ಕಾವ್ಯದಿಂದ ದೃಶ್ಯ ಕಾವ್ಯಕ್ಕೆ ಎಚ್ಚೆಸ್ವಿ ಲಂಘನ
ಮಲೆನಾಡ ಸೆರಗಿನ ಹೊದಿಗೆರೆಯ ಎಚ್.ಎಸ್.ವೆಂಕಟೇಶ ಮೂರ್ತಿಯವರು ಕವಿಯಾಗಿ, ನಾಟಕಕಾರರಾಗಿ ಸುಪ್ರಸಿದ್ಧರು. ಸಿನೆಮಾ ಲೋಕಕ್ಕೆ ಅವರು ಅಷ್ಟೇನೂ ಅಪರಿಚಿತರಲ್ಲ. ಗೀತೆಗಳು, ಥೀಮ್ ಸಾಂಗ್, ಟೈಟಲ್ ಸಾಂಗ್‌ಗಳಿಂದ ಪರಿಚಿತರು. ಈಗ ನಿರ್ದೇಶಕರು. ಹೊದಿಗೆರೆಯಿಂದ ಕನ್ನಡ ಕಾವ್ಯ ಲೋಕಕ್ಕೆ ಅವರ ಯಾನ ಒಂದು ಮಹತ್ವಪೂರ್ಣ ಘಟ್ಟವಾದರೆ, ಈಗ ಕಾವ್ಯ ಲೋಕದಿಂದ ದೃಶ್ಯಕಾವ್ಯಕ್ಕೆ ಲಗ್ಗೆಯಿಟ್ಟಿರುವುದು ಒಂದು ಲಂಘನವೇ ಸರಿ.
ವಸ್ತುಗಳ ರೂಪವನ್ನು, ಅವುಗಳ ಚಲನೆಯನ್ನು,ಧ್ವನಿಯನ್ನು ಯಥಾವತ್ತಾಗಿ ದಾಖಲುಮಾಡಿಕೊಂಡು ಪ್ರದರ್ಶಿಸುವ ಚಲನಚಿತ್ರದ ಭಾಷೆ ವಿಶಿಷ್ಟವಾದದ್ದು. ಈ ವಿಶಿಷ್ಟ ಭಾಷೆಯಲ್ಲಿ ದೃಶ್ಯ ಅಥವಾ ವಸ್ತು ಬಿಂಬವೇ ದೃಶ್ಯ ಭಾಷೆಯ ಮುಖ್ಯ ಜೀವಾಳವಾದರೂ ಮಾತು, ಧ್ವನಿ, ಶಬ್ದ ಮೊದಲಾದ ವ್ಯಂಜನಗಳನ್ನೂ ಸೇರಿಸಿ ಉಣಬಡಿಸುವ ಮನೋರಂಜನೆಯನ್ನು ಸಿನೆಮಾ ಎಂದು ಮಾನವ ಕುಲ ಒಪ್ಪಿಕೊಂಡು ಎರಡುಮೂರು ಶತಮಾನಗಳೇ ಆಗಿವೆ. ಈ ಸುದೀರ್ಘ ಅವಧಿಯಲ್ಲಿ ಚಲನಚಿತ್ರದ ಭಾಷೆಯು ತಂತ್ರಜ್ಞಾನದ ಹೊಸಹೊಸ ಆವಿಷ್ಕಾರಗಳೂ ಸೇರಿದಂತೆ ಹತ್ತುಹನ್ನೊಂದು ಬಾಬುಗಳನ್ನು ತನ್ನೊಳಗೆ ಸೇರಿಸಿಕೊಂಡು ಮನರಂಜನೆಯ ಒಂದು ಅದ್ಧುತ ಉದ್ಯಮವಾಗಿ ಬೆಳೆದಿರುವುದು ಈಗ ಇತಿಹಾಸ. ವಾಸ್ತವತೆಯ ತದ್ರೂಪ ಎನ್ನುವ ಕಟ್ಟುನಿಟ್ಟಿನ ಅರ್ಥವನ್ನು ಕಳೆದುಕೊಂಡು ಬರಬರುತ್ತ ತಾಂತ್ರಿಕ ಇಂದ್ರಜಾಲವಾಗಿರುವ ಸಿನೆಮಾದಲ್ಲಿ ಇಂದು ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತೆ ತಾಂತ್ರಿಕ ಡೌಲು, ಎಲ್ಲ ವಯೋಮಾನದವರ ಲಿಬಿಡೋಗಳನ್ನು ತಣಿಸುವ ಹಾಡುಕುಣಿತಗಳು ಮತ್ತು ಅಶ್ಲೀಲ ಘಾಟಿನ ದ್ವಂದ್ವಾರ್ಥದ ಸಂಭಾಷಣೆಗಳದೇ ದರ್ಬಾರು ನಡೆದಿದ್ದು ಇಂಥ ಚಿತ್ರಗಳಿಗೆ ಪಲಾಯನವಾದಿ ಸಿನೆಮಾ ಎಂಬ ಅಭಿದಾನವೂ ಬಂದು ಎಷ್ಟೋ ವರ್ಷಗಳಾಗಿವೆ.
