ದಣಿವರಿಯದ ಹೋರಾಟಗಾರ ಎ.ಕೆ. ಸುಬ್ಬಯ್ಯ
ಇಂದು ಎ.ಕೆ. ಸುಬ್ಬಯ್ಯನವರ ಜನ್ಮದಿನ
ಆಗಸ್ಟ್ 9 ಭಾರತ ದೇಶವು ನೆನಪಿನಲ್ಲಿಡಬೇಕಾದಂತಹ ದಿನ. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಕೂಗಿದ ದಿನ. 1942ರಲ್ಲಿ ಈ ದಿನ ಕ್ವಿಟ್ ಇಂಡಿಯಾ ಚಳವಳಿ ನಡೆದಿತ್ತು. ಕಾಕತಾಳಿಯವೆಂಬಂತೆ ಅದೇ ಆಗಸ್ಟ್ 9 ಕರ್ನಾಟಕದ ಅತ್ಯಂತ ಹಿರಿಯ ಚಿಂತಕ ಮತ್ತು ಹೋರಾಟಗಾರ ಎ.ಕೆ. ಸುಬ್ಬಯ್ಯನವರ ಜನ್ಮ ದಿನವೂ ಹೌದು. ಇಂದಿನ ರಾಜಕಾರಣಿಗಳು ಜನ್ಮ ದಿನವನ್ನು ಆಚರಿಸಿಕೊಂಡ ರೀತಿಯಲ್ಲಿ ಎ.ಕೆ. ಸುಬ್ಬಯ್ಯ ಜನ್ಮ ದಿನ ಆಚರಿಸಿಕೊಳ್ಳುವುದಿಲ್ಲ. ಯಾವುದೇ ಜಾಹೀರಾತಾಗಲಿ, ಪ್ಲೆಕ್ಸ್ಗಳಾಗಲಿ ಅವರ ಪರವಾಗಿ ಎಲ್ಲಿಯೂ ಕಾಣುವುದಿಲ್ಲ. ಈ ಬಗ್ಗೆ ತನಗೆ ವಿಶ್ವಾಸವಿಲ್ಲ. ತನ್ನ ಆಶಯಗಳ ಪಾಲನೆ ಆದರೆ ಅದೇ ತನ್ನ ಜನ್ಮ ದಿನಕ್ಕೆ ಕೋರುವ ಶುಭಾಶಯ ಎಂದು ಎ.ಕೆ. ಸುಬ್ಬಯ್ಯ ಹೇಳುತ್ತಾರೆ.
ಕೊಡಗಿನ ಅತ್ಯಂತ ಪುಟ್ಟ ಗ್ರಾಮ ಹುದಿಕೇರಿಯಿಂದ ಬಂದು, ಬೆಂಗಳೂರಿನ ವಿಧಾನಸೌಧದಲ್ಲಿ ಸದ್ದು ಮಾಡುತ್ತಾರೆ ಎನ್ನುವುದು ಯಾರಿಗೂ ನಂಬಲು ಸಾಧ್ಯವಿಲ್ಲದ ವಿಚಾರ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ತಾಯಿಯ ಪ್ರೀತಿಯೂ ಸಿಗದೆ, ಏಕಾಂಗಿಯಾಗಿ ನೋವು ಅವಮಾನಗಳನ್ನು ಸಹಿಸಿಕೊಂಡು ಈ ಎತ್ತರಕ್ಕೆ ಬೆಳೆದವರು ಎ.