ಪೊಲೀಸ್ ಮೊಕದ್ದಮೆ ಡೈರಿ ಏನು ಹೇಳುತ್ತದೆ?
ಜಾರ್ಖಂಡ್ ದತ್ತು ಪ್ರಕರಣ
ಏಕೈಕ ಪ್ರಕರಣವನ್ನು ಆಧರಿಸಿ ಕ್ರಿಶ್ಚಿಯನ್ ಸಮುದಾಯದ ಮಾನಹಾನಿ ಮಾಡುವುದಕ್ಕಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಮಾಧ್ಯಮಗಳಿಗೆ ತಾನು ಆಯ್ದ ಸುದ್ದಿಗಳನ್ನು ಮಾತ್ರ ನೀಡಿದೆ ಎಂದು ಕ್ರಿಶ್ಚಿಯನ್ ಸೇವಾ ಸಂಸ್ಥೆಗಳು ಆಪಾದಿಸಿವೆ.
ಜುಲೈ 30ರಿಂದ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಸುದ್ದಿಯಾಗಿರುವ ಒಂದು ಶಿಶು ದತ್ತು ಸ್ವೀಕಾರವು ಹಗರಣದಲ್ಲಿ ಸಿಲುಕಿಕೊಂಡಿದೆ. ಅಲ್ಲಿ ನಿಜವಾಗಿ ನಡೆದಿದ್ದೇನು? ಅನಿಮಾ ಇಂದುವರ್ ಎಂಬ ಹೆಸರಿನ ಮಹಿಳೆಯೊಬ್ಬರು ಮೇ 14ರಂದು ತಮಗೆ ಶಿಶುವೊಂದನ್ನು ದತ್ತು ಸ್ವೀಕರಿಸಲು ಸಹಕರಿಸಿದ್ದರು; ಬಳಿಕ ಆಕೆಯೇ ಆ ಮಗುವನ್ನು ನಮ್ಮಿಂದ ಕಿತ್ತುಕೊಂಡು ಹೋದರೆಂದು ಉತ್ತರಪ್ರದೇಶದ ದಂಪತಿ ರಾಂಚಿಯ ಶಿಶು ಕಲ್ಯಾಣ ಸಮಿತಿಗೆ ದೂರು ನೀಡಿದರು. ಮದರ್ ತೆರೆಸಾ ಸ್ಥಾಪಿ ಸಿದ್ದ ಅವಿವಾಹಿತ ಗರ್ಭಿಣಿಯರಿಗೆ ಆಶ್ರಯ ನೀಡುವ ಮಿಶನರೀಸ್ ಆಫ್ ಚ್ಯಾರಿಟಿ ನಡೆಸುವ ‘ನಿರ್ಮಲ್ ಹೃದಯ್’ ಎಂಬ ಸಂಸ್ಥೆಯಲ್ಲಿ ಇಂದುವರ್ ನೌಕರಿ ಮಾಡುತ್ತಿದ್ದರು. ಮಗುವನ್ನು ದತ್ತು ಪಡೆಯಲು ತಾವು 1.2 ಲಕ್ಷ ರೂಪಾಯಿ ನೀಡಿರುವುದಾಗಿ ಆ ದಂಪತಿ ಹೇಳಿದರು.
ಭಾರತದ ದತ್ತು ಸ್ವೀಕಾರ ಕಾನೂನುಗಳ ಪ್ರಕಾರ ಹಣ ಪಡೆದು ದತ್ತು ಸ್ವೀಕರಿಸುವಂತಿಲ್ಲ. ದತ್ತು ಪಡೆಯಲು ಬಯಸುವ ಪೋಷಕರು ಸರಕಾರದ ಕೇಂದ್ರೀಕೃತ ಆನ್‌ಲೈನ್ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಸಿಕೊಂಡು ನೆಟ್‌ವರ್ಕ್‌ನಲ್ಲಿ ದಾಖಲಾಗಿರುವ ದತ್ತು ಸ್ವೀಕಾರ ಚಿತ್ರಗಳ ಮೂಲಕ ದತ್ತು ಪಡೆಯಬೇಕು. ಆದರೆ ಧಾರ್ಮಿಕ ನೆಲೆಯಲ್ಲಿ ಸಿಂಗಲ್ ಪೋಷಕರು ದತ್ತು ಸ್ವೀಕರಿಸುವುದನ್ನು ಮಿಶನರೀಸ್ ಆಫ್ ಚಾರಿಟಿ ವಿರೋಧಿಸುವುದರಿಂದ ಅದು ನೆಟ್‌ವರ್ಕ್‌ನಲ್ಲಿ ಸೇರಿಲ್ಲ. ಹಾಗಾಗಿ ಅದರ ಮೂಲಕ ನಡೆಯುವ ಯಾವುದೇ ದತ್ತು ಸ್ವೀಕಾರ ಕಾನೂನು ರೀತ್ಯಾ ಅಕ್ರಮವಾಗುತ್ತದೆ. ಶಿಶು ಕಲ್ಯಾಣ ಸಮಿತಿ ನೀಡಿದ ಒಂದು ದೂರನ್ನು ಆಧರಿಸಿ ಜುಲೈ 3ರಂದು ಪೊಲೀಸರು ಇಂದುವರ್‌ರನ್ನು ಬಂಧಿಸಿದರು. ಆಕೆ ನೀಡಿದ ಹೇಳಿಕೆಯಲ್ಲಿ ತಾನು ಹಣ ಪಡೆದಿರುವುದಾಗಿ ಒಪ್ಪಿಕೊಂಡರು ಮತ್ತು ತನ್ನ ಸಹೋದ್ಯೋಗಿ ಸಿಸ್ಟರ್ ಕನ್ಸಿಲಿಯಾ ತನ್ನ ಜತೆ ಶಾಮೀಲಾಗಿದ್ದರು ಎಂದು ಹೇಳಿದರು.
