ಆರೋಗ್ಯಕಾರಿ ಪ್ರಜಾಪ್ರಭುತ್ವಕ್ಕೆ ರಾಹುಲ್ ಯಾಕೆ ಅನಿವಾರ್ಯ?
ಬಹುಶಃ ಅದೊಂದು ಸಣ್ಣ ಯಡವಟ್ಟನ್ನು ರಾಹುಲರು ಮಾಡಿಕೊಳ್ಳದೇ ಹೋಗಿದ್ದರೆ ಮೊನ್ನೆಯ ವಿಶ್ವಾಸ ಮತ ಯಾಚನೆಯ ದಿನದಂದು ರಾಹುಲ್ ಗಾಂಧಿಯವರು ನಡೆದುಕೊಂಡ ರೀತಿ ಮತ್ತು ಮಾಡಿದ ಭಾಷಣ ಬಹುಕಾಲ ಇಂಡಿಯಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಿತ್ತು.
ವಿಶ್ವಾಸಮತದ ಪರವಾಗಿ ಸುದೀರ್ಘವಾಗಿ ವಸ್ತುನಿಷ್ಠವಾಗಿ(ಬಹುಶ: ಫ್ರಾನ್ಸ್ ಸರಕಾರದ ಹೇಳಿಕೆಯ ಉಲ್ಲೇಖವೊಂದನ್ನು ಹೊರತು ಪಡಿಸಿ) ಯಾವ ಹಿಂಜರಿಕೆಯೂ ಇರದಂತೆ ಮಾತಾಡಿದ ರಾಹುಲ್ ಸರಕಾರದ ವಿರುದ್ಧದ ಟೀಕೆಗಳಿಗೆ ಅಷ್ಟೇ ವಸ್ತುನಿಷ್ಠವಾಗಿ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಅದರೆ ತಮ್ಮ ಮಾತು ಮುಗಿಸಿದಾಕ್ಷಣ ಅವರು ನೇರವಾಗಿ ಪ್ರಧಾನಮಂತ್ರಿಗಳ ಆಸನದ ಬಳಿ ಹೋಗಿ ಪ್ರಧಾನಿಯವರನ್ನು ಅಪ್ಪಿಕೊಂಡಿದ್ದು ಸದನವನ್ನಿರಲಿ ಸ್ವತ: ಪ್ರಧಾನಿಯವರಿಗೆ ವಿಸ್ಮಯವನ್ನುಂಟು ಮಾಡಿದ್ದು ನಿಜ. ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಪ್ರಧಾನಿಯವರ ಅಪ್ಪುಗೆಯ ನಂತರ ತಮ್ಮ ಸ್ಥಾನಕ್ಕೆ ಮರಳಿದ ರಾಹುಲ್ ಕ್ಯಾಮರಾಗಳಿವೆಯೆಂಬುದನ್ನು ಮರೆತವರಂತೆ ತಮ್ಮ ಗೆಳೆಯ ಸಹ ಸಂಸದನತ್ತ ತಿರುಗಿ ಎಡಗಣ್ಣು ಮಿಟುಕಿಸಿದ್ದು ಅಲ್ಲಿಯವರೆಗಿನ ರಾಹುಲ್ ವರ್ತನೆಯ ಗಾಂಭೀರ್ಯತೆಯನ್ನು ಮರೆಸಿಬಿಟ್ಟಿತು. ಅವರು ಸಹಜವಾಗಿಯೇ ಕಣ್ಣು ಮಿಟುಕಿಸಿದ್ದರೂ ನೇರ ಪ್ರಸಾರ ನೋಡುತ್ತಿದ್ದ ಜನರಿಗೆ ರಾಹುಲ್ ಪ್ರಧಾನಿಯವರನ್ನು ತಬ್ಬಿಕೊಂಡಿದ್ದ ಒಂದು ನಾಟಕವೇನೊ ಎನ್ನುವಂತಹ ತಪ್ಪುಸಂದೇಶ ನೀಡಿಬಿಟ್ಟಿತು. ಮೊದಲೇ ರಾಹುಲ್ರನ್ನು ಸಮಯ ಬಂದಾಗಲೆಲ್ಲ ಋಣಾತ್ಮಕ ಶೇಡ್ನಲ್ಲಿಯೇ ತೋರಿಸುವ ಪಟ್ಟಭದ್ರ ವಿದ್ಯುನ್ಮಾನ ಮಾಧ್ಯಮಗಳು ಸಹ ಅದನ್ನೇ ಹೈಲೈಟ್ ಮಾಡುತ್ತ ರಾಹುಲ್ರ ಗಂಭೀರವಾದ ಭಾಷಣ ಮತ್ತು ಅಪ್ಪುಗೆಯ ಹಿಂದಿದ್ದ ಮಹತ್ವವನ್ನು ಮತ್ತು ನೈಜತೆಯನ್ನು ಮರೆಮಾಚಿ ಬಿಟ್ಟವು.
