ಸಾಲ ಮನ್ನಾ ಮತ್ತು ಬಡ್ಡಿ ವ್ಯಾಪಾರ
ರೈತರ ಸಾಲ ಮನ್ನಾ ಎಂಬ ಈ ಮೂರು ಪದಗಳು ಯಾವುದೇ ರಾಜಕೀಯ ಪಕ್ಷಗಳಿಗೂ ಒಂದು ಪೊಲಿಟಿಕಲ್ ಟ್ರಂಪ್ ಕಾರ್ಡ್ ಎಂದರೆ ತಪ್ಪಲ್ಲ. ಎಲ್ಲಾ ಮುಖ್ಯಮಂತ್ರಿಗಳ ಬಜೆಟ್ನ ಅತೀ ದೊಡ್ಡ ಹೈಲೈಟ್ ಕೂಡಾ ಈ ರೈತರ ಸಾಲಮನ್ನಾ...
ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರತೀ ರೈತ ಕುಟುಂಬದ ಎರಡು ಲಕ್ಷ ರೂಪಾಯಿ ಸಾಲ ಮನ್ನಾ ಮತ್ತು ಈಗಾಗಲೇ ಸಾಲ ಸಂದಾಯ ಮಾಡಿರುವ ರೈತರಿಗೆ ಇಪ್ಪತ್ತೈದು ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಿದರು. ಇಲ್ಲಿ ನಮ್ಮ ಮುಂದಿರುವ ಪ್ರಶ್ನೆ ಈ ಸಾಲಮನ್ನಾದಿಂದ ರೈತರ ಬಾಳು ಹಸನಾಗುತ್ತಾ....? ನಿಜಕ್ಕೂ ಅರ್ಹರಾದ ಎಲ್ಲ ರೈತರಿಗೂ ಸಾಲಮನ್ನಾ ಸಿಗುತ್ತಾ? ಅದೆಷ್ಟರ ಮಟ್ಟಿಗೆ ಸದ್ಬಳಕೆಯಾಗುತ್ತದೆ ಎಂಬ ಬಗ್ಗೆ ಸರಕಾರಕ್ಕೇನಾದರೂ ಖಾತರಿ ಇದೆಯಾ? ಒಟ್ಟಿನಲ್ಲಿ ಸಾಲಮನ್ನಾದ ಮಾನದಂಡವೇನು?
ಒಂದೆಕರೆ ಕೃಷಿ ಭೂಮಿಗೆ ಅರುವತ್ತು ಸಾವಿರ ರೂಪಾಯಿ ಸಾಲವನ್ನು ಸಹಕಾರಿ ಬ್ಯಾಂಕುಗಳು ನೀಡುತ್ತವೆ. ನಾಲ್ಕೆಕರೆ ಭೂಮಿ ಇದ್ದವನಿಗೆ ಎರಡು ಲಕ್ಷ ನಲ್ವತ್ತು ಸಾವಿರ ಕೃಷಿ ಸಾಲ. ಇದರಲ್ಲಿ ಎರಡು ಲಕ್ಷ ಮನ್ನಾ... ನಮಗೆಲ್ಲಾ ತಿಳಿದಿರುವ ಪ್ರಕಾರ ಕೃಷಿ ಸಾಲ ಇದೆ ಎಂದ ಮೇಲೆ ಅದನ್ನು ಪಡೆಯದೇ ಬಿಡುವವರು ತೀರಾ ವಿರಳ. ಕೆಲವರು ನಿಜಕ್ಕೂ ಕೃಷಿ ಉದ್ದೇಶಕ್ಕೆ ಸಾಲ ಪಡೆದರೆ ಇನ್ನು ಕೆಲವರು ಬಡ್ಡಿ ರಹಿತ ಸಾಲವೂ ಸಿಗುತ್ತೆ, ನಾಳೆ ಮನ್ನಾವೂ ಆಗುತ್ತೆ ಎಂದು ಪಡೆಯುವವರೇ ಹೆಚ್ಚು. ನಮ್ಮ ಕರಾವಳಿ ಕರ್ನಾಟಕದಲ್ಲಿ ಅನೇಕಾರು ಮಂದಿ ದೊಡ್ಡ ಹಿಡುವಳಿದಾರರು ತಮ್ಮ ಭೂಮಿಯನ್ನು ಗೇಣಿಗೆ ಕೊಡುತ್ತಾರೆ. ವಾಸ್ತವದಲ್ಲಿ ಅದರಲ್ಲಿ ದುಡಿಯುವವನೇ ನಿಜವಾದ ರೈತ. ಭೂಮಿಯ ಮಾಲಕತ್ವ ಇದ್ದವನನ್ನು ಜಮೀನುದಾರ ಎನ್ನಬೇಕಾಗುತ್ತದೆ.
ಅಂತಹವರೆಲ್ಲಾ ತಲೆಬಿಸಿ ಯಾಕೆಂದು ವಾರ್ಷಿಕ ಗೇಣಿಗೆ ಕೊಡುತ್ತಾರೆ. ಸಹಕಾರಿ ಬ್ಯಾಂಕುಗಳಲ್ಲಿ ಸಿಕ್ಕಷ್ಟು ಸಾಲವನ್ನೂ ಪಡೆಯುತ್ತಾರೆ. ಒಂದು ವೇಳೆ ಕೃಷಿಯಲ್ಲಿ ನಷ್ಟವಾದರೂ ಅದು ಭೂಮಾಲಕನ ಮೇಲೆ ಪರಿಣಾಮ ಬೀರುವುದಿಲ್ಲ. ಗೇಣಿಗೆ ಕೊಂಡವನಿಗೆ ಲಾಭವೋ ನಷ್ಟವೋ ಎಂಬುದು ಭೂಮಾಲಕನಿಗೆ ಬಿದ್ದು ಹೋಗಿಲ್ಲ. ಆತನಿಂದ ಕರಾರು ಪತ್ರ ತಯಾರಿಸುವಾಗಲೇ ಅರ್ಧ ಮೊತ್ತ ಪಡೆಯುತ್ತಾನೆ. ಉಳಿದರ್ಧ ಬಳಿಕ ಪಡೆಯುತ್ತಾನೆ. ಇಲ್ಲಿ ಸಾಲ ಸೌಲಭ್ಯ ಸಿಗುವುದು ಭೂಮಿಯ ಒಡೆತನ ಹೊಂದಿದವನಿಗೇ ಹೊರತು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ ಭೂರಹಿತ ಶ್ರಮಜೀವಿ ರೈತನಿಗಲ್ಲ. ಸಾಲಪಡ ಕೊಂಡವ ಮನ್ನಾ ಸೌಲಭ್ಯ ಸಿಕ್ಕಾಗೆಲ್ಲಾ ಮನ್ನಾ ಮಾಡಿಸುತ್ತಾನೆ. ಪಡೆದ ಸಾಲದ ದುಡ್ದಿನಿಂದ ಲೇವಾದೇವಿ ವ್ಯವಹಾರ ಮಾಡುತ್ತಾನೆ.ಅಂತವರ ಪಾಲಿಗೆ ಸಾಲಮನ್ನಾ ಎಂದರೆ ಡಬಲ್ ಧಮಾಕ ಅಲ್ಲದೇ ಇನ್ನೇನು?
