ದೇಸೀ ಭಾಷೆಗಳನ್ನು ಉಳಿಸಿಕೊಳ್ಳಲು ಅಗತ್ಯವಿರುವ 'ಆಧುನಿಕ ಭಾಷಾ ತಂತ್ರಜ್ಞಾನಗಳು'
ಡಿಜಿಟಲ್ ಕನ್ನಡ
ಮೌಸ್ ಅಥವಾ ಕೀಬೋರ್ಡ್ ಬಳಸಿ ಕಂಪ್ಯೂಟರ್‌ಗೆ ಆದೇಶಿಸುವುದು ಈಗ ಹಳತಾಗಿದೆ. ಮಾತಿನ ಮೂಲಕ ವಿದ್ಯುನ್ಮಾನ ಉಪಕರಣಗಳಿಗೆ ಆದೇಶಗಳನ್ನು ನೀಡಬಹುದು. ಕನ್ನಡ ಭಾಷಾ ತಂತ್ರಜ್ಞಾನಗಳನ್ನು ಸರಿಯಾಗಿ ದುಡಿಸಿಕೊಳ್ಳದಿದ್ದರೆ, ದಿನನಿತ್ಯದ ಬಳಕೆಯ ಯಂತ್ರೋಪಕರಣಗಳನ್ನು ಇಂಗ್ಲಿಷ್‌ನಲ್ಲಿಯೇ ಮಾತನಾಡಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಭಾಷಾ ಅಭಿವೃದ್ಧಿಗಾಗಿ ತಂತ್ರಾಂಶಗಳನ್ನು ಉಪಯೋಗಿಸದಿದ್ದರೆ, ಭಾಷಾ ಬೆಳವಣಿಗೆಯೂ ಸಹ ಅಷ್ಟರಮಟ್ಟಿಗೆ ಕುಂಠಿತಗೊಳ್ಳಲಿದೆ. ದೇಸೀ ಭಾಷೆಗಳನ್ನು ಉಳಿಸಿಕೊಳ್ಳಲು ಆಧುನಿಕ ಭಾಷಾ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯ.
ಸಿದ್ಧ-ಉಡುಪುಗಳ ‘ಮಾಲ್’ನಲ್ಲಿ ಹಾಕಲಾಗಿರುವ ಕನ್ನಡದ ಹಾಸ್ಯಾಸ್ಪದ ಭಾಷಾಂತರವಿರುವ ಫಲಕಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿದವು. ಇಲ್ಲಿ ‘ಗೂಗಲ್ ಟ್ರಾನ್ಸ್‌ಲೇಷನ್’ ತಂತ್ರಾಂಶದ ಕನ್ನಡಾನುವಾದವನ್ನು ಯಥಾವತ್ತು ಬಳಸಿರುವ ಸಾಧ್ಯತೆಯಿದೆ. ಅನುವಾದಕರು ಸ್ವಲ್ಪ ಬುದ್ಧಿ ಉಪಯೋಗಿಸಿ ಹಾಸ್ಯಾಸ್ಪದ ಅನುವಾದವನ್ನು ತಪ್ಪಿಸಬಹುದಿತ್ತು. ಯಾವುದೇ ಯಂತ್ರಾಧಾರಿತ ಭಾಷಾಂತರವು ಮಾನವನ ಅಂತಿಮ ಹಸ್ತಕ್ಷೇಪವಿಲ್ಲದೆ ಕರಾರುವಾಕ್ಕಾಗಿರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಗೂಗಲ್ ಭಾಷಾಂತರವು ಹಲವು ಸಂದರ್ಭಗಳಲ್ಲಿ ಟೀಕೆಗೆ ಒಳಗಾಗಿದೆ. ‘ಗೂಗಲ್ ಟ್ರಾನ್ಸ್‌ಲೇಷನ್’ ಎಂಬುದು ಅಂತರ್ಜಾಲ ಆಧಾರಿತ ತಂತ್ರಾಂಶವಾಗಿದ್ದು, ಬಳಕೆದಾರ ಸಮುದಾಯದ ಸಹಯೋಗದೊಂದಿಗೆ ಅದು ಭಾಷಾಂತರವನ್ನು ನಿರಂತರವಾಗಿ ಕಲಿಯುತ್ತಲೇ ಇದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಭಾಷಾಂತರವನ್ನು ಸುಧಾರಿಸುವಲ್ಲಿ ಬಳಕೆದಾರರ ಭಾಗೀದಾರಿಕೆಯನ್ನು ಅದು ನಿರೀಕ್ಷಿಸುತ್ತಿದೆ. ಉತ್ತಮ ಅನುವಾದ ಬೇಕಿದ್ದರೆ, ಅದನ್ನು ಬಳಕೆದಾರರೇ ಕಾಲಕ್ರಮೇಣ ಸುಧಾರಿಸಿಕೊಳ್ಳಬೇಕು. ಸಾವಿರಾರು ಬಳಕೆದಾರರು ಸಾಂದರ್ಭಿಕವಾಗಿ ಗೂಗಲ್ ಭಾಷಾಂತರವನ್ನು ಬಳಸುತ್ತಾ, ಸರಿಯಿಲ್ಲದ ಭಾಷಾಂತರವನ್ನು ಸರಿಪಡಿಸುತ್ತಾ ಸಾಗಿದಾಗ ಗೂಗಲ್ ಮುಂದಿನ ಬಾರಿ ಸರಿಯಾದ ಭಾಷಾಂತರವನ್ನು ನೀಡುವ ಪ್ರಯತ್ನವನ್ನು ಮಾಡುತ್ತದೆ. ಕನ್ನಡದ ಅರ್ಥಕೋಶಗಳ (ಡಿಕ್ಷನರಿ) ರೂಪಿಸಿ ನೀಡಿದ ತಂತ್ರಾಂಶ ತಯಾರಕರು ಆ ಅರ್ಥಕೋಶಗಳಿಗೆ ಹೊಸ ಹೊಸ ಪದಗಳನ್ನು ಸೇರಿಸಿ ಬಳಸುವ ಸೌಲಭ್ಯವನ್ನು ನೀಡಿರುತ್ತಾರೆ. ಬಳಕೆದಾರರು ಹೊಸ ಹೊಸ ಪದಗಳನ್ನು ಅದರಲ್ಲಿ ಸೇರಿಸುತ್ತಾ ಹೋದಂತೆಲ್ಲಾ ಕಾಲಕ್ರಮೇಣ ಒಂದು ಶ್ರೀಮಂತ ಡಿಜಿಟಲ್ ಅರ್ಥಕೋಶವು ಸಿದ್ಧಗೊಳ್ಳುತ್ತಾ ಹೋಗುತ್ತದೆ. ಯಾವುದೇ ತಂತ್ರಾಂಶ ಸಲಕರಣೆಗಳು ಶೇಕಡಾ ನೂರಕ್ಕೆ ನೂರು ಕರಾರುವಾಕ್ಕಾಗಿರುವ ಸಂದರ್ಭಗಳು ಅತಿವಿರಳ. ಅವುಗಳನ್ನು ಅತ್ಯಂತ ಜಾಣ್ಮೆಯಿಂದ ಬಳಸಿಕೊಳ್ಳಬೇಕಾಗುತ್ತದೆ. ಕನ್ನಡ ಭಾಷೆಗಾಗಿ ಲಭ್ಯವಿರುವ ಸೌಲಭ್ಯಗಳನ್ನು ಬಳಸುವುದು ಹೇಗೆ ಎಂದು ಅನೇಕರಿಗೆ ತಿಳಿದಿರುವುದಿಲ್ಲ. ಅಂತಹ ಸಲಕರಣೆಗಳು ಎಲ್ಲಿ ಲಭ್ಯವಿವೆ. ಅವುಗಳನ್ನು ಯಾವಯಾವ ಉದ್ದೇಶಗಳಿಗೆ ಹೇಗೆಲ್ಲಾ ಬಳಸಬಹುದು ಎಂಬ ಮಾಹಿತಿಯ ಕೊರತೆ ಸರ್ವೇಸಾಮಾನ್ಯ. ಒಂದು ಉದಾಹರಣೆಯನ್ನು ಗಮನಿಸೋಣ. ‘ಪದ’ ಹೆಸರಿನ ತಂತ್ರಾಂಶವು ಆಧುನಿಕ ಯೂನಿಕೋಡ್ ಬೆಂಬಲಿತ ಉಚಿತ ತಂತ್ರಾಂಶವಾಗಿದ್ದು, ಅದರಲ್ಲಿ ಅಳವಡಿಸಿರುವ ‘ನುಡಿ ಕೀಬೋರ್ಡ್ ಲೇಔಟ್ ಬಳಸಿ ಭಾರತೀಯ ಭಾಷೆಗಳಲ್ಲಿ ಟೈಪಿಂಗ್ ಮಾಡಬಹುದು. ಬಳಕೆದಾರನು ಕಲಿತದ್ದು ಒಂದೇ ಕೀಲಿಮಣೆ ವಿನ್ಯಾಸವಾಗಿದ್ದರೂ. ಧ್ವನಿಯಾಧಾರಿತವಾಗಿ ಬೇರೆ ಬೇರೆ ಭಾಷೆಗಳನ್ನು ಕನ್ನಡದಲ್ಲಿಯೇ ಟೈಪ್ ಮಾಡುತ್ತಿದ್ದೇನೆಂದು ಭಾವಿಸಿ ಟೈಪ್‌ಮಾಡಿದರೆ, ಅದು ಆಯ್ಕೆಮಾಡಿಕೊಂಡ ಭಾಷೆಯ ಲಿಪಿಯಲ್ಲಿ ಪಠ್ಯವು ಮೂಡುತ್ತಾ ಸಾಗುತ್ತದೆ. ಅಂದರೆ, ಬೇರೆ ಬೇರೆ ಭಾರತೀಯ ಭಾಷೆಗಳನ್ನು ಟೈಪ್‌ಮಾಡಲು ಬೇರೆ ಬೇರೆ ಕೀಬೋರ್ಡ್‌ಗಳ ಬಳಕೆಯನ್ನು ಕಲಿಯುವ ಅಗತ್ಯವಿಲ್ಲ. ‘ನುಡಿ’ ಲೇಔಟ್ ಸೇರಿದಂತೆ ‘ಪದ’ ತಂತ್ರಾಂಶದಲ್ಲಿ ನೀಡಿರುವ ಮೂರು ಕೀಬೋರ್ಡ್ ಲೇಔಟ್‌ನ ಪೈಕಿ ನೀವು ಕಲಿತಿರುವ ಯಾವುದಾದರೊಂದು ಲೇಔಟ್ ಬಳಸಿ ಯಾವುದೇ ಭಾರತೀಯ ಭಾಷೆಯಲ್ಲಿ ಟೈಪಿಂಗ್ ಮಾಡಬಹುದು ಎಂಬುದು ನಿಜಕ್ಕೂ ಕುತೂಹಲಕಾರಿ ಮತ್ತು ಅತ್ಯಂತ ಉಪಯುಕ್ತ ಮಾಹಿತಿಯಾಗಿದೆ. ಈ ತಂತ್ರಾಂಶ ಸಿದ್ಧಪಡಿಸಿರುವವರ ಕೌಶಲ್ಯವು ಇದರಲ್ಲಿ ಅಡಗಿದೆ ಮತ್ತು ಯೂನಿಕೋಡ್ ಎಂಬ ಆಧುನಿಕ ಎನ್‌ಕೋಡಿಂಗ್ ವ್ಯವಸ್ಥೆ ಇದಕ್ಕೆ ಅನುವು ಮಾಡಿಕೊಟ್ಟಿದೆ.
ಡಿಜಿಟಲ್ ಕನ್ನಡ ಬಳಕೆ ಎಂದರೆ ವಿದ್ಯುನ್ಮಾನ ಉಪಕರಣಗಳಲ್ಲಿ ಕೇವಲ ಲಿಪಿ ಅಥವಾ ಪಠ್ಯಗಳ ಬಳಕೆ ಮಾತ್ರವೇ ಅಲ್ಲ. ಡಿಜಿಟಲ್ ಡಿಕ್ಷನರಿ, ಭಾಷಾಂತರ ಸೌಲಭ್ಯ, ಧ್ವನಿಯಿಂದ ಪಠ್ಯಕ್ಕೆ ಮತ್ತು ಪಠ್ಯದಿಂದ ಧ್ವನಿಗೆ ಪರಿವರ್ತನೆಗಳನ್ನು ನೀಡುವ ತಂತ್ರಾಂಶಗಳು, ಅಂತರ್ಜಾಲದಲ್ಲಿ ಕನ್ನಡವನ್ನು ಹುಡುಕಾಡಿ ತೆಗೆಯಲು ಸುಲಭವಾಗುವಂತೆ ‘ಟ್ಯಾಗ್’ ಮಾಡಲಾದ ಪಠ್ಯವನ್ನು ಸಿದ್ಧಪಡಿಸಿ ಜಾಲತಾಣಗಳಲ್ಲಿ ಅಳವಡಿಸುವುದು ಇವೆಲ್ಲವೂ ಭಾಷಾ ತಂತ್ರಜ್ಞಾನಗಳ ಹಲವಾರು ಮುಖಗಳು. ಭಾಷಾ ಬಳಕೆಗಾಗಿ ಇರುವ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ನಾವು ಅಂತರ್‌ರಾಷ್ಟ್ರೀಯ ತಂತ್ರಾಂಶ ತಯಾರಕನ್ನು ಅವಲಂಬಿಸುವ ಅಗತ್ಯವಿಲ್ಲ. ತಂತ್ರಜ್ಞಾನದ ವೇದಿಕೆಯನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ. ಅಗತ್ಯವಿರುವ ಭಾಷಾ ಸೌಲಭ್ಯಗಳಿಗಾಗಿ ‘ತಂತ್ರಜ್ಞಾನ’ಗಳನ್ನು ಬಳಸಿ ‘ತಂತ್ರಾಂಶ’ ಸಲಕರಣೆಗಳನ್ನು ನಾವು ಸಿದ್ಧಪಡಿಕೊಳ್ಳಬೇಕು. ಭಾರತೀಯ ಭಾಷಾ ಬಳಕೆಗಾಗಿ ಇರುವ ಅಂತರ್‌ರಾಷ್ಟ್ರೀಯ ಶಿಷ್ಟತೆಗಳು ಜಾರಿಗೊಂಡಿರುವುದರಿಂದ ನಮ್ಮ ಭಾಷಾ ಬಳಕೆಗಾಗಿ ಅಗತ್ಯವಿರುವ ತಂತ್ರಾಂಶ ಉಪಕರಣಗಳಿಗಾಗಿ ಅಂತರ್‌ರಾಷ್ಟ್ರೀಯ ತಂತ್ರಾಂಶ ತಯಾರಕರನ್ನು ನಂಬಿ ಕೂರದೇ ನಾವೇ (ಸ್ಥಳೀಯ ತಂತ್ರಾಂಶ ತಯಾರಕರು) ಅವುಗಳನ್ನು ಅಭಿವೃದ್ಧಿಪಡಿಸಿಕೊಂಡು ಬಳಸುವ ಸುಸಂದರ್ಭ ಈಗ ಒದಗಿಬಂದಿದೆ. ಯೂನಿಕೋಡ್ ಎನ್‌ಕೋಡಿಂಗ್ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಜಾರಿಗೊಂಡ ನಂತರದಲ್ಲಿ ವಿದ್ಯುನ್ಮಾನ ಉಪಕರಣಗಳಾದ ಸ್ಮಾರ್ಟ್‌ಫೋನು ಮತ್ತು ಕಂಪ್ಯೂಟರ್‌ಗಳಲ್ಲಿ ಕನ್ನಡ ಲಿಪಿ ಅಳವಡಿಕೆಯು ಸುಗಮವಾಗಿ ಪೂರ್ಣಗೊಂಡಿದೆ. ಕಂಪ್ಯೂಟರ್‌ನಲ್ಲಿ ಕನ್ನಡವೂ ಸೇರಿದಂತೆ ವಿದ್ಯುನ್ಮಾನ ಕ್ಷೇತ್ರದಲ್ಲಿ ಭಾರತೀಯ ಭಾಷಾ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು ಆಧುನಿಕ ತಂತ್ರಾಂಶ ಸಲಕರಣೆಗಳು ಅಗತ್ಯವಾಗಿವೆ. ಇದಕ್ಕಾಗಿ ಹಲವು ಸಂಶೋಧನೆಗಳು ನಡೆದು ತಂತ್ರಜ್ಞಾನವು ಸಿದ್ಧವಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ತಂತ್ರಾಂಶ ಸಲಕರಣೆಗಳನ್ನು ವಾಣಿಜ್ಯಿಕ ಉತ್ಪನ್ನಗಳನ್ನಾಗಿ ತಯಾರಿಸುವ ಕೆಲಸ ಮಾತ್ರವೇ ಬಾಕಿ ಉಳಿದಿದೆ. ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (ಸಿ-ಡಾಕ್), ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್‌ನ ವಿದ್ಯುನ್ಮಾನ ವಿಭಾಗ ಇತ್ಯಾದಿ ಸಾಂಸ್ಥಿಕ ನೆಲೆಗಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವು ವಿದ್ಯುನ್ಮಾನ ಸಂಶೋಧನಾ ಸಂಸ್ಥೆಗಳು ಅನುದಾನ ಪಡೆದು ಭಾಷಾ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಕಾರ್ಯನಿರತವಾಗಿವೆ. ಸಂಶೋಧಿತ ತಂತ್ರಜ್ಞಾನವನ್ನು ಪರವಾನಿಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ದೇಸೀ ತಂತ್ರಾಂಶ ತಯಾರಕರಿಗೆ ವರ್ಗಾಯಿಸಿದರೆ ಮಾತ್ರವೇ ಅವರು ಅವುಗಳನ್ನು ತಂತ್ರಾಂಶ ಉತ್ಪನ್ನಗಳನ್ನಾಗಿ ಪರಿವರ್ತಿಸಿ ನೀಡಲು ಸಾಧ್ಯವಾಗುತ್ತದೆ. ಆಗಲೇ ಬಳಕೆದಾರರಿಗೆ ಉಪಯುಕ್ತವಾದ ಆಧುನಿಕ ಭಾಷಾ ತಂತ್ರಾಂಶಗಳು ಲಭ್ಯವಾಗುತ್ತವೆ. ಹೀಗೆ ಆಧುನಿಕ ಭಾಷಾ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ನಶಿಸಿಹೋಗುತ್ತಿರುವ ಭಾಷೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಕೈಬರಹ ಅಕ್ಷರಗಳನ್ನು ವಿದ್ಯುನ್ಮಾನ ಪಠ್ಯವನ್ನಾಗಿಸಲು ಗೂಗಲ್ ಹ್ಯಾಂಡ್ ರೈಟಿಂಗ್ ಇನ್‌ಪುಟ್ ಬಳಕೆಗೆ ಬಂದಿದೆ. ಇಂಗ್ಲಿಷ್‌ನ ಮುದ್ರಿತ ಪಠ್ಯವಿರುವ ಪುಟವನ್ನು ಸ್ಕಾನ್ ಮಾಡಿ ಅಡೋಬ್ ರೈಟರ್ ತಂತ್ರಾಂಶಕ್ಕೆ ನೀಡಿದರೆ ಪುಟದಲ್ಲಿರುವ ಅಕ್ಷರಗಳನ್ನು ಗುರುತಿಸಿ ಪಠ್ಯವನ್ನಾಗಿ ಪರಿವರ್ತಿಸಿ ನೀಡುತ್ತದೆ. ಅಂಥ ಆಪ್ಟಿಕಲ್ ಕ್ಯಾರೆಕ್ಟರ್ ರೆಕಾಗ್ನಿಷನ್ (ಒಸಿಆರ್) ತಂತ್ರಾಂಶವು ಕನ್ನಡಕ್ಕೂ ಅಗತ್ಯವಾಗಿದೆ. ಲಭ್ಯವಿರುವ ಕನ್‌ಸ್ಕಾನ್‌ನಂತಹ ಕೆಲವು ತಂತ್ರಾಂಶಗಳಿಗೆ ಬಳಕೆಯ ವಿಷಯದಲ್ಲಿ ಹಲವು ಮಿತಿಗಳಿವೆ. ಗೂಗಲ್ ಕಂಪೆನಿಯು ಜಾಗತಿಕ ಮಟ್ಟದಲ್ಲಿ ಎಲ್ಲ ಭಾಷೆಗಳ ಚಿತ್ರರೂಪೀ ಮುದ್ರಿತ ಪಠ್ಯವನ್ನು ಅಕ್ಷರಗಳನ್ನಾಗಿ ಪರಿವರ್ತಿಸುವ ತಂತ್ರಾಂಶವನ್ನು ರೂಪಿಸುತ್ತಿದೆ. ಇದರ ಪ್ರಯೋಗಾರ್ಥ ಬಳಕೆ ಅಂತರ್ಜಾಲತಾಣದಲ್ಲಿ ಲಭ್ಯ. ಇದು ಇನ್ನೂ ಸುಧಾರಣೆಗೊಳ್ಳುವ ಪ್ರಕ್ರಿಯೆಯಲ್ಲಿರುವ ಕಾರಣ ಕನ್ನಡ ಪಠ್ಯವು ಕೆಲವೊಮ್ಮೆ ತೆಲುಗು ಲಿಪಿಯಲ್ಲಿ ಮೂಡಿಬರುತ್ತದೆ. ಕಂಪ್ಯೂಟರ್ ಪಠ್ಯವನ್ನು ಧ್ವನಿಗೆ ಪರಿವರ್ತಿಸಿ ಓದಿ ಹೇಳುವ ತಂತ್ರಾಂಶಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಉತ್ತಮವಾಗಿರುವ ತಂತ್ರಾಂಶಗಳು ಸುಲಭವಾಗಿ ಕೈಗೆ ಸಿಗುತ್ತಿಲ್ಲ. ಉತ್ತಮ ತಂತ್ರಾಂಶಗಳನ್ನು ಸಿದ್ಧಪಡಿಸುವಲ್ಲಿ ಅನುಭವವಿರುವ ಸ್ಥಳೀಯ ತಂತ್ರಾಂಶ ತಯಾರಕರಿಗೆ ಸರಕಾರದ ಬೆಂಬಲ ದೊರೆಯುತ್ತಿಲ್ಲ. ಸರಕಾರಗಳಿಗೂ ಇಂತಹ ತಂತ್ರಾಂಶಗಳನ್ನು ಸಿದ್ಧಪಡಿಸುವಲ್ಲಿ ಅನುಭವದ ಕೊರತೆಯಿರುವುದು ಸಾಬೀತಾಗಿದೆ. ಕೇಂದ್ರ ಸರಕಾರದ ಅನುದಾನ ಪಡೆದು ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಗಳು ಕೇವಲ ಸಂಶೋಧನೆಗೆ ಮಾತ್ರವೇ ಸೀಮಿತವಾಗಿವೆ. ಸಂಶೋಧಿತ ತಂತ್ರಜ್ಞಾನಗಳು ತಂತ್ರಾಂಶಗಳಾಗಿ ಬಳಕೆದಾರರ ಕೈಗೆ ಸಿಗುತ್ತಿಲ್ಲ. ಕೈಗೆ ಸಿಗುತ್ತಿರುವ ತಂತ್ರಾಂಶಗಳೂ ಸ ಪರಿಪೂರ್ಣವಾಗಿ ಬಳಕೆಯೋಗ್ಯವಾಗಿಲ್ಲ.