ಕೆ. ಸುಬ್ಬಯ್ಯ. ಓದು ಎಂದು ಹೇಳುವವರೇ ಗತಿ ಇಲ್ಲದಂತಹ ಪರಿಸ್ಥಿತಿಯಲ್ಲಿ ತಾನಾಗಿಯೇ ಓದಿಕೊಂಡು, ಸನ್ನಿವೇಶದ ಪ್ರಭಾವಕ್ಕೆ ಒಳಗಾಗಿ, ವಕೀಲರಾಗಿ ತಾನೇ ರೂಪುಗೊಂಡವರು. ಎಳೆಯ ಪ್ರಾಯದ ನೋವುಗಳು ಅವರನ್ನು ಸ್ವಾಭಾವಿಕವಾಗಿಯೇ ಹೋರಾಟಗಾರನನ್ನಾಗಿ ರೂಪಿಸಿತ್ತು. ಅವರೊಬ್ಬ ಯಶಸ್ವಿ ವಕೀಲ ಹಾಗೂ ಯಶಸ್ವಿ ಕೃಷಿಕ. ಅವರ ಮಟ್ಟಿಗೆ ಅವರೊಬ್ಬ ಯಶಸ್ವಿ ರಾಜಕಾರಣಿಯೂ ಹೌದು. ಆದರೆ ಜನರು ಅದನ್ನು ಒಪ್ಪುವುದಿಲ್ಲ. ಯಾವುದೋ ಎತ್ತರದ ಸ್ಥಾನಕ್ಕೆ ಹೋಗಬೇಕಾಗಿದ್ದ ಸುಬ್ಬಯ್ಯ, ಆ ಸ್ಥಾನ ಮುಟ್ಟಲಿಲ್ಲ ಎಂದು ಹೇಳುವವರು ಇದ್ದಾರೆ. ತನಗೆ ಈ ಬಗ್ಗೆ ಯಾವುದೇ ರೀತಿಯ ಬೇಸರವಿಲ್ಲ. ಅಧಿಕಾರದಿಂದ ಮಾತ್ರ ಜನರ ಸೇವೆ ಮಾಡುವುದು ಸಾಧ್ಯ ಎನ್ನುವುದು ಸರಿಯಲ್ಲ. ತಾನು ಅಧಿಕಾರಕ್ಕಾಗಿ ಎಂದೂ ಹಾತೊರೆದವನೂ ಅಲ್ಲ ಎಂದು ಹೇಳುತ್ತಾರೆ.
ಹಾಗೆಯೇ ಪಕ್ಷಾಂತರದ ವಿಚಾರದಲ್ಲಿಯೂ ಅವರ ವಿಶ್ಲೇಷಣೆ ಇದೆ. ತನ್ನನ್ನು ಪಕ್ಷಾಂತರಿ ಎಂದು ಜರೆದಾಗ, ಪಕ್ಷಾಂತರ ಎಂದರೆ ಅಧಿಕಾರಕ್ಕಾಗಿ ಪಕ್ಷವನ್ನು ಹುಡುಕಿಕೊಂಡು ಹೋಗುವುದಾಗಿದೆ. ಆದರೆ ತಾನು ತನ್ನ ಹೋರಾಟಕ್ಕೆ ವೇದಿಕೆಯನ್ನು ಹುಡುಕಿದ್ದೇನೆಯೇ ವಿನಹ, ಅಧಿಕಾರಕ್ಕಾಗಿ ಪಕ್ಷವನ್ನು ಬದಲಿಸಲಿಲ್ಲ ಎಂದು ಅವರು ಹೇಳುತ್ತಾರೆ. ತನ್ನ ಸಿದ್ಧಾಂತಕ್ಕೆ ಸರಿಹೊಂದುವಂತಹ ವೇದಿಕೆಯ ಹುಡುಕಾಟ ತನ್ನದಾಗಿತ್ತು ಎನ್ನುತ್ತಾರೆ.
ಈಗ ಅವರಿಗೆ 84 ವರ್ಷ. ಇನ್ನೂ ಕೂಡ ಅವರಲ್ಲಿ ಹೋರಾಟದ ಕಿಚ್ಚು ಆರಿಲ್ಲ. ಜನಶಕ್ತಿಯ ಮುಂದೆ ಯಾವುದೂ ಇಲ್ಲ ಎಂದು ಹೇಳುವ ಸುಬ್ಬಯ್ಯನವರಿಗೆ ಜನಶಕ್ತಿ ಪ್ರದರ್ಶನದ ಮೂಲಕ ಹೋರಾಟದಲ್ಲಿ ಅತಿಯಾದ ವಿಶ್ವಾಸ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳದ್ದೇ ಪ್ರಭುತ್ವ ಎನ್ನುವ ಎ.ಕೆ. ಸುಬ್ಬಯ್ಯ, ಅಧಿಕಾರದಲ್ಲಿ ಇರುವವರು ಜನಸೇವಕರು ಎನ್ನುತ್ತಾರೆ. ಆದರೆ ಇಂದು ಜನರಿಗೆ ಪ್ರಜಾಪ್ರಭುತ್ವದ ಅರ್ಥ ತಿಳಿದಿಲ್ಲ ಮತ್ತು ಆಡಳಿತದಲ್ಲಿರುವವರಿಗೆ ಪ್ರಜೆಗಳೇ ಪ್ರಭುಗಳು ಎಂಬುದು ಮರೆತು ಹೋಗಿದೆ ಎನ್ನುತ್ತಾರೆ. ತನ್ನ ಆರಂಭಿಕ ದಿನಗಳಲ್ಲಿ ಭ್ರಷ್ಟಾಚಾರ, ಅನ್ಯಾಯ ಮುಂತಾದುವುಗಳ ವಿರುದ್ಧ ಹೋರಾಟ ಮಾಡುತ್ತಿದ್ದ ಎ.ಕೆ. ಸುಬ್ಬಯ್ಯ, ತಮ್ಮ ಅನುಭವದಿಂದ ಮಾಗಿ ಭ್ರಷ್ಟಾಚಾರಕ್ಕಿಂತಲೂ ಕೋಮುವಾದ ಅತ್ಯಂತ ಅಪಾಯಕಾರಿ ಮತ್ತು ದೇಶದ ಬೆಳವಣಿಗೆಗೆ ಮಾರಕ ಎಂದು ಭಾವಿಸಿರುವಂತಹ ವ್ಯಕ್ತಿ. ದೇಶದಲ್ಲಿ ಇಂದಿನ ಪರಿಸ್ಥಿತಿಯ ಬಗ್ಗೆ ಆತಂಕವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ಕೋಮುವಾದವನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳುತ್ತಾರೆ.
ತೀರಾ ಇತ್ತೀಚೆಗೆ ಅಂದರೆ ಕೇವಲ ಒಂದು ವರ್ಷದ ಹಿಂದೆ ಅವರು ನಡೆಸಿದ ಹೋರಾಟ ದಿಡ್ಡಳ್ಳಿಯ ನಿರಾಶ್ರಿತರಿಗೆ ಭೂಮಿ ಮತ್ತು ಮನೆ ಕೊಡಿಸುವ ಹೋರಾಟ. ಇಂದು ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ ಹೆದ್ದಾರಿಯಲ್ಲಿ ಮತ್ತು ಬ್ಯಾಡಗೊಟ್ಟದಲ್ಲಿ ಕಂಡು ಬರುವ ಸುಮಾರು 540 ಮನೆಗಳು ಈ ಹೋರಾಟದ ಪ್ರತಿಫಲ. ಕರ್ನಾಟಕ ಇತಿಹಾಸದಲ್ಲಿಯೇ ಚಳವಳಿಗಳ ಬಗ್ಗೆ ಅಧ್ಯಯನ ಮಾಡುವ ವೇಳೆಯಲ್ಲಿ ದಿಡ್ಡಳ್ಳಿಯ ನಿರಾಶ್ರಿತರ ಚಳವಳಿ ಉಲ್ಲೇಖಾರ್ಹವಾಗಿರುತ್ತದೆ. ಕೊಡಗಿನ ಆದಿವಾಸಿಗಳ ಪರವಾಗಿ ನಡೆಸಿದ ಹೋರಾಟ ಇದಾಗಿತ್ತು. ಕರ್ನಾಟಕ ರಾಜ್ಯ ಸರಕಾರವೇ ಈ ಹೋರಾಟದ ಫಲವಾಗಿ ಕೊಡಗಿಗೆ ಧಾವಿಸುವಂತೆ ಮಾಡಿತ್ತು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಕೂಡ ಇಲ್ಲಿಗೆ ಆಗಮಿಸುವಂತೆ ಮಾಡಿತ್ತು. ಹಾಗಾಗಿ ಇದೊಂದು ಐತಿಹಾಸಿಕ ಹೋರಾಟ.
