varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 22 Jul, 2018

ಬಿಜೆಪಿಗೆ ಮಿತ್ರಾ ಗುಡ್‌ಬೈ
ಭಾರತೀಯ ಜನತಾ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಮತ್ತು ಇಂಗ್ಲಿಷ್ ದಿನಪತ್ರಿಕೆ ‘ಪಯೋನಿಯರ್’ ಸಂಪಾದಕ ಹಾಗೂ ಆಡಳಿತ ನಿರ್ದೇಶಕ ಚಂದನ್ ಮಿತ್ರಾ ಬಿಜೆಪಿಗೆ ಗುಡ್‌ಬೈ ಹೇಳಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿರುವುದು ಪಕ್ಷದ ಆಂತರಿಕ ವಲಯದಲ್ಲಿ ಅಚ್ಚರಿಯನ್ನೇನೂ ಮೂಡಿಸಿಲ್ಲ. ಬೆರಳೆಣಿಕೆಯ ಮಾಧ್ಯಮ ಸಂಸ್ಥೆಗಳು ಬಿಜೆಪಿ ಬೆಂಬಲಕ್ಕೆ ಇಲ್ಲದ ಕಠಿಣ ಪರಿಸ್ಥಿತಿಯಲ್ಲಿ ಕೂಡಾ ಬಿಜೆಪಿ ಪರವಾಗಿ ನಿಂತ ‘ಪಯೋನಿಯರ್’ ಪತ್ರಿಕೆ ಮತ್ತು ಮಿತ್ರಾ ಅವರನ್ನು ಆಡಳಿತ ಪಕ್ಷ ನಿರ್ಲಕ್ಷಿಸಿರುವುದು ಮಿತ್ರಾ ನಿರ್ಧಾರಕ್ಕೆ ಕಾರಣ. ತಮ್ಮ ಪತ್ರಿಕೆಗೆ ಸರಕಾರ ಹೇಗೆ ಸರಕಾರಿ ಜಾಹೀರಾತು ನಿರಾಕರಿಸುತ್ತಿದೆ ಅಥವಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇತ್ತೀಚಿನ ವರ್ಷಗಳಲ್ಲಿ ಪಾವತಿಯನ್ನು ಹೇಗೆ ತಡೆಹಿಡಿಯುತ್ತಿದೆ ಎನ್ನುವ ಬಗ್ಗೆ ಮಿತ್ರಾ ಖಾಸಗಿಯಾಗಿ ಹೇಳಿಕೊಂಡಿದ್ದರು. ಅರುಣ್‌ಜೇಟ್ಲಿ ಹಾಗೂ ಇತರರ ಕೈವಾಡ ಇದರಲ್ಲಿದೆ ಎನ್ನುವುದು ಮಿತ್ರಾ ಅವರ ಅನಿಸಿಕೆ. ಎಲ್. ಕೆ. ಆಡ್ವಾಣಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಮಿತ್ರಾ ಅವರನ್ನು ಪಕ್ಷ ಮೂಲೆಗುಂಪು ಮಾಡಿದೆ. ಆದ್ದರಿಂದ ಅವರು ಮಾರ್ಗ ಬದಲಾಯಿಸಿ, ಹಸಿರು ಹುಲ್ಲುಗಾವಲು ಅರಸಿ ಹೊರಟಿದ್ದಾರೆ. ಟಿಎಂಸಿ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ನಿರೀಕ್ಷೆ ಇದ್ದು, ಕಳೆದ ಕೆಲ ವರ್ಷಗಳಿಂದ ಶಕ್ತಿಗುಂದಿರುವ ಪತ್ರಿಕೆಗೂ ನೆರವಾಗುತ್ತದೆ ಎಂಬ ವಿಶ್ವಾಸ ಅವರದ್ದು.


