ಯಾರಿಗೆ ಕ್ರೆಡಿಟ್ ಕಾರ್ಡ್ ನೀಡಬೇಕು ಎನ್ನುವುದನ್ನು ಬ್ಯಾಂಕುಗಳು ಹೇಗೆ ನಿರ್ಧರಿಸುತ್ತವೆ...?
ಹಣಪಾವತಿಗಳನ್ನು ಮಾಡಲು ಕ್ರೆಡಿಟ್ ಕಾರ್ಡ್ ಗಳು ಸೂಕ್ತ ಸಾಧನಗಳಾಗಿವೆ. ಆದರೆ ಬ್ಯಾಂಕುಗಳು ಯಾರಿಗೆಂದರೆ ಅವರಿಗೆ ಈ ಕಾರ್ಡ್ಗಳನ್ನು ನೀಡುವುದಿಲ್ಲ. ಕ್ರೆಡಿಟ್ ಕಾರ್ಡ್ ಅರ್ಜಿಗಳಿಗೆ ಸಮ್ಮತಿಯ ಮುದ್ರೆಯೊತ್ತುವ ಮೊದಲು ಹಲವಾರು ಅಂಶಗಳನ್ನು ಅವು ಪರಿಶೀಲಿಸುತ್ತವೆ. ಇಲ್ಲಿವೆ ಕ್ರೆಡಿಟ್ ಕಾರ್ಡ್ಗಳನ್ನು ಪಡೆದುಕೊಳ್ಳುವ ಕುರಿತು ಕೆಲವು ಮಾಹಿತಿಗಳು....
♦ ಕ್ರೆಡಿಟ್ ಸ್ಕೋರ್
ಕ್ರೆಡಿಟ್ ಕಾರ್ಡ್ ಮಂಜೂರು ಮಾಡುವಲ್ಲಿ ಅರ್ಜಿದಾರನ ಕ್ರೆಡಿಟ್ ಸ್ಕೋರ್ ಮುಖ್ಯಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಕ್ರೆಡಿಟ್ ಕಾರ್ಡ್ ದೊರೆಯುವ ಸಾಧ್ಯತೆಗಳು ಹೆಚ್ಚು. ಯಾವುದೇ ಕ್ರೆಡಿಟ್ ಹಿಸ್ಟರಿ ಹೊಂದಿಲ್ಲದವರು ಅಥವಾ ಹಿಂದೆಂದೂ ಸಾಲಗಳನ್ನು ಪಡೆದುಕೊಳ್ಳದಿರುವವರಿಗೆ ಕ್ರೆಡಿಟ್ ಕಾರ್ಡ್ಗಳನ್ನು ನೀಡುವುದರಿಂದ ಬ್ಯಾಂಕುಗಳು ನುಣುಚಿಕೊಳ್ಳುತ್ತವೆ. ಹೀಗಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಕಾಯ್ದುಕೊಳ್ಳಲು ಕ್ರೆಡಿಟ್ ಕಾರ್ಡ್ ಬಿಲ್ಗಳು ಸಕಾಲದಲ್ಲಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ ನಿಯಮಿತ ಅವಧಿಗಳಿಗೆ ಕ್ರೆಡಿಟ್ ರಿಪೋರ್ಟ್ಗಳನ್ನು ಪಡೆದುಕೊಂಡು ಅವುಗಳಲ್ಲಿ ತಪ್ಪುಗಳಿದ್ದರೆ ಕ್ರೆಡಿಟ್ ಕಾರ್ಡ್ ನೀಡಿದ ಸಂಸ್ಥೆಗೆೆ ಮತ್ತು ಕ್ರೆಡಿಟ್ ಬ್ಯೂರೊಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು.
ಕ್ರೆಡಿಟ್ ಕಾರ್ಡ್ ಮಿತಿಯ ಶೇ.30-ಶೇ.40ಕ್ಕಿಂತ ಹೆಚ್ಚಿನ ಹಣಕಾಸು ಬಳಸಿಕೊಳ್ಳುವ ಗೋಜಿಗೆ ಹೋಗಬಾರದು,ಹಾಗೆ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಅಲ್ಲದೆ ನೀವು ಭದ್ರತೆ ನೀಡಿರುವ ಇತರರ ಸಾಲಗಳ ಮೇಲೂ ನಿಗಾಯಿರಿಸಬೇಕು,ಏಕೆಂದರೆ ಅವರು ಮರುಪಾವತಿಯನ್ನು ವಿಳಂಬಿಸಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ನ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.
♦ ಆದಾಯ
ನಿಮ್ಮ ಮಾಸಿಕ ಆದಾಯವು ಬ್ಯಾಂಕು ನಿಗದಿಗೊಳಿಸಿರುವ ಮಾನದಂಡಕ್ಕೆ ಅನುಗುಣವಾಗಿಲ್ಲದಿದ್ದರೆ ನೀವು ಇತರ ಅರ್ಹತಾ ಷರತ್ತುಗಳನ್ನು ಪೂರೈಸಿದ್ದರೂ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಆದರೆ ಕಾರ್ಡ್ನ ವಿಧಕ್ಕೆ ಅನುಗುಣವಾಗಿ ಈ ಮಾನದಂಡಗಳು ವಿಭಿನ್ನವಾಗಿರುತ್ತವೆ. ಹೆಚ್ಚಿನ ಸೌಲಭ್ಯಗಳಿರುವ ಕಾರ್ಡ್ಗಳಿಗೆ ಹೆಚ್ಚಿನ ಆದಾಯ ಹೊಂದಿರುವುದು ಅಗತ್ಯವಾಗಿರುತ್ತದೆ.
