ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆ
ಮಂಗಳೂರು, ಆ.6: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ದಕ್ಷಿಣ ರೈಲ್ವೆಯಿಂದ ಮೂರು ಸ್ವಯಂ ಚಾಲಿತ ಶುದ್ಧ ಕುಡಿಯುವ ನೀರು ಘಟಕಗಳು ಶನಿವಾರ ಆರಂಭಗೊಂಡಿವೆ.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸದಸ್ಯ, ಮಾಜಿ ಕೋಶಾಧಿಕಾರಿ ಹಾಗೂ ಪಾಲಕ್ಕಾಡ್ ವಿಭಾಗದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಂ.ಅಹ್ಮದ್ ಬಾವ ನೂತನ ಘಟಕಗಳನ್ನು ಉದ್ಘಾಟಿಸಿದರು. ಮುಖ್ಯ ವಾಣಿಜ್ಯ ನಿರೀಕ್ಷಕ ಪಿ.ಸುರೇಶನ್, ರೈಲ್ವೆ ಭದ್ರತಾ ದಳದ ನಿರೀಕ್ಷಕ ಫಿರೋಜ್ ಉಪಸ್ಥಿತರಿದ್ದರು.
ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ಫಾರ್ಮ್ನಲ್ಲಿ ಎರಡು ಹಾಗೂ ಎರಡನೇ ಪ್ಲಾಟ್ಫಾರ್ಮ್ನಲ್ಲಿ ಒಂದು ಘಟಕವನ್ನು ಅಳವಡಿಸಲಾಗಿದೆ. ಈ ಘಟಕಗಳಲ್ಲಿ ಪ್ರಯಾಣಿಕರಿಗೆ ಅತ್ಯಂತ ಅಗ್ಗದ ದರದಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಒಂದು ರೂ. ಪಾವತಿಸಿ 300 ಮಿ.ಲೀ. ನೀರು (ಲೋಟದಲ್ಲಿ ತುಂಬಿಸುವುದು) ಹಾಗೂ ಎರಡು ರೂ. ಪಾವತಿಸಿ ಬಾಟಲ್ನಲ್ಲಿ ನೀರು ಪಡೆಯಬಹುದಾಗಿದೆ. ನಾಣ್ಯವನ್ನು ಮೆಷಿನ್ನೊಳಗೆ ಹಾಕಿ ನೀರು ಪಡೆಯಬಹುದಾಗಿದೆ.
ರೈಲ್ವೆ ಇಲಾಖೆಯ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ ವತಿಯಿಂದ ಅಳವಡಿಸಲಾಗಿದ್ದು, ಇದೊಂದು ಸಂಪೂರ್ಣ ಸ್ವಯಂಚಾಲಿತ ಯಂತ್ರಗಳನ್ನು ಒಳಗೊಂಡ ಘಟಕವಾಗಿದ್ದು, ಒಂದು ತಾಸಿಗೆ 500 ಲೀಟರ್ ನೀರು ಶುದ್ಧೀಕರಣಗೊಳ್ಳುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಇದು ಕಾರ್ಯಾಚರಿಸುತ್ತದೆ. ಸದ್ಯದಲ್ಲೇ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲೂ ಸ್ವಯಂ ಚಾಲಿತ ಶುದ್ಧ ಕುಡಿಯುವ ನೀರು ಘಟಕ ಆರಂಭವಾಗಲಿದೆ.