ಶಶಿ ತರೂರ್ ಚಿಂತನೆ ಮತ್ತು ಬಹುತ್ವ ಭಾರತ
ಧರ್ಮದ ನೆಲೆಯಲ್ಲಿ ಒಂದು ದೇಶವು ಶಾಂತಿ ಮತ್ತು ಅಭಿವೃದ್ಧಿಯನ್ನು ಸಾಧಿಸಲಾರದೆಂಬುದಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಕೆಲವು ಮಧ್ಯಪೂರ್ವ ದೇಶಗಳೂ ಇಂಥವೇ ಉದಾಹರಣೆಗಳಾಗಿವೆ. ಅವನ್ನು ನೋಡಿಯಾದರೂ ಭಾರತೀಯರು ತಮ್ಮಲ್ಲೇನಾದರೂ ಅಂತಹ ಮತೀಯವಾದದ ಭಾವನೆಗಳು, ವಿಚಾರಗಳು ಹುಟ್ಟಿಕೊಂಡರೆ ಅವನ್ನು ಬೇರುಸಹಿತ ಕಿತ್ತುಹಾಕಬೇಕು.
ಶ
ಶಿತರೂರ್ ನಮ್ಮ ಸಮಕಾಲೀನರಲ್ಲೇ ಅಪರೂಪವೆಂಬಂತಿರುವ ಚಿಂತಕ. ಇಂಗ್ಲಿಷಿನಲ್ಲಿ ಒಳ್ಳೆಯ ಮತ್ತು ಜನಪ್ರಿಯ ಮಾತುಗಾರ, ವಿಮರ್ಶಕ ಹಾಗೂ ಅಂಕಣಕಾರ ಮತ್ತು ಅನುದಿನದ ಬರಹಗಾರ. ಈ ದೇಶದ ಆಗುಹೋಗುಗಳ ಬಗ್ಗೆ ಆಳವಾದ ಚಿಂತನೆಯ ಫಲವಾಗಿ ಕಳೆದ ಸುಮಾರು ಮೂರುವರೆ ದಶಕಗಳ ದೀರ್ಘಾವಧಿಯಲ್ಲಿ ಅವರ ಹದಿನೇಳು ಕೃತಿಗಳು ಬಂದಿವೆ. 2016ರಲ್ಲಿ ಸೃಜನೇತರ ಬರಹಕ್ಕಾಗಿರುವ ರಾಮನಾಥ ಗೋಯೆಂಕಾ ಪ್ರಶಸ್ತಿಯನ್ನು ಪಡೆದವರು ಅವರು. ಸಾಕಷ್ಟು ಸಾಹಿತ್ಯ ಸಾಧನೆಯ ಮೈಲಿಗಲ್ಲುಗಳನ್ನು ಏರಿದವರು ಮತ್ತು ಪ್ರಶಸ್ತಿಗಳನ್ನು ಗಳಿಸಿದವರು.