ಪಲಾಯನವಾದಿ ಚಿತ್ರಗಳ ಪರಿಷೆಯ ಮಧ್ಯೆ ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಕಟುವಾಸ್ತವಗಳನ್ನು ಬಿಂಬಿಸುವ ತಾಜಾ ವಾಸ್ತವ ಶೈಲಿಯ ಚಿತ್ರಗಳೂ ಬರುತ್ತಿವೆ ಎನ್ನುವುದು ಸಿನೆಮಾವನ್ನು ಒಂದು ಶಿಕ್ಷಣವಾಗಿ ನೋಡಬಯಸುವವರಿಗೆ ಸಂತೋಷದಾಯಕ ಸಂಗತಿ. ಗಿರೀಶ್ ಕಾಸರವಳ್ಳಿಯವರ ‘ಘಟಶ್ರಾದ್ಧ’ ಚಿತ್ರದಿಂದ ಕನ್ನಡದಲ್ಲಿ ಪ್ರಾರಂಭವಾದ ಹೊಸ ಅಲೆ ಸ್ವಲ್ಪಕಾಲ ಸ್ಥಗಿತಗೊಂಡಿದ್ದರೂ ಈಚೀಚೆಗೆ ಇಂಥ ವಾಸ್ತವ ಶೈಲಿಯ ಸಾಚಾ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹವಾದುದು. ಇತ್ತೀಚೆಗೆ ಬೆಂಗಳೂರು ಮಹಾನಗರದಲ್ಲಿ ಸೀಮಿತವಾಗಿ ಪ್ರದರ್ಶನಗೊಂಡ ‘ಹಸಿರು ರಿಬ್ಬನ್’ ಇಂತಹ ಒಂದು ಸಾಚಾ ಚಿತ್ರ ಎಂದು ಹೇಳಲು ಸಂತೋಷವಾಗುತ್ತದೆ.
‘ಹಸಿರು ರಿಬ್ಬನ್’ ಮಾಮೂಲಿ ವ್ಯಾಪಾರಿ ಜಾಡಿನ ಚಿತ್ರಗಳಿಗಿಂತ ಭಿನ್ನವಾದ ವಿಶಿಷ್ಟ ಬಗೆಯ ತಾಜಾ ವಾಸ್ತವ ಚಿತ್ರ. ಇದರ ಹಲವಾರು ವೈಶಿಷ್ಯಗಳಲ್ಲಿ ಮುಖ್ಯವಾದದ್ದು ನಿರ್ದೇಶಕರು ತಂತ್ರಜ್ಞರಿಂದ ಹಿಡಿದು ತಾರಾಗಣದವರೆಗೆ ಎಲ್ಲರೂ ಹೊಸಬರು ಎಂಬುದು.ಗಿರಿಜಾ ಲೋಕೇಶ್ ಮತ್ತು ಜಯಶ್ರೀ ಇಬ್ಬರೇ ಅಪವಾದ. ಈ ಪರಿ ತಾಜಾತನ ಸೂಸುವ ‘ಹಸಿರು ರಿಬ್ಬನ್’ನ ಇನ್ನೊಂದು ವೈಶಿಷ್ಟವೆಂದರೆ ಅದರ ಕಥಾ ಲೇಖಕರು ಮತ್ತು ನಿರ್ದೇಶಕರು. ಇವತ್ತಿನ ಕನ್ನಡ ಕಾವ್ಯದ ಮಹತ್ವದ ಕವಿ ಡಾ. ಎಚ್. ಎಸ್.