ಅಲ್ ಬಿರ್ರ್ ಸೋಶಿಯಲ್ ಸರ್ವಿಸ್ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಆ.8: ನಗರದ ಅಲ್ಬಿರ್ರ್ ಸೋಶಿಯಲ್ ಸರ್ವಿಸ್ ಸಂಸ್ಥೆಯಿಂದ 2018-19ನೆ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳು ಅಥವಾ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ಪದವಿ ಅಥವಾ ವೃತ್ತಿಪರ ಕೋರ್ಸ್ಗಳನ್ನು ಮಾಡಲಿಚ್ಚಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.
12ನೆ ತರಗತಿ ಅಥವಾ ದ್ವಿತೀಯ ಪಿಯುಸಿ ಉತ್ತೀರ್ಣರಾದ, ಯಾವುದೇ ಸಂಸ್ಥೆ, ಸಂಘಟನೆಗಳು ಹಾಗೂ ಸಂಬಂಧಿಗಳಿಂದ ಆರ್ಥಿಕ ನೆರವನ್ನು ಪಡೆದಿರದ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಅನಾಥರಾಗಿರುವ, ಆರ್ಥಿಕವಾಗಿ ಹಿಂದುಳಿದ ಹಾಗೂ ಕಡೆಗಣಿಸಲ್ಪಟ್ಟಿರುವ ವಿದ್ಯಾರ್ಥಿಗಳಿಗೆ ಪ್ರಮುಖ ಆದ್ಯತೆ ನೀಡಲಾಗುವುದು.
ಅರ್ಜಿಯೊಂದಿಗೆ ವಿದ್ಯಾರ್ಥಿಯು ಸ್ವ ವಿವರದೊಂದಿಗೆ ಹೆತ್ತವರ, ಪೋಷಕರ ವಿವರ, ಕುಟುಂಬದ ವಾರ್ಷಿಕ ಆದಾಯ ಮತ್ತದರ ಮೂಲ ಹಾಗೂ ಅವಲಂಬಿತರ ದೂರವಾಣಿ ಸಂಖ್ಯೆಯೊಂದಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಸ್ಥಳೀಯರಿಬ್ಬರ ಹೆಸರಿನೊಂದಿಗೆ ಶಿಫಾರಸ್ಸು ಮತ್ತು ಸಂಪರ್ಕ ಸಂಖ್ಯೆ, ವಿದ್ಯಾರ್ಥಿ, ವಿದ್ಯಾರ್ಥಿನಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಸ್ಥಳೀಯ ಮಸೀದಿ, ಜಮಾಅತ್ನಿಂದ ದೃಢೀಕರಣ ಪತದೊಂದಿಗೆ ಸಂಪೂರ್ಣ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಒದಗಿಸಬೇಕು.
10ನೆ ತರಗತಿ/ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ/12ನೆ ತರಗತಿಯ ಅಂತಿಮ ಅಂಕ ಪಟ್ಟಿಯ ಪ್ರತಿಯನ್ನು ಲಗತ್ತಿಸಿರಬೇಕು. ಸೇರಲಿಚ್ಛಿಸುವ ಕೋರ್ಸ್ನ ವಿವರ, ಅದರ ಶುಲ್ಕ ಮತ್ತು ಸಂಸ್ಥೆಯ ಹೆಸರನ್ನು ಬರೆದು yedapadavu1@gmail.com ಗೆ ಆಗಸ್ಟ್ 31ರಂದು ಅಥವಾ ಮುಂಚಿತವಾಗಿ ಸಲ್ಲಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.