ದನ ಕಳವು ಪ್ರಕರಣ: ಇನ್ನೋರ್ವ ಆರೋಪಿ ಬಂಧನ
ಮಂಗಳೂರು, ಆ.3: ಪಾಂಡೇಶ್ವರ ಮಹಾಲಿಂಗೇಶ್ವರ ದೇವಳಕ್ಕೆ ಸೇರಿದ 2 ದನ ಹಾಗೂ ಕರುವನ್ನು ಕಳ್ಳತನ ಮಾಡಿದ ಆರೋಪಿಯನ್ನು ಮಂಗಳೂರು ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಕಸಬಾ ಬೆಂಗ್ರೆ ನಿವಾಸಿ ಅಹ್ಮದ್ ಕಬೀರ್ (30) ಬಂಧಿತ ಆರೋಪಿ. ಈತನ ಸಹಚರ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್ನನ್ನು ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಕಳ್ಳತನ ಮಾಡಲು ಉಪಯೋಗಿಸಿದ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದರು.
ಆರೋಪಿಗಳು ಜು.5ರಂದು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡ್ಸ್ ಶೆಡ್ ಎಂಬಲ್ಲಿ ಮೇಯುತ್ತಿದ್ದ 2 ದನ ಹಾಗೂ ಕರುವನ್ನು ಕಳವು ಕಳವು ಮಾಡಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಪಾಂಡೇಶ್ವರ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿ ಅಹ್ಮದ್ ಕಬೀರ್ ವಿರುದ್ಧ ಈ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ ಠಾಣೆಗಳಲ್ಲಿ ಹಾಗೂ ಮಂಗಳೂರು ನಗರದ ಬಜ್ಪೆ, ಉಳ್ಳಾಲ, ಕೊಣಾಜೆ ಮತ್ತು ದ.ಕ. ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಗಳಲ್ಲಿ ದನ ಕಳ್ಳತನಕ್ಕೆ ಸಂಬಂಧಪಟ್ಟಂತೆ 13 ಪ್ರಕರಣಗಳು, ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಈತನು ಈ ಹಿಂದೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಂಗಳ ಪುಣ್ಯಕೋಟಿ ಗೋಶಾಲೆಯಿಂದ ದನ ಕಳ್ಳತನ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದನು. ಪ್ರಕರಣದ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಕೊಣಾಜೆ ಹಾಗೂ ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯವು ಈತನ ವಿರುದ್ಧ ವಾರಂಟ್ ಹೊರಡಿಸಿದೆ.
ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್ ಸುಂದರ್ ಎಚ್.ಎಂ ಮತ್ತು ಎಚ್.ಡಿ. ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.