ವೆಂಕಟೇಶ ಮೂರ್ತಿಯವರು ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರ ಕಥೆ, ಸಂಭಾಷಣೆ, ಗೀತೆಗಳು ಎಲ್ಲವೂ ಎಪ್ಪತ್ತು ಪ್ಲಸ್‌ನ ‘ಯುವ’ ನಿರ್ದೇಶಕ ಎಚ್ಚೆಸ್ವಿಯವರದೆ. ಎಚ್ಚೆಸ್ವಿಯವರ ‘ಅನಾತ್ಮ ಕಥನ’ದ ಒಂದು ಪ್ರಸಂಗ ‘ಹಸಿರು ರಿಬ್ಬನ್’ ಕಥಾವಸ್ತು. ಮಲೆನಾಡಿನ ಒಂದು ಪುಟ್ಟ ಊರು. ಅಲ್ಲಿ ತಾಯಿ-ಮಗಳು-ಮೊಮ್ಮಗಳ ಒಂದು ಪುಟ್ಟ ಸಂಸಾರ. ಯಜಮಾನನಿಲ್ಲದ ಮನೆ. ಗಂಡನಿಂದ ದೂರವಾಗಿ ಮನೆ ತಪ್ಪಿದ ಮಗಳು ತೌರುಮನೆಯಲ್ಲೇ ತನ್ನ ಪುಟ್ಟ ಮಗಳೊಂದಿಗೆ ಆಶ್ರಯ ಪಡೆದಿದ್ದಾಳೆ. ಜೀವನೋಪಾಯಕ್ಕೆ ಮನೆಯಲ್ಲೇ ಮಕ್ಕಳಿಗೆ ನೃತ್ಯಕಲಿಸುವ ಶಾಲೆ ನಡೆಸುತ್ತಿರುವ ಮಗಳು.ತಾಯಿ+ಮಗಳು+ಮೊಮ್ಮಗಳು ಈ ಮೂವರೂ ಪರಸ್ಪರ ಒಲವಿನಿಂದ ಆಶ್ರಿತರು. ಈ ಪುಟ್ಟ ಕುಟುಂಬಕ್ಕೆ ಒಂದು ದಿನ ಬಾದರಾಯಣ ಸಂಬಂಧ ಹೇಳಿಕೊಂಡು ಪುರುಷನೊಬ್ಬ ಆಗಮಿಸುತ್ತಾನೆ. ಮಾತಿನಲ್ಲಿ ಪ್ರೀತಿವಾತ್ಸಲ್ಯಗಳ ಹೊಳೆ ಹರಿಸುತ್ತಾನೆ. ಸ್ವಂತ ಒಂದು ತುಂಡು ಗದ್ದೆ ಮಾಡಿಕೊಳ್ಳುವ ಕನಸನ್ನು ತಾಯಿಮಗಳಲ್ಲಿ ಬಿತ್ತುತ್ತಾನೆ.
ರೇಷನ್ ಅಕ್ಕಿಗಿಂತ ಸ್ವಂತ ಗದ್ದೆಯಲ್ಲಿ ಬೆಳೆದ ಅಕ್ಕಿಯ ಅನ್ನದ ಸವಿ-ಪೌಷ್ಟಿಕತೆಗಳ ಕನಸಿನಲ್ಲಿ ತಾಯಿಮಗಳು ಜೀವಮಾನದ ಉಳಿತಾಯವಾದ ಲಕ್ಷ ರೂ. ಕೊಟ್ಟು ಪಕ್ಕದೂರಿನ ಜಮೀನ್ದಾರನಿಂದ ತುಂಡು ಗದ್ದೆಯ ಕರಾರುಪತ್ರ ಮಾಡಿಕೊಳ್ಳುತ್ತಾರೆ. ಮೊದಲ ವರ್ಷ ಭತ್ತದ ಫಸಲುಬಂದು ತಾಯಿಮಗಳ ನಾವೆ ನೆಮ್ಮದಿಯ ದಡಮುಟ್ಟಿತು ಎಂಬ ಭಾವನೆಯೂ ಮೂಡುತ್ತದೆ. ಆದರೆ ಮುಂದಿನ ವವರ್ಷಗಳಲ್ಲಿ ಮಳೆಯಿಲ್ಲ ಇತ್ಯಾದಿ ಕಾರಣಗಳಿಂದ ಫಸಲು ಬರುವುದಿಲ್ಲ. ಬದಲು ತುಂಡು ಗದ್ದೆಗೆ ಗೊಬ್ಬರಕ್ಕೆಂದು ಇವರಿಂದಲೇ ಬಾದರಾಯಣ ಬಂಧು ಹಣ ಕೀಳುತ್ತಾನೆ. ಕೊನೆಗೆ ಗದ್ದೆಯೂ ಇಲ್ಲ, ಮಾರಿದ ಜಮೀನ್ದಾರನೂ ಇಲ್ಲ, ಕರಾರು ಪತ್ರ ಎಲ್ಲವೂ ಖೊಟ್ಟಿ/ಮೋಸ ಎಂದು ತಾವು ನಯವಂಚನೆಗೆ ಗುರಿಯಾದದ್ದು ಗೊತ್ತಾಗುತ್ತದೆ. ಇದು ಕಥೆಯ ಹಂದರ. ನಯವಂಚನಾ ಪ್ರವೃತ್ತಿ ಮತ್ತು ಮಾನವ ಸಂಬಂಧಗಳು ವಸ್ತು. ಭ್ರಷ್ಟಾಚಾರ, ಮೋಸ-ದಗಾಕೋರತನಗಳಿಂದ ತುಂಬಿರುವ ಇದು ಇಂದಿಗೂ ಪ್ರಸ್ತುತ ಎಂದು ಅಲಾಯಿದ ಹೇಳಬೇಕಾಗಿಲ್ಲ. ಆದರೆ ಇದು ಹೆಚ್ಚು ಪ್ರಸ್ತುತವಾಗುವುದು ಎಚ್ಚೆಸ್ವಿಯವರು ವಂಚನೆ ಎಂಬ ದುಷ್ಟತನವನ್ನು ಹಾಗೂ ಮನುಷ್ಯ ಸಂಬಂಧಗಳನ್ನು ಪರಿಭಾವಿಸಿರುವ ರೀತಿಯಿಂದ. ವಸ್ತುವಿನ ಪರಿಗ್ರಾಹ್ಯತೆಯಂತೆಯೇ ಒಂದು ದೃಶ್ಯರೂಪಕವಾಗಿ ಚಿತ್ರ ನಮಗೆ ಆಪ್ತವಾಗುವುದು ಎಚ್ಚೆಸ್ವಿಯವರ ಬಿಗಿಯಾದ ಚಿತ್ರಕಥೆಯಿಂದಾಗಿ. ‘ಹಸಿರು ರಿಬ್ಬನ್’ಗೆ ಥೀಮ್ ಸಾಂಗ್ ಎನ್ನಬಹುದಾದ ಒಂದು ಗೀತೆ ಇದೆ-
‘‘ಬೆನ್ನ ಹಿಂದೇನೆ ನಾ ಬಂದೇನೆ
ಎಲ್ಲುಂಟು ನನ್ನ ನಂದನ’’
ತಾಯಿಮಗಳು ಹುಡುಕುವ ಈ ನಂದನ ಎಲ್ಲರ ಕನಸೂ ಆಗಿರುವ ನಂದನ, ಎಲ್ಲರ ಕನಸುಗಳ ರೂಪಕ. ನಂದನದ ಕನಸುಗಳ ಕಾಣುವವರೂ ಅದನ್ನು ಭಗ್ನಗೊಳಿಸುವ ವಂಚಕರೂ ಇರುವ ಪ್ರಪಂಚದ ಕನಸಿನ ನಂದನದ ರೂಪಕವಾಗಿ ನಮ್ಮ ಮನಸ್ಸುಗಳನ್ನು ಮುಟ್ಟುವ ‘ಹಸಿರು ರಿಬ್ಬನ್’ ನಮಗೆ ಹೃದಯಂಗಮವಾಗುವುದು ಎಚ್ಚೆಸ್ವಿಯವರು ನಯವಂಚಕತನವನ್ನು ಗೆಲ್ಲುವ ಪರಿಯಲ್ಲಿ. ಮೋಸವಾಯಿತೆಂದು ತಿಳಿದ ತಾಯಿ, ಕೋಪದ ಭರದಲ್ಲಿ ಕರಾರು ಪತ್ರವನ್ನು ಹರಿದು ಹಾಕಿದ ಅಸಹಾಯಕತೆಯ ಹಂತದಲ್ಲಿ, ಅನಿರೀಕ್ಷಿತ ತಿರುವಿನಂತೆ ಬರುವ ಪರಿಹಾರದಲ್ಲಿ....
ಯಾರು ಹೇಳಿದರು ಗಾಂಧಿ ಇಂದಿಗೆ ಪ್ರಸ್ತುತವಲ್ಲ ಎಂದು? ಅವರು ಹಾಕಿಕೊಟ್ಟ ಉಪವಾಸ ಸತ್ಯಾಗ್ರಹದ ಒಂದು ಆದರ್ಶ ನಮ್ಮ ಮುಂದೆ ಇದೆಯಲ್ಲ. ತಾಯಿಮಗಳಿಗೆ ಗಂಡನಿಂದ ಆದ ಅನ್ಯಾಯವನ್ನು ಸರಿಪಡಿಸಲು ನಯವಂಚಕನ ಹೆಂಡತಿ ಉಪವಾಸ ಸತ್ಯಾಗ್ರಹ ಹೂಡುತ್ತಾಳೆ. ಅವಳ ಸತ್ಯಾಗ್ರಹ ಬಲದ ಮುಂದೆ ಗಂಡನ ಉಪಾಯಗಳು ಫಲಿಸುವುದಿಲ್ಲ.
‘‘ಹಣ ಸಣ್ಣದು, ಮನುಷ್ಯ ಸಹ ಸಣ್ಣದಾಗಬೇಕೇ? ಅನ್ಯಾಯದ ಅನ್ನ ನನ್ನ ಗಂಟಲಲ್ಲಿ ಇಳಿಯಲ್ಲ.’’
ಹೆಂಡತಿಯ ಈ ದೃಢ ನೀತಿನಿಲುವು ಗಂಡನಲ್ಲಿ ಮನಃಪರಿವರ್ತನೆ ಉಂಟುಮಾಡುತ್ತದೆ. ಉಪವಾಸ ಸತ್ಯಾಗ್ರಹದೆದುರು ಗಂಡ ಸೋಲುತ್ತಾನೆ. (ಹೆಂಡತಿ ಸಂತತಿ ಸಾವಿರವಾಗಲಿ!) ತಾಯಿಮಗಳಿಗೆ ಕ್ಷಮಾಪಣೆಯೊಂದಿಗೆ ಹಣ ಹಿಂದಿರುಗಿಸುತ್ತಾನೆ. ಬಾದರಾಯಣ ಸಂಬಂಧ ಈಗ ಆಪ್ತವೂ ಅರ್ಥಪೂರ್ಣವೂ ಆದ ಸಂಬಂಧವಾಗುತ್ತದೆ.ಎರಡು ಕುಟುಂಬಗಳನ್ನು ಹತ್ತಿರ ತರುವುದರಲ್ಲಿ ಮಕ್ಕಳ ಪಾತ್ರಗಳನ್ನು (ಮೊಮ್ಮಗಳು ಮತ್ತು ವಂಚಕನ ಮಗ) ಮಾನವ ಸಂಬಂಧಗಳ ಸರಪಳಿಯಾಗಿ ಬೆಳೆಸಿರುವ ರೀತಿ ಮನಸೆಳೆಯುವಂತಿದೆಯಾದರೂ ಕೊನೆಯಲ್ಲಿ ಅದು ಪಡೆದುಕೊಳ್ಳುವ ವ್ಯಂಗ್ಯದ ತಿರುವು ನಮ್ಮನ್ನು ಬೆಚ್ಚಿಬೀಳಿಸುತ್ತದೆ..
ಈ ವಾಚ್ಯವನ್ನು ಮೀರಿ ವಸ್ತು ಪಡೆಯುವ ಧ್ವನಿಯಲ್ಲಿ ‘ಹಸಿರು ರಿಬ್ಬನ್’ ಹೆಚ್ಚು ಪರಿಣಾಮಕಾರಿ. ಹಾಗೆ ನೋಡಿದರೆ ಬಾದರಾಯಣ ಸಂಬಂಧ ಹೇಳಿಕೊಂಡು ಬರುವ ವ್ಯಕ್ತಿ ರೂಢಿ ವಂಚಕನೇನಲ್ಲ. ಜೀವನ ಪಯಣದಲ್ಲಿ ಒಮ್ಮಿಮ್ಮೆ ಕಣ್ಣ ಮುಂದಿನ ದಾರಿ ಅಚಾನಕವಾಗಿ ಮನುಷ್ಯನನ್ನು ಎಲ್ಲೆಲ್ಲಿಗೊ ಕರೆದೊಯ್ಯಬಹುದು. ದಾರಿ ‘ದಾರಿ’ ತಪ್ಪಿಸಬಹುದು. ‘ಹಸಿರು ರಿಬ್ಬನ್’ ಬಂಧುವೂ ಎಲ್ಲಿಗೋ ಹೊರಟು ಮತ್ತೆಲ್ಲೋ ತಲುಪಿ ದುರ್ಬಲ ಮನಸ್ಸಿನ ಹುನ್ನಾರಕ್ಕೆ ಬಲಿಯಾಗಿ ಗುಡ್ಡ ಮೈಮೇಲೆ ಎಳೆದು ಕೊಂಡವನು. ಮೂಲತಃ ಸಾತ್ವಿಕ ಗುಣದವನೇ. ಆದ್ದರಿಂದ ಹೆಂಡತಿಯ ಸತ್ಯಾಗ್ರಹಕ್ಕೆ ಮಣಿಯುವುದು ಸಹಜವೇ ಆಗಿದೆ. ಹಾಗೆಯೇ ಅವನ ಕ್ಷಮಾಪಣೆಯೂ. ರಾಜಿಯೂ ಸುಲಭವಾಗುತ್ತದೆ-ಹಿರಿಯರಿಗೆ. ಆದರೆ ಮುಗ್ಧರಾದ ಸಣ್ಣ ಮಕ್ಕಳಿಗೆ? ಹಿರಿಯರು ಒಂದು ಸ್ನಾನ ಮಾಡಿ ಸೂತಕ ಕಳೆಯಿತೆಂಬಂತೆ ಕಹಿಯನ್ನು ಮರೆತು ಬಿಡುತ್ತಾರೆ. ಮಕ್ಕಳ ಮುಗ್ಧ ಮನಸ್ಸಿನಿಂದ ಕೆಟ್ಟದ್ದು ಅಷ್ಟು ಸುಲಭವಾಗಿ ಅಳಿಸಿಹೋಗುವುದಿಲ್ಲ. ಎಂದೇ ಮೊಮ್ಮಗಳಿಗೆ ಮಾವ ಕೆಟ್ಟವನಾಗೇ ಉಳಿಯುತ್ತಾನೆ. ಸಂಬಂಧ ಹೇಳಿಕೊಂಡು ಬಂದ ಶುರುವಿನಲ್ಲಿ ಅವನು ತಂದುಕೊಟ್ಟ ಉದ್ದನೆಯ ಹಸಿರು ರಿಬ್ಬನನ್ನು ಹಿಂದಿರಿಗಿಸುವ ಮೂಲಕ ದೊಡ್ಡವರೂ ಬೆಚ್ಚಿಬೀಳುವ ರೀತಿ ಮಾವನಿಗೆ ‘ಠೂ ಹೇಳುತ್ತಾಳೆ.
ಸಂಬಂಧ ಕಟ್ಟಿಕೊಳ್ಳುವ, ಬಿಚ್ಚಿಕೊಳ್ಳುವ ಹಾಗೂ ಈ ಎರಡು ತುದಿಗಳ ಮಧ್ಯದ ಯಥಾಸ್ಥಿತಿ -ಈ ಮೂರು ಹಂತಗಳಲ್ಲಿ ಎಚ್ಚೆಸ್ವಿಯವರ ಚಿತ್ರಕಥೆ ಈ ಧ್ವನಿಯನ್ನು ಪರಿಣಾಮಕಾರಿಯಾಗಿ ನಮಗೆ ತಲುಪಿಸುತ್ತದೆ. ಎಚ್ಚೆಸ್ವಿಯವರ ಕಥೆ, ಚಿತ್ರಕಥೆಯ ಸೊಗಸಿನಂತೆಯೇ ‘ಹಸಿರು ರಿಬ್ಬನ್’ ಯಶಸ್ಸಿಗೆ ಮುಖ್ಯ ಕೊಡುಗೆಯಾಗಿರುವುದು ಛಾಯಾಗ್ರಹಣ ಮತ್ತು ಸಂಕಲನ. ಕಥೆಗೆ ಅನ್ಯೋನ್ಯವಾದ ಮಲೆನಾಡಿನ ನಿಸರ್ಗ ರಮಣೀಯ ಪರಿಸರವನ್ನು (ತಲೆದೂಗಿ ಕಣ್ತುಂಬಿಸಿಕೊಳ್ಳಬಹುದಾದ ಹೊರಾಂಗಣದ ಆಯ್ಕೆ ಮೆಚ್ಚುವಂಥಾದ್ದು), ಹಸಿರುಮಯವಾದ ಆ ಸುಂದರ ಪರಿಸರವನ್ನು ಛಾಯಾಗ್ರಾಹಕ ಪಿ.