ಗೋಪಾಲಕೃಷ್ಣ ಗಾಂಧಿ
ತಮ್ಮ ನೇರ-ನಿರ್ಭೀತ ನುಡಿಗಳಿಂದ,ಲೇಖನಗಳಿಂದ ಇವತ್ತಿನ ಭಾರತಕ್ಕೆ ಕನ್ನಡಿ ಹಿಡಿಯುತ್ತಿರುವ ಗೋಪಾಲಕೃಷ್ಣ ಗಾಂಧಿಯವರು ಇಂದಿನ ಭಾರತದ ಆತ್ಮಸಾಕ್ಷಿ, ಜಾಗೃತ ಪ್ರಜ್ಞೆ-ಪ್ರಜ್ಞಾ ಪಾಲಕ. ಶಾಂತಿ, ಕೋಮು ಸೌಹಾರ್ದ, ಸಾಮರಸ್ಯಗಳಿಗಾಗಿ ಮುಡುಪಿನ ಸೇವೆ ಸಲ್ಲಿಸುವವರಿಗೆ ನೀಡಲು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಸದ್ಭಾವನಾ ಪ್ರಶಸ್ತಿಯನ್ನು ಈ ವರ್ಷ ಲೋಕ ಸೇವಕ ಗೋಪಾಲಕೃಷ್ಣ ಗಾಂಧಿಯವರಿಗೆ ನೀಡಿರುವುದರಿಂದ ಆ ಪ್ರಶಸ್ತಿಗೆ ಕುಂದಣವಿಟ್ಟಂತಾಗಿದೆ.
ವಿವಿಧ ಧರ್ಮ, ಸಂಸ್ಕೃತಿಗಳು ಹಾಗೂ ವಿವಿಧ ಭಾಷೆಗಳ ನೆಲೆವೀಡಾದ ಬಹುತ್ವ ಭಾರತದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಗಳನ್ನು ಪ್ರವರ್ಧಿಸುವ ಕಾರ್ಯ ಇಂದು ಎಂದಿಗಿಂತ ಹೆಚ್ಚು ಅಗತ್ಯವಾಗಿದೆ. ಎಂದೇ, ಸದ್ಭಾವನೆ, ಕೋಮು ಸಾಮರಸ್ಯ ಮತ್ತು ಸ್ವಚ್ಛ ಸಾರ್ವಜನಿಕ ಜೀವನದ ಧ್ಯೇಯಗಳಿಗಾಗಿ ತಮ್ಮ ಬದುಕು ಮತ್ತು ಬರಹವನ್ನು ಮುಡುಪಾಗಿಟ್ಟಿರುವ ನಮ್ಮ ನಡುವಣ ಧೀಮಂತ ಚಿಂತಕ ಗೋಪಾಲಕೃಷ್ಣ ಗಾಂಧಿಯವರು ಈ ವರ್ಷದ ರಾಜೀವಗಾಂಧಿ ಸದ್ಭಾವನಾ ಪ್ರಶಸ್ತಿಗೆ ಪಾತ್ರರಾಗಿರುವುದು ಸಂತೋಷದ ಸಂಗತಿ.
