‘ಪಾಪ ನಿವೇದನೆ’ ಸಂಸ್ಕಾರದ ನಿಂದನೆ ಸಲ್ಲದು
ಕೇರಳದ ಮಲಂಕರ ಒರ್ಥೊಡೊಕ್ಸ್ ಸಿರಿಯನ್ ಕ್ರೈಸ್ತ ಧರ್ಮಸಭೆಯ ನಾಲ್ವರು ಯಾಜಕರು ತಮ್ಮ ಬಳಿ ಗುಪ್ತವಾಗಿ ಪಾಪ ನಿವೇದನೆ (ತಪ್ಪೊಪ್ಪಿಗೆ)ಯನ್ನು ಮಾಡಿಕೊಂಡ ಗೃಹಿಣಿಯೋರ್ವಳ ಖಾಸಗಿ ಮಾಹಿತಿಯನ್ನು ಬಳಸಿಕೊಂಡು, ಅದನ್ನು ಬಹಿರಂಗಪಡಿಸುವುದಾಗಿ ಅವಳನ್ನು ಬೆದರಿಸಿ, ಆಕೆಯೊಡನೆ ಲೈಂಗಿಕ ಸಂಬಂಧ ಬೆಳೆಸಿದ್ದ ಆರೋಪ ಹೊತ್ತಿದ್ದು ಈಗಾಗಲೇ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ. ಕೇರಳದ ಕ್ರೈಸ್ತ ಧರ್ಮಭಗಿನಿಯೊಬ್ಬಳು ಪಂಜಾಬ್ನ ಜಲಂಧರ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ತನ್ನ ಮೇಲೆ ಬಹಳಷ್ಟು ಸಲ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದಾನೆಂದು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾಳೆ. ಈ ಎರಡೂ ಘಟನೆಗಳ ಬಗ್ಗೆ ಪೊಲೀಸ್ ವಿಚಾರಣೆಯು ಪ್ರಗತಿಯಲ್ಲಿರುವಾಗ, ಈ ಘಟನೆಗಳ ಬಗ್ಗೆ ಅಧ್ಯಯನ ನಡೆಸಿದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ‘‘ಚರ್ಚ್ಗಳಲ್ಲಿ ಪಾದ್ರಿಗಳು ತಪ್ಪೊಪ್ಪಿಗೆಯನ್ನು ಮಹಿಳೆಯರನ್ನು ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಳ್ಳಲು ಹಾಗೂ ಪುರುಷರಿಂದ ಹಣ ಕೀಳಲು ಬಳಸಿಕೊಳ್ಳುತ್ತಾರೆ. ಆದ್ದರಿಂದ ತಪ್ಪೊಪ್ಪಿಗೆಯ ಪದ್ಧತಿಯನ್ನೇ ರದ್ದು ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ನೀಡಿದ ವರದಿಯಲ್ಲಿ ಶಿಫಾರಸು ಮಾಡಿರುವುದು ವರದಿಯಾಗಿದೆ.
