Social Media
ಪುರುಷರಿಗಷ್ಟೇ ಸಾಧ್ಯ ಎಂಬ ಕಾಯಕವನ್ನು ಕರಗತ ಮಾಡಿಕೊಂಡ ಜಾಲ್ಸೂರಿನ ಚಂದ್ರಲೇಖಾ
ತೊಟ್ಟಿಲು ತೂಗುವ ಕೈ ಅಡಿಕೆ ಮರವೇರಲೂ ಸೈ

ಮಹಿಳೆಯರು ತಾವು ಅಬಲೆಯರಲ್ಲ, ಸಬಲೆಯರು ಎಂದು ನಿರೂಪಿಸುತ್ತಾ ಎಲ್ಲಾ ಕೆಲಸಗಳಲ್ಲೂ ಮುಂಚೂಣಿಗೆ ಬರುತ್ತಿರುವುದನ್ನು ನಾವು ಕಾಣುತ್ತಲೇ ಇದ್ದೇವೆ. ಇದೀಗ ಅಡಿಕೆ ಮರವೇರಿ ಮದ್ದು ಸಿಂಪಡಣೆ ಸರದಿ. ಸುಳ್ಯದ ಮಹಿಳೆಯೊಬ್ಬರು ಇದನ್ನೂ ಸಾಧ್ಯವಾಗಿಸಿದ್ದಾರೆ.
ಹೆಣ್ಣಾದವಳು ಮನೆಯೊಳಗಿನ ನಾಲ್ಕು ಗೋಡೆಗಳ ಮಧ್ಯೆ ಇರುವಂತಹ ಕಾಲವಿತ್ತು. ಆದರೆ ಆಧುನಿಕ ಕಾಲದಲ್ಲಿ ಹೆಣ್ಣು ಕೂಡಾ ಪುರುಷರಂತೆಯೇ ಸಮರ್ಥರು ಎಂಬುದನ್ನು ಎಲ್ಲ ಕ್ಷೇತ್ರಗಳಲ್ಲೂ ತೋರಿಸಿಕೊಡುತ್ತಲೇ ಬಂದಿದ್ದಾರೆ. ಪುರುಷರಿಗಷ್ಟೇ ಸಾಧ್ಯ ಮತ್ತು ಮೀಸಲು ಎಂಬಂತಿದ್ದ ಅಡಿಕೆ ತೋಟಕ್ಕೆ ಔಷಧ ಸಿಂಡಣೆಯ ಕಾಯಕವನ್ನು ಜಾಲ್ಸೂರು ಗ್ರಾಮದ ಅಡ್ಕಾರ್ ಕೋನಡ್ಕ ಪದವಿನ ಚಂದ್ರಲೇಖಾ ಎಂಬವರು ಕರಗತ ಮಾಡಿಕೊಂಡು ಸೈ ಅನ್ನಿಸಿಕೊಂಡಿದ್ದಾರೆ.
ಮದುವೆಯಾಗಿ ಚಿಕ್ಕ ವಯಸ್ಸಿನಲ್ಲೇ, ಅಂದರೆ ಸುಮಾರು 16 ವರ್ಷಗಳ ಹಿಂದೆ ತನ್ನ ಗಂಡ ಸುಂದರ ಗೌಡರನ್ನು ಕಳೆದುಕೊಂಡ ಚಂದ್ರಲೇಖಾ ಬಳಿಕ ಮಗಳು ನಿಶ್ಮಿತಾಳೊಂದಿಗೆ ಕೋನಡ್ಕಪದವಿನಲ್ಲಿ ವಾಸಿಸುತ್ತಿದ್ದರು. ಮನುಷ್ಯ ಬದುಕಿಗೆ ಕಷ್ಟ ನೀಡಲಷ್ಟೇ ಸಾಧ್ಯ, ಸೋಲಿಸಲು ಸಾಧ್ಯವಿಲ್ಲ ಎಂದರಿತ ಆಕೆ ಬಳಿಕ ಜೀವನೋಪಾಯಕ್ಕಾಗಿ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಕ್ಕೆ ಸೇರಿದರು. ಮೂರು ವರ್ಷಗಳ ಹಿಂದೆ ಆಲೆಟ್ಟಿ ನಾಗಪಟ್ಟಣದಲ್ಲಿರುವ ತನ್ನ ಅಕ್ಕ ರತ್ನಾವತಿ ಮತ್ತು ಬಾವ ಆನಂದ ಗೌಡರ ಅಡಿಕೆ ತೋಟಕ್ಕೆ ವಿಪರೀತ ಕೊಳೆರೋಗ ಭಾದಿಸಿದ್ದರಿಂದ ಅವರು ತತ್ತರಿಸಿಹೋಗಿದ್ದರು. ಆನಂದ ಗೌಡರಿಗೆ ವಯಸ್ಸಾಗಿದ್ದು, ಅವರಿಗೆ ಅಡಿಕೆ ಮರಕ್ಕೆ ಏರುವಷ್ಟು ಶಕ್ತಿ ಇರಲಿಲ್ಲ. ಮದ್ದು ಬಿಡಲು ಸರಿಯಾದ ಜನಗಳೂ ಸಿಗುತ್ತಿರಲಿಲ್ಲ. ಅಡಿಕೆ ಮರವೇರುವ ಯಂತ್ರ ಖರೀದಿಸಿದ್ದರೂ ಏರಲು ಜನವಿಲ್ಲದಂತಾಗಿತ್ತು.
ಇದನ್ನೆಲ್ಲ ಗಮನಿಸಿದ ಚಂದ್ರಲೇಖಾ ತಾನು ಸಹ ಅಡಿಕೆ ಮರಕ್ಕೆ ಮದ್ದು ಸಿಂಪಡಣೆ ಮಾಡಬಲ್ಲೆ ಎಂಬ ಆತ್ಮ ವಿಶ್ವಾಸದಿಂದ ಯಂತ್ರದ ಮೂಲಕ ಅಡಿಕೆ ಮರ ಏರಲು ಆರಂಭಿಸಿದರು. ನಂತರ ಮೂರು ವರ್ಷಗಳಿಂದ ನಾಚಿಕೆ, ಮುಜುಗರ ಬದಿಗಿಟ್ಟು ಧೈರ್ಯದಿಂದ ಅಡಿಕೆ ಮರವೇರಿ ಮದ್ದು ಬಿಡುವ ಕಾಯಕದಲ್ಲಿ ತೊಡಗಿದ್ದಾರೆ. ಆನಂದ ಗೌಡರ ತೋಟದಲ್ಲಿ 600 ಅಡಿಕೆ ಮರಗಳಿವೆ. ಅವುಗಳಿಗೆ ಎರಡು ದಿನಗಳಲ್ಲಿ ಚಂದ್ರಲೇಖಾ ಔಷಧ ಸಿಂಪಡಣೆ ಮಾಡಿ ಮುಗಿಸುತ್ತಾರೆ. ಪ್ರಥಮ ಬಾರಿ ಎರಡು ಬ್ಯಾರೆಲ್ ಮತ್ತು ಎರಡನೇ ಬಾರಿ ಮೂರನೇ ಬಾರಿ ಮೂರು ಬ್ಯಾರೆಲ್ ಔಷಧ ಬಿಡುತ್ತಿದ್ದಾರೆ. ಅಕ್ಕ, ಬಾವ, ಅವರ ಮಕ್ಕಳಾದ ನವೀನ, ತ್ರಿವೇಣಿ ಔಷಧ ಸಿಂಪಡಣೆಯ ವೇಳೆ ಸಹಾಯ ಮಾಡುತ್ತಾರೆ. ಚಂದ್ರಲೇಖಾ ಇಲ್ಲಿಯಷ್ಟೇ ಅಲ್ಲದೆ ಹತ್ತಿರದ ತೋಟಗಳಿಗೂ ಮದ್ದು ಬಿಡುವ ಕಾಯಕ ಮಾಡುತ್ತಿದ್ದಾರೆ. ಮೆಡಿಕಲ್ ಕಾಲೇಜಿನ ಉದ್ಯೋಗ ಮಾಡುವುದರ ಜತೆಗೆ ಅಡಿಕೆ ಸುಲಿಯುವುದು ಮತ್ತು ಇತರ ಕೆಲಸಗಳನ್ನೂ ಅವರು ಮಾಡುತ್ತಿದ್ದಾರೆ. ಅವರ ಮಗಳು ನಿಶ್ಮಿತಾ ಮಂಗಳೂರಿನಲ್ಲಿ ಪಿಯುಸಿ ಓದುತ್ತಿದ್ದಾಳೆ.
''ಅಡಿಕೆ ತೋಟಕ್ಕೆ ಔಷಧ ಸಿಂಪಡಿಸದೆ ಅಡಿಕೆಗಳು ಬಿದ್ದು ನಾಶ ಆಗುತ್ತಿರುವಾಗ ನೋಡಿ ಬೇಸರ ಆಯಿತು. ಕಳೆದ ಮೂರು ವರ್ಷಗಳಿಂದ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುವ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿದ್ದ ಭಯ, ನಾಚಿಕೆ, ಮುಜುಗರಕ್ಕಿಂತ ಅಡಿಕೆ ಬೆಳೆಯನ್ನು ರಕ್ಷಿಸುವುದು ಅನಿವಾರ್ಯ ಆಗಿತ್ತು. ಈಗ ಅಡಿಕೆಗೆ ಔಷಧ ಸಿಂಪಡಿಸುವುದನ್ನು ನೋಡಿ ಎಲ್ಲರು ಪ್ರಶಂಸಿಸುತ್ತಾರೆ. ಒಂದು ವಿಶೇಷವಾದ ಕೆಲಸ ಮಾಡುತ್ತಿರುವ ಖುಷಿ ಇದೆ" ಎನ್ನುತ್ತಾರೆ ಚಂದ್ರಲೇಖಾ.
"ತೋಟಕ್ಕೆ ಔಷಧಿ ಸಿಂಪಡಿಸುವವರು ಸಿಗುವುದು ತುಂಬ ಕಷ್ಟ. ಪರಿಸ್ಥಿತಿ ಅರಿತು ಅಡಿಕೆ ಮರವೇರುವ ಯಂತ್ರ ಖರೀದಿ ಮಾಡಿದ್ದೆವು. ಆದರೆ ಇದನ್ನು ಬಳಸಿ ಔಷಧ ಸಿಂಪಡಿಸುವುದು ನಮಗೆ ಸಾಧ್ಯವಾಗಿಲ್ಲ. ಈ ಕೆಲಸವನ್ನು ಚಂದ್ರಲೇಖಾ ಮಾಡಿದರು. ಅವರು ಅಡಿಕೆ ಮರವೇರಿ ಔಷಧ ಬಿಡಲು ಧೈರ್ಯ ತೋರಿದಾಗ ನಾವೆಲ್ಲ ಪ್ರೋತ್ಸಾಹ ನೀಡಿದೆವು'' ಎನ್ನುತ್ತಾರೆ ಆನಂದ ಗೌಡ.
ತೊಟ್ಟಿಲು ತೂಗುವ ಕೈಗಳು ಶ್ರಮದಾಯಕ ಕೆಲಸಕ್ಕೂ ಸೈ ಎಂದು ನಿರೂಪಿಸುವ ಮೂಲಕ ಚಂದ್ರಲೇಖಾ ಮಹಿಳೆಯರ ಧೀ ಶಕ್ತಿಗೆ ಮಾದರಿಯಾಗಿ ದಿಟ್ಟೆ ಎನಿಸಿಕೊಂಡಿದ್ದಾರೆ.


‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