ಈ ಹೋರಾಟದ ಫಲವಾಗಿಯೇ ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ, ರಾಜ್ಯದಲ್ಲಿಯೇ ಪರಿಣಾಮಕಾರಿಯಾಗಿ ಫಲಿತಾಂಶವನ್ನು ನೀಡುತ್ತಿದೆ. ಇವರ ಈ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದವರು ಕರ್ನಾಟಕದ ಮತ್ತೋರ್ವ ಹೆಮ್ಮೆಯ ಪುತ್ರ ಎಚ್.ಎಸ್. ದೊರೆಸ್ವಾಮಿ ಅಯ್ಯಂಗಾರ್ರವರು. ತಮ್ಮ 99ನೇ ವಯಸ್ಸಿನಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಈ ಹೋರಾಟದಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಗೆ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ಮತ್ತೋರ್ವ ಇಳಿವಯಸ್ಸಿನ ಯುವಕ ಎ.ಕೆ. ಸುಬ್ಬಯ್ಯ ಕಾದು ನಿಂತಿದ್ದ ದೃಶ್ಯ ಅವರ ಬದ್ಧತೆಯ ಪ್ರತೀಕವಾಗಿತ್ತು.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಗಟ್ಟಿಯಾಗಿ ತಳವೂರಲು ಕಾರಣಕರ್ತರಾಗಿದ್ದವರು ಎ.ಕೆ. ಸುಬ್ಬಯ್ಯನವರು ಎಂದರೆ ಆಶ್ಚರ್ಯ ವಾಗಬಹುದು. ದೇಶದ ಎಲ್ಲಾ ಅನಿಷ್ಠಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬ ಭಾವನೆ ಸುಬ್ಬಯ್ಯನವರಲ್ಲಿ ಆಗ ಮನೆ ಮಾಡಿತ್ತು. ಪ್ರಭುತ್ವದ ವಿರುದ್ಧ ಹೋರಾಟಕ್ಕೆ ಅವರಿಗೆ ವೇದಿಕೆಯೊಂದು ಬೇಕಾಗಿತ್ತು. ಆಗ ಅವರನ್ನು ಆಕರ್ಷಣೆ ಮಾಡಿದ್ದು ಅಂದಿನ ಜನಸಂಘ. ಅಲ್ಲಿಂದಲೇ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ, ವಿಧಾನ ಮಂಡಲದಲ್ಲಿ ತನ್ನ ಛಾಪನ್ನು ಬೀರಿದಂತಹ ವ್ಯಕ್ತಿ.