♦ ವೃತ್ತಿ
ಕ್ರೆಡಿಟ್ ಕಾರ್ಡ್ ಅರ್ಜಿ ಮಂಜೂರಾಗುವಲ್ಲಿ ನಿಮ್ಮ ವೃತ್ತಿಯು ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮಂಜೂರು ಮಾಡುವಾಗ ಸ್ವಉದ್ಯೋಗಿಗಳಿಗಿಂತ ವೇತನದಾರರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಹೆಚ್ಚು ಪರಿಚಿತವಲ್ಲದ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಕಂಪೆನಿಗಳ ಉದ್ಯೋಗಿಗಳಿಗೆ ಆದ್ಯತೆ ನೀಡಲಾಗುವುದಿಲ್ಲ.
♦ ಸ್ಥಳ
ಅರ್ಜಿದಾರನ ವಿಳಾಸವೂ ಕ್ರೆಡಿಟ್ ಕಾರ್ಡ್ ಅರ್ಜಿಯ ವಿಲೇವಾರಿಯಲ್ಲಿ ಪರಿಣಾಮ ಬೀರುತ್ತದೆ. ಬ್ಯಾಂಕುಗಳು ತಮ್ಮ ಸೇವಾವ್ಯಾಪ್ತಿಯಲ್ಲಿನ ಕೆಲವು ಪ್ರದೇಶಗಳನ್ನು ’ನಕಾರಾತ್ಮಕ ಪ್ರದೇಶಗಳು’ ಅಥವಾ ‘ಕಪ್ಪು ಪಟ್ಟಿಯಲ್ಲಿನ ಪ್ರದೇಶಗಳು’ಎಂದು ಗುರುತಿಸಿರುತ್ತವೆ. ಅರ್ಜಿದಾರರು ಇತರ ಮಾನದಂಡಗಳನ್ನು ಪೂರೈಸಿದ್ದರೂ ಇಂತಹ ಪ್ರದೇಶಗಳಿಂದ ಬಂದ ಅರ್ಜಿಗಳನ್ನು ಬ್ಯಾಂಕುಗಳು ತಿರಸ್ಕರಿಸಬಹುದು.
♦ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್
ಅರ್ಹತೆ ಸಂಬಂಧಿ ಕಾರಣಗಳಿಂದ ಕ್ರೆಡಿಟ್ ಕಾರ್ಡ್ ಪಡೆಯಲು ವಿಫಲಗೊಂಡವರು ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ತಮ್ಮಲ್ಲಿರಿಸುವ ನಿರಖು ಠೇವಣಿಗಳ ಆಧಾರದಲ್ಲಿ ಬ್ಯಾಂಕುಗಳು ಈ ವಿಧದ ಕ್ರೆಡಿಟ್ ಕಾರ್ಡ್ಗಳನ್ನು ನೀಡುತ್ತವೆ. ಈ ಕಾರ್ಡ್ ನೀಡುವಾಗ ಅರ್ಜಿದಾರನ ಆದಾಯ,ವೃತ್ತಿ,ವಾಸಸ್ಥಳ ಅಥವಾ ಕ್ರೆಡಿಟ್ ಸ್ಕೋರ್ ಇವ್ಯಾವುದೂ ಬ್ಯಾಂಕುಗಳಿಗೆ ಮುಖ್ಯವಾಗುವುದಿಲ್ಲ.
ಕ್ರೆಡಿಟ್ ಸ್ಕೋರ್ ಸರಿಪಡಿಸಿಕೊಳ್ಳಲು ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳು ಅತ್ಯುತ್ತಮ ಮಾರ್ಗಗಳಾಗಿವೆ. ಈ ಕಾರ್ಡ್ಗಳ ಮೂಲಕ ನಡೆಸುವ ವಹಿವಾಟುಗಳಿಗೆ ಅವುಗಳ ಮರುಪಾವತಿಯ ದಿನಾಂಕದವರೆಗೆ ಬ್ಯಾಂಕು ಹಣಕಾಸು ಒದಗಿಸುವುದರಿಂದ ಅದನ್ನು ಸಾಲವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕುವಾಗ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನೂ ಪರಿಗಣಿಸಲಾಗುತ್ತದೆ. ಹೀಗಾಗಿ ತಮ್ಮ ಕಳಪೆ ಕ್ರೆಡಿಟ್ ಸ್ಕೋರ್ನಿಂದಾಗಿ ಕ್ರೆಡಿಟ್ ಕಾರ್ಡ್ ತಿರಸ್ಕರಿಸಲ್ಪಟ್ಟವರು ಅದನ್ನು ಸುಧಾರಿಸಲು ಈ ಕಾರ್ಡ್ಗಳನ್ನು ಬಳಸಬಹುದು ಮತ್ತು ನಂತರ ರೆಗ್ಯುಲರ್ ಕ್ರೆಡಿಟ್ ಕಾರ್ಡ್ಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬಹುದು.