ಹಿಂದೀ ರಾಜಕಾರಣದ ಗೊಂದಲ
ಭಾಗ-2
ಕೊನೆಗೆ 1927ರಲ್ಲಿ ಗಾಂಧಿ ಅವರು, ತನ್ನ ಸಹಕಾರಿ ಮಿತ್ರ ಮಿಸ್ಟರ್ ಪೊಲಕ್ ಅವರಿಗೆ ಪತ್ರ ಬರೆದು, ‘‘ಬ್ರಿಟಿಶ್ ಸರಕಾರವು ಹಿಂದೂಸ್ಥಾನಕ್ಕೆ ವಸಾಹತು ಸ್ವರಾಜ್ಯ ಕೊಟ್ಟರೆ ಅದರಲ್ಲೇ ನಾವು ಸಮಾಧಾನ ಕಾಣುವೆವು’’ಎಂದರುಹಿದರು.
ಸಂಪೂರ್ಣ ಸ್ವಾತಂತ್ರದ ವಿಷಯದಲ್ಲಿ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದಾಟ ಕಂಡು, ಸಂಪೂರ್ಣ ಸ್ವಾತಂತ್ರದ ಧ್ಯೇಯದಲ್ಲಿ ಅವರಿಗೆ ಅಚಲ ವಿಶ್ವಾಸವಿದೆ, ಅದಲ್ಲದೆ ಬೇರಾವುದೇ ಧ್ಯೇಯವನ್ನು ಮಾನ್ಯ ಮಾಡಲಾರರು, ಎಂಬುದರಲ್ಲಿ ಯಾರಿಗೂ ವಿಶ್ವಾಸ ಮೂಡದು. ಇದೇ ಕಾರಣದಿಂದ ಇಂಗ್ಲಿಷ್ ಸರಕಾರವು ಇದುವರೆಗೆ ಈ ಬೇಡಿಕೆಗೆ ಮಹತ್ವ ನೀಡಿಲ್ಲ. ಹಾಗೆಂದೇ, ಕಾಂಗ್ರೆಸ್, ತನ್ನ ಸಂಪೂರ್ಣ ಸ್ವಾತಂತ್ರದ ನಾಟಕವನ್ನು ಬಿಟ್ಟುಕೊಟ್ಟು, ವಸಾಹತು
ಸ್ವರಾಜ್ಯದ ಬೇಡಿಕೆಯನ್ನು ಮುಂದಿಟ್ಟಿದ್ದರೆ, ಅದು ಹೆಚ್ಚು ಧೈರ್ಯ ಹಾಗೂ ಜಾಣ್ಮೆ ತೋರಿದಂತಾಗುವುದು.
ಸಂಪೂರ್ಣ ಸ್ವಾತಂತ್ರದ ಧ್ಯೇಯ ಒಮ್ಮೆ ಪ್ರಕಟಿಸಿದ ನಂತರ ಮತ್ತೆ ಹಿಂದೆಗೆದುಕೊಳ್ಳುವುದು ಮನುಷ್ಯ ಮಾತ್ರದವರ ಸ್ವಭಾವದಂತೆ ಅತ್ಯಂತ ಕಠಿಣವೆಂಬುದನ್ನು ನಾನೊಪ್ಪುತ್ತೇನೆ. ತಪ್ಪು ಮಾಡುವುದು ಮನುಷ್ಯಧರ್ಮ; ತಪ್ಪು ಮಾಡಿದೆವೆಂದು ಒಪ್ಪಿಕೊಳ್ಳುವುದು ಮನುಷ್ಯಮಾತ್ರರಿಗೆ ನಿಜಕ್ಕೂ ಕಠಿಣ. ಆದರೆ ಮಾಡಿದ ತಪ್ಪನ್ನು ಸರಿಪಡಿಸದೆ ಹಾಗೇ ಮುಂದವರಿಯುವುದು ದೇಶಕ್ಕೆ ಘಾತುಕವಾದರೆ, ಆ ತಪ್ಪನ್ನು ಒಪ್ಪಿಕೊಳ್ಳುವುದೇ ಭೂಷಣಪ್ರಾಯವಾದುದು.