ಕರ್ನಾಟಕ ರಾಜ್ಯ ಕಂಡ ಅತ್ಯಂತ ಧೀಮಂತ ಮುಖ್ಯಮಂತ್ರಿ ದೇವರಾಜ ಅರಸುರವರನ್ನು ಭ್ರಷ್ಟ ಎಂದು ಕರೆದಿದ್ದ ಎ.ಕೆ. ಸುಬ್ಬಯ್ಯ, ತನ್ನ ವ್ಯಕ್ತಿತ್ವವನ್ನು ಹೇಗೆ ಇಟ್ಟುಕೊಂಡಿದ್ದರು ಎಂದರೆ, ದೇವರಾಜ ಅರಸುರವರು ವಿಧಾನಸೌಧದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಎ.ಕೆ. ಸುಬ್ಬಯ್ಯನವರಿಗೆ ಹಸ್ತಲಾಘವ ಮಾಡಲು ಮುಂದಾದಾಗ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ ಎ.ಕೆ. ಸುಬ್ಬಯ್ಯ, ತನ್ನ ಕೈಗಳನ್ನು ಅರಸುರವರ ಕೈಯೊಂದಿಗೆ ಹಸ್ತಲಾಘವ ಮಾಡಿ, ತನ್ನ ಕೈಯನ್ನು ಭ್ರಷ್ಟವಾಗಿಸಲು ಸಿದ್ಧನಿಲ್ಲ ಎಂದು ಹೇಳಿದ್ದನ್ನು ಕಾರ್ಯಕ್ರಮ ವೊಂದರಲ್ಲಿ ಈಗಿನ ವಿಧಾನಸಭಾ ಅಧ್ಯಕ್ಷ ಕೆ. ಆರ್. ರಮೇಶ್ ಕುಮಾರ್ ನೆನಪಿಸಿಕೊಂಡಿದ್ದರು. ಆದರೆ ಇದೇ ದೇವರಾಜ ಅರಸುರವರನ್ನು ಸಾಮಾಜಿಕ ಪರಿವರ್ತನೆಯ ಹರಿಕಾರ ಎಂದು ಈಗ ಎ.ಕೆ. ಸುಬ್ಬಯ್ಯ ಹೇಳುತ್ತಾರೆ. ಭ್ರಷ್ಟಾಚಾರಕ್ಕೆ ಸಿಂಹ ಸ್ವಪ್ನವಾಗಿದ್ದವರು ಎ.ಕೆ. ಸುಬ್ಬಯ್ಯ. ಕರ್ನಾಟಕದಲ್ಲಿ ಇತಿಹಾಸವನ್ನು ಸೃಷ್ಟಿಸಿದ ರೇಣುಕಾರಾಜೇಂದ್ರನ್ ಪ್ರಕರಣ ಹಾಗೂ ಸಿ.ಎಂ. ಇಬ್ರಾಹೀಂ ರೊಲೆಕ್ಸ್ ವಾಚ್ ಹಗರಣ ಮಂತ್ರಿಗಳನ್ನು ಮನೆಗೆ ಕಳುಹಿಸಿದ ಪ್ರಕರಣಗಳಾಗಿತ್ತು.
ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ಬರುವಲ್ಲಿ 1983ರಲ್ಲಿ ಮೂರು ಶಕ್ತಿಗಳು ಕೆಲಸ ಮಾಡಿದ್ದವು. ಅವುಗಳೆಂದರೆ ರೈತ ಚಳವಳಿ, ಲಂಕೇಶ್ ಪತ್ರಿಕೆ ಹಾಗೂ ಎ.ಕೆ. ಸುಬ್ಬಯ್ಯ. ತನ್ನದು ಬಂಡೆಗಲ್ಲಿನ ಸರಕಾರ ಎಂದು ಬೀಗುತ್ತಿದ್ದ ಕೊಡಗಿನವರೇ ಆದ ಆರ್. ಗುಂಡೂರಾವ್ರನ್ನು ಅಂದು ಸೋಲಿಸಲು ಕಾರಣಕರ್ತರಾದವರು ಎ.ಕೆ. ಸುಬ್ಬಯ್ಯ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಗುಂಡೂರಾವ್ರನ್ನು ಸೋಲಿಸಲು ಅವರ ವಿರುದ್ಧ ಬಿಜೆಪಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ, ಜನತಾದಳವನ್ನು ಬೆಂಬಲಿಸುವ ಮೂಲಕ ಬಂಡೆಗಲ್ಲನ್ನು ಅಲುಗಾಡಿಸಿದ್ದರು. ಅಂದು ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳನ್ನು ಪಡೆದಿತ್ತು. ಸರಕಾರ ರಚಿಸಬೇಕಾದರೆ ಬಿಜೆಪಿಯ ಬೆಂಬಲ ಬೇಕಾಗಿತ್ತು. ಶರತ್ತುಗಳನ್ನು ಹಾಕುವ ಸ್ಥಾನದಲ್ಲಿ ಬಿಜೆಪಿ ಇತ್ತು. ಆದರೆ ತಾವು ಮಂತ್ರಿ ಮಂಡಲದಲ್ಲಿ ಭಾಗವಹಿಸದೆ, ಬಾಹ್ಯ ಬೆಂಬಲವನ್ನು ನೀಡುತ್ತಾ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡು ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳುವ ಮೂಲಕ ಅಧಿಕಾರವನ್ನು ನಿರಾಕ ರಿಸಿದ ಸನ್ಯಾಸಿಯಾಗಿದ್ದರು ಎ.ಕೆ. ಸುಬ್ಬಯ್ಯ. ಹೀಗೆ ಅವರು ಅಧಿಕಾರವನ್ನು ನಿರಾಕರಿಸಿದ್ದೇ ಅವರಿಗೆ ಮುಂದಿನ ದಿನಗಳಲ್ಲಿ ಮುಳುವಾಗಿ ಪರಿಣಮಿಸಿತ್ತು.
ಸಂಘಪರಿವಾರದ ಪಿತೂರಿಯಿಂದಾಗಿ ಅವರು ಬಿಜೆಪಿಯನ್ನು ತೊರೆದಿದ್ದರು. ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆಯ ಮುಖವಾಡವನ್ನು ಎ.ಕೆ. ಸುಬ್ಬಯ್ಯ ಹಲವಾರು ಬಾರಿ ಕಳಚಿದ್ದರು. ಭರತ್ ಹೆಗಡೆಯ ಎಂ.ಡಿ. ಸೀಟು ಹಗರಣ, ರೇವಜಿತು ಪ್ರಕರಣ, ಫೋನ್ ಕದ್ದಾಲಿಕೆಯ ಪ್ರಕರಣ, ಬಾಟ್ಲಿಂಗ್ ಹಗರಣ ಮುಂತಾದುವುಗಳು ರಾಮಕೃಷ್ಣ ಹೆಗಡೆ ಸರಕಾರದ ಹಗರಣಗಳಾಗಿತ್ತು. ಇವುಗಳಲ್ಲಿ ಬಹಳಷ್ಟು ಹಗರಣಗಳು ಸಾಬೀತಾಗಿದ್ದವು. ಎ.ಕೆ. ಸುಬ್ಬಯ್ಯನವರನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ರಾಮಕೃಷ್ಣ ಹೆಗಡೆ ಇದ್ದರು. ಜಾತ್ಯತೀತ ನಿಲುವಿನ ರಾಮಕೃಷ್ಣ ಹೆಗಡೆ, ಸಂಘಪರಿವಾರ ಹಾಗೂ ಡಾ ರಾಜ್ಕುಮಾರ್ ಅಭಿಮಾನಿಗಳ ಸಂಘ ಒಟ್ಟಾಗಿ ಸುಬ್ಬಯ್ಯನವರ ವಿರುದ್ಧ ಸಮರವನ್ನು ಸಾರಿತ್ತು. ಏಕಾಂಗಿಯಾಗಿ ಡಾ ರಾಜ್ಕುಮಾರ್ ಅಭಿಮಾನಿಗಳ ಸಂಘವನ್ನು ಎದುರಿಸಿದ್ದ ಬಗ್ಗೆ ಗುಂಡೂರಾವ್ರವರು ‘‘ಹ್ಯಾಟ್ಸ್ಆಫ್ ಟೂ ಎ.ಕೆ. ಸುಬ್ಬಯ್ಯ, ಕರ್ನಾಟಕ ರಾಜ್ಯ ಸರಕಾರಕ್ಕೆ ಎದುರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ಎ.ಕೆ. ಸುಬ್ಬಯ್ಯ ಏಕಾಂಗಿಯಾಗಿ ಎದುರಿಸಿದ್ದರು’’ ಎಂದು ಹೇಳುತ್ತಿದ್ದರು.
