ದೇಸಿ ನಾಟಕಕ್ಕೆ ಸ್ಪರ್ಶ ನೀಡಿದ ಬಿ.ವಿ.ಕಾರಂತ: ರಂಗಕರ್ಮಿ ಶ್ರೀನಿವಾಸಪ್ರಭು
ನಾಗಮಂಗಲ, ಆ.5: ದೇಸಿ ನಾಟಕಕ್ಕೆ ಒಂದು ಸ್ಪರ್ಶ ನೀಡಿದ್ದು ಬಿ.ವಿ.ಕಾರಂತರು. ಅವರು ದೇಸಿ ನಾಟಕ ಭೂಮಿಯ ದಿಕ್ಕನ್ನು ಬದಲಿಸಿದವರು. ಶೇ.99ರಷ್ಟು ದೇಸಿ ನಾಟಕಗಳನ್ನು ರಂಗಭೂಮಿಗೆ ತಂದರು ಎಂದು ರಂಗಕರ್ಮಿ ಶ್ರೀನಿವಾಸಪ್ರಭು ಹೇಳಿದರು.
ಪಟ್ಟಣದ ಕನ್ನಡ ಸಂಘ ಆಯೋಜಿಸಿದ್ದ 13ನೇ ವರ್ಷದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ನಾಲ್ಕಾರು ತಲೆಮಾರಿನ ನಾಟಕಕ್ಕೆ ಆಗುವಷ್ಟು ಸಾಹಿತ್ಯ, ಸಂಸ್ಕೃತಿ ಮತ್ತು ಜನಪದದ ಸಾಮಗ್ರಿಗಳಿವೆ ಎಂದರು.
ಮೈಸೂರು ಮತ್ತು ಬೆಂಗಳೂರಿಗೆ ಸೀಮಿತವಾಗಿದ್ದ ರಂಗಭೂಮಿ ಚಟುವಟಿಕೆ ಇಂದು ವಿಕೇಂದ್ರಿಕರಣಗೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಆ ನಿಟ್ಟಿನಲ್ಲಿ ನಾಗಮಂಗಲದ ಕನ್ನಡ ಸಂಘದ ಕಾರ್ಯ ಸ್ತುತ್ಯಾರ್ಹ ಎಂದು ಅವರು ಶ್ಲಾಘಿಸಿದರು.
ಹಿರಿಯ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಮಾತನಾಡಿ, ನಮ್ಮನ್ನು ನಾವು ಮತ್ತು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಇರುವ ಏಕೈಕ ಕಲೆ ನಾಟಕ. ಅದು ಎಂದೂ ಸಹ ಭರವಸೆ ನೀಡುವುದಿಲ್ಲ. ಚಲನಚಿತ್ರ ಮಾತ್ರ ಆಸೆಯನ್ನು ಉತ್ಪಾದಿಸಲಿದೆ ಎಂದು ಅಭಿಪ್ರಾಯಪಟ್ಟರು. ಒಂದು ಊರು ಆರೋಗ್ಯವಾಗಿರಬೇಕಾದರೆ ಅಲ್ಲಿ ಕನ್ನಡ ಶಾಲೆ, ಉದ್ಯಾನವನ, ಬಸ್ ನಿಲ್ದಾಣ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮತ್ತು ರಂಗ ಚಟುವಟಿಕೆಗಳು ಇರಬೇಕು. ರಂಗಭೂಮಿಗೆ ಸಮಾಜದ ಆರೋಗ್ಯವನ್ನು ಮತ್ತು ಅಲ್ಲಿರುವ ಏರುಪೇರುಗಳನ್ನು ತಿದ್ದುವ ಶಕ್ತಿಯಿದೆ ಎಂದು ಅವರು ಹೇಳಿದರು.
ಇಂದು ಇಡೀ ಭಾರತ ದೇಶ ಉತ್ತರಕುಮಾರನ ಪೌರುಷನ ರೀತಿಯಿದೆ. ನಮ್ಮ ರಾಜಕಾರಣಿಗಳು ಜನರಿಗೆ ಕೇವಲ ಆಶ್ವಾಸನೆ ನೀಡಿ ಯಾವುದೂ ಸಹ ಕಾರ್ಯಗತವಾಗುವುದಿಲ್ಲ ಎಂದು ಅವರು ವಿಷಾದಿಸಿದರು.
ಚಿತ್ರನಟ ಶರತ್ ಲೋಹಿತಾಶ್ವ ಮಾತನಾಡಿ, ನಾಗಮಂಗಲದಲ್ಲಿ ರಂಗಮಂದಿರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕನ್ನಡ ಸಂಘ ಸರಕಾರದ ಮಟ್ಟದಲ್ಲಿ ಯತ್ನಿಸುವ ಹಕ್ಕು ಇದೆ. ಇದಕ್ಕೆ ನನ್ನ ಸಹಕಾರ ಇರುತ್ತದೆ ಎಂದರು.
ಮಾಹಿತಿ ಹಕ್ಕು ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣ, ಹಿರಿಯ ನಟ ಹುಲಿವಾನ ಗಂಗಾಧರಯ್ಯ, ಉದ್ಯಮಿ ಮತ್ತು ನಾಟಕೋತ್ಸವದ ಪ್ರಾಯೋಜಕರಾದ ಚಂದ್ರು ಮತ್ತು ಶ್ರೀನಿವಾಸರಾವ್, ಹಾಸ್ಯ ಕಲಾವಿದ ಹಾಲತಿ ಜಯರಾಂ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಂಘದ ಅಧ್ಯಕ್ಷ ಎನ್.ಆರ್.ಪ್ರಶಾಂತ್, ಕಾರ್ಯದರ್ಶಿ ನಟರಾಜು, ಶಿಕ್ಷಕ ಸೆಮಿಉಲ್ಲಾ, ಇತರರ ಗಣ್ಯರು ಉಪಸ್ಥಿತರಿದ್ದರು.