ದ.ಕ.: ಮಾತೃಪೂರ್ಣ ಯೋಜನೆಗೆ ಭಾರೀ ಹಿನ್ನೆಡೆ
ಪರ್ಯಾಯ ವ್ಯವಸ್ಥೆಗೆ ಚಿಂತನೆ
► ಯೋಜನೆ ಎಪ್ರಿಲ್ನಲ್ಲಿ ಶೇ.26, ಮೇನಲ್ಲಿ ಶೇ.24, ಜೂನ್ನಲ್ಲಿ ಶೇ.24 ಮಾತ್ರ ಪ್ರಗತಿ.
► ಗರ್ಭಿಣಿ, ಬಾಣಂತಿಯರು ಅಂಗನವಾಡಿಗಳಿಂದ ದೂರ ಉಳಿದಿರುವುದೇ ಈ ಹಿನ್ನಡೆಗೆ ಕಾರಣ.
ಮಂಗಳೂರು, ಜು.30: ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸುಮಾರು 10 ತಿಂಗಳ ಹಿಂದೆ ಜಾರಿಗೊಳಿಸಿದ್ದ ಗರ್ಭಿಣಿ ಮತ್ತು ಬಾಣಂತಿ ಯರಿಗೆ ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ ಒದಗಿಸುವ ‘ಮಾತೃಪೂರ್ಣ ಯೋಜನೆ’ ದ.ಕ. ಜಿಲ್ಲೆಯಲ್ಲಿ ಭಾರೀ ಹಿನ್ನಡೆ ಕಂಡಿದೆ. ಇತ್ತೀಚೆಗೆ ದ.ಕ. ಜಿಲ್ಲಾ ಪ್ರವಾಸ ದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾರಿಗೂ ಜಿಲ್ಲೆಯ ಅಧಿಕಾರಿಗಳು ಈ ಬಗ್ಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಇಲಾಖಾ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.
ದ.ಕ. ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಎಪ್ರಿಲ್ನಲ್ಲಿ ಶೇ.26, ಮೇ ತಿಂಗಳಲ್ಲಿ ಶೇ.24, ಜೂನ್ ನಲ್ಲಿ ಶೇ.24 ಮಾತ್ರ ಪ್ರಗತಿ ಸಾಧಿಸಿದೆ. ಜಿಲ್ಲೆಯ ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿಗಳಿಂದ ದೂರ ಉಳಿದಿರುವುದೇ ಈ ಹಿನ್ನಡೆಗೆ ಕಾರಣ ಎನ್ನ ಬಹುದು. ಮನೆಯಿಂದ ಅಂಗನವಾಡಿ ಕೇಂದ್ರ ಗಳು ದೂರವಿರುವುದು, ಹತ್ತಿರವಿದ್ದರೂ ಕೇಂದ್ರಕ್ಕೆ ತೆರಳಿ ಪೌಷ್ಟಿಕ ಆಹಾರ ಸೇವಿಸಲು ಸ್ವಾಭಿಮಾನ ಅಡ್ಡ ಬರುವುದು ಇತ್ಯಾದಿ ಕೂಡಾ ಸಮಸ್ಯೆಯಾಗಿ ಪರಿಣ ಮಿಸಿದೆ.
‘ಮಾತೃಪೂರ್ಣ’ ಯೋಜನೆ ಜಾರಿಗೆ ಮುನ್ನ ಗರ್ಭಿಣಿ ಮತ್ತು ಬಾಣಂತಿಯರು ಅಥವಾ ಅವರ ಮನೆಯವರು ಅಂಗನವಾಡಿಗೆ ತೆರಳಿ ಪೌಷ್ಟಿಕ ಆಹಾರ ಗಳ ಸಾಮಗ್ರಿಗಳನ್ನು ಸಹಿ ಹಾಕಿ ಮನೆಗೆ ತರುತ್ತಿದ್ದರು. ಈ ಆಹಾರ ಸಾಮಗ್ರಿಗಳ ದುರುಪಯೋಗವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ವತಃ ಗರ್ಭಿಣಿಯರು ಮತ್ತು ಬಾಣಂತಿಯರು ನೇರ ಅಂಗನವಾಡಿ ಕೇಂದ್ರ ಗಳಿಗೆ ತೆರಳಿ ಅಲ್ಲೇ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸರಕಾರ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ. ಅವ್ಯವಸ್ಥೆಯ ನಡುವೆಯೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಅನ್ನ ಮತ್ತಿತರ ಆಹಾರ ಬೇಯಿಸುತ್ತಿದ್ದರು. ಆದರೆ ಫಲಾನು ಭವಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಯೋಜನೆಯು ದ.ಕ. ಜಿಲ್ಲೆಯಲ್ಲಿ ಹಳ್ಳಹಿಡಿಯುತ್ತಿವೆ.
ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯ 12,762 ಗರ್ಭಿಣಿಯರು ಮತ್ತು 12,126 ಬಾಣಂತಿಯರಿಗೆ ಆಹಾರ ನೀಡುವ ಗುರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೊಂದಿತ್ತು. ಎಪ್ರಿಲ್ನಲ್ಲಿ 1,814(ಶೇ.14) ಗರ್ಭಿಣಿ ಯರು, 1,495 (ಶೇ.12) ಬಾಣಂತಿಯರು ಅಂಗನ ವಾಡಿ ಕೇಂದ್ರಗಳಿಗೆ ಹಾಜರಾಗಿ ಮಾತೃಪೂರ್ಣ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಮೇಯಲ್ಲಿ 1,561 (ಶೇ.12) ಗರ್ಭಿಣಿಯರು, 1,309 (ಶೇ.11) ಬಾಣಂತಿಯರು ಹಾಜರಾಗಿದ್ದಾರೆ. ಜೂನ್ನಲ್ಲಿ 1,511 (ಶೇ.12) ಗರ್ಭಿಣಿಯರು, 1,313(ಶೇ.11) ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಿದ್ದಾರೆ.
2017ರ ಅಕ್ಟೋಬರ್ 2ರಂದು ಈ ಯೋಜನೆ ಯನ್ನು ಆರಂಭಿಸಿದಾಗ ದ.ಕ. ಜಿಲ್ಲೆಯಲ್ಲಿ 14,294 ಗರ್ಭಿಣಿಯರು ಮತ್ತು 15,174 ಬಾಣಂತಿಯರ ಸಹಿತ 29,468 ಮಂದಿಯನ್ನು ಗುರುತಿಸಲಾಗಿತ್ತು. ಅಲ್ಲದೆ ಜಿಲ್ಲೆಯ 2,104 ಅಂಗನವಾಡಿಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅಂಗನ ವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೂಡಾ ಲಾನುಭವಿಗಳ ಜತೆ ಆಹಾರ ಸೇವಿಸಬೇಕು ಎಂದು ಸೂಚಿಸಲಾಗಿತ್ತು. 2018ರಲ್ಲಿ 12,762 ಗರ್ಭಿ ಣಿಯರು ಮತ್ತು 12,126 ಬಾಣಂತಿಯರು ಹಾಗೂ 2,104 ಅಂಗನವಾಡಿ ಕಾರ್ಯಕರ್ತೆಯರು, 2,084 ಅಂಗನವಾಡಿ ಸಹಾಯಕಿಯರು ಸಹಿತ 29,076 ಮಂದಿಗೆ ಯೋಜನೆ ಗುರಿ ನಿಗದಿಪಡಿಸಲಾಗಿತ್ತು.
ರಾಜ್ಯ ಸರಕಾರವು ಆಹಾರ ತಯಾರಿಸುವ ಕಾರ್ಯಕರ್ತೆ ಯರಿಗೆ 500 ರೂ. ಮತ್ತು ಸಹಾಯಕಿ ಯರಿಗೆ 250 ರೂ. ಹೆಚ್ಚುವರಿ ಗೌರವ ಧನ ನಿಗದಿ ಪಡಿಸಿ ಆದೇಶ ಹೊರಡಿಸಿತ್ತು. ಅದರಂತೆ ಶೇ.98 ರಷ್ಟು ಅಂಗನವಾಡಿ ಕಾರ್ಯರ್ತೆಯರು ಮತ್ತು ಸಹಾಯ ಕಿಯರು ಇದಕ್ಕೆ ಸ್ಪಂದಿಸಿದ್ದಾರೆ. ಆದರೆ ಗರ್ಭಿಣಿಯರು ಮತ್ತು ಬಾಣಂತಿಯರು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸದ ಕಾರಣ ಯೋಜನೆಯು ಜಿಲ್ಲೆಯಲ್ಲಿ ನೆಲಕ್ಕಚ್ಚಿವೆ.