ದುರಂತವೆಂದರೆ ಇಂದಿಗೂ ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣಿ. ಎ.ಕೆ. ಸುಬ್ಬಯ್ಯ ನೇಪಥ್ಯಕ್ಕೆ ತಳ್ಳಲ್ಪಟ್ಟಂತಹ ರಾಜಕಾರಣಿ. ಹೀಗೆ ಆಗಲು ಕಾರಣ ಅವರು ಸಂಘ ಪರಿವಾರವನ್ನು ಬೆತ್ತಲು ಮಾಡುತ್ತಿರುವುದಾಗಿದೆ. ಸಂಘ ಪರಿವಾರದವರಿಗೆ ಬೇಡದವರು ಯಾರಿಗೂ ಬೇಡದ ವ್ಯಕ್ತಿ ಎನ್ನುವಂತಹ ಪರಿಸ್ಥಿತಿಯನ್ನು ಈಗ ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗ, ಕರ್ನಾಟಕದಲ್ಲಿ ರಾಜಕೀಯ ಕೈದಿಯಾಗಿ ಮೊದಲು ಬಂಧನಕ್ಕೆ ಒಳಪಟ್ಟವರು ಎ.ಕೆ. ಸುಬ್ಬಯ್ಯ. ಅವರು ಆ ವೇಳೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪನಾಯಕರಾಗಿದ್ದವರು. ಇಂದಿರಾಗಾಂಧಿ ಸರಕಾರದ ವಿರುದ್ಧ ಹೋರಾಟಗಳನ್ನು ಮಾಡುತ್ತಿದ್ದ ಮತ್ತು ಮಾಡಿದ್ದ ಕಾರಣಕ್ಕಾಗಿ ಬಂಧನಕ್ಕೆ ಒಳಗಾದವರು ಹಾಗೂ ತುರ್ತು ಪರಿಸ್ಥಿತಿಯ ಕೊನೆಯ ಘಟ್ಟದಲ್ಲಿ ಕೊನೆಯದಾಗಿ ಬಿಡುಗಡೆಗೊಂಡವರಾಗಿದ್ದರು.
ಆದರೆ ಇತ್ತೀಚೆಗೆ ಅವರೇ ಹೇಳಿಕೊಂಡಂತೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದವರ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಎಲ್.ಕೆ. ಅಡ್ವಾಣಿಯವರು ಉದ್ಘಾಟನೆಗೆ ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಸುಬ್ಬಯ್ಯನವರಿಗೆ ಆಹ್ವಾನ ಇರಲಿಲ್ಲ. ಈ ಕಾರ್ಯಕ್ರಮವನ್ನೇನೋ ಸಂಘ ಪರಿವಾರ ಆಯೋಜಿಸಿತ್ತು. ಹಾಗಾಗಿ ಸುಬ್ಬಯ್ಯನವರನ್ನು ಆಹ್ವಾನಿಸಿರಲಿಕ್ಕಿಲ್ಲ. ಆದರೆ 2018ರಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನವನ್ನು ಮಾಧ್ಯಮದ ಮೂಲಕ ಅತಿಯಾಗಿ ನೆನಪಿಸಿಕೊಳ್ಳಲಾಗಿತ್ತು. ಇದರ ಹಿಂದೆ ಇದ್ದದ್ದು 2019ರ ಲೋಕಸಭಾ ಚುನಾವಣೆಯ ವಿಷಯ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಬೇರೆಯವರು ನೆನಪಿಸುವುದು ಹಾಗಿರಲಿ, ಮಾಧ್ಯಮಗಳು ಕೂಡ ಎ.ಕೆ. ಸುಬ್ಬಯ್ಯ ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿ ಇದ್ದರು ಎಂಬುದನ್ನು ಮರೆತಂತೆ ಇತ್ತು. ಹೋರಾಟವನ್ನೇ ಮಾಡದೇ ಜೈಲಿಗೆ ಹೋದವರ ಪಟ್ಟ್ಟಿಗಳನ್ನು ಪ್ರಕಟಿಸಿತ್ತು. ಸಂದರ್ಶನವನ್ನು ಮಾಡಿತ್ತು. ಆದರೆ ನೈಜ ಹೋರಾಟಗಾರನನ್ನು ಮರೆತಿತ್ತು. ಹಲವು ಮಾಧ್ಯಮಗಳು ಹೇಗೆ ಸಂಘ ಪರಿವಾರದ ಕೈಗೊಂಬೆಗಳಾಗುತ್ತಿವೆ ಎನ್ನುವುದಕ್ಕೆ ಇದೂ ಒಂದು ಉದಾಹರಣೆಯಷ್ಟೇ.