ಸಾಮಾನ್ಯವಾಗಿ ಸಣ್ಣ ಹಿಡುವಳಿದಾರರಲ್ಲಿ ದೊಡ್ಡ ಸಂಖ್ಯೆಯವರು ಸ್ವತಃ ಕೃಷಿ ಭೂಮಿಯಲ್ಲಿ ದುಡಿಯುವವರು. ಇಡೀ ಕರ್ನಾಟಕದ ರೈತ ಸಮೂಹದಲ್ಲಿ ಬಹುದೊಡ್ಡ ಸಂಖ್ಯೆಯವರು ಸಣ್ಣ ಮತ್ತು ಅತೀ ಸಣ್ಣ ರೈತರು. ಉತ್ತರ ಕರ್ನಾಟಕ, ಮಲೆನಾಡು ಭಾಗಕ್ಕೆ ಹೋಲಿಸಿದರೆ ಅತೀ ಹೆಚ್ಚು ಸಣ್ಣ ರೈತರು ಮತ್ತು ಅತೀ ಸಣ್ಣ ರೈತರಿರುವುದು ದಕ್ಷಿಣ ಕನ್ನಡದಲ್ಲಿ. ಇಲ್ಲಿ ಅರ್ಧ ಎಕರೆಗಿಂತ ಕಡಿಮೆ ಭೂಮಿಯಿರುವ ರೈತರೇ ಅಧಿಕ. ಅರ್ಧ ಎಕರೆಗೆ ಮೂವತ್ತು ಸಾವಿರ ರೂಪಾಯಿಯಷ್ಟೇ ಕೃಷಿ ಸಾಲ. ನೀರಾವರಿಗಾಗಿ ಸಿಗುವ ಗಂಗಾ ಕಲ್ಯಾಣ ಯೋಜನೆಯ ಭರಪೂರ ಲಾಭ ಎತ್ತುವವರು ದೊಡ್ಡ ಹಿಡುವಳಿದಾರರು. ಕರಾವಳಿಯದ್ದು ಏನಿದ್ದರೂ ನೀರಾವರಿ ಆಶ್ರಿತ ಬೆಳೆಗಳೇ ಆಗಿವೆ. ಕರಾವಳಿಯಲ್ಲಿ ಸಣ್ಣ ರೈತರಲ್ಲಿ ನೀರಿಲ್ಲದೇ ಭೂಮಿಯನ್ನು ಹಡಿಲು ಬಿಟ್ಟವರೇ ಅಧಿಕ. ಗಂಗಾ ಕಲ್ಯಾಣ ಯೋಜನೆ ಅಥವಾ ಇನ್ನ್ಯಾವುದೇ ನೀರಾವರಿ ಯೋಜನೆಯನ್ನು ಸಣ್ಣ ರೈತರಿಗೂ ವಿಸ್ತರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಅರ್ಧ ಎಕರೆಗಿಂತ ಕಡಿಮೆ ಕೃಷಿ ಭೂಮಿಯಿರುವವರಿಗೆ ಲಕ್ಷಾಂತರ ರೂಪಾಯಿ ವೆಚ್ಚದ ನೀರಾವರಿ ಯೋಜನೆಯನ್ನು ನೀಡುವುದು ನಷ್ಟದ ಬಾಬ್ತು ಎಂಬ ವಾಸ್ತವ ಒಪ್ಪಬಹುದಾದರೂ ಅದಕ್ಕೆ ಖಂಡಿತಾ ಪರಿಹಾರವಿದೆ. ಅಕ್ಕ ಪಕ್ಕ ಕೃಷಿ ಭೂಮಿ ಹೊಂದಿರುವ ಮೂವರು ರೈತರಿಗೆ ಜಂಟಿಯಾಗಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೆ ತರಬಹುದು.
ಇನ್ನು ಕೆಲವರ ಕೈಯಲ್ಲಿ ಕನ್ವರ್ಶನ್ ಆಗದ ಭೂಮಿ ಇರುತ್ತದೆ. ಅಂತಹವರು ತೀರಾ ಕೃಷಿ ಕಾರ್ಯ ಮಾಡದ ಭೂಮಿಯನ್ನು ಕೃಷಿ ಭೂಮಿಯೆಂದು ತೋರಿಸಿ ಕೃಷಿ ಪಾಸ್ ಪುಸ್ತಕ ಮಾಡಿಸುತ್ತಾರೆ, ಮಾತ್ರವಲ್ಲ ಕೃಷಿ ಸಾಲ ಪಡೆಯುತ್ತಾರೆ. ಇತ್ತ ಕೃಷಿಯಂತೂ ಇಲ್ಲವೇ ಇಲ್ಲ. ಶೂನ್ಯ ಬಡ್ಡಿದರದ ಸಾಲ ಸೌಲಭ್ಯಗಳನ್ನು ಪಡೆಯುತ್ತಾರೆ, ಕೃಷಿ ಸಾಲ ಮನ್ನಾದಲ್ಲಿ ನಯಾಪೈಸೆಯ ಕೃಷಿ ಮಾಡದವರೂ ಸಾಲ ಮನ್ನಾ ಮಾಡಿಸುತ್ತಾರೆ.
ಸಾಲ ಮನ್ನಾ ಯೋಜನೆಯನ್ನು ಈಗಾಗಲೇ ಏನು ಜಾರಿಗೆ ತರಲಾಗಿದೆಯೋ ಅದು ನಿಜಕ್ಕೂ ಅರ್ಹರಿಗೆ ತಲುಪುತ್ತದೆಯೋ ಅಥವಾ ಬಡ್ಡಿ ವ್ಯಾಪಾರಿಗಳ ತಿಜೋರಿ ಸೇರುತ್ತದೆಯೋ ಎಂಬುವುದನ್ನು ಪರೀಕ್ಷೆ ಮಾಡುವ ಕೆಲಸವೂ ಆಗಬೇಕಿದೆ. ಜಮೀನನ್ನು ಗೇಣಿಗೆ ಕೊಟ್ಟವರಿಗೆ ಸರಕಾರೀ ಪ್ರಾಯೋಜಿತ ಕೃಷಿ ಸಾಲ ನೀಡಲೇಬಾರದು. ಕೃಷಿ ಭೂಮಿಯಲ್ಲಿ ದುಡಿಯುವವನನ್ನು ಮಾತ್ರ ರೈತನೆಂದು ಪರಿಗಣಿಸಬೇಕು.
ಕೃಷಿ ಸಾಲ ಯೋಜನೆ ಭೂರಹಿತ ರೈತರಿಗೂ ತಲುಪುವಂತಹ ಕೆಲಸವಾಗಲೇಬೇಕಿದೆ. ಆ ನಿಟ್ಟಿನಲ್ಲಿ ಸೂಕ್ತವಾದ ಒಂದು ಕಾರ್ಯಯೋಜನೆಯನ್ನು ರೂಪಿಸಬೇಕಿದೆ. ಒಟ್ಟಿನಲ್ಲಿ ಈ ರೀತಿಯ ಸಾಲಮನ್ನಾ ಯೋಜನೆಯನ್ನು ವಿವಿಧ ಸರಕಾರಗಳು ನಮ್ಮ ರಾಜ್ಯದಲ್ಲಿ ಈ ಹಿಂದೆಯೂ ಜಾರಿಗೆ ತಂದಿತ್ತು. ಒಮ್ಮೆ ಸಾಲಮನ್ನಾ ಪಡೆದ ಬಳಿಕ ಮತ್ತೆ ಆ ರೈತ ಸಾಲಮುಕ್ತನಾಗಿ ನೆಮ್ಮದಿಯ ಬಾಳು ಬಾಳಿದ್ದುಂಟೇ...? ಕೇವಲ ಸಾಲಮನ್ನಾದಿಂದ ರೈತರ ಸಮಸ್ಯೆಗಳು ನೀಗುವುದಿಲ್ಲ. ಸರಕಾರ ಖುದ್ದಾಗಿ ರೈತರ ಬೆಳೆಯನ್ನು ಖರೀದಿಸುವಂತಹ ಯೋಜನೆ ಜಾರಿಗೆ ತರುವುದು ಕಾಲದ ತುರ್ತು. ಒಂದು ಉದಾಹರಣೆ ನೋಡಿ ಟೊಮ್ಯಾಟೋ ಬೆಳೆಯುವ ರೈತ ಟೊಮ್ಯಾಟೊಗೆ ಬೆಲೆಯಿಲ್ಲವೆಂದು ರಸ್ತೆಗೆ ಎಸೆದು ಪ್ರತಿಭಟಿಸುತ್ತಾನೆ.ಒಂದೆಡೆ ಟೊಮ್ಯಾಟೊಗೆ ಬೆಲೆ ಇಲ್ಲವೆಂದು ರೈತ ರಸ್ತೆಗೆ ಎಸೆದು ಪ್ರತಿಭಟಿಸುತ್ತಿದ್ದರೆ ಟೊಮ್ಯಾಟೊ ಬೆಳೆಯದ ನಮ್ಮ ಕರಾವಳಿಯಲ್ಲಿ ಅದೇ ಸಂದರ್ಭದಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ ಮೂವತ್ತು ನಲ್ವತ್ತು ರೂಪಾಯಿಯಿರುತ್ತದೆ. ಇದರರ್ಥ ಸ್ಪಷ್ಟ. ಇಲ್ಲಿ ಬೆಳೆದವನಿಗೂ ಇಲ್ಲ, ಬಳಕೆದಾರನಿಗೂ ಇಲ್ಲ. ಆದರೆ ರೈತ ಮತ್ತು ಬಳಕೆದಾರನ ಮಧ್ಯೆ ಸೇಫ್ ಆಗಿರುವವ ಮಧ್ಯವರ್ತಿ ಮಾತ್ರ. ಎಲ್ಲಿಯವರೆಗೆ ವೈಜ್ಞಾನಿಕ ಸ್ವರೂಪದ ಮಾರುಕಟ್ಟೆ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯವರೆಗೆ ರೈತನಿಗೆ ನ್ಯಾಯ ಸಿಗುವುದು ಕನಸಿನ ಮಾತು.
