ನೋವು ನಿವಾರಕಗಳ ಬಗ್ಗೆ ನಿಮಗೆಷ್ಟು ಗೊತ್ತು.....?
ಶರೀರದಲ್ಲಿ ನೋವು ಕಾಣಿಸಿಕೊಂಡರೆ ನೋವು ನಿವಾರಕ ಮಾತ್ರೆಗಳನ್ನು ನುಂಗುವುದು ಸಾಮಾನ್ಯವಾಗಿದೆ. ಹಲ್ಲುನೋವು,ಮುಟ್ಟಿನ ನೋವುಗಳಿಂದ ಹಿಡಿದು ಸಂದಿವಾತದ ನೋವಿನವರೆಗೆ ನೋವು ನಿವಾರಕ ಮಾತ್ರೆಗಳು ಪರಿಣಾಮಕಾರಿ ಪರಿಹಾರಗಳಾಗಿವೆ. ಆದರೆ ಈ ಮಾತ್ರೆಗಳನ್ನು ಮೇಲಿಂದ ಮೆಲೆ ಬಳಸುವುದು ಒಳ್ಳೆಯದಲ್ಲ,ಏಕೆಂದರೆ ಅದು ಆರೋಗ್ಯ ಸಮಸ್ಯೆಗಳಿಗೆ ಮತ್ತು ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ.
ನೋವು ನಿವಾರಕಗಳ ವಿಧಗಳು
ನೋವು ನಿವಾರಕಗಳನ್ನು ಸಾಮಾನ್ಯವಾಗಿ ಮೂರು ವಿಧಗಳಲ್ಲಿ ವರ್ಗೀಕರಿಸಬಹುದು.
►ಪ್ಯಾರಾಸಿಟಾಮಲ್
ಎಸಿಟಾಮಿನೊಫೆನ್ ಎಂದೂ ಕರೆಯಲಾಗುವ ಪ್ಯಾರಾಸಿಟಾಮಲ್ ಜ್ವರವನ್ನು ನಿಯಂತ್ರಿಸಲು ಬಳಸುವ ಸಾಮಾನ್ಯ ಔಷಧಿಯಾಗಿದೆ. ಇದನ್ನು ನೋವು ನಿವಾರಕವಾಗಿಯೂ ಬಳಸಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ವ್ಯಕ್ತಿಯಲ್ಲಿ ಅಲರ್ಜಿಗೆ ಕಾರಣವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಪ್ಯಾರಾಸಿಟಾಮಲ್ ಸೇವನೆಯು ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಈ ಔಷಧಿಯನ್ನು ಸೇವಿಸುವ ಮುನ್ನ ಅದರ ಸರಿಯಾದ ಡೋಸೇಜ್ ತಿಳಿದುಕೊಳ್ಳಲು ಮತ್ತು ಅದರ ಅಡ್ಡ ಪರಿಣಾಮಗಳಿಂದ ಪಾರಾಗಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.
►ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳು
ಇವು ಜ್ವರ,ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಔಷಧಿಗಳಾಗಿವೆ. ಆದರೆ ಇತರ ಉರಿಯೂತ ನಿರೋಧಕ ಔಷಧಿಗಳಂತೆ ಇವು ಸ್ಟಿರಾಯ್ಡಿಗಳನ್ನು ಒಳಗೊಂಡಿರುವುದಿಲ್ಲ. ಇವು ತಲೆನೋವು,ಮಹಿಳೆಯರಲ್ಲಿ ಮುಟ್ಟಿನ ದಿನಗಳಲ್ಲಿಯ ನೋವು ಮತ್ತು ಹಲ್ಲುನೋವಿನ ಚಿಕಿತ್ಸೆಗಾಗಿ ಅತಿ ಹೆಚ್ಚಾಗಿ ಬಳಕೆಯಾಗುವ ಔಷಧಿಗಳಾಗಿವೆ.