‘ಮಾತೃಪೂರ್ಣ’ ಯೋಜನೆಯಲ್ಲಿ ಲಭ್ಯವಾಗುವ ಆಹಾರ
► ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟವು ಅನ್ನ- ಸಾಂಬಾರ್, ಪಲ್ಯದ ಜತೆಗೆ ಬೇಯಿಸಿದ ಮೊಟ್ಟೆ, ಹಾಲು ಹಾಗೂ ಶೇಂಗಾ-ಬೆಲ್ಲದಿಂದ ತಯಾರಿಸಿದ ಚಿಕ್ಕಿ ಒಳಗೊಂಡಿವೆ. ಪ್ರತೀ ತಿಂಗಳು 25 ದಿನಗಳಂತೆ, ವರ್ಷದಲ್ಲಿ 300 ದಿನಗಳು ಪೌಷ್ಟಿಕ ಆಹಾರ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳುಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಒಂದು ದಿನಕ್ಕೆ ಬೇಕಾಗಿರುವ ಪ್ರೊಟೀನ್ ಕ್ಯಾಲರಿ ಮತ್ತು ಕ್ಯಾಲ್ಸಿಯಂ ಅಂಶಗಳು ಸುಮಾರು ಶೇ.40-45 ರಷ್ಟು ಬಿಸಿಯೂಟದಿಂದ ದೊರೆಯಲಿದೆ.
► ಮಂಗಳವಾರ ಮತ್ತು ಗುರುವಾರ ಗಂಜಿ, ಚಟ್ನಿ, ಉಳಿದ ದಿನಗಳಲ್ಲಿ ಅನ್ನ ಸಾಂಬಾರು ಒದಗಿಸಲಾಗುತ್ತದೆ.
► ಗರ್ಭಿಣಿಯರಿಗೆ ಅಗತ್ಯವಿರುವ ಪೌಷ್ಟಿಕಾಂಶ ಸಹಿತ ಮಧ್ಯಾಹ್ನದ ಪೌಷ್ಟಿಕ ಊಟ, ಕಬ್ಬಿಣಾಂಶದ ಮಾತ್ರೆ ಮತ್ತು ಅಯೋಡಿನ್ಯುಕ್ತ ಉಪ್ಪು ನೀಡಲಾಗುತ್ತದೆ.
ದ.ಕ. ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಯಶಸ್ವಿಯಾಗದಿರುವ ಅಂಶವನ್ನು ಸಚಿವೆ ಡಾ.ಜಯಮಾಲಾರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಸುಂದರ ಪೂಜಾರಿ
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.ಜಿಲ್ಲೆ
ಜಿಲ್ಲೆಯ ವಾತಾವರಣಕ್ಕೆ ಇದು ಪೂರಕವಲ್ಲ. ಯಾಕೆಂದರೆ ಅಂಗನವಾಡಿ ಕೇಂದ್ರಗಳು ಮನೆಯಿಂದ ದೂರವಿದ್ದರೂ, ಹತ್ತಿರವಿದ್ದರೂ ಅಲ್ಲಿಗೆ ತೆರಳಿ ಪೌಷ್ಟಿಕ ಆಹಾರ ಸೇವಿಸಲು ಅನೇಕ ಗರ್ಭಿಣಿ, ಬಾಣಂತಿಯರಿಗೆ ಸ್ವಾಭಿಮಾನ ಅಡ್ಡಿಬರುತ್ತದೆ. ಅಲ್ಲದೆ, ನಿರ್ದಿಷ್ಟ ಸಮಯಕ್ಕೆ ಕೇಂದ್ರಕ್ಕೆ ತೆರಳುವುದು ಅಸಾಧ್ಯ ಕೂಡ. ಸರಕಾರ ಅವಿಭಜಿತ ದ.ಕ. ಜಿಲ್ಲೆಯ ಮಟ್ಟಿಗೆ ಈ ಯೋಜನೆಯಲ್ಲಿ ಮಾರ್ಪಾಡು ಮಾಡುವುದು ಒಳಿತು.
ಹಸೀನಾ ಮಂಗಳೂರು, (ಗೃಹಿಣಿ)