ಸ್ಕ್ರಾಲ್.ಇನ್ ತಂಡ ರಾಂಚಿಗೆ ಹೋಗಿ ವಿಚಾರಣೆ ನಡೆಸಿದಾಗ ತಿಳಿದು ಬಂದ ಮುಖ್ಯಾಂಶಗಳು ಇಲ್ಲಿವೆ.
ಪೊಲೀಸ್ ಮೊಕದ್ದಮೆ ಡೈರಿಯಲ್ಲಿ
ತಾನು ಹಣ ಪಡೆದಿರುವುದನ್ನು ಒಪ್ಪಿಕೊಂಡಿರುವ ಇಂದುವರ್ ತಾನು ಹಣ ಪಡೆದು ಮೂರು ನವಜಾತ ಶಿಶುಗಳನ್ನು ನೀಡಿರುವುದಾಗಿಯೂ, ತಾನು ಭಾಗಿಯಾಗದ ಆದರೆ ತನ್ನ ಗಮನಕ್ಕೆ ಬಂದಿರುವ ನಾಲ್ಕನೆಯ ವ್ಯವಹಾರ ಒಂದು ನಡೆದಿರುವುದಾಗಿಯೂ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಹೇಳಿದ್ದಾರೆ. ಇತರ ಎರಡು ಪ್ರಕರಣಗಳಲ್ಲಿ ಆಕೆ ತಲಾ ಐವತ್ತು ಸಾವಿರ ರೂಪಾಯಿ ಪಡೆದಿರುವುದಾಗಿಯೂ ಹೇಳಿದ್ದಾರೆ.
ದತ್ತು ಸ್ವೀಕರಿಸಿದ ಕುಟುಂಬಗಳು ಏನು ಹೇಳುತ್ತವೆ? ಉತ್ತರ ಪ್ರದೇಶದ ಕುಟುಂಬ ತಾವು 1.2 ಲಕ್ಷ ನೀಡಿರುವುದು ನಿಜ. ಆದರೆ ತಮಗೆ ಭಾರತದ ದತ್ತು ಕಾನೂನುಗಳ ಬಗ್ಗೆ ತಿಳಿದಿಲ್ಲ ಎಂದಿದೆ.
ಮಾಜಿ ಕಾಂಗ್ರೆಸ್ ಶಾಸಕ ಮತ್ತು ಸರಕಾರಿ ನೌಕರನ ಕುಟುಂಬಗಳೆರಡೂ ಕೂಡ ದತ್ತು ಪಡೆದ ಶಿಶುಗಳನ್ನು ತಾವಾಗಿಯೇ ಶಿಶು ಕಲ್ಯಾಣ ಸಮಿತಿಗೆ ಒಪ್ಪಿಸಿದ್ದೇವೆ. ಮಾಧ್ಯಮಗಳ ವರದಿಗಳು ಹೇಳುವಂತೆ ಪೊಲೀಸರು ದಾಳಿ ಮಾಡಿ ಅವುಗಳನ್ನು ಮರಳಿ ಪಡೆದಿಲ್ಲ ಎಂದಿದ್ದಾರೆ. ನಾಲ್ಕರಲ್ಲಿ ಮೂರು ಶಿಶುಗಳನ್ನು ದತ್ತು ಪಡೆದ ಪೋಷಕರಿಗೆ ಈಗ ಹಿಂದಿರುಗಿಸಲಾಗಿದೆ.
ಮಾಧ್ಯಮಗಳು ಏನು ವರದಿ ಮಾಡಿದವು?