ಶಂಕಿತ ನಕ್ಸಲರು ಎನ್ನುವವರ ಬಗ್ಗೆ ಅವರ ನಿಲುವು ಬಹಳ ಸ್ಪಷ್ಟವಾಗಿದೆ. ನಕ್ಸಲ್ ಹೋರಾಟವನ್ನು ಅವರು ವಿರೋಧಿಸುತ್ತಾರೆ. ಹೋರಾಟಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿ ಇಡುವವರಿಗೆ ಅವರು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಹೋರಾಟವನ್ನು ಮಾಡಬೇಕು ಶಸ್ತ್ರಾಸ್ತ್ರದ ಹೋರಾಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಅವರು ಸಾಕಷ್ಟು ಶಂಕಿತ ನಕ್ಸಲರನ್ನು ಶರಣಾಗತರನ್ನಾಗಿಸಿ, ಮುಖ್ಯವಾಹಿನಿಗೆ ಕರೆ ತಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಮ್ಮಿಂದಿಗೆ ಇದ್ದ ಗೌರಿ ಕೊಲೆಯಿಂದ ಸುಬ್ಬಯ್ಯನವರು ಆತಂಕಕ್ಕೆ ಒಳಗಾಗಿದ್ದರು. ಅವರ ಮನಸ್ಸಿನ ಮೇಲೆ ಗೌರಿಯ ಕೊಲೆ ಅಗಾಧವಾದ ಪರಿಣಾಮವನ್ನು ಬೀರಿತ್ತು. ಬಹುತೇಕ ಆ ಆಘಾತದಿಂದ ಅವರು ಇಂದಿಗೂ ಹೊರ ಬಂದಿಲ್ಲ ಎನ್ನಬಹುದು.
ಅಧಿಕಾರಕ್ಕಾಗಿ ಎಂದೂ ಹಾತೊರೆಯದ ಎ.ಕೆ. ಸುಬ್ಬಯ್ಯ, ಈಗಲೂ ಒಬ್ಬ ಹೋರಾಟಗಾರ. ತೀರಾ ಇತ್ತೀಚೆಗೆ ವಯೋಸಹಜ ಕಾಯಿಲೆಗಳು ಅವರನ್ನು ಬಾಧಿಸುತ್ತಿದ್ದರೂ, ಅದನ್ನು ಲೆಕ್ಕಿಸದೆ ಹೋರಾಟಗಳನ್ನು ಮುಂದುವರಿಸುತ್ತಾ, ಚಳವಳಿಯಲ್ಲಿ ಸುಬ್ಬಯ್ಯ ಪಾಲ್ಗೊಳ್ಳುತ್ತಿದ್ದಾರೆೆ. ಅವರಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳು. ಅವರ ಸೇವೆ ಹಾಗೂ ಚಿಂತನೆಗಳು ಕರ್ನಾಟಕದ ಧ್ವನಿ ಇಲ್ಲದ ಜನತೆಗೆ ಮತ್ತಷ್ಟು ಕಾಲ ಲಭಿಸಲಿ.