ಮೇಲಿನ ಎರಡೂ ಘಟನೆಗಳ ಸತ್ಯಾಸತ್ಯತೆಯನ್ನು ಅರಿಯಲು, ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಖಂಡಿತವಾಗಿಯೂ ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆಯಾಗಬೇಕು. ಆದರೆ, ಲೈಂಗಿಕ ದೌರ್ಜನ್ಯದ ಆರೋಪ ಹೊತ್ತವರು ಕಾನೂನಿನ ಕುಣಿಕೆಯಲ್ಲೇ ಇರುವಾಗ, ‘‘ಚರ್ಚ್ಗಳಲ್ಲಿ ತಪ್ಪೊಪ್ಪಿಗೆಯನ್ನು ರದ್ದುಪಡಿಸಬೇಕು’’ ಎಂಬ ಹೊಸ ರಾಗ ಹೊರಡಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಶಿಫಾರಸು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎಳೆದಂತಾಗಿದೆ. ಮಾಡಿದ ಪಾಪಗಳಿಗೆ ಕ್ಷಮೆಯನ್ನು ಯಾಚಿಸುವುದು - ಪಾಪ ನಿವೇದನೆ ಅಥವಾ ತಪ್ಪೊಪ್ಪಿಗೆಯ ಪದ್ಧತಿ ಕ್ರೈಸ್ತ ಧರ್ಮದೊಡನೆ ಉಗಮವಾಯಿತು. ‘‘ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು’’ (ಯೋವಾನ್ನ 20:23) ಎಂದು ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ನೀಡಿದ ಆದೇಶವು ಬೈಬಲ್ ಗ್ರಂಥದಲ್ಲಿ ಹಲವಾರು ಬಾರಿ ಪ್ರತಿಧ್ವನಿಸುತ್ತದೆ. ‘‘ಒಬ್ಬರಿಗೊಬ್ಬರು ಪಾಪಗಳನ್ನು ಒಪ್ಪಿಕೊಳ್ಳಿರಿ. ಆಗ ನೀವು ಸ್ವಸ್ಥರಾಗುತ್ತೀರಿ’’ (ಯಕೋಬ 5:16) ಎಂಬುದು ಆದಿ ಕ್ರೈಸ್ತ ಸಮಾಜದ ವಿಶ್ವಾಸವಾಗಿತ್ತು. ಶಿಷ್ಯರಿಗೆ ನೀಡಿದ ಆದೇಶವು ಅವರ ಸಹವರ್ತಿಗಳಾದ ದೀಕ್ಷೆ ಪಡೆದ ಧರ್ಮಾಧ್ಯಕ್ಷರು ಹಾಗೂ ಯಾಜಕರಿಗೂ ಅನ್ವಯವಾಗುತ್ತದೆ ಎಂಬುದು ಧರ್ಮಸಭೆಯ ವಿಶ್ವಾಸ. ಆರಂಭದ ಶತಮಾನಗಳಲ್ಲಿ ಸಮುದಾಯದ ಮುಂದೆ ಬಹಿರಂಗ ತಪ್ಪೊಪ್ಪಿಗೆ ನಡೆಯುತ್ತಿತ್ತು. ನಂತರದ ಶತಮಾನಗಳಲ್ಲಿ ಇದು ವೈಯಕ್ತಿಕ ಹಾಗೂ ಖಾಸಗಿ ತಪ್ಪೊಪ್ಪಿಗೆಯ ರೂಪವನ್ನು ಪಡೆದು ಕ್ರಿಸ್ತಶಕ ಏಳನೇ ಶತಮಾನದ ಹೊತ್ತಿಗೆ ಇದು ಕ್ರೈಸ್ತ ಧರ್ಮಸಭೆಯಲ್ಲಿ ಸರ್ವವ್ಯಾಪಿಯಾಗಿ ಇಂದಿನವರೆಗೂ ಭಕ್ತಿ, ಶೃದ್ಧೆಯಿಂದ ನಡೆದು ಬಂದಿದೆ.
