಬುಕ್ ಸ್ಥಾಪಿಸಿದ ಮೂಲ ಉದ್ದೇಶ ಹೆಚ್ಚು ಅರ್ಥಪೂರ್ಣವಾಗಬಹುದು. ಇಲ್ಲವಾದಲ್ಲಿ, ಮುಂದೊಂದು ದಿನ ಫೇಸ್ಬುಕ್ ವ್ಯಾಧಿ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಾಡಾದರೆ ಆಶ್ಚರ್ಯವೇನಿಲ್ಲ.
ಏನಿದು ಫೇಸ್ಬುಕ್?
ಫೇಸ್ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ. ಅಮೆರಿಕದ ಮೆಸ್ಸಾಚುಸೆಟ್ಸ್ ನ ಕೇಂಬ್ರಿಡ್ಜ್ ಎಂಬಲ್ಲಿ 2004ರ ಫೆಬ್ರವರಿ 4ರಂದು ಅಧಿಕೃತವಾಗಿ ಉಗಮಗೊಂಡಿತ್ತು, ಮಾರ್ಕ್ ಝುಕರ್ಬರ್ಗ್ ಹಾವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ ತಮ್ಮ ಕಾಲೇಜಿನ ಜತೆ ವಾಸಿಗರು ಮತ್ತು ಕಂಪ್ಯೂಟರ್ ಸೈನ್ಸ್ನ ವಿದ್ಯಾರ್ಥಿ ಮಿತ್ರರಾದ ಎಡ್ವಾರ್ಡೊ ಸೆವರಿನ್, ಡಸ್ಕಿನ್ ಮಾಸ್ಕೊ ವಿಟ್ಸ್ ಮತ್ತು ಕ್ರಿಸ್ ಹ್ಯುಸ್ರೊಂದಿಗೆ ಸೇರಿ ಫೇಸ್ಬುಕ್ ಶೋಧಿಸಿದರು. ಆರಂಭದಲ್ಲಿ ಈ ಜಾಲತಾಣದ ಸದಸ್ಯತ್ವ ಕೇವಲ ಹಾವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ಆನಂತರ ಸ್ಟಾನ್ಪೋರ್ಡ್ ವಿಶ್ವವಿದ್ಯಾನಿಲಯ, ಬೊಸ್ಟನ್ ವಿಶ್ವವಿದ್ಯಾನಿಲಯಕ್ಕೆ ಹರಡಿತು. ಆನಂತರ ಇನ್ನೂ ವಿಸ್ತರಿಸುತ್ತಾ ಯಾವುದೇ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಗೆ ಸೇರ್ಪಡೆಗೆ ಅವಕಾಶ ನೀಡತೊಡಗಿತು. ಆನಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಕೊನೆಯದಾಗಿ ಈಗ 13 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟು ಯಾರಾದರೂ ಈ ಜಾಲತಾಣಕ್ಕೆ ಸೇರಬಹುದಾಗಿದೆ.
ಈ ಜಾಲತಾಣ ಇಂದು ವಿಶ್ವದಾದ್ಯಂತ 500 ಮಿಲಿಯನ್ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಖಾಸಗಿ ಮಾಲಕತ್ವದ ಈ ಸಂಸ್ಥೆ ವಾರ್ಷಿಕವಾಗಿ 500 ಮಿಲಿಯನ್ ಆಮೆರಿಕನ್ ಡಾಲರ್ ಆದಾಯ ಹೊಂದಿದೆ. ಕ್ಯಾಲಿಫೋರ್ನಿಯ ಮತ್ತು ಡಬ್ಲಿನ್ಗಳಲ್ಲಿ ಕೇಂದ್ರ ಕಚೇರಿ ಹೊಂದಿದೆ (ಯೂರೋಪ್ ಮತ್ತು ಆಫ್ರಿಕಾ ಖಂಡಗಳಿಗೆ) ಹಾಗೂ ದಕ್ಷಿಣ ಕೊರಿಯದ ಸಿಯೋಲ್ನಲ್ಲಿ (ಏಶ್ಯಾ ಖಂಡದ ಚಟುವಟಿಕೆಗಳಿಗೆ) ಕೂಡಾ ಕೇಂದ್ರ ಕಚೇರಿ ಹೊಂದಿದೆ. ವಿಶ್ವವಿದ್ಯಾನಿಲಯದ ನಿರ್ವಾಹಕರು ತಮ್ಮ ವಿದ್ಯಾರ್ಥಿಗಳು ಪರಸ್ಪರ ಪರಿಚಿತರಾಗಲಿ ಎಂಬ ಉದ್ದೇಶದಿಂದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೊಡುತ್ತಿದ್ದ ಆಡುಮಾತಿನ ಹೆಸರಿನಿಂದ, ಈ ವೆಬ್ಸೈಟ್ನ ಹೆಸರು ‘ಫೇಸ್ಬುಕ್’ ಎಂಬುದಾಗಿ ಉಗಮಗೊಂಡಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾನ, ವೈಜ್ಞಾನಿಕತೆ ಆಧುನಿಕತೆ ಬೆಳೆದಂತೆ ಜನರ ಬೇಕು ಬೇಡಗಳು ಮತ್ತು ಅಗತ್ಯಗಳು ಹೆಚ್ಚುತ್ತಲೇ ಇದೆ. ಜಗತ್ತು ದಿನದಿನಕ್ಕೆ ಕಿರಿದಾಗುತ್ತದೆ. ಎಲ್ಲೋ ನಡೆದ ಒಂದು ಘಟನೆ ಕ್ಷಣಾರ್ಧದಲ್ಲಿ ಎಲ್ಲೆಲ್ಲೋ ತಲುಪಿ ಬಿಡುತ್ತದೆ. ಎಲ್ಲೆಡೆ ದೊರಕುವ ಅಂತರ್ಜಾಲದ ಮಹಿಮೆಯಿಂದಾಗಿ ಎಲ್ಲವೂ ಎಲ್ಲರಿಗೂ ಎಲ್ಲ ಕಾಲಕ್ಕೂ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ವಿಪರ್ಯಾಸವೆಂದರೆ, ಜನರ ಕೆಟ್ಟ ಕುತೂಹಲದಿಂದಾಗಿ ಬೇಕಾದ ವಸ್ತುಗಳಿಗಿಂತ ಬೇಡದ ಅಸಂಬದ್ಧ, ಆಶ್ಲೀಲ ವಸ್ತುಗಳೇ ಜನರಿಗೆ ಯಥೇಚ್ಛವಾಗಿ ದೊರಕುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ, ಆಧುನಿಕ, ವಿಲಾಸಿ ಜೀವನದ ಅನಿವಾರ್ಯತೆಯಾಗಿ ಹುಟ್ಟಿಕೊಂಡ ಮೊಬೈಲ್, ಟ್ಯಾಬ್ಲೆಟ್ಗಳ ಮುಖಾಂತರ ಅಂತರ್ಜಾಲದ ಕೊಂಡಿಯಿಂದ ಫೇಸ್ಬುಕ್, ವಾಟ್ಸ್ ಆ್ಯಪ್ ಮತ್ತು ಇನ್ಸ್ಟಾಗ್ರಾಮ್ಗಳಿಗೆ ದಾಸರಾಗಿ ಸಮಾಜದಿಂದ ವಿಮುಖರಾಗಿ ಒಬ್ಬಂಟಿಯಾಗಿ ಗಂಟೆಗಟ್ಟಲೆ ಬದುಕುವ ಪರಿಸ್ಥಿತಿಯನ್ನು ಉಂಟುಮಾಡಿಕೊಂಡಿದ್ದಾರೆ ಎಂದರೂ ತಪ್ಪಲ್ಲ.
ಮನುಷ್ಯ ಯಾವತ್ತೂ ಸಂಘಜೀವಿ, ಒಂಟಿಯಾಗಿ ಆತ ಬಾಳಲಾರ, ಆದರೆ ಈ ಫೇಸ್ಬುಕ್ಮತ್ತು ವಾಟ್ಸ್ ಆ್ಯಪ್ಗಳಿಂದಾಗಿ ಜನರು ಯಾರು ಇಲ್ಲದೆಯೂ ಏಕಾಂಗಿಯಾಗಿದ್ದಾಗಲೂ ತನ್ನ ಸುತ್ತಲೂ ಹತ್ತು ಹಲವಾರು ಸ್ನೇಹಿತರ ಜೊತೆ ಹರಟೆ ಹೊಡೆಯಲು ಮತ್ತು ಸಂಭಾಷಿಸಲು ಸಾಧ್ಯ ಮತ್ತು ಲವಲವಿಕೆಯಿಂದ ಇರಲು ಸಾಧ್ಯ. ಅದೇ ರೀತಿ ತನ್ನ ಮನೆಯಲ್ಲಿ ತನ್ನೆಲ್ಲಾ ಬಂಧು ಬಳಗ ಇದ್ದರೂ, ಏಕಾಂಗಿಯಾಗಿ ಯಾವುದೋ ರೂಮಿನ ಮೂಲೆಯಲ್ಲಿ ಬಂದಿಯಾಗಿರುವ ಪರಿಸ್ಥಿತಿ ತಂದುಕೊಂಡಿರುವುದು ವಿಪರ್ಯಾಸದ ಪರಮಾವಧಿ. ಅತಿಯಾದರೆ ಅಮೃತವೂ ವಿಷ ಎಂಬ ಮಾತು ಈ ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ಗಳಿಗೂ ಅನ್ವಯಿಸುತ್ತದೆ. ಜಗತ್ತಿನ ಜನಸಂಖ್ಯೆ ಸುಮಾರು 750 ಕೋಟಿಯಿದ್ದಲ್ಲಿ ಸುಮಾರು 220 ಕೋಟಿ ಜನರು ಫೇಸ್ಬುಕ್ ಬಳಸುತ್ತಿದ್ದಾರೆ. ಭಾರತದಲ್ಲಿ 2018ರ ಅಂಕಿ ಅಂಶಗಳ ಪ್ರಕಾರ 270 ಮಿಲಿಯನ್ ಮಂದಿ ಬಳಸುತ್ತಿದ್ದಾರೆ. 2004ರಲ್ಲಿ ಆರಂಭವಾದ ಈ ಫೇಸ್ಬುಕ್ ಜಗತ್ತಿನಾದ್ಯಂತ ತನ್ನ ಕಬಂಧ ಬಾಹು ವಿಸ್ತರಿಸಿದೆ. ಅಮೆರಿಕದ ಮಾನಸಿಕ ತಜ್ಞರ ಸಂಘದ ವರದಿಯಂತೆ ಸುಮಾರು 350 ಮಿಲಿಯನ್ ಮಂದಿ ಈ ಊಚ್ಚಛಿ ಚಿಟಟ ಅಜ್ಚಿಠಿಜಿಟ್ಞ ಈಜಿಟ್ಟಛ್ಟಿ ಅಥವಾ ಮುಖಪುಸ್ತಕ ವ್ಯಾಧಿಯಿಂದ ಬಳಲುತ್ತಿದ್ದಾರೆ. ಹೆಚ್ಚಾಗಿ ಯುವ ಜನತೆ ಈ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಲಕ್ಷಣಗಳು ಏನು?
ಸುಮಾರು 6 ಲಕ್ಷಣಗಳನ್ನು ನಿಗದಿಪಡಿಸಲಾಗಿದ್ದು ಈ 6ರಲ್ಲಿ 3ಕ್ಕಿಂತ ಜಾಸ್ತಿ ಲಕ್ಷಣಗಳು ವ್ಯಕ್ತಿ ಹೊಂದಿದ್ದಲ್ಲಿ ಆತ/ಆಕೆ ಫೇಸ್ಬುಕ್ವ್ಯಾಧಿಯಿಂದ ಬಳಲುತ್ತಿದ್ದಾರೆ ಎಂದರ್ಥ.
► ವ್ಯಕ್ತಿ ಫೇಸ್ಬುಕ್ ಬಳಸಲೇಬೇಕು ಎಂಬ ಅನಿವಾರ್ಯತೆ ಹೊಂದುತ್ತಾನೆ. ಫೇಸ್ಬುಕ್ ಬಳಸದಿದ್ದಲ್ಲಿ ಮಾನಸಿಕ ತುಮುಲ, ದುಗಡ, ಉದ್ವೇಗಕ್ಕೆ ಒಳಗಾಗಿ ತಾಳ್ಮೆ ಕಳೆದುಕೊಳ್ಳುತ್ತಾನೆ. ಅಂತರ್ಜಾಲದ ಕೊಂಡಿ ಸಿಗದೆ ಮುಖಪುಸ್ತಕವನ್ನು ಬಳಸದಂತಹ ಸಂದರ್ಭ ಬಂದಾಗ ವ್ಯಕ್ತಿ ತನ್ನ ಸ್ಥಿಮಿತ ಕಳೆದುಕೊಳ್ಳುತ್ತಾನೆ. ಒಬ್ಬನೇ ಮಾತನಾಡುವುದು ಏಕಾಂಕಿಯಾಗಿ ಪರಿತಪಿಸುವುದು ಮಾಡುತ್ತಾನೆ.
► ದಿನ ವೊಂದರಲ್ಲಿ 6ರಿಂದ 8 ಗಂಟೆಗಳಿಗಿಂತ ಜಾಸ್ತಿ ಮುಖ ಪುಸ್ತಕ ಬಳಸುತ್ತಿದ್ದಲ್ಲಿ ಖಂಡಿತವಾಗಿಯೂ ಆತ ಮುಖಪುಸ್ತಕ ವ್ಯಾದಿಯಿಂದ ಬಳುತ್ತಿದ್ದಾನೆ ಎಂದರ್ಥ.
► ತನ್ನ ಸ್ನೇಹಿತರ ಜೊತೆ, ಹೆತ್ತವರ ಜೊತೆ, ಆಪ್ತರ ಜೊತೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುತ್ತಾನೆ. ಇದರ ಬದಲಾಗಿ ಫೇಸ್ಬುಕ್ನಲ್ಲಿ ಹೆಚ್ಚು ತಲ್ಲೀನನಾಗುತ್ತಾನೆ. ಸ್ನೇಹಿತರ ಜೊತೆ ಕಾಫಿ ಕುಡಿಯುವುದರ ಬದಲು, ಫೇಸ್ಬುಕ್ನಲ್ಲಿ ಚಾಟ್ ಮಾಡುವುದರಲ್ಲಿ ಹೆಚ್ಚು ಉಲ್ಲಸಿತನಾಗಿರುತ್ತಾನೆ. ಹೆತ್ತವರ ಫೋನ್ಗಳಿಗೂ ಉತ್ತರ ನೀಡದೆ, ಫೇಸ್ಬುಕ್ನ ಮುಖಾಂತರವೇ ಹೆತ್ತವರನ್ನು ಸಂಪರ್ಕಿಸಲು ಕೋರುತ್ತಾನೆ.
► ಮುಖ ಪುಸ್ತಕದ ಸ್ನೇಹಿತರಲ್ಲಿ ಹೆಚ್ಚು ಅಪರಿಚಿತ ಮಿತ್ರರೇ ಹೆಚ್ಚು ಇರುತ್ತಾರೆ. 10ರಲ್ಲಿ 8 ಮಂದಿ ಅಪರಿಚಿತ ಮಿತ್ರರು ಅಥವಾ ನಕಲಿ ಮುಖಪುಸ್ತಕ ಸ್ನೇಹಿತರೇ ಅಗಿರುತ್ತಾರೆ.
► ಹೊಸ ವ್ಯಕ್ತಿಗಳನ್ನು ಭೇಟಿಯಾದಾಗ, ಫೇಸ್ಬುಕ್ ವಿಚಾರದ ಬಗ್ಗೆ ಮಾತನಾಡುತ್ತಾರೆ, ಅಪರಿಚಿತ ವ್ಯಕ್ತಿಗಳಿಗೆ ಸ್ನೇಹಿತರಾಗಲು ಕೋರಿಕೆ ಸಲ್ಲಿಸುತ್ತಾರೆ, ಅವರು ಮುಖ ಪುಸ್ತಕಕ್ಕೆ ಹಾಕಿದ ವಿಚಾರಗಳ ಬಗ್ಗೆ ಹೆಚ್ಚಿನ ಲೈಕ್ಗಳು ಬಂದಲ್ಲಿ ಅಥವಾ ಹೊಸ ಸ್ನೇಹಿತರ ಕೋರಿಕೆ ಬಂದಲ್ಲಿ ಅವರು ಮಾದಕತೆಗೆ ಒಳಗಾಗುತ್ತಾರೆ. ಏನೋ ವಿಚಿತ್ರ ಅನುಭವ ಅನುಭವಿಸುತ್ತಾರೆ.
ಕೊನೆಯ ಮಾತು
2018ರ ಆರಂಭದಲ್ಲಿ 500 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರನ್ನು ಫೇಸ್ಬುಕ್ ಹೊಂದಿದೆ. ಬಳಕೆದಾರರು ಈ ಸೇವೆ ಬಳಸಿ ಸಮಯ ವ್ಯರ್ಥ ಮಾಡುತ್ತಾರೆ, ವ್ಯಕ್ತಿಗಳ ಗೋಪ್ಯತೆಯನ್ನು ಕಾಪಾಡಲಾಗುವುದಿಲ್ಲ ಎಂಬ ವಿಚಾರಗಳಿಗೂ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ. ಸಿರಿಯ, ಇರಾನ್ ಮತ್ತು ಚೀನಾ ದೇಶಗಳಲ್ಲಿ ಹಲವಾರು ಬಾರಿ ಈ ಫೇಸ್ಬುಕ್ನ್ನು ತಡೆಹಿಡಿಯಲಾಗಿತ್ತು ಎಂಬುದನ್ನು ಗಮನಿಸಬೇಕಾದ ಅಂಶ. ಅದೇನೇ ಇರಲಿ ಪರಸ್ಪರರನ್ನು ಅರಿತುಕೊಳ್ಳಲು ಹೊಸ ಸ್ನೇಹಿತರನ್ನು ಪಡೆಯಲು, ಒಳ್ಳೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಫೇಸ್ಬುಕ್ ಖಂಡಿತವಾಗಿಯೂ ಸಹಕಾರಿಯಾಗಬಲ್ಲದು. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಫೇಸ್ಬುಕ್ ಬಳಕೆಯಿಂದ ಖಾಸಗಿ ವಿಚಾರಗಳು ಬೀದಿಗೆ ಬಂದು ತೊಂದರೆಗಳಾಗುವುದು.
ಫೇಸ್ಬುಕ್ನ್ನು ಹಿತಮಿತವಾಗಿ ಬಳಸಿ ತಮ್ಮ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿಕೊಂಡು, ಹೊಸ ಹೊಸ ಸ್ನೇಹಿತರನ್ನು ಪಡೆದು ಧನಾತ್ಮಾಕ ಮತ್ತು ಕ್ರಿಯಾತ್ಮಕವಾಗಿ ಬಳಸಿಕೊಂಡಲ್ಲಿ ಫೇಸ್ಬುಕ್ ಸ್ಥಾಪಿಸಿದ ಮೂಲ ಉದ್ದೇಶ ಹೆಚ್ಚು ಅರ್ಥಪೂರ್ಣವಾಗಬಹುದು. ಇಲ್ಲವಾದಲ್ಲಿ, ಮುಂದೊಂದು ದಿನ ಫೇಸ್ಬುಕ್ ವ್ಯಾಧಿ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಾಡಾದರೆ ಆಶ್ಚರ್ಯವೇನಿಲ್ಲ. ಶೇಕಡಾ 60ಕ್ಕಿಂತಲೂ ಹೆಚ್ಚು ಯುವಜನತೆಯನ್ನು ಹೊಂದಿರುವ ಭಾರತೀಯರು ಈ ನಿಟ್ಟಿನಲ್ಲಿ ಹೆಚ್ಚು ಜಾಗರೂಕರಾಗಬೇಕಾಗಿದೆ.