ಇಷ್ಟೇ ಆಗಿದ್ದರೂ ಅವರು ಅತ್ಯಂತ ಪ್ರಸ್ತುತವಾಗುವ ವ್ಯಕ್ತಿ. ಆದರೆ ಅವರ ಸಾಧನೆ ಇನ್ನೂ ಇದೆ: ಲಂಡನ್‌ನಲ್ಲಿ ನೆಲೆಸಿದ ಭಾರತ ಮೂಲದ ಸುಶಿಕ್ಷಿತ ನಾಯರ್ ಕುಟುಂಬದಲ್ಲಿ 1956ರಲ್ಲಿ ಹುಟ್ಟಿದ ಶಶಿತರೂರ್ ಅಲ್ಲಿ ಮಾತ್ರವಲ್ಲದೆ ಭಾರತ ಮತ್ತು ಅಮೆರಿಕದಲ್ಲಿ ವಿದ್ಯಾಭ್ಯಾಸವನ್ನು ಪಡೆದು ಕೇವಲ 22 ವರ್ಷ ವಯಸ್ಸಿನಲ್ಲಿ ಅಮೆರಿಕದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದ ಗಣನೀಯ ಪ್ರತಿಭೆ. ವಿಶ್ವಸಂಸ್ಥೆಯಲ್ಲಿ ಅಧೀನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಈ ಮಾಜಿ ವಿದೇಶಾಂಗ ಖಾತೆಯ ಹಿರಿಯ ಅಧಿಕಾರಿ ತಿರುವನಂತಪುರ ಕ್ಷೇತ್ರದಿಂದ ಕಳೆದ ಎರಡು ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದರು. ಯುಪಿಎ ಸರಕಾರದಲ್ಲಿ ಮಾನವ ಸಂಪನ್ಮೂಲ ಖಾತೆಯ ಹಾಗೂ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿದ್ದರು. ಈಗ ಸಂಸತ್ತಿನ ವಿದೇಶಾಂಗ ವ್ಯವಹಾರ ಸಮಿತಿಯ ಅಧ್ಯಕ್ಷರು. ರಾಜಕೀಯದಲ್ಲಿದ್ದರೂ ಸದಾ ಮುಕ್ತವಾಗಿ ಅಭಿವ್ಯಕ್ತಿಸುವವರು. ಅವರಂತೆ ಅಸ್ಖಲಿತ ಮತ್ತು ಮೇಲ್ದರ್ಜೆಯ ಇಂಗ್ಲಿಷನ್ನು ಮಾತನಾಡಲು, ಬರೆಯಲು ಸಾಧ್ಯವಾಗದೆ ಅವರನ್ನು ಕೀಳಾಗಿ ಟೀಕಿಸುವ ಕಳಪೆ ಮನಸ್ಥಿತಿಯವರೂ ಇದ್ದಾರೆ. (ಈ ಗುಂಪಿನಲ್ಲಿ ಸುಬ್ರಮಣಿಯನ್ ಸ್ವಾಮಿಯವರಂತಹ ಅಕಡಮಿಕ್ ವರ್ತುಲದ ವಿಕ್ಷಿಪ್ತ ರಾಜಕಾರಣಿ-ಪಂಡಿತರಿರುವುದು ಒಂದು ವಿಪರ್ಯಾಸ!) ನಮ್ಮ ಕೆಳಮಟ್ಟದ ರಾಜಕಾರಣದಲ್ಲಿ ಪ್ರತಿಭಾವಂತರಿಗೆ, ಚಿಂತಕರಿಗೆ, ಮುತ್ಸದ್ದಿಗಳಿಗೆ ಅವಕಾಶವಿಲ್ಲದಿರುವಾಗ ಮತ್ತು ಬಹುಮತವೇ ಸತ್ಯ ಹಾಗೂ ನ್ಯಾಯವೆಂದು ನಮ್ಮ ರಾಜಕಾರಣವು ಪ್ರಕಟಪಡುತ್ತಿರುವಾಗ ಶಶಿತರೂರ್ ಮಾತ್ರ ತಮ್ಮನ್ನು ಟೀಕಿಸುವ ಮಂದಿಗೆ ಸದಾ ಗ್ರಾಸವನ್ನು ಒದಗಿಸುವವರಂತೆ ತಮ್ಮ ಪ್ರಖರ ಪಾರದರ್ಶಕ ಮಾತುಗಳಿಂದ, ಅಭಿಪ್ರಾಯಗಳಿಂದ ಒಂದಲ್ಲ ಒಂದು ಗೊಂದಲದಲ್ಲಿ ಸಿಕ್ಕಿಹಾಕಿಕೊಂಡದ್ದೂ ಉಂಟು. ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ಈಗ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಕಾನೂನಿನಡಿ ಎಲ್ಲರೂ ಸಮಾನರಾಗಿರುವುದರಿಂದ ಅವರ ಭವಿಷ್ಯದ ಬಗ್ಗೆ ಏನೂ ಹೇಳಲಾಗದು. ಶಶಿತರೂರ್ ತಾನು ಸಂಸ್ಕೃತ ಮತ್ತು ಹಿಂದೂ ಧರ್ಮ ಮತ್ತು ತತ್ವದಲ್ಲಿ ವಿದ್ವಾಂಸರಲ್ಲವೆಂದು ಹೇಳಿಕೊಂಡೂ ಭಾರತದಲ್ಲಿ ಪ್ರಚಲಿತದಲ್ಲಿರುವ ಹಿಂದೂ ಧರ್ಮ ಮತ್ತು ಆಚರಣೆಯ ಕುರಿತು ಕ್ಷ-ಕಿರಣ ಬೀರುವ ನಾನೇಕೆ ಹಿಂದು (ಏ್ಗ ಐ ಅ ಅ ಏಐಘೆಈಖಿ) ಎಂಬ ಕೃತಿಯನ್ನು 2018ರಲ್ಲಿ ಬರೆದರು. ಈ ಕೃತಿಯಲ್ಲಿ ಅವರು ಹಿಂದೂ ಧರ್ಮಕ್ಕೆ ಕೊಡುಗೆ ಯನ್ನು ನೀಡಿದ ಶ್ರೇಷ್ಠರ ಕುರಿತು ಅದರಲ್ಲೂ ಮುಖ್ಯವಾಗಿ ಆದಿಶಂಕರರು ನಿರೂಪಿಸಿದ ಅದ್ವೈತ ಸಿದ್ಧಾಂತದ ಕುರಿತು ಆಳವಾದ ಅಧ್ಯಯನವನ್ನು ಮಾಡಿ ಮೌಲ್ಯಯುತ ವಿವೇಚನೆಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಸಾಮಾನ್ಯರ ದೃಷ್ಟಿಯಲ್ಲಿ ಜೀವಂತವಿರುವ ಹಿಂದೂಧರ್ಮಕ್ಕೂ, ಹಿಂದುತ್ವ ರಾಜಕಾರಣಕ್ಕೂ ಇರುವ ಅಗಾಧ ಅಂತರವನ್ನು ವಿಶ್ಲೇಷಿಸಿದ್ದಾರೆ. ಹಿಂದೂ ಬಲಪಂಥದ ಸೈದ್ಧಾಂತಿಕ ಮಾರ್ಗದರ್ಶಕರಂತಿರುವ ದೀನದಯಾಳಜಿಯವರ ಏಕಾತ್ಮ ಮಾನವತೆಯನ್ನು ತಮ್ಮ ಅಳತೆಗೋಲಿನ ನಿಕಷಕ್ಕೆ ಒಡ್ಡಿದ್ದಾರೆ. ಭಾರತದ ಬಹುತ್ವದ ಕುರಿತು ವ್ಯಾಖ್ಯಾನಿಸುತ್ತ ಹೇಗೆ ಹಿಂದೂ ಮೂಲಭೂತವಾದವು ಅದನ್ನು ನಿಗ್ರಹಿಸುವ ಪ್ರಯತ್ನವನ್ನು ಮಾಡುತ್ತದೆಯೆಂದು ವಿವರಿಸಿದ್ದಾರೆ. ಇಷ್ಟಾದರೂ ಭಾರತವು ತನ್ನ ಜಾತ್ಯತೀತತೆಯನ್ನು ಕಾಪಾಡಿಕೊಳ್ಳುವಲ್ಲಿ ಬಹುಸಂಖ್ಯಾತ ಉದಾರಿ ಹಿಂದೂಗಳು ಇನ್ನೂ ಜಾಗೃತರಾಗಿರುವುದನ್ನು ಶ್ಲಾಘಿಸಿದ್ದಾರೆ. ಸಮಕಾಲೀನ ಭಾರತದ ಸಂದರ್ಭದಲ್ಲಿ ಸಮತೂಕದ ಮತ್ತು ಮಹತ್ವದ ಕೃತಿ ಇದು.