ಆರ್.ಸ್ವಾಮಿಯವರ ಸೃಜನಶೀಲ ಪ್ರತಿಭೆ ನಯನಮನೋಹರವಾದ ದೃಶ್ಯಕಾವ್ಯವನ್ನಾಗಿಸಿದೆ. ಧಾನ್ಯಲಕ್ಷ್ಮಿಯ ಪೂಜೆ ಸನ್ನಿವೇಶದಲ್ಲಿ ಸಾದೃಶ್ಯವಾಗಿ ಬರುವ ಹಸಿರು ಸಿರಿಯ ಹೊಲಗದ್ದೆಗಳು, ಕಾನನದ ಪರಿಸರ, ನಿಸರ್ಗ ದೃಶ್ಯಗಳು, ಮನೆಯ ಪರಿಸರ, ಹಳೆಯಕಾಲದ ಮನೆಯ ಕಿಟಕಿ ಬಾಗಿಲುಗಳನ್ನು ಸಾಂಕೇತಿಕವಾಗಿ ಬಳಸಿಕೊಂಡಿರುವುದು ಅರ್ಥಪೂರ್ಣವಾಗಿದೆ. ಮನೆಯ ಕಿಟಕಿಯ ಸರಳುಗಳನ್ನು ಪಾತ್ರಗಳ ಮನಃಸ್ಥಿತಿಗೆ ಹೊಂದಿಕೆಯಾಗುವಂತೆ ಬಳಸಿಕೊಂಡಿರುವುದರಲ್ಲಿ, ನೆರಳುಬೆಳಕುಗಳ ಚಿತ್ರೀಕರಣದಲ್ಲಿ ಛಾಯಾಗ್ರಾಹಕರ ಸೃಜನಶೀಲ ಪತಿಭೆ ಎದ್ದು ಕಾಣುತ್ತದೆ. ಎಲ್.ನರಸಿಂಹ ಪ್ರಸಾದ್ ಅವರ ಸಂಕಲನದ ಲಯಗತಿಗಳು ಕಥೆಯ ಅರ್ಥಾನುಸಾರಿಯಾಗಿ ಯಶಸ್ವಿಯಾಗಿದೆ. ಬೇಬಿ ಋತ್ವಿ, ಗಿರಿಜಾ ಲೋಕೇಶ್, ಜಯಶ್ರೀ, ನಿಖಿಲ್ ಮಂಜು, ಚೈತ್ರಾ, ಸುಪ್ರಿಯಾ ರಾವ್ ಮೊದಲಾದವರು ತಾರಾಗಣದಲ್ಲಿರುವ ಈ ಚಿತ್ರದ ಸಂಗೀತ ನಿರ್ದೇಶಕರು ಉಪಾಸನಾ ಮೋಹನ್.ಅಭಿನಯದಲ್ಲಿ ಎಲ್ಲ ಕಲಾವಿದರೂ ‘ನಟಿಸದೆ’ ಸಹಜವಾಗಿ ನಮ್ಮ ಮನಸೆಳೆಯು ತ್ತಾರೆ. ಪುಟ್ಟ ಮುಗ್ಧಬಾಲೆಯಾಗಿ ಋತ್ವಿಕಳ ಅಭಿನಯ ಮನೋಜ್ಞ. ಮೋಹನ್ ಅವರ ರಾಗಸಂಯೋಜನೆಯಲ್ಲಿ ಎಲ್ಲುಂಟು ನಂದನ..., ಏರೀಮ್ಯಾಲೆ ಯನ್ಕೂಟ...’, ‘ಸಕ್ಕರೆಯ ಪಾಕದಲಿ...’ ಸ್ವಲ್ಪಕಾಲ ಮನಸ್ಸಿನಲ್ಲಿ ಗುನುಗುನಿಸುವಷ್ಟು ಪರಿಣಾಮಕಾರಿ. ಹಿನ್ನೆಲೆ ಸಂಗೀತವೂ ಸಂದರ್ಭಸನ್ನಿವೇಶಗಳಿಗೆ ಪೂರಕವಾಗಿದೆ.