ಮಿತ್ರಾ ಬೈ.. ಪಂಡಾ ಜೈ..
ಚಂದನ್ ಮಿತ್ರಾ ಬಿಜೆಪಿಗೆ ಗುಡ್‌ಬೈ ಹೇಳಿರುವುದು ಒಡಿಶಾದಲ್ಲಿ ಕೆಲವರ ಖುಷಿಗೆ ಕಾರಣವಾಗಿದೆ. ಮಿತ್ರಾ ರಾಜೀನಾಮೆಯಿಂದ ಬೈಜಯಂತ್ ಜಯ್ ಪಂಡಾ ಫುಲ್ ಖುಷ್ ಆಗಿದ್ದಾರೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಬಿಜೆಡಿ ಸಂಸದ ಬೈಜಯಂತ್ ಜಯ್ ಪಂಡಾ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಅವರು ಸದ್ಯವೇ ಬಿಜೆಪಿ ಸೇರಲಿದ್ದಾರೆ. ಕೇಂದ್ರಪಾರ ಸಂಸದರಾಗಿರುವ ಪಂಡಾ ಜೂನ್ 12ರಂದು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇವರನ್ನು ಇದಕ್ಕೂ ಮುನ್ನ ಒಡಿಶಾದ ಆಡಳಿತಾರೂಢ ಬಿಜೆಡಿಯಿಂದ ಅಮಾನತು ಮಾಡಲಾಗಿತ್ತು. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಜತೆ ಸಂಬಂಧ ಹದಗೆಟ್ಟ ಬಳಿಕ ಪಂಡಾ ಬಿಜೆಪಿಯತ್ತ ದೃಷ್ಟಿ ನೆಟ್ಟಿದ್ದರು. 2019ರ ಚುನಾವಣೆಯ ಹಿನ್ನೆಲೆಯಲ್ಲಿ ಪಂಡಾ ಬಿಜೆಪಿ ಹಿಂಬಾಗಿಲ ಮೂಲಕ ಚೌಕಾಸಿ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ 21 ಕ್ಷೇತ್ರಗಳ ಪೈಕಿ 1 ಸ್ಥಾನವನ್ನಷ್ಟೇ ಗೆಲ್ಲಲು ಸಾಧ್ಯವಾದ ಬಿಜೆಪಿ ಈ ಬಾರಿ ದೊಡ್ಡ ಲಾಭದ ನಿರೀಕೆಯಲ್ಲಿದೆ. ಪಂಡಾ ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ಮುಖಂಡರಾಗುವ ಸಾಧ್ಯತೆ ಇದೆ. ಇವರು ಒಡಿಶಾದ ಜನಪ್ರಿಯ ಸುದ್ದಿವಾಹಿನಿಯ ಮಾಲಕ ಎನ್ನುವುದನ್ನೂ ಮರೆಯುವಂತಿಲ್ಲ. ಚುನಾವಣೆ ಸಂದರ್ಭದಲ್ಲೂ ಅವರು ಪಕ್ಷಕ್ಕೆ ನೆರವಾಗಬಹುದು.


ಗೆಲುವಿನ ನಗೆ ಬೀರಿದ ಪೂನಾವಾಲಾ
ಉದ್ಯಮಿ ಹಾಗೂ ಅಂಕಣಕಾರ ತಹ್ಸೀನ್ ಪೂನಾವಾಲ ಕಾಂಗ್ರೆಸ್ ಬೆಂಬಲಿಗ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜಕೀಯವಾಗಿ ಪ್ರಭಾವಿ ವಾದ್ರಾ ಕುಟುಂಬದ ಜತೆ ನಂಟು ಹೊಂದಿರುವ ಇವರ ಪತ್ನಿ ಮೋನಿಕಾ ವಾದ್ರಾ, ಸೋನಿಯಾಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಸೋದರ ಸಂಬಂಧಿ. 2016ರಲ್ಲಿ ಈ ವಿವಾಹಕ್ಕೆ ಸೋನಿಯಾ ಆಗಮಿಸಿದ್ದರು. ಒಂದಲ್ಲ ಒಂದು ಕಾರಣದ ನೆಪದಲ್ಲಿ ಪದೇ ಪದೇ ಪೂನಾವಾಲಾ ದಿಲ್ಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಸದಾ ಸುದ್ದಿಯಲ್ಲಿರಬಯಸುವ ಅವರಿಗೆ ಇತ್ತೀಚಿನ ಸುಪ್ರೀಂ ಕೋರ್ಟ್ ಇವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವುದು ಖುಷಿ ತಂದಿದೆ. ಸ್ವಯಂಘೋಷಿತ ಗೋರಕ್ಷಕರಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಲು ಪೂನಾವಾಲಾ ಹಾಗೂ ಇತರರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆನಂದದಿಂದ ಬೀಗಿದ ಪೂಜಾವಾಲಾ ಸುಪ್ರೀಂ ಕೋರ್ಟ್ ಮುಂದೆಯೇ ವಿಜಯ ಸಂಕೇತ ಪ್ರದರ್ಶಿಸಿ, ಕ್ಯಾಮರಾಗೆ ಫೋಸ್ ನೀಡಿ ಬೈಟ್ ನೀಡಿದ್ದರು. ಅವರ ಮತ್ತೊಬ್ಬ ಸಹೋದರ ಶಹಜಾದ್ ಪೂನಾವಾಲಾ ಮಾತ್ರ ಮೋದಿಯನ್ನು ಬೆಂಬಲಿಸುವ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಟಿವಿ ಚಾನೆಲ್‌ಗಳಲ್ಲಿ ಅವರು ಮೋದಿ ಪರ ವಕಾಲತು ಮಾಡುತ್ತಿದ್ದಾರೆ.

