28 ಸಾವಿರ ಸರಕಾರಿ ಶಾಲೆಗಳ ವಿಲೀನ: ಡಾ.ಬರಗೂರು ರಾಮಚಂದ್ರಪ್ಪ ವಿಷಾದ
ತುಮಕೂರು.ಜು.18: ರಾಜ್ಯ ಸರಕಾರವು 28,837 ಸರಕಾರಿ ಶಾಲೆಗಳನ್ನು ಮುಚ್ಚಿ, 8000 ಶಾಲೆಗಳಿಗೆ ವಿಲೀನ ಮಾಡುವ ಮೂಲಕ ಹಿಂದಿನ ಸರಕಾರಕ್ಕಿಂತ ಭಿನ್ನವಲ್ಲ ಎಂದು ಸಾಭೀತು ಮಾಡಿದೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಏಕೆ ಬಂತು ಎಂದು ಆಲೋಚಿಸುವ ಬದಲು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲಿ ಇರುವ ಶಿಕ್ಷಣ ನಿಯಮದಲ್ಲಿ ಒಂದು ಶಾಲೆಯ 3 ಕಿ.ಮಿ. ವ್ಯಾಪ್ತಿಯಲ್ಲಿ ಮತ್ತೊಂದು ಶಾಲೆ ತೆರೆಯಲು ಅವಕಾಶವಿಲ್ಲ. ಆದರೆ ಈ ನಿಯಮವನ್ನು ಗಾಳಿಗೆ ತೂರಿ, ಗ್ರಾಮೀಣ ಭಾಗದಲ್ಲಿ ಒಂದೇ ಗ್ರಾಮದಲ್ಲಿ ಎರಡು, ಮೂರು ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಮೊದಲು ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಕೇಂದ್ರ ಸರಕಾರವು ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರಿಯ ಗುಣಮಟ್ಟದಿಂದ ಕೂಡಿರುವ ಶಿಕ್ಷಣ ಸಂಸ್ಥೆಗಳ ಪಟ್ಟಿ ಮಾಡಿದ್ದು, ವಿಪರ್ಯಾಸವೆಂದರೆ, ಇನ್ನು ಕಣ್ಣು ಬಿಡದ ಜಿಯೋ ಇಂಟರ್‍ನ್ಯಾಷನಲ್ ಶಿಕ್ಷಣ ಸಂಸ್ಥೆಯೂ ಇದರಲ್ಲಿ ಸೇರಿದೆ. ಸರಕಾರ ಮಾಡಿರುವ ತಪ್ಪನ್ನು ಸಚಿವರೊಬ್ಬರು, ಸಮರ್ಥಿಸಿರುವ ರೀತಿ ನಿಜಕ್ಕೂ ನಾಚಿಕೆ ಪಡುವಂತಿದೆ. ಅಂಬಾನಿಯವರು ಏನೇ ಮಾಡಿದರೂ ಉತ್ಕೃಷ್ಟವಾಗಿ ಮಾಡುತ್ತಾರೆ ಎಂಬ ಕಾರಣಕ್ಕೆ ಆ ಶಾಲೆಯನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳುವುದು ಸರಕಾರಿ ಶಿಕ್ಷಣ ವ್ಯವಸ್ಥೆಗೆ ಮಾಡಿದ ಅಪಮಾನ. ಖಾಸಗಿಯವರು, ಶ್ರೀಮಂತರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಇರುತ್ತದೆ ಎಂಬುದು ಪ್ರಜಾಪ್ರಭುತ್ವವನ್ನೇ ಅಣಕು ಮಾಡಿದಂತೆ ಎಂದು ಡಾ.ಬರಗೂರು ರಾಮಚಂದ್ರಪ್ಪ ನುಡಿದರು.
ಶಿಕ್ಷಣದ ಹೆಸರಿನಲ್ಲಿ ವ್ಯಾಪಾರೀಕರಣ ಮಾಡುತ್ತಿದ್ದು, ಸರಕಾರಿ, ಖಾಸಗಿ, ಅಂಗ್ಲಮಾಧ್ಯಮ, ಕನ್ನಡ ಮಾಧ್ಯಮ, ಅಂಗನವಾಡಿ, ಎಲ್.ಕೆ.ಜಿ. ಹೀಗೆ ಹತ್ತು ಹಲವು ರೀತಿಯ ಶಿಕ್ಷಣ ವ್ಯವಸ್ಥೆ ಅಸಮಾನತೆಯಿಂದ ಕೂಡಿದ್ದು, ವಿಜ್ಞಾನಕ್ಕಿಂತ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದ್ದ ಪರಿಣಾಮ ವಿಜ್ಞಾನ ಹಿಂದೆ ಸರಿಯುತ್ತಿದೆ. ಬಿಬಿಎ, ಎಂಬಿಎ, ಅರ್ಕಿಟೆಕ್ಟ್ ಹೀಗೆ ಗೊತ್ತು ಗುರಿಯಿಲ್ಲದೆ ಶಿಕ್ಷಣದ ದಿಕ್ಕು ಬದಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಿದರೆ ಸರಕಾರಿ ಶಾಲೆಗಳಲ್ಲಿ ಸುಧಾರಣೆ ಕಾಣಬಹುದು ಎನ್ನುವುದು ಭ್ರಮೆ. ಇಂತಹ ಪ್ರಯತ್ನವನ್ನು ಈ ಹಿಂದೆ ಮಹಾರಾಷ್ಟ್ರ ರಾಜ್ಯದಲ್ಲಿ ಮಾಡಲಾಗಿತ್ತು. ಮರಾಠ ಶಾಲೆಗಳಿಗೆ ಪ್ರವೇಶ ಕಡಿಮೆಯಾಗಿ, ಅಂಗ್ಲಶಾಲೆಗಳಿಗೆ ಪ್ರವೇಶ ಹೆಚ್ಚಾಯಿತು. ಇಂತಹ ಅಪಾಯಗಳನ್ನು ತಡೆಯುವ ಪ್ರಯತ್ನ ನಡೆಯಬೇಕು. ರಾಜ್ಯದ 33 ಸಾವಿರ ಸರಕಾರಿ ಶಾಲೆಗಳಿಗೆ ಮೂಲಸೌಕರ್ಯಗಳ ಕೊರತೆ ಇದೆ. ಅದನ್ನು ಸರಿಪಡಿಸುವತ್ತ ಸರಕಾರ ಗಮನಹರಿಸಬೇಕೆಂದು ಬರಗೂರು ರಾಮಚಂದ್ರ ಒತ್ತಾಯಿಸಿದರು.
ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ನಾನಿರುವ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿದ್ದುಕೊಂಡೇ ಸಾಧನೆ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ತಮ್ಮ ಜೀವನದ ವೃತ್ತಾಂತಗಳನ್ನು ಮಕ್ಕಳ ಮುಂದಿಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಪ್ಪ, ಎಂಪ್ರೆಸ್ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಎಲ್.ಪದ್ಮಾವತಿ ಉಪಸ್ಥಿತರಿದ್ದರು.