varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 5 Aug, 2018

ಮಮತಾ ಲೆಕ್ಕಾಚಾರ
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕಳೆದ ವಾರ ದಿಲ್ಲಿಗೆ ಆಗಮಿಸಿದ್ದರು. ಮೂರು ದಿನಗಳ ತಮ್ಮ ಭೇಟಿಯ ವೇಳೆ ಧಾವಂತದಿಂದ ಇದ್ದ ದೀದಿ ಸರಕಾರಿ ಮತ್ತು ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿದರು. ಪ್ರವಾಸದ ವೇಳೆ ಪ್ರಧಾನಿ ಮೋದಿಯವರನ್ನು ಕಟುವಾಗಿ ಟೀಕಿಸಿದ ಅವರು, ಕೇಂದ್ರ ಸಚಿವರಾದ ಸುಶ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್ ಅವರನ್ನು ಶ್ಲಾಘಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈ ನಾಯಕರು ಒಳ್ಳೆಯವರು ಹಾಗೂ ಇತರರು ಒಳ್ಳೆಯವರಲ್ಲ ಎಂದು ದೀದಿ ಘೋಷಿಸಿದ್ದರು. ‘‘ಆಲೂಗಡ್ಡೆ ಮತ್ತು ಆಲೂಗಡ್ಡೆ ಚಿಪ್ಸ್ ಎರಡೂ ಒಂದೇ ಅಲ್ಲ’’ ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದರು. ಈ ಇಬ್ಬರು ನಾಯಕರಿಗೆ ವಿಶೇಷ ಆದರ ಏಕೆ? ಮಮತಾ ಅವರ ಲೆಕ್ಕಾಚಾರದ ಪ್ರಕಾರ, 2019ರ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಒಳ್ಳೆಯ ಸಾಧನೆ ಮಾಡದಿದ್ದರೆ ಈ ಇಬ್ಬರು ನಾಯಕರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಮೋದಿ ಹಾಗೂ ಅಮಿತ್ ಶಾಗೆ ಹಿನ್ನಡೆಯಾಗಲಿದ್ದು, ಬಿಜೆಪಿಯನ್ನು ಸುಶ್ಮಾ ಹಾಗೂ ರಾಜನಾಥ್ ಮುನ್ನಡೆಸಲಿದ್ದಾರೆ. ಮೋದಿ ಹಾಗೂ ಶಾ ಇಲ್ಲದ ಬಿಜೆಪಿ ಮಮತಾಗೆ ಸ್ವೀಕಾರಾರ್ಹವೇ ಎನ್ನುವ ಪ್ರಶ್ನೆಯನ್ನು ಹಲವರು ಮುಂದಿಡುತ್ತಿದ್ದಾರೆ.

ನಾಯ್ಡು ಸಂಕಷ್ಟ
ಲೋಕಸಭಾ ಸದಸ್ಯರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಬರೆದ ಪತ್ರದ ಅಂಶಗಳ ಆಧಾರದಲ್ಲಿ ರಾಜ್ಯಸಭೆಯ ವಿರೋಧ ಪಕ್ಷಗಳ ಸದಸ್ಯರು ಕೂಡಾ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಸದನದ ರೂಲಿಂಗ್ ಬಗ್ಗೆ ಪತ್ರ ಬರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಕೆಲ ಸಂಸದರು ಖಾಸಗಿಯಾಗಿ ಹೇಳುವಂತೆ ನಾಯ್ಡು ಅವರು ಸದನ ನಿರ್ವಹಿಸುವಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಇದಕ್ಕೆ ಅವರು ಇತ್ತೀಚಿನ ಹಲವು ಘಟನೆಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ಇತ್ತೀಚಿನ ಒಂದು ಘಟನೆಯೆಂದರೆ ಹಲವು ಬಾರಿ ಸದನ ಮುಂದೂಡಿದ ಬಳಿಕವೂ ಅಮಿತ್ ಶಾ ಅವರಿಗೆ ಮಾತನಾಡಲು ಹೇಗೆ ಅವಕಾಶ ನೀಡಿದ್ದಾರೆ ಎನ್ನುವುದು. ಸದಸ್ಯರು ಇತರ ನಿದರ್ಶನಗಳನ್ನೂ ಉದಾಹರಿಸುತ್ತಾರೆ. ಇನ್ನೊಂದೆಡೆ, ನಾಯ್ಡು ಸ್ವತಃ ವಿರೋಧ ಪಕ್ಷಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇತ್ತೀಚೆಗೆ ಅವರು ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ಅವರನ್ನು ಕರೆಸಿಕೊಂಡು, ‘‘ಸಾಮಾನ್ಯ ಚರ್ಚೆಗೆ ಕೂಡಾ ವಿರೋಧ ಪಕ್ಷಗಳು ಹೇಗೆ ಅಡ್ಡಿಪಡಿಸುತ್ತಿವೆ’’ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಆಝಾದ್ ಅವರ ಪ್ರತಿಕ್ರಿಯೆ ಏನಿತ್ತು ಎನ್ನುವುದು ಯಾರಿಗೂ ತಿಳಿಯದು. ಆದರೆ ಬಹುತೇಕ ಸದಸ್ಯರು ಒಪ್ಪುವ ಒಂದು ಅಂಶವೆಂದರೆ, ಸಂಸತ್ತಿನ ಎರಡೂ ಸದನಗಳಲ್ಲಿ ಸಭಾಧ್ಯಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸಂಬಂಧ ಹಿಂದೆಂದೂ ಇಷ್ಟು ಕೆಟ್ಟದಾಗಿರಲಿಲ್ಲ. ಬಹುಶಃ ವಿರೋಧ ಪಕ್ಷಗಳ ಮೇಲೆ ಪ್ರಭಾವ ಬೀರಲು ನಾಯ್ಡು ಇನ್ನಷ್ಟು ಕಠಿಣ ಶ್ರಮ ವಹಿಸಬೇಕು.

ಅಜಯ್ ಮಾಕನ್‌ರ ಹೃದಯವಂತಿಕೆ


ದಿಲ್ಲಿಯಲ್ಲಿ ಹಸಿವಿನಿಂದ ಮೂವರು ಸಹೋದರಿಯರು ಸಾವಿಗೀಡಾದ ಮನೆ ಮುಂದೆ ದಿಲ್ಲಿ ರಾಜಕಾರಣಿಗಳು ಸಾಲುಗಟ್ಟಿ ನಿಂತಿದ್ದರು. ಒಂದು ಕೊಠಡಿಯ ಈ ಡೇರೆಗೆ ಭೇಟಿ ನೀಡಿದವರಲ್ಲಿ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕನ್ ಮೊದಲಿಗರು. ಸರದಿಯಲ್ಲಿ ನಂತರ ಬಂದವರು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ. ಇವರು ಸಹೋದರಿಯರ ತಾಯಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದರು. ಬಾಲಕಿಯರ ತಾಯಿ ಹಾಗೂ ಸಂಬಂಧಿಕರು ಮುಂದೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿಗೆ ಭೇಟಿ ನೀಡಿದರು. ಅವರು 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದರು. ಇದಕ್ಕೆ ವಿರುದ್ಧವಾಗಿ ಮಾಕನ್ ಮಾಧ್ಯಮ ವರದಿಗಾರರ ಜತೆ ಮಾತನಾಡಿ ವಾಪಸಾದರು. ಆದಾಗ್ಯೂ ಕೆಲ ಚಾಲಾಕಿ ಪತ್ರಿಕಾ ಛಾಯಾಗ್ರಾಹಕರು ದಂಡೆ ಮೇಲೆ ಕುಳಿತು ಮಾಕನ್ ಹಾಗೂ ಅರವೀಂದರ್ ಸಿಂಗ್ 2000 ರೂಪಾಯಿ ನೋಟುಗಳನ್ನು ಎಣಿಸಿ ತಾಯಿಗೆ ಹಸ್ತಾಂತರಿಸುವ ದೃಶ್ಯ ಸೆರೆ ಹಿಡಿದರು. ಸೆಲ್ಫಿ ಹಾಗೂ ಸಮಾಜ ಮಾಧ್ಯಮ ಪೋಸ್ಟ್‌ಗಳ ಈ ಯುಗದಲ್ಲಿ ಕೆಲ ರಾಜಕಾರಣಿಗಳು ತಮ್ಮ ದತ್ತಿ ಸೇವೆಯನ್ನು ಖಾಸಗಿ ವ್ಯವಹಾರವಾಗಿ ಇಡುವುದಕ್ಕೇ ಇಷ್ಟಪಡುತ್ತಾರೆ.

ತರೂರ್ ವಿಶ್ವಾಸ
ರಾಹುಲ್ ಗಾಂಧಿ ಮತ್ತು ಶಶಿ ತರೂರ್ ನಡುವಿನ ನಿಕಟ ಸಂಬಂಧ ಬೆಳೆಯುತ್ತಿರುವುದು ಹಲವು ಮಂದಿ ಕಾಂಗ್ರೆಸ್ ಮುಖಂಡರಿಗೆ ಪಥ್ಯವಾಗಿಲ್ಲ. ಸಂಸದರ ಸ್ವಚ್ಛಭಾರತ ಯೋಜನೆಗೆ ಬಲಿಬಿದ್ದು, ಕಾಂಗ್ರೆಸ್‌ನ ಸೂಚನೆಯನ್ನು ಹೇಗೆ ತಿರಸ್ಕರಿಸಿದರು ಎನ್ನುವುದನ್ನು ಅವರು ಕೆದಕುತ್ತಿದ್ದಾರೆ. ಈ ಯೋಜನೆಗೆ ತರೂರ್ ಪ್ರಚಾರ ರಾಯಭಾರಿಯೂ ಆಗಿದ್ದರು. ‘‘ಅವರು ಈಗ ತಮ್ಮ ಜ್ಞಾನಮುತ್ತುಗಳನ್ನು ರಾಹುಲ್‌ಗೆ ಸುರಿಯುತ್ತಿದ್ದಾರೆ. ಯಾವಾಗ ಕಲ್ಲು ಎಸೆಯುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ’’ ಎಂದು ಒಬ್ಬ ಹಿರಿಯ ಕಾಂಗ್ರೆಸ್ ಮುಖಂಡರು ಗೊಣಗುತ್ತಿದ್ದುದು ಕೇಳಿಬಂದಿದೆ. ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ ಮುಖಂಡರಾಗಿರುವ ತರೂರ್, ರಾಹುಲ್ ಅವರ ವಿಶ್ವಾಸವನ್ನು ಮರಳಿ ಗೆದ್ದಂತಿದೆ. ಆದರೆ ಉಳಿದುಕೊಂಡಿರುವ ಸಮಸ್ಯೆಯೆಂದರೆ, ಕಾಂಗ್ರೆಸ್‌ನ ಇಂಗ್ಲಿಷ್ ಮಾತನಾಡುವ ಬುದ್ಧಿಜೀವಿಗಳು ಪರಸ್ಪರರ ನಡುವೆ ಅಸೂಯೆ ಹೊಂದಿರುವುದು ಹಾಗೂ ಪ್ರತಿಸ್ಪರ್ಧಿಯ ಏಳಿಗೆಯನ್ನು ಸಹಿಸದಿರುವುದು.

ಚೌಹಾಣ್‌ಗೆ ಹೊಸ ಸಮಸ್ಯೆ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚಿನ ದಿನಗಳಲ್ಲಿ ಆತಂಕಿತರಾಗಿದ್ದಾರೆ. ಚುನಾವಣಾ ಭವಿಷ್ಯಕಾರರ ಅಂದಾಜನ್ನು ನಂಬಬಹುದಾದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ. ಇದರಿಂದ ತಕ್ಷಣ ಎಚ್ಚೆತ್ತುಕೊಂಡಿರುವ ಚೌಹಾಣ್ 55 ದಿನಗಳ ಜನ ಆಶೀರ್ವಾದ ಯಾತ್ರೆ ಕೈಗೊಂಡಿದ್ದಾರೆ. ಈ ಯಾತ್ರೆ ಮೂಲಕ ಜನ ಸಮುದಾಯದ ಜತೆಗಿನ ಸಂಬಂಧವನ್ನು ಮತ್ತೆ ಬೆಸೆಯಲು ಮುಂದಾಗಿದ್ದಾರೆ. ಚೌಹಾಣ್‌ಗೆ ಸಮಾಧಾನದ ಅಂಶವೆಂದರೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಈ ಯಾತ್ರೆ ಸಾಕಷ್ಟು ಮಂದಿಯನ್ನು ಆಕರ್ಷಿಸುತ್ತಿದೆ. ಆದರೆ ಯಾತ್ರೆಯ ಹದಿನೈದು ದಿನಗಳಲ್ಲೇ ಚೌಹಾಣ್ ಮುಖ ಗಂಟಿಕ್ಕಿಕೊಂಡಂತೆ ಕಾಣುತ್ತಿದೆ. ಒಂದು ಕಡೆ ಪೋಡಿಯಂ ಕೈಕೊಟ್ಟರೆ, ಇನ್ನೊಂದೆಡೆ ತಾತ್ಕಾಲಿಕ ಮೆಟ್ಟ್ಟಿಲಿನಲ್ಲಿ ಸಿಎಂ ಜಾರಿದರು. ಆದರೆ ಚೌಹಾಣ್‌ರನ್ನು ಚಿಂತೆಗೀಡುಮಾಡಿರುವುದು ಪ್ರತಿದಿನದ ಪ್ರವಾಸದಲ್ಲಿ ಪಿಕ್‌ಪಾಕೆಟ್ ನಡೆಯುತ್ತಿರುವ ವರದಿ. ಅವರ ಜತೆ ಪ್ರವಾಸ ಕೈಗೊಂಡಿರುವ ವರದಿಗಾರರನ್ನೂ ಈ ಕಿಡಿಗೇಡಿಗಳು ಬಿಟ್ಟಿಲ್ಲ. ಇದರಿಂದ ಸಿಎಂ ಚೌಹಾಣ್ ಅವರು ಗುಪ್ತಚರ ವಿಭಾಗದ ಮುಖ್ಯಸ್ಥರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ. ಕಿಸೆಗಳ್ಳರಿಗೆ ಕಾನೂನು ಕುಣಿಕೆ ಹಾಕುವಂತೆ ಆದೇಶಿಸಿದ್ದಾರೆ. ಆದರೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್, ಚೌಹಾಣ್ ಮಾಡಬೇಕಾದ ದೊಡ್ಡ ಕೆಲಸ ಸಾಕಷ್ಟಿವೆ ಎಂದು ಹೇಳುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)