ಮೋದಿ ವಿದೇಶಯಾತ್ರೆಯ ಪ್ರೀತಿ
ನರೇಂದ್ರ ಮೋದಿ ಪ್ರಧಾನಿಯಾಗಿ ಇದುವರೆಗೆ ಕೈಗೊಂಡ ವಿದೇಶ ಪ್ರವಾಸಗಳಿಂದ ಸರಕಾರಕ್ಕೆ 1,500 ಕೋಟಿ ರೂಪಾಯಿ ವೆಚ್ಚವಾಗಿದೆ ಎಂಬ ಸುದ್ದಿ ಬಹಿರಂಗವಾದರೂ ಮೋದಿ ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಲೋಕಸಭೆಯಲ್ಲಿ ವಿಶ್ವಾಸಮತ ಗೆದ್ದು ಬೀಗಿರುವ ಮೋದಿಯವರು ಉಗಾಂಡ, ರುವಾಂಡ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಸೋಮವಾರ ಆರಂಭಿಸಲು ಮೋದಿ ಸಜ್ಜಾಗಿದ್ದಾರೆ. ಉಗಾಂಡಾದಲ್ಲಿ ಅವರು ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಲಿದ್ದು, ಭಾರೀ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಅಲ್ಲಿ ಕೂಡಾ ಸಂಸತ್ತಿನಲ್ಲಿ ಮಾಡಿರುವ ಸಾಧನೆ ಬಗ್ಗೆ ವಿವರಿಸಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜತೆಗೂ ಮೋದಿ ಮಾತುಕತೆ ನಡೆಸುವರು, ಆದರೆ ಪ್ರಧಾನಿಯು ವಿದೇಶಿ ಪ್ರವಾಸ ವೆಚ್ಚದ ಬಗ್ಗೆ ಮಾತನಾಡಲು ಬಿಜೆಪಿ ಸಿದ್ಧವಿಲ್ಲ. ಏಕೆಂದರೆ ಅವರು ಪ್ರವಾಸ ಕೈಗೊಳ್ಳುತ್ತಿರುವುದು ದೇಶಕ್ಕಾಗಿ ಎಂಬ ಸಿದ್ಧಾಂತ ಅವರದ್ದು.

ಬಿಜೆಪಿ ಮರ್ಜಿಯಲ್ಲಿ ರಾಹುಲ್
ಮುಸ್ಲಿಂ ಚಿಂತಕರ ಜತೆ ರಾಹುಲ್ ಸಂಭಾಷಣೆ ನಡೆಸಿದ್ದು, ಸಹಜವಾಗಿಯೇ ರಕ್ಷಣಾ ಸಚಿವರ ಗಮನ ಸೆಳೆದಿದೆ. ಕಾಂಗ್ರೆಸ್ ಅಧ್ಯಕ್ಷರು ಮುಸ್ಲಿಂ ಧಾರಿಯಾಗಿದ್ದಾರೆಯೇ ಎಂಬ ಅಭಿಪ್ರಾಯವನ್ನು ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಮಗೆ ಎದುರಾಗಿರುವ ಅಡಚಣೆಗಳ ಮೂಲ ಇದು ಎಂಬ ನಂಬಿಕೆ ಅವರದ್ದು. ಆದರೆ ರಾಹುಲ್ ನಡೆ ಹಲವರ ಮೆಚ್ಚುಗೆ ಗಳಿಸಿದೆ. ಇದು ಅವರ ಆಯ್ಕೆ ಸಾಧ್ಯತೆಗಳಿಗೂ ಅವಕಾಶ ಮಾಡಿಕೊಟ್ಟಿತು. ಅವರು ಸಂಪ್ರದಾಯವಾದಿ ಮುಸ್ಲಿಮರನ್ನು ಹೊರಗಿಟ್ಟದ್ದು ಮಾತ್ರವಲ್ಲದೇ, ಇಡೀ ಸಂಭಾಷಣೆಯನ್ನು ಹೆಚ್ಚು ಆಸ್ತೆಯಿಂದ ಕೇಳಿದರು. 2019ರ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂದು ಕೆಲವರು ಕೇಳಿದಾಗ, ಅಂಥ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಜತೆಗೆ ಅವರು ಗಾಂಧಿಗಳ ವಿರುದ್ಧ ನಿರ್ದೇಶಿತರಾದವರು ಎಂಬ ಕಟು ಶಬ್ದಗಳನ್ನೂ ಬಳಸಿದರು. ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಪ್ರಮಾದದ ಬಗ್ಗೆ ಒಬ್ಬ ಚಿಂತಕರು ಗಮನ ಸೆಳೆದಾಗ, ಇತರ ಕಾಂಗ್ರೆಸ್ ಮುಖಂಡರಂತೆ ತಮ್ಮ ತಾಯಿ, ತಂದೆ ಅಥವಾ ಅಜ್ಜಿಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)