ಮಂಗಳೂರು: ಮಸಾಜ್ ಪಾರ್ಲರ್ ಗೆ ಪೊಲೀಸ್ ದಾಳಿ; ಮಹಿಳೆ ಸೆರೆ
ಮಂಗಳೂರು, ಜು. 30: ನಗರದ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯಿರುವ ಮಸಾಜ್ ಸೆಂಟರ್ ಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಕಾವೂರು ಪೊಲೀಸರು ದಾಳಿ ಮಾಡಿ, ಮಹಿಳೆಯೋರ್ವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕೊಟ್ಟಾರ ಚೌಕಿ ಬಳಿಯಿರುವ ಮಸಾಜ್ ಸೆಂಟರ್ ನಲ್ಲಿ ಯುವತಿಯರನ್ನು ಬಳಸಿಕೊಂಡು ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿರು ವುದಾಗಿ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಕಾವೂರು ಪೊಲೀಸರು ಮಸಾಜ್ ಪಾರ್ಲರ್ ಗೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದ ಓರ್ವ ಮಹಿಳೆ ಹಾಗು 14,700 ರೂ.,2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಸಾಜ್ ಸೆಂಟರ್ ನ್ನು ನಡೆಸುತ್ತಿದ್ದ ರಾಜೇಶ್, ಸತೀಶ್ ಮತ್ತು ಜಯರಾಜ್ ಎಂಬವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತರಾಮ, ಕಾವೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕೆ. ಆರ್ ನಾಯ್ಕ್ ಹಾಗೂ ಸಿಸಿಬಿ ಘಟಕದ ಪಿಎಸ್ಐ ಶ್ಯಾಮ್ ಸುಂದರ್, ಹೆಚ್.ಡಿ. ಕಬ್ಬಾಳ್ ರಾಜ್ ಹಾಗೂ ಸಿಸಿಬಿ ಘಟಕದ ಮತ್ತು ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.