ಯೆನೆಪೊಯ ವಿವಿಯಿಂದ ವಿಶಿಷ್ಟ ಕೋರ್ಸ್
ಅಪ್ಲೈಡ್ ಇಸ್ಲಾಮಿಕ್ಸ್ನಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್ ಆರಂಭ
ಮಂಗಳೂರು, ಆ.7: ನಗರದ ಪ್ರತಿಷ್ಠಿತ ಯೆನೆಪೊಯ ವಿಶ್ವವಿದ್ಯಾನಿಲಯವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸ ಪ್ರಯೋಗವಾಗಿ ಅಪ್ಲೈಡ್(ಅನ್ವಯಿಕ) ಇಸ್ಲಾಮಿಕ್ಸ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆರಂಭಿಸುತ್ತಿದೆ.
ವಿಶ್ವದಲ್ಲಿಯೇ ಇಂತಹ ವಿಶಿಷ್ಟ ಕೋರ್ಸ್ ಅನ್ನು ಪ್ರಥಮವಾಗಿ ಮಂಗಳೂರು ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಲಾಗುತ್ತಿದೆ ಎಂದು ಯೆನೆಪೊಯ ವಿವಿ ಇಸ್ಲಾಮಿಕ್ ಅಧ್ಯಯನ ಹಾಗೂ ಸಂಶೋಧನಾ ಪೀಠದ ಮುಖ್ಯಸ್ಥ ಡಾ.ಜಾವೇದ್ ಜಮೀಲ್ ತಿಳಿಸಿದ್ದಾರೆ.
ಅರೆಬಿಕ್, ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಜ್ಞಾನ, ಇಸ್ಲಾಮಿಕ್ ತತ್ವಶಾಸ್ತ್ರ ಮತ್ತು ಇಸ್ಲಾಮಿಕ್ ಇತಿಹಾಸ ಮೊದಲಾದ ಸಾಂಪ್ರದಾಯಿಕ ವಿಷಯಗಳ ಜೊತೆ ಆಧುನಿಕ ಜಗತ್ತಿನ ವಿವಿಧ ರಂಗಗಳಲ್ಲಿ ಇಸ್ಲಾಮೀ ಚಿಂತನೆ ಅಳವಡಿಸುವ ಅನ್ವಯಿಕ ಇಸ್ಲಾಮಿಕ್ ಅಧ್ಯಯನಕ್ಕೆ ಈ ಕೋರ್ಸ್ ಮಹತ್ವ ನೀಡಲಿದೆ.
ಅಪ್ಲೈಡ್ ಇಸ್ಲಾಮಿಕ್ಸ್ ‘‘ಕಾನೂನು, ಸಾಮಾನ್ಯ ವಿಜ್ಞಾನ, ಆರೋಗ್ಯ ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ತತ್ವಶಾಸ್ತ್ರದಂತಹ ಆಧುನಿಕ ಜ್ಞಾನ ಕ್ಷೇತ್ರಗಳಲ್ಲಿ ಇಸ್ಲಾಮಿಕ್ ಸಿದ್ಧಾಂತಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಅಧ್ಯಯನವಾಗಿದೆ. ಇದು ಇಸ್ಲಾಮಿಕ್ ತತ್ವಗಳ ಬೆಳಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಆಧುನಿಕ ಸಿದ್ಧಾಂತಗಳ ವಿಶ್ಲೇಷಣೆ ಮತ್ತು ಪರ್ಯಾಯ ಪರಿಭಾಷೆಗಳು, ವ್ಯಾಖ್ಯಾನಗಳು, ವಿಧಾನಗಳು, ಸೂಚನೆಗಳು, ಕಾರ್ಯಕ್ರಮಗಳು, ನೀತಿಗಳು, ಮಾದರಿಗಳು ಮತ್ತು ಇಸ್ಲಾಮಿಕ್ ಬೋಧನಾ ಮಾದರಿಗಳ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ಆಧುನಿಕ ವಿಶ್ವ ವ್ಯವಸ್ಥೆ, ತತ್ವಜ್ಞಾನ, ಕುರ್ಆನ್ನ ವ್ಯವಸ್ಥಿತ ಅಧ್ಯಯನ, ಆರೋಗ್ಯದ ಇಸ್ಲಾಮಿಕ್ ಮಾದರಿ, ಇಸ್ಲಾಮಿಕ್ ಅರ್ಥಶಾಸ್ತ್ರ, ಇಸ್ಲಾಮಿಕ್ ರಾಜಕೀಯ ವ್ಯವಸ್ಥೆ, ಇಸ್ಲಾಮಿಕ್ ಕಾನೂನು ವ್ಯವಸ್ಥೆ, ಇಸ್ಲಾಮಿಕ್ ಸಾಮಾಜಿಕ ವ್ಯವಸ್ಥೆ, ಇಸ್ಲಾಮ್ ಮತ್ತು ವಿಜ್ಞಾನ, ಭಾರತೀಯ ಮುಸ್ಲಿಮರ ಏಳಿಗೆ ಹಾಗೂ ಅಂತರ್ ಧರ್ಮೀಯ - ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸಾಮರಸ್ಯ ಮೊದಲಾದ ವಿಷಯಗಳನ್ನು ಈ ಕೋರ್ಸ್ನಲ್ಲಿ ಬೋಧಿಸಲಾಗುತ್ತದೆ.
doctorforu123@yahoo.com, www.yenepoya.edu.in
ಆಗಸ್ಟ್ 9ರಂದು ಉದ್ಘಾಟನೆ
ಯೆನೆಪೊಯ ವಿವಿ ಪ್ರಾರಂಭಿಸುತ್ತಿರುವ ಹೊಸ ಕೋರ್ಸ್ ಪಿಜಿ ಡಿಪ್ಲೊಮಾ ಇನ್ ಅಪ್ಲೈಡ್ ಇಸ್ಲಾಮಿಕ್ಸ್ ಅನ್ನು ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಮಾಜಿ ರಾಜ್ಯಸಭಾ ಸದಸ್ಯ, ಜಮೀಯತೆ ಉಲಮಾ ಎ ಹಿಂದ್ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ಆ.9ರಂದು ಉದ್ಘಾಟಿಸಲಿದ್ದಾರೆ. ಅಂದು ಬೆಳಗ್ಗೆ ಯೆನೆಪೊಯ ವಿವಿಯ ಎನ್ಡ್ಯೂರೆನ್ಸ್ ರೆನ್ನಲ್ಲಿ ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಕೆ.ರಹ್ಮಾನ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ.ಝಿಯಾವುಲ್ಲಾ ಶರೀಫ್ ಗೌರವ ಅತಿಥಿಯಾಗಿರುವರು.
ಯೆನೆಪೊಯ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಯೆನೆಪೊಯ ವಿವಿ ಉಪ ಕುಲಪತಿ ಡಾ.ಎಂ.ವಿಜಯ ಕುಮಾರ್ ಹಾಗೂ ಯೆನೆಪೊಯ ವಿವಿ ಇಸ್ಲಾಮಿಕ್ ಅಧ್ಯಯನ ಹಾಗೂ ಸಂಶೋಧನಾ ಪೀಠದ ಮುಖ್ಯಸ್ಥ ಡಾ.ಜಾವೇದ್ ಜಮೀಲ್ ತಿಳಿಸಿದ್ದಾರೆ.
‘ಅಪ್ಲೈಡ್ ಇಸ್ಲಾಮಿಕ್ಸ್’
ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಒಂದು ವಿಶಿಷ್ಟ ಕೋರ್ಸ್. ಆಧುನಿಕ ಜಗತ್ತಿನ ವೈಜ್ಞಾನಿಕ ಹಾಗೂ ಸಾಮಾಜಿಕ ಬೆಳವಣಿಗಳ ಬಗ್ಗೆ ಇಸ್ಲಾಮೀ ವಿಶ್ಲೇಷಣೆ ಈ ಕೋರ್ಸ್ನ ವಿಶೇಷತೆ. ಇಸ್ಲಾಮಿನ ವಿವಿಧ ಆಯಾಮಗಳ ಕುರಿತು ಆಳವಾದ ಶೈಕ್ಷಣಿಕ ಅಧ್ಯಯನ ಹಾಗೂ ಸಂಶೋಧನೆ ನಡೆಸುವುದು ಈ ಹೊಸ ಕೋರ್ಸ್ನ ಮುಖ್ಯ ಉದ್ದೇಶ. ಈ ಮೂಲಕ ವಿವಿಧ ಧರ್ಮಗಳ ಬಗ್ಗೆ ಇನ್ನಷ್ಟು ತಿಳಿದುಕೊಂಡು ಆ ಧರ್ಮಗಳ ಜೊತೆ ಸೌಹಾರ್ದ ಸಂಬಂಧ ಬೆಳೆಸಿ ಪರಸ್ಪರ ಶಾಂತಿ, ಸಹಬಾಳ್ವೆಯ ವಾತಾವರಣ ನಿರ್ಮಿಸುವುದು ಇದರ ಗುರಿ.
ನಮ್ಮ ಸಂಸ್ಥೆಯ ಇಸ್ಲಾಮಿಕ್ ಅಧ್ಯಯನ ಪೀಠ ಹಲವು ಸಂಶೋಧನೆ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಒಂದು ಅಂತರ್ರಾಷ್ಟ್ರೀಯ ಇಸ್ಲಾಮಿಕ್ ಅಧ್ಯಯನ ಕೇಂದ್ರವನ್ನು ಇಲ್ಲಿ ರೂಪಿಸುವುದು ನಮ್ಮ ಧ್ಯೇಯ.
-ವೈ.ಅಬ್ದುಲ್ಲಾ ಕುಂಞಿ, ಕುಲಾಧಿಪತಿ, ಯೆನೆಪೊಯ ವಿವಿ