ಮೌಸ್ ಅಥವಾ ಕೀಬೋರ್ಡ್ ಬಳಸಿ ಕಂಪ್ಯೂಟರ್‌ಗೆ ಆದೇಶಿಸುವುದು ಈಗ ಹಳತಾಗಿದೆ. ಮಾತಿನ ಮೂಲಕ ವಿದ್ಯುನ್ಮಾನ ಉಪಕರಣಗಳಿಗೆ ಆದೇಶಗಳನ್ನು ನೀಡಬಹುದು. ಕನ್ನಡ ಭಾಷಾ ತಂತ್ರಜ್ಞಾನಗಳನ್ನು ಸರಿಯಾಗಿ ದುಡಿಸಿಕೊಳ್ಳದಿದ್ದರೆ, ದಿನನಿತ್ಯದ ಬಳಕೆಯ ಯಂತ್ರೋಪಕರಣಗಳನ್ನು ಇಂಗ್ಲಿಷ್‌ನಲ್ಲಿಯೇ ಮಾತನಾಡಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಭಾಷಾ ಅಭಿವೃದ್ಧಿಗಾಗಿ ತಂತ್ರಾಂಶಗಳನ್ನು ಉಪಯೋಗಿಸದಿದ್ದರೆ, ಭಾಷಾ ಬೆಳವಣಿಗೆಯೂ ಸಹ ಅಷ್ಟರಮಟ್ಟಿಗೆ ಕುಂಠಿತಗೊಳ್ಳಲಿದೆ. ದೇಸೀ ಭಾಷೆಗಳನ್ನು ಉಳಿಸಿಕೊಳ್ಳಲು ಆಧುನಿಕ ಭಾಷಾ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯ. ಸ್ಮಾರ್ಟ್‌ಫೋನುಗಳು ಮತ್ತು ಕಂಪ್ಯೂಟರುಗಳಲ್ಲಿ ಕನ್ನಡ ಭಾಷಾ ಬಳಕೆಗಾಗಿ ಇನ್ನೂ ಫಾಂಟುಗಳು, ಕೀಬೋರ್ಡುಗಳು ಮತ್ತು ಲಿಪಿತಂತ್ರಾಂಶಗಳನ್ನು ಹುಡುಕಾಡುವುದರಲ್ಲಿಯೇ ಬಳಕೆದಾರರು ನಿರತರಾಗಿದ್ದಾರೆ. ಇವುಗಳ ಲಭ್ಯತೆ, ಬೆಳೆದುಬಂದ ದಾರಿ, ಬಳಸುವ ಕ್ರಮಗಳು, ಇವುಗಳನ್ನು ಸಿದ್ಧಪಡಿಸುವಲ್ಲಿ ತಂತ್ರಾಂಶ ತಯಾರಕರು ಎದುರಿಸಿದ ಸವಾಲುಗಳು, ಬಳಕೆಯಲ್ಲಿದ್ದ ಸಮಸ್ಯೆಗಳು ಮತ್ತು ಅವುಗಳಿಗೆ ಕಂಡುಕೊಂಡ ಪರಿಹಾರಗಳು, ಡಿಜಿಟಲ್ ಲೋಕದಲ್ಲಿ ಕನ್ನಡವು ನಡೆದು ಬಂದ ದಾರಿ - ಇವೆಲ್ಲವುಗಳ ಕುರಿತಾದ ಬರಹಗಳನ್ನು ‘ಡಿಜಿಟಲ್ ಕನ್ನಡ’ ಅಂಕಣವು ಕಳೆದ 60 ವಾರಗಳಿಂದ ನಿರಂತರವಾಗಿ ಕಟ್ಟಿಕೊಟ್ಟಿದೆ.