ಮೊದಲಿಗೆ ರಾಹುಲ್ರ ಭಾಷಣವನ್ನು ನೋಡೋಣ. ರಫೇಲ್ ವಿಮಾನ ಖರೀದಿಯಲ್ಲಿನ ಒಂದು ತಪ್ಪುಮಾಹಿತಿಯ ಹೊರತಾಗಿ ಸರಕಾರಕ್ಕೆ ಅವರು ಕೇಳಿದ ಬಹುತೇಕ ಪ್ರಶ್ನೆಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದವು. 2014ರ ಲೋಕಸಭಾ ಚುನಾವಣೆಗೂ ಮುಂಚೆ ಪ್ರಧಾನಿಯವರು ನೀಡಿದ್ದ ಪ್ರತಿಯೊಬ್ಬರ ಖಾತೆಗೂ ಹದಿನೈದು ಲಕ್ಷ ಹಣ ಹಾಕುವ ಭರವಸೆ ಇವತ್ತಿಗೂ ಈಡೇರಿಲ್ಲ. ಇದಕ್ಕೆ ಸರಕಾರ ಉತ್ತರಿಸಲೇ ಬೇಕಿತ್ತು. ಇನ್ನು ನೋಟ್ ಬ್ಯಾನ್ ನಂತರ ಈ ದೇಶದ ಸಾಮಾನ್ಯ ಜನತೆ ಅನುಭವಿಸಿದ ಸಂಕಷ್ಟಗಳ ಬಗ್ಗೆ ಅವರು ಸತ್ಯವನ್ನೇ ಹೇಳಿದ್ದರು. ಅದೇ ರೀತಿ ಜಿ.ಎಸ್.ಟಿ. ಕಾಯ್ದೆಯನ್ನು ಅವಸರಸರವಾಗಿ ಅವೈಜ್ಞಾನಿಕವಾಗಿ ಜಾರಿಗೊಳಿಸಿ ದೇಶದ ಅರ್ಥವ್ಯವಸ್ಥೆ ಕುಸಿಯುವಂತೆ ಮಾಡಿದ್ದಕ್ಕೂ ಸರಕಾರವೇ ನೇರ ಹೊಣೆಯಾಗಿತ್ತು. ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳ ಬಗ್ಗೆ ಸರಕಾರವೇ ಹೊಣೆಯಾಗಿತ್ತು. ದೇಶದ ರೈತ ಸಮುದಾಯದ ಸರಣಿ ಆತ್ಮಹತ್ಯೆಯನ್ನು ತಡೆಗಟ್ಟಲು ಮತ್ತು ರೈತರ ಸಾಲಮನ್ನಾ ಮಾಡಲು ವಿಫಲವಾದ ಕೇಂದ್ರ ಸರಕಾರದ ಬಗ್ಗೆ ಅವರು ಸರಿಯಾದ ಮಾತುಗಳಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದರು.
ಬಹುಶಃ ತಮ್ಮ ರಾಜಕೀಯ ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಹುಲ್ ಗಾಂಧಿಯವರು ಇಷ್ಟೊಂದು ದೀರ್ಘಾವಧಿಯ ಮೌಲ್ಯಯುತ ಭಾಷಣ ಮಾಡಿದ್ದರು. ಜೊತೆಗೆ ಅಂದಿನ ಅವರ ಭಾಷಣದಲ್ಲಿ ಹಿಂದೆಂದಿ ಗಿಂತಲೂ ಹೆಚ್ಚಿನ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು.
ಪ್ರಧಾನಮಂತ್ರಿಯನ್ನು ಅಪ್ಪಿಕೊಂಡಿದ್ದರ ಬಗೆಗಿನ ಟೀಕೆಗಳನ್ನು ಸ್ವಲ್ಪ ನೋಡೋಣ.
ಹಲವರ ಪ್ರಕಾರ ಸದನದಲ್ಲಿ ಪ್ರಧಾನಮಂತ್ರಿಯ ಸ್ಥಾನದಲ್ಲಿ ಮೋದಿಯವರು ಕೂತಿದ್ದಾಗ ರಾಹುಲ್ರು ಅ ರೀತಿ ಅಪ್ಪಿಕೊಂಡಿದ್ದು ಸದನದ ಶಿಷ್ಟಾಚಾರವನ್ನು ಉಲ್ಲಂಘಿಸಿದಂತಾಗಿದೆ ಮತ್ತು ಪ್ರಧಾನಿ ಸ್ಥಾನದ ಗೌರವಕ್ಕೆ ಚ್ಯುತಿ ತರುವ ಕ್ರಿಯೆ ಎನ್ನಲಾಗುತ್ತಿದೆ. ಇರಬಹುದು, ಸದನದ ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ನೋಡುವುದಾದರೆ, ನಮ್ಮ ಪ್ರಜಾಪ್ರಭುತ್ವವನ್ನು ಆರೋಗ್ಯವಾಗಿಡಲು ಶಿಷ್ಟಾಚಾರಗಳೇ ಸಾಕಾಗುವುದಿಲ್ಲ. ಬದಲಿಗೆ ಕೆಲವೊಮ್ಮೆ ಕ್ಷುಲ್ಲಕ ರಾಜಕಾರಣದ ವೈರತ್ವವನ್ನೂ ಮರೆತು ಇಂತಹ ಅಪರೂಪದ ಮಾನವೀಯ ಸ್ಪಂದನೆಗಳು ಸಹ ಬೇಕಾಗುತ್ತವೆಯೆಂಬುದನ್ನು ನಮ್ಮ ಮಾಧ್ಯಮದ ಮಿತ್ರರಾಗಲಿ ಆಡಳಿತ ಪಕ್ಷದ ಸದಸ್ಯರುಗಳಾಗಲಿ ಅರ್ಥ ಮಾಡಿಕೊಳ್ಳಲೇ ಇಲ್ಲ ಎನ್ನುವುದೇ ವಿಷಾದನೀಯ.
ರಾಹುಲ್ ಗಾಂಧಿಯವರ ಪ್ರತೀ ರಾಜಕೀಯ ನಡೆಯನ್ನೂ, ಪ್ರತೀ ಮಾತನ್ನೂ ಲೇವಡಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಭಾಜಪದವರ ತಂತ್ರ ಇದೇನು ಮೊದಲಲ್ಲ. ಈ ಹಿಂದೆಯೂ ಪದೇ ಪದೇ ಮೋದಿ ರಾಹುಲ್ರನ್ನು ಷಹಜಾದೇ(ರಾಜಕುಮಾರ) ಎಂದು ಅಣಕಿಸುತ್ತಲೇ ಮಾತಾಡುತ್ತಿದ್ದರು. ಜೊತೆಗೆ ರಾಹುಲ್ರ ಭಾಷಣಗಳನ್ನು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಅನುಕರಿಸಿ ಅಣಕಮಾಡುತ್ತ ಅವರ ಆತ್ಮವಿಶ್ವಾಸ ಉಡುಗುವಂತೆ ಮಾಡುತ್ತಲೇ ಬಂದಿದ್ದಾರೆ. ಭಾಜಪದ ಮಾಧ್ಯಮ ಸೆಲ್ನವರಂತೂ ರಾಹುಲ್ರನ್ನು ಪಪ್ಪು ಎನ್ನುತ್ತ ಅವರ ಬಗ್ಗೆ ಹಲವು ನೂರು ಜೋಕುಗಳನ್ನು ಹರಿಯ ಬಿಟ್ಟಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ನಂತರವೂ ರಾಹುಲ್ರ ಅನನುಭವಿತನವನ್ನು ಅಪಹಾಸ್ಯ ಮಾಡುತ್ತ ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಇನ್ನು ಇದರಲ್ಲಿ ರಾಹುಲ್ರದು ಕೆಲವು ತಪ್ಪುಗಳಿವೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಮಾಡಬೇಕಾಗಿದ್ದ ಪೂರ್ಣಾವಧಿಯ ರಾಜಕಾರಣವನ್ನು ಮಾಡದೆ ಆಗಾಗ ಯಾರಿಗೂ(ಸ್ವಪಕ್ಷೀಯರಿಗೂ!) ಮಾಹಿತಿ ನೀಡದೆ ವಿದೇಶಗಳಿಗೆ ಹಾರಿಹೋಗುವುದು ಮಾಡುತ್ತ ಬರುತ್ತಿದ್ದಾರೆ. ಮಹತ್ವದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಯಾರಿಗೂ ಸಿಗದೇ ಹೋಗುವುದರ ಮೂಲಕ ಹಲವು ಹಿನ್ನಡೆಗಳಿಗೆ ಸ್ವತಃ ಅವರೇ ಕಾರಣೀಕರ್ತರಾಗುತ್ತಿದ್ದಾರೆ.
ಆದರೆ ರಾಹುಲ್ ಗಾಂಧಿಯವರ ಈ ಎಲ್ಲ ಋಣಾತ್ಮಕ ಅಂಶಗಳ ಜೊತೆಗೆಯೇ ಅವರೀಗ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಇವತ್ತು ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಈ ದೇಶಕ್ಕೆ ಅನಿವಾರ್ಯವಾಗಿರುವಂತೆಯೇ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಉಳಿಯಲು ಅದಕ್ಕೆ ರಾಹುಲ್ ಗಾಂಧಿಯವರು ಸಹ ಅನಿವಾರ್ಯವಾಗಿದ್ದಾರೆ. ಬಹುಶಃ ನಾವಿದನ್ನು ಅರ್ಥ ಮಾಡಿಕೊಂಡರೆ ಮಾತ್ರ ರಾಷ್ಟ್ರ ರಾಜಕಾರಣದಲ್ಲಿ ರಾಹುಲ್ರ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ.
ಹೀಗಾಗಿ ನಾವು ಮೊದಲು ಯಾಕೆ ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವೆಂಬುದನ್ನು ನೋಡಿದರೆ ರಾಹುಲ್ ಗಾಂಧಿಯವರಿಗಿರುವ ರಾಜಕೀಯ ಪ್ರಾಮುಖ್ಯತೆ ಅರ್ಥವಾಗುತ್ತದೆ:
ಕಳೆದ ಏಳು ದಶಕಗಳಿಂದಲೂ ಕಾಂಗ್ರೆಸೇತರ ಪಕ್ಷಗಳು ಕಾಂಗ್ರೆಸ್ನ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುತ್ತ, ಕುಟುಂಬ ರಾಜಕಾರಣವನ್ನು ಕೆಲವೊಮ್ಮೆ ತೀರಾ ಕೀಳುಭಾಷೆಯಲ್ಲಿ ಲೇವಡಿ ಮಾಡುತ್ತಲೇ ಬರುತ್ತಿವೆ.
ಆದರೆ ಈಗ ನೋಡಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಎಲ್ಲ ಯೋಗ್ಯತೆಗಳನ್ನೂ ಇಂಡಿಯಾದ ಬಹಳಷ್ಟು ರಾಜಕೀಯ ಪಕ್ಷಗಳು ಕಳೆದುಕೊಂಡಿವೆಯೆನಿಸುತ್ತೆ. ಯಾಕೆಂದರೆ ನೆಹರೂ ಕುಟುಂಬವನ್ನು ವಿರೋಧಿಸುತ್ತಲೇ ರಾಜಕೀಯ ಮಾಡಿದ ನಾಯಕರು, ಪಕ್ಷಗಳು ಕೂಡ ಕುಟುಂಬ ರಾಜಕಾರಣದ ಬಲೆಯಲ್ಲಿ ಬಿದ್ದಿವೆ. ಹೀಗಾಗಿ ಇವತ್ತು ಕುಟುಂಬ ರಾಜಕಾರಣದ ಬಗ್ಗೆ ಯಾರಾದರೂ ಮಾತಾಡಿದರೆ ಅದನ್ನು ಜನತೆ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕೆಲವರು ಕಾಂಗ್ರೆಸ್ ಮತ್ತೆ ಸುಧಾರಿಸಿಕೊಳ್ಳಬೇಕಾದರೆ ಆ ಪಕ್ಷ ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿಯವರ ಹಿಡಿತದಿಂದ ಹೊರಬರಬೇಕೆಂದು ಕಿರುಚುತಿದ್ದಾರೆ. ನೆಹರೂ ಕುಟುಂಬದ ಹೊರತಾದ ಕಾಂಗ್ರೆಸ್ ಭವಿಷ್ಯ ಏನಾಗಬಹುದೆಂಬುದನ್ನು ಈಗ ಒಂದಿಷ್ಟು ನೋಡೋಣ:
ಇವತ್ತು ನೂರು ವರ್ಷಗಳ ನಂತರವೂ ಕಾಂಗ್ರೆಸ್ ತನ್ನ ಅಸ್ತಿತ್ವ ಅಂತೇನಾದರೂ ಉಳಿಸಿಕೊಂಡು ಉಸಿರಾಡುತ್ತಿದ್ದರೆ ಅದಕ್ಕೆ ನೆಹರೂ ಕುಟುಂಬದ ಆಕರ್ಷಣೆ ಕಾರಣವೇ ಹೊರತು ಬೇರೆಯೇನಲ್ಲ. ಇದು ಸತ್ಯವಾದ ಸಂಗತಿ. ನೆಹರೂ ಕುಟುಂಬದಾಚೆಗೆ ಪಕ್ಷ ಬಂದು ನಿಂತರೆ ಕೆಲವೇ ವರ್ಷದಲ್ಲಿ ಅದು ತನ್ನ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದುಕೊಂಡು ಹತ್ತಾರೇನು, ನೂರಾರು ಚೂರುಗಳಾಗಿ ಒಡೆದು ಛಿದ್ರಗೊಳ್ಳುವುದು ಖಚಿತ. ಯಾಕೆಂದರೆ ಎಲ್ಲಿಯವರೆಗೂ ನೆಹರೂ ಕುಟುಂಬದ ಸದಸ್ಯರು ಅದನ್ನು ಮುನ್ನಡೆಸುತ್ತಾರೊ ಅಲ್ಲಿಯವರೆಗೂ ಅದರ ಒಗ್ಗಟ್ಟು ಬಲವಾಗಿರುತ್ತದೆ. ಆ ಕುಟಂಬವೇ ಅದಕ್ಕೆ ಶಕ್ತಿಕೇಂದ್ರವಾಗಿದೆ. ಅದು ನಾಶವಾದರೆ ಪಕ್ಷವೂ ನಾಶವಾಗುವುದರಲ್ಲಿ ಅನುಮಾನವೇನಿಲ್ಲ. ಇದಕ್ಕೆ ಬಹಳ ಜನ ರಾಜಕೀಯ ಪಂಡಿತರು, ನಾಯಕರು ಕಾಂಗ್ರೆಸ್ ಬೇರೆ ನಾಯಕರನ್ನು ಬೆಳೆಸಲಿಲ್ಲವೆಂದು ಆರೋಪಿಸುತ್ತಾರೆ. ಆದರೆ ಇಂಡಿಯಾದಂತಹ ವಿಶಾಲ ರಾಷ್ಟ್ರದಲ್ಲಿ ನಾಲ್ಕೂ ದಿಕ್ಕುಗಳಿಗೂ ಒಪ್ಪಿತವಾಗುವಂತಹ ನಾಯಕನನ್ನು ಯಾರೂ ಬೆಳೆಸಲಾಗುವುದಿಲ್ಲ. ಹಾಗೆ ಬೆಳಸುವ ನಾಯಕ ಬಹಳ ದಿನ ಬಾಳಿಕೆ ಬರಲಾರ. ನಾಯಕನಾದವನು ಸ್ವಯಂ ಸೃಷ್ಟಿಯಾಗಬೇಕು. ನರೇಂದ್ರ ಮೋದಿಯವರನ್ನು ಭಾಜಪವೇನು ಬೆಳೆಸಲಿಲ್ಲ, ಬದಲಿಗೆ ಬೆಳೆದ ಮೋದಿಯವರನ್ನು ಭಾಜಪ ಬಳಸಿಕೊಂಡಿತಷ್ಟೇ! ಪ್ರಾದೇಶಿಕ ನಾಯಕರು ಬೆಳೆಯಬಹುದೇ ಹೊರತು ರಾಷ್ಟ್ರನಾಯಕರನ್ನು ಯಾರೂ ಬೆಳೆಸಲಾಗುವುದಿಲ್ಲ. ಇವತ್ತು ನಿತೀಶ್ ಕುಮಾರ್, ಮಾಯಾವತಿ, ಚಂದ್ರಬಾಬು ನಾಯ್ಡು ಮುಂತಾದವರನ್ನೇ ನೋಡಿ. ಅವರೆಷ್ಟೇ ದೊಡ್ಡ ನಾಯಕರಾದರೂ ರಾಷ್ಟ್ರವ್ಯಾಪಿ ಅವರನ್ನು ಒಪ್ಪಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಇಂಡಿಯಾದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಒಬ್ಬ ನಾಯಕ ಭಾವನಾತ್ಮಕವಾಗಿ ಜನರನ್ನು ಒಲಿಸಿಕೊಂಡು ಬೆಳೆಯಬಹುದೇ ಹೊರತು ಬೇರ್ಯಾವ ಶಕ್ತಿಗಳು ಅಂತಹ ನಾಯಕನನ್ನು ಸೃಷ್ಟಿಸಲಾರವು.
ಹೀಗಾಗಿಯೇ ನಾನು ಹೇಳುವುದು ಸೋನಿಯಾ ಆಗಲಿ ರಾಹುಲ್ ಆಗಲಿ ಕಾಂಗ್ರೆಸ್ನ ನಾಯಕತ್ವವನ್ನು ಬಿಟ್ಟುಕೊಟ್ಟರೆ ಅದು ಭಾಜಪದಂತಹ ಪಕ್ಷಗಳಿಗೆ ಹಾಸಿಕೊಡುವ ಕೆಂಪುಹಾಸಿನ ಸ್ವಾಗತವಾಗುತ್ತದೆ. ಜೊತೆಗೆ ಏಕ ಪಕ್ಷದ ಸರ್ವಾಧಿಕಾರಿ ಆಡಳಿತಕ್ಕೂ ಹಾದಿಯಾಗುತ್ತದೆ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಪ್ರಜಾಪ್ರಭುತ್ವ ಬದುಕಿರಲಿಕ್ಕಾದರೂ ಕಾಂಗ್ರೆಸ್ ಜೀವಂತವಾಗಿರುವ ಅಗತ್ಯವಿದೆ. ಹಾಗೇನಾದರೂ ನಾಳೆ ಸೋನಿಯಾ ಮತ್ತು ರಾಹುಲ್ ಕಾಂಗ್ರೆಸ್ನ ಅಧಿಕಾರ ಬಿಟ್ಟುಕೊಟ್ಟು ಹೊರಬಂದರೆ ಬಹುಶಃ ಕರ್ನಾಟಕದಲ್ಲಿಯೇ ಸಿದ್ದರಾಮಯ್ಯನವರ ಕಾಂಗ್ರೆಸ್, ಪರಮೇಶ್ವರ್ ಕಾಂಗ್ರೆಸ್, ಡಿ. ಕೆ. ಶಿವಕುಮಾರ್ ಕಾಂಗ್ರೆಸ್, ವೀರಪ್ಪಮೊಯ್ಲಿ ಕಾಂಗ್ರೆಸ್ ಎಂಬಂತಹ ಹತ್ತಾರು ಕಾಂಗ್ರೆಸ್ಗಳು ಜನಿಸುವುದು ಗ್ಯಾರಂಟಿ. ಉದಾಹರಣೆಗಾಗಿ ಇತಿಹಾಸವನ್ನೊಮ್ಮೆ ತಿರುವಿ ಹಾಕಿ ನೋಡಿ. ಎಪ್ಪತ್ತರ ದಶಕದಿಂದ ಇದುವರೆಗೂ ಯಾರ್ಯಾರು ಕಾಂಗ್ರೆಸ್ ತೊರೆದು ಮರಿ ಕಾಂಗ್ರೆಸ್ ಪಕ್ಷಗಳನ್ನು ಕಟ್ಟಿದರೋ ಅವರೆಲ್ಲ ರಾಜಕೀಯದಲ್ಲಿ ಮೇಲೇರಲು ಸಾಧ್ಯವೇ ಆಗಿಲ್ಲ. ಜೊತೆಗೆ ಅವರಲ್ಲಿ ಬಹಳಷ್ಟು ಜನ ಮತ್ತೆ ಕಾಂಗ್ರೆಸ್ನ ತೆಕ್ಕೆಗೆ ಹೋಗಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತ್ರ ಕಾಂಗ್ರೆಸನ್ನು ಕಾಪಾಡಬಲ್ಲರೆನಿಸುತ್ತೆ. ನೆಹರೂ ಕುಟುಂಬದವರ ಬಗ್ಗೆ ಪೂರ್ವಗ್ರಹವಿಲ್ಲದೆ ನೋಡಿದರೆ ಮಾತ್ರ ಈ ಸತ್ಯ ಅರ್ಥವಾಗುತ್ತದೆ. ಎರಡು ಕಾರಣಗಳಿಗಾಗಿ ಕಾಂಗ್ರೆಸ್ ಮುಂದೆಯೂ ಅಸ್ತಿತ್ವವನ್ನು ಉಳಿಸಿಕೊಂಡಿರಬೇಕು:
ಮೊದಲನೆಯದು, ಕಾಂಗ್ರೆಸ್ ನಮ್ಮ ಸ್ವಾತಂತ್ರ ಹೋರಾಟದ ನೆನಪಾಗಿದ್ದು ಅದು ನಮ್ಮ ಜೊತೆ ಭಾವನಾತ್ಮಕವಾಗಿ ಥಳುಕು ಹಾಕಿಕೊಂಡಿದೆ (ಈ ಪೀಳಿಗೆಯನ್ನು ಹೊರತುಪಡಿಸಿ). ಎರಡನೆಯದು, ಕಾಂಗ್ರೆಸ್ ಇಲ್ಲವಾಗಿ ಬಿಟ್ಟರೆ ಭಾಜಪ ಏಕೈಕ ರಾಷ್ಟ್ರೀಯ ಪಕ್ಷವಾಗಿ ಹಿಂದೆ ಕಾಂಗ್ರೆಸ್ ಹೇಗೆ ಆರು ದಶಕಗಳವರೆಗೂ ನಮ್ಮನ್ನು ಆಳಿತೊ ಅದೇ ರೀತಿ ಭಾಜಪವೂ ಸಹ ಆಗಿಬಿಡುವ ಸಾಧ್ಯತೆಯಿದೆ. ಭಾಜಪಕ್ಕೊಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಕಂಡುಕೊಳ್ಳಲಾಗದೆ ಭಾರತೀಯ ಮತದಾರ ಅಸಹಾಯಕನಾಗಬೇಕಾಗುತ್ತದೆ. ಇನ್ನುಳಿದಿರುವ ಹಲವಾರು ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯದ ಪರಿಮಿತಿಯ ಆಚೆಗೆ ಯೋಚಿಸಲಾರವು. ಸದಾ ತಮ್ಮ ರಾಜ್ಯದ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುವ ಅವು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಲಿ ಕೊಟ್ಟು ರಾಜಕಾರಣ ಮಾಡಲು ಪ್ರಾರಂಭಿಸುತ್ತವೆ. ಇದರಿಂದ ದೇಶದ ಐಕ್ಯತೆಗೆ, ನಮ್ಮ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಒದಗುವ ಸಾಧ್ಯತೆ ಇದೆ. ಆದ್ದರಿಂದಲೇ ಕಾಂಗ್ರೆಸ್ನ ಉಳಿವು ಈ ನೆಲದ ಪ್ರಜಾತಂತ್ರದ ಉಳಿವಿಗೂ ಸಂಬಂಧವಿದೆಯೆಂಬುದನ್ನು ನಾವು ಮರೆಯಬಾರದು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕಾಂಗ್ರೆಸ್ನ ಉಳಿವಿಗೆ ರಾಹುಲ್ ಗಾಂಧಿಯವರು ಸಹ ಅನಿವಾರ್ಯವಾಗಿದ್ದಾರೆ ಎನ್ನಬಹುದು.
ಇದನ್ನು ಸ್ವತ: ರಾಹುಲ್ ಗಾಂಧಿಯವರೂ ಅರ್ಥಮಾಡಿಕೊಂಡು ರಾಜಕೀಯವಾಗಿ ಬೆಳೆಯಬೇಕಾಗಿದೆ. ಸದಾ ಭಾಜಪ ಮತ್ತು ಮೋದಿಯವರ ಕಾರ್ಯವೈಖರಿಯನ್ನು ಟೀಕಿಸುತ್ತ ಕೂರುವ ಬದಲು ಅವರಿಗೆ ಪರ್ಯಾಯವಾಗಿ ತಾವು ಮಾಡಬಯಸಿರುವ ಜನಪರ ರಾಜಕೀಯದ ಬಗ್ಗೆ ಜನರಿಗೆ ಅರ್ಥ ಮಾಡಿಸಬೇಕಿದೆ. ಈ ನಿಟ್ಟಿನಲ್ಲಿ ರಾಹುಲ್ಗಾಂಧಿಯವರು ಕೇವಲ ರಾಜಕಾರಣಿಯಾಗಿ ಯೋಚಿಸುವುದನ್ನು ಬಿಟ್ಟು ಮುತ್ಸದ್ದಿಯ ರೀತಿಯಲ್ಲಿ ಚಿಂತಿಸಿ ಮಾತನಾಡುವುದನ್ನು ರೂಢಿಸಿಕೊಳ್ಳುವ ಅಗತ್ಯವಿದೆ.