ಸ್ಟಿರಾಯ್ಡೇತರ ಉರಿಯೂತ ನಿವಾರಕ ಔಷಧಿಗಳು ಜಠರಗರುಳಿನ ನಾಳ,ಮೂತ್ರಪಿಂಡ,ಹೃದಯ,ರಕ್ತ,ಯಕೃತ್ತುಗಳ ಮೇಲೆ ಅಡ್ಡಪರಿಣಾಮಗಳ ಜೊತೆಗೆ ಅಲರ್ಜಿಗಳಿಗೂ ಕಾರಣವಾಗುತ್ತವೆ. ಈ ಔಷಧಿಗಳು ಕಾಕ್ಸ್-1 ಹಾರ್ಮೋನ್ನ್ನು ಪ್ರತಿಬಂಧಿಸುತ್ತವೆ ಮತ್ತು ಇದು ಜಠರಗರುಳಿನ ನಾಳದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ ಈ ಔಷಧಿಗಳು ಇತರ ಔಷಧಿಗಳೊಂದಿಗೂ ಪ್ರತಿವರ್ತಿಸುತ್ತವೆ.
ನೋವು ಮತ್ತು ಜ್ವರ ಕಾಣಿಸಿಕೊಂಡಾಗ ಜನರು ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಇವುಗಳನ್ನು ಖರೀದಿಸಿ ಸೇವಿಸುತ್ತಾರೆ. ಆದರೆ ಈ ಔಷಧಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಗಳನ್ನು ಹೆಚ್ಚಿಸುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಹೀಗಾಗಿ ವೈದ್ಯರ ಸಲಹೆಯಿಲ್ಲದೆ ಈ ಔಷಧಿಗಳನ್ನು ಸೇವಿಸಬಾರದು.
►ಒಪಿಯಾಡ್ಗಳು
ಒಪಿಯಾಡ್ಗಳು ಮಾರುಕಟ್ಟೆಯಲ್ಲಿ ದೊರೆಯುವ ಪ್ರಬಲ ನೋವು ನಿವಾರಕಗಳಾಗಿವೆ. ಇವುಗಳನ್ನು ಸಾಮಾನ್ಯವಾಗಿ ಸುದೀರ್ಘ ಕಾಲದಿಂದ ಕಾಡುತ್ತಿರುವ ಅಥವಾ ತೀವ್ರವಾದ ನೋವಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿಯೂ ನೋವು ನಿವಾರಕವಾಗಿ ಈ ಔಷಧಿಗಳು ಬಳಕೆಯಾಗುತ್ತವೆ.
ಟ್ರಾಮಡೋಲ್ ತೀವ್ರವಾದ ನೋವನ್ನು ಶಮನಗೊಳಿಸಲು ಹೆಚ್ಚಾಗಿ ಬಳಸಲಾಗುತ್ತಿರುವ ಈ ವರ್ಗಕ್ಕೆ ಸೇರಿದ ಔಷಧಿಯಾಗಿದೆ. ಕಳೆದೊಂದು ದಶಕದಿಂದ ಒಪಿಯಾಡ್ಗಳ ಬಳಕೆ ಗಣನೀಯವಾಗಿ ಹೆಚ್ಚಿದೆ ಮತ್ತು ಅದರ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಪ್ರಕರಣಗಳೂ ಹೆಚ್ಚಿವೆ. ಮಲಬದ್ಧತೆ,ವಾಕರಿಕೆ,ಮೂತ್ರವಿಸರ್ಜನೆಯಾಗದಿರುವುದು,ತುರಿಕೆ ಮತ್ತು ಖಿನ್ನತೆ ಇವು ಒಪಿಯಾಡ್ಗಳ ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಸೇರಿವೆ.
ತೀವ್ರ ನೋವನ್ನು ಶಮನಗೊಳಿಸಲು ಈ ಔಷಧಿಗಳ ಉಪಯೋಗ ಹೆಚ್ಚಿದಂತೆ ಅವುಗಳ ಮೇಲಿನ ಅವಲಂಬನೆಯೂ ಹೆಚ್ಚುತ್ತದೆ. ಆದ್ದರಿಂದ ಇವುಗಳನ್ನು ಸೇವಿಸುವ ಮುನ್ನ ವೈದ್ಯರನ್ನು ಭೇಟಿಯಾಗಿ ಅವುಗಳ ಒಳಿತು-ಕೆಡುಕುಗಳನ್ನು ತಿಳದುಕೊಳ್ಳುವುದು ಅಗತ್ಯವಾಗಿದೆ.