ಕ್ರೈಸ್ತ ಕೆಥೊಲಿಕ್ ಧರ್ಮಸಭೆಯ ಏಳು ಸಂಸ್ಕಾರಗಳಲ್ಲಿ ಪಾಪ ನಿವೇದನೆಯೂ ಒಂದು. ಶಿಶುವಾಗಿದ್ದಾಗ ಸ್ನಾನ ದೀಕ್ಷೆ, ಬಾಲ್ಯಾವಸ್ಥೆಯಲ್ಲಿ ಪರಮ ಪ್ರಸಾದ, ವಯಸ್ಕನಾಗಿ ಬೆಳೆಯಲಾರಂಭಿಸಿದಾಗ ದೃಢೀಕರಣ, ವಿವಾಹ, ಯಾಜಕ ದೀಕ್ಷೆ ಹಾಗೂ ಅಸ್ವಸ್ಥತೆಯಲ್ಲಿ ಅಭ್ಯಂಗ -ಇವು ಇತರ ಸಂಸ್ಕಾರಗಳು. ಮಗುವು ಸ್ವಂತ ಚಿಂತನೆಯನ್ನು ಮಾಡಲು, ವಿಚಾರಗಳನ್ನು ಅರಿಯಲು ಹಾಗೂ ಒಳಿತು-ಕೆಡುಕುಗಳ ನಡುವಿನ ವ್ಯತ್ಯಾಸ ಅರಿಯಲು ಶಕ್ತನಾದಾಗ ಪಾಪ ನಿವೇದನೆಯ ಸಂಸ್ಕಾರವನ್ನು ನೀಡಲಾಗುತ್ತದೆ. ಪ್ರತಿಯೊಂದು ಸಂಸ್ಕಾರಕ್ಕೂ ಮಗುವಿನ ತಂದೆ-ತಾಯಿ/ ಪೋಷಕರು ಧರ್ಮಸಭೆಯ ಮುಂದೆ ಕೋರಿಕೆಯನ್ನು ಇರಿಸುತ್ತಾರೆ. ಅದನ್ನು ಮನ್ನಿಸಿ ಯಾವುದೇ ಸಂಸ್ಕಾರವನ್ನು ನೀಡಲಾಗುತ್ತದೆ ವಿನಃ ಸಂಸ್ಕಾರಗಳು ‘ಆಟೋಮ್ಯಾಟಿಕ್’ ಆಗಿ ಲಭಿಸುವುದಿಲ್ಲ ಹಾಗೂ ಈ ವಿಚಾರದಲ್ಲಿ ಬಲವಂತ ಇಲ್ಲವೇ ಇಲ್ಲ. ‘‘ಕೆಥೊಲಿಕ್ ಧರ್ಮಸಭೆಯ ಶಿಕ್ಷಣವು, ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ಪಾಪ ನಿವೇದನೆಯನ್ನು ಮಾಡಬೇಕು’’ (ನಂ. 2042) ಎಂಬ ಸಲಹೆಯನ್ನು ನೀಡುತ್ತದೆ. ಅದೇ ಪ್ರಕಾರ ಧರ್ಮಸಭೆಯ ಕಟ್ಟಳೆಗಳಲ್ಲಿ ಒಂದು, ‘‘ವರ್ಷಕ್ಕೊಮ್ಮೆ ಪಾಪ ನಿವೇದನೆಯನ್ನು ಮಾಡು’’ ಎಂದು ಹೇಳುತ್ತದೆ. ಆದಾಗ್ಯೂ ಇದೊಂದು ವ್ಯಕ್ತಿಯ ಆಯ್ಕೆಗೆ ಬಿಟ್ಟ ವಿಷಯ. ಇದರಲ್ಲಿ ಬಲವಂತ ಇಲ್ಲ. ಕಾರ್ಕಳ-ಅತ್ತೂರಿನಂತಹ ಪುಣ್ಯಕ್ಷೇತ್ರಗಳಲ್ಲಿ ವಾರ್ಷಿಕ ಮಹೋತ್ಸವದ ಸಮಯದಲ್ಲಿ ಹತ್ತಿಪ್ಪತ್ತು ವರ್ಷಗಳ ಕಾಲ ಪಾಪ ನಿವೇದನೆ ಮಾಡದವರು ಬಂದು ತಪ್ಪೊಪ್ಪಿಕೊಳ್ಳುವುದು ಸರ್ವೇಸಾಮಾನ್ಯ. ಅಂತೆಯೇ, ಪಾಪ ನಿವೇದನೆ ಮಾಡಿಕೊಳ್ಳಲು ಇಚ್ಛಿಸುವವರು ತಮ್ಮ ಆಯ್ಕೆಯ ಯಾವುದೇ ಚರ್ಚಿನಲ್ಲಿ, ಯಾವುದೇ ಯಾಜಕರಲ್ಲಿಗೆ ಹೋಗಲು ಸ್ವತಂತ್ರರು. ಕೆಥೊಲಿಕ್ ಯಾಜಕರಾಗಲು ಇಚ್ಛಿಸಿ ಆಯ್ಕೆಯಾದ ಯುವಕರಿಗೆ ಕನಿಷ್ಠ 9 ವರ್ಷಗಳ ಕಠಿಣ ತರಬೇತಿಯನ್ನು ನೀಡಲಾಗುತ್ತದೆ.