ಗೋಪಾಲಕೃಷ್ಣ ಗಾಂಧಿಯವರು ಮಹಾತ್ಮ ಮೋಹನದಾಸ್ ಕರಮಚಂದ್ ಗಾಂಧಿ ವಂಶದ ಕುಡಿ. ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಭಾರತದ ಧೀಮಂತ ರಾಜಕಾರಣಿ, ರಾಜಾಜಿ ಎಂದೇ ಚರಿತ್ರಾರ್ಹರಾದ ಚಕ್ರವರ್ತಿ ಸಿ.ರಾಜಗೋಪಾಲಾಚಾರಿಯವರ ಮೊಮ್ಮಗ. ತಂದೆ ದೇವದಾಸ ಗಾಂಧಿ, ತಾಯಿ ರಾಜಾಜಿಯವರ ಮಗಳು ಲಕ್ಷ್ಮೀ. ಹುಟ್ಟಿದ್ದು 22-04-1945. ಹೊಸದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ವೃತ್ತಿಜೀವನ ಆರಂಭವಾದದ್ದು 1968ರಲ್ಲಿ ಭಾರತ ಸರಕಾರದ ಐಎಎಸ್ ಅಧಿಕಾರಿಯಾಗಿ. 1992ರಲ್ಲಿ ಸ್ವಯಂನಿವೃತ್ತಿ ಪಡೆದ ಗೋಪಾಲಕೃಷ್ಣ ಗಾಂಧಿಯವರ ವೃತ್ತಿಜೀವನ ದೊಡ್ಡದೊಡ್ಡ ಹೊಣೆಗಾರಿಕೆಗಳಷ್ಟೇ ವೈವಿಧ್ಯಮಯವೂ ವರ್ಣರಂಜಿತವೂ ಆದದ್ದು. ಐಎಎಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ಗಾಂಧಿಯವರ ವೃತ್ತಿಜೀವನದ ಬಹುಭಾಗ ತಮಿಳುನಾಡಿನ ಸರಕಾರಿ ಸೇವೆಗೆ ಸಮರ್ಪಿತ. ಗೋಪಾಲಕೃಷ್ಣ ಗಾಂಧಿ ವಿದೇಶಾಂಗ ಸೇವೆಯಲ್ಲೂ ಖ್ಯಾತರಾದವರು. ಹೀಗಾಗಿ ಅವರು ಗಾಂಧಿ ಮೊಮ್ಮಗನಾಗಿಯಷ್ಟೇ ಅಲ್ಲ ದಕ್ಷ-ಪ್ರಾಮಾಣಿಕ ಆಧಿಕಾರಿಯಾಗಿಯೂ ಪ್ರಸಿದ್ಧರು. ಅವರು ಲಂಡನ್‌ನ ಭಾರತ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಸಚಿವರಾಗಿದ್ದರು.
ಲಂಡನ್‌ನ ನೆಹರೂ ಕೇಂದ್ರದ ನಿರ್ದೇಶಕರಾಗಿದ್ದರು. ತಾತ ಮೋಹನದಾಸರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ದಕ್ಷಿಣ ಆಫ್ರಿಕಾದಲ್ಲಿ(1996) ಭಾರತದ ಅತ್ಯಂತ ಜನಪ್ರಿಯ ರಾಯಭಾರಿಯಾಗಿದ್ದರು. ಶ್ರೀಲಂಕಾ(2000)ಹಾಗೂ ನಾರ್ವೆ ದೇಶಗಳಲ್ಲೂ (2002) ಭಾರತದ ರಾಯಭಾರಿಯಾಗಿದ್ದರು. 1985ರಿಂದ 1987ರವರೆಗೆ ಅಂದಿನ ಉಪರಾಷ್ಟ್ರಪತಿಯವರಿಗೆ ಕಾರ್ಯದರ್ಶಿಯಾಗಿದ್ದ ಗೋಪಾಲಕೃಷ್ಣ ಗಾಂಧಿಯವರು 1997ರಲ್ಲಿ ಅಂದಿನ ರಾಷ್ಟ್ರಪತಿಯವರಿಗೆ ಕಾರ್ಯದರ್ಶಿಯಾಗಿದ್ದರು. ಗೋಪಾಲಕೃಷ್ಣ ಗಾಂಧಿಯವರು ಆಡಳಿತಾಧಿಕಾರಿಯಾಗಿ ದಕ್ಷತೆ ಮತ್ತು ಪ್ರಾಮಾಣಿಕತೆ, ಸತ್ಯನಿಷ್ಠೆ ಮತ್ತು ಸುಸಂಸ್ಕೃತ ನಡವಳಿಕೆಗೆ ಹೆಸರಾಗಿದ್ದವರು. ಅವರ ಈ ಸೇವಾ ಹಿರಿಮೆಗಳಿಗೆ ಕಿರೀಟಪ್ರಾಯವಾಗಿ ಬಂದದ್ದು ಪಶ್ಚಿಮ ಬಂಗಾಳದ ರಾಜ್ಯಪಾಲರ ಹುದ್ದೆ. 2004ರಿಂದ 2009ರವರೆಗೆ ಕಮ್ಯುನಿಸ್ಟ್ ಪಕ್ಷದ ಅಧಿಕಾರಾವಧಿಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಐಎಎಸ್ ಅಧಿಕಾರವಿರಲಿ, ರಾಜತಾಂತ್ರಿಕ ಹುದ್ದೆಯಿರಲಿ, ರಾಜ್ಯ ಪಾಲರ ಪದವಿಯಿರಲಿ ಗೋಪಾಲಕೃಷ್ಣ ಗಾಂಧಿಯವರು ಎಂದೂ ಬಿಳಿಕಾಲರಿನ ಅಧಿಕಾರಿಯಾಗಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುರ್ಚಿಗೆ ಅಂಟಿ ಕುಳಿತು ಆಡಳಿತ ನಡೆಸಿದವರಲ್ಲ.
