ಅಪ್ರಾಪ್ತ ಬಾಲಕಿಯ ಅತ್ಯಾಚಾರ: ತಂದೆ ಸೇರಿ ಇಬ್ಬರ ಬಂಧನ
ಕೊಣಾಜೆ, ಆ. 3: ಕೊಣಾಜೆ ಠಾಣೆ ವ್ಯಾಪ್ತಿಯ ಪಾವೂರು ಬಳಿ ಅಪ್ರಾಪ್ತೆ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಹಾಗೂ ಆರೋಪಿಯೋರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಪೋಸ್ಕೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಾಲಕಿಯ ತಂದೆ ಹನುಮಂತ ಲಗ್ಗಾಪುರ ಹಾಗೂ ಪಾವೂರು ಗ್ರಾಮದ ಕಿಲ್ಲೂರು ನಿವಾಸಿ ವಿವೇಕ್ ಎಂದು ಗುರುತಿಸಲಾಗಿದೆ.
ವಿವರ: ಅಪ್ರಾಪ್ತ ಬಾಲಕಿ ಮೂಲತಃ ಬಾಗಲಕೋಟೆಯವಳಾಗಿದ್ದು, ಏಳು ವರ್ಷಗಳ ಹಿಂದೆ ಕುಟುಂಬ ಸಮೇತ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಪಾವೂರು ಗ್ರಾಮದ ಕಂಬಳಪದವು ಎಂಬಲ್ಲಿ ವಿನ್ಸೆಂಟ್ ಲೋಬೋ ಎಂಬವರ ಮನೆಯಲ್ಲಿ ವಾಸವಿದ್ದರು. ಕಳೆದ ವರ್ಷದಿಂದ ಕಿಲ್ಲೂರಿನ ಕಿರಣ್ ಶೆಟ್ಟಿ ಎಂಬವರ ಬಾಡಿಗೆಮನೆಯಲ್ಲಿ ವಾಸವಾಗಿದ್ದರು. ಬಾಲಕಿ ಇಲ್ಲಿಯೇ ಸಮೀಪದ ಶಾಲೆಯಲ್ಲಿ 9ನೇ ತರಗತಿ ವರೆಗೆ ಕಲಿತು ಬಳಿಕ ಬೇಸಿಗೆ ರಜೆಯಲ್ಲಿ ಊರಿಗೆ ಹೋಗಿದ್ದ ಸಂದರ್ಭ ತನ್ನ ಚಿಕ್ಕಮ್ಮನ ಬಳಿ ತಂದೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಬಾಗಲಕೋಟೆ ಠಾಣೆಗೆ ದೂರು ನೀಡಿ ಬಳಿಕ ಪ್ರಕರಣವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸರು
ಬಳಿಕ ಪ್ರಕರಣವನ್ನು ಘಟನೆ ನಡೆದ ಮಂಗಳೂರಿನ ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಕೊಣಾಜೆ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಬಾಲಕಿಯನ್ನು ಕೌನ್ಸಿಲಿಂಗ್ ನಡೆಸಿದಾಗ ಸಮರ್ಪಕವಾದ ಉತ್ತರ ದೊರಕದ ಕಾರಣ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಬಳಿಕ ಅತ್ಯಾಚಾರ ನಡೆದಿರುವ ಬಗ್ಗೆ ದೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ಎರಡನೆಯ ಬಾರಿ ಮಕ್ಕಳ ಕಲ್ಯಾಣ ಇಲಾಖೆ ವಶಕ್ಕೆ ಪಡೆದು ಕೌನ್ಸೆಲಿಂಗ್ ನಡೆಸಿದಾಗ ಕಿಲ್ಲೂರಿನ ವಿವೇಕ್ ಶೆಟ್ಟಿ ಬಗ್ಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಆಕೆಯ ಮಾಹಿತಿಯ ಮೇರೆಗೆ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಕೊಣಾಜೆ ಠಾಣಾಧಿಕಾರಿ ಅಶೋಕ್ ಪಿ ನೇತೃತ್ವದಲ್ಲಿ ಹೆಡ್ಕಾನ್ಸ್ಟೇಬಲ್ ಸುಕಲತಾ, ಸಿಬ್ಬಂಂದಿ ಅಶೋಕ್, ಕಂಕನಾಡಿ ಠಾಣೆಯ ಎಸ್ಐ ಜಾನಕಿ ತನಿಖೆಯಲ್ಲಿ ಭಾಗವಹಿಸಿದ್ದರು.