ಗುರುಮಠದಲ್ಲಿ ನೀಡುವ ತರಬೇತಿಯಲ್ಲಿ ಪಾಪ ನಿವೇದನೆಯ ಸಂಸ್ಕಾರದ ಬಗ್ಗೆ ಸಮಗ್ರ ಜ್ಞಾನವನ್ನು, ಧರ್ಮಸಭೆಯ ಕಾನೂನು ಮಾಹಿತಿಯನ್ನು ಹಾಗೂ ಪಾಪ ನಿವೇದನೆ ಸಂಸ್ಕಾರವನ್ನು ನೀಡುವ ರೀತಿಯನ್ನು ಕಲಿಸಲಾಗುತ್ತದೆ. ಈ ಸಂಸ್ಕಾರದಲ್ಲಿ ಗೌಪ್ಯತೆಯು ಅತ್ಯಂತ ಆದ್ಯತೆಯ ವಿಷಯವಾಗಿರುತ್ತದೆ. ಜನರು ತನ್ನಲ್ಲಿ ನಿವೇದಿಸಿದ ಗುಪ್ತ ವಿಷಯಗಳ (ಪಾಪಗಳು) ಗೌಪ್ಯತೆಯನ್ನು ಕಾಪಾಡುವುದು ಒಂದು ಗುರುತರ ಹಾಗೂ ಹಿರಿದಾದ ಜವಾಬ್ದಾರಿ. ಈ ಗೌಪ್ಯತೆಯನ್ನು ಕಾಪಾಡಲು ತನ್ನ ಪ್ರಾಣವನ್ನು ತೆರಲೂ ಸಿದ್ಧನಾಗಿರಬೇಕು ಎಂದು ಅರಿತ ಅಭ್ಯರ್ಥಿ ಯಾಜಕ ದೀಕ್ಷೆಯಲ್ಲಿ ಇದನ್ನು ಪುನರುಚ್ಛರಿಸುತ್ತಾನೆ. ಪಾಪ ನಿವೇದನೆಯ ಗೌಪ್ಯತೆಯನ್ನು ಕಾಪಾಡಲು ತಮ್ಮ ಜೀವದ ಬಲಿದಾನವನ್ನೇ ನೀಡಿದ ಹಲವಾರು ಪುಣ್ಯ ಪುರುಷರು ಧರ್ಮಸಭೆಯಲ್ಲಿ ಜೀವಿಸಿದ್ದಾರೆ. ಅಂತೆಯೇ, ಪಾಪ ನಿವೇದನೆಯಲ್ಲಿ ತಮ್ಮಾಡನೆ ನಿವೇದಿಸಿದ ವಿಷಯಗಳನ್ನು, ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ವ್ಯಕ್ತಿಯೊಡನೆ ಹಂಚಿಕೊಳ್ಳುವುದಾಗಲಿ, ಆ ವಿಷಯಗಳ ಲಾಭವನ್ನು ಪಡೆಯುವುದಾಗಲಿ ಕಠಿಣವಾಗಿ ನಿಷೇಧಿಸಲಾಗಿದೆ. ಪಾಪ ನಿವೇದನೆಯ ಗೌಪ್ಯತೆಯನ್ನು ಉಲ್ಲಂಘಿಸಿದ ಯಾವುದೇ ಯಾಜಕ ಧರ್ಮಸಭೆಯಿಂದ ತನ್ನಿಂದ ತಾನೇ ಬಹಿಷ್ಕೃತಗೊಳ್ಳುತ್ತಾನೆ.
