ಸಾಮಾಜಿಕ ಜಾಲತಾಣಗಳು: ವರವೋ? ಶಾಪವೋ?
ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಸರಕಾರಕ್ಕೆ ಮತ್ತು ನಾಗರಿಕ ಸಮಾಜಕ್ಕೆ ನಿಭಾಯಿಸಲಸಾಧ್ಯವಾದ ಸವಾಲಾಗಿಬಿಟ್ಟಿವೆ.
ಭಾರತ ಪ್ರಭುತ್ವವು ಎದುರಿಸುತ್ತಿರುವ ಬಗೆಹರಿಸಲು ಅಸಾಧ್ಯವಾದ ದ್ವಂದ್ವವಿದು. ಅತ್ಯಂತ ವಿಷಯುಕ್ತ ಮತ್ತು ದ್ವೇಷಮಯ ಸುದ್ದಿ ಕಥನಗಳನ್ನು ಹರಿದಾಡಲು ಅನುಮತಿಸಿ ಉತ್ತೇಜಿಸಿದರೆ ಅದು ತಾನು ಹರಡಿಕೊಳ್ಳಲು ಬೇಕಾಗಿರುವ ಅತ್ಯುತ್ತಮ ಮಾಧ್ಯಮವನ್ನು ಹುಡುಕಿಕೊಳ್ಳುತ್ತದೆ. ಉದಾಹರಣೆಗೆ ಇವತ್ತಿನ ಸಂದರ್ಭದಲ್ಲಿ ಅದು ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲವಾಗಿವೆ. ಅಸಲಿ ಸಮಸ್ಯೆಯು ದ್ವೇಷಮಯ ಮತ್ತು ವಿಭಜನಕಾರಿ ರಾಜಕೀಯದಲ್ಲಿರುವಾಗ ಅದರ ವಾಹಕವನ್ನು ಮಾತ್ರ ತಡೆಗಟ್ಟುವುದರಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ.
ಇತ್ತೀಚೆಗೆ ಭಾರತದ ವಿದೇಶಾಂಗ ಮಂತ್ರಿ ಸುಶ್ಮಾ ಸ್ವರಾಜ್ ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೀನಾಯವಾದ ಟ್ರೋಲ್ಗೆ ಗುರಿಯಾದರು. ಈ ಪ್ರಕರಣವು ಸಾಮಾಜಿಕ ಜಾಲತಾಣಗಳ ನಕಾರಾತ್ಮಕ ಅಂಶಗಳ ಕುರಿತು ಸರಕಾರ ಮತ್ತು ನಾಗರಿಕ ಸಮಾಜ ಹೇಗೆ ಸ್ಪಂದಿಸಬೇಕೆಂಬ ಬಗ್ಗೆ ಇರುವ ದ್ವಂದ್ವಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಸುಶ್ಮಾ ಸ್ವರಾಜ್ ಅವರನ್ನು ಟ್ರೋಲಿಸಿದ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ಅದರ ಬಗ್ಗೆ ಕೇವಲ ಬಾಯುಪಚಾರದ ಕೆಲವು ಮಾತುಗಳನ್ನಾಡಿ ಕೈತೊಳೆದುಕೊಂಡಿರುವುದು ಆ ಪಕ್ಷದೊಳಗೆ ನಡೆಯುತ್ತಿರುವ ಗಂಭೀರ ಒಳಜಗಳದ ಸಂಕೇತವಾಗಿದೆ. ಆದರೆ ಅದಕ್ಕಿಂತ ಮುಖ್ಯವಾಗಿ ಅಲ್ಪಸ್ವಲ್ಪಉದಾರವಾದಿ ಚಿಂತನೆಯನ್ನು ಉಳಿಸಿಕೊಂಡಿರುವ ಹಾಗೂ ವಿಶೇಷವಾಗಿ ಆಳವಾದ ಸಂಪರ್ಕ ಸಂಬಂಧಗಳನ್ನು ಸಾಧಿಸಿರುವ ಈ ಜಗತ್ತಿನಲ್ಲಿ ಅಧಿಕಾರದಲ್ಲಿರುವವರ ಮಾಹಿತಿ ಮತ್ತು ಅಭಿಪ್ರಾಯಗಳು ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂಬುದನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ. ಮಾಹಿತಿಗಳನ್ನು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹರಡಲು ಒಂದು ಮಾಧ್ಯಮ ಹಾಗೂ ವೇದಿಕೆಗಳ ಅಗತ್ಯವಿದ್ದೇ ಇದೆ. ಅಂತರ್ಜಾಲವು ಮಾಧ್ಯಮವಾಗಿದ್ದರೆ, ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ಗಳು ವೇದಿಕೆಗಳಾಗಿವೆ. ಆದರೆ ಈ ವೇದಿಕೆಗಳಲ್ಲಿ ಯೋಗ್ಯವಾದ ಮಾಹಿತಿ ಮತ್ತು ಸಾರವನ್ನು ಮಾತ್ರ ಉಳಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಸುಳ್ಳು ಸುದ್ದಿಗಳನ್ನು, ಬೆದರಿಕೆ ಗಳನ್ನು ಮತ್ತು ನಿಂದನೆಗಳನ್ನು ಹೇಗೆ ತಡೆಗಟ್ಟಬೇಕೆಂಬುದೇ ನಮ್ಮ ಮುಂದಿ ರುವ ದೊಡ್ಡ ಸವಾಲಾಗಿದೆ. ಈಗ ನಿಷೇಧಿಸಬೇಕಿರುವುದು ಯಾವುದನ್ನು? ಮಾಧ್ಯಮವನ್ನೋ? ವೇದಿಕೆಯನ್ನೋ? ಅಥವಾ ಸಾರವನ್ನೋ?
ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಸಂದೇಶಗಳ ಸಾರದ ಬಗ್ಗೆ ಶಾಸನ ಮಾಡುವುದು ಸುಲಭ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಅಸಾಧ್ಯ. ಉದಾಹರಣೆಗೆ, ಸ್ಟಾಲಿನ್ ಕಾಲದಲ್ಲಿ ರಶ್ಯಾದಲ್ಲಿ ಮಾಹಿತಿ ವಿನಿಮಯಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣವಿದ್ದರೂ, ಭಿನ್ನಮತೀಯರು ತಮ್ಮ ಕವನಗಳನ್ನು ಹಾಗೂ ಇತರ ಬರಹಗಳನ್ನು ಕೈಯಿಂದಲೇ ಪ್ರತಿಗಳನ್ನು ಮಾಡಿ ವಿತರಣೆ ಮಾಡುತ್ತಿದ್ದರು. ದಕ್ಷಿಣಾ ಆಫ್ರಿಕಾದಲ್ಲಿ ಅಸ್ತಿತ್ವದಲ್ಲಿದ್ದ ವರ್ಣಬೇಧದ ಯುಗದಲ್ಲಿ ನೆಲ್ಸನ್ ಮಂಡೇಲಾ ಟಾಯ್ಲೆಟ್ ಪೇಪರ್ ಮೇಲೆ ದಿನಾ ಕಥನಗಳನ್ನು ಬರೆದು ಹಂಚುತ್ತಿದ್ದರು. ಭಾರತದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದ ಕಾಲದಲ್ಲಿ ಪತ್ರಿಕೆಗಳು ತಮ್ಮ ಅಂಕಣಗಳನ್ನು ಖಾಲಿ ಬಿಡುವುದರ ಮೂಲಕ ಮತ್ತು ವಿಡಂಬನಾತ್ಮಕ ಶ್ರದ್ಧಾಂಜಲಿಗಳನ್ನು ಪ್ರಕಟಿಸುವುದರ ಮೂಲಕ ಪ್ರತಿಭಟಿಸಿದ್ದವು. ಹೀಗೆ ನಿರಂಕುಶ ಆಳ್ವಿಕೆಯ ವಿರುದ್ಧ ಜನರು ತಮ್ಮ ಅಭಿವ್ಯಕ್ತಿಗೆ ಹೇಗೋ ದಾರಿಗಳನ್ನು ಹುಡುಕಿಕೊಂಡು ಸರ್ವಾಧಿಕಾರಿ ಆಳ್ವಿಕೆಯನ್ನು ಕ್ರಮೇಣವಾಗಿ ನಿರ್ವೀರ್ಯಗೊಳಿಸಿದ ಇತಿಹಾಸವಿದೆ. ಆದರೆ ಮಿತಿ ಇಲ್ಲದಷ್ಟು ಬ್ಯಾಂಡ್ವಿಡ್ತ್ ಹಾಗೂ ಸುಲಭ ಬಳಕೆಯ ಸೆಲ್ಫೋನ್ಗಳು ಲಭ್ಯವಿರುವ ಮೊಬೈಲ್ ಇಂಟರ್ನೆಟ್ನ ಈ ಯುಗದಲ್ಲಿ ಸಂವಹನವಾಗುವ ಸಾರವನ್ನು ನಿಜಕ್ಕೂ ನಿಯಂತ್ರಿಸಬಹುದೇ? ನಿಯಂತ್ರಿಸಬಹುದಾದರೆ ಹೇಗೆ?- ಎಂಬುದು ಬೇರೆಯದೇ ಆದ ಚರ್ಚೆಯಾಗಿದೆ. ಹಳೆಯ ಮಾಧ್ಯಮ ಮತ್ತು ವೇದಿಕೆಗಳಿಗಿಂತ ಭಿನ್ನವಾಗಿರುವ ಅಂತರ್ಜಾಲ ವೇದಿಕೆಗಳಲ್ಲಿ ಪ್ರತಿಯೊಬ್ಬ ಓದುಗರೂ ಏಕಕಾಲದಲ್ಲಿ ಸಂಪಾದಕರೂ, ಅಭಿಪ್ರಾಯ ರೂಪಿಸುವವರೂ ಆಗಿರುತ್ತಾರೆ.
ಇಂದು ಕೋಟ್ಯಂತರ ಜನರು ದಿನನಿತ್ಯ ಪಠ್ಯ, ಚಿತ್ರ, ವ್ಯಂಗ್ಯಚಿತ್ರ, ಭಾವದರ್ಶಿ(ಎಮೋಜಿ), ಗ್ರಾಫಿಕ್ ಮತ್ತು ಧ್ವನಿಗಳುಳ್ಳ ಕೋಟ್ಯಂತರ ಮಿಶ್ರ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವಾಗ ಹೇಗೆ ತಾನೇ ಸಂದೇಶಗಳ ಸಾರವನ್ನು ನಿಯಂತ್ರಣದಲ್ಲಿಡಲು ಸಾಧ್ಯ? ಈ ಬಗೆಯ ಅಂತರ್ಜಾಲ ವೇದಿಕೆಗಳುಳ್ಳ ಸೇವೆಯನ್ನು ಪಡೆಯುವುದು ಸರಳವೂ, ಅನುಕೂಲಕಾರಿಯೂ ಆಗಿರುವಾಗ ಮತ್ತು ಸಾಕ್ಷರತೆಯು ವೇಗವಾಗಿ ಪ್ರಸರಿಸುತ್ತಿರುವಾಗ, ವ್ಯಕ್ತಿಯೊಬ್ಬರ ಟೀಕೆಯನ್ನು ಸರಕಾರವೊಂದು ನಿಯಂತ್ರಿಸುವುದು ಅಸಾಧ್ಯವಾದ ಕೆಲಸ. ಒಂದು ವೇಳೆ ಎಲ್ಲಾ ಸಂದೇಶ ಸಾರಗಳನ್ನು ನಿಯಂತ್ರಿಸಲೇ ಬೇಕೆಂದರೆ ಸರಕಾರಗಳು ಆರ್ಟಿಫಿಷಿಯಲ್ ಇಂಟೆಲೆಜೆನ್ಸ್ ಅಲ್ಗಾರಿದಮ್ (ಕಂಪ್ಯೂಟರೀಕೃತ ಕೃತಕ ಬುದ್ಧಿಮತ್ತೆಯ ವ್ಯಾಕರಣ)ದ ಮೊರೆ ಹೋಗಬೇಕಾಗುತ್ತದೆ. ಆದರೆ ಆ ತಂತ್ರಜ್ಞಾನವು ಇನ್ನೂ ಆರಂಭಿಕ ದೆಸೆಯಲ್ಲಿದೆ. ಸರಕಾರವು ಯಾವುದನ್ನೆಲ್ಲಾ ತಡೆಹಿಡಿಯಬೇಕೆಂದು ಬಯಸುತ್ತದೋ ಅದನ್ನೆಲ್ಲಾ ತಾನೇ ಸ್ವಯಂಚಾಲಿತವಾಗಿ ನಿಯಂತ್ರಿಸುವಷ್ಟು ತಂತ್ರಜ್ಞಾನ ಬೆಳೆಯಲು ಏನಿಲ್ಲವೆಂದರೂ ಕನಿಷ್ಠ ಹತ್ತು ವರ್ಷಗಳು ಬೇಕಾಗಬಹುದು. ಆದರೆ ಒಂದು ಚಿತ್ರ ಅಥವಾ ವ್ಯಂಗ್ಯಚಿತ್ರವು ನೀಡುವ ಭಾವನಾತ್ಮಕ ಅರ್ಥವೇನೆಂಬುದನ್ನು ಕಂಡುಹಿಡಿಯುವಂತೆ ಯಂತ್ರವೊಂದಕ್ಕೆ ತರಬೇತಿ ನೀಡಲು ಸಾಧ್ಯವೇ? ಇವೆಲ್ಲವೂ ಇನ್ನು ಕಾಲ್ಪನಿಕ ವೈಜ್ಞಾನಿಕ ಕಾದಂಬರಿಗಳಲ್ಲಿ ಮಾತ್ರ ಚರ್ಚಿತವಾಗುತ್ತಿದ್ದು ಸದ್ಯಕ್ಕೆ ಆ ತಂತ್ರಜ್ಞಾನದಿಂದ ಬಹುಬಳಕೆಯಲ್ಲಿರುವ ಸಂಚಾರ ಸಂದೇಶಗಳನ್ನು ಗುರುತುಹಿಡಿಯಲು ಮಾತ್ರ ಸಾಧ್ಯವಾಗುತ್ತಿದೆ. ಅಲ್ಲದೆ ವ್ಯಕ್ತಿಗಳು ವಿನಿಮಯ ಮಾಡಿಕೊಳ್ಳುವ ಸಂದೇಶಗಳು ಅವರು ಬಳಸುವ ಅಂತರ್ಜಾಲ ವೇದಿಕೆಗಳೂ ಸಹ ನೋಡಲಾಗದಂತೆ ಎನ್ಕ್ರಿಪ್ಟೆಡ್ (ನಿಗೂಢಲಿಪಿ) ಆಗಿದ್ದರೆ ಏನು ಮಾಡುವುದು? ಹೀಗಾಗಿ ಸರಕಾರಗಳಿಗೆ ವಾಟ್ಸ್ಆ್ಯಪ್, ಫೇಸ್ಬುಕ್ನಂತಹ ವೇದಿಕೆಗಳನ್ನು ನಿಷೇಧಿಸುವುದಕ್ಕಿಂತ ಅಂತರ್ಜಾಲ ಮಾಧ್ಯಮವನ್ನೇ ನಿಷೇಧಿಸುವುದು ಸುಲಭವೆನ್ನಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಹಲವಾರು ರಾಜ್ಯ ಸರಕಾರಗಳು ತಮ್ಮ ಪ್ರದೇಶಗಳಲ್ಲಿನ ಉದ್ವಿಗ್ನ ಮತ್ತು ಸಂಘರ್ಷ ಮಯ ಪರಿಸ್ಥಿತಿಗಳನ್ನು ನಿಭಾಯಿಸಲು, ತಾವೇ ರೂಪಿಸಿದ ಕಾನೂನುಗಳನ್ನು ಉಲ್ಲಂಘಿಸುತ್ತಾ, ಕೆಲವೊಮ್ಮೆ ಒಂದು ವಾರ ಅಥವಾ ಅದಕ್ಕೂ ಹೆಚ್ಚು ಅವಧಿಯವರೆಗೆ ಅಂತರ್ಜಾಲ ಮತ್ತು ಮೊಬೈಲ್ ಸೇವೆಗಳನ್ನೇ ನಿಲ್ಲಿಸಿವೆ. ಇದರ ತಕ್ಷಣದ ಪರಿಣಾಮವಾಗುವುದು ಇದೇ ಮಾಧ್ಯಮವನ್ನು ಬಳಸುವ ಯೋಗ್ಯ ಸುದ್ದಿ ಸೇವೆ ಮತ್ತು ವಾಣಿಜ್ಯ ವ್ಯವಹಾರಗಳ ಮೇಲೆ. ಅದೇನೇ ಇರಲಿ ಡಿಜಿಟಲ್ ತಂತ್ರಜ್ಞಾನವನ್ನು ತನ್ನ ಜನತೆಯ ಮೇಲೆ ಶತಾಯ ಗತಾಯ ಹೇರುತ್ತಿರುವ ಸರಕಾರವೊಂದು ಅಂತರ್ಜಾಲ ಮಾಧ್ಯಮದ ಮೇಲೆ ನಿಷೇಧ ಹೇರುವ ಸಾಹಸವನ್ನು ಮಾಡಲಾಗದು. ಇ-ಮೇಲ್, ಇ-ವ್ಯಾಪರ-ವಹಿವಾಟು, ಇ-ವಾಣಿಜ್ಯ, ಆಧಾರ್, ಹಣಕಾಸು ಪಾವತಿಗೆ ಸಂಬಂಧಪಟ್ಟ ಏಕೀಕೃತ ಪಾವತಿ ಸೇವೆಗಳು, ಇವೇ ಇನ್ನಿತ್ಯಾದಿ ಗಳಿಗೆಲ್ಲಾ ಸುಸಮರ್ಥವಾದ ಮತ್ತು ನಿರಂತರವಾದ ಅಂತರ್ಜಾಲ ಸಂಪರ್ಕದ ಅಗತ್ಯವಿರುತ್ತದೆ. ದೊಡ್ಡದೊಡ್ಡ ವಾಣಿಜ್ಯ ಸಂಸ್ಥೆಗಳು ಕೋಟಿಕೋಟಿ ರೂಪಾಯಿಗಳನ್ನು ಸುರಿದು ಈ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿವೆ. ಈ ರೀತಿ ಪರವಾನಿಗೆ ಪಡೆದ ಮಾನ್ಯತೆ ಹೊಂದಿದ ವಾಣಿಜ್ಯೋದ್ಯಮಕ್ಕೆ ಧಕ್ಕೆಯಾಗುವುದನ್ನು ಹೇಗೆ ಸಮರ್ಥಿಸಿ ಕೊಳ್ಳಲು ಸಾಧ್ಯ? ಹಾಗೇನಾದರೂ ಆದರೆ ನಮ್ಮ ದೇಶದ ಇಡೀ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳೇ ಸ್ಥಗಿತಗೊಳ್ಳುತ್ತವೆ.
ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್ನ್ಯಾಷನಲ್ ಎಕಾನಾಮಿಕ್ ರಿಲೇಷನ್ಸ್ (ಅಂತರ್ರಾಷ್ಟ್ರೀಯ ಆರ್ಥಿಕ ಸಂಬಂಧಗಳ ಭಾರತೀಯ ಸಂಶೋಧನಾ ಪರಿಷತ್ತು)ನ ಅಧ್ಯಯನದ ಪ್ರಕಾರ ಅಂತರ್ಜಾಲ ಸಂಪರ್ಕವು ಕೈಕೊಟ್ಟ ಕಾರಣದಿಂದಾಗಿ 2012-2017ರ ನಡುವೆ ಭಾರತಕ್ಕೆ ಅಂದಾಜು 20,000 ಕೋಟಿ ರೂ.ಗಳಷ್ಟು ನಷ್ಟ ವಾಗಿದೆ. ಸರಕಾರವು ತನಗೆ ಇಷ್ಟ ಬಂದ ಹಾಗೆ ಅಂತರ್ಜಾಲ ಸಂಪರ್ಕಗಳನ್ನು ಕೊಡಲು ಮತ್ತು ಕಡಿತಗೊಳಿಸಲು ಸಾಧ್ಯವಿಲ್ಲ. ಕಾನೂ ನನ್ನು ಸರಿಯಾಗಿ ಅನುಷ್ಠಾನಗೊಳಿಸದ ಅಸಮರ್ಥತೆಯು ಅಥವಾ ಕೆಲವರು ತಮ್ಮ ವರ್ತನೆಗಳನ್ನು ಬದಲಿಸಲು ಮಾಡುವಂತೆ ಮಾಡಲು ಸಾಧ್ಯವಾಗದಿರುವುದನ್ನು ನೆಪವಾಗಿಟ್ಟುಕೊಂಡು ಸರಕಾರವು ತನ್ನ ನಾಗರಿಕರ ಮೂಲಭೂತ ಹಕ್ಕುಗಳನ್ನು ಹರಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ಉಳಿಯುವ ಕೊನೇ ಆಯ್ಕೆಯೆಂದರೆ ಅಂತರ್ಜಾಲ ಮಾಧ್ಯಮವನ್ನು ನಿಷೇಧಿಸದೆ ಸುಳ್ಳು ಸುದ್ದಿಯ ವಾಹಕಗಳೇ ಆಗಿಬಿಟ್ಟಿರುವ ಅಂತರ್ಜಾಲ ವೇದಿಕೆಗಳನ್ನು ನಿಷೇಧಿಸುವುದು. ಇದರಿಂದ ಯಾವುದೇ ವಿಧವಾದ ಪ್ರತ್ಯಕ್ಷ ವಾಣಿಜ್ಯ ಪರಿಣಾಮವಾಗುವುದಿಲ್ಲ. ಆದರೆ ಎಲ್ಲಾ ರಾಜಕೀಯ ಪಕ್ಷಗಳು, ಅಧಿಕಾರಶಾಹಿ ಮತ್ತು ನ್ಯಾಯಾಂಗವೂ ಕೂಡಾ ತಮ್ಮ ಹೆಗ್ಗಳಿಕೆಗಳನ್ನು ಪ್ರಚಾರ ಮಾಡಲು ಅಥವಾ ಇತರರನ್ನು ಹೀಗೆಳೆಯಲು ವಿಸ್ತೃತವಾಗಿ ಫೇಸ್ಬುಕ್ ವೇದಿಕೆಯನ್ನು ಬಳಸುತ್ತಿದ್ದಾರೆ. ಈಗ ಅದನ್ನು ಹೇಗೆ ನಿಷೇಧಿಸಲು ಸಾಧ್ಯ? ಅಧಿಕೃತ ಸರಕಾರಿ ನೀತಿಗಳನ್ನು ವಾಟ್ಸ್ಆ್ಯಪ್ ವೇದಿಕೆಯ ಮೂಲಕ ಘೋಷಿಸುತ್ತಿರುವಾಗ ವಾಟ್ಸ್ ಆ್ಯಪ್ ಅನ್ನು ಹೇಗೆ ನಿಷೇಧಿಸಲು ಸಾಧ್ಯ? ಮಂತ್ರಿ ಮಹೋದಯರು ತಮ್ಮ ಅಧಿಕೃತ ಸಂಪರ್ಕಕ್ಕೆ ಟ್ವಿಟರ್ ವೇದಿಕೆಯನ್ನು ಬಳಸುತ್ತಿರುವಾಗ ಅದನ್ನು ಹೇಗೆ ನಿಷೇಧಿಸಲು ಸಾಧ್ಯ? ಒಂದು ವೇಳೆ ಹೊರದೇಶಗಳು ಏನೆಂದುಕೊಳ್ಳುತ್ತವೆ ಎಂಬ ಬಗ್ಗೆ ಕಿಂಚಿತ್ತೂ ಗಮನವಹಿಸದ ಚೀನಾ ಸರಕಾರದ ರೀತಿ ಪಾಶ್ಚಿಮಾತ್ಯ ದೇಶಗಳ ಅಂತರ್ಜಾಲ ವೇದಿಕೆಯನ್ನು ನಿಷೇಧಿಸಿ ಅದರ ಬದಲಿಗೆ ನಿಯಂತ್ರಿಸಲು ಸುಲಭ ಸಾಧ್ಯವಾಗುವ ಸ್ವದೇಶಿ ಪರ್ಯಾಯಗಳನ್ನು ರೂಪಿಸಿಕೊಳ್ಳಬಹುದು.
ಆದರೆ ಭಾರತ ಸರಕಾರಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳು ತಮ್ಮ ದೇಶದ ಪ್ರಜಾತಾಂತ್ರಿಕ ಗುಣಮಟ್ಟಗಳನ್ನು ಹೇಗೆ ತುಲನೆ ಮಾಡುತ್ತವೆ ಎಂಬುದು ಬಹುಮುಖ್ಯವಾದ ಅಂಶವಾಗುತ್ತದೆ. ಹೀಗಾಗಿ ಒಳಗಿನಿಂದ ತಾನು ಮುಕ್ತ ಹಾಗೂ ಉದಾರವಾದಿ ರಾಷ್ಟ್ರವಾಗಿಲ್ಲವಾದರೂ ತೋರಿಕೆಯಲ್ಲಿ ತಾನು ಉದಾರವಾದಿಯೆಂದೇ ಕಾಣಿಸಿಕೊಳ್ಳಲು ಬಯಸುತ್ತದೆ. ಭಾರತ ಪ್ರಭುತ್ವವು ಎದುರಿಸುತ್ತಿರುವ ಬಗೆಹರಿಸಲು ಅಸಾಧ್ಯವಾದ ದ್ವಂದ್ವವಿದು. ಅತ್ಯಂತ ವಿಷಯುಕ್ತ ಮತ್ತು ದ್ವೇಷಮಯ ಸುದ್ದಿ ಕಥನಗಳನ್ನು ಹರಿದಾಡಲು ಅನುಮತಿಸಿ ಉತ್ತೇಜಿಸಿದರೆ ಅದು ತಾನು ಹರಡಿಕೊಳ್ಳಲು ಬೇಕಾಗಿರುವ ಅತ್ಯುತ್ತಮ ಮಾಧ್ಯಮವನ್ನು ಹುಡುಕಿಕೊಳ್ಳುತ್ತದೆ. ಉದಾಹರಣೆಗೆ ಇವತ್ತಿನ ಸಂದರ್ಭದಲ್ಲಿ ಅದು ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲವಾಗಿವೆ. ಅಸಲಿ ಸಮಸ್ಯೆಯು ದ್ವೇಷಮಯ ಮತ್ತು ವಿಭಜನಕಾರಿ ರಾಜಕೀಯದಲ್ಲಿರುವಾಗ ಅದರ ವಾಹಕವನ್ನು ಮಾತ್ರ ತಡೆಗಟ್ಟುವುದರಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ.
ಕೃಪೆ: Economic and Political Weekly