ಇಂತಹ ಶಶಿತರೂರ್ ಭಾರತವು ಮತೀಯ ಹಿಂದೂ ಮೂಲಭೂತವಾದಿ ಗಳಿಂದಾಗಿ ಮತ್ತು ಅವರನ್ನು ಬೆಂಬಲಿಸುವ ಸರಕಾರದಿಂದಾಗಿ ‘ಹಿಂದೂ ಪಾಕಿಸ್ತಾನ’ವಾಗುವ ಆತಂಕವನ್ನು ವ್ಯಕ್ತಪಡಿಸಿದರು. ಇದಕ್ಕೆ ಉಗ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಕ್ರಿಮಿನಲ್ ದೂರುಗಳು ದಾಖಲಾದವು. ಅವರ ಕಚೇರಿಯ ಮೇಲೆ ಹಿಂದೂ ಮೂಲಭೂತವಾದಿಗಳ, ಮತಾಂಧರ ಹಿಂಸಾತ್ಮಕ ದಾಳಿ ನಡೆಯಿತು. ಅದನ್ನು ನಿಯಂತ್ರಿಸಲು ಕೇಂದ್ರ ಸರಕಾರ ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನಿದ್ದದ್ದು ಬಹಿರಂಗ ರಹಸ್ಯ. ಆದರೆ ದುರಂತವೆಂದರೆ ಅವರು ಯಾವ ಪಕ್ಷವನ್ನು ಪ್ರತಿನಿಧಿಸುತ್ತಾರೋ ಅದೇ ಪಕ್ಷವೂ ತಾನು ಈ ಮಾತನ್ನು ಬೆಂಬಲಿಸುವುದಿಲ್ಲವೆಂಬರ್ಥ ಬರುವಂತೆ ನಡೆದುಕೊಂಡಿತು. ಜನಪ್ರಿಯ, ಅಧಿಕಾರ ರಾಜಕಾರಣದ ನಡುವೆ ಯಥಾರ್ಥ ಚಿಂತನೆ ಬಳಲಿತು.
ಹೀಗೆ ಬರೆಯುವಾಗ ಅವರಿಗೆ ಇಂತಹ ಮಾತುಗಳು ಎಲ್ಲರಿಗೂ ಅರ್ಥವಾಗದೆಂಬುದೂ ಮತ್ತು ರಾಜಕಾರಣಿಗಳು ಇದನ್ನು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಾರೆಂಬುದೂ ಗೊತ್ತಿದ್ದಿರಬಹುದು. ಆದರೆ ಚಿಂತಕರು ತನ್ನ ಕಾಲದ ಗೊಂದಲದ ಬಗ್ಗೆ ತಲೆಕೊಡವಿಕೊಳ್ಳುವುದಿಲ್ಲ. ಅವರ ಗುರಿಯೇನಿದ್ದರೂ ಅದು ಶಾಶ್ವತದ ಸುಖದತ್ತ. ಕಾಡ ಮೂಲಕವೆ ಪಥ ಆಗಸಕ್ಕೆ ಎಂಬುದು ಸಾಕ್ರಟಿಸ್, ಬುದ್ಧ, ಯೇಸು, ಗೆಲಿಲಿಯೋ ಹೀಗೆ ಭಿನ್ನ ಕ್ಷೇತ್ರಗಳ ಎಲ್ಲ ಕಾಲದ ಚಿಂತಕರಿಗೂ ಅನ್ವಯಿಸುತ್ತದೆ. ‘ಹಿಂದೂ ಪಾಕಿಸ್ತಾನ’ ಎಂಬ ಪದದ ಅರ್ಥವೇ ಬಹುಮಂದಿಗೆ ಅದರಲ್ಲೂ ಹಿಂಸೆಯೇ ರಾಜಕಾರಣವೆಂದು ನಂಬುವ ಮತ್ತು ಜನರನ್ನು ರೊಚ್ಚಿಗೆಬ್ಬಿಸುವುದೇ ಧ್ರುವೀಕರಣ ರಾಜಕೀಯದ ಸನ್ಮಾರ್ಗವೆಂದು ಬಗೆದ ಪ್ರತಿಷ್ಠಿತರಿಗೆ ಅರ್ಥವಾಗದು. ಅವರಿಗೆ ಅರ್ಥವಾದದ್ದು ಅಥವಾ ಕಂಡದ್ದು ‘ಹಿಂದೂ’ ಎಂಬ ಪದ ಮತ್ತು ಅದರೊಂದಿಗೆ ಬಳಸಿದ ‘ಪಾಕಿಸ್ತಾನ’ ಎಂಬ ಪದ. ಒಂದು ವೇಳೆ ಈ ಪದಗಳ ಸಾಧುತ್ವ ಮತ್ತು ಅವು ಸಮೀಕರಿಸಿ ನೀಡಿದ ಸಂಕೇತಾರ್ಥ ಅರ್ಥವಾದರೂ ಅದನ್ನವರು ಸಾಮಾಜಿಕ ಹಿತಕ್ಕೆ ಬಳಸರು; ಬದಲು ಎಷ್ಟು ಸಾಧ್ಯವೋ ಅಷ್ಟೂ ತಪ್ಪುಕಲ್ಪನೆಗೆ ಅವಕಾಶಮಾಡಿಕೊಟ್ಟು ಜನರನ್ನು ತಪ್ಪುಹಾದಿಗೆಳೆಯುವುದೇ ಮತೀಯ ರಾಜಕಾರಣದ ಉದ್ದೇಶವಾಗಿರುವಾಗ ಇಂತಹ ಸುವರ್ಣ ಸಂದರ್ಭವನ್ನು ಮತೀಯ ಸಿದ್ಧಾಂತಿಗಳು ಕಳೆದುಕೊಳ್ಳಲಾರರು. ಬೆಂಕಿ ಹಚ್ಚುವವನಿಗೆ ಅದು ನೀಡಬೇಕಾದ ಬೆಳಕಿನ ಬಗ್ಗೆ ಗಮನವಿರುವುದಿಲ್ಲ. ಒಟ್ಟಾರೆ ಸುಡಬೇಕು, ಅಷ್ಟೇ. ನಾಳೆ ಈ ನೆಲ ಏನಾದೀತು, ನಮ್ಮ ಅನಂತರದ ತಲೆಮಾರಿಗೆ ಮಾರಿಯಾಗಬಲ್ಲ ಒಂದು ವಿನಾಶಕಾರಿಯಾದ ಒಂದು ಕಿಡಿಯನ್ನು ನಾವು ಹೊತ್ತಿಸುತ್ತಿದ್ದೇವೆಂಬ ಅರಿವಿದ್ದೂ ಉರಿಸುವವರ ಕಾಯಿಲೆಗೆ ಔಷಧವಿಲ್ಲ. ಕಾಲ ಅಥವಾ ಪ್ರಕೃತಿಯೇ ಪಾಠ ಹೇಳಬೇಕು. ಶಶಿತರೂರ್ ಹೇಳಿದ್ದು ಭಾರತವು ಪಾಕಿಸ್ತಾನದ ಭಾಗವಾಗುತ್ತದೆಂದಲ್ಲ; ಅಥವಾ ಭಾರತದ ಅಲ್ಪಸಂಖ್ಯಾತ ಮುಸಲ್ಮಾನರ ವೈಭವೀಕರಣವೂ ಅಲ್ಲ. ಅವರು ಆತಂಕಪಟ್ಟದ್ದು ಈಗ ನಡೆಯುತ್ತಿರುವ ಬಹುಮತೀಯ ಆಕ್ರೋಶದ ವಿರುದ್ಧ. ನಮ್ಮ ಧಾರ್ಮಿಕ ನಂಬಿಕೆಗಳು, ಆಚರಣೆಗಳು, ಸಂಘಟನೆಗಳು, ಸಿದ್ಧಾಂತಗಳು, ಅಭಿವ್ಯಕ್ತಿಗಳು ಏಕಮುಖವಾಗಿ ಹರಿಯುತ್ತಿವೆ. ಗೋರಕ್ಷಣೆಯ ಹೆಸರಿನಲ್ಲಿ ಅಥವಾ ಇನ್ಯಾವುದೋ ನಂಬಿಕೆಗೆ ಅಪಚಾರವಾಯಿತೆಂಬ ವಿಚಾರದಲ್ಲಿ ಎಳ್ಳಷ್ಟೂ ಸಹನೆ, ಸಹಿಷ್ಣುತೆಯನ್ನು ತೋರದೆ ತಾವೇ ಕಾನೂನಾಗಿ, ತಾವೇ ನ್ಯಾಯಾಲಯಗಳಾಗಿ ಕಾರ್ಯವೆಸಗುವ ಸಮೂಹಸನ್ನಿಯು ಈ ದೇಶದ ಬಹುತ್ವವನ್ನೇ ಕಂಗೆಡಿಸುತ್ತಿದೆ. ಇದಕ್ಕೆ ಆಡಳಿತವೂ ಮೌನವಾಗಿ ನೀಡುವ ಬೆಂಬಲವು ಒಂದು ವಿನಾಶಕಾರೀ ಹಿಂಸಾತ್ಮಕ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಈ ರೀತಿಯಲ್ಲಿ ಬಹುಸಂಖ್ಯಾತರು ನಡೆದುಕೊಂಡರೆ, ಇತರ ಧರ್ಮೀಯರಿಗೆ ರಕ್ಷಣೆಯಿಲ್ಲವೆಂದಾದರೆ ಮತ್ತು ಇಂತಹ ಪ್ರವೃತ್ತಿ ಲಂಗುಲಗಾಮಿಲ್ಲದೆ ಅವ್ಯಾಹತವಾಗಿ (ಈಗಿನಂತೆ) ಮುಂದುವರಿದರೆ ಇನ್ನೊಂದು ಚುನಾವಣಾ ಅವಧಿಯಲ್ಲಿ ಭಾರತವು ಅಸಹಿಷ್ಣು ಬಹುಮತೀಯ ಹಿಂಸಾತ್ಮಕ ಧೋರಣೆಯ ಪಾಕಿಸ್ತಾನಕ್ಕಿಂತ ಬೇರೆಯಾಗದು ಮತ್ತು ಭಾರತೀಯತೆಯ ನಾಶಕ್ಕೆ ಕಾರಣವಾಗುತ್ತದೆಯೆಂಬುದೇ ಶಶಿತರೂರ್ ಕಡಿಮೆ ಪದಗಳಲ್ಲಿ ಹಿಡಿದಿಟ್ಟ ಸಾರ್ಥಕ ಸಂಕೇತ.
ಇದು ಅರ್ಥವಾಗಬೇಕಾದರೆ ಪಾಕಿಸ್ತಾನದ ಹುಟ್ಟಿನ ಬಗ್ಗೆ ಯೋಚಿಸ ಬೇಕು. ಪಾಕಿಸ್ತಾನವು ಅಖಂಡ ಭಾರತದಿಂದ ಸ್ವಾತಂತ್ರ್ಯದ ಸಂಕ್ರಮಣ ಸ್ಥಿತಿಯಲ್ಲಿ ಬೇರೆಯಾದಾಗ ಅದು ಒಂದು ಮತೀಯ ಮತ್ತು ಧರ್ಮೀಯ ದೇಶವಾಗಿಯೇ ರಚನೆಗೊಂಡಿತು. ಇಂದಿಗೂ ಪಾಕಿಸ್ತಾನವು ಒಂದು ಇಸ್ಲಾಮಿಕ್ ದೇಶವಾಗಿಯೇ ಮುಂದುವರಿದಿದೆ. ಆದರೆ ಭಾರತವು ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಯಲು ಬಯಸಿತೇ ಹೊರತು ಯಾವುದೇ ಒಂದು ಧರ್ಮದ, ಒಂದು ಮತ-ಜಾತಿಯ ದೇಶವಾಗಿ ಅಲ್ಲ. ದೂರದೃಷ್ಟಿಯ ಜಾತ್ಯತೀತ ಮುತ್ಸದ್ದಿಗಳ ಚಿಂತನೆಯ ಪ್ರಭಾವದಿಂದ ಭಾರತ ಒಂದು ನೈಜ ಪ್ರಜಾಪ್ರಭುತ್ವ ದೇಶವಾಗಿ ನಡೆದು ಬಂದಿತು. ಇತ್ತೀಚೆಗಿನ ವರೆಗೂ ಈ ಜಾತ್ಯತೀತತೆಗೆ ನಿಜವಾದ ಸವಾಲನ್ನು ಒಡ್ಡಬಲ್ಲ ಮತೀಯ ಶಕ್ತಿಗಳು ಇರಲಿಲ್ಲ. ಇದ್ದರೂ ಅವು ಶಕ್ತವಾಗಿರಲಿಲ್ಲ. ಧರ್ಮದ ನೆಲೆಯಲ್ಲಿ ಒಂದು ದೇಶವು ಶಾಂತಿ ಮತ್ತು ಅಭಿವೃದ್ಧಿಯನ್ನು ಸಾಧಿಸಲಾರದೆಂಬುದಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಕೆಲವು ಮಧ್ಯಪೂರ್ವ ದೇಶಗಳೂ ಇಂಥವೇ ಉದಾಹರಣೆಗಳಾಗಿವೆ. ಅವನ್ನು ನೋಡಿಯಾದರೂ ಭಾರತೀಯರು ತಮ್ಮಲ್ಲೇನಾದರೂ ಅಂತಹ ಮತೀಯವಾದದ ಭಾವನೆಗಳು, ವಿಚಾರಗಳು ಹುಟ್ಟಿಕೊಂಡರೆ ಅವನ್ನು ಬೇರುಸಹಿತ ಕಿತ್ತುಹಾಕಬೇಕು. ಭಾರತದ ಸಂವಿಧಾನವು ಎಲ್ಲರಿಗೂ ಹುಟ್ಟು, ಜಾತಿ, ಮತ, ಜನಾಂಗ, ಲಿಂಗ, ಧರ್ಮ ಈ ಯಾವ ಕಟ್ಟುಗಳಿಲ್ಲದೆಯೂ ಸಮಾನತೆಯನ್ನು ಒದಗಿಸಿದೆ. ಯಾವುದೇ ಒಂದು ಧರ್ಮಕ್ಕಾಗಿ ಅಥವಾ ಮತಕ್ಕಾಗಿ ಈ ದೇಶದ ಯಾವ ರಾಜ್ಯವೂ ಹುಟ್ಟಿಕೊಂಡಿಲ್ಲ ಮತ್ತು ಸೃಷ್ಟಿಯಾಗಿಲ್ಲ. ಭಾಷಾನುಸಾರ ರಾಜ್ಯರಚನೆಯಾಗಿದೆಯೇ ಹೊರತು ಧರ್ಮ/ಮತಾನುಸಾರ ವಲ್ಲ. ರಾಜಕಾರಣಿಗಳು ಪಕ್ಷಾತೀತರಾಗಿ ತಮ್ಮ ಮತಬುಟ್ಟಿಯನ್ನು ತುಂಬಿಸುವುದಕ್ಕಾಗಿ ಜಾತೀಯತೆಯನ್ನು ಪ್ರೋತ್ಸಾಹಿಸುತ್ತಾರಾದರೂ ಸಂವಿಧಾನವು ಜಾತ್ಯತೀತತೆಯನ್ನು ಗೌರವಿಸಲೇಬೇಕಾದ ಆಡಳಿತಸ್ಥಿತಿಯನ್ನು ನೀಡಿದೆ. ನಮ್ಮ ರಾಜಕೀಯ ಇದನ್ನು ಕಡೆಗಣಿಸಿ ಹಿಂಸೆಯನ್ನು, ಅಸಹಿಷ್ಣುತೆಯನ್ನು ಬೆಂಬಲಿಸಿದರೆ, ಪರಿಣಾಮವು ಭೀಕರವಾಗದಿರದು. ಸರ್ವೋಚ್ಚ ನ್ಯಾಯಾಲಯವು ಇಂತಹ ಮತೀಯ ಮೂಲಭೂತವಾ ದಿಂದ ಹುಟ್ಟಿಕೊಂಡ ಹಿಂಸೆಯನ್ನು, ಈಗಾಗಲೇ ಆಗಿರುವ ದಾರುಣ ಹತ್ಯೆಗಳನ್ನು ಸ್ಪಷ್ಟವಾಗಿ ಖಂಡಿಸಿದೆ. ಕೇಂದ್ರ ಮತ್ತು ಸಂಬಂಧಿತ ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡು ಈ ಕುರಿತು ಸ್ಪಷ್ಟನೆಯನ್ನು ನೀಡಬೇಕೆಂದು ಮತ್ತು ಇಂತಹ ಮತೀಯ ಹಿಂಸೆಯನ್ನು ದಮನಿಸಲು ಮಾತ್ರವಲ್ಲ ತಡೆಯಲು ಕೈಗೊಂಡ ನಿರ್ಣಾಯಕ ಕ್ರಮಗಳನ್ನು ವರದಿಮಾಡ ಬೇಕೆಂದು ಆದೇಶಿಸಿದೆ. ರಾಜಕಾರಣಿಗಳಿಂದ ಈ ದೇಶವನ್ನು ರಕ್ಷಿಸುವ ಹೊಣೆಯನ್ನು ಸರ್ವೋಚ್ಚ ನ್ಯಾಯಾಲಯವು ಹೊತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಇದಕ್ಕೆ ಕಾರಣವಿಷ್ಟೇ: ರಾಜಕಾರಣಿಗಳಿಗೆ ದೇಶದ, ಸಮಾಜದ ಹಿತ ಬೇಕಾಗಿಲ್ಲ. ಅವರಿಗೆ ಪ್ರಜೆಗಳ ಅಜ್ಞಾನ ಮತ್ತು ಯಾವುದಾದರೊಂದು ರೀತಿಯ ಧ್ರುವೀಕರಣ ಮಾತ್ರ ಬೇಕು. ಈಗಾಗಲೇ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮತ್ತು ದಲಿತರ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ನೋಡಿ ಕಣ್ಣುಮುಚ್ಚಿಕೊಳ್ಳುವ ಪ್ರವೃತ್ತಿಯು ರಾಜಕಾರಣಕ್ಕೆ ಸರಿ; ಮನುಷ್ಯತ್ವಕ್ಕಲ್ಲ.
ಶಶಿತರೂರ್ ಹೇಳಿದ, ಸೂಚಿಸಿದ ಮಾತುಗಳು ಹೆಚ್ಚುಹೆಚ್ಚು ಜನರಿಗೆ ಅರ್ಥವಾದಷ್ಟೂ ದೇಶಕ್ಕೆ ಹಿತ. ಒಬ್ಬ ಹಿಂದೂವೇ ಈ ಮಾತುಗಳನ್ನು ಹೇಳಿದ್ದು ಬಹು ಮಹತ್ವದ್ದು. ಪಲಾಯನವಾದೀ ಮತ್ತು ಅವಕಾಶವಾದೀ ರಾಜಕಾರಣಿಗಳು ಮಾತ್ರವಲ್ಲ, ಅಂತಹ ಚಿಂತಕರೂ ಇದ್ದಾರೆಂಬುದು ಮಾತ್ರ ನಮ್ಮ ದೇಶದ ದುರಂತ ಮಾತ್ರವಲ್ಲ, ಗಂಡಾಂತರವೂ ಹೌದು.