ಹಜ್ ಯಾತ್ರಿಕರ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಸೌದಿ ಸ್ಕೌಟ್ಸ್ ಯುವಕರು !
ಸೌದಿ ಸ್ಕೌಟ್ಸ್ ಎಸೋಸಿಯೇಶನ್ ನ ಯುವಕರು ಸುಮಾರು 47 ವರ್ಷಗಳಿಂದ ತಮ್ಮನ್ನು ಹಜ್ ಯಾತ್ರಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1961 ರಿಂದಲೂ ಸೌದಿ ಸ್ಕೌಟ್ಸ್ ಯುವಕರು ಹಜ್ ಯಾತ್ರಿಕರ ಸೇವೆ ಮಾಡುತ್ತಿದ್ದರೂ, ಮೊದಲಿಗೆ ಇವರ ಸೇವೆಯು ಹಜ್ ಸಚಿವಾಯಲಕ್ಕೆ ಸಹಾಯ ಮಾಡುವು ದಕ್ಕೆ ಮೀಸಲಾಗಿತ್ತು. ಇದೀಗ ಈ ತಂಡವು ತನ್ನ ಸೇವೆಯನ್ನು ಹಜ್ ಕರ್ಮದ ಸ್ಥಳಗಳಾದ ಹರಮ್, ಸಫಾ ಮರ್ವಾ, ಮಿನಾ, ಅರಫಾ ಹಾಗೂ ಜಮ್ರತ್ ಗಳಿಗೂ ವಿಸ್ತರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಸೌದಿ ಅರೇಬಿಯಾದ ರಾಜಕುಮಾರರಾಗಿದ್ದ ದಿ. ಕಿಂಗ್ ಫೈಝಲ್ ಅವರ ಅನುಮತಿಯಂತೆ 1961ರಲ್ಲಿ ಮಕ್ಕಾ ಮೂಲದ 100 ಯುವಕರ ಸ್ಕೌಟ್ ತಂಡವು ಮೊದಲಿಗೆ ಈ ಸೇವೆಯನ್ನು ಪ್ರಾರಂಭಿಸಿದ್ದು, 1963ರಲ್ಲಿ ತಾಯಿಫ್ ಹಾಗೂ ಜಿದ್ದಾ ಮೂಲದ ಸೌದಿ ಯುವಕರೂ ಕೂಡ ಈ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಕೇವಲ ಹಜ್ ಯಾತ್ರಿಕರ ಸೇವೆ ಮಾಡುವುದಲ್ಲದೆ ಈ ಯುವಕರು, ರೋಗಗ್ರಸ್ತರಾದ ಹಜ್ ಯಾತ್ರಿಕರಿಗೆ ಔಷದೋಪಚಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಸೌದಿ ರೆಡ್ ಕ್ರೆಸೆಂಟ್ ಸಂಸ್ಥೆಯೊಂದಿಗೆ ಕೈಜೋಡಿಸಿದರು. ತರುವಾಯ ಇವರ ಈ ಸೇವೆಯು ಎಷ್ಟು ಜನಪ್ರಿಯತೆ ಪಡೆಯಿತೆಂದರೆ, ಇವರ ಸೇವೆಯ ಶೈಲಿಯನ್ನು ನೋಡಿ ವಿಶ್ವದ ವಿವಿಧ ದೇಶಗಳ ಜನರು ಈ ಸೌದಿ ಸ್ಕೌಟ್ ತಂಡಕ್ಕೆ ತಮ್ಮನ್ನು ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ವಿಶ್ವದ ಮೂಲೆಮೂಲೆಗಳಿಂದ ಬಂದ ಮನವಿ ಹಾಗೂ ವಿವಿಧ ದೇಶಗಳಿಂದ ಬರುವ ಬೇರೆ ಬೇರೆ ಭಾಷೆಯನ್ನಾಡುವ ಹಜ್ ಯಾತ್ರಿಕರ ಅತ್ಯುತ್ತಮ ಸೇವೆಯ ಹಿತದೃಷ್ಟಿಯಿಂದ 1974ರಲ್ಲಿ ಸುಮಾರು 24 ದೇಶಗಳ 145 ಸ್ಕೌಟ್ ಗಳನ್ನು ಹಜ್ ಯಾತ್ರಿಕರ ಸೇವೆಗೆ ನೇಮಿಸುವ ಮೂಲಕ ಹೊಸ ಪ್ರಯೋಗಕ್ಕೆ ಕೈಹಾಕಲಾಯಿತು. ಇದರಲ್ಲಿ ಯಶಸ್ವಿಯನ್ನು ಕಂಡ ಸೌದಿ ಸ್ಕೌಟ್ ತಂಡವು ನಂತರ ತನ್ನ ಸೇವೆಗಾಗಿ ವಿಶ್ವದ ಮೂಲೆಗಳಿಂದ ಬಂದ ಹಜ್ ಯಾತ್ರಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಈ ವರ್ಷ ವಿಶ್ವದ ಬೇರೆ ಬೇರೆ ದೇಶಗಳ ಒಟ್ಟು 6000 ಸ್ಕೌಟುಗಳು ಹಜ್ ಯಾತ್ರಿಕರ ಸೇವೆಗೆ ಸಜ್ಜಾಗಿದ್ದು, ಇವರಲ್ಲಿ 4500 ಮಂದಿ ಸ್ಕೌಟುಗಳು ಮಕ್ಕಾ ಪರಿಸರದಲ್ಲಿಯೂ , ಸುಮಾರು 1500 ಮಂದಿ ಮಂದೀನಾದಲ್ಲಿಯೂ ಸೇವಾ ನಿರತರಾಗಿದ್ದಾರೆ. ಇವರ ಸೇವೆಯೂ ಕೇವಲ ಹರಮ್ ಪರಿಸರಕ್ಕೆ ಮಾತ್ರ ಸೀಮಿತವಾಗಿರದೆ ಹಜ್ ಯಾತ್ರಿಕರ ಬರುವ ವಿಮಾನ ನಿಲ್ದಾಣ, ಹಡಗು ತಾಣ ಹಾಗೂ ಬಸ್ ನಿಲ್ದಾಣಗಳಲ್ಲಿಯೂ ತಮ್ಮ ಕರ್ತವ್ಯವನ್ನು ಪಾಲಿಸುತ್ತಿದ್ದಾರೆ. ತಮ್ಮ ನಿಸ್ವಾರ್ಥ ಸೇವೆಗಾಗಿ ಸೌದಿ ಸ್ಕೌಟ್ ತಂಡವು ಹಜ್ ಯಾತ್ರಿಕರ ಮೆಚ್ಚುಗೆಗೆ ಪಾತ್ರರಾಗಿರುವುದಲ್ಲದೇ ಸೌದಿ ಸರಕಾರದ ಶಹಬ್ಬಾಸ್ ಗಿರಿಯನ್ನೂ ಪಡೆದುಕೊಂಡಿದೆ.