ಉಡುಪಿ: ನಗರ ಸ್ಥಳೀಯ ಸಂಸ್ಥೆಗಳಲ್ಲಿ 1,55,336 ಮತದಾರರು
ಉಡುಪಿ, ಆ.3: ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ -ಉಡುಪಿ ನಗರಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್- ಆ.29ರಂದು ನಡೆಯುವ ಚುನಾವಣೆ ಯಲ್ಲಿ ಒಟ್ಟು 1,55,336 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಪು ಪುರಸಭೆಗೆ 2016ರ ಎ.24ರಂದು ಮೊದಲ ಚುನಾವಣೆ ನಡೆದಿರುವುದರಿಂದ ಈ ಬಾರಿ ಅಲ್ಲಿ ಚುನಾವಣೆ ಇರುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.
ಕಳೆದ ಜೂ. 27ರಂದು ಪ್ರಕಟಪಡಿಸಲಾದ ಅಂತಿಮ ಮತದಾರರ ಪಟ್ಟಿಗಳಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆಗೊಳ್ಳದೇ ಇದ್ದಲ್ಲಿ ಅವರು ನಾಮಪತ್ರ ಸಲ್ಲಿಸಲು ನಿಗದಿ ಪಡಿಸಿರುವ ಕೊನೆಯ ದಿನವರೆಗೂ -ಅಂದರೆ ಆ.17ರವರೆಗೆ- ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಲು ಅವಕಾಶ ವಿದೆ. ಮತದಾರರು ತಮ್ಮ ಅರ್ಜಿಗಳನ್ನು ತಾಲೂಕು ಕಚೇರಿಗಳಲ್ಲಿ ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾ ವೇಳಾಪಟ್ಟಿ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗೆ ಆ.10ರಂದು ಅಧಿಸೂಚನೆಯನ್ನು ಹೊರಡಿಸಲಾಗುವುದು. ಅಂದಿನಿಂದ ಆ.17ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು. ಆ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆ.20 ನಾಮಪತ್ರಗಳ ಹಿಂದೆಗೆತಕ್ಕೆ ಕೊನೆಯ ದಿನವಾಗಿರುತ್ತದೆ. ಆ.29ರ ಬುಧವಾರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಅಗತ್ಯಬಿದ್ದರೆ ಮರುಮತದಾನ ಆ.31ರಂದು ನಡೆಯಲಿದೆ. ಸೆ.1ರಂದು ಮತಗಳ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8ಗಂಟೆಗೆ ಪ್ರಾರಂಭಗೊಳ್ಳಲಿದೆ ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಿಸಿದರು.
ಮತಗಟ್ಟೆಗಳು: ಉಡುಪಿ ನಗರಸಭೆಯಲ್ಲಿ ಒಟ್ಟು 99 (88ಸಾಮಾನ್ಯ +11ಆಕ್ಸಿಲರಿ) ಮತಗಟ್ಟೆಗಳಿರುತ್ತವೆ. ಇವುಗಳಲ್ಲಿ 32+5 ಸೂಕ್ಷ್ಮ ಹಾಗೂ 56+6 ಸಾಮಾನ್ಯ ಮತಗಟ್ಟೆಗಳಾಗಿರುತ್ತವೆ. ಕುಂದಾಪುರ ಪುರಸಭೆಯಲ್ಲಿ 23 ಮತಗಟ್ಟೆಗಳಿದ್ದು 5 ಸೂಕ್ಷ್ಮ ಹಾಗೂ 18 ಸಾಮಾನ್ಯ, ಕಾರ್ಕಳ ಪುರಸಭೆಯಲ್ಲಿ 23 ಮತಗಟ್ಟೆಗಳಿದ್ದು ಎಲ್ಲವೂ ಸಾಮಾನ್ಯ ಮತಗಟ್ಟೆಗಳು. ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ 16 ಮತಗಟ್ಟೆಗಳಿದ್ದು ಇವುಗಳಲ್ಲಿ 2 ಅತಿಸೂಕ್ಷ್ಮ, 13 ಸೂಕ್ಷ್ಮ ಹಾಗೂ ಒಂದು ಸಾಮಾನ್ಯ ಮತಗಟ್ಟೆಗಳು.
ಈ ಬಾರಿಯ ಮತದಾನಕ್ಕೆ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತದೆ. ಚುನಾವಣಾ ಆಯೋಗ ಈಗಾಗಲೇ ಜಿಲ್ಲೆಯ ಬೇಡಿಕೆಯಂತೆ 200 ಬ್ಯಾಲೆಟ್ ಯುನಿಟ್ ಹಾಗೂ 200 ಕಂಟ್ರೋಲ್ ಯುನಿಟ್ಗಳನ್ನು ಸರಬರಾಜು ಮಾಡಿದೆ. ಬಿಇಎಲ್ ಸಂಸ್ಥೆಯ ಪ್ರತಿನಿಧಿಗಳ ಮೂಲಕ ಈಗಾಗಲೇ ಪ್ರಥಮ ಹಂತದ ಪರಿಶೀಲನೆಯನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಾಮಪತ್ರ ಸ್ವೀಕಾರ: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣಾ ಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 35 ವಾರ್ಡುಗಳ ನಾಮಪತ್ರಗಳನ್ನು ಉಡುಪಿ ನಗರಸಭೆಯಲ್ಲೇ ಸ್ವೀಕರಿಸಲಾಗುತ್ತದೆ. ಇಲ್ಲಿ ಐದು ಮಂದಿ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಎಲ್ಲಾ 16 ವಾರ್ಡುಗಳ ನಾಮಪತ್ರಗಳನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ ಸ್ವೀಕರಿಸಲಾಗುತ್ತದೆ. ಇಲ್ಲಿ ಇಬ್ಬರು ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುವರು.
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 1ರಿಂದ 8ನೇ ವಾರ್ಡಿನ ನಾಮಪತ್ರ ಗಳನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, 9ರಿಂದ 16 ವಾರ್ಡುಗಳ ನಾಮಪತ್ರಗಳನ್ನು ತಾಲೂಕು ಕಚೇರಿಯಲ್ಲಿ ಹಾಗೂ 17ರಿಂದ 23 ವಾರ್ಡುಗಳ ಅಭ್ಯರ್ಥಿಗಳ ನಾಮಪತ್ರವನ್ನು ಕುಂದಾಪುರ ಪುರಸಭೆಯಲ್ಲಿ ಸ್ವೀಕರಿಸಲಾಗುತ್ತದೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 1ರಿಂದ 8ನೇ ವಾರ್ಡಿನ ನಾಮಪತ್ರ ಗಳನ್ನು ಕಾರ್ಕಳ ವಿಮಿ ವಿಧಾನಸೌಧ ತಾಲೂಕು ಕಚೇರಿಯಲ್ಲಿ, 9ರಿಂದ 16 ವಾರ್ಡುಗಳ ನಾಮಪತ್ರಗಳನ್ನು ತಾಲೂಕು ಕಚೇರಿ ಹಳೆಕಟ್ಟಡದಲ್ಲ್ಲಿ ಹಾಗೂ 17ರಿಂದ 23 ವಾರ್ಡುಗಳ ಅಭ್ಯರ್ಥಿಗಳ ನಾಮಪತ್ರಗಳನ್ನು ಮಿನಿ ವಿಧಾನಸೌಧ ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ.
ಚುನಾವಣಾ ಕರ್ತವ್ಯಕ್ಕೆ ಒಟ್ಟು 966 ಮಂದಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಉಡುಪಿ ನಗರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ಗೆ ಉಡುಪಿಯ ಸೈಂಟ್ ಸಿಸಿಲೀಸ್ ಹೈಸ್ಕೂಲ್ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರವಾಗಿದೆ. ಕುಂದಾಪುರ ಪುರಸಭೆಗೆ ಕುಂದಾಪುರದ ಮಿನಿ ವಿಧಾನಸೌಧದ ತಾಲೂಕು ಕಚೇರಿ ಹಾಗೂ ಕಾರ್ಕಳ ಪುರಸಭೆಗೆ ಕಾರ್ಕಳ ಮಿನಿ ವಿಧಾನಸೌಧದ ತಾಲೂಕು ಕಚೇರಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.
ಮತದಾರರ ಸಂಖ್ಯೆ
ಉಡುಪಿ ನಗರಸಭೆ: ಒಟ್ಟು ವಾರ್ಡುಗಳು-35. ಪುರುಷ ಮತದಾರರು -48,069, ಮಹಿಳಾ ಮತದಾರರರು- 50,430, ಇತರೆ-1,ಒಟ್ಟು- 98,500
ಕುಂದಾಪುರ ಪುರಸಭೆ: ಒಟ್ಟು ವಾರ್ಡು-23. ಪುರುಷ ಮತದಾರರರು- 11,241, ಮಹಿಳಾ ಮತದಾರರು- 11,923, ಒಟ್ಟು-23,164.
ಕಾರ್ಕಳ ಪುರಸಭೆ: ಒಟ್ಟು ವಾರ್ಡು-23. ಪುರುಷ ಮತದಾರರು-9,820, ಮಹಿಳಾ ಮತದಾರರು-10,651, ಒಟ್ಟು-20,471.
ಸಾಲಿಗ್ರಾಮ ಪಟ್ಟಣ ಪಂಚಾಯತ್: ಒಟ್ಟು ವಾರ್ಡು-16. ಪುರುಷ ಮತದಾರರರು-6,321, ಮಹಿಳಾ ಮತದಾರರು-6,880, ಒಟ್ಟು-13,201.
ಒಟ್ಟು: ವಾರ್ಡುಗಳು-97. ಪುರುಷ ಮತದಾರರು-75,451, ಮಹಿಳಾ ಮತದಾರರು-79,884, ಇತರೆ-1, ಒಟ್ಟು 1,55,336.
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ
ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ತಕ್ಷಣದಿಂದ ಜಾರಿಗೆ ಬಂದಿದ್ದು, ಸೆ.1ರವರೆಗೆ ಇದು ಜಾರಿಯಲ್ಲಿರುತ್ತದೆ. ಪ್ರತಿ ಅಭ್ಯರ್ಥಿ ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ನಗರಸಭಾ ಅಭ್ಯರ್ಥಿಗೆ ಚುನಾವಣಾ ಆಯೋಗ ನಿಗದಿ ಪಡಿಸಿದ ಚುನಾವಣಾ ವೆಚ್ಚದ ಮಿತಿ 2ಲಕ್ಷ ರೂ.ಗಳಾದರೆ, ಪುರಸಭಾ ಅಭ್ಯರ್ಥಿಗೆ 1.50 ಲಕ್ಷ ಹಾಗೂ ಪಟ್ಟಣ ಪಂಚಾಯತ್ ಅಭ್ಯರ್ಥಿಗೆ 1.00 ಲಕ್ಷ ರೂ. ಎಂದು ಜಿಲ್ಲಾಧಿಕಾರಿ ವಿವರಿಸಿದರು.