‘‘ಕ್ಷಣ ಹೊತ್ತಿನ ಲಜ್ಜೆಗೇಡಿತನ ಮತ್ತು ಆಜನ್ಮ ಆರಾಮ’’, ಅನ್ನುವುದು ಉರ್ದು ಭಾಷೆಯಲ್ಲಿ ಒಂದು ಅತ್ಯಂತ ವ್ಯಾವಹಾರಿಕ ಹೇಳಿಕೆ. ಈ ದೃಷ್ಟಿಯಿಂದ ನೋಡಿದರೆ, ವರ್ಕಿಂಗ್ ಕಮಿಟಿಯು ಈ ಸಂಬಂಧ ಸಂಪೂರ್ಣ ಸ್ವರಾಜ್ಯದ ಬೇಡಿಕೆ ಮಂಡಿಸದೆ, ವಸಾಹತು ಸ್ವರಾಜ್ಯದ ಬೇಡಿಕೆ ಮುಂದಿಟ್ಟ ತಪ್ಪನ್ನು ಸರಿಪಡಿಸಿದ್ದರೆ, ಅದು ಜಾಣತನವೆನಿಸುತ್ತಿತ್ತು.
ಇನ್ನೊಂದು ದೃಷ್ಟಿಯಿಂದಲೂ ಈ ಸಮಸ್ಯೆಯನ್ನು ನೋಡಬೇಕು. ಸಂಪೂರ್ಣ ಸ್ವಾತಂತ್ರ ಅನುಭವಿಸುತ್ತಿರುವ ರಾಷ್ಟ್ರಗಳದ್ದು ಈಗ ಎಂತಹ ದುರ್ದಸೆಯಾಗಿದೆ ಎಂಬುದು ಈಗ ಈ ಯುದ್ಧದ ನಿಜಸ್ಥಿತಿಯಿಂದ ತಿಳಿದು ಬರುತ್ತದೆ. ಯುದ್ಧಕ್ಕೆ ಮುನ್ನ, ಬೆಲ್ಜಿಯಮ್, ಹಾಲೆಂಡ್, ಡೆನ್ಮಾರ್ಕ್, ನಾರ್ವೆ, ಪೋಲೆಂಡ್, ಫಿನ್ಲೆಂಡ್, ಜೆಕೊಸ್ಲೋವಾಕಿಯಾ ಈ ರಾಷ್ಟ್ರಗಳು ಸಂಪೂರ್ಣ ಸ್ವಾತಂತ್ರವನ್ನು ಅನುಭವಿಸಿದ್ದವು. ಒಂಬತ್ತು ತಿಂಗಳಲ್ಲಿ ಹಿಟ್ಲರನು ಅವುಗಳ ಸ್ವಾತಂತ್ರ ಹರಣ ಮಾಡಿ ತನ್ನ ಅಂಕೆಯಲ್ಲಿ ತಂದನು, ಭಾರತಕ್ಕೂ ಇದೇ ಗತಿಯಾದರೆ ಮಾಡುವುದೇನು? ಅಹಿಂಸೆಯ ತತ್ವವನ್ನು ಬಿಟ್ಟುಕೊಡುವಲ್ಲಿ ಧೈರ್ಯ ತೋರಿದಂತೆ, ಸಂಪೂರ್ಣ ಸ್ವಾತಂತ್ರದ ವಿಷಯದಲ್ಲೂ ಧೈರ್ಯ ತಳೆದು, ವಸಾಹತು ಸ್ವರಾಜ್ಯ ಸಾಕೆಂದಿದ್ದರೆ, ಯಾರೂ ದೋಷಿಯೆನ್ನುತ್ತಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆಂಗ್ಲ ಸರಕಾರ ಅಂತಹ ಘೋಷಣೆ ಹೊರಡಿಸಲು ಸಿದ್ಧವಾದೀತೆನ್ನುವ ಭರವಸೆ ಕವಡೆಯಷ್ಟೂ ಇಲ್ಲ. ಇಂಗ್ಲಿಷರು ದೇವದೂತರಲ್ಲ, ವೈಷ್ಣವರಲ್ಲ; ಅವರು ಸಾದಾ ವ್ಯವಹಾರಿಗಳು, ಸಂಸಾರಸ್ಥರು. ಅಂಥವರು ತಮ್ಮ ಕೈಯಲ್ಲಿನ ನಿಧಿಯನ್ನು ಹಾಗೇ ಸುಮ್ಮನೆ ಹೋಗಗೊಡುವುದಿಲ್ಲ. ಇದರಲ್ಲಿ ಇಂಗ್ಲಿಷ್ ಸರಕಾರವನ್ನು ದೂಷಿಸುವಂತಹುದು ಏನೂ ಇಲ್ಲ. ಕಾಂಗ್ರೆಸ್ ಬಳಿ ಇಂಗ್ಲಿಷ್ ಸರಕಾರವನ್ನು ದಾರಿಗೆ ತರುವಂತಹುದು ಏನೂ ಇಲ್ಲ. ಹೋಗುತ್ತಾ, ಬರುತ್ತಾ ಕಾಂಗ್ರೆಸ್ನ ಬಲವೆಲ್ಲ ಸತ್ಯಾಗ್ರಹವೆಂಬ ಶಸ್ತ್ರದ ಮೇಲಿದೆ. ಆದರೆ ಈಗ ಆ ಶಸ್ತ್ರ ಎಷ್ಟೊಂದು ದುರ್ಬಲವಾಗಿದೆಯೆಂದರೆ, ಅವರಿಂದ ಇಂಗ್ಲಿಷರಿಗೆ ಯಾವುದೇ ಅಪಾಯವಾಗುತಿಲ್ಲ. ಹಾಗೆಂದೇ ಸತ್ಯಾಗ್ರಹ ಉದ್ದಕ್ಕೆ ನಡೆದಿದೆ. ಮೊನ್ನೆಯಷ್ಟೇ ಪುಣೆಯಲ್ಲಿ ಸೇರಿದ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಸಭೆಯಲ್ಲಿ ರಾಜಗೋಪಾಲಾಚಾರಿಯವರಿಗೆ ಕೆಲ ಪ್ರಶ್ನೆಗಳನ್ನು ಕೇಳಲಾಯಿತು. ಅವುಗಳಲ್ಲಿ, ‘‘ಇಂಗ್ಲಿಷ್ ಸರಕಾರವು ನಿಮ್ಮ ಬೇಡಿಕೆಯಂತೆ ಸ್ವಾತಂತ್ರದ ಘೋಷಣೆ ಮಾಡದಿದ್ದರೆ, ಹಾಗೆ ಮಾಡುವಂತೆ ನೀವು ಏನಾದರೂ ಮಾಡಲಿದ್ದೀರಾ?’’ ಎಂಬುದೊಂದು. ಇದಕ್ಕೆ ರಾಜಗೋಪಾಲಾಚಾರಿ ಅವರು ಇತ್ತ ಉತ್ತರ, ಕಾಂಗ್ರೆಸ್ ಕಾರ್ಯಕರ್ತರಿಗೂ ವಿಸ್ಮಯವನ್ನುಂಟು ಮಾಡಿತು.