ಜನಸಾಮಾನ್ಯರ ಬದುಕಿನಲ್ಲಿ ನುಸುಳಿ ಜನಜೀವನವನ್ನು ಅರ್ಥಮಾಡಿಕೊಂಡು ಆಡಳಿತ ನಡೆಸುವುದು ಅವರ ಕಾರ್ಯವೈಖರಿಯಾಗಿತ್ತು. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ ಮಾರುವೇಷದಲ್ಲಿ ಹಳ್ಳಿಗಳಿಗೆ ಹೋಗಿ ಜನರಸ್ಥಿತಿಗತಿಗಳನ್ನು ಅರಿತುಕೊಂಡು, ಆಗಬೇಕಾಗಿರುವ ಕೆಲಸಗಳ ಬಗ್ಗೆ ಸರಕಾರಕ್ಕೆ ಮಾರ್ಗದರ್ಶನ ಮಾಡುತ್ತಿದ್ದುದು ಆಗ ಪತ್ರಿಕೆಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅಂತೆಯೇ ಕಮ್ಯುನಿಸ್ಟರ ಆಡಳಿತದ ಕೊನೆಯ ದಿನಗಳಲ್ಲಿ ಅದಕ್ಕೆ ತಲೆ ನೋವಾಗಿದ್ದ ನಂದಿ ಗ್ರಾಮ ರೈತರ ಚಳವಳಿಯನ್ನು ರಾಜ್ಯಪಾಲರಾಗಿ ಅವರು ಸಮೀಪದಿಂದ ಗಮನಿಸಿದ್ದರು. ರೈತರ ಮೇಲೆ ಗೋಲಿಬಾರ್ ನಡೆಸಿದ ತಮ್ಮ ಸರಕಾರದ ಕ್ರಮವನ್ನೇ ಖಂಡಿಸಿದ್ದರು.
ಗೋಪಾಲಕೃಷ್ಣ ಗಾಂಧಿಯವರು ನಿವೃತ್ತಿಯ ನಂತರ ರಾಜಕೀಯ ಸೇರಲಿಲ್ಲವಾದರೂ ಅವರು ತಮ್ಮ ಪ್ರಖರವಾದ ರಾಜಕೀಯಪ್ರಜ್ಞೆಯನ್ನು ಎಚ್ಚರವಾಗಿಟ್ಟುಕೊಂಡವರು.ರಾಜಕಾರಣಿಗಳನ್ನು ಹತ್ತಿರದಿಂದ ನೋಡಿರುವ ಅವರು ರಾಜಕೀಯದ ಒಳಸುಳಿಗಳನ್ನು ಚೆನ್ನಾಗಿ ಬಲ್ಲವರು. ಪ್ರಜಾಪ್ರಭುತ್ವದಲ್ಲಿ ಅಚಲನಿಷ್ಠೆಯುಳ್ಳವರು. ಮೌಲ್ಯಪ್ರಜ್ಞೆಯುಳ್ಳ ಮೇಧಾವಿ.