ಮಲೆನಾಡ ಸೆರಗಿನ ಹೊದಿಗೆರೆಯ ಎಚ್.ಎಸ್.ವೆಂಕಟೇಶ ಮೂರ್ತಿಯವರು ಕವಿಯಾಗಿ, ನಾಟಕಕಾರರಾಗಿ ಸುಪ್ರಸಿದ್ಧರು. ಸಿನೆಮಾ ಲೋಕಕ್ಕೆ ಅವರು ಅಷ್ಟೇನೂ ಅಪರಿಚಿತರಲ್ಲ. ಗೀತೆಗಳು, ಥೀಮ್ ಸಾಂಗ್, ಟೈಟಲ್ ಸಾಂಗ್‌ಗಳಿಂದ ಪರಿಚಿತರು. ಈಗ ನಿರ್ದೇಶಕರು. ಹೊದಿಗೆರೆಯಿಂದ ಕನ್ನಡ ಕಾವ್ಯ ಲೋಕಕ್ಕೆ ಅವರ ಯಾನ ಒಂದು ಮಹತ್ವಪೂರ್ಣ ಘಟ್ಟವಾದರೆ, ಈಗ ಕಾವ್ಯ ಲೋಕದಿಂದ ದೃಶ್ಯಕಾವ್ಯಕ್ಕೆ ಲಗ್ಗೆಯಿಟ್ಟಿರುವುದು ಒಂದು ಲಂಘನವೇ ಸರಿ. ಈ ಲಂಘನವೊಂದು ‘ಕವಿಸಮಯ’ದಿಂದ ಬಿಡುಗಡೆ ಪಡೆಯುವ ಆಕಸ್ಮಿಕವಿದ್ದೀತೆ ಎಂದನಿಸಿದರೆ, ಅಷ್ಟರಲ್ಲಿ, ಎಚ್ಚೆಸ್ವಿ ಸಿನೆಮಾ ದೃಶ್ಯಮಾಧ್ಯಮವನ್ನು ಗಂಭೀರವಾಗಿ ತೆಗೆದುಕೊಂಡು ಅದರಲ್ಲಿ ತೊಡಗಿಕೊಳ್ಳುತ್ತಿರುವುದು ನಮ್ಮ ಕಿವಿಗೆ ಬೀಳುತ್ತದೆ. ಅವರೀಗ ರಾಘವೇಂದ್ರ ಪಾಟೀಲರ ಕಥೆಯೊಂದನ್ನು ಆಧರಿಸಿದ, ‘ಪಲ್ಲಕ್ಕಿ’ ಖ್ಯಾತಿಯ ನರೇಂದ್ರ ಬಾಬು ಅವರ ನಿರ್ದೇಶನದ ‘ಅಮೃತ ವಾಹಿನಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.ದುಡ್ಡೇ ದೊಡ್ಡಪ್ಪಪರಿಕಲ್ಪನೆಯಲ್ಲೇ ಮುಳುಗಿರುವ ಕನ್ನಡ ಚಿತ್ರೋದ್ಯಮ ಎಚ್ಚೆಸ್ವಿಯವರನ್ನು ಎಂತು ಸ್ವಾಗತಿಸುವುದೋ ಕಾದು ನೋಡಬೇಕು
ಕನ್ನಡ ಚಿತ್ರೋದ್ಯಮದ ಸ್ಥಿತಿಗತಿಯನ್ನು ನೋಡಿದರೆ ನಿರಾಶೆಯೇ ಹೆಚ್ಚು. ಅಂದೂ ಇಂದೂ ಕನ್ನಡ ಚಿತ್ರೋದ್ಯಮ ಹೊಸಪ್ರತಿಭೆಯನ್ನು ಮಣೆಹಾಕಿ ತೋಳ್ತೆರೆದು ಸ್ವಾಗತಿಸಿದ್ದಿಲ್ಲ. ಇಂದಿಗೂ ಹೊಸ ನಿರ್ಮಾಪಕರು- ನಿರ್ದೇಶಕರ ಚಿತ್ರಗಳಿಗೆ ಚಿತ್ರಮಂದಿರ ದುರ್ಲಭವೇ. ವಾರಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆ ಕೊಡುವ ಸಾಮರ್ಥ್ಯವಿಲ್ಲದ ನಿರ್ಮಾಪಕರು ಈಗ ಮಾಲ್‌ಗಳನ್ನೇ ನೆಚ್ಚಿಕೊಳ್ಳ ಬೇಕಾಗಿದೆ. ‘ಹಸಿರು ರಿಬ್ಬನ್’ನಂಥ ಚಿತ್ರಗಳು ಮಾಲ್‌ಗಳ ಔದಾರ್ಯದಲ್ಲಿ ನಾಲ್ಕೈದು ದಿನಗಳ ಪ್ರದರ್ಶನ ಮತ್ತು ಸೀಮಿತ ಪ್ರೇಕ್ಷಕರಿಗೆ ತೃಪ್ತಿಪಟ್ಟುಕೊಂಡು ಸಹಾಯಧನ-ಪ್ರಶಸ್ತಿಗಳತ್ತ ಮುಖಮಾಡಿ ಕುಳಿತುಕೋಳ್ಳಬೇಕಾಗಿದೆ.