‘‘ಇಂಗ್ಲಿಷ್ ಜನರ ಮೇಲೆ ಈಗಲೇ ಅವಿಶ್ವಾಸ ತೋರಿಸಬೇಕಾದ ಅಗತ್ಯವಿಲ್ಲ.’’ ಈ ಉತ್ತರದಿಂದ ಪ್ರಶ್ನಿಸಿದವರನ್ನು ಅವರು ಸುಮ್ಮನಾಗಿಸಿದರು. ಈ ಉತ್ತರದಿಂದ ಯಾವ ಶಾಂತಿಯಾಗುವುದೋ, ಆಗಲಿ. ಆದರೆ, ಇದರಿಂದ ಯಾರೂ ಮೋಸಹೋಗುವಂತಿಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ಇಂಗ್ಲಿಷರೊಡನೆ ಕಾದಾಡಲು ಸಿದ್ಧವಿಲ್ಲ. ಕಾದಾಡಲು ಬೇಕಾದ ಸಾಮಗ್ರಿಯೂ ಅವರಲ್ಲಿಲ್ಲ. ಕಾಂಗ್ರೆಸ್ನ ಬೇಡಿಕೆಯೆಂದರೆ ಕೋಗಿಲೆಯ ಕೂಜನವಷ್ಟೇ, ಸಿಂಹದ ಘರ್ಜನೆಯಲ್ಲ ಎಂಬುದನ್ನು ಇಂಗ್ಲಿಷ್ ಸರಕಾರ ಚೆನ್ನಾಗಿ ಅರಿತಿದೆ. ‘‘ಅರ್ಧ ಮುಲ್ಲಾ ಧರ್ಮಕ್ಕೆ ಕೇಡು’’, ಎಂದು ಪರ್ಶಿಯನ್ ಧರ್ಮದಲ್ಲಿ ಗಾದೆ ಮಾತಿದೆ. ಹಾಗೆ ಅರ್ಧ ರಾಜಕಾರಣಿ ರಾಷ್ಟ್ರಕ್ಕೆ ಕೇಡು. ಈ ಅರ್ಧಾಂಶದಿಂದ ಯಾವ ಉಪಯೋಗವೂ ಇಲ್ಲ, ಹಾಗೆಂದೇ ವರ್ಕಿಂಗ್ ಕಮಿಟಿ ಸರ್ವಪಕ್ಷೀಯ ಮಂತ್ರಿಮಂಡಲಕ್ಕೆ ಮಾನ್ಯತೆವೀಯುವ ನಿರ್ಧಾರ ಮಾಡಿ ತನ್ನ ಜಾಣ್ಮೆ ತೋರಿದಂತೆ, ಸಂಪೂರ್ಣ ಸ್ವಾತಂತ್ರದ ವಿಷಯದಲ್ಲಿ ತಮ್ಮ ಆಗ್ರಹವನ್ನು ತ್ಯಜಿಸಿ, ಪ್ರಾಪ್ತವಾಗುವಂತಿರುವ ವಸಾಹತು ಸ್ವರಾಜ್ಯವನ್ನು ನಮ್ಮದಾಗಿಸಿಕೊಂಡು, ಆಡಳಿತವನ್ನು ಹಸ್ತಗತವಾಗಿಸುವ ಈ ಸುವರ್ಣ ಸಂಧಿಯನ್ನು ತಿರಸ್ಕರಿಸಬಾರದೆಂದು ನಮ್ಮ ಸೂಚನೆ.
ಅಹಿಂಸೆಯ ಅತಿರೇಕ ಮತ್ತು ದೇಶದ ಮಾನ ಹಾನಿ
ಕಳೆದ ಅಂಕದಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಹೊರಡಿಸಿದ್ದ ಯುದ್ಧ ವಿಷಯಕ ನಿರ್ಣಯ ಸಂಬಂಧ ನಮ್ಮ ಮತವನ್ನು ನಾವು ಪ್ರಕಟಿಸಿದ್ದೇವೆ. ಈ ಅಂಕದಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಅಹಿಂಸೆಗೆ ಸಂಬಂಧಿಸಿದ ನಿರ್ಣಯದ ಬಗ್ಗೆ ನಮ್ಮ ವಿಚಾರವನ್ನು ಮಂಡಿಸುವ ಯೋಚನೆ ನಮ್ಮದು. ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಅಹಿಂಸೆಯ ಬಗೆಗಿನ ತನ್ನ ಮತವನ್ನು ಕಳೆದ ಜೂನ್ ತಿಂಗಳ 21ರಂದು ಪ್ರಕಟಿಸಿತು.
ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಪತ್ರಿಕೆ ಪ್ರಕಟಿಸಿ, ಅಹಿಂಸೆಯ ಸಂಬಂಧ ತಮ್ಮ ಮತ ಏನೆಂಬುದನ್ನು ಜಗಜ್ಜಾಹೀರು ಮಾಡುವುದರಿಂದ ಪ್ರಯೋಜನವೇನೂ ಇಲ್ಲವೆಂದು ಹಲವರಿಗೆ ಅನ್ನಿಸುವುದು ಸಹಜ. ಆದರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ತನ್ನ ಮತವನ್ನು ಪ್ರಕಟಿಸಲು ಕಾರಣವೇನೆಂಬುದು ಪುಣೆಯಲ್ಲಿ ಸೇರಿದ್ದ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಸಭೆಯಲ್ಲಿ ಮೌಲಾನಾ ಆಝಾದ್ ಅವರು ಮಾಡಿದ ಭಾಷಣದಲ್ಲಿ ಸ್ಪಷ್ಟವಾಗಿದೆ. ಮೌಲಾನಾ ಅವರು ಹೇಳಿದಂತೆ 1938 ಸೆಪ್ಟಂಬರ್ನಲ್ಲಿ ಗಾಂಧಿಯವರು ವರ್ಕಿಂಗ್ ಕಮಿಟಿಯ ಈ ವಿಷಯದಲ್ಲಿ ತನ್ನ ಮತ ವ್ಯಕ್ತಪಡಿಸಲಿ ಎಂದು ಹೇಳಿದ್ದರು. ಆಗಲೇ ಮ್ಯೂನಿಕ್ ಒಪ್ಪಂದವಾದುದರಿಂದ ಆ ಪ್ರಶ್ನೆ ಹಾಗೆಯೇ ಉಳಿಯಿತು. ಯುದ್ಧ ಆರಂಭವಾದ ನಂತರ ಕಳೆದ ನವೆಂಬರ್ ತಿಂಗಳಲ್ಲಿ ಪುನಃ ಗಾಂಧಿಯವರು ಈ ಪ್ರಶ್ನೆ ಎತ್ತಿದ್ದರು. ಆದರೆ ಮೌಲಾನಾ ಅವರು ಅಲ್ಲಿ ತಡೆಹಿಡಿದರು. ಪುನಃ ಕಳೆದ ಜೂನ್ ತಿಂಗಳಲ್ಲಿ ಗಾಂಧಿ ಅವರು ವಿಷಯ ಪುನರ್ಪಠಿಸಿ ಈ ವಿಷಯವಾಗಿ ನಿರ್ಣಯ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ವಾಸ್ತವ ನಿರ್ಣಯ ಕೊಡಲು ವರ್ಕಿಂಗ್ ಕಮಿಟಿ ಸೇರಬೇಕಾಯಿತು.
1920ರಲ್ಲಿ ಮೊತ್ತ ಮೊದಲನೆಯದಾಗಿ ಅಹಿಂಸೆಯ ತತ್ವವು ಹಿಂದಿ ರಾಜಕಾರಣವನ್ನು ಪ್ರವೇಶಿಸಿತು. ಅಂದಿನಿಂದ ಎಲ್ಲೆಂದರಲ್ಲಿ ಕಾಂಗ್ರೆಸ್ ನ ವೇದಿಕೆಯ ಮೇಲೆ ಅಹಿಂಸೆಯ ತತ್ವಕ್ಕೆ ‘ಉೇ ಉೇ’ ಎನ್ನಲಾಯಿತು. ಹಾಗಿದ್ದ್ದೂ ಗಾಂಧಿ ಮತ್ತು ಕಾಂಗ್ರೆಸಿಗರಲ್ಲಿ ಐಕ್ಯಮತ ಇರಲಿಲ್ಲ. ತಾವು ಅಹಿಂಸೆಯನ್ನು ಧ್ಯೇಯವೆಂದು ಕೊಳ್ಳುತ್ತೇವೆ ಎನ್ನುತ್ತಿದ್ದ ಉಳಿದ ಜನರು ಕೇವಲ ಧೋರಣೆಯನ್ನು ಉಚ್ಚರಿಸುತ್ತಾರೆ ಎಂದು ಗಾಂಧಿ ಅರಿತಿದ್ದರಿಂದ ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರು ಅದರ ತಂಟೆಗೆ ಹೋಗಿರಲಿಲ್ಲ. ಇಂದು ಅದನ್ನು ಎಳೆತಂದು ಒಂದು ವಿಚಿತ್ರ ಪರಿಸ್ಥಿತಿಯನ್ನುಂಟು ಮಾಡಿದಂತಾಗಿದೆ. ಯುದ್ಧದ ಆರಂಭದಲ್ಲಿ ಒಂದಾಗಿ ಇಂಗ್ಲಿಷರನ್ನು ಎದುರಿಸಲು ಸಿದ್ಧರಾದ ಕಾಂಗ್ರೆಸಿಗರು ಮುಖ್ಯ ಪ್ರಶ್ನೆಯನ್ನು ಬದಿಗಿಟ್ಟು ಒಬ್ಬರನ್ನೊಬ್ಬರು ಶತ್ರುವಲ್ಲದಿದ್ದರೂ ವಿರೋಧಿಗಳಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಆರಂಭದಲ್ಲಿ ಗಾಂಧಿ ಮತ್ತು ವರ್ಕಿಂಗ್ ಕಮಿಟಿ ಒಂದಾಗಿ ಇಂಗ್ಲಿಷರನ್ನು ಎದುರಿಸುವ ತೋರಿಕೆಯ ಹೊರತಾಗಿಯೂ ಅವೆರಡೂ ಒಂದರೊಡನೊಂದು ಘರ್ಜಿಸುವ ನೋಟ ಇಂದು ಕಾಣಬರುತ್ತದೆ. ಹಿಂಸೆ ಅಹಿಂಸೆಯ ಪ್ರಶ್ನೆ ಗಾಂಧಿ ಅವರ ರಾಜಕಾರಣದಲ್ಲಿ ಕೇವಲ ತಾತ್ವಿಕ ವಿಚಾರದ ಪ್ರಶ್ನೆ ಎಂದು ಯಾರೂ ಹೇಳುವಂತಿಲ್ಲ. ಆ ಸ್ವರಾಜ್ಯವು ಪ್ರಾಂತೀಯ ಮತ್ತು ರಾಷ್ಟ್ರೀಯ ಸಂರಕ್ಷಣಾ ಸಾಧನೆಯ ಪ್ರಶ್ನೆಯಾಗಿ ಉಳಿದಿದೆ. ಈ ದೃಷ್ಟಿಯಿಂದ ನೋಡುವಾಗ ಅಹಿಂಸೆಯ ಪ್ರಶ್ನೆಯ ಸಂಬಂಧದಲ್ಲಿ ಜನರ ನಿಜವಾದ ಅಭಿಪ್ರಾಯ ಏನೆಂಬುದರ ಕೊನೆಯ ಉತ್ತರ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ.
ಗಾಂಧಿಯವರ ಅಹಿಂಸೆಯ ಸ್ವರೂಪ ಎಂತಹುದೆಂದು ತಿಳಿದುಕೊಳ್ಳುವುದು ಅವಶ್ಯಕ. ಜರ್ಮನರು ಇಂಗ್ಲೆಂಡನ್ನು ಆಕ್ರಮಿಸಿದಾಗ ಇಂಗ್ಲಿಷರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಬಗ್ಗೆ ಗಾಂಧಿ ಅವರು ಜುಲೈ ತಿಂಗಳ 6ರಂದು ಬರೆದ ಮುಕ್ತ ಪತ್ರದಿಂದ ಗಾಂಧಿ ಅವರ ಅಹಿಂಸೆ ಯಾವ ಸ್ವರೂಪದ್ದೆೆಂದು ತಿಳಿಯುತ್ತದೆ. ಆ ಪತ್ರದಲ್ಲಿ ‘‘ಬ್ರಿಟಿಷ್ ಜನತೆ ಶಸ್ತ್ರವಿಲ್ಲದೆಯೇ ಜರ್ಮನ್ ರಾಷ್ಟ್ರದ ಮೇಲೆ ಪ್ರತೀಕಾರ ಮಾಡುವ ನಿರ್ಧಾರ ಮಾಡಬೇಕು. ಹಿಟ್ಲರ್ ಇಲ್ಲವೇ ಮುಸಲೋನಿ ಇಂಗ್ಲಿಷ್ ಭೂಮಿಯ ಮೇಲೆ ಆಕ್ರಮಣ ಮಾಡುವ ಮೊದಲೇ ‘ಬನ್ನಿ ನಿಮಗೆ ಏನು ಬೇಕು ತೆಗೆದುಕೊಳ್ಳಿ’ ಎಂದು ಹೇಳಿ. ಹಾಗೆ ಹಿಟ್ಲರ್ ಕೂಡ ತನಗೆ ಬೇಕಾದ್ದನ್ನು ಕೊಂಡು ಹೋಗಲಿ. ನಿಮ್ಮ ಮನೆ ಬಾಗಿಲನ್ನು ಅವರಿಗೆ ತೆರೆದಿಡಿ. ನಿಮಗೆ ಇರಲು ಸ್ಥಳವಿಲ್ಲವೆಂದಾದರೆ, ದೇಶ ಬಿಟ್ಟು ಹೋಗಲೂ ಬಿಡಲಾರರಾದರೆ ಮರಣಕ್ಕೂ ಸಿದ್ಧರಾಗಿರಿ. ಆದರೆ ಆತ್ಮರಕ್ಷಣೆಗಾಗಿ ಯಾವುದೇ ಶಸ್ತ್ರದ ಉಪಯೋಗ ಮಾಡದಿರಿ.’’ ಗಾಂಧಿ ಅವರ ಈ ವಿಧಾನ ನಮಗೆ ಸ್ವೀಕೃತವಲ್ಲ. ಅವರ ಅಹಿಂಸೆಯ ಸ್ವರೂಪ ಎಂತಹುದೆಂದು ಅವರು ಬ್ರಿಟಿಷ್ ಜನತೆ ಎದುರು ಮಂಡಿಸಿದ ಈ ಯೋಜನೆಯಿಂದ ಎಲ್ಲರಿಗೂ ಸ್ಪಷ್ಟವಾಗುವಂತಿದೆ.
ಇಂಗ್ಲಿಷರಿಗೆ ಅಹಿಂಸೆಯ ಪಾಠವಿತ್ತಷ್ಟಕ್ಕೇ ಗಾಂಧಿ ಸುಮ್ಮನಾಗಲಿಲ್ಲ. ಈ ದೇಶಕ್ಕೂ ಅವರು ಅದೇ ಉಪದೇಶವಿತ್ತರು ಮತ್ತು ಈ ಮಾರ್ಗವನ್ನವಲಂಬಿಸಿ ದೇಶವನ್ನು ಜಗತ್ತಿಗೆ ಆದರ್ಶಪ್ರಾಯವಾಗಿಸುವ ಸಲಹೆಯನ್ನಿತ್ತರು. ಇದು ಶಕ್ಯವಿಲ್ಲವಾದುದರಿಂದ ವರ್ಕಿಂಗ್ ಕಮಿಟಿ ಗಾಂಧಿ ಅವರ ಮಾತನ್ನು ಒಪ್ಪಿಕೊಳ್ಳಲಿಲ್ಲ. ಇಂಗ್ಲಿಷರ ಆ ಪರಿ ಅಹಿಂಸೆ ಎಂದರೆ, ಮನೆಯವರು ಮತ್ತು ಹೊರಗಿನವರ ಹಿಂಸೆ ಎಂಬಂತಹ ಅವರ ಮನೋವೃತ್ತಿಯು ಅವರ ಕುಟಿಲ ನೀತಿಯನ್ನು ಮೀರಿಸುವಂತಿದೆ. ಆದರೆ ಈ ಭೇದಭಾವವನ್ನು ಬದಿಗಿಟ್ಟು ಮುಖ್ಯ ಪ್ರಶ್ನೆಯೆಡೆಗೆ ದೃಷ್ಟಿ ಹರಿಸಿದರೆ ಹಿಂದೂಸ್ಥಾನವನ್ನು ಪರಾಧಿಪತ್ಯದಿಂದ ಹೇಗೆ ಪಾರು ಮಾಡುವುದೆಂಬ ಬಗ್ಗೆ ಗಾಂಧಿ ಹಾಗೂ ವರ್ಕಿಂಗ್ ಕಮಿಟಿಯ ಮಧ್ಯೆ ದೊಡ್ಡ ಭಿನ್ನಾಭಿಪ್ರಾಯ ಉತ್ಪನ್ನವಾಗಿರುವುದರಲ್ಲಿ ಸಂಶಯವಿಲ್ಲ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)