ಇದೊಂದು ರೀತಿಯಲ್ಲಿ ಪರಿಹಾರವಿಲ್ಲದ ಸಮಸ್ಯೆಯಾಗಿಯೇ ಸದಾ ಉಳಿಯುತ್ತದೆ. ಪ್ರಾಕೃತಿಕ ವಿಕೋಪಗಳಿಂದಲೋ, ಕ್ಷಾಮದಿಂದಲೋ, ಬೆಳೆಗೆ ಬಾಧಿಸುವ ಕಾಯಿಲೆಯಿಂದಲೋ ರೈತ ಅನುಭವಿಸುವ ನಷ್ಟ ಯಾವತ್ತು ಬೇಕಾದರೂ ಎದುರಿಸಬಹುದು. ಅದು ಬೇರೆಯೇ ಪ್ರಶ್ನೆ. ಆದರೆ ಮಾನವನಿಂದ ಪರಿಹಾರ ಸಾಧ್ಯವಿರುವಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ ಆಳುವ ವರ್ಗಕ್ಕೆ ಇರಬೇಕು.
ವೈಜ್ಞಾನಿಕ ಸ್ವರೂಪದ ಮಾರುಕಟ್ಟೆ ನಿರ್ಮಾಣ, ರೈತನಿಂದಲೇ ಸರಕಾರ ಆತನ ಬೆಳೆಗಳನ್ನು ಖರೀದಿಸುವುದು, ಅಗತ್ಯ ಗೊಬ್ಬರ, ಬಿತ್ತನೆ ಬೀಜ ನೀಡುವುದು, ಸಮರ್ಪಕ ನೀರಾವರಿ ವ್ಯವಸ್ಥೆ ಮಾಡಿಕೊಡುವುದು ಇತ್ಯಾದಿಗಳೆಲ್ಲಾ ಖಂಡಿತಾ ಇಚ್ಛಾಶಕ್ತಿಯಿರುವ ಒಂದು ಸರಕಾರಕ್ಕೆ ಸಾಧ್ಯವಾಗುವ ಕೆಲಸ. ಪತೀ ಸಲವೂ ಸಾಲಮನ್ನಾ ಘೋಷಿಸುವುದರ ಹಿಂದೆ ಹಿಡನ್ ಪೊಲಿಟಿಕಲ್ ಅಜೆಂಡಾ ಇದ್ದೇ ಇರುತ್ತದೆ.
ಅದನ್ನು ಬಿಟ್ಟು ಉಚಿತ ಗೊಬ್ಬರ, ಬಿತ್ತನೆ ಬೀಜ, ನೀರಾವರಿ ವ್ಯವಸ್ಥೆ ಮಾಡಿಕೊಟ್ಟರೆ ಸಾಲಮನ್ನಾದ ಸಮಸ್ಯೆಗಳು ಅರ್ಧಕ್ಕರ್ಧ ಇಲ್ಲವಾಗ ಬಹುದು. ಜನರ ತೆರಿಗೆಯ ದುಡ್ಡು ಕೃಷಿ ಸಾಲದ ಹೆಸರಲ್ಲಿ ಖಾಸಗಿ ಲೇವಾದೇವಿಯಲ್ಲಿ ದುರ್ಬಳಕೆಯಾಗುವುದೂ ಕಡಿಮೆಯಾಗಬಹುದು.