ಸಂವೇದನಾಶೀಲ ಲೇಖಕರಾದ ಗೋಪಾಲಕೃಷ್ಣಗಾಂಧಿಯವರು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ, ಓದುವ ಮತ್ತು ಬರೆಯುವ ಸಾಮರ್ಥ್ಯವುಳ್ಳ ಪ್ರತಿಭಾನ್ವಿತರು. ಗೋಪಾಲಕೃಷ್ಣರ ಮೊದಲ ಸಾಹಿತ್ಯ ಕೃತಿ ಪ್ರಕಟವಾದಾಗ ಅವರು ಹದಿನೇಳರ ಪ್ರಾಯದ ಹುಡುಗ. ಅದು, ಮಹಾತ್ಮಗಾಂಧಿಯವರ ಜೊತೆ ತಮ್ಮ ಬದುಕಿನ ಬಹುಭಾಗವನ್ನು ಕಳೆದ ಕುಮಾರಿ ಮನು ಗಾಂಧಿಯವರ ಆತ್ಮಕಥೆ. ಮಹಾತ್ಮ ಗಾಂಧಿಯವರ ಬ್ರಹ್ಮಚರ್ಯ ವ್ರತದಲ್ಲಿ ಭಾಗಿಯಾಗಿದ್ದ ಅವರ ಸೋದರ ಸೊಸೆ ಕುಮಾರಿ ಮನು ಗಾಂಧಿ ಗುಜರಾತಿ ಭಾಷೆಯಲ್ಲಿ ಬರೆದಿದ್ದ ಆತ್ಮಕಥೆಯನ್ನು ಗೋಪಾಲಕೃಷ್ಣರು ಇಂಗ್ಲಿಷಿಗೆ ಅನುವಾದಿಸಿದ್ದರು. ವಿಶ್ವವಿಖ್ಯಾತ ಇತಿಹಾಸಕಾರ ರಾಮಚಂದ್ರ ಗುಹ ಹೀಗೆ ಬರೆಯುತ್ತಾರೆ:‘‘ಶಾರದಾಪ್ರಸಾದರು ಕನ್ನಡ, ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಲು ಸೊಗಸಾಗಿ ಮಾತನಾಡುತ್ತಿದ್ದರು. ಅವರಿಗೆ ಸಂಸ್ಕೃತ ಮತ್ತು ಹಿಂದಿ ಭಾಷೆಗಳ ಜ್ಞಾನವೂ ಇತ್ತು. ಈ ಬಹುಭಾಷಾ ಕೋವಿದನಿಗೆ ಸರಿಸಾಟಿ ಎನ್ನಬಹುದಾದ ಮತ್ತೊಬ್ಬ ಭಾರತೀಯನೆಂದರೆ ಸಾಹಿತಿ ಹಾಗೂ ಲೋಕ ಸೇವಕರಾದ ಗೋಪಾಲಕೃಷ್ಣ ಗಾಂಧಿಯವರು. ಸಾಹಿತ್ಯ ವಿಮರ್ಶಕರಿಗೆ ಗೋಪಾಲಕೃಷ್ಣ ಗಾಂಧಿಯವರು ವಿಕ್ರಂ ಸೇಠ್‌ರ ‘ಎ ಸೂಟಬಲ್ ಬಾಯ್’ ಕಾದಂಬರಿಯ ಹಿಂದಿ ಅನುವಾದಕರಾಗಿ ಪರಿಚಿತರು. ಅವರು ಸ್ವತ: ಇಂಗ್ಲಿಷ್ ಗ್ರಂಥಗಳ ಕರ್ತೃವೂ ಹೌದು. ಅವರು ತಮಿಳಿನಲ್ಲೂ ಸೊಗಸಾಗಿ ಮಾತನಾಡಬಲ್ಲರು. ತಮಿಳು ಅವರ ತಾಯಿಯ ಮಾತೃ ಭಾಷೆ. ಇತ್ತೀಚೆಗೆ ಗಾಂಧಿಯವರು ಬಂಗಾಳಿಯಲ್ಲೂ ಸಾಕಷ್ಟು ಜ್ಞಾನಗಳಿಸಿದ್ದಾರೆ.’’