ಮಿಶನರೀಸ್ ಆಫ್ ಚ್ಯಾರಿಟಿಯ ನೇತೃತ್ವದಲ್ಲಿ ಕಾರ್ಯವೆಸಗುವ ಸಂಸ್ಥೆಗಳಲ್ಲಿ ಜನಿಸಿದ 280 ಶಿಶುಗಳು ನಾಪತ್ತೆಯಾಗಿವೆ ಮತ್ತು 24 ಶಿಶುಗಳನ್ನು ಹಣ ಪಡೆದು ಮಾರಾಟ ಮಾಡಲಾಗಿದೆ ಎಂಬ ವಿಷಯ ಸಂಸ್ಥೆಯ ಮುಖ್ಯಸ್ಥರಿಗೆ ತಿಳಿದಿತ್ತು ಎಂದು ಸ್ಥಳೀಯ ಮಾಧ್ಯಮ ವರದಿಗಳು ಆಪಾದನೆಗಳನ್ನು ಉತ್ಪ್ರೇಕ್ಷಿಸಿ ವರದಿ ಮಾಡಲು ಏನು ಕಾರಣ?
ಏಕೈಕ ಪ್ರಕರಣವನ್ನು ಆಧರಿಸಿ ಕ್ರಿಶ್ಚಿಯನ್ ಸಮುದಾಯದ ಮಾನಹಾನಿ ಮಾಡುವುದಕ್ಕಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಮಾಧ್ಯಮಗಳಿಗೆ ತಾನು ಆಯ್ದ ಸುದ್ದಿಗಳನ್ನು ಮಾತ್ರ ನೀಡಿದೆ ಎಂದು ಕ್ರಿಶ್ಚಿಯನ್ ಸೇವಾ ಸಂಸ್ಥೆಗಳು ಆಪಾದಿಸಿವೆ.
ರಾಂಚಿಯಲ್ಲಿರುವ ಮಿಶನರೀಸ್ ಆಫ್ ಚ್ಯಾರಿಟಿಯ ಇತರ ಶಿಶು ನಿಲಯಗಳ ವಿರುದ್ಧ ಯಾವುದೇ ಆಪಾದನೆಗಳಿಲ್ಲ. ಆದರೂ ರಾಜ್ಯದ ಬಿಜೆಪಿ ಸರಕಾರ ಆ ನಿಲಯಗಳನ್ನು ಮುಚ್ಚಿಸಿರುವುದು ಒಂದು ಪ್ರತೀಕಾರದ ಕ್ರಮ ಎಂದು ಹೇಳಲಾಗಿದೆ.
ಉದಾಹರಣೆಗೆ ರಾಂಚಿಯಲ್ಲಿರುವ ‘ನಿರ್ಮಲಾ ಶಿಶು ಭವನ್’ನ್ನು ಮುಚ್ಚಿ ಅಲ್ಲಿ ಇದ್ದ ಎರಡು ವರ್ಷಕ್ಕಿಂತಲೂ ಚಿಕ್ಕ ಎಲ್ಲ 22 ಮಕ್ಕಳನ್ನು ರಾಜ್ಯದ ಬೇರೆ ಬೇರೆ ಆಶ್ರಯ ಧಾಮಗಳಿಗೆ ಕಳುಹಿಸಲಾಗಿದೆ.
ಪ್ರಕರಣದಲ್ಲಿ ‘‘ಸ್ಪಷ್ಟವಾಗಿ ಅಕ್ರಮ ನಡೆದಿದೆ’’ ಎಂದು ಓರ್ವ ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯ ಸರಕಾರದಲ್ಲಿ ಸಚಿವರೂ ಆಗಿರುವವರೊಬ್ಬರು ಹೇಳಿದ್ದಾರೆ. ಆದರೆ ಸರಕಾರದ ಟೀಕಾಕಾರರ ವಿರುದ್ಧ ಸೇಡು ತೀರಿಸಲು ಈ ಪ್ರಕರಣ ರಾಜ್ಯ ಸರಕಾರಕ್ಕೆ ‘‘ಸ್ಫೋಟಕ ಸಾಮಗ್ರಿ ನೀಡಿದೆ’’ ಎಂದು ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ ರಾಜ್ಯ ಸರಕಾರಕ್ಕೆ ಮುಜುಗರ ತಂದಿದ್ದ ಆದಿವಾಸಿಗಳ ಚಳವಳಿಗಳಿಂದ ಜನರ ಗಮನ ಬೇರೆಡೆ ಸೆಳೆದು ನಿಟ್ಟುಸಿರು ಬಿಡಲು ಸರಕಾರಕ್ಕೆ ಈ ಪ್ರಕರಣ ಉತ್ತಮ ಅವಕಾಶ ನೀಡಿದೆ. ‘‘ಅಂತಹದ್ದೇನಾದರೂ ಸಿಕ್ಕರೆ ಪ್ರತಿಯೊಂದು ರಾಜಕೀಯ ಪಕ್ಷವೂ ಅದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತ್ತದೆ’’ ಎಂದು ಆ ನಾಯಕರು ಹೇಳಿದ್ದಾರೆ.
ಕೃಪೆ: scroll.in