ಹಲವರು ತಪ್ಪಾಗಿ ತಿಳಿದಂತೆ ಪಾಪ ನಿವೇದನೆ ಮಾಡಿದ ಮಾತ್ರಕ್ಕೆ ಪವಾಡಗಳು ಘಟಿಸುವುದಿಲ್ಲ, ಅದೊಂದು ಮಂತ್ರದಂಡವಲ್ಲ. ಅಂತೆಯೇ ಅದು ಜನಸಾಮಾನ್ಯರಿಗೆ ಮಾತ್ರ ಮೀಸಲಾಗಿಟ್ಟ ಸಂಸ್ಕಾರವಲ್ಲ. ಜನರ ಪಾಪ ನಿವೇದನೆಯನ್ನು ಆಲಿಸುವ ಯಾಜಕರು, ಧರ್ಮಾಧ್ಯಕ್ಷರು ಹಾಗೂ ಪೋಪ್ ಜಗದ್ಗುರುಗಳು ಇತರ ಗುರುಗಳಲ್ಲಿ ತಮ್ಮ ಪಾಪ ನಿವೇದನೆಯನ್ನು ಮಾಡುತ್ತಾರೆ. ಧರ್ಮಸಭೆಯಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಯಾಜಕರ ಬಳಿ ಜನರು ತಮ್ಮ ಪಾಪಗಳನ್ನು ಗುಪ್ತವಾಗಿ ನಿವೇದಿಸುವುದರೊಂದಿಗೆ ಎಲ್ಲವೂ ಮುಗಿಯುವುದಿಲ್ಲ. ಅದಕ್ಕೂ ಮುನ್ನ, ತನ್ನ ಪಾಪಮಯ ಜೀವನಕ್ಕಾಗಿ ಪಶ್ಚಾತ್ತಾಪವನ್ನು ಪಟ್ಟಿರಬೇಕು. ಆ ಕೆಟ್ಟ ಜೀವನವನ್ನು ಸಮಾಪ್ತಗೊಳಿಸಿ ಮನಪರಿವರ್ತನೆ ಹಾಗೂ ಹೃದಯ ಪರಿವರ್ತನೆ ಹೊಂದಿರಬೇಕು. ಸಜ್ಜನನಾಗಿ ಜೀವಿಸಲು ದೃಢ ನಿರ್ಧಾರವನ್ನು ಕೈಗೊಂಡಿರಬೇಕು. ಇವು ಪ್ರಾಮಾಣಿಕ ಪಾಪ ನಿವೇದನೆಗೆ ಬೇಕಾದವು. ತನ್ನ ಪಾಪಗಳನ್ನು ನಿವೇದಿಸುವವನು, ತಾನು ದೇವರ ಮುಂದೆ ತಪ್ಪೊಪ್ಪಿಕೊಳ್ಳುತ್ತಿದ್ದೇನೆ, ತನ್ನ ಮುಂದೆ ಕುಳಿತಿರುವ ಮಾನವನಲ್ಲಿ (ಯಾಜಕ) ಅಲ್ಲ ಎಂದು ಅರಿತಿರಬೇಕು. ಇದೇ ಕಾರಣಕ್ಕಾಗಿ, ತಪ್ಪೊಪ್ಪಿಗೆ ಮಾಡುವವನು ಯಾರು, ಎಲ್ಲಿಯವ, ಇನ್ನಿತರ ಮಾಹಿತಿಗಳಿಂದ ಯಾಜಕನು ಮುಕ್ತನಾಗಿರುತ್ತಾನೆ. ತಪ್ಪೊಪ್ಪಿಗೆಯನ್ನು ಆಲಿಸಿದ ಯಾಜಕ ದೇವರ ದಯೆ ಹಾಗೂ ಕ್ಷಮೆಯನ್ನು ನೀಡಿ ಆಶೀರ್ವದಿಸುತ್ತಾನೆ. ಆತನ ತಪ್ಪುಹಾಗೂ ಪಾಪಗಳಿಗೆ ಮಾಡಬೇಕಾದ ಪ್ರಾಯಶ್ಚಿತವನ್ನೂ ನೀಡುತ್ತಾನೆ. ಮಾಡಿದ ನಷ್ಟವನ್ನು ಸರಿಪಡಿಸಲು ಹೇಳುತ್ತಾನೆ. ನಿವೇದನೆ ಮಾಡಿದ ತನ್ನ ಪಾಪಗಳಿಗೆ ಪ್ರಾಯಶ್ಚಿತವನ್ನು, ಮಾಡಿದ ಕೆಡುಕನ್ನು ಸರಿಪಡಿಸದ ಹೊರತು, ಈ ಸಂಸ್ಕಾರವು ಸಂಪೂರ್ಣವಾಗುವುದಿಲ್ಲ.