(ಪೇಟ್ರಿಯಟ್ಸ್ ಆ್ಯಂಡ್ ಪಾರ್ಟಿಸಾನ್ಸ್ ಕೃತಿಯಲ್ಲಿ) -ವಿಕ್ರಂ ಸೇಠ್ ಅವರ ‘ಎ ಸೂಟಬಲ್ ಬಾಯ್’ ಕಾದಂಬರಿಯನ್ನು ಹಿಂದಿಗೆ ಭಾಷಾಂತರಿಸಿರುವ ಗೋಪಾಲಕೃಷ್ಣ ಗಾಂಧಿಯವರು ಶ್ರೀಲಂಕಾದ ಟೀ ತೋಟಗಳಲ್ಲಿನ ತಮಿಳು ಕಾರ್ವಿಕರ ಬದುಕುಬವಣೆಗಳನ್ನು ಚಿತ್ರಿಸುವ ಕಾದಂಬರಿಯೊಂದನ್ನು ಹಾಗೂ ದಾರಾಶಿಕೋ ಕುರಿತ ಕಾವ್ಯನಾಟಕವೊಂದನ್ನು ರಚಿಸಿದ್ದಾರೆ.ಈಚಿನ ದಿನಗಳಲ್ಲಿ ಗೋಪಾಲಕೃಷ್ಣ ಗಾಂಧಿಯವರು ಹೆಚ್ಚು ಗಮನ ಸೆಳೆಯುತ್ತಿರುವುದು ಪ್ರಸಕ್ತ ಭಾರತದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆ-ವಿದ್ಯಮಾನಗಳನ್ನು ಕುರಿತ ವಸ್ತುನಿಷ್ಠ ವಿಶ್ಲೇಷಣೆಯ ಲೇಖನಗಳಿಂದ. ಅವರ ಲೇಖನಗಳು ನಮಗೆ ಹೆಚ್ಚು ಪ್ರಿಯವಾಗುವುದು ಅವರ ಮೌಲ್ಯಪ್ರಜ್ಞೆಯಿಂದ,ಅವರ ನೇರ ಪ್ರಾಮಾಣಿಕ ನುಡಿಗಳಿಂದ ಮತ್ತು ವಸ್ತುನಿಷ್ಠ ದೃಷ್ಟಿಕೋನದಿಂದಾಗಿ. ತಾತನಂತೆಯೇ ಪ್ರಜಾಸತ್ತೆಯಲ್ಲಿ, ಜಾತ್ಯತೀತತೆಯಲ್ಲಿ ಹಾಗೂ ಬಹುತ್ವ ಭಾರತದ ಬಹು ಸಂಸ್ಕೃತಿಯ ಮೌಲ್ಯಗಳಲ್ಲಿ ಅಚಲ ನಂಬಿಕೆಯುಳ್ಳವರು. 2014ರಲ್ಲಿ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೀಗೊಂದು ಬಹಿರಂಗ ಪತ್ರ ಬರೆಯುತ್ತಾರೆ: ‘‘ಭಾರತದ ಅಲ್ಪಸಂಖ್ಯಾತರು ಭಾರತದ ಒಂದು ಭಾಗಮಾತ್ರವಲ್ಲ ಅವರು ಮುಖ್ಯವಾಹಿನಿಯಲ್ಲಿ ಅಂತರ್ಗತರಾದವರು. ಹಗ್ಗವನ್ನು ಯಾರು ಬೇಕಾದರೂ ಸುಟ್ಟು ಕರುಕು ಮಾಡಬಹುದು, ಆದರೆ ಯಾರಿಂದಲೂ ಅದರೊಳಗಣ ನೇಯ್ಗೆಯನ್ನು ಬಿಡಿಸಲಾಗದು. ಭಾರತ ಮಾತಾ ಕಿ ಜೈ ಖಂಡಿತವಾಗಿಯೂ ಇರಲಿ ಮೋದಿಯವರೇ, ಯಾರು ಬೇಡಾಂತಾರೆ, ಆದರೆ ಇಂದಿನ ತುರ್ತು ಅಗತ್ಯವಾಗಿರುವುದು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ‘ಜೈಹಿಂದ್’ ರದ್ದುಗೊಳಿಸುವ ಮೂಲಕವಲ್ಲ’’
ಗೋಪಾಲಕೃಷ್ಣ ಗಾಂಧಿಯವರ ನಿರ್ಭೀತವಾದ ನೇರನುಡಿಗಳಿಗೆ, ಸಮಕಾಲೀನ ಪರಿಸ್ಥಿತಿಯ ವ್ಯಾಖ್ಯೆಗೆ ಉದಾಹರಣೆಯಾಗಿ ಕಳೆದ ವರ್ಷ ಅನಂತ ಮೂರ್ತಿ ಸ್ಮಾರಕ ಉಪನ್ಯಾಸದಲ್ಲಿ ಅವರು ಮೋದಿಯವರ ಭಾರತ ಕುರಿತು ಆಡಿದ ಈ ಮಾತುಗಳನ್ನು ಗಮನಿಸಬಹುದು: ‘‘ವಾಸ್ತವ ಸಂಗತಿ ಎಂದರೆ, ಇಂದು ವ್ಯಕ್ತಿ ಇಲ್ಲ, ಅವನ ಜಾಗಕ್ಕೆ ಏಕತೆ ಬಂದಿದೆ; ಅಸಮ್ಮತಿಗೆ, ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ ಅದರ ಜಾಗಕ್ಕೆ ಹೌದಪ್ಪಗಳು ಬಂದಿವೆ;
ವಾದ-ತರ್ಕಗಳಿಗೆ ಅವಕಾಶ ಇಲ್ಲ ಅದರ ಜಾಗಕ್ಕೆ ಪುಡಾರಿಕೆ ಬಂದಿದೆ, ಸಹನೆ ಹೋಗಿ ಅದರ ಜಾಗಕ್ಕೆ ಅಸಹನೆ ಬಂದಿದೆ. ಇನ್ನು ದೇಹಬಲದ ಭಾಷೆಯಿಂದ ಹೇಳುವುದಾದರೆ, ಬುದ್ಧಿಶಕ್ತಿ, ಮನಸ್ಸುಗಳು ಇಲ್ಲವಾಗಿದ್ದು ಅವುಗಳ ಜಾಗಕ್ಕೆ ತೋಳ್ಬಲ ಬಂದಿದೆ.