ದಿನನಿತ್ಯದ ಜೀವನದಲ್ಲಿ ಅರಿತೋ, ಅರಿಯದೆಯೋ ಮಾಡಿದ ತಪ್ಪು, ಪಾಪಗಳಿಗಾಗಿ ಪಾಪಪ್ರಜ್ಞೆಯಿಂದ ನರಳಿ, ನರಕಯಾತನೆಯನ್ನು ಅನುಭವಿಸುವ ಜನರಿಗೆ ಹೊಸಜೀವನದ ಭರವಸೆಯನ್ನು ನೀಡಿದೆ ಈ ಅನನ್ಯ ಸಂಸ್ಕಾರ. ಈ ಸಂಸ್ಕಾರದ ಮೂಲಕ ದಶಕಗಳ ತಮ್ಮ ಕೆಟ್ಟ ಜೀವನಕ್ರಮವನ್ನು ತ್ಯಜಿಸಿ ಸಜ್ಜನರಾದವರು ಅಸಂಖ್ಯಾತ. ಜೀವನದ ಹಾದಿಯನ್ನು ಸರಿಪಡಿಸುವ ಶಕ್ತಿಯುಳ್ಳ ಈ ಸಂಸ್ಕಾರದ ಸರಳ ರೂಪ ದಿನನಿತ್ಯದ ಜೀವನದಲ್ಲಿ ಆಡುವ ‘ತಪ್ಪಾಯಿತು’, ‘ಸಾರಿ’ ಎಂಬ ಮಾಂತ್ರಿಕ ಶಬ್ದಗಳು. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕ್ಷಮಿಸುವ ಔದಾರ್ಯತೆಯುಳ್ಳವನಾಗಿದ್ದರೆ, ಮನುಷ್ಯನು ವಿಶ್ವಾಸವಿಟ್ಟಿರುವ ದೇವನು ಕ್ಷಮಿಸಲಾರನೇ?
ಕಳೆದ ಇಪ್ಪತ್ತು ಶತಮಾನಗಳಿಂದ ಕ್ರೈಸ್ತ ವಿಶ್ವಾಸಿಗಳಿಗೆ ದೇವನ ಕ್ಷಮೆ, ದಯೆ, ಕರುಣೆ ಹಾಗೂ ಸಾಂತ್ವನವನ್ನು ನೀಡಿ ಕಾಪಾಡಿದ ಪಾಪ ನಿವೇದನೆ ಎಂಬ ಶ್ರೇಷ್ಠ ಸಂಸ್ಕಾರವನ್ನು, ಬೆರಳೆಣಿಕೆಯಷ್ಟು ಮಂದಿ ಸಂಸ್ಕಾರದ ಶ್ರೇಷ್ಠತೆಯನ್ನು ಅರಿಯದೆ ಅದನ್ನು ದುರುಪಯೋಗಪಡಿಸಿಕೊಂಡದ್ದಕ್ಕಾಗಿ, ‘ಅದನ್ನು ರದ್ದುಪಡಿಸಬೇಕು ಎನ್ನುವುದು ಅಜ್ಞಾನವಲ್ಲವೇ?