ಇದು ಗೋಪಾಲಕೃಷ್ಣ ಗಾಂಧಿಯವರು ಕಾಣುತ್ತಿರುವ ನಮ್ಮ -ನಿಮ್ಮೆಲ್ಲರ ಇಂದಿನ ಮೋದಿ ಭಾರತ.
ಮೋಹನದಾಸ್ ಕರಮ್‌ಚಂದ್ ಗಾಂಧಿಯವರ ಬದುಕು ಇತಿಹಾಸಕಾರರಿಗೆ ಹಾಗೂ ಸಂಶೋಧಕರಿಗೆ ಅಕ್ಷಯ ಪಾತ್ರೆಯಿದ್ದಂತೆ. 2011ರಲ್ಲಿ ಅಮೆರಿಕದ ಜೋಸೆಫ್ ಲೆಲಿವೆಲ್ಡ್ ಎಂಬ ಲೇಖಕನೊಬ್ಬ ಗಾಂಧಿಯವರ ಬಗ್ಗೆ ಒಂದು ಪುಸ್ತಕವನ್ನು ಬರೆದು, ಪ್ರಕಟಿಸಿದ. ಮೋಹನದಾಸರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಸಲಿಂಗಕಾಮಿಯಾಗಿದ್ದರೆಂದು ಊಹನಾತ್ಮಕವಾಗಿ ಬರೆದ. ಆಗ ಗುಜರಾತ್‌ನ ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಮಹಾತ್ಮರ ಮಾನರಕ್ಷಕರಂತೆ ಆ ಪುಸ್ತಕವನ್ನು ಗುಜರಾತ್ ರಾಜ್ಯದಲ್ಲಿ ನಿಷೇಧಿಸಿದರು. ಕೇಂದ್ರದಲ್ಲಿ ಅಧಿಕಾರಾರೂಢವಾಗಿದ್ದ ಕಾಂಗ್ರೆಸ್ ತನ್ನ ಹೆಚ್ಚುಗಾರಿಕೆ ತೋರಿಸಿಕೊಳ್ಳಲೆಂಬಂತೆ ರಾಷ್ಟ್ರವ್ಯಾಪಿ ಆ ಗ್ರಂಥವನ್ನು ನಿಷೇಧಿಸಲು ಮುಂದಾಗಿತ್ತು. ಆಗ ಗೋಪಾಲಕೃಷ್ಣ ಗಾಂಧಿಯವರು ಪುಸ್ತಕದ ನಿಷೇಧವನ್ನು ವಿರೋಧಿಸಿದರು. ನಿಷೇಧ ಗಾಂಧಿಯವರ ಮನೋಧರ್ಮಕ್ಕೆ ವಿರುದ್ಧವಾದದ್ದು. ಗಾಂಧಿ ಯಾವತ್ತೂ ಮುಕ್ತ ಚರ್ಚೆ, ವಾದಸಂವಾದಗಳನ್ನು ಬಯಸುತ್ತಿದ್ದರು. ಜೊತೆಗೆ ಪುಸ್ತಕ ನಿಷೇಧದಿಂದ ಪ್ರಜಾಸತ್ತೆಯಲ್ಲಿ ಭಾರತ ಹೊಂದಿರುವ ನಂಬಿಕೆ ವಿಶ್ವಾಸಗಳಿಗೆ ಚ್ಯುತಿಯಾಗುವುದೆಂದು ಸರಕಾರಕ್ಕೆ ತಿಳಿಸಿದರು. ಕಳೆದ ವರ್ಷ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೋಪಾಲಕೃಷ್ಣ ಗಾಂಧಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಗೆಲ್ಲಲಿಲ್ಲ. ಅದು ಭಾರತದ ಪ್ರಜಾಸತ್ತೆಗೆ ಆದ ನಷ್ಟ. ಆ ಸಂದರ್ಭದಲ್ಲಿ ಗೋರಕ್ಷಕ ಉಗ್ರವಾದಿಗಳು ಕಾನೂನನ್ನು ಕೈಗೆತ್ತಿಕೊಂಡು ಸಿಕ್ಕಸಿಕ್ಕವರನ್ನು ಯಮಲೋಕಕ್ಕೆ ಅಟ್ಟುವ ಯಮಕಿಂಕರಾಗಿರುವವರ ಬಗ್ಗೆ ಕೇಳಿದಾಗ ಗೋಪಾಲಕೃಷ್ಣ ಗಾಂಧಿಯವರು ಹೇಳಿರುವ ಮಾತುಗಳು ಸರ್ವದಾ ಮನನೀಯವಾದುದು:
‘‘ಗೋರಕ್ಷಕ ಕಾರ್ಯಾಚರಣೆಗೂ ಗೋವಿಗೂ ಏನೇನೂ ಸಂಬಂಧವಿಲ್ಲ. ಆದರೆ ಸಮುದಾಯಗಳ ನಡುವಣ ದ್ವೇಷಕ್ಕೂ ಅದಕ್ಕೂ ನಿಕಟಸಂಬಂಧವಿದೆ. ಇವರಲ್ಲಿ ಹೆಚ್ಚು ಮಂದಿ ಹಿಂದೂಗಳು. ವಿಶೇಷವಾಗಿ ಕೆಳಜಾತಿಯವರೆಂದು ಕರೆಯಲಾದ ಈ ಹಿಂದೂಗಳು ಜಾನುವಾರುಗಳ ವ್ಯಾಪಾರವನ್ನೇ ಅವಲಂಬಿಸಿದ್ದಾರೆ. ಈ ಹಿಂದೂಗಳ ಆಹಾರ ಪದ್ಧತಿಯೂ ಭಿನ್ನವಾದುದು. ಗೋರಕ್ಷಕ ಕಾರ್ಯಕರ್ತರಲ್ಲಿ ನಾವು ಕಾಣುವುದು ಕೆಳಜಾತಿಯ ಹಿಂದೂಗಳ ಮೇಲಿನ ಇದೇ ದ್ವೇಷ ತಿರಸ್ಕಾರಗಳನ್ನು.’’ ತಮ್ಮ ನೇರ-ನಿರ್ಭೀತ ನುಡಿಗಳಿಂದ,ಲೇಖನಗಳಿಂದ ಇವತ್ತಿನ ಭಾರತಕ್ಕೆ ಕನ್ನಡಿ ಹಿಡಿಯುತ್ತಿರುವ ಗೋಪಾಲಕೃಷ್ಣ ಗಾಂಧಿಯವರು ಇಂದಿನ ಭಾರತದ ಆತ್ಮಸಾಕ್ಷಿ, ಜಾಗೃತ ಪ್ರಜ್ಞೆ-ಪ್ರಜ್ಞಾ ಪಾಲಕ. ಶಾಂತಿ, ಕೋಮು ಸೌಹಾರ್ದ, ಸಾಮರಸ್ಯಗಳಿಗಾಗಿ ಮುಡುಪಿನ ಸೇವೆ ಸಲ್ಲಿಸುವವರಿಗೆ ನೀಡಲು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಸದ್ಭಾವನಾ ಪ್ರಶಸ್ತಿಯನ್ನು ಈ ವರ್ಷ ಲೋಕ ಸೇವಕ ಗೋಪಾಲಕೃಷ್ಣ ಗಾಂಧಿಯವರಿಗೆ ನೀಡಿರುವುದರಿಂದ ಆ ಪ್ರಶಸ್ತಿಗೆ ಕುಂದಣವಿಟ